Posts Tagged ‘ನಕ್ಸಲ್’

ಉಡುಪಿ: ಕೆಲವು ವರ್ಷಗಳ ಹಿಂದೆ ಕಾರ್ಕಳ ತಾಲೂಕಿನ ಸೀತಾನದಿ ಪರಿಸರ ಪ್ರದೇಶದಲ್ಲಿ ನಡೆದ ಶಿಕ್ಷಕ ಮತ್ತು ಬಡ್ಡಿ ವ್ಯಾಪಾರಿ ಭೋಜ ಶೆಟ್ಟಿ ಹಾಗೂ ಇನ್ನೋರ್ವರನ್ನು ಗುಂಡು ಹಾರಿಸಿ ಹತ್ಯಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ ಎಲ್ಲಾ ಶಂಕಿತ ನಕ್ಸಲ್ ಆರೋಪಿಗಳನ್ನೂ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಇಂದು ಆರೋಪಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.

ಚಂದ್ರಶೇಖರ ಗೋರಬಾಳ್ ಯಾನೆ ತಿಪ್ಪೇಶ್, ನಂದ ಕುಮಾರ್, ದೇವೇಂದ್ರಪ್ಪ ಯಾನೆ ವಿಷ್ಣು ಯಾನೆ ದೇವಣ್ಣ ಹಾಗೂ ಆಶಾ ಯಾನೆ ಸುಧಾ ಯಾನೆ ಚಂದ್ರಾ ಯಾನೆ ಇಂದಿರಾ ಯಾನೆ ನಳಿನಿ ಯಾನೆ ಸಿಂಧು ಯಾನೆ ನಂದಿನಿ ಯಾನೆ ಪವಿತ್ರಾ ಆರೋಪಮುಕ್ತರಾದ ಶಂಕಿತ ನಕ್ಸಲರಾಗಿದ್ದಾರೆ.

2008 ರ ಮೇ 15 ರಂದು ಕಾರ್ಕಳ ತಾಲೂಕಿನ ಹೆಬ್ರಿ ಪೋಲೀಸ್ ಠಾಣಾ ವ್ಯಾಪ್ತಿಯ ನಾಡ್ಪಾಲು ಗ್ರಾಮದ ಸೀತಾನದಿ ಬಳಿಯ ಬಾಳುಬ್ಬೆ ನಿವಾಸಿ, ಸ್ಥಳೀಯ ಶಾಲಾ ಶಿಕ್ಷಕ ಮತ್ತು ಬಡ್ಡಿ ವ್ಯಾಪಾರಿ ಭೋಜ ಶೆಟ್ಟಿ ಹಾಗೂ ಇನ್ನೋರ್ವರನ್ನು ಗುಂಡು ಹಾರಿಸಿ ಹತ್ಯೆಗೈದ ಆರೋಪ ದೇವೇಂದ್ರಪ್ಪ, ನಂದ ಕುಮಾರ್, ಚಂದ್ರಶೇಖರ ಗೋರಬಾಳ್ ಹಾಗೂ ಆಶಾ ಇವರ ಮೇಲಿತ್ತು.

2003 ರ ನವೆಂಬರ್ ನಲ್ಲಿ ಈದು ರಾಮಪ್ಪ ಪೂಜಾರಿ ಎಂಬವರ ಮನೆಯಲ್ಲಿ ನಡೆದ ಪೋಲೀಸ್ ಕಾರ್ಯಾಚರಣೆಯಲ್ಲಿ ಪೊಲೀಸರು ನಕ್ಷಲ್ ನಾಯಕಿಯರಾದ ಹಾಜಿಮಾ ಹಾಗೂ ಪಾರ್ವತಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. ಯಶೋದಾ ಅವರನ್ನು ಗುಂಡಿನ ಗಾಯಗಳೊಂದಿಗೆ ಸೆರೆ ಹಿಡಿದಿದ್ದರು. ಈ ಸಂದರ್ಭದಲ್ಲಿ ಓರ್ವ ಯುವಕ ಓದಿ ಪರಾರಿಯಾಗಿದ್ದನು. ಇವರಲ್ಲಿ ಯಶೋದಾ ನ್ಯಾಯಾಲಯ ವಿಚಾರಣೆ ಎದುರಿಸಿ ಇದೀಗ ದೋಷಮುಕ್ತಿಗೊಂದಿದ್ದಾಳೆ. ಅಂದು ಓಡಿ ಪರಾರಿಯಾದ ಯುವಕನನ್ನು ವಿಷ್ಣು ಎಂದು ಗುರುತಿಸಲಾಗಿತ್ತು. ಬಳಿಕ ಪೋಲೀಸ್ ಬಂಧನಕ್ಕೆ ಒಳಗಾದ ದೇವೇಂದ್ರಪ್ಪ ಅವರೇ ವಿಷ್ಣು ಎಂದು ಗುರುತಿಸಲಾಗಿತ್ತು.

ಭೋಜ ಶೆಟ್ಟಿ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪರವಾಗಿ ಉಡುಪಿಯ ಹಿರಿಯ ಮತ್ತು ಪ್ರಸಿದ್ಧ ವಕೀಲರಾದ ಎಂ.ಶಾಂತಾರಾಮ ಶೆಟ್ಟಿ ವಾದಿಸಿದ್ದರು.

ಇಂದು ಖುಲಾಸೆಗೊಂಡವರಲ್ಲಿ ಆಶಾ ಅವರು ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು, ಮುಖ್ಯ ವಾಹಿನಿಯಲ್ಲಿ ಸಹಜ ಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ಮೈಸೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಂದ್ರಶೇಖರ ಗೋರಬಾಳ್ ಅವರ ಮೇಲೆ ಬೇರೆ ಯಾವುದೇ ಪ್ರಕರಣವೂ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇಲ್ಲದೇ ಇರುವುದರಿಂದ ಇನ್ನೋಂದೆರಡು ದಿನಗೋಳಗೆ ನ್ಯಾಯಾಂಗ ಬಂಧನದಿಂದ ಬಿಡುಗಡೆಗೊಳ್ಳಲಿದ್ದಾರೆ. ನಂದ ಕುಮಾರ್ ಹಾಗೂ ದೇವೇಂದ್ರಪ್ಪ ಇವರ ವಿರುದ್ಧ ಇನ್ನೂ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ, ಇವರ ನ್ಯಾಯಾಂಗ ಬಂಧನ ಮುಂದುವರಿಯಲಿದೆ.

# ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ತನಿಕೋಡು ಚೆಕ್ಪೋಸ್ಟ್ ಬಳಿ 19.04.2014ರಂದು ನಸುಕಿನ ಸಮಯದಲ್ಲಿ ನಕ್ಸಲ್ ನಿಗ್ರಹ ಪಡೆ (ಎ.ಎನ್.ಎಫ್)ಯ ಪೊಲೀಸರು, ವಾಹನವೊಂದರಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಮಂಗಳೂರು ಸಮೀಪದ ಜೋಕಟ್ಟೆ ನಿವಾಸಿ ಕಬೀರ್ (28 ವರ್ಷ) ಎಂಬವರನ್ನು ನೇರಾನೇರ ಅವರೆದೆಗೆ ಗುಂಡು ಹೊಡೆದು ಕೊಂದು ಹಾಕಿದ್ದಾರೆ.

ಕಬೀರ್ ಹತ್ಯೆಯನ್ನು ಖಂಡಿಸಿ ಮುಸ್ಲೀಮರು ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಎಲ್ಲಾ ಜಾತಿ, ಮತಗಳ ಜನರೂ ಇರುವ ಎಡಪಂಥೀಯ ಸಂಘಟನೆಗಳು ಪ್ರತಿಭಟನೆ ವ್ಯಕ್ತಪಡಿಸುತ್ತಿವೆ. ದೊಡ್ಡ ಸಂಖ್ಯೆಯ ಕ್ರೈಸ್ತರು ತಮಗೂ, ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಮೌನವಹಿಸಿದ್ದಾರೆ. ಬಲಪಂಥೀಯ ಸಂಘಟನೆಗಳು, ಕಬೀರ್ ಒಬ್ಬ ಅಕ್ರಮ ಜಾನುವಾರು ಕಳ್ಳ ಸಾಗಾಟಗಾರ. ಆತನ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಜಾನುವಾರು ಕಳವು ಮತ್ತು ಅಕ್ರಮ ಸಾಗಾಟಕ್ಕೆ ಸಂಬಂಧಿಸಿದಂತೆ ಹಲವು ಕೇಸುಗಳು ದಾಖಲಾಗಿವೆ ಎಂದು ವಾದಿಸುತ್ತಾ, ಕಬೀರ್ ಹತ್ಯೆಗೈದ ಎಎನ್ಎಫ್ ಕಾರ್ಯವನ್ನು ಸಮರ್ಥಿಸುತ್ತಾ, ಶ್ಲಾಘಿಸುತ್ತಾ, ಕಬೀರ್ ಕುಟುಂಬಕ್ಕೆ ನಷ್ಟ ಪರಿಹಾರ ನೀಡಿದ ಸರಕಾರವನ್ನು ವಿಮರ್ಶಿಸುತ್ತಾ, ಪ್ರತಿಭಟನಾಕಾರರನ್ನು ಟೀಕಿಸುತ್ತಾ, ಕೊಲೆ ಆರೋಪಿ ಎಎನ್ಎಫ್ ಸಿಬ್ಬಂದಿಯ ವಿರುದ್ಧ ಕಾನೂನು ಕ್ರಮಕೈಗೊಂಡರೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಬೆದರಿಕೆ ಒಡ್ಡುತ್ತಿದೆ.

ಒಬ್ಬ ವ್ಯಕ್ತಿಯನ್ನು ಇನ್ನೊಬ್ಬ ವ್ಯಕ್ತಿ, ವ್ಯವಸ್ಥೆಯನ್ನು ಪ್ರತಿನಿಧಿಸುವ ಸರಕಾರಿ ನೌಕರ, ಪ್ರಭುತ್ವ ಅಥವಾ ವ್ಯವಸ್ಥೆ ಇಲ್ಲವೇ ಸರಕಾರ ಕೊಲೆ ಮಾಡಿದೆ.
ರಾಜ್ಯದಲ್ಲಿರುವುದು ಕಾಂಗ್ರೆಸ್ ಸರಕಾರ. ಪ್ರತಿ ದಿನ ಕಾಂಗ್ರೆಸ್ ಪಕ್ಷವನ್ನು, ಕಾಂಗ್ರೆಸ್ ಸರಕಾರವನ್ನು ಹಿಗ್ಗಾಮುಗ್ಗಾ ಟೀಕಿಸುವ ಬಲಪಂಥೀಯ ಸಂಘಟನೆಗಳು, ಇಲ್ಲಿ, ಈಗ ಕಬೀರ್ ಹತ್ಯೆಗೆ ಸಂಬಂಧಪಟ್ಟಂತೆ ಮಾತ್ರ ಉಲ್ಟಾ ಹೊಡೆದಿದೆ. ಅಂದರೆ, ಕಬೀರ್ನನ್ನು ಹತ್ಯೆಗೈದ ಕಾಂಗ್ರೆಸ್ ಸರಕಾರದ ಕ್ರಮವನ್ನು ಸಮರ್ಥನೆ ಮಾಡುತ್ತಿದೆ. ಇದೇ
ಸಂದರ್ಭದಲ್ಲಿ ಕಬೀರ್ ಕುಟುಂಬಕ್ಕೆ ನಷ್ಟ ಪರಿಹಾರ ನೀಡಿದ ಕಾಂಗ್ರೆಸ್ ಸರಕಾರದ ಕ್ರಮವನ್ನು ಖಂಡಿಸುತ್ತಿದೆ.

ಬಲಪಂಥೀಯ ಪಕ್ಷದ ಸರಕಾರ ಬರಬಾರದೆಂದು ವಾದಿಸುತ್ತಾ, ಕೋಮುವಾದಿಯಲ್ಲದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಬೇಕೆಂದು ಕೆಲಸ ಮಾಡಿದ, ಮಾಡುವ ಎಡಪಂಥೀಯ ವೇದಿಕೆಗಳು, ಸಮಿತಿಗಳು, ವಿಚಾರವಾದಿಗಳು, ಸಾಹಿತಿಗಳು, ಪ್ರಗತಿಪರರು ಈಗ ಕಬೀರ್ ಹತ್ಯೆಗೈದ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟ ಆಯೋಜಿಸುವ ಬದಲಾಗಿ ಬಲಪಂಥೀಯ ಸಂಘಟನೆಗಳ ವಿರುದ್ಧದ ಹೋರಾಟಕ್ಕೆ ಚಾಲನೆ ನೀಡಿದೆ. ಇಂಥ ಹಲವು ಗಂಭೀರ ಮತ್ತು ಅನೇಕ ಸಣ್ಣ ಪುಟ್ಟ ವಿಚಾರಗಳು ಇಂದು ನಮ್ಮ ಮುಂದೆ ಚರ್ಚೆಗೀಡಾಗುತ್ತಿರುವ ಹಿನ್ನೆಲೆಯಲ್ಲಿ ಒಂದಿಷ್ಟು ವಿಷಯಗಳನ್ನು ಹಂಚುವುದು ಅನಿವಾರ್ಯವಾಗಿದೆ.

ಕೊಲೆ ಒಂದು ಗಂಭೀರ ಅಪರಾಧ ಕೃತ್ಯ. ಹೇಗೆ ಕಳ್ಳತನ, ದರೋಡೆ, ಸುಲಿಗೆ, ಅತ್ಯಾಚಾರ, ಕೊಲೆ ಬೆದರಿಕೆ, ಹಲ್ಲೆ ಇತ್ಯಾದಿ ಅಪರಾಧ ಕೃತ್ಯಗಳನ್ನು ಎಸಗಿದಾಗ ಅಂಥವರ ವಿರುದ್ಧ ಪೊಲೀಸರು ಮೊಕದ್ದಮೆಗಳನ್ನು ದಾಖಲಿಸುತ್ತಾರೆಯೋ, ಹಾಗೆಯೇ ಕೊಲೆ ಕೃತ್ಯವೆಸಗಿದವರ ವಿರುದ್ಧವೂ ಪೊಲೀಸರು ಮೊಕದ್ದಮೆಗಳನ್ನು ದಾಖಲಿಸಿ ಬಂಧಿಸುತ್ತಾರೆ. ಇಲ್ಲಿ ಕೊಲೆಯಾದವರು, ಕೊಲೆ ಮಾಡಿದವರು ಯಾರು ಎಂಬುದು ಮುಖ್ಯವಾಗುವುದಿಲ್ಲ, ಮುಖ್ಯವಾಗಬಾರದು ಕೂಡಾ. ಕೊಲೆ ನಡೆದಿದೆ. ಕೊಲೆ ಕೇಸು ದಾಖಲಿಸುವುದು, ಅಷ್ಟೆ. ಕೊಲೆಗೈದವನು ಯಾರೆಂದು ತಿಳಿದಿದ್ದರೆ, ಆತನ ಹೆಸರನ್ನು ಎಫ್ಐಆರ್ನಲ್ಲಿ ದಾಖಲಿಸಿ, ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದು.

ಇಲ್ಲಿ ಯಾರನ್ನೂ ಯಾರಿಗೂ ಕೊಲೆ ಮಾಡಲು ಅಧಿಕಾರವಿಲ್ಲ. ಅವಕಾಶಗಳಿರಲೂಬಹುದು. ಅವಕಾಶಗಳಿರಲು ವ್ಯವಸ್ಥೆಯಲ್ಲಿನ ಲೋಪದೋಷಗಳೇ ಕಾರಣ. ಅವಕಾಶವಿದೆಯಲ್ಲ ಎಂದು ಯಾವುದೇ ಒಂದು ಕೊಲೆಯನ್ನು ಸಮರ್ಥಿಸುವುದು ಎಷ್ಟು ಮಾತ್ರಕ್ಕೂ ಸಮರ್ಥನೀಯವಾಗಲಾರದು.

ಕಳ್ಳನಿರಬಹುದು, ದರೋಡೆಕೋರನಿರಬಹುದು, ಸುಲಿಗೆಕೋರನಿರಬಹುದು, ವಂಚಕನಿರಬಹುದು, ಮೋಸಗಾರನಿರಬಹುದು, ಭ್ರಷ್ಟಾಚಾರಿ ಇರಬಹುದು, ಅತ್ಯಾಚಾರಿಯೂ ಇರಬಹುದು, ಗ್ಯಾಂಗ್ ರೇಪ್ ಆರೋಪಿಯೇ ಆಗಿರಬಹುದು, ನಕ್ಸಲೀಯನಾಗಿರಬಹುದು ಇವರನ್ನು ಸಹ ಕೊಲ್ಲುವ ಅಧಿಕಾರ ಯಾರೊಬ್ಬನಿಗೂ ಇಲ್ಲವೇ ಇಲ್ಲ. ಎಲ್ಲಿಯೂ ಇಲ್ಲ. ಭಾರತದಲ್ಲಿ ಮಾತ್ರವಲ್ಲ, ಯಾವುದೇ ದೇಶದಲ್ಲಿಯೂ ಇಲ್ಲ. ದೇಶದಿಂದ ದೇಶಕ್ಕೆ ಕಾನೂನು ಕಾಯಿದೆಗಳಲ್ಲಿ ವ್ಯತ್ಯಾಸ ಇರಬಹುದು. ಯಾವುದೇ ಕಾನೂನುಗಳಲ್ಲೂ, ಯಾವುದೇ ಪ್ರಕರಣಗಳ ಆರೋಪಿಯನ್ನೇ ಆದರೂ, ವಿಚಾರಣೆಗೆ ಒಳಪಡಿಸಿದ ಬಳಿಕ ಕಾನೂನುಬದ್ಧವಾಗಿ ನೇಣಿಗೇರಿಸುವ (ಗಲ್ಲು ಶಿಕ್ಷೆ) ಮೂಲಕ ಕೊಲ್ಲಲಾಗುತ್ತದೆಯೇ ಹೊರತು, ಏಕಾಏಕಿ ಕಾನೂನುಬಧ್ಧವಾಗಿ ಕೊಲ್ಲುವ ಅಧಿಕಾರವಿಲ್ಲ. ಆದರೂ ಕೊಲೆ ಮಾಡಲಾಗುತ್ತದೆ. ಇದು ತಪ್ಪು, ಅಕ್ಷಮ್ಯ ಅಪರಾಧ, ಕಾನೂನು ಬಾಹಿರ ಕೃತ್ಯ, ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಕೊಲೆ ನಡೆದಿದೆ. ಕೊಲೆ ಮಾಡಿದವನು ಕೊಲೆ ಆರೋಪಿ. ಆರೋಪಿ ಪೊಲೀಸ್ ಸಿಬ್ಬಂದಿ ಇರಬಹುದು, ಪೊಲೀಸ್ ಅಧಿಕಾರಿಯಾಗಿರಬಹುದು, ಐಎಎಸ್ ಅಧಿಕಾರಿಯಾಗಿರಬಹುದು,
ಜನಪ್ರತಿನಿಧಿಯಾಗಿರಬಹುದು, ಮಂತ್ರಿಯಾಗಿರಬಹುದು, ರಾಜ್ಯಪಾಲನೋ, ರಾಷ್ಟ್ರಪತಿಯೋ, ನ್ಯಾಯಾಧೀಶನೋ ಆಗಿರಬಹುದು, ಸಾಹಿತಿಯಾಗಿರಬಹುದು, ಉದ್ಯಮಿಯಾಗಿರಬಹುದು, ಯಾರೇ ಆಗಲಿ ಆತ ಕೊಲೆಗಾರನೇ. ಕೊಲೆಗಾರನ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಬೇಕು, ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು. ಇದು ಸಹಜ ನ್ಯಾಯ, ಕಾನೂನು.

ಕೊಂದವನು ಕಾಂಗ್ರೆಸ್ ಕಾರ್ಯಕರ್ತ. ಕೊಲೆಯಾದವನು ಬಿಜೆಪಿ ಕಾರ್ಯಕರ್ತ. ಹಾಗಾಗಿ ಕೊಂದವನನ್ನು ಬಿಟ್ಟು ಬಿಡೋಣವೆಂದು ಕಾಂಗ್ರೆಸ್ ಸರಕಾರ ಬಿಟ್ಟುಬಿಡುವುದನ್ನು ಒಪ್ಪಲು ಸಾಧ್ಯವೇ ? ಕೊಂದವನು ಬಿಜೆಪಿ ಕಾರ್ಯಕರ್ತ. ಕೊಲೆಯಾದವನು ಮುಸ್ಲೀಮ್. ಹಾಗಾಗಿ ಕೊಂದವನದು ತಪ್ಪಿಲ್ಲ ಎಂದು ಕೊಲೆ ಕೇಸು ದಾಖಲಿಸದೆ ಆತನಿಗೆ ಬಹುಮಾನ ನೀಡಬೇಕೆಮದು ಹೇಳುವುದು ಎಲ್ಲಿಯಾದರೂ ಇದೆಯೇ ?

ಕಬೀರ್, ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ. ಹಾಗಾಗಿ ಆತನನ್ನು ಕೊಂದರೆ ತಪ್ಪಿಲ್ಲ ಎಂಬ ವಾದ ಎಷ್ಟು ಮಾತ್ರಕ್ಕೂ ಸರಿಯಲ್ಲ. ಜನಾಂಗೀಯ ಧ್ವೇಷವನ್ನೇ ಉಸಿರಾಡುವ ಜನರು ಮಾತ್ರ ಈ ಮಾತನ್ನು ಸಮರ್ಥಿಸಿಕೊಳ್ಳಬಲ್ಲರು. ಅಕ್ರಮವಾಗಿ ಜಾನುವಾರು ಸಾಗಾಟ ಮಾಡಿದವರನ್ನು, ಜಾನುವಾರು ಕಳ್ಳರನ್ನು ಕೊಲ್ಲಬಹುದೆಂದಾದರೆ, ಅಂಥವರು ಇಲ್ಲಿ ಇನ್ನಷ್ಟೂ ಜನರಿದ್ದಾರೆ. ಈ ಜನರಲ್ಲಿ ಹಿಂದೂಗಳೂ ಇದ್ದಾರೆ. ಇವರ ಪೈಕಿ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರೂ ಇದ್ದಾರೆ. ಹಾಗಾದರೆ ಎಎನ್ಎಫ್ ನವರು ಇವರನ್ನೆಲ್ಲ ಕೊಂದು ಬಿಡಲಿಯ..?

ಕಳ್ಳರನ್ನು ಕೊಂದರೆ ತಪ್ಪಿಲ್ಲ ಎಂದಾದರೆ, ಮೊನ್ನೆಯಷ್ಟೇ ಬಟ್ಟೆಯಂಗಡಿಯಿಂದ ಬಟ್ಟೆ ಕದ್ದು ಸಿಕ್ಕಿ ಬಿದ್ದು ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಬೆಂಗಳೂರು ಮಹಾನಗರಪಾಲಿಕೆಯ ಬಿಜೆಪಿ ಸದಸ್ಯೆ ಎಚ್.ಎಸ್.ಲಲಿತಾ ಅವರನ್ನೂ ಕೊಂದರೆ ತಪ್ಪಿಲ್ಲ ಎಂದೇ ಅರ್ಥ. ವರ್ಷದ ಹಿಂದೆ ಬಿಜೆಪಿ ಸಂಸದನೊಬ್ಬ ಮಾನವ ಕಳ್ಳ ಸಾಗಾಟ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ. ಇವರನ್ನು ಕೊಂದರೂ ತಪ್ಪಿಲ್ಲವೆಂದೇ ಅರ್ಥ.

ಲಾಠಿಚಾರ್ಜ್ ಮಾಡಬೇಕಾದರೂ ಪೊಲೀಸರಿಗೆ ಕೆಲವು ಮಾನದಂಡಗಳಿವೆ. ಒಟ್ಟಾರೆ ಲಾಠಿಚಾರ್ಜ್ ಮಾಡುವಂತಿಲ್ಲ. ಅದನ್ನು ಸೊಂಟದ ಕೆಳಗಡೆಗೇ ಮಾಡಬೇಕೆಂದಿದೆ. ಪೊಲೀಸರು ಮಾನದಂಡಗಳನ್ನು ಪಾಲಿಸುತ್ತಿಲ್ಲ ಎನ್ನುವುದು ಎಷ್ಟು ಸತ್ಯವೋ, ಅಷ್ಟೇ ವಾಸ್ತವದ ವಿಷಯ ಏನೆಂದರೆ, ಪೊಲೀಸರ ತಪ್ಪುಗಳ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳುವುದೇ ಇಲ್ಲ ಎನ್ನುವುದು. ಜನರನ್ನು ಚದುರಿಸುವ ಹಂತದಲ್ಲೂ ಪೊಲೀಸರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕೆಲವು ಮಾನದಂಡಗಳಿವೆ. ಹಂತ ಹಂತವಾಗಿ ಜನರ ವಿರುದ್ಧ ಬಲಪ್ರಯೋಗಗಳನ್ನು ಮಾಡಬೇಕಾಗುತ್ತದೆ ಪೊಲೀಸರು. ಇಂಥ ಯಾವುದೇ ಮಾನದಂಡಗಳನ್ನೂ ಅನುಸರಿಸದೆ ಪೊಲೀಸರು ಸರ್ವಾಧಿಕಾರಿಗಳಂತೆ ವರ್ತಿಸಿದ ಕಾರಣಕ್ಕೆನೇ ಕೆಲ ವರ್ಷಗಳ ಹಿಂದೆ ಮೂಲ್ಕಿಯಲ್ಲಿ ಬಲಪಂಥೀಯ ಸಂಘಟನೆಗಳ ನಾಯಕರಾದ ಸುಖಾನಂದ ಶೆಟ್ಟಿ ಮೃತದೇಹದ ಮೆರವಣಿಗೆ ನಡೆಯುತ್ತಿದ್ದಾಗ,
ಮೆರವಣಿಗೆಯಲ್ಲಿದ್ದ ಜನರ ಮೇಲೆಯೇ ಪೊಲೀಸರು ಗುಂಡು ಹಾರಿಸಿ ಬಲಪಂಥೀಯ ಸಂಘಟನೆಗಳ ಇಬ್ಬರು ಕಾರ್ಯಕರ್ತರು ಬಲಿಯಾಗಬೇಕಾಗಿಬಂತು.

ಪೊಲೀಸರು ಗುಂಡು ಹಾರಿಸಿದ್ದಾರೆ. ಒಬ್ಬ ವ್ಯಕ್ತಿ ಕೊಲೆಯಾಗಿದ್ದಾನೆ. ಕೊಲೆಯಾದವನು ಸತ್ಯ ಹರಿಶ್ಚಂದ್ರನೂ ಅಲ್ಲ. ದಾನಶೂರ ಕರ್ಣನೂ ಅಲ್ಲ. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನೂ ಅಲ್ಲ. ಆದರೂ ಆತ ಒಬ್ಬ ಮನುಷ್ಯ. ಆತ ತಪ್ಪೆಸಗಿದ್ದಾನೆ ಎಂದಾದರೆ, ಆತನನ್ನು ವಿಚಾರಣೆಗೊಳಪಡಿಸಿದ ಬಳಿಕ, ಆತನೆಸಗಿದ ತಪ್ಪಿಗೆ ಯಾವ ಸೆಕ್ಷನ್ಗಳಡಿಯಲ್ಲಿ ಕೇಸು ದಾಖಲಿಸಿಬೇಕೋ, ಅಂಥ ಸೆಕ್ಷನ್ ಗಳಡಿಯಲ್ಲಿ ಆತನ ವಿರುದ್ಧ ಕೇಸು ದಾಖಲಿಸಬೇಕು. ಆತನಿಗೆ ನ್ಯಾಯಾಲಯದಲ್ಲಿ ಜಾಮೀನು ಲಭಿಸದಂತೆ ಒಂದು ಅತ್ಯತ್ತಮವಾದ ಚಾರ್ಜ್ ಶೀಟ್ (ದೋಷಾರೋಪಣಾ ಪಟ್ಟಿ)ನ್ನು ಪೊಲೀಸ್ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಬೇಕು. ನ್ಯಾಯಾಲಯದಲ್ಲಿ ಆರೋಪಿಯ ಮೇಲಿನ ಆರೋಪ ಸಾಬೀತಾಗುವಂತೆ ನೋಡಿಕೊಳ್ಳಬೇಕು. ವಿಚಾರಣೆಯ ಬಳಿಕ ನ್ಯಾಯಾಲಯ ಅಪರಾಧಿಗೆ ಗರಿಷ್ಟ ಪ್ರಮಾಣದ, ಕಠಿಣ ಶಿಕ್ಷೆ ವಿಧಿಸುವಂತೆ ನೋಡಿಕೊಳ್ಳಬೇಕು.

ಈ ನಡುವೆ ಪೊಲೀಸರು ಸರಿ ಇಲ್ಲ, ನ್ಯಾಯಾಲಯವೂ ಸರಿ ಇಲ್ಲ, ವಿಚಾರಣೆ ನಡೆದು ತೀರ್ಪು ನೀಡುವಾಗ ವರ್ಷಗಳಾಗುತ್ತವೆ ಇಂಥ ಹತ್ತು ಹಲವಾರು ಸಮಸ್ಯೆಗಳ ಪಟ್ಟಿ ನಮ್ಮ ಮುಂದೆ ಇದ್ದೇ ಇದೆ. ಈ ರೀತಿಯ ಸಮಸ್ಯೆಗಳ ಪರಿಹಾರಕ್ಕಾಗಿ ನಾವು ಜವಾಬ್ದಾರಿಯುತ ಮತ್ತು ಪ್ರಜ್ಞಾವಂತ ನಾಗರಿಕರಾಗಿ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರದ ಮೇಲೆ ಒತ್ತಡ ಹಾಕಬೇಕೇ ಹೊರತು, ನ್ಯಾಯಾಲಯದಲ್ಲಿ ತೀರ್ಪು ಬರಲು ವಿಳಂಬವಾಗುತ್ತದೆ, ಹಾಗಾಗಿ ನಾವೇ ಈಗಲೇ ಇಲ್ಲಿಯೇ ಕೊಂದು ಬಿಡೋಣ ಎನ್ನುವುದು ಅಮಾನವೀಯವಾಗುತ್ತದೆ, ಅಮಾನುಷವಾಗುತ್ತದೆ, ಸರ್ವಾಧಿಕಾರವಾಗುತ್ತದೆ, ಅನ್ಯಾಯವಾಗುತ್ತದೆ, ಅಧರ್ಮವಾಗುತ್ತದೆ. (ಮುಂದುವರಿಯಲಿದೆ) – ಶ್ರೀರಾಮ ದಿವಾಣ.