Posts Tagged ‘ಪ್ರತಿಭಟನೆ’

ಉಡುಪಿ: ಬಿಜೆಪಿ ರೈತ ಮೋರ್ಛಾ ರಾಜ್ಯ ಸಮಿತಿ ಕರೆಯಂತೆ ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಛಾ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಆಗಸ್ಟ್ 4ರಂದು ಬೆಳಗ್ಗೆ ಉಡುಪಿ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಸಿ, ಮೆಸ್ಕಾಂ ಅಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಅನಿಯಮಿತ ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕು, ಕನಿಷ್ಟ 12 ಗಂಟೆ 3 ಫೆಸ್ ವಿದ್ಯುತ್ ಪೂರೈಸಬೇಕು, ಸುಟ್ಟುಹೋದ ಟ್ರಾನ್ಸ್ ಫಾರ್ಮರ್ ಗಳನ್ನು ತಕ್ಷಣ ಬದಲಾಯಿಸಬೇಕು, ರೈತರ ಪಂಪ್ ಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, ಹಳೆಯ ತಂತಿಗಳನ್ನು ಮತ್ತು ಕಂಬಗಳನ್ನು ಬದಲಿಸಿ ವಿದ್ಯುತ್ ನಷ್ಟ ತಪ್ಪಿಸಿ ರೈತರ ಪಂಪ್ ಸೆಟ್ ಗಳನ್ನು ಉಳಿಸಬೇಕು, ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಬೇಕು ಹಾಗೂ ಲೈನ್ ಮ್ಯಾನ್ ಗಳ ಕೊರತೆ ನೀಗಿಸಬೇಕು ಎಂಬ ಬೇಡಿಕೆಗಳನ್ನು ಸರಕಾರ ಮತ್ತು ಮೆಸ್ಕಾಂ ಮುಂದಿಡಲಾಯಿತು.

ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿದ್ಯುತ್ ಕೊಡಿ, ಇಲ್ಲವೇ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಸವಾಲು ಹಾಕಿದರು. ರೈತಮೋರ್ಛಾ ಉಡುಪಿ ಗ್ರಾಮಾಂತರ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮಾತನಾಡಿ, ಒಂದು ತಿಂಗಳಲ್ಲಿ 28 ದಿನ ಸದನದಲ್ಲಿ ನಿದ್ದೆ ಮಾಡಿದ ಸಿದ್ಧರಾಮಯ್ಯರಿಂದ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ, ಉತ್ತಮ ಆಡಳಿತ ನೀಡುತ್ತಾರೆಂದು ನಿರೀಕ್ಷಿಸಲೂ ಸಾಧ್ಯವಿಲ್ಲ, ರಾಜ್ಯದಲ್ಲಿರುವುದು ರೈತ ವಿರೋಧಿ ಸರಕಾರವೆಂದು ಆರೋಪಿಸಿದರು.

ರೈತಮೋರ್ಛಾ ಜಿಲ್ಲಾಧ್ಯಕ್ಷ ದೇವದಾಸ ಹೆಬ್ಬಾರ್, ಪ್ರ.ಕಾರ್ಯದರ್ಶಿ ರಾಘವೇಂದ್ರ ಉಪ್ಪೂರು, ಪಕ್ಷದ ಮುಖಂಡರಾದ ಶ್ಯಾಮಲಾ ಕುಂದರ್, ವಿಲಾಸ್ ನಾಯಕ್, ಜಯಂತಿ ವಾಸುದೇವ, ಶ್ಯಾಮಪ್ರಸಾದ ಕುಡ್ವ, ಸುಭಾಶಿತ್ ಶೆಟ್ಟಿಗಾರ್, ಸುರೇಶ್ ನಾಯಕ್ ಕೊಯಿಲಾಡಿ, ಶೈಲೇಂದ್ರ, ಸಂಧ್ಯಾ ರಮೇಶ್, ಅಶೋಕ್ ಕುಮಾರ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ವೀಣಾ ಶೆಟ್ಟಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಉಡುಪಿ: ಕಳೆದೊಂದು ವರ್ಷದ ಅವಧಿಯಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನೂ ಮಾಡಿಲ್ಲ. ಸರಕಾರದ ಸಾಧನೆ ಶೂನ್ಯ. ಅಧಿಕಾರ ಮದದಿಂದ, ದುರಹಂಕಾರದಿಂದ ಒಂದು ವರ್ಗದ ಓಲೈಕೆಯನ್ನಷ್ಟೇ ಮಾಡುತ್ತಿರುವ ಸರಕಾರ ಬಡವರ ಹೊಟ್ಟೆಗೆ ಕನ್ನ ಹಾಕುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.

ಬಸವ ವಸತಿ ಯೋಜನೆ ಸಹಿತ ಇನ್ನಿತರ ವಸತಿ ಯೋಜನೆಗಳ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡದೆ ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಗುರುವಾರ ಬೆಳಗ್ಗೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಛಾವು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಗಡಿಯಾರ ಗೋಪುರದ ಮುಂಭಾಗದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡುತ್ತಿದ್ದರು.

ತೆರಿಗೆ ಸಂಗ್ರಹ ಮಾಡುವಲ್ಲಿಯೂ ಸಿದ್ಧರಾಮಯ್ಯ ನೇತೃತ್ವದ ಸರಕರ ಸೋತಿದೆ. ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹಿಸಲು ಸರಕಾರದಿಂದ ಸಾಧ್ಯವಾಗುತ್ತಿಲ್ಲ. ಬಿಜೆಪಿ ಆಡಳಿತಕ್ಕೆ ಬರುವ ಸಂದರ್ಭದಲ್ಲಿ ಕೇವಲ 35 ಸಾವಿರ ಕೋಟಿ ರು. ತೆರಿಗೆ
ಸಂಗ್ರಹವಾಗುತ್ತಿತ್ತು. ಬಿಜೆಪಿ ಸರಕಾರದ ಅವಧಿಯಲ್ಲಿ 1.20 ಲಕ್ಷ ಸಾವಿರ ಕೋಟಿ ರು. ತೆರಿಗೆ ಸಂಗ್ರಹವಾಯಿತು. ಹಾಗಾದರೆ 50 ಸಾವಿರ ಕೋಟಿ ರು. ಎಲ್ಲಿ ಹೋಯಿತು, ಯಾರ ಜೇಬು ಸೇರಿತು ಎಂದು ಖಾರವಾಗಿ ಪ್ರಶ್ನಿಸಿದ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ತೆರಿಗೆ ಹಣ ಸೋರಿಕೆಯಾಗುತ್ತಿತ್ತು. ಮಧ್ಯವರ್ತಿಗಳು ತಿಂದು
ಹಾಕುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದರು.

ವಸತಿ ರಹಿತ ಬಡವರಿಗಾಗಿ ಬಸವ ವಸತಿ ಯೋಜನೆ ಇದೆ. ರಾಜ್ಯದಲ್ಲಿ ಈ ಯೋಜನೆಯಲ್ಲಿ ಒಂದೂವರೆ ಲಕ್ಷ ಮಂದಿ ಫಲಾನುಭವಿಗಳಿದ್ದಾರೆ. ಬಡ ಫಲಾನುಭವಿಗಳು ಸರಕಾರದ ಹಣವನ್ನು ನಂಬಿ ಅರ್ಧಂಬರ್ಧ ಮನೆ ಕಟ್ಟಿಸಿದ್ದು, ಇದೀಗ ಸರಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ವಿಳಂಬ ಧೋರಣೆ ಅನುಸರಿಸುತ್ತಿದೆ. ಹಣ ಕೊಡುವುದಿಲ್ಲ ಎನ್ನುವ ಪರಿಸ್ಥಿತಿಯೂ ಬರುತ್ತಿದೆ. ಇದೆಲ್ಲ ಮನೆ ಕೊಟ್ಟು ಮತ್ತೆ ಕಿತ್ತುಕೊಳ್ಳುವ ಕೆಲಸವಲ್ಲದೆ ಮತ್ತೇನೂ ಅಲ್ಲ. ಬಡವರಿಗಾಗಿ ಜ್ಯಾರಿಗೊಳಿಸಿದ ಒಂದು ರು. ಅಕ್ಕಿ ಸಹ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಸರಕಾರಕ್ಕೆ ಇದಾವದರ ಬಗ್ಗೆಯೂ ಕಾಳಜಿಯೇ ಇಲ್ಲವಾಗಿದೆ ಎಂದು ಸಂಸದೆ ಖೇದ ವ್ಯಕ್ತಪಡಿಸಿದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಛಾದ ರಾಜ್ಯಾಧ್ಯಕ್ಷ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಕಾರ್ಯದರ್ಶಿ, ಮಾಜಿ ನಗರಸಭಾಧ್ಯಕ್ಷ ಕಿರಣ್ ಕುಮಾರ್, ಬಿಜೆಪಿ ನಾಯಕರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಶೀಲಾ ಕೆ.ಶೆಟ್ಟಿ, ಗೀತಾಂಜಲಿ ಸುವರ್ಣ, ಶ್ಯಾಮಲಾ ಕುಂದರ್, ಯಶಪಾಲ್ ಸುವರ್ಣ, ನವೀನ್ ಭಂಡಾರಿ, ಕುತ್ಯಾರು ನವೀನ್ ಶೆಟ್ಟಿ, ಶ್ಯಾಮ ಪ್ರಸಾದ್ ಕಡ್ವ, ದಿನಕರ ಶೆಟ್ಟಿ ಹೆರ್ಗ, ಎಂ.ಸಲೀಂ ಅಂಬಾಗಿಲು ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಉಡುಪಿ: ಕಾರ್ಕಳ ತಾಲೂಕು ಕುಚ್ಚೂರು ಕಾನ್ಬೆಟ್ಟು ಬೈಲುಮನೆ ಪರಿಸರದಲ್ಲಿ ಬಿಜು ಪಿ.ಎಂ. ಎಂಬವರು ದೊಡ್ಡ ಪ್ರಮಾಣದಲ್ಲಿ ಯಾವುದೇ ಪರವಾನಿಗೆ ಪಡೆದುಕೊಲ್ಳದೆ ಅನಧಿಕೃತವಾಗಿ ನಡೆಸುತ್ತಿರುವ ಕೋಳಿಫಾರಂನ್ನು ಕೂಡಲೇ ತೆರವುಗೊಳಿಸಬೇಕು ಎಂದು ಕುಚ್ಚೂರು ಗ್ರಾಮಸ್ಥರ ಪರವಾಗಿ ಸ್ಥಳೀಯ ಶಿಕ್ಷಕರಾದ ಸುರೇಶ್ ಶೆಟ್ಟಿ ಜಿಲ್ಲಾಡಳಿತ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳನ್ನು ಆಗ್ರಹಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮೇ.23ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಕೋಳಿಫಾರಂ ವಿರುದ್ಧ ಎರಡು ತಿಂಗಳಿಂದ ಊರವರು ನಡೆಸಿದ ಹೋರಾಟ ಮತ್ತು ಕ್ರಮ ಕೈಗೊಳ್ಳದ ಅಧಿಕಾರಿಗಳ ಬಗ್ಗೆ ವಿವರ ನೀಡಿದರು.

ಕಿಶನ್ ಚಂದ್ರ ಶೆಟ್ಟಿ ಎಂಬವರಿಗೆ ಸೇರಿದ 13 ಎಕ್ರೆ ಕೃಷಿ ಭೂಮಿಯಲ್ಲಿನ 10 ಸೆಂಟ್ಸ್ ಜಾಗದಲ್ಲಿ ಕೇರಳ ಮೂಲದ ಬಿಜು ಪಿ.ಎಂ. ಎಂಬವರ ಹೆಸರಿನಲ್ಲಿ ಶೆಡ್ ಮಾದರಿಯ ಕಟ್ಟಡಕ್ಕೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರವಾನಿಗೆ ನೀಡಿದ್ದಾರೆ. ಇದಕ್ಕೂ ಮೊದಲು ಕಿಶನ್ ಶೆಟ್ಟಿ ಅವರು ಸಕಾಲದಲ್ಲಿ ಆರ್ಸಿಸಿ ಕಟ್ಟಡಕ್ಕೆ ಪರವಾನಿಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಕೋಳಿಫಾರಂ ಎಂದು ನಕ್ಷಿಯಲ್ಲಿ ನಮೂದಿಸಿ ಕಟ್ಟಡ ನಕ್ಷೆಗೆ ಅನುಮತಿ ಪಡೆದುಕೊಂಡಿದ್ದಾರೆ. ಆದರೆ ನಕ್ಷೆಯಂತೆ ಕಟ್ಟಡ ಕಟ್ಟಿರುವುದಿಲ್ಲ. ಬಳಿಕ ಮನೆ ಬಳಕೆಯ ವಿದ್ಯುತ್ಗಾಗಿ ಬಿಜು. ಪಿ.ಎಂ. ಹೆಸರಿನಲ್ಲಿ ಇದೇ ಕಟ್ಟಡಕ್ಕೆ ವಿದ್ಯುತ್ ಸಂಪರ್ಕವನ್ನೂ ಪಡೆದುಕೊಂಡು ಅನಧಿಕೃತವಾಗಿ ಕೋಳಿಫಾರಂ ಆರಂಭಿಸಲಾಗಿದೆ. ಫಾರಂನಲ್ಲಿ 3000 ಕೋಳಿಗಳಿದ್ದು, ಇದರಿಂದಾಗಿ ಪರಿಸರ ಪ್ರದೇಶದಲ್ಲಿ ಇದೀಗ ಭಾರೀ ದುರ್ವಾಸನೆ ಹರಡಿದೆ. ಮಾತ್ರವಲ್ಲ ಮನೆಗಳಲ್ಲಿ ನೊಣ ಮತ್ತು ಸೊಳ್ಳೆಗಳ ಹೆಚ್ಚಾಗಿದೆ ಎಂದು ಸುರೇಶ್ ಶೆಟ್ಟಿ ಕಳವಳ ವ್ಯಕ್ತಪಡಿಸಿದರು.

ಅನಧಿಕೃತ ಕೋಳಿಫಾರಂ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ನಡೆದಾಡುವ ರಸ್ತೆ ಬದಿಯಲ್ಲಿಯೇ ಇದೆ. ಸಮೀಪವೇ ಶಾಲೆಯೂ ಇದೆ. ರಸ್ತೆ ಬದಿಯಲ್ಲಿಯೇ ತ್ಯಾಜ್ಯವನ್ನೂ ಎಸೆಯಲಾಗುತ್ತಿದೆ. ಪರಿಸರದಲ್ಲಿ 50ರಿಮದ 60 ಮನೆಗಳಿವೆ. ಈ ಎಲ್ಲಾ ವಿಷಯಗಳನ್ನು ವಿವರಿಸಿ ಹೆಬ್ರಿ ವೈದ್ಯಾಧಿಕಾರಿ ಡಾ.ನರಸಿಂಹ ನಾಯಕ್ ರಿಗೆ ದೂರು ನೀಡಿದರೆ ಅವರು ದೂರನ್ನೇ ಸ್ವೀಕರಿಸಲಿಲ್ಲ. ಪರಿಸರ ಇಲಾಖಾಧಿಕಾರಿಗಳಲ್ಲಿ ಈ ಬಗ್ಗೆ ವಿಚಾರಿಸಿದರೆ, ಇದು ತಮ್ಮ ಇಲಾಖೆಗೆ ಸಂಬಂಧಪಡುವುದಿಲ್ಲವೆಂದು ಉತ್ತರಿಸಿ ನಿರ್ಲಕ್ಷಿಸಿದ್ದಾರೆ ಎಂದು ಸುರೇಶ್ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಪ್ರಕರಣದಲ್ಲಿ ಕುಚ್ಚೂರು ಗ್ರಾ.ಪಂ.ಪಿಡಿಓ ರಾಧಾಕೃಷ್ಣ ರಾವ್ ಹಾಗೂ ತಹಶಿಲ್ದಾರ್ ರವರು ಗಂಭೀರವಾಗಿ ನಡೆದುಕೊಳ್ಳುತ್ತಿಲ್ಲ. ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರೂ, ತಹಶಿಲ್ದಾರರು ತನಿಖೆ ನಡೆಸುವ ಪ್ರಕ್ರಿಯೆಯನ್ನೇ ನಡೆಸುತ್ತಿಲ್ಲ. ಪಿಡಿಓ ಕೋಳಿಫಾರಂ ನಡೆಸುವವರ ಜೊತೆಗೆ
ಶಾಮೀಲಾಗಿದ್ದಾರೆ ಎಂಬ ಶಂಕೆ ಇದೆ ಎಂದು ಸುರೇಶ್ ಶೆಟ್ಟಿ ಆರೋಪಿಸಿದರು.

15 ದಿನ ಕಾಲಾವಕಾಶ – ತಪ್ಪಿದರೆ ಹೋರಾಟ; ಪ್ರಸನ್ನ ಶೆಟ್ಟಿ

ಕೋಳಿಫಾರಂ ವಿರುದ್ಧ ಈಗಾಗಲೇ ಜಿಲ್ಲಾಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿಗಳು, ಪರಿಸರ ಇಲಾಖಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳು ಹೀಗೆ ಎಲ್ಲರಿಗೂ ದೂರು ನೀಡಲಾಗಿದೆ. ಮುಂದಿನ 15 ದಿನಗಳ ಒಳಗೆ ಕೋಳಿಫರಂನ್ನು ತೆರವುಗೊಳಿಸದೇ ಇದ್ದಲ್ಲಿ ಮೊದಲ ಹಂತವಾಗಿ ಗ್ರಾಮ ಪಂಚಾಯತ್ಗೆ ಮುತ್ತಿಗೆ ಮತ್ತು ಎರಡನೇ ಹಂತವಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ
ನಡೆಸಲಿರುವುದಾಗಿ ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪ್ರಸನ್ನ ಶೆಟ್ಟಿ ಮುನ್ನೆಚ್ಚರಿಕೆ ನೀಡಿದ್ದಾರೆ.

ಸೂರ್ಯಣ್ಣ ಶೆಟ್ಟಿ, ಕೃಷ್ಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ: ಚಿಟ್ಪಾಡಿಯಲ್ಲಿರುವ ದೇವಾಡಿಗರ ಸೇವಾ ಸಂಘದಲ್ಲಿ ಅವ್ಯವಹಾರಗಳು ನಡೆಯುತ್ತಿದೆ ಎಂದು ಆರೋಪಿಸಿ ಸಂಘದ ಸದಸ್ಯರು ಸಂಘದ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು.

ಸಂಘದ ಕಾರ್ಯದರ್ಶಿ ಸರ್ವಾಧಿಕಾರಿ ನೀತಿಯನ್ನು ಅನುಸರಿಸುತ್ತಿದ್ದಾರೆ, ಸಂಘಕ್ಕೆ ಸೇರಿದ ಆಸ್ತಿಯನ್ನು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ವ್ಯಾಪಕ ಅಕ್ರಮಗಳನ್ನು ನಡೆಸಲಾಗಿದೆ ಎಂಬಿತ್ಯಾದಿ ಆರೋಪಗಳೊಂದಿಗೆ ಸದಸ್ಯರು ಪ್ರತಿಭಟನೆ ನಡೆಸಿದರು.

ಉಡುಪಿ: ಪಂಕ್ತಿಬೇಧ, ಜಾತಿ ತಾರತಮ್ಯದ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗಲಾಗುತ್ತಿದೆ. ಈ ಸಂಬಂಧವಾಗಿ ಪೇಜಾವರ ಸ್ವಾಮೀಜಿಯವರು ಗೊಂದಲವನ್ನು ಸೃಷ್ಟಿಸುತ್ತಾ, ರಾಜಕಾರಣಿಗಳ ರೀತಿಯಲ್ಲಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಮಡೆಸ್ನಾನ ಮತ್ತು ಪಂಕ್ತಿಬೇಧದ ವಿರುದ್ಧ ಪ್ರತಿಭಟಿಸಿದ ಸಿಪಿಐಎಂ ಕಾರ್ಯಕರ್ತರ ಮೇಲೆ ನಡೆಸಿದ ಲಾಠಿಚಾರ್ಜ್ ನ್ನು ಮಾನವೀಯತೆ ಇದ್ದವರು, ಇದ್ದರೆ ಖಂಡಿಸಬೇಕು. ಆದರೆ, ಪೇಜಾವರ ಸ್ವಾಮೀಜಿಯವರು ಖಂಡಿಸುವ ಬದಲಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅದರ ಮೇಲೆ ಎಲ್ಲರಿಗೂ ಬುದ್ಧಿವಾದ ಹೇಳತೊಡಗಿದ್ದಾರೆ. ಅವರಿಗೆ ಬುದ್ಧಿವಾದ ಹೇಳುವ ಕಂಟ್ರಾಕ್ಟ್ ಕೊಟ್ಟಂತೆ ಕಾಣುತ್ತಿದೆ. ಮಠ ಮತ್ತು ಧರ್ಮದ ಹೆಸರಿನಲ್ಲಿ ಬೇಧಭಾವವೆಸಗುತ್ತಾ, ನೀರಿನಲ್ಲೂ ತಾರತಮ್ಯ ಮಾಡುವ ಪೇಜಾವರ ಸ್ವಾಮೀಜಿಗಳ ಬುದ್ಧಿವಾದ ದುಡಿಯುವ ವರ್ಗಕ್ಕೆ ಅಗತ್ಯವಿಲ್ಲ ಎಂದು ಜನವಾದಿ ಮಹಿಳಾ ಸಂಘಟನೆಯ ಮಾಜಿ ರಾಜ್ಯಾಧ್ಯಕ್ಷೆ, ಸಾಮಾಜಿಕ ಹೋರಾಟಗಾರ್ತಿ, ಪ್ರಸಿದ್ಧ ಲೇಖಕಿ ಶ್ರೀಮತಿ ಕೆ. ನೀಲಾ ಅವರು ಹೇಳಿದರು.
ಮಡೆಸ್ನಾನ ಮತ್ತು ಪಂಕ್ತಿಬೇಧವನ್ನು ವಿರೋಧಿಸಿ ಹಾಗೂ ಪ್ರತಿಭಟನಾಕಾರರ ಮೇಲೆ ಉಡುಪಿಯಲ್ಲಿ ನಡೆದ ಲಾಠಿಚಾರ್ಜ್ ನ್ನು ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟ ಉಡುಪಿಯಲ್ಲಿ ಇಂದು ಮಧ್ಯಾಹ್ನ ನಡೆಸಿದ ಬಹಿರಂಗ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಪೇಜಾವರ ಸ್ವಾಮೀಜಿಗೆ ಹೊಟ್ಟೆ ತುಂಬದ ಜನರ ಬಗ್ಗೆಯಾಗಲೀ, ತಲಾ ಆದಾಯ ಕೇವಲ 20 ರು. ಇರುವ 71 ಶೇಕಡಾ ಜನರ ಬಗ್ಗೆಯಾಗಲೀ ಕಾಳಜಿ ಇಲ್ಲ, ಬದಲಾಗಿ ಹೊಟ್ಟೆ ತುಂಬಿದವರ ಬಗ್ಗೆ ಅವರ ಕಾಳಜಿ ಇದೆ. ಹಾಗಾಗಿ ಸ್ವಾಮೀಜಿಗಳು ಪಂಕ್ತಿಬೇಧವನ್ನು ಸಮರ್ಥಿಸಿಕೊಳ್ಳುತ್ತಾರೆ ಎಂದು ಟೀಕಿಸಿದ ನೀಲಾ, ಪೇಜಾವರರು ದಲಿತ ಕೇರಿಗಳಿಗೆ ಹೋಗಬೇಕಾದುದಿಲ್ಲ, ಅದರ ಬದಲಾಗಿ ದಲಿತರನ್ನು ತನ್ನ ಮಠಕ್ಕೆ ಕರೆಸಿ ಅವರ ಜೊತೆಗೆ ಕುಳಿತು ಭೋಜನ ಮಾಡಲಿ ಎಂದು ಸವಾಲು ಹಾಕಿದರು.
ಪೇಜಾವರ ಸ್ವಾಮೀಜಿ, ಮೋಹನ್ ಭಾಗವತ್ ಮುಂತಾದವರು ಪ್ರತಿನಿಧಿಸುವ ಹಿಂದುತ್ವ ದಲಿತರನ್ನು, ಹಿಂದುಳಿದ ವರ್ಗದವರನ್ನು ಮನುಷ್ಯರೆಂದು ಕಂಡಿಲ್ಲ. ಆದುದರಿಂದ ಹೆಣ್ಣು ಮಕ್ಕಳು ಮನೆಯೊಳಗೇ ಇರಬೇಕು, ಗಂಡನ ಜೊತೆಗೆ ಚಿತೆಗೆ ಹಾರಬೇಕು, ತಲೆ ಬೋಳಿಸಬೇಕು ಎಂದೆಲ್ಲಾ ಹೇಳ್ತಾರೆ. ಬ್ರಿಟೀಷ್ ಆಡಳಿತ ಸತಿ ಪದ್ಧತಿಯನ್ನು ನಿಷೇಧಿಸಲು ಮುಂದಾದಾಗ ಹಿಂದುತ್ವವನ್ನು ಪ್ರತಿಪಾದಿಸುವವರ ನಿಯೋಗವೊಂದು ಬ್ರಟೀಷ್ ಆಡಳಿತದಾರರನ್ನು ಭೇಟಿಯಾಗಿ ಸತಿ ಪದ್ಧತಿಯನ್ನು ನಿಷೇಧಿಸದಂತೆ ಒತ್ತಾಯಿಸಿ ಮನವಿ ಸಲ್ಲಿಸಿತು ಎಂದು ನೀಲಾ ತಿಳಿಸಿದರು.
ಈ ದೇಶದ ಜನಸಂಖ್ಯೆಯಲ್ಲಿ ಶೇಕಡಾ 45 ರಷ್ಟು ಕುಟುಂಬಗಳು ಹೆಣ್ಣು ಮಕ್ಕಳೇ
ನೇತೃತ್ವದಲ್ಲಿಯೇ ಇದೆ. 84 ಶೇಕಡಾ ಗದ್ದೆ ಕೆಲಸಗಳನ್ನು ಮಹಿಳೆಯರೇ ಮಾಡ್ತಾರೆ. ಸಂಸಾರ ಸರಿತೂಗಿಸಲು ಇಂದು ಗಂಡು ಹೆಣ್ಣು ಇಬ್ಬರೂ ದುಡಿಯುವ ಅವಶ್ಯಕತೆ ಇದು ಇದೆ ಎಂದು ಮೋಹನ್ ಭಾಗವತ್ ಹಾಗೂ ಪೇಜಾವರ ಸ್ವಾಮೀಜಿಗಳಿಗೆ ಬಹಿರಂಗ ಪಾಠ ಮಾಡಿದ ನೀಲಾ, ಮೋಹನ್ ಭಾಗವತ್ ಹೇಳಿದ ಭಾರತದಲ್ಲಿರುವ ಹಳ್ಳಿಗಳಲ್ಲಿ ಮತ್ತು ಸ್ಲಂಗಳಲ್ಲಿಯೇ 75 ಶೇಕಡಾ ಮಹಿಳಾ ದೌರ್ಜನ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಹಿಂದುತ್ವವಾದಿಗಳು ಮೀಸಲಾತಿಯನ್ನು ವಿರೋಧಿಸುವ ಹೊತ್ತಿಗೆಯೇ, ಖಾಸಗೀಕರಣದ ಮೂಲಕ ಮೀಸಲಾತಿಯನ್ನು ಹಿಂಬಾಗಿಲ ಮೂಲಕ ವಾಪಾಸ್ ಹಿಂತೆಗೆಯುವ ಪ್ರಕ್ರಿಯೆಯೂ ನಡೆದಿದೆ ಎಂದು ಹೇಳಿದ ನೀಲಾ, ಬಸವಣ್ಣ ಆಹಾರದಲ್ಲಿ ಅವೈಜ್ಞಾನಿಕ ಪದ್ಧತಿಯನ್ನು ಸಮಥರ್ಿಸಿಲ್ಲವೆಂದರು. ಎಡಕೈಲಿ ಸುರೆ, ಬಲಕೈಲಿ ಮಾಂಸ, ಕೊರಳಲ್ಲಿ ಲಿಂಗವಿರಲು ಶರಣೆಂಬೆ ಕೂಡಲಸಂಗಮ ಎಂದವನು ಬಸವಣ್ಣ. ಪೇಜಾವರ ಸ್ವಾಮೀಜಿ ಮೊದಲು ಶರಣರ ವಚನಗಳನ್ನು ಓದಲಿ ಎಂದು ಸಲಹೆ ನೀಡಿದರು. ಹಿರಿಯ ಚಿಂತಕ ಜಿ.ರಾಜಶೇಖರ್, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಜಯನ್ ಮಲ್ಪೆ, ದಸಂಸ ಅಂಬೇಡ್ಕರ್ವಾದ ರಾಜ್ಯ ಸಮಿತಿ ಸದಸ್ಯ ಸುಂದರ ಮಾಸ್ತರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಸುಂದರ ಗುಜ್ಜರಬೆಟ್ಟು, ಶ್ಯಾಮರಾಜ್ ಬಿತರ್ಿ, ದಲಿತಾ ಕಲಾ ಮಂಡಳಿಯ ಜಿಲ್ಲಾ ಸಂಚಾಲಕ ಶಂಕರದಾಸ್ ಚೇಂಡ್ಕಳ, ಸಮತಾ ಸೈನಿಕ ದಳ ಜಿಲ್ಲಾದ್ಯಕ್ಷ ವಿಸ್ವನಾಥ ಪೇತ್ರಿ, ದಸಂಸ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತದ ವಿಭಾಗೀಯ ಸಂಚಾಲಕ ಶೇಖರ ಹೆಜಮಾಡಿ, ಜಿಲ್ಲಾ ಸಂಚಾಲಕ ರಮೇಶ್ ಕೋಟ್ಯಾನ್, ಕೊರಗ ಸಂಘಟನೆಯ ಗಣೇಶ್ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು.
ಬಹಿರಂಗ ಸಭೆಗಿಂತ ಮೊದಲು ಜಿಲ್ಲೆಯ ಸಾವಿರಾರು ದಲಿತರು ಅಜ್ಜರಕಾಡು ಪುರಭವನದಿಂದ ಪಂಕ್ತಿಬೇದ ಮತ್ತು ಮಡೆಸ್ನಾನ ಹಾಗೂ ಪೊಲೀಸ್ ಲಾಠಿಚಾರ್ಜ್ ವಿರುದ್ಧ ಘೋಷಣೆ ಕೂಗುತ್ತಾ ಹಳೆ ತಾಲೂಕು ಕಚೇರಿ, ಕೋರ್ಟ್ ರಸ್ತೆ, ಕವಿ ಮುದ್ದಣ ಮಾರ್ಗ, ಸರ್ವಿಸ್ ಬಸ್ ನಿಲ್ದಾಣವಾಗಿ ಬಸ್ ನಿಲ್ದಾಣ ಪಕ್ಕದ ಜಟ್ಕಾ ಸ್ಟ್ಯಾಂಡ್ ವರೆಗೆ ಬೃಹತ್ ಮೆರವಣಿಗೆ ನಡೆಸಿದರು.

ಉಡುಪಿ: ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರವೆಸಗಿ ಅರೆ ವೈದ್ಯಕೀಯ ಕಾಲೇಜು
ವಿದ್ಯಾರ್ಥಿನಿಯೋರ್ವಳನ್ನು ಕೊಲೆಗೈದ ಕೃತ್ಯಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿನಿಯರು ಇಂದು ಮಣಿಪಾಲದಿಂದ ಬನ್ನಂಜೆಯಲ್ಲಿರುವ ತಹಶಿಲ್ದಾರ್ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಣಿಪಾಲದಿಂದ ಘೋಷನೆ ಕೂಗುತ್ತಾ ಮೆರವಣಿಗೆಯಲ್ಲಿ ಹೊರಟ ವಿದ್ಯಾರ್ಥಿನಿಯರು, ಇಂದ್ರಾಳಿ, ಕಡಿಯಾಳಿ ಆಗಿ ಉಡುಪಿ ಸರ್ವಿಸ್ ಬಸ್ ನಿಲ್ದಾಣ ಪಕ್ಕದ ಗಡಿಯಾರ ಗೋಪುರದ ಮುಂದೆ ಬಂದು ಪ್ರತಿಭಟನಾ ಸಭೆ ನಡೆಸಿದರು. ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಡಾ.ಶಿವಾನಂದ ನಾಯಕ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ನಗರ ಕಾರ್ಯದರ್ಶಿ ಅಭಿಷೇಕ್ ಜೈನ್, ವಿದ್ಯಾರ್ಥಿ ನಾಯಕಿಯರಾದ ಸಂಭ್ರಿಯಾ, ಮೈತ್ರಿ, ದೀಕ್ಷಾ, ಸುಪ್ರಿಯಾ, ಉಷಾ ಶೆಟ್ಟಿ, ದೀಪಾ ಮೊದಲಾದವರು ಪ್ರತಿಭಟನೆಯನ್ನು ಉದ್ಧೇಶಿಸಿ ಭಾಷಣ ಮಾಡಿದರು.
ದೆಹಲಿಯಲ್ಲಿ ಕಳೆದ ವರ್ಷವೊಂದರಲ್ಲಿಯೇ 600 ಅತ್ಯಾಚಾರ ಪ್ರಕರಣಗಳು ನಡೆದಿವೆ. ಆದರೆ ಸರಕಾರ ಅತ್ಯಾಚಾರ ಪ್ರಕರಣಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಡಾ.ಶಿವಕುಮಾರ್ ಆರೋಪಿಸಿದರೆ, ಭಾರೀ ಪೊಲೀಸ್ ರಕ್ಷಣೆಯಲ್ಲಿರುವ ಸೋನಿಯಾ ಗಾಂಧಿ, ಶೀಲಾ ದೀಕ್ಷಿತ್ರಂಥವರಿಗೆ ಮಾತ್ರ ಈ ದೇಶದಲ್ಲಿ ಸುರಕ್ಷಿತರಾಗಿಲು ಸಾಧ್ಯ, ಉಳಿದವರಿಗೆ ಕಷ್ಟಸಾಧ್ಯವೆಂದು ಶಿವಕುಮಾರ್ ಹೇಳಿದರು. ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯೇ ಸೂಕ್ತವೆಂದು ಮೈತ್ರಿ ಅಭಿಪ್ರಾಯಪಟ್ಟರು.
ಪ್ರತಿಭಟನಾ ಸಭೆಯ ಬಳಿಕ ಬನ್ನಂಜೆಯಲ್ಲಿರುವ ತಹಶಿಲ್ದಾರ್ ಕಚೇರಿಗೆ ಮತ್ತೆ ಮೆರವಣಿಗೆ ನಡೆಸಿದ ವಿದ್ಯಾರ್ಥಿನಿಯರು, ತಹಶಿಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಪಿಪಿಸಿ, ಎಂಜಿಎಂ, ಮಣಿಪಾಲದ ಯುಪಿಎಂಸಿ ಮುಂತಾದ ಕಾಲೇಜುಗಳಿಗೆ ಸೇರಿದ ಎಬಿವಿಪಿ ಪ್ರಮುಖರಾದ ಶಶಾಂಕ್, ಶರತ್, ಕಿರಣ್, ದೀಪಕ್, ಚೇತನ್, ವಿಕ್ರಮ್, ಪ್ರೀತಮ್, ರಂಜಿತ್, ಕಾಜಲ್, ಮನಿಷಾ, ಜೆನಿಫರ್, ಸ್ವಾತಿ, ಸುಶ್ಮಿತಾ ಶೆಟ್ಟಿ, ಎಡ್ವಿನಾ, ಶ್ವೇತಾ ಕಾಮತ್, ಪ್ರಗತಿ, ದಿಶಾ, ಪಲ್ಲವಿ, ನಿವೇದಿತಾ, ಸೌಮ್ಯಾ, ಅಶೋಕ್, ಅಮುಲ್, ಪ್ರಮೋದ್ ಮೊದಲಾದವರು ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದ್ದರು. 5 ಸಾವಿರಕ್ಕೂ ಅಧಿಕ ವಿದ್ಯಾಥರ್ಿನಿಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಉಡುಪಿ: ಅತ್ಯಾಚಾರ ಪ್ರಕರಣಗಳ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಸೋಮವಾರ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಇಂದು ಸಂಜೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಯಿತು.
ಸುಮಾರು 50 ಮಂದಿ ಸೇರಿದ್ದ ಪ್ರತಿಭಟನೆಯಲ್ಲಿ ಮಹಿಳೆಯರು ಅತ್ಯಾಚಾರಿಗಳ ವಿರುದ್ಧ ಘೋಷಣೆಗಳಿರುವ ಫಲಕಗಳನ್ನು ಪ್ರದರ್ಶಿಸಿದರು. ಕೇಂದ್ರ ಸರಕಾರಕ್ಕಾಗಲೀ, ರಾಜ್ಯ ಸರಕಾರಕ್ಕಾಗಲಿ, ಜಿಲ್ಲಾಡಳಿತಕ್ಕಾಗಲೀ ಯಾವುದೇ ಲಿಖಿತ ಮನವಿಯನ್ನೂ ಸಲ್ಲಿಸದೆ ಕಟಾಚಾರಕ್ಕೆಂಬಂತೆ ಮಹಿಳಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ಇದೇ ಮಹಿಳಾ ಕಾಂಗ್ರೆಸ್ ನ ನಾಯಕಿಯರು, ಪಕ್ಷದ ಪುರುಷ ನಾಯಕರ ಜೊತೆಗೆ ಕೆಲವು ವಾರಗಳ ಹಿಂದೆ, ಪತ್ನಿಯ ದೇಹದ ವಿವಿಧ ಭಾಗಗಳಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕತ್ತು ಹಿಸುಕಿ ಕೊಲೆಗೆ ಯತ್ನಿಸಿ, ಚರಂಡಿಗೆಸೆದ ಪ್ರಕರಣದಲ್ಲಿ ಆರೋಪಿ ಗಂಡನ ಪರವಾಗಿ ಪೊಲೀಸರಿಗೆ ರಾಜಕೀಯ ಒತ್ತಡ ಬೀರಿದ್ದಲ್ಲದೆ, ಗಾಯಾಳು ಮಹಿಳೆಗೆ ಪ್ರಕರಣದಲ್ಲಿ ರಾಜಿಯಾಗುವಂತೆ ಒತ್ತಡ ಹಾಕಲು ಓಡಾಡಿದ ಪ್ರಸಂಗ ನಡೆದು ಇದು ಬಹಿರಂಗಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.