Posts Tagged ‘ಧರಣಿ’

ಉಡುಪಿ: ಬಿಜೆಪಿ ರೈತ ಮೋರ್ಛಾ ರಾಜ್ಯ ಸಮಿತಿ ಕರೆಯಂತೆ ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಛಾ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಆಗಸ್ಟ್ 4ರಂದು ಬೆಳಗ್ಗೆ ಉಡುಪಿ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಸಿ, ಮೆಸ್ಕಾಂ ಅಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಅನಿಯಮಿತ ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕು, ಕನಿಷ್ಟ 12 ಗಂಟೆ 3 ಫೆಸ್ ವಿದ್ಯುತ್ ಪೂರೈಸಬೇಕು, ಸುಟ್ಟುಹೋದ ಟ್ರಾನ್ಸ್ ಫಾರ್ಮರ್ ಗಳನ್ನು ತಕ್ಷಣ ಬದಲಾಯಿಸಬೇಕು, ರೈತರ ಪಂಪ್ ಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, ಹಳೆಯ ತಂತಿಗಳನ್ನು ಮತ್ತು ಕಂಬಗಳನ್ನು ಬದಲಿಸಿ ವಿದ್ಯುತ್ ನಷ್ಟ ತಪ್ಪಿಸಿ ರೈತರ ಪಂಪ್ ಸೆಟ್ ಗಳನ್ನು ಉಳಿಸಬೇಕು, ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಬೇಕು ಹಾಗೂ ಲೈನ್ ಮ್ಯಾನ್ ಗಳ ಕೊರತೆ ನೀಗಿಸಬೇಕು ಎಂಬ ಬೇಡಿಕೆಗಳನ್ನು ಸರಕಾರ ಮತ್ತು ಮೆಸ್ಕಾಂ ಮುಂದಿಡಲಾಯಿತು.

ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿದ್ಯುತ್ ಕೊಡಿ, ಇಲ್ಲವೇ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಸವಾಲು ಹಾಕಿದರು. ರೈತಮೋರ್ಛಾ ಉಡುಪಿ ಗ್ರಾಮಾಂತರ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮಾತನಾಡಿ, ಒಂದು ತಿಂಗಳಲ್ಲಿ 28 ದಿನ ಸದನದಲ್ಲಿ ನಿದ್ದೆ ಮಾಡಿದ ಸಿದ್ಧರಾಮಯ್ಯರಿಂದ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ, ಉತ್ತಮ ಆಡಳಿತ ನೀಡುತ್ತಾರೆಂದು ನಿರೀಕ್ಷಿಸಲೂ ಸಾಧ್ಯವಿಲ್ಲ, ರಾಜ್ಯದಲ್ಲಿರುವುದು ರೈತ ವಿರೋಧಿ ಸರಕಾರವೆಂದು ಆರೋಪಿಸಿದರು.

ರೈತಮೋರ್ಛಾ ಜಿಲ್ಲಾಧ್ಯಕ್ಷ ದೇವದಾಸ ಹೆಬ್ಬಾರ್, ಪ್ರ.ಕಾರ್ಯದರ್ಶಿ ರಾಘವೇಂದ್ರ ಉಪ್ಪೂರು, ಪಕ್ಷದ ಮುಖಂಡರಾದ ಶ್ಯಾಮಲಾ ಕುಂದರ್, ವಿಲಾಸ್ ನಾಯಕ್, ಜಯಂತಿ ವಾಸುದೇವ, ಶ್ಯಾಮಪ್ರಸಾದ ಕುಡ್ವ, ಸುಭಾಶಿತ್ ಶೆಟ್ಟಿಗಾರ್, ಸುರೇಶ್ ನಾಯಕ್ ಕೊಯಿಲಾಡಿ, ಶೈಲೇಂದ್ರ, ಸಂಧ್ಯಾ ರಮೇಶ್, ಅಶೋಕ್ ಕುಮಾರ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ವೀಣಾ ಶೆಟ್ಟಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಉಡುಪಿ: ಚಿಟ್ಪಾಡಿಯಲ್ಲಿರುವ ದೇವಾಡಿಗರ ಸೇವಾ ಸಂಘದಲ್ಲಿ ಅವ್ಯವಹಾರಗಳು ನಡೆಯುತ್ತಿದೆ ಎಂದು ಆರೋಪಿಸಿ ಸಂಘದ ಸದಸ್ಯರು ಸಂಘದ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು.

ಸಂಘದ ಕಾರ್ಯದರ್ಶಿ ಸರ್ವಾಧಿಕಾರಿ ನೀತಿಯನ್ನು ಅನುಸರಿಸುತ್ತಿದ್ದಾರೆ, ಸಂಘಕ್ಕೆ ಸೇರಿದ ಆಸ್ತಿಯನ್ನು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ವ್ಯಾಪಕ ಅಕ್ರಮಗಳನ್ನು ನಡೆಸಲಾಗಿದೆ ಎಂಬಿತ್ಯಾದಿ ಆರೋಪಗಳೊಂದಿಗೆ ಸದಸ್ಯರು ಪ್ರತಿಭಟನೆ ನಡೆಸಿದರು.

ಉಡುಪಿ: ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರವೆಸಗಿ ಅರೆ ವೈದ್ಯಕೀಯ ಕಾಲೇಜು
ವಿದ್ಯಾರ್ಥಿನಿಯೋರ್ವಳನ್ನು ಕೊಲೆಗೈದ ಕೃತ್ಯಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿನಿಯರು ಇಂದು ಮಣಿಪಾಲದಿಂದ ಬನ್ನಂಜೆಯಲ್ಲಿರುವ ತಹಶಿಲ್ದಾರ್ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಣಿಪಾಲದಿಂದ ಘೋಷನೆ ಕೂಗುತ್ತಾ ಮೆರವಣಿಗೆಯಲ್ಲಿ ಹೊರಟ ವಿದ್ಯಾರ್ಥಿನಿಯರು, ಇಂದ್ರಾಳಿ, ಕಡಿಯಾಳಿ ಆಗಿ ಉಡುಪಿ ಸರ್ವಿಸ್ ಬಸ್ ನಿಲ್ದಾಣ ಪಕ್ಕದ ಗಡಿಯಾರ ಗೋಪುರದ ಮುಂದೆ ಬಂದು ಪ್ರತಿಭಟನಾ ಸಭೆ ನಡೆಸಿದರು. ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಡಾ.ಶಿವಾನಂದ ನಾಯಕ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ನಗರ ಕಾರ್ಯದರ್ಶಿ ಅಭಿಷೇಕ್ ಜೈನ್, ವಿದ್ಯಾರ್ಥಿ ನಾಯಕಿಯರಾದ ಸಂಭ್ರಿಯಾ, ಮೈತ್ರಿ, ದೀಕ್ಷಾ, ಸುಪ್ರಿಯಾ, ಉಷಾ ಶೆಟ್ಟಿ, ದೀಪಾ ಮೊದಲಾದವರು ಪ್ರತಿಭಟನೆಯನ್ನು ಉದ್ಧೇಶಿಸಿ ಭಾಷಣ ಮಾಡಿದರು.
ದೆಹಲಿಯಲ್ಲಿ ಕಳೆದ ವರ್ಷವೊಂದರಲ್ಲಿಯೇ 600 ಅತ್ಯಾಚಾರ ಪ್ರಕರಣಗಳು ನಡೆದಿವೆ. ಆದರೆ ಸರಕಾರ ಅತ್ಯಾಚಾರ ಪ್ರಕರಣಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಡಾ.ಶಿವಕುಮಾರ್ ಆರೋಪಿಸಿದರೆ, ಭಾರೀ ಪೊಲೀಸ್ ರಕ್ಷಣೆಯಲ್ಲಿರುವ ಸೋನಿಯಾ ಗಾಂಧಿ, ಶೀಲಾ ದೀಕ್ಷಿತ್ರಂಥವರಿಗೆ ಮಾತ್ರ ಈ ದೇಶದಲ್ಲಿ ಸುರಕ್ಷಿತರಾಗಿಲು ಸಾಧ್ಯ, ಉಳಿದವರಿಗೆ ಕಷ್ಟಸಾಧ್ಯವೆಂದು ಶಿವಕುಮಾರ್ ಹೇಳಿದರು. ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯೇ ಸೂಕ್ತವೆಂದು ಮೈತ್ರಿ ಅಭಿಪ್ರಾಯಪಟ್ಟರು.
ಪ್ರತಿಭಟನಾ ಸಭೆಯ ಬಳಿಕ ಬನ್ನಂಜೆಯಲ್ಲಿರುವ ತಹಶಿಲ್ದಾರ್ ಕಚೇರಿಗೆ ಮತ್ತೆ ಮೆರವಣಿಗೆ ನಡೆಸಿದ ವಿದ್ಯಾರ್ಥಿನಿಯರು, ತಹಶಿಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಪಿಪಿಸಿ, ಎಂಜಿಎಂ, ಮಣಿಪಾಲದ ಯುಪಿಎಂಸಿ ಮುಂತಾದ ಕಾಲೇಜುಗಳಿಗೆ ಸೇರಿದ ಎಬಿವಿಪಿ ಪ್ರಮುಖರಾದ ಶಶಾಂಕ್, ಶರತ್, ಕಿರಣ್, ದೀಪಕ್, ಚೇತನ್, ವಿಕ್ರಮ್, ಪ್ರೀತಮ್, ರಂಜಿತ್, ಕಾಜಲ್, ಮನಿಷಾ, ಜೆನಿಫರ್, ಸ್ವಾತಿ, ಸುಶ್ಮಿತಾ ಶೆಟ್ಟಿ, ಎಡ್ವಿನಾ, ಶ್ವೇತಾ ಕಾಮತ್, ಪ್ರಗತಿ, ದಿಶಾ, ಪಲ್ಲವಿ, ನಿವೇದಿತಾ, ಸೌಮ್ಯಾ, ಅಶೋಕ್, ಅಮುಲ್, ಪ್ರಮೋದ್ ಮೊದಲಾದವರು ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದ್ದರು. 5 ಸಾವಿರಕ್ಕೂ ಅಧಿಕ ವಿದ್ಯಾಥರ್ಿನಿಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಉಡುಪಿ: ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಸಿದ ಕೇಂದ್ರದ ಯುಪಿಎ ಸರಕಾರದ ಕ್ರಮ ಖಂಡಿಸಿ ಭಾರತೀಯ ಜನತಾ ಪಾರ್ಟಿಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ಇಂದು ಸಂಜೆ ಉಡುಪಿ ಸರ್ವಿಸ್ ಬಸ್ ನಿಲ್ದಾಣ ಪರಿಸರದ ಗಡಿಯಾರ ಗೋಪುರದ ಮುಂಭಾಗದಲ್ಲಿ ಬಹಿರಂಗ ಪ್ರತಿಭಟನಾ ಪ್ರದರ್ಶನ ನಡೆಯಿತು.
ಶಾಸಕ ಲಾಲಾಜಿ ಮೆಂಡನ್, ಜಿ.ಪಂ.ಅದ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಉಪೇಂದ್ರ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಪ್ರ.ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸೋಮಶೇಖರ್ ಭಟ್, ಲೀಲಾ ಅಮೀನ್, ರವಿ ಅಮೀನ್, ಶ್ಯಾಮ ಪ್ರಸಾದ್ ಕುಡ್ವ, ದೇವೇಂದ್ರ ಪ್ರಭು, ಶ್ಯಾಮಲಾ ಕುಂದರ್, ರೇಷ್ಮಾ ಉದಯ ಶೆಟ್ಟಿ, ರತ್ನಾಕರ್ ಶೆಟ್ಟಿ ಮೊದಲಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿನ ಗುತ್ತಿಗೆ ಆಧಾರಿತ ನೌಕರರು ಇಂದು ಬೆಳಗ್ಗೆ ತಮ್ಮ ವೇತನ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿ ಆಸ್ಪತ್ರೆ ಮುಂಭಾಗದಲ್ಲಿ ಧರಣಿ ಮುಷ್ಕರ ನಡೆಸಿದರು.
ಮಣಿಪಾಲ ವಿಶ್ವವಿದ್ಯಾನಿಲಯದ ಆಡಳಿತದಲ್ಲಿರುವ ಕಸ್ತೂರ್ಬಾ ಆಸ್ಪತ್ರೆಗೆ ಇತ್ತೀಚೆಗಿನ ಕೆಲವು ವರ್ಷಗಳಿಂದ ವಿವಿ ಆಡಳಿತವು ಗುತ್ತಿಗೆ ಆಧಾರತವಾಗಿ ನೂರಾರು ಮಂದಿ ನೌಕರರನ್ನು ನೇಮಕ ಮಾಡಿಕೊಂಡಿದೆ. ಮಣಿಪಾಲ ಮಾಸ್ಟರ್ ಸ್ಟಾಪಿಂಗ್ ಸೊಲ್ಯೂಶನ್ ಪ್ರೈನೆಟ್ ಲಿಮಿಟೆಡ್ ಎಂಬ ಸಂಸ್ಥೆಯ ಮೂಲಕ ಕೆಎಂಸಿಗೆ ನಿಯುಕ್ತಿಗೊಂಡ ನೌಕರರಿಗೆ ಸಂಸ್ಥೆ ಪೂರ್ಣ ವೇತನವನ್ನು ನೀಡುತ್ತಿಲ್ಲ ಎಂದೂ ಆರೋಪಿಸಲಾಗಿದೆ. ಮುಖ್ಯವಾಗಿ ಗರಿಷ್ಟ ವಾರ್ಷಿಕ ತುಟ್ಟಿ ಭತ್ಯೆ ನೀಡುವುದಾಗಿ ಹೇಳಿ, ಇದೀಗ ಕನಿಷ್ಟ ವಾರ್ಷಿಕ ತುಟ್ಟು ಭತ್ಯೆ ನೀಡಿ ಮೋಸ ಮಾಡಲಾಗಿದೆ ಎಂದೂ ದೂರಲಾಗಿದೆ.
ಈಗ ನೀಡಲಾಗುತ್ತಿರುವ ವೇತನದಿಂದ ನೆಮ್ಮದಿಯ ಬದುಕು ನಡೆಸುವುದು ದುಸ್ಸಾಧ್ಯವಾಗಿದೆ ಎಂದು ಅಲವತ್ತುಕೊಂಡಿರುವ ನೌಕರರು, ವೇತನ ಪರಿಷ್ಕರಣೆ ಮಾಡಬೇಕು, ವಾರ್ಷಿಕ ತುಟ್ಟಿಭತ್ಯೆ ನೀಡಡಬೇಕು, ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ಭತ್ಯೆ ನೀಡಬೇಕು, ಕೆಲಸದ ವೇಳೆಯನ್ನು ದಾದಿಯರಿಗಿರುವಂತೆ ಬೆಳಗ್ಗೆ ಗಂಟೆ 7.30 ರಿಂದ ಮಧ್ಯಾಹ್ನ ಗಂಟೆ 1.30 ರ ವರೆಗೆ ಮತ್ತು 1.30 ರಿಂದ ಸಂಜೆ ಗಂಟೆ 7.30 ರ ವರೆಗೆ ಎಂದು
ನಿಗದಿಪಡಿಸಬೇಕು, 1 ತಿಂಗಳ ರಾತ್ರಿ ಪಾಳಿಯ ಕೆಲಸದ ದಿನಗಳನ್ನು 15 ದಿನಗಳಿಗೆ ಕಡಿತಗೊಳಿಸಬೇಕು ಎಂದು ಆಡಳಿತ ಮಂಡಳಿಯನ್ನು ಆಗ್ರಹಿಸಿದರು.

ಉಡುಪಿ: ಕರ್ನಾಟಕ ರಾಜ್ಯ ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರ (ಮಹಿಳೆ ಮತ್ತು ಪುರುಷ) ಕೇಂದ್ರ ಸಂಘದ ಉಡುಪಿ ಜಿಲ್ಲಾ ಶಾಖೆಯ ನೂರಾರು ಮಂದಿ ಸದಸ್ಯರು ಆರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಂದು ಬೆಳಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಕಚೇರಿ ಮುಂದೆ ಸಾಮೂಹಿಕ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ಸತ್ಯಾಗ್ರಹ ಸಂಜೆ ವರೆಗೆ ಮುಂದುವರಿಯಲಿದೆ.
ಮಾಸಿಕ ವೇತನವನ್ನು ಕೆಲವರಿಗೆ 3-4 ತಿಂಗಳಿಗೊಮ್ಮೆ, ಇನ್ನು ಕೆಲವರಿಗೆ 6
ತಿಂಗಳಿಗೊಮ್ಮೆ ವಿತರಿಸುವ ಬದಲಾಗಿ ಪ್ರತೀ ತಿಂಗಳು ಕೊನೆಯ ಅಥವಾ 1 ನೇ ತಾರೀಕಿನಂದು ಕಡ್ಡಾಯವಾಗಿ ವಿತರಿಸಬೇಕು, ವೈದ್ಯಾಧಿಕಾರಿಗಳಿಗೆ ನೀಡುತ್ತಿರುವ ಎಲ್ಲಾ
ಸವಲತ್ತುಗಳನ್ನು (ಭತ್ಯೆಗಳನ್ನು) ಆರೋಗ್ಯ ಸಹಾಯಕರುಗಳಿಗೂ ನೀಡಬೇಕು, ಸಮಾನ ವಿದ್ಯೆ, ಸಮಾನ ಕೆಲಸಕ್ಕೆ ಅನುಗುಣವಾಗಿ ಮೂಲವೇತನದಲ್ಲಿರುವ ತಾರತಮ್ಯವನ್ನು ಸರಿಪಡಿಸಬೇಕು, ಹೊಸದಾಗಿ ಪ್ರಾರಂಭವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ
ಮೇಲ್ವಿಚಾರಕರ, ಹಿರಿಯ ಮಹಿಳಾ ಹಾಗೂ ಪುರುಷ ಆರೋಗ್ಯ ಸಹಾಯಕರ ಹುದ್ದೆಗಳನ್ನು ಸೃಜಿಸಬೇಕು, ಜನಸಂಖ್ಯೆಗೆ ಅನುಗುಣವಾಗಿ ಕಿರಿಯ ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರ ಹುದ್ದೆಗಳನ್ನು ಸೃಜಿಸಬೇಕು, ಭಾರತ ಸರಕಾರದ ಆದೇಶದ ಅನ್ವಯ ಪ್ರತಿಯೊಬ್ಬ ಆರೋಗ್ಯ ಸಹಾಯಕರಿಗೆ 3000 ಜನಸಂಖ್ಯೆಯಂತೆ ನಿಗದಿಪಡಿಸಬೇಕು, ಸಾಂಕ್ರಾಮಿಕ ರೋಗಗಳನ್ನು ಹೊರತುಪಡಿಸಿ ಇತರ ಸಾಮಾನ್ಯ ಖಾಯಿಲೆಗಳಾದ ರಕ್ತದೊತ್ತಡ, ಮಧುಮೇಹ ಪರೀಕ್ಷೆಯ ಕಾರ್ಯಕ್ರಮಗಳನ್ನು ಆರೋಗ್ಯ ಸಹಾಯಕರಿಂದ ಹೊರತುಪಡಿಸಬೇಕು ಎಂಬ ಬೇಡಿಕೆಗಳನ್ನು ರಾಜ್ಯ ಸರಕಾರದ ಮುಂದೆ ಇರಿಸಲಾಗಿದೆ.
ಸಂಘದ ಜಿಲ್ಲಾ ಗೌರವಾಧ್ಯಕ್ಷರಾದ ಎಸ್.ಜಿ.ನಾಯಕ್, ಅಧ್ಯಕ್ಷರಾದ ಆನಂದ ಗೌಡ, ಕೋಶಾಧಿಕಾರಿ ಕೆ.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಗಿರಿಜಾ ಶೆಟ್ಟಿ ಬೈಲೂರು, ಉಪಾಧ್ಯಕ್ಷೆ ವಿಜಯಾ ಸಾಸ್ತಾನ, ಕಾರ್ಕಳ ತಾಲೂಕು ಶಾಖೆಯ ಅಧ್ಯಕ್ಷರಾದ ರಮೇಶ್ ಶೆಟ್ಟಿ, ಕುಂದಾಪುರ ತಾಲೂಕು ಶಾಖೆಯ ಅಧ್ಯಕ್ಷರಾದ ಬಿ.ವಿ.ಶಿವರಾಮ್ ರಾವ್ ಮೊದಲಾದವರು ಸತ್ಯಾಗ್ರಹದ ನೇತೃತ್ವವನ್ನು ವಹಿಸಿದ್ದರು.