Posts Tagged ‘ರಾಜಕಾರಣ’

ಉಡುಪಿ: ಬಿಜೆಪಿ ರೈತ ಮೋರ್ಛಾ ರಾಜ್ಯ ಸಮಿತಿ ಕರೆಯಂತೆ ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಛಾ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಆಗಸ್ಟ್ 4ರಂದು ಬೆಳಗ್ಗೆ ಉಡುಪಿ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಸಿ, ಮೆಸ್ಕಾಂ ಅಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಅನಿಯಮಿತ ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕು, ಕನಿಷ್ಟ 12 ಗಂಟೆ 3 ಫೆಸ್ ವಿದ್ಯುತ್ ಪೂರೈಸಬೇಕು, ಸುಟ್ಟುಹೋದ ಟ್ರಾನ್ಸ್ ಫಾರ್ಮರ್ ಗಳನ್ನು ತಕ್ಷಣ ಬದಲಾಯಿಸಬೇಕು, ರೈತರ ಪಂಪ್ ಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, ಹಳೆಯ ತಂತಿಗಳನ್ನು ಮತ್ತು ಕಂಬಗಳನ್ನು ಬದಲಿಸಿ ವಿದ್ಯುತ್ ನಷ್ಟ ತಪ್ಪಿಸಿ ರೈತರ ಪಂಪ್ ಸೆಟ್ ಗಳನ್ನು ಉಳಿಸಬೇಕು, ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಬೇಕು ಹಾಗೂ ಲೈನ್ ಮ್ಯಾನ್ ಗಳ ಕೊರತೆ ನೀಗಿಸಬೇಕು ಎಂಬ ಬೇಡಿಕೆಗಳನ್ನು ಸರಕಾರ ಮತ್ತು ಮೆಸ್ಕಾಂ ಮುಂದಿಡಲಾಯಿತು.

ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿದ್ಯುತ್ ಕೊಡಿ, ಇಲ್ಲವೇ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಸವಾಲು ಹಾಕಿದರು. ರೈತಮೋರ್ಛಾ ಉಡುಪಿ ಗ್ರಾಮಾಂತರ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮಾತನಾಡಿ, ಒಂದು ತಿಂಗಳಲ್ಲಿ 28 ದಿನ ಸದನದಲ್ಲಿ ನಿದ್ದೆ ಮಾಡಿದ ಸಿದ್ಧರಾಮಯ್ಯರಿಂದ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ, ಉತ್ತಮ ಆಡಳಿತ ನೀಡುತ್ತಾರೆಂದು ನಿರೀಕ್ಷಿಸಲೂ ಸಾಧ್ಯವಿಲ್ಲ, ರಾಜ್ಯದಲ್ಲಿರುವುದು ರೈತ ವಿರೋಧಿ ಸರಕಾರವೆಂದು ಆರೋಪಿಸಿದರು.

ರೈತಮೋರ್ಛಾ ಜಿಲ್ಲಾಧ್ಯಕ್ಷ ದೇವದಾಸ ಹೆಬ್ಬಾರ್, ಪ್ರ.ಕಾರ್ಯದರ್ಶಿ ರಾಘವೇಂದ್ರ ಉಪ್ಪೂರು, ಪಕ್ಷದ ಮುಖಂಡರಾದ ಶ್ಯಾಮಲಾ ಕುಂದರ್, ವಿಲಾಸ್ ನಾಯಕ್, ಜಯಂತಿ ವಾಸುದೇವ, ಶ್ಯಾಮಪ್ರಸಾದ ಕುಡ್ವ, ಸುಭಾಶಿತ್ ಶೆಟ್ಟಿಗಾರ್, ಸುರೇಶ್ ನಾಯಕ್ ಕೊಯಿಲಾಡಿ, ಶೈಲೇಂದ್ರ, ಸಂಧ್ಯಾ ರಮೇಶ್, ಅಶೋಕ್ ಕುಮಾರ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ವೀಣಾ ಶೆಟ್ಟಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಉಡುಪಿ: ಮೂಡಬಿದಿರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕರೂ, ಪತ್ರಿಕಾ ಅಂಕಣಕಾರರೂ ಆದ ಆದಿತ್ಯ ಜಿ.ಭಟ್ ಹೊನ್ನಾವರ ಇವರ ‘ಗಾಂಧಿ ಟೋಪಿ ಗೋಡ್ಸೆ ನೆರಳು ಹಾಗೂ ಇತರ ಲೇಖನಗಳು’ ಪುಸ್ತಕ ಬಿಡುಗಡೆ ಸಮಾರಂಭ ಇಂದು ಬೆಳಗ್ಗೆ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.

ಹಿರಿಯ ಪತ್ರಿಕಾ ಅಂಕಣಕಾರರಾದ ಪದ್ಮಭೂಷಣ ಎಂ.ವಿ.ಕಾಮತ್ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಮಂಗಳೂರು ವಿವಿ ಸಹಾಯಕ ಪ್ರಾಧ್ಯಪಕರೂ, ಲೇಖಕರೂ ಆದ ಡಾ.ಧನಂಜಯ ಕುಂಬ್ಳೆ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕಿರಣ್ ಮಂಜನಬೈಲು ಅತಿಥಿಗಳಾಗಿ ದ್ದರು. ಲೇಖಕರಾದ ಆದಿತ್ಯ ಭಟ್ ಉಪಸ್ಥಿತರಿದ್ದರು.

ನಾಗರಿಕ, ಹೊಸ ದಿಗಂತ, ಉದಯವಾಣಿ, ವಿಜಯವಾಣಿ, ಕನ್ನಡಪ್ರಭ, ಈ ಕನಸು.com, ವಾರ್ತೆ.com, ಪ್ರೇರಣಾ ಮೊದಲಾದವುಗಳಲ್ಲಿ ಪ್ರಕಟಗೊಂಡ ಆಯ್ದ 50 ಲೇಖನಗಳನ್ನು ಈ ಪುಸ್ತಕದಲ್ಲಿ ಪ್ರಕಟಿಸಲಾಗಿದೆ. ‘ರಾಜಕೀಯ ದಶಾವತಾರಗಳು’, ಆದಿತ್ಯ ಭಟ್ ಅವರ ಮೊದಲ ಲೇಖನಗಳ ಸಂಕಲನ. ಚಿತ್ರ: ಶ್ರೀರಾಮ ದಿವಾಣ.

# ಲೋಕಸಭಾ ಚುನಾವಣೆ ಹತ್ತಿರ ಬಂದಿದೆ. ತಿಂಗಳೊಳಗೆ ಚುನಾವಣಾ ವೇಳಾಪಟ್ಟಿ
ಘೋಷಣೆಯಾಗಲಿದೆ. ಜೊತೆಗೆ ನೀತಿ ಸಂಹಿತೆಯೂ ಜ್ಯಾರಿಗೆ ಬರಲಿದೆ. ಚುನಾವಣೆ ಹತ್ತಿರ ಬರುತ್ತಿರುವಂತೆಯೇ ನಮ್ಮ ರಾಜಕೀಯ ಪಕ್ಷಗಳು, ಇವುಗಳ ರಾಜಕಾರಣಿಗಳು ಹಾಗೂ
ಜನಪ್ರತಿನಿಧಿಗಳು ಬಹಿರಂಗವಾಗಿಯೇ ಅಸಹ್ಯವಾಗಿ ನಡೆದುಕೊಳ್ಳಲಾರಂಭಿಸುತ್ತಾರೆ.

ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳ ಹೆಚ್ಚಿನೆಲ್ಲಾ ಪ್ರಕ್ರಿಯೆಗಳೂ ರಹಸ್ಯವಾಗಿಯೇ ಇರುತ್ತವೆ. ಜಾತಿ ರಾಜಕಾರಣ, ಮತೀಯ ರಾಜಕಾರಣ, ಓಲೈಕೆ ರಾಜಕಾರಣ, ಕಮಿಷನ್ ರಾಜಕಾರಣ, ಕಾಲೆಳೆಯುವ ರಾಜಕಾರಣ, ಗುಂಪುಗಾರಿಕೆ, ಸ್ವಜನ ಪಕ್ಷಪಾತ, ಗೂಂಡಾಗಿರಿ, ಭ್ರಷ್ಟಾಚಾರ, ಅಲಿಖಿತ ಆದೇಶಗಳು, ಮೌಖಿಕ ಸೂಚನೆಗಳು ಇತ್ಯಾದಿಗಳೆಲ್ಲವೂ ಬಹುತೇಕವಾಗಿ ನಿಗೂಢವಾಗಿಯೇ ನಡೆಯುತ್ತವೆ, ಉಳಿಯುತ್ತವೆ. ಕೆಲವೊಮ್ಮೆ ಕೆಲವೊಂದು ವಿಷಯಗಳು ಮಾತ್ರ ಒಂದಷ್ಟು ಜನಕ್ಕೆ ತಿಳಿದಿರುತ್ತವೆ, ಅಷ್ಟೆ.

ಸಾರ್ವಜನಿಕ ಸಭೆ – ಸಮಾರಂಭಗಳಲ್ಲಿನ ಭಾಷಣ, ಇತರ ಸಂದರ್ಭಗಳಲ್ಲಿನ ಬಹಿರಂಗ ನಡವಳಿಕೆ, ಮಾತುಗಳನ್ನಷ್ಟೇ ನೋಡುವ, ಕೇಳುವ ಜನವರ್ಗಕ್ಕೆ ರಾಜಕಾರಣಿಯ ನೈಜ ರಾಜಕಾರಣದ ಆಳ-ಹರಿವು ಗೊತ್ತಿರುವುದೇ ಇಲ್ಲ. ಇಂಥ ಜನರು ಆತ ಸಜ್ಜನ ರಾಜಕಾರಣಿ, ಸಭ್ಯ, ಸಮರ್ಥ ರಾಜಕಾರಣಿ, ಅಜಾತಶತ್ರು ಎಂದೆಲ್ಲಾ ಕೊಂಡಾಡುತ್ತಾರೆ, ಹಾಡಿ ಹೊಗಳುತ್ತಾರೆ. ವಾಸ್ತವ ಮಾತ್ರ ಬೇರೆಯದೇ ಆಗಿರುತ್ತದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವುದನ್ನು ಕಾಂಗ್ರೆಸ್ ಹೈಕಮಾಂಡ್ ಇನ್ನೂ ಅಂತಿಮಗೊಳಿಸಿಲ್ಲ. ಮಾಜಿ ಕೇಂದ್ರ ಮಂತ್ರಿ, ಮಾಜಿ ಏಐಸಿಸಿ ಪ್ರಧಾನ ಕಾರ್ಯದರ್ಶಿ, ಮಾಜಿ ರಾಜ್ಯಸಭಾ ಸದಸ್ಯರಾದ ಬಿ.ಜನಾರ್ದನ ಪೂಜಾರಿ ಹಾಗೂ ಹಾಲಿ ಕೇಂದ್ರ ಮಂತ್ರಿ ಎಂ.ವೀರಪ್ಪ ಮೊಯಿಲಿಯವರ ಪುತ್ರ ಹರ್ಷ ಮೊಯಿಲಿ ಇವರು ಅಭ್ಯರ್ಥಿಗಳಾಗಲು ಅಧಿಕೃತವಾಗಿಯೇ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಅಧಿಕೃತವಾಗಿ ಅಭ್ಯರ್ಥಿಗಳಾಗಲು ಇವರೊಳಗೆಯೇ ಇದೀಗ ಭಾರೀ ಸ್ಪರ್ಧೆ, ಪೈಪೋಟಿ
ನಡೆಯುತ್ತಿದೆ.

ಇವರಿಬ್ಬರಲ್ಲಿ ಯಾರು ಅಭ್ಯರ್ಥಿಯಾಗಬೇಕು, ಯಾರಾಗಬಾರದು, ಯಾರು ಆದರೆ ಉತ್ತಮ, ಯಾರಾದರೆ ಒಳ್ಳೆಯದಲ್ಲ, ಯಾರು ಅರ್ಹ, ಯೋಗ್ಯ, ಸಮರ್ಥ, ಯಾರು ಅಲ್ಲ ಇತ್ಯಾದಿಗಳನ್ನು ಹೇಳುವುದು ನನ್ನ ಉದ್ಧೇಶವಲ್ಲ. ತಮ್ಮ ತಮ್ಮ ವೈಭವೀಕರಣಕ್ಕಾಗಿ ಸಮರ್ಥನೆಗಾಗಿ, ಯೋಗ್ಯತೆ, ಅರ್ಹತೆಯ ಪ್ರಚಾರಕ್ಕಾಗಿ ಇವರೆಲ್ಲ ಎಷ್ಟು ಕೆಳಮಟ್ಟದಲ್ಲಿ
ನಡೆದುಕೊಳ್ಳುತ್ತಾರೆ ಎಂಬುದನ್ನು ವಿವರಿಸುವುದಷ್ಟೇ ನನ್ನ ಉದ್ಧೇಶ.

ಮಣಿಪಾಲದಿಂದ ಪ್ರಕಟವಾಗುವ `ಉದಯವಾಣಿ’ ದಿನಪತ್ರಿಕೆಯ 18.01.2014ರ ಸಂಚಿಕೆಯ 15 ನೇ ಪುಟವನ್ನು ಓದಲಾರಂಬಿಸಿದಾಗ, ಹರ್ಷ ಮೊಯಿಲಿಯವರ ಭಾವಚಿತ್ರದೊಂದಿಗೆ ಪ್ರಕಟವಾದ ‘ಗ್ರಾಮೀಣರ ಬದುಕು ಹಸನಾಗಿಸಿದ ಹರ್ಷ ಮೊಯಿಲಿ’ ಎಂಬ ವರದಿ ಗಮನಸೆಳೆಯಿತು. ಓದಿದೆ. ಓದಿದಾಗ ಅನಿಸಿತು. ಖಂಡಿತಾ ಇದು ವರದಿಯಲ್ಲ, ಇದೊಂದು ಲೇಖನ ಎಂಬುದು ಸ್ಪಷ್ಟವಾಯಿತು. ವರದಿಯಂತೆ ಭಾಸವಾಗುವ ಕಾಲು ಪುಟದ ಲೇಖನವೊಂದನ್ನು ಪತ್ರಿಕೆ ಪ್ರಕಟಿಸಿದೆ. ಇದು, ಜಾಹೀರಾತು ಹೊರತುಪಡಿಸಿ ಬೇರೇನೂ ಆಗಲು ಸಾಧ್ಯವಿರಲಿಲ್ಲ. ಹಾಗೆಂದು ಇದು ಅಧಿಕೃತವಾಗಿ ಜಾಹೀರಾತೂ ಸಹ ಆಗಿರಲಿಲ್ಲ. ಹಾಗಾದರೆ ಇದು ಮತ್ತೇನೆಂದು ಕೇಳುವಿರಾದರೆ ಹೇಳುತ್ತೇನೆ ನೋಡಿ: ಇದು ಕಸಿಗಾಗಿ ಸುದ್ದಿ !

ದ.ಕ.ಜಿಲ್ಲೆಯ ಎಷ್ಟು ಮಂದಿ ಗ್ರಾಮೀಣರ ಬದುಕನ್ನು ಎಷ್ಟು ವರ್ಷದಿಂದ ಹರ್ಷ ಮೊಯಿಲಿ ಹಸನಾಗಿಸಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ, ಚುನಾವಣೆ
ಹತ್ತಿರವಾಗುತ್ತಿರುವಂತೆಯೇ ತನ್ನ ವಯುಕ್ತಿಕ ವೈಭವೀಕರಣಕ್ಕಾಗಿ, ಲಾಭಕ್ಕಾಗಿ ಒಂದು ರಾಷ್ಟ್ರೀಯ ಪಕ್ಷದ ಆಕಾಂಕ್ಷಿ ಅಭ್ಯರ್ಥಿಯೊಬ್ಬರು ಪತ್ರಿಕೆಗೆ ಕಾಸು ಕೊಟ್ಟು ಸುದ್ದಿ ಪ್ರಕಟವಾಗುವಂತೆ ಮಾಡುತ್ತಾರೆ ಎನ್ನುವುದು ಮಾತ್ರ ದೃಢಪಡಿಸಿತು. ಹಾಗಾದರೆ, ಇಂಥವರು ಇನ್ನು ಎಲ್ಲೆಲ್ಲಿಗೆ ಎಷ್ಟೆಷ್ಟು ಹಣ ಸುರಿದಿರಲಾರರು ? ಅಭ್ಯರ್ಥಿಯಾಗಲೂ ಹೀಗೆ ಹಣ ನೀಡಿರಬಹುದಲ್ಲವೇ ? ಅಭ್ಯರ್ಥಿಯಾಗಿ, ಒಂದು ಪಕ್ಷ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾದರೆ ಇಂಥವರು ನಿಜವಾದ ಜನಪ್ರತಿನಿಧಿಯಾಗಲು ಸಾಧ್ಯವೇ ? ಖಂಡಿತಾ ಸಾಧ್ಯವಿಲ್ಲ.

ಮೊಯಿಲಿ ರಾಜಕಾರಣವನ್ನೇ ಪೂಜಾರಿ ಅನುಸರಿಸಿ ಬಿಡುವುದಾ ? ಹೌದು, ಮೊಯಿಲಿ
ಮಾಡಿದ್ದನ್ನೇ ಪೂಜಾರಿ ಮಾಡಿದರು. ಹರ್ಷ ಮೊಯಿಲಿಯವರ ಕಾಲು ಪುಟದ ಅನಧಿಕೃತ ಜಾಹೀರಾತಿಗೆ ಪ್ರತಿಯಾಗಿ ಜನಾರ್ದನ ಪೂಜಾರಿಯವರು ಅದೇ ಪತ್ರಿಕೆಗೆ ತಾನೇನು ಕಡಿಮೆಯವನಲ್ಲ ಎಂದು ತೋರಿಸಿಕೊಡಲು ಮುಕ್ಕಾಲು ಪುಟದ ಅನಧಿಕೃತ ಜಾಹೀರಾತು ಕೊಟ್ಟರು. ಕಾಸು ಕೊಟ್ಟು ತನ್ನ ಭಾವಚಿತ್ರದೊಂದಿಗೆ ಸುದ್ದಿ ಪ್ರಕಟವಾಗುವಂತೆ ನೊಡಿಕೊಂಡರು ಪೂಜಾರಿ. ಇದು ಪ್ರಕಟವಾದುದು, `ಉದಯವಾಣಿ’ಯ ದಿನಾಂಕ 26.01.2014ರ 14ನೇ ಪುಟದಲ್ಲಿ. ಲೇಖನದ ಶಿರ್ಷಿಕೆ: ‘ಜನಮಾನಸದ ಜನಸೇವಕ ಜನಾರ್ದನ ಪೂಜಾರಿ’.

ತನಗೆ ಬೇಕಾದಂತ ಸುದ್ದಿ ತನಗೆ ಬೇಕಾದಂತೆ ಪ್ರಕಟವಾಗಲು ರಾಜಕಾರಣಿಗಳು, ಉದ್ಯಮಿಗಳು ಸುದ್ದಿಯ ಜೊತೆಗೆ ಕಾಸು ಕೊಡುವುದು ಮತ್ತು ಇಂಥ ಕಾಸಿನ ಸುದ್ದಿಯನ್ನು ಪತ್ರಿಕೆ ಪ್ರಕಟಿಸುವುದು ನಾಚಿಕೆ ಇಲ್ಲದ ಹೇಸಿಗೆ ಕೆಲಸ. ಇದೆರಡು ನನ್ನ ಗಮನಕ್ಕೆ ಬಂದ ಕಾಸಿಗಾಗಿ ಸುದ್ದಿಗಳು. ನನ್ನ ಗಮನಕ್ಕೆ ಬಾರದ ಇನ್ನೂ ಹಲವು ಕಾಸಿಗಾಗಿ ಸುದ್ದಿಗಳು ಪ್ರಕಟವಾಗಿರಬಹುದು. ಚುನಾವಣಾ ನೀತಿ ಸಂಹಿತೆ ಜ್ಯಾರಿಯಾಗುವ ಮೊದಲೇ ಮಾಡಬಾರದ್ದನ್ನು ಮಾಡುವುದು ಎಂದರೆ ಹೀಗೆಯೇ, ಇದುವೇ.

25.02.2014ರ ದಿನ ಪತ್ರಿಕೆಗಳಲ್ಲಿ ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಪತ್ರಿಕಾಗೋಷ್ಟಿಯ ವರದಿಗಳು ಪ್ರಕಟವಾಗಿವೆ. ತನ್ನ ಪ್ರಯತ್ನದ ಫಲವಾಗಿ ಆರಂಭಗೊಂಡ ಕೆಲವು ಕಾಮಗಾರಿಗಳನ್ನು ಸಂಸದ ಕೆ.ಜಯಪ್ರಕಾಶ್ ಹೆಗ್ಡೆಯವರ ಪ್ರಯತ್ನದ ಫಲವಾಗಿ ಆರಂಭಗೊಂಡ ಕಾಮಗಾರಿಗಳೆಂದು ಕೆಲವೆಡೆಗಳಲ್ಲಿ ಫ್ಲೆಕ್ಸ್ ಬ್ಯಾನರ್ ಅಳವಡಿಸಲಾಗಿದೆ ಎಂಬುದು ಅವರ ಆರೋಪ.

ಇತ್ತೀಚೆಗೆ ಫೇಸ್ ಬುಕ್ ನಲ್ಲೂ ಜಾಹೀರಾತೊಂದು ಕಣ್ಣಿಗೆ ಬಿತ್ತು. ಉಡುಪಿಯಲ್ಲಿ ಮಂಗಳೂರು ವಿವಿ ಉಪಕೇಂದ್ರ ಪ್ರಾರಂಭಕ್ಕೆ ಸಂಸದ ಹೆಗ್ಡೆಯವರು ಕಾರಣ ಎನ್ನುವುದು ಆ ಜಾಹೀರಾತು. ನನಗೆ ತಿಳಿದಿರುವಂತೆ ಉಡುಪಿಯಲ್ಲಿ ವಿವಿ ಉಪ ಕೇಂದ್ರ ಸ್ಥಾಪಿಸಲು ಬೇಕಾದ ಪ್ರಕ್ರಿಯೆಗಳು ಆರಂಭಗೊಂಡದ್ದು ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ. ಹಾಗಾದರೆ ಕಾಂಗ್ರೆಸಿಗರೇಕೆ ಹೀಗೆ ಸುಳ್ಳು ಹೇಳುವುದು ?

ರಾಜಕಾರಣಕ್ಕೆ ಇಂದು ಇದೆಲ್ಲ ಅನಿವಾರ್ಯ. ಸುಳ್ಳು ಹೇಳುವುದು, ವ್ಯಕ್ತಿಯನ್ನು ಸುಳ್ಳು ಸುಳ್ಳೇ ವೈಭವೀಕರಿಸುವುದು, ಜನರನ್ನು ವಂಚಿಸುವುದು, ನಂಬಿಸುವುದು, ತನಗಾಗದವರಿಗೆ ಗೊತ್ತೇ ಆಗದಂತೆ ಮೋಸ ಮಾಡುವುದು, ತನಗೆ ಬೇಕಾದವರಿಗಾಗಿ ಇನ್ಯಾರಿಗೋ
ದ್ರೋಹವೆಸಗುವುದು, ಭ್ರಷ್ಟಾಚಾರ ರಹಿತನಂತೆ, ಸಭ್ಯನಂತೆ, ಸಜ್ಜನನಂತೆ ಫೋಸ್ ಕೊಡುವುದು ಇದೆಲ್ಲ ಮಾಮೂಲಿ. ಇದೆಲ್ಲವೂ ರಾಜಕಾರಣಿಯ ಕೇವಲ ಮುಖವಾಡ ಎನ್ನುವುದನ್ನು ಮತದಾರ ಅರ್ಥಮಾಡಿಕೊಳ್ಳಬೇಕು. ರಾಜಕಾರಣಿಯ ನಿಜವಾದ ಒಳಮುಖವನ್ನು, ಆತನ ಅಸಲಿಯತ್ತನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮತದಾರ ಪ್ರಜ್ಞಾಪೂರ್ವಕವಾಗಿಯೇ ಮಾಡಿಕೊಳ್ಳಬೇಕು. ಇದು ತನಗಾಗಿಯೂ ಹೌದು, ತನ್ನೂರಿಗಾಗಿಯೂ ಹೌದು, ತನ್ನಂತೆಯೇ ಇತರ ಜನರಿಗಾಗಿಯೂ ಹೌದು, ರಾಜ್ಯದ, ದೇಶದ ಹಿತಾಸಕ್ತಿಗಾಗಿಯೂ ಹೌದು. ನಕಲಿ ಮುಖವಾಡ ಧರಿಸಿದ ರಾಜಕಾರಣಿ, ಅಭ್ಯರ್ಥಿಗಳೆಲ್ಲರನ್ನೂ ಯಾವುದೇ ಮುಲಾಜೂ ತೋರಿಸದೆ ಪಕ್ಷಬೇಧ ಮರೆತು ‘ನೋಟಾ’ (ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕು) ಚಲಾಯಿಸುವ ಮೂಲಕ ಸಾರಾಸಗಟು ತಿರಸ್ಕರಿಸುವ ಧೈರ್ಯ ಪ್ರದರ್ಶಿಸುವಂತಾಗಬೇಕು. ಎಷ್ಟು ಮಂದಿಗೆ ಈ ಧೈರ್ಯ ಇದೆ ? – ಶ್ರೀರಾಮ ದಿವಾಣ.

ಉಡುಪಿ: ಕಾಂಗ್ರೆಸ್ ಪಕ್ಷದ ಮೂವರು ಪ್ರಭಾವೀ ಜನಪ್ರತಿನಿಧಿಗಳು ತಮ್ಮ ತಮ್ಮ ಜಾತಿಯ ಮತ್ತು ತಮ್ಮ ಪ್ರಮುಖ ಹಿಂಬಾಲಕರನ್ನು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿಸಿಕೊಳ್ಳಲು ಭಾರೀ ಲಾಬಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಬಹಿರಂಗಕ್ಕೆ ಬಂದಿದೆ.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಸಹಿತ ವಿವಿಧ ನಿಗಮ, ಮಂಡಳಿ, ಪ್ರಾಧಿಕಾರ, ನಗರ, ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಇರುವ ಹಲವಾರು ಸಮಿತಿಗಳಲ್ಲಿ ಸದಸ್ಯರಾಗಲು ಪಕ್ಷದ ಅನೇಕ ಮಂದಿ ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ನಾಯಕರು ಶಾಸಕರು, ಸಂಸದರು, ಸಚಿವರುಗಳ ಮೂಲಕ ಪ್ರಯತ್ನ ಆರಂಭಿಸಿದ್ದಾರೆ.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಗಿರಿ ಈ ಬಾರಿ ಯಾರಿಗೆ ಲಭಿಸಲಿದೆ ಎಂಬುದು ಪಕ್ಷದೊಳಗೆ ಇದೀಗ ಬಿಸಿಬಿಸಿಯಾಗಿ ನಡೆಯುತ್ತಿರುವ ಹಸಿ ಹಸಿ ಚರ್ಚೆ. ಈ ಸ್ಥಾನಕ್ಕೆ ಮೂವರು ಪ್ರಮುಖರ ಹೆಸರುಗಳು ಈಗ ಕೇಳಿ ಬರುತ್ತಿವೆ. ಈ ಮೂವರ ಪರವಾಗಿ ಜಿಲ್ಲೆಯ ಮೂವರು ಪ್ರಭಾವೀ ಜನಪ್ರತಿನಿಧಿಗಳು ವಕಾಲತ್ತು ವಹಿಸಿರುವುದು ಚರ್ಚೆಗೆ ಇನ್ನೊಂದು ಮುಖ್ಯ ಕಾರಣ.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪ್ರಕಾಶ್ ಎಂ.ಕೊಡವೂರು, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾದ್ಯಕ್ಷ ಕೇಶವ ಕೋಟ್ಯಾನ್ ಹಾಗೂ ಹಿರಿಯ ನ್ಯಾಯವಾದಿ ವಿಜಯ್ ಹೆಗ್ಡೆ ಇವರಲ್ಲಿ ಯಾರಾದರೊಬ್ಬರು ಪ್ರಾಧಿಕಾರದ ಅಧ್ಯಕ್ಷರಾಗಬಹುದು ಎಂಬ ಮಾತು ಕೇಳಿ ಬರುತ್ತಿವೆ. ಈ ಮೂವರಲ್ಲಿ ಯಾರಾದರೊಬ್ಬರು ಪ್ರಾಧಿಕಾರದ ಅಧ್ಯಕ್ಷರಾದಲ್ಲಿ ಉಳಿದ ಇಬ್ಬರಿಗೆ ಇತರ ಯಾವುದಾದರೂ ನಿಗಮ-ಮಂಡಳಿಗಳಲ್ಲಿ ಸ್ಥಾನ-ಮಾನ ಸಿಗುವುದು ಖಚಿತ. ಪ್ರಕಾಶ್ ಕೊಡವೂರು ಪರವಾಗಿ ರಾಜ್ಯದ ನಗರಾಭಿವೃದ್ಧಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಮಾರ್ ಸೊರಕೆ, ಕೇಶವ ಕೋಟ್ಯಾನ್ ಪರವಾಗಿ ಶಾಸಕ ಪ್ರಮೋದ್ ಮಧ್ವರಾಜ್ ಹಾಗೂ ವಿಜಯ್ ಹೆಗ್ಡೆ ಪರವಾಗಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಕೆಪಿಸಿಸಿ ಮತ್ತು ಮುಖ್ಯಮಂತ್ರಿಗಳ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಒಂದು ಜಾತ್ಯಾತೀತ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಜಾತ್ಯಾತೀತವಾಗಿ ಆಯ್ಕೆ ಮಾಡುತ್ತದೆ ಎಂದು ಹೇಳಿಕೊಳ್ಳಲಾಗುತ್ತೆ. ಹೀಗೆ ಜಾತ್ಯಾತೀತ ಅಭ್ಯರ್ಥಿಗಳಾಗಿ ಆಯ್ಕೆಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಜನಪ್ರತಿನಿಧಿಗಳಾಗಿ ಆರಿಸಿಬಂದವರು, ಬಳಿಕ ತಮ್ಮ ತಮ್ಮ ಜಾತಿ ಜನರ ಬೇಕು ಬೇಡಗಳಿಗಾಗಿ ತಮ್ಮ
ಶಕ್ತಿ-ಸಾಮಥ್ರ್ಯ ಪ್ರದರ್ಶಿಸುವುದು ಮಾತ್ರ ಪಕ್ಷದೊಳಗೆ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಬಿಲ್ಲವ ಸಮುದಾಯಕ್ಕೆ ಸೇರಿದ ವಿನಯ ಕುಮಾರ್ ಸೊರಕೆಯವರು ಬಿಲ್ಲವ ಸಮುದಾಯಕ್ಕೇ ಸೇರಿದ ಪ್ರಕಾಶ್ ಕೊಡವೂರು ಪರವಾಗಿ, ಮೊಗವೀರ ಸಮುದಾಯಕ್ಕೆ ಸೇರಿದ ಪ್ರಮೋದ್ ಮಧ್ವರಾಜ್ ರವರು ಮೊಗವೀರ ಸಮುದಾಯಕ್ಕೇ ಸೇರಿದ ಕೇಶವ ಕೋಟ್ಯಾನ್ ಪರವಾಗಿ ಹಾಗೂ ಬಂಟ ಸಮುದಾಯಕ್ಕೆ ಸೇರಿದ ಜಯಪ್ರಕಾಶ್ ಹೆಗ್ಡೆಯವರು ಬಂಟ ಸಮುದಾಯಕ್ಕೇ ಸೇರಿದ ವಿಜಯ್ ಹೆಗ್ಡೆ ಪರವಾಗಿ ವಕಾಲತ್ತು ವಹಿಸಿ ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಶಾಸಕರಾಗಿ ಮತ್ತು ಸಚಿವರಾಗಿ ಆಯ್ಕೆಯಾದ ಸೊರಕೆಯವರನ್ನು ಅಭಿನಂದಿಸಿ ಪ್ರಕಾಶ್ ಕೊಡವೂರು ಅವರು ಅಲ್ಲಲ್ಲಿ ಬೃಹತ್ ಫ್ಲೆಕ್ಸ್ ಬ್ಯಾನರ್ ಹಾಕುವ ಮೂಲಕ ಸೊರಕೆಯವರಿಗೆ ಮತ್ತಷ್ಟೂ ಹತ್ತಿರವಾಗಿದ್ದಾರೆ. ವಿಜಯ್ ಹೆಗ್ಡೆಯವರು ಸಂಸದ ಜಯಪ್ರಕಾಸ್ ಹೆಗ್ಡೆಯವರ ಲೋಕಸಭಾ ಚುನಾವಣೆಯ ಚುನಾವಣಾ ಏಜೆಂಟ್ ಆಗಿ ಕರ್ತವ್ಯ ಸಲ್ಲಿಸುವ ಮೂಲಕ ಹೆಗ್ಡೆಯವರಿಗೆ ಇನ್ನಷ್ಟೂ ಆಪ್ತರಾದವರು.
ಶಾಸಕ, ಸಂಸದ ಹಾಗೂ ಸಚಿವರು ತಮ್ಮ ತಮ್ಮ ಜಾತಿ ಜನರ ಪರವಾಗಿ ಲಾಬಿ ನಡೆಸುತ್ತಿರುವ ವಿಷಯ ಬೆಳಕಿಗೆ ಬರುತ್ತಿರುವಂತೆಯೇ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿರುವ ಇತರ ಜನಾಂಗಕ್ಕೆ ಸೇರಿದ ಪ್ರಮುಖ ಪದಾಧಿಕಾರಿಗಳು ಈ ಮೂರೂ ಮಂದಿ ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ. ಈ ಆಕ್ರೋಶ ಪ್ರಸ್ತುತ ಪಕ್ಷದೊಳಗಡೆಯೇ ಇದೆಯಾದರೂ ನಿಧಾನವಾಗಿ ಇದು ಬಹಿರಂಗಕ್ಕೆ ಬರುವ ಸಾಧ್ಯತೆಯೂ ಇದೆ.
ಜನಪ್ರತಿನಿಧಿಯಾದವರು, ಪಕ್ಷದಲ್ಲಿ ಪ್ರಾಮಾಣಿಕವಾಗಿ ಮತ್ತು ಸಕ್ರಿಯವಾಗಿರುವವರನ್ನು ಜಾತಿ, ಮತ, ಲಿಂಗ ಬೇಧ ಮಾಡದೆ ಗುರುತಿಸಿ ಅವರಿಗೆ ಸೂಕ್ತ ಸ್ಥಾನ-ಮಾನಗಳನ್ನು ಕಲ್ಪಿಸಿಕೊಡಬೇಕು. ಅದು ಬಿಟ್ಟು ಜಾತಿವಾದಿಗಳಾಗಿ ಮುಂದುವರಿದರೆ ಪಕ್ಷದಲ್ಲಿ ಸಕ್ರಿಯವಾಗಿರುವ ಇತರ ಸಣ್ಣ ಪುಟ್ಟ ಜಾತಿ ಮುಖಂಡರು ಏನು ಮಾಡಬೇಕು ಎಂಬುದು ಕೆಲವರ ಪ್ರಶ್ನೆ.
ಈ ನಡುವೆ ಏಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್ ಹಾಗೂ ಇವರ ಪತ್ನಿ ಬ್ಲೋಸಂ ಫೆರ್ನಾಂಡಿಸ್ ಅವರು ತಮ್ಮ ಪರಮಾಪ್ತರಾದ ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲು ನಿರ್ಧರಿಸಿರುವ ಅಂಶವೂ ಬಯಲಾಗಿದೆ.

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಉದ್ಯಮಿ ಪ್ರಮೋದ್ ಮಧ್ವರಾಜ್ ಅವರು ನಾಮಪತ್ರದ ಜೊತೆಗೆ ಸಲ್ಲಿಸಿದ ತಮ್ಮ ಮತ್ತು ತಮ್ಮ ಕುಟುಂಬದ ಆಸ್ತಿ ವಿವರ. ಬ್ಯಾಂಕ್, ಫೈನಾನ್ಸ್ ಮತ್ತು ಇತರ ಸಂಸ್ಥೆಗಳಲ್ಲಿ: 24,80,389.00 ರು.
ಬಾಂಡ್, ಶೇರ್ಸ್, ಮ್ಯೂಚುವಲ್ ಫಂಡ್ ಇತ್ಯಾದಿಗಳಲ್ಲಿ: 94,14,508.00 ರು. ಅಂಚೆ, ಎಲ್ಐಸಿ, ಎನ್ಎಸ್ಎಸ್ ಇತ್ಯಾದಿಗಳಲ್ಲಿ: 1,25,51,712.00 ರು.
ಪರ್ಸನಲ್ ಲೋನ್: 85,32,016.44 ರು.
ಮೋಟಾರು ವಾಹನಗಳು: 2,20,27,012.00.
ಇತರ ಸೊತ್ತುಗಳು: 79,86,83,499.38 ರು.
ಭೂಮಿ: 2,82,90,000.00 ರು.
ವಾಣಿಜ್ಯ ಕಟ್ಟಡಗಳು, ಅಪಾರ್ಟ್ ಮೆಂಟ್ ವ್ಯವಹಾರ ಇತ್ಯಾದಿಗಳು: 5,35,44,654.00 ರು. ಮನೆ, ಅಪಾರ್ಟ್ ಮೆಂಟ್ ಇತ್ಯಾದಿ: 2,70,33,072.00 ರು.
ಬ್ಯಾಂಕ್ ಲೋನ್: 19,21,27,644.00 ರು.
ಪತ್ನಿ ಸುಪ್ರಿಯಾ ಅವರ ಹೆಸರಲ್ಲಿರುವ ಆಸ್ತಿ ವಿವರ:
ಭೂಮಿ: 95,17,500.00 ರು.
ತಾಯಿ ಮನೋರಮಾ ಮಧ್ವರಾಜ್ ಅವರ ಹೆಸರಲ್ಲಿರುವ ಆಸ್ತಿ ವಿವರ:
ವಾಸದ ಕಟ್ಟಡ: 1,80,00,000.00 ರು.
ಕೃಷಿಯೇತರ ಭೂಮಿ: 75,38,500.00 ರು.
ಕೃಷಿ ಭೂಮಿ: 3,58,15,000.00 ರು.

ಉಡುಪಿ: ತಮ್ಮ ಲಾಭಕ್ಕಾಗಿ ದೇಶವನ್ನೇ ಮಾರಾಟಮಾಡುವ ಸ್ವಾರ್ಥಿ ರಾಜಕಾರಣಿಗಳೇ ದೊಡ್ಡ ಭಯೋತ್ಪಾದಕರು. ಇವರಿಗಿಂತ ದೊಡ್ಡ ಉಗ್ರರು ಬೇರೆ ಯಾರೂ ಇಲ್ಲ. ರಾಜಕೀಯ ಲಾಭಕ್ಕಾಗಿ ಸ್ವಾರ್ಥಿಗಳು ದೇವರು, ಧರ್ಮ, ಧರ್ಮಗುರುಗಳನ್ನು ದುರುಪಯೋಗಪಡಿಸುವಂಥ ವ್ಯವಸ್ಥಿತ ಸಂಚು, ದಂಧೆ ನಡೆಯುತ್ತಿದೆ. ಸ್ವಾರ್ಥಿಗಳ ಇಂಥ ತಂತ್ರಗಳನ್ನು ಮೊದಲು ಗುರುತಿಸಬೇಕು. ಯಾವ ಧರ್ಮಗಳೂ ಭಯೋತ್ಪಾದನೆಯನ್ನು ಬೋಧಿಸುವುದಿಲ್ಲ. ಭಯೋತ್ಪಾದನೆ ಬೋಧಿಸುವ ಧರ್ಮ ಧರ್ಮವೇ ಅಲ್ಲ ಎಂಬ ಸತ್ಯವನ್ನು ತಿಳಿದುಕೊಂಡರೆ ಸಮಸ್ಯೆಯೇ ಇಲ್ಲ ಎಂದು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಮಂಗಳೂರಿನ ಶಾಂತಿ ಪ್ರಕಾಶನದ ವತಿಯಿಂದ ಉಡುಪಿ ಪುರಭವನದಲ್ಲಿ ಇಂದು ಸಂಜೆ ನಡೆದ ವಿಚಾರಗೋಷ್ಟಿ ಮತ್ತು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸ್ವಾಮೀ ಲಕ್ಷ್ಮೀ
ಶಂಕರಾಚಾರ್ಯರು ಬರೆದು, ಕೆ.ಎಂ.ಅಶ್ರಫ್ ಅನುವಾದಿಸಿದ ‘ಇಸ್ಲಾಮ್ ಭಯೋತ್ಪಾದನೆಯ ಧರ್ಮವಲ್ಲ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು. ಒಬ್ಬ ವ್ಯಕ್ತಿ ತಪ್ಪು ಮಾಡಿದಾಗ ತಪ್ಪು ಮಾಡಿದ ವ್ಯಕ್ತಿಯ ಜಾತಿ, ಮತವನ್ನು ಆತನೊಂದಿಗೆ ಗುರುತಿಸಿ ಆತನ ಜಾತಿ, ಮತವನ್ನೇ ಇಡಿಯಾಗಿ ಆ ಕೃತ್ಯದೊಂದಿಗೆ ಸಮೀಕರಣ ಮಾಡುವುದೇ ತಪ್ಪು. ಒಳ್ಳೆಯವರು, ಕೆಟ್ಟವರು ಎಲ್ಲಾ ಜತಿ, ಮತಗಳಲ್ಲೂ ಇದ್ದಾರೆ. ಒಳ್ಳೆಯವರನ್ನು, ಕೆಟ್ಟವರನ್ನು ಗುರುತಿಸಬೇಕೇ ಹೊರತು, ಇಸ್ಲಾಮ್ ಭಯೋತ್ಪಾದನೆ, ಹಿಂದೂ ಭಯೋತ್ಪಾದನೆ ಎನ್ನುವುದು ಸರಿಯಲ್ಲ. ಇದನ್ನು ಹೀಗೆ ಮುಂದುವರಿಯಗೊಟ್ಟರೆ ಮುಮದೆ ಕ್ರೈಸ್ತ ಭಯೋತ್ಪಾದನೆ, ಬ್ರಾಹ್ಮಣ ಭಯೋತ್ಪಾದನೆ ಎನ್ನುವಲ್ಲಿಗೂ ತಲುಪಬಹುದು ಎಂದು ಸ್ವಾಮೀಜಿಯವರು ಆತಂಕ ವ್ಯಕ್ತಪಡಿಸಿದರು.
ಹಿಂದೂ ಮುಸ್ಲೀಮರು ಒಂದಾಗುವುದನ್ನು ರಾಜಕಾರಣಿಗಳು ಬಯಸುವುದಿಲ್ಲ. ಒಟ್ಟಾದಾಗ ರಾಜಕಾರಣಿಗಳಿಗೆ ಭಯವಾಗುತ್ತದೆ. ಅದಕ್ಕಾಗಿ ಅವರು ಬೇರೆ ಬೇರೆಯಾಗಿರುವಂತೆ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು, ಎಲ್ಲಾ ಸಮುದಾಯದ ಜನರು ಬುದ್ಧಿವಂತರಾದರೆ ಮಾತ್ರ, ಒಡೆದು ಆಳುವ ಸ್ವಾರ್ಥಿಗಳ ತಂತ್ರಕ್ಕೆ ಸೋಲುಣಿಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಬಡತನಕ್ಕೆ ನಾವೇ ಕಾರಣ. ಶಸ್ತ್ರಸ್ತ್ರಗಳಿಗಾಗಿ ಸರಕಾರಗಳು ಮಾಡುವ ವೆಚ್ಚವನ್ನು ಕಡಿಮೆ ಮಾಡಿದಲ್ಲಿ ಬಡತನ ನಿವಾರಣೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಶಸ್ತ್ರಾಸ್ತ್ರ ಪೈಪೋಟಿಗೆ ಎಲ್ಲಾ ದೇಶಗಳು ಕಡಿವಾಣ ಹಾಕಬೇಕು ಎಂದು ಸ್ವಾಮೀಜಿ ಮನವಿ ಮಾಡಿಕೊಂಡರು. ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಸಲಹಾ ಸಮಿತಿ ಸದಸ್ಯ ಅಕ್ಬರ್ ಅಲಿ ‘ಭಯ ಮತ್ತು ಭ್ರಮೆಗಳ ನಡುವೆ ಪ್ರಸಕ್ತ ಸಮಾಜ’ ಎಂಬ ವಿಷಯದಲ್ಲಿ ವಿಚಾರ ಮಂಡಿಸಿದರು. ಶಾಂತಿ ಪ್ರಕಾಶನದ ವ್ಯವಸ್ಥಪಕ ಮುಹಮ್ಮದ್ ಕುಞ್ಙಿ ಅಧ್ಯಕ್ಷತೆ ವಹಿಸಿದ್ದರು. ಡಾ.ಗಣನಾಥ ಎಕ್ಕಾರು, ಡಾ.ನೇರಿ ಕರ್ನೇಲಿಯೊ, ಕೆ.ಎಂ.ಅಶ್ರಫ್, ಮೌಲಾನ ಅಬ್ದುಲ್ ರಷೀದ್ ನದ್ವಿ ಮಲ್ಪೆ, ಮಾಲಾನ ಅಬ್ದುಲ್ ಸಲಾಂ ಉಪ್ಪಿನಂಗಡಿ, ಇದ್ರಿಸ್ ಹೂಡೆ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.