# ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಅತ್ಯಾಚಾರ ಅಸ್ತ್ರವಾಗಿದೆ, ಆಗುತ್ತಿದೆ. ದೇಶಗಳ ನಡುವೆ ಯುದ್ಧ ನಡೆಯುವಾಗಲೂ ಒಂದು ದೇಶದ ಸೈನಿಕರು (ಎಲ್ಲರೂ ಅಲ್ಲ) ತನ್ನ ಶತ್ರು ದೇಶವೆಂದು ತಿಳಿದುಕೊಂಡಿರುವ ದೇಶದ ಮಹಿಳೆಯರ ಮೇಲೆ ಅತ್ಯಾಚಾರ ಎಂಬ ಅಮಾನವೀಯ ಅಸ್ತ್ರವನ್ನು ಪ್ರಯೋಗ ಮಾಡುತ್ತಾರೆ. ವಿವಿಧ ಹೆಸರುಗಳಲ್ಲಿ ಕರೆಸಿಕೊಳ್ಳುತ್ತಿರುವ ಸೈನಿಕರು ದೇಶದೊಳಗೂ, ಯಾರ ವಿರುದ್ಧ ತಮ್ಮನ್ನು ಕಳುಹಿಸಲಾಗಿದೆಯೋ ಅಂಥವರ ವಿರುದ್ಧ ಮತ್ತು ತಾವು ಲಂಗರು ಹಾಕಿಕೊಂಡಿರುವ ಸ್ಥಳದಲ್ಲಿನ ಬಡ ಮಹಿಳೆಯರ ಮೇಲೆಯೂ
ಅತ್ಯಾಚಾರವೆಸಗುತ್ತಾರೆ.
ಶ್ರೀಲಂಕಾದಲ್ಲಿ ಅಲ್ಲಿನ ಸರಕಾರಕ್ಕೂ ಎಲ್.ಟಿ.ಟಿ.ಇ.ಗೂ ದೀರ್ಘ ಕಾಲದಿಂದ ಯುದ್ಧ ನಡೆಯುತ್ತಿತ್ತು. ಈ ಯುದ್ಧದಲ್ಲಿ ಶ್ರೀಲಂಕಾ ಸರಕಾರವನ್ನು ಬೆಂಬಲಿಸಿ, ಆ ದೇಶದ ಸೈನಿಕರೊಂದಿಗೆ ಸಹಕರಿಸಿ ತಮಿಳು ಹುಲಿಗಳನ್ನು ನಿರ್ನಾಮ ಮಾಡುವ ಉದ್ಧೇಶದೊಂದಿಗೆ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಭಾರತದ ಸೈನಿಕರನ್ನು ಶ್ರೀಲಂಕಾಕ್ಕೆ ಕಳುಹಿಸಿಕೊಟ್ಟಿದ್ದರು. ಶ್ರೀಲಂಕಾಕ್ಕೆ ಹೋದ ಭಾರತೀಯ ಸೈನಿಕರಲ್ಲಿ ಯಾರೋ ಕೆಲವು ಮಂದಿ ಲಜ್ಜೆಗೆಟ್ಟ ಸೈನಿಕರು ಶಾಂತಿಪಾಲನೆಯ ಹೆಸರಿನಲ್ಲಿ ತಮಿಳು ಮಹಿಳೆಯರ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿದ್ದರಂತೆ.
ಎಲ್ಟಿಟಿಇಯ ಶತ್ರುವಾದ ಶ್ರೀಲಂಕಾ ಸರಕಾರವನ್ನು ಬೆಂಬಲಿಸಿ ಭಾರತದ ಸೈನಿಕರನ್ನು ಶ್ರೀಲಂಕಾಕ್ಕೆ ಕಳುಹಿಸಿಕೊಟ್ಟ ಕಾರಣಕ್ಕೆ, ಪ್ರಧಾನಿ ರಾಜೀವ್ ಗಾಂಧಿಯವರನ್ನು ಬಳಿಕ ಎಲ್ಟಿಟಿಇ ತನ್ನ ಆತ್ಮಹತ್ಯಾ ದಳವನ್ನು ಉಪಯೋಗಿಸಿ ಹತ್ಯೆಗೈದುದು ಹಳೆಯ ವಿಷಯ. ರಾಜೀವ್ ಅವರನ್ನು ಹತ್ಯೆಗೈಯುವ ಕೃತ್ಯದಲ್ಲಿ, ಎಲ್ಟಿಟಿಇಯ ಆತ್ಮಹತ್ಯಾ ಬಾಂಬರ್ ಆಗಿ ಕಾರ್ಯವೆಸಗಿದ ಒಬ್ಬಾಕೆ ಮಹಿಳೆ; ಭಾರತದ ಶಾಂತಿಪಾಲನಾ ಪಡೆಯ ಸೈನಿಕರು ಶ್ರೀಲಂಕಾದಲ್ಲಿ ತಮಿಳು ಮಹಿಳೆಯ ಮೇಲೆ ಅತ್ಯಾಚಾರವೆಸವೆಗುತ್ತಿದ್ದಾಗ ಅದೇ ಮನೆಯಲ್ಲಿದ್ದು ಆ ಕೃತ್ಯವನ್ನು ಕಣ್ಣಾರೆ ಕಂಡು ನೊಂದು ಬೆಂದು ಸೇಡಿನ ಜ್ವಾಲಾಗ್ನಿಯಲ್ಲಿ ಬೇಯುತ್ತಿದ್ದ ಅದೇ ಮನೆಯ ಮಗಳಾಗಿದ್ದಳು ಎಂಬುದು ಬಳಿಕ ಬಯಲಾದ ಒಂದು ವಿಷಯವಾಗಿದೆ.
ಕೆಲವು ವರ್ಷಗಳ ಹಿಂದೆ ಮಣಿಪುರದಲ್ಲಿ ಅಲ್ಲಿನ ಮಹಿಳೆಯರು ‘ಬನ್ನಿ, ನಮ್ಮನ್ನು ಅತ್ಯಾಚಾರ ಮಾಡಿ. ನಿಮ್ಮ ಗುರಿ ಈಡೇರಿಸಿಕೊಳ್ಳಿ’ ಎಂಬ ಘೋಷಣೆಯೊಂದಿಗೆ ತಮ್ಮ ರಾಜ್ಯದಲ್ಲಿ ಬೀಡುಬಿಟ್ಟ ತಮ್ಮದೇ ದೇಶದ ಸೈನಿಕರ ವಿರುದ್ಧ ಸೈನಿಕ ಪಡೆಯ ಕಚೇರಿಯ ಮುಂದುಗಡೆಯೇ ಬೆತ್ತಲಾಗುವ ಮೂಲಕವೇ ಪ್ರತಿಭಟನೆ ನಡೆಸಿದ್ದರು. ಇದು ದೇಶದಾದ್ಯಂತ ದೊಡ್ಡ ಮಟ್ಟದ ಸುದ್ಧಿಯಾಗಿ ಭಾರೀ ಚರ್ಚೆಗೂ ಕಾರಣವಾಗಿತ್ತು. ಈ ಘಟನೆಯು ಉಗ್ರರ ಧಮನ, ಭಯೋತ್ಪಾದಕರ ನಿರ್ನಾಮ, ಶಾಂತಿ ಸ್ಥಾಪನೆ ಎಂಬಿತ್ಯಾದಿಗಳ ಹೆಸರಿನಲ್ಲಿ ಸೈನಿಕರು ನಡೆಸುವ ಭಯಾನಕ ವಿಕೃತಿಯೊಂದರ ಕರಾಳಮುಖವನ್ನು ಅನಾವರಣಗೊಳಿಸಿತ್ತು.
ಸೈನಿಕರು ನಡೆಸುವ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುವುದು ಬಹಳ ಕಡಿಮೆಯೇ ಎಂದೇ ಹೇಳಬಹುದು. ಕಾರಣ, ದೇಶ ರಕ್ಷಣೆಯ ಹೆಸರಲ್ಲಿ ತೆರೆಮರೆಯಲ್ಲಿ ಇವರು ಇಂಥ ಕೃತ್ಯಗಳನ್ನು ನಡೆಸುವುದು. ಅತ್ಯಾಚಾರಕ್ಕೆ ತಾವು ಯಾರನ್ನು ಗುರಿಪಡಿಸುತ್ತಾರೋ, ಅಂಥವರನ್ನು ಬಳಿಕ ಹತ್ಯೆಗೈಯ್ಯುತ್ತಾರಾದುದರಿಂದ, ಇಂಥ ಪ್ರಕರಣಗಳಲ್ಲಿ ಯಾವುದೇ ರೀತಿಯ ಸಾಕ್ಷಿ ಪುರಾವೆಗಳು ಬಳಿಕ ಲಭ್ಯವಿರುವುದಿಲ್ಲ. ಇಡೀ ದೇಶ, ಸರಕಾರಗಳು ಸಹ ಸೈನಿಕರ ಪರವಾಗಿಯೇ ನಿಲ್ಲುವುದರಿಂದ ಅತ್ಯಾಚಾರಿಗಳು ಬಹುತೇಕ ಸಂದರ್ಭದಲ್ಲಿ ಸೈನಿಕರ ವಿರುದ್ಧ ದೂರು ನೀಡಲು ಧೈರ್ಯ ಮಾಡುವುದಿಲ್ಲ. ಧೈರ್ಯ ಮಾಡಿ ದೂರು ಕೊಟ್ಟರೂ ಈ ವ್ಯವಸ್ಥೆಯಲ್ಲಿ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ಅತ್ಯಾಚಾರಕ್ಕೆ ಒಳಗಾದ ಬಡ ಮಹಿಳೆಯರಲ್ಲಿ ಇರುವುದಿಲ್ಲ. ಇಂಥ ಲಾಭಗಳೇ ನೀಚ ಸೈನಿಕರನ್ನು ರಕ್ಷಿಸುತ್ತದೆ. ದೇಶದ ನಿಜವಾದ ದೇಶಪ್ರೇಮಿ, ಪ್ರಾಮಾಣಿಕ, ದಕ್ಷ, ವೀರ ಸೈನಿಕರನ್ನು ತಲೆತಗ್ಗಿಸುವಂತೆ ಮಾಡುತ್ತದೆ, ದೇಶದ ಸೈನಿಕರ ಬಗ್ಗೆಯೇ ಕೆಟ್ಟ ಚಿತ್ರಣ ಉಂಟಾಗಲೂ ಕಾರಣವಾಗುತ್ತದೆ.
ಸೈನಿಕರ ಕಥೆಯೇ ಹೀಗೆ ಅಂದ ಮೇಲೆ, ಇನ್ನು ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಕುಖ್ಯಾತಿ ಪಡೆದಿರುವ ನಮ್ಮ ಪೊಲೀಸ್ ಇಲಾಖೆಯಲ್ಲಿರುವ ಕೆಲವು ಮಂದಿ ಪೊಲೀಸರ ಕಥೆ ಪ್ರತ್ಯೇಕವಾಗಿ ಹೇಳಬೇಕಾಗಿಯೇ ಇಲ್ಲ. ಇಡೀ ಇಲಾಖೆಯೇ ನಾಚಿಕೆ ಪಡುವಷ್ಟು ಕೀಚಕತನದ ಕೆಲಸವನ್ನು ಇಲ್ಲಿರುವವರು ನಡೆಸಿದ್ದಾರೆ, ನಡೆಸುತ್ತಾರೆ. ನಮ್ಮ ದೇಶದಲ್ಲಿ ಅತ್ಯಾಚಾರ, ವಿವಿಧ ರೀತಿಯ ಲೈಂಗಿಕ ದೌರ್ಜನ್ಯದ ಪ್ರಕರಣಗಳು, ಮಹಿಳೆಯರ ಮೇಲೆ ನಿರಂತರವಾಗಿ ನಡೆಯುವ ಕಿರುಕುಳವೇ ಮೊದಲಾದ ಪ್ರಕರಣಗಳಿಗೆ ಪೊಲೀಸ್ ವ್ಯವಸ್ಥೆಯ ಕೊಡುಗೆಯೇ ದೊಡ್ಡದು.
ಹೆಣ್ಮಕ್ಕಳು ನಿಗೂಢವಾಗಿ ಕಾಣೆಯಾದಾಗ, ಅಪಹರಣಕ್ಕೀಡಾದಾಗ ಮನೆಯವರು ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ, ದೂರು ಸ್ವೀಕರಿಸಿ, ಪ್ರಕರಣ ದಾಖಲಿಸಿ ಹುಡುಕಾಡುವ ಕೆಲಸ ಮಾಡಬೇಕಾದ ಪೊಲೀಸ್ ಅಧಿಕಾರಿಗಳು, ‘ಅವಳು ಯಾರೊಂದಿಗಾದರು ಹೋಗಿರಬಹುದು, ಹೋಗಿ ಎರಡು ದಿನ ಹುಡುಕಿ. ಸಿಗದಿದ್ದರೆ ಆಮೇಲೆ ಬನ್ನಿ, ನೋಡೋಣ’ ಎಂದು ಮನೆಯವರನ್ನು ಸಾಗಹಾಕುವ ಪ್ರಕರಣಗಳೆಷ್ಟು ಬೇಕು ? ಮನೆಯವರು ಮನೆ ಮಗಳನ್ನು ಹುಡುಕಿ ಸುಸ್ತಾಗಿ ಪೊಲೀಸ್ ಠಾಣೆಗೆ ಎರಡನೇ ಬಾರಿ ಬಂದು ದೂರು ಕೊಡುವಷ್ಟರಲ್ಲಿ ಹೆಣ್ಮಗಳು ಅತ್ಯಾಚಾರಕ್ಕೀಡಾಗಿ, ಕೊಲೆಯಾಗಿ ಆಕೆಯ ಕೊಳೆತು ನಾರುವ ಸ್ಥಿತಿಯಲ್ಲಿರುತ್ತದೆ. ಅಂದರೆ, ಇಂಥ ಪ್ರಕರಣಗಳಲ್ಲಿ ಪೊಲೀಸರ ಬೇಜವಾಬ್ದಾರಿ, ಕರ್ತವ್ಯಲೋಪ ಕಣ್ಣಿಗೆ ರಾಚುವಂತಿರುತ್ತದೆ, ಆದರೆ, ಇಂಥ ಅದಕ್ಷ ಪೊಲೀಸ್ ಅಧಿಕಾರಿಗಳ ವಿರುದ್ಧ ಸರಕಾರ ಕಟ್ಟುನಿಟ್ಟಿನ ಶಿಸ್ತುಕ್ರಮ
ಕೈಗೊಳ್ಳುವುದಿಲ್ಲ. ಪರಿಣಾಮವಾಗಿ ಪೊಲೀಸ್ ಅಧಿಕಾರಿಗಳ ಹೊಣೆಗೇಡಿತನ ಮತ್ತೆ ಮತ್ತೆ ನಿರಂತರವಾಗಿ ಮುಂದುವರಿಯುತ್ತದೆ, ಹೆಣ್ಮಕ್ಕಳು ಬಲಿಪಶುವಾಗುತ್ತಲೇ ಇರುತ್ತಾರೆ.
ಅಪರಿಚಿತ ಯುವತಿಯರು, ಬಡ ಕುಟುಂಬಕ್ಕೆ ಸೇರಿದವರು ಅತ್ಯಾಚಾರಕ್ಕೀಡಾಗಿ, ಕೊಲೆಯಾದ ಬಹುತೇಕ ಪ್ರಕರಣಗಳಲ್ಲಿ, ಹೆಚ್ಚಾಗಿ ಇಂಥ ಪ್ರಕರಣಗಳನ್ನು ‘ಅಸಹಜ ಮರಣ’ ಎಂದು ಪ್ರಕರಣ ದಾಖಲಿಸಿ ಕೈತೊಳೆದುಕೊಳ್ಳುವ ಪೊಲೀಸ್ ಅಧಿಕಾರಿಗಳೇ ಅಧಿಕ. ಕೆಲವೊಮ್ಮೆ ‘ಕೊಲೆ’ ಎಂದು ಕೇಸು ದಾಖಲಿಸಲ್ಪಡುತ್ತದೆ. ಆದರೆ ಅಪ್ಪಿ ತಪ್ಪಿಯೂ ‘ಅತ್ಯಾಚಾರ’ ಎಂದು ಕೇಸು ದಾಖಲಿಸುವುದಿಲ್ಲ. ಅಪರಿಚಿತ ಮತ್ತು ಬಡ ಕುಟುಂಬಕ್ಕೆ ಸೇರಿದ ಹೆಣ್ಮಕ್ಕಳ ಶವವಾದರೆ ಸರಕಾರಿ ವೈದ್ಯಾಧಿಕಾರಿಗಳು ಮೃತದೇಹದ ಮರಣೋತ್ತರ ಪರೀಕ್ಷೆಯನ್ನೂ ನಡೆಸದೆಯೇ ಹಾಗೆಯೇ ಬಿಳಿ ಬಟ್ಟೆಯಲ್ಲಿ ಸುತ್ತಿ ಶವವನ್ನು ಪೊಲೀಸರಿಗೋ, ಶವದ ವಾರೀಸುದಾರರ ಕುಟುಂಬಕ್ಕೋ ಹಸ್ತಾಂತರಿಸಿಬಿಡುತ್ತಾರೆ. ಮೃತದೇಹದ ಮರಣೋತ್ತರ ಪರೀಕ್ಷೆಯನ್ನೇ ನಡೆಸದೆ, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿ ಶವವನ್ನು ಹಸ್ತಾಂತರಿಸಿದರೆ ಅತ್ಯಾಚಾರ ನಡೆದುದು ದಾಖಲಾಗುವುದಾದರೂ ಹೇಗೆ ? ಇಲ್ಲ, ಸಾಧ್ಯವೇ ಇಲ್ಲ. ಅತ್ಯಾಚಾರದ ಪ್ರಕರಣವೂ ದಾಖಲಾಗುವುದೇ ಇಲ್ಲ. ಆದರೆ, ಮರಣೋತ್ತರ ಪರೀಕ್ಷೆ ನಡೆಸದೆಯೇ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ವರದಿ ನೀಡಿ ಪ್ರಕರಣವನ್ನು ಮುಚ್ಚಿ ಹಾಕಿದ ವೈದ್ಯಾಧಿಕಾರಿಗಳಿಗೆ ಭಡ್ತಿ ನೀಡಿ ಮಹತ್ಸಾಧನೆ ಮೆರೆಯುತ್ತದೆ.
ಪಶ್ಚಿಮ ಬಂಗಾಳದ ತೃಣಮೂಲಕ ಕಾಂಗ್ರೆಸ್ ಪಕ್ಷದ ಸಂಸದನೂ, ನಟನೂ ಆದ ತಪಸ್ ಪಾಲ್ ಎಂಬಾತ ಇತ್ತೀಚೆಗೆ ತಮಗ್ಮ ಪಕ್ಷದ ಕಾರ್ಯಕರ್ತರ ಸಭೆಯೊಂದರಲ್ಲಿ ಭಾಷಣ ಮಾಡುತ್ತಾ, ಎಡಪಕ್ಷದ ಕಾರ್ಯಕರ್ತರ ಮನೆ ಮಹಿಳೆಯರ ಮೇಲೆ ತನ್ನ ಪಕ್ಷದ ಕಾರ್ಯಕರ್ತರಿಗೆ ಅತ್ಯಾಚಾರವೆಸಗಲು ಕರೆ ಕೊಟ್ಟದ್ದು ಈಗಾಗಲೇ ಬಹಿರಂಗಗೊಂಡಿದೆ. ಕೇವಲ 2-3 ದಿನಗಳ ಹಿಂದೆಯಷ್ಟೇ ಸಾಮಾಜಿಕ ಜಾಲತಾಣವಾಗಿರುವ ಫೇಸ್ ಬುಕ್ ನಲ್ಲಿ ಮಹಿಳಾ ಬರಹಗಾರ್ತಿಯೊಬ್ಬರನ್ನು ಉದ್ಧೇಶೀಸಿ ಕಮೆಂಟ್ ಹಾಕಿದ ತನ್ನನ್ನು ತಾನು ಸನಾತನವಾದಿ ಲೇಖಕ ಎಂದು ಗುರುತಿಸಿಕೊಂಡ
ವ್ಯಕ್ತಿಯೊಬ್ಬ, ‘ಅತ್ಯಾಚಾರಿಗಳಿಂದ ನಿಮ್ಮನ್ನು ಜುಟ್ಟು ಹಿಡಿದು
ಅತ್ಯಾಚಾರವೆಸಗಿಸಬೇಕು, ಆಗ ಎಲ್ಲಾ ಸರಿ ಆಗುತ್ತೆ’ ಎಂದು ಅತ್ಯಾಚಾರ ಎಂಬ
ಅಸ್ತ್ರವನ್ನು ಪ್ರಯೋಗಿಸಿ ಬೆದರಿಕೆ ಹಾಕಿದ ಘಟನೆಯೂ ನಡೆದಿದೆ. ಇದೆಲ್ಲಾ ಏನನ್ನು ಸೂಚಿಸುತ್ತದೆ ಎಂದು ಬೇರೆ ಹೇಳುವ ಅಗತ್ಯವಿಲ್ಲ ಅನಿಸುತ್ತಿದೆ.
ಕಾರ್ಯಾಂಗ, ಶಾಸಕಾಂಗಗಳ ಜೊತೆಗೆ ಇಡೀ ವ್ಯವಸ್ಥೆ ಸುಸ್ಥಿತಿಯಲ್ಲಿರುವಂತೆ
ನೋಡಿಕೊಳ್ಳಬೇಕಾದ ಮಹತ್ತರ ಜವಾಬ್ದಾರಿ ಹೊತ್ತಿರುವ ಲೇಖನಿಯನ್ನೇ
ಖಡ್ಗವನ್ನಾಗಿಸಬೇಕಾದವರು ಸಹ ಪ್ರಸ್ತುತ ಅತ್ಯಾಚಾರವನ್ನೇ ಖಡ್ಗವನ್ನಾಗಿಸಿರುವುದು ವ್ಯವಸ್ತೆಯ ದುರಂತವಲ್ಲದೇ ಮತ್ತೇನು ? ಇಂದ್ರಿಯಗಳನ್ನು
ನಿಯಂತ್ರಣದಲ್ಲಿಟ್ಟುಕೊಳ್ಳಲಿಕ್ಕಾಗದ ವಿಕೃತ ಕಾಮುಕರು ದೈಹಿಕವಾಗಿ
ಅತ್ಯಾಚಾರವೆಸಗುತ್ತಾರೆ. ಅತ್ಯಾಚಾರದ ಮನಸ್ಸನ್ನು ಹೊಂದಿರುವ ವಿಕೃತರು
ಅತ್ಯಾಚಾರವೆಸಗಲು ಪ್ರಚೋದನೆ ನೀಡುತ್ತಾರೆ, ಮಾನಸಿಕವಾಗಿ ಅತ್ಯಾಚಾರವೆಸಗುತ್ತಾರೆ. ಟಿಆರ್ ಪಿಗಾಗಿ ಅಶ್ಲೀಲತೆಯನ್ನು ಅನಗತ್ಯವಾಗಿ ವೈಭವೀಕರಿಸುವ ಮೂಲಕ ಮಾಧ್ಯಮಗಳು ಸಹ ಇಂದು ಪರೋಕ್ಷವಾಗಿ ಅತ್ಯಾಚಾರವೆಸಗುವ ಪ್ರಕ್ರಿಯೆಯಲ್ಲಿಯೇ ತನ್ನ ಸೃಜನಶೀಲತೆಯನ್ನು ಪ್ರದರ್ಶಿಸುತ್ತಿರುವುದು ವಿಪರ್ಯಾಸವೇ ಸರಿ. – ಶ್ರೀರಾಮ ದಿವಾಣ.
