Posts Tagged ‘ಕೊರಗ’

ಉಡುಪಿ: ಪಡುಬಿದ್ರಿ ಗ್ರಾಮದಲ್ಲಿ ಸ್ಥಾಪನೆಗೊಂಡ ಸುಜ್ಲಾನ್ ಕಂಪೆನಿಗಾಗಿ ಭೂಮಿ ಕಳೆದುಕೊಂಡು ನಿರ್ವಸಿತರಾದ ಮೂಲನಿವಾಸಿ ಕಡುಬಡ ಕೊರಗ ಕುಟುಂಬಗಳಿಗೆ ಪುನರ್ವಸತಿ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ), ಡಿವೈಎಫ್ಐ ಮತ್ತು ಕರ್ನಾಟಕ ಜನಪರ ವೇದಿಕೆ ಇವುಗಳ ಜಂಟೀ ಆಶ್ರಯದಲ್ಲಿ ಜುಲೈ 22ರಂದು ಪಡುಬಿದ್ರಿಯಲ್ಲಿ ಹಕ್ಕೊತ್ತಾಯ ಜಾಥಾ ಹಾಗೂ ಹಕ್ಕೊತ್ತಾಯ ಸಭೆ ನಡೆಯಿತು.

ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬೇಡಿ ಆರ್ಆರ್ ಕಾಲನಿಯಿಂದ ಹೊರಟ ಜಾಥಾ, ಪಡುಬಿದ್ರಿ ಗ್ರಾ.ಪಂ.ಕಚೇರಿ ಮುಂಭಾಗದಲ್ಲಿ ಸಮಾಪ್ತಿಗೊಂಡಿತು. ಜಾಥಾದುದ್ದಕ್ಕೂ ಜಾಥಾದಲ್ಲಿ ಪಾಲ್ಗೊಂಡವರು ಸರಕಾರ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಸುಜ್ಲಾನ್ ಕಂಪೆನಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜಾಥಾದ ಬಳಿಕ ಗ್ರಾ.ಪಂ.ಕಚೇರಿ ಎದುರು ಸಭೆ ನಡೆಸಲಾಯಿತು. ದಲಿತ ಚಿಂತಕರಾದ ಲೋಲಾಕ್ಷ, ದಸಂಸ ವಿಭಾಗೀಯ ಸಂಚಾಲಕರಾದ ಶೇಖರ ಹೆಜಮಾಡಿ, ಡಿವೈಎಫ್ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷರಾದ ಶ್ರೀರಾಮ ದಿವಾಣ, ದಲಿತ ಪರ ಹೋರಾಟಗಾರರಾದ ಲಿಂಗಪ್ಪ ನಂತೂರು ಮೊದಲಾದವರು ನಿರ್ವಸಿತ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡುವಂತೆ ಸರಕಾರವನ್ನು ಒತ್ತಾಯಿಸಿದರು. ಸಂತ್ರಸ್ತ ಕುಟುಂಬಗಳ ಪರವಾಗಿ ಎಂಎಸ್ಡಬ್ಲೂ ಪದವೀಧರೆ ಶ್ರೀಮತಿ ಮಾತನಾಡಿದರು.

ಭಾರತ ಅಭ್ಯುದಯ ಪ್ರತಿಷ್ಠಾನದ ಅಧ್ಯಕ್ಷರಾದ ಉಮಾನಾಥ ಪಡುಬಿದ್ರಿ, ದಸಂಸ ಮುಖಂಡರಾದ ಹರೀಶ್ ಕಂಚಿನಡ್ಕ, ಕೇಶವ ಸಿ.ಸಾಲ್ಯಾನ್, ಡಿವೈಎಫ್ಐ ಮುಖಂಡರಾದ ವರಪ್ರಸಾದ್ ಬಜಾಲ್, ವಿಠಲ ಮಲೆಕುಡಿಯ, ಜನಪರ ವೇದಿಕೆ ಮುಖಂಡರಾದ ಮೊಹಮ್ಮದ್ ಹಂದಟ್ಟು, ಹೇಮಂತ್ ಕುಂದರ್, ಶೇಖರ ಶೆಟ್ಟಿ, ಪ್ರಕಾಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಹಕ್ಕೊತ್ತಾಯ ಸಭೆಯ ಬಳಿಕ ಗ್ರಾ.ಪಂ.ಅಧ್ಯಕ್ಷರಾದ ವಿಜಯ ಸನಿಲ್ ಹಾಗೂ ಪಿಡಿಓ ಮಮತಾ ಶೆಟ್ಟಿ ಇವರ ಮೂಲಕ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಸುಜ್ಲಾನ್ ಕಂಪೆನಿಯು ಇದುವರೆಗೆ ನಡೆಸಿದ ಎಲ್ಲಾ ವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕು, ಸುಜ್ಲಾನ್ ವಶದಲ್ಲಿರುವ ಹೆಚ್ಚುವರಿ ಭೂಮಿಯನ್ನು ಸರಕಾರ ವಶಪಡಿಸಿಕೊಂಡು ನಿರ್ವಸಿತರಿಗೆ ಹಾಗೂ ಭೂರಹಿತರಿಗೆ ಹಂಚಬೇಕು, ಪಡುಬಿದ್ರಿ ಗ್ರಾಮದ ಸರ್ವೆ ನಂಬ್ರ 69/1 ರಲ್ಲಿರುವ ಭೂಮಿ ಪ್ರಸ್ತುತ ಕೆಐಡಿಬಿ ಸ್ವಾಧೀನದಲ್ಲಿದ್ದು, ಇದನ್ನು ಯಾವುದೇ ಕಾರಣಕ್ಕೂ ಸುಜ್ಲಾನ್ ಗೆ ನೀಡಬಾರದು, ಬದಲಾಗಿ ಇದನ್ನೂ ಸಹ ನಿರ್ವಸಿತರಿಗೆ ಹಾಗೂ ಭೂರಹಿತರಿಗೆ ವಿತರಿಸಬೇಕು, ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರನ್ನು ಸಂಪುಟದಿಂದ ಕೈಬಿಡಬೇಕು, ನಿರ್ವಸಿತ ಕೊರಗ ಕುಟುಂಬದಲ್ಲಿ ಮೂವರು ಪದವೀಧರ ವಿದ್ಯಾರ್ಥಿನಿಯರಿದ್ದು, ಇವರಿಗೆ ಸೂಕ್ತ ಉದ್ಯೋಗ ನೀಡಬೇಕು ಎಂಬ ಬೇಡಿಕೆಗಳನ್ನು ಸರಕಾರದ ಮುಂದೆ ಇರಿಸಲಾಗಿದೆ.

# ವಿದ್ಯೆ ಯಾರೊಬ್ಬರ ಸ್ವತ್ತೂ ಅಲ್ಲ. ಸತತ ಅಭ್ಯಾಸ ಮತ್ತು ಪ್ರಯತ್ನದಿಂದ ಉನ್ನತ ಶಿಕ್ಷಣ ಪಡೆಯಲು ಸಾಧ್ಯ ಎಂಬುದನ್ನು ಈ ಬಾರಿಯ ಸಿಇಟಿಯಲ್ಲಿ 3249ನೇ ರ್ಯಾಂಕ್ ಪಡೆದು ವೈದ್ಯಕೀಯ ಶಿಕ್ಷಣ ಪಡೆಯಲು ಅರ್ಹತೆ ಪಡೆದಿರುವ ರಾಜ್ಯದ ಮೂಲ ನಿವಾಸಿಗಳಾದ ಕೊರಗ ಸಮುದಾಯದ ಪ್ರಪ್ರಥಮ ವಿದ್ಯಾರ್ಥಿನಿ ಕು.ಸ್ನೇಹಾ ನಿರೂಪಿಸಿದ್ದಾರೆ.

ರಾಜ್ಯದ ಮೂಲ ನಿವಾಸಿಗಳಾದ ಜೇನು ಕುರುಬ ಮತ್ತು ಕೊರಗ ಸಮುದಾಯಗಳಲ್ಲಿ ಈ ಸಾಧನೆ ಮಾಡಿದ ರಾಜ್ಯದ ಪ್ರಥಮ ವಿದ್ಯಾರ್ಥಿ ಎನ್ನುವ ಸಾದನೆ ಇವರದ್ದು.

ಕುಂದಾಪುರ ಸಮೀಪದ ತೆಕ್ಕಟ್ಟೆಯ ಉಳ್ತೂರಿನ ಸ್ನೇಹಾ, ಕೊರಗ ಸಮುದಾಯದ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿರುವ ಕೊರಗ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷರಾದ ಗಣೇಶ್ ಹಾಗೂ ಅಂಕೋಲದ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿರುವ ಜಯಶ್ರೀ ದಂಪತಿಗಳ ಪ್ರಥಮ ಪುತ್ರಿ. ಇನ್ನೂರ್ವ ಪುತ್ರಿ ನೇಹಾ. ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು 1ರಿಂದ 4ನೇ ತರಗತಿಯವರೆಗೆ ಅಂಕೋಲದ ನಿರ್ಮಲ ಹೃದಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದ ಈಕೆ, 5ನೇ ತರಗತಿಯನ್ನು ಕುಂದಾಪುರದ ಹೋಲಿ ರೋಜರಿ ಶಾಲೆಯಲ್ಲಿ ಪಡೆದಿದ್ದಾಳೆ. 6ನೇ ತರಗತಿಯಿಂದ 10ನೇ ತರಗತಿ ವರೆಗಿನ ವಿಧ್ಯಾಭ್ಯಾಸವನ್ನು ಹೆಬ್ರಿಯ ಚಾರ ನವೋದಯ ವಿದ್ಯಾಲಯದಲ್ಲಿ ಪಡೆದ ಈಕೆ,
ಎಸ್.ಎಸ್.ಎಲ್.ಸಿ.ಯಲ್ಲಿ ಶೇ.89.33 ಅಂಕ ಪಡೆದಿದ್ದಾಳೆ.

ನಂತರ ಮೂಡುಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ (ಪಿ.ಸಿ.ಎಂ.ಬಿ) ಶಿಕ್ಷಣ ಪಡೆದು, ಶೇ.93.5 ಅಂಕ ಪಡೆದಿದ್ದಾರೆ. ಅಲ್ಲದೇ ಸಿ.ಇ.ಟಿ.ಯಲ್ಲಿ ಮೆಡಿಕಲ್ ವಿಭಾಗ ಅಲ್ಲದೇ, ಇಂಜಿನಿಯರಿಂಗ್ ವಿಭಾಗದಲ್ಲಿ 10875ನೇ ರ್ಯಾಂಕ್ ಪಡೆದಿದ್ದಾರೆ.

ಚೆಸ್ ಮತ್ತು ಕನ್ನಡ ಪುಸ್ತಕಗಳನ್ನು ಓದುವ ಅಭ್ಯಾಸ ಹೊಂದಿದ್ದು, ಹೆತ್ತವರ ಆಶಯದಂತೆ ವೈದ್ಯಕೀಯ ಶಿಕ್ಷಣ ಪಡೆದು ಗ್ರಾಮೀಣ ಪ್ರದೇಶದ ಜನತೆಗೆ ಸೇವೆ ನೀಡುವ ಗುರಿಯನ್ನು ಹೊಂದಿದ್ದಾರೆ.

ಮಗಳ ಈ ಸಾಧನೆ ಕುರಿತು ಹೆಮ್ಮೆಯಿಂದ ಮಾತನಾಡಿದ ತಂದೆ ಗಣೇಶ್, ಮಗಳ ಸಾಧನೆ ತುಂಬಾ ಸಂತೋಷ ತಂದಿದ್ದು, ಮಗಳು ವೈದ್ಯಳಾಗಿ ತಮ್ಮ ಸಮುದಾಯ ಮತ್ತು ಗ್ರಾಮೀಣ ಜನರಿಗೆ ಉತ್ತಮ ಸೇವೆ ನೀಡಲಿ, ತುಂಬಾ ಕಷ್ಟಪಟ್ಟು ಮಗಳಿಗೆ ಶಿಕ್ಷಣ ನೀಡಿದ್ದು, ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ಆಸ್ತಿ ಪಾಸ್ತಿ ಮಾಡದೇ ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎನ್ನುತ್ತಾರೆ.

ನಾಲ್ಕನೇ ವಯಸ್ಸಿನಲ್ಲಿ ತನ್ನ ಕೈ ಹಿಡಿದು ಪಲ್ಸ್ ಪರೀಕ್ಷಿಸುತ್ತೇನೆ ಎಂದಿದ್ದ ಮಗಳು ವೈದ್ಯಳಾಗಲಿ ಎಂದು ತಾನು ಆಶಿಸಿದ್ದು, ಈಗ ಅದನ್ನು ನನಸು ಮಾಡುತ್ತಿದ್ದಾಳೆ ಎನ್ನುವ ತಾಯಿ ಜಯಶ್ರೀ, ಮಗಳು ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಮಗಳು ಹಾಸ್ಟೆಲ್ನಲ್ಲಿದ್ದ ವೇಳೆ ಆಗಾಗ್ಗೇ ದೂರವಾಣಿ ಮೂಲಕ ಸಂಪರ್ಕಿಸಿ ಓದಲು ಪ್ರೋತ್ಸಾಹ ನೀಡಿದ್ದಾಗಿ ಹೇಳುತ್ತಾರೆ.

ಹೆಚ್ಚು ಮೂಢನಂಬಿಕೆಗಳನ್ನು ಹೊಂದಿರುವ ಈ ಸಮುದಾಯದಲ್ಲಿ ಹಿಂದೆ ಮಕ್ಕಳು ಮನೆಯಿಂದ ಹೊರ ಹೋದರೆ ತಮ್ಮ ದೇವರು ಶಾಪ ನೀಡುತ್ತಾನೆ ಎಂಬ ನಂಬಿಕೆಯಿದ್ದು, ಈ ಎಲ್ಲಾ ಮೂಢನಂಬಿಕೆಗಳನ್ನು ಬದಿಗೊತ್ತಿ ತನ್ನ ಹೆಚ್ಚಿನ ಅವಧಿಯ ವಿಧ್ಯಾಭ್ಯಾಸವನ್ನು ಮನೆಯಿಂದ ಹೊರಗೆ ಸುಮಾರು 7 ವರ್ಷ ಹಾಸ್ಟಲ್ ನಲ್ಲಿ ಉಳಿದುಕೊಂಡು ಉನ್ನತ ಶಿಕ್ಷಣ ಹಾದಿಯಲ್ಲಿ ನಡೆದಿರುವ ಕು.ಸ್ನೇಹಾಳನ್ನು ಜಿಲ್ಲಾ ಐಟಿಡಿಪಿ ಅಧಿಕರಿ ಉದಯಕುಮರ್ ಶೆಟ್ಟಿ ಅಭಿನಂಧಿಸಿದ್ದಾರೆ.

ಇತ್ತೀಚೆಗೆ ಈ ಸಮುದಾಯದಲ್ಲಿ ಪಿ.ಹೆಚ್.ಡಿ ಪದವಿ ಪಡೆದಿರುವ ಸಬಿತಾ ಹಾಗೂ ಈಗ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ಪಡೆದಿರುದ ಕು.ಸ್ನೇಹಾರವರ ಸಾಧನೆ ಇಡೀ ಸಮುದಾಯಕ್ಕೆ ಸ್ಪೂರ್ತಿ ನೀಡಿದೆ.
– ಬಿ.ಶಿವಕುಮಾರ್, ವಾರ್ತಾ ಇಲಾಖೆ, ಉಡುಪಿ.

ಉಡುಪಿ: ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಮತ್ತು ಸಮಗ್ರ ಗ್ರಾಮೀಣ ಆಶ್ರಮ ಇವುಗಳ ಸಂಯುಕ್ರ ಆಶ್ರಯದಲ್ಲಿ ವಿಶ್ವ ಮಾನವ ಹಕ್ಕುಗಳ ಪಕ್ಷಾಚರಣೆರಣೆಯ ಅಂಗವಾಗಿ ‘ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುವ ಹಿಂಸೆಯ ವಿರುದ್ಧ ಅಭಿಯಾನ: ಸಮುದಾಯ, ಆಡಳಿತ, ಮಾಧ್ಯಮಗಳ ಪಾತ್ರ’ ಎಂಬ ಬಗ್ಗೆ ಆದಿ ಉಡುಪಿ ಅಂಬೇಡ್ಕರ್ ಭವನದಲ್ಲಿ ವಿಚಾರಗೋಷ್ಟಿ ನಡೆಯಿತು.
ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷೆ ಶಶಿಕಲಾ ಕೊರಗ ಸಚ್ಚೇರಿಪೇಟೆ ಇವರ
ಅಧ್ಯಕ್ಷತೆಯಲ್ಲಿ ನಡೆದ ಗೋಷ್ಟಿಯನ್ನು ನಗರಸಭಾಧ್ಯಕ್ಷ ಕಿರಣ್ ಕುಮಾರ್
ಉದ್ಘಾಟಿಸಿದರು. ತಾಲೂಕು ಪಂಚಾಯತ್ ಸದಸ್ಯೆ ವೆರೋನಿಕಾ ಕರ್ನೇಲಿಯೋ ವಿಚಾರ ಮಂಡಿಸಿದರು.
ಉಡುಪಿ ತಾಲೂಕು ಕೊರಗ ಸಮಿತಿಯ ಅಧ್ಯಕ್ಷ ರಾಜು ಕೊರಗ ಹಿರಿಯಡ್ಕ ಹಾಗೂ
ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದ ಮಾಜಿ ರಾಜ್ಯಾಧ್ಯಕ್ಷೆ ಗೌರಿ ಕೆಂಜೂರು
ಉಪಸ್ಥಿತರಿದ್ದರು.