Posts Tagged ‘: ಬಾಲಕ’

ಉಡುಪಿ: ಆವರಣ ಗೋಡೆಯಿಂದ ಬಿದ್ದು ಕೈ ಮೂಳೆ ಮುರಿತಕ್ಕೊಳಗಾದ, ಕಾರ್ಕಳ ತಾಲೂಕಿನ ಮುನಿಯಾಲಿನಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯದ ವಿದ್ಯಾರ್ಥಿ ತುರ್ತು ಚಿಕಿತ್ಸೆ ಒದಗಿಸದೆ ವಸತಿ ನಿಲಯದ ವಾರ್ಡನ್ ಹಾಗೂ ಅಡುಗೆ ಸಿಬ್ಬಂದಿ ನಿರ್ಲಕ್ಷಿಸಿ ಅಮಾನವೀಯತೆ ಮೆರೆದ ವಿದ್ಯಾಮಾನ ನಡೆದಿದೆ.

ಅಜೆಕಾರಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸುರೇಶ್ ಎಂಬವರ ಪುತ್ರ ರಾಘವೇಂದ್ರ (11) ಎಂಬಾತ ವಸತಿ ನಿಲಯದಲ್ಲಿದ್ದು, ಆರನೇ ತರಗತಿ ಕಲಿಯುತ್ತಿದ್ದಾನೆ. ನವೆಂಬರ್ 9ರಂದು ಆದಿತ್ಯವಾರ ಸಂಜೆ 5 ಗಂಟೆ ಸುಮಾರಿಗೆ ಆವರಣ ಗೋಡೆ ಮೇಲೆ ಹಾಕಿದ್ದ ಬಟ್ಟೆಗಳನ್ನು ತೆಗೆಯಲೆಂದು ಗೋಡೆ ಹತ್ತಿದ ಸಮಯದಲ್ಲಿ ಕೆಳಗೆ ಬಿದ್ದು ರಾಘವೇಂದ್ರನ ಕೈ ಮೂಳೆ ಮುರಿದಿತ್ತು.

ಈ ಸಂದರ್ಭದಲ್ಲಿ ವಸತಿ ನಿಲಯದಲ್ಲಿ ಅಡುಗೆ ಸಿಬ್ಬಂದಿ ಭಾಸ್ಕರ್ ಎಂಬವರು ಇದ್ದರಾದರೂ ಅವರು ಯಾವುದೇ ಗಾಯಾಳು ವಿದ್ಯಾರ್ಥಿಗೆ ಯಾವುದೇ ತುರ್ತು ಚಿಕಿತ್ಸೆ ಒದಗಿಸಲು ಮುಂದಾಗಲಿಲ್ಲ. ಬದಲಾಗಿ ವಿಷಯವನ್ನು ವಾರ್ಡನ್ ಸಂತೋಷ್ ಅವರಿಗೆ ತಿಳಿಸಿ ಕೈ ತೊಳೆದುಕೊಂಡರೆನ್ನಲಾಗಿದೆ.

ಘಟನೆ ನಡೆದ ದಿನವೇ ವಿಷಯ ವಾರ್ಡನ್ ಸಂತೋಷ್ ಅವರ ಗಮನಕ್ಕೆ ಬಂದಿತ್ತಾದರೂ, ಅವರು ಸಹ ವಸತಿ ನಿಲಯಕ್ಕೆ ಬಂದು ಗಾಯಾಳು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ಒದಗಿಸುವ ಪ್ರಾಥಮಿಕ ಕರ್ತವ್ಯವವನ್ನು ಸಹ ಅವರು ಮಾಡಲಿಲ್ಲವೆನ್ನಲಾಗಿದೆ. ಈ ವಸತಿ ನಿಲಯದ ಸಿಬ್ಬಂದಿಗಳು ಎಷ್ಟೊಂದು ಬೇಜವಾಬ್ದಾರರು ಎಂದರೆ, ಬಾಲಕ ಬಿದ್ದು ಕೈ ಮುರಿಸಿಕೊಂಡ ಬಗ್ಗೆ ಕನಿಷ್ಟ ಮಾಹಿತಿಯನ್ನೂ ಕೂಡಾ ಯಾರೊಬ್ಬರೂ ಬಾಲಕನ ಹೆತ್ತವರಿಗೆ ತಿಳಿಸಲಿಲ್ಲವೆಂದು ದೂರಲಾಗಿದೆ.

ಘಟನೆ ನಡೆದ ಮರುದಿನ ಮಧ್ಯಾಹ್ನದ ವರೆಗೂ ಗಾಯಾಳು ವಿದ್ಯಾರ್ಥಿಯನ್ನು ಕಡೆಗಣಿಸಿದ ವಸತಿ ನಿಲಯದ ಅಧಿಕೃತರು, ಮರುದಿನ ಅಪರಾಹ್ನ ಬಾಲಕನನ್ನು ಬೈಕೊಂದರಲ್ಲಿ ಕರೆದುಕೊಂಡು ಹೋಗಿ ತಂದೆ ಸುರೇಶ್ ಅವರ ಸ್ವಾಧೀನದಲ್ಲಿ ಬಿಟ್ಟು ಕೈ ತೊಳೆದುಕೊಂಡಿದ್ದಾರೆ. ಹೆತ್ತವರು ಸೋಮವಾರ ರಾತ್ರಿ ಗಾಯಾಳು ರಾಘವೇಂದ್ರನನ್ನು ಉಡುಪಿಯ ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆತಂದು ಒಳರೋಗಿಯಾಗಿ ದಾಖಲಿಸಿದ್ದಾರೆ.