Posts Tagged ‘ರಾಜಕೀಯ’

ಉಡುಪಿ: ಬಿಜೆಪಿ ರೈತ ಮೋರ್ಛಾ ರಾಜ್ಯ ಸಮಿತಿ ಕರೆಯಂತೆ ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಛಾ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಆಗಸ್ಟ್ 4ರಂದು ಬೆಳಗ್ಗೆ ಉಡುಪಿ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಸಿ, ಮೆಸ್ಕಾಂ ಅಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಅನಿಯಮಿತ ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕು, ಕನಿಷ್ಟ 12 ಗಂಟೆ 3 ಫೆಸ್ ವಿದ್ಯುತ್ ಪೂರೈಸಬೇಕು, ಸುಟ್ಟುಹೋದ ಟ್ರಾನ್ಸ್ ಫಾರ್ಮರ್ ಗಳನ್ನು ತಕ್ಷಣ ಬದಲಾಯಿಸಬೇಕು, ರೈತರ ಪಂಪ್ ಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, ಹಳೆಯ ತಂತಿಗಳನ್ನು ಮತ್ತು ಕಂಬಗಳನ್ನು ಬದಲಿಸಿ ವಿದ್ಯುತ್ ನಷ್ಟ ತಪ್ಪಿಸಿ ರೈತರ ಪಂಪ್ ಸೆಟ್ ಗಳನ್ನು ಉಳಿಸಬೇಕು, ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಬೇಕು ಹಾಗೂ ಲೈನ್ ಮ್ಯಾನ್ ಗಳ ಕೊರತೆ ನೀಗಿಸಬೇಕು ಎಂಬ ಬೇಡಿಕೆಗಳನ್ನು ಸರಕಾರ ಮತ್ತು ಮೆಸ್ಕಾಂ ಮುಂದಿಡಲಾಯಿತು.

ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿದ್ಯುತ್ ಕೊಡಿ, ಇಲ್ಲವೇ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಸವಾಲು ಹಾಕಿದರು. ರೈತಮೋರ್ಛಾ ಉಡುಪಿ ಗ್ರಾಮಾಂತರ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮಾತನಾಡಿ, ಒಂದು ತಿಂಗಳಲ್ಲಿ 28 ದಿನ ಸದನದಲ್ಲಿ ನಿದ್ದೆ ಮಾಡಿದ ಸಿದ್ಧರಾಮಯ್ಯರಿಂದ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ, ಉತ್ತಮ ಆಡಳಿತ ನೀಡುತ್ತಾರೆಂದು ನಿರೀಕ್ಷಿಸಲೂ ಸಾಧ್ಯವಿಲ್ಲ, ರಾಜ್ಯದಲ್ಲಿರುವುದು ರೈತ ವಿರೋಧಿ ಸರಕಾರವೆಂದು ಆರೋಪಿಸಿದರು.

ರೈತಮೋರ್ಛಾ ಜಿಲ್ಲಾಧ್ಯಕ್ಷ ದೇವದಾಸ ಹೆಬ್ಬಾರ್, ಪ್ರ.ಕಾರ್ಯದರ್ಶಿ ರಾಘವೇಂದ್ರ ಉಪ್ಪೂರು, ಪಕ್ಷದ ಮುಖಂಡರಾದ ಶ್ಯಾಮಲಾ ಕುಂದರ್, ವಿಲಾಸ್ ನಾಯಕ್, ಜಯಂತಿ ವಾಸುದೇವ, ಶ್ಯಾಮಪ್ರಸಾದ ಕುಡ್ವ, ಸುಭಾಶಿತ್ ಶೆಟ್ಟಿಗಾರ್, ಸುರೇಶ್ ನಾಯಕ್ ಕೊಯಿಲಾಡಿ, ಶೈಲೇಂದ್ರ, ಸಂಧ್ಯಾ ರಮೇಶ್, ಅಶೋಕ್ ಕುಮಾರ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ವೀಣಾ ಶೆಟ್ಟಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಉಡುಪಿ: ಮೂಡಬಿದಿರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕರೂ, ಪತ್ರಿಕಾ ಅಂಕಣಕಾರರೂ ಆದ ಆದಿತ್ಯ ಜಿ.ಭಟ್ ಹೊನ್ನಾವರ ಇವರ ‘ಗಾಂಧಿ ಟೋಪಿ ಗೋಡ್ಸೆ ನೆರಳು ಹಾಗೂ ಇತರ ಲೇಖನಗಳು’ ಪುಸ್ತಕ ಬಿಡುಗಡೆ ಸಮಾರಂಭ ಇಂದು ಬೆಳಗ್ಗೆ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.

ಹಿರಿಯ ಪತ್ರಿಕಾ ಅಂಕಣಕಾರರಾದ ಪದ್ಮಭೂಷಣ ಎಂ.ವಿ.ಕಾಮತ್ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಮಂಗಳೂರು ವಿವಿ ಸಹಾಯಕ ಪ್ರಾಧ್ಯಪಕರೂ, ಲೇಖಕರೂ ಆದ ಡಾ.ಧನಂಜಯ ಕುಂಬ್ಳೆ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕಿರಣ್ ಮಂಜನಬೈಲು ಅತಿಥಿಗಳಾಗಿ ದ್ದರು. ಲೇಖಕರಾದ ಆದಿತ್ಯ ಭಟ್ ಉಪಸ್ಥಿತರಿದ್ದರು.

ನಾಗರಿಕ, ಹೊಸ ದಿಗಂತ, ಉದಯವಾಣಿ, ವಿಜಯವಾಣಿ, ಕನ್ನಡಪ್ರಭ, ಈ ಕನಸು.com, ವಾರ್ತೆ.com, ಪ್ರೇರಣಾ ಮೊದಲಾದವುಗಳಲ್ಲಿ ಪ್ರಕಟಗೊಂಡ ಆಯ್ದ 50 ಲೇಖನಗಳನ್ನು ಈ ಪುಸ್ತಕದಲ್ಲಿ ಪ್ರಕಟಿಸಲಾಗಿದೆ. ‘ರಾಜಕೀಯ ದಶಾವತಾರಗಳು’, ಆದಿತ್ಯ ಭಟ್ ಅವರ ಮೊದಲ ಲೇಖನಗಳ ಸಂಕಲನ. ಚಿತ್ರ: ಶ್ರೀರಾಮ ದಿವಾಣ.

# ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ತನಿಕೋಡು ಚೆಕ್ ಪೋಸ್ಟ್ ನಲ್ಲಿ ಜಾನಾವಾರು ಸಾಗಾಟ ಮಾಡುತ್ತಿದ್ದ ಮಂಗಳೂರು ಸಮೀಪದ ಜೋಕಟ್ಟೆಯ ಕಬೀರ್ (28) ಎಂಬವರನ್ನು ಗುಂಡು ಹೊಡೆದು ಕೊಲೆಗೈದ ಎಎನ್ಎಫ್ ಪೊಲೀಸ್ ಪೇದೆ ನವೀನ್ ನಾಯ್ಕ ಎಂಬವರಿಗೆ ಕಾರ್ಕಳ ವಿಧಾನಸಭೆಯ ಭಾರತೀಯ ಜನತಾ ಪಾರ್ಟಿಯ ಶಾಸಕ ವಿ.ಸುನಿಲ್ ಕುಮಾರ್ ಹಾಗೂ ಸಂಘ ಪರಿವಾರದ ಕೆಲವು ಮಂದಿ ನಾಯಕರು 50 ಸಾವಿರ ರು.ಗಳಿಂದ 50 ಲಕ್ಷ ರು.ಗಳವರೆಗೆ ನಗದು ಬಹುಮಾನ ಘೊಷಿಸಿದ್ದಾರೆ.

ಇದೊಂದು ಅತೀ ಕೆಟ್ಟ ಬೆಳವಣಿಗೆ. ಅಕ್ಷಮ್ಯ ಅಪರಾಧವೇ ಸರಿ. ಕೆಲವೊಂದು ಮುಸ್ಲಿಂ ಉಗ್ರಗಾಮಿ ಸಂಘಟನೆಗಳು ತಮ್ಮ ಶತ್ರುಗಳನ್ನು ಕೊಂದವರಿಗೆ ಬಹುಮಾನ ಘೋಷಿಸಿರುವುದು ಈ ಹಿಂದೆ ಪತ್ರಿಕೆಗಳಲ್ಲಿ ವರದಿಯಾದುದಿದೆ. ಅವುಗಳಾದರೋ ಅಧಿಕೃತವಾಗಿಯೇ ಉಗ್ರಗಾಮಿ ಸಂಘಟನೆಗಳು. ಇದೇ ಕಾರಣಕ್ಕೆ ಹಲವು ದೇಶಗಳು ಇಂಥ ಸಂಘಟನೆಗಳನ್ನು ನಿಷೇಧಿಸಿದ್ದು ಜಗಜ್ಜಾಹೀರು. ಆದರೆ, ಈ ಸಂಘ ಪರಿವಾರದ ಸಂಘಟನೆಗಳಿಗೇನಾಗಿದೆ ?

ತಮ್ಮದು ಸಾಂಸ್ಕೃತಿಕ ಸಂಘಟನೆ, ರಾಜಕೀಯ ಪಕ್ಷ ಎಂದೆಲ್ಲಾ ಘೋಷಿಸಿಕೊಂಡು ಕೊಲೆಗಡುಕನಿಗೆ ಬಹುಮಾನ ಪ್ರಕಟಿಸಿದರೆ, ಮುಸ್ಲೀಮ್ ಉಗ್ರ ಸಂಘಟನೆಗಳಿಗೂ, ಸಂಘ ಪರಿವಾರದ ಸಂಘಟನೆಗಳಿಗೂ ವ್ಯತ್ಯಾಸವಿಲ್ಲದಂತಾಗುತ್ತದೆ. ಮುಸ್ಲೀಮ್ ಉಗ್ರ ಸಂಘಟನೆಯ ಹಾದಿಯನ್ನೇ ಸಂಘ ಪರಿವಾರದ ಸಂಘಟನೆಗಳೂ ಹಿಡಿಯುತ್ತಿದೆ ಎಂದೇ ಭಾವಿಸಬೇಕಾಗುತ್ತದೆ. ಸಂಘ ಪರಿವಾರದ ಸಂಘಟನೆಗಳು ಮುಸ್ಲೀಮ್ ಧ್ವೇಷವನ್ನೇ ಉಸಿರಾಡುತ್ತಿರುವುದೇ ಇವರು ಹೀಗೆ ಹೇಳಲು ಕಾರಣವೆಂಬುದನ್ನು ಯಾರೂ ಬೇಕಾದರೂ ಅರ್ಥೈಸಿಕೊಳ್ಳಬಹುದು. ಆದರೆ, ಹೀಗೆ ಘೋಷಿಸುವುದು ಕಾನೂನು ಬಾಹಿರ, ಅನೈತಿಕ.

‘ಕಬೀರ್ ನನ್ನು ಕೊಲೆಗೈದ ನವೀನ್ ನಾಯ್ಕನಿಗೆ ಧನ ಸಹಾಯದ ಜೊತೆಗೆ, ಇಂಥ ಘಟನೆಗಳು ಇನ್ನಷ್ಟೂ ನಡೆಯಬೇಕು, ನವೀನ್ ನಾಯ್ಕನಂಥವರು ನೂರಾರು ಜನ ತಯಾರಾಗಬೇಕು’ ಎಂದೂ ಶಾಸಕ ಸುನಿಲ್ಕುಮಾರ್ ತನ್ನ ಭಾಷಣದಲ್ಲಿ ಘೋಷಿಸಿದ್ದರು. ಇದು ಅಪರಾಧ ಕೃತ್ಯಕ್ಕೆ ಬಹಿರಂಗವಾಗಿಯೇ ಬೆಂಬಲ, ಪ್ರೋತ್ಸಾಹ, ಪ್ರಚೋದನೆ ಕೊಟ್ಟಂತೆ. ಕೊಲೆ ಮಾಡುವುದು ಎಷ್ಟು ಅಪರಾಧವೋ, ಕೊಲೆಗೆ ಪ್ರೋತ್ಸಾಹ, ಪ್ರಚೋದನೆ, ಕೊಲೆಗಾರನಿಗೆ ಬೆಂಬಲ ನೀಡುವುದು ಸಹ ಅಷ್ಟೇ ದೊಡ್ಡ ಅಪರಾಧ. ಒಂದು ರೀತಿಯಲ್ಲಿ ಇದು ಇಂಥದ್ದೇ ಮುಂದಿನ ಕೊಲೆಗಳಿಗೆ ಸುಪಾರಿ ಕೊಟ್ಟಂತೆ.

ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸುವ ಸಂದರ್ಭದಲ್ಲಿ ಸಹ ಯಾವುದೇ ದೇಶಗಳೂ ಕೂಡಾ ಭಯೋತ್ಪಾದಕರ ಹತ್ಯೆಗೆ ಬಹಿರಂಗವಾಗಿ ಕರೆ ಕೊಡುವುದಿಲ್ಲ. ಬದಲಾಗಿ ಭಯೋತ್ಪಾದಕರ ಭಾವಚಿತ್ರವನ್ನು ಸಾರ್ವಜನಿಕಗೊಳಿಸುವುದರ ಜೊತೆಗೆ ಮಾಹಿತಿ ನೀಡಿದವರಿಗೆ ಲಕ್ಷಾಂತರ ರು.ಗಳ ಬಹುಮಾನ ಘೋಷಿಸುತ್ತವೆ. ನಕ್ಸಲೀಯ ಚಳುವಳಿಯಲ್ಲಿ ನಿರತರಾದವರ ಭಾವಚಿತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ, ಇವರ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಪ್ರಕಟಿಸುತ್ತದೆ. ಇದರ ಅರ್ಥ, ಶಂಕಿತ ಆರೋಪಿಗಳು ಜೀವಂತ ಸೆರೆ ಸಿಕ್ಕಬೇಕು ಎಂಬುದಲ್ಲದೇ ಮತ್ತೇನೂ ಅಲ್ಲ. ಆರೋಪಿಗಳು ಜೀವಂತ ಸೆರೆ
ಹಿಡಿಯಲ್ಪಡಬೇಕು. ಬಳಿಕ ಇವರನ್ನು ಇಲಾಖಾಧಿಕಾರಿಗಳು ವಿಚಾರಣೆಗೆ ಒಳಪಡಿಸಿ ಮತ್ತಷ್ಟೂ ಮಾಹಿತಿಗಳನ್ನು ಸಂಗ್ರಹಿಸಬೇಕು, ನಂತರ ನ್ಯಾಯಾಲಯ ವಿಚಾರಣೆಗೆ ಗುರಿಪಡಿಸಬೇಕು, ಅಂತಿಮವಾಗಿ ಅಪರಾಧ ಸಾಬೀತಾಗಿ ಶಿಕ್ಷೆ ನೀಡಬೇಕು ಎಂಬ ಉದ್ಧೇಶವೇ ಇಲ್ಲಿರುವುದು ಹೊರತು ಬೇರೇನೂ ಅಲ್ಲ. ವಾಸ್ತವ ಮತ್ತು ಆಶಯ ಹೀಗಿರುವಾಗ ಕೊಲೆ ಆರೋಪಿಯೋರ್ವನಿಗೆ ನಗದು ಬಹುಮಾನ ಘೋಷಿಸುವುದು, ಇಂಥ ಕೃತ್ಯಗಳು ಇನ್ನಷ್ಟೂ ನಡೆಯಬೇಕು ಎಂದು ಪ್ರಚೋದಿಸುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ.

ಶಾಸಕ ಸುನಿಲ್ ಕುಮಾರ್ ಹಾಗೂ ಇತರ ಕೆಲವರು ವ್ಯಕ್ತಪಡಿಸಿರುವ ಅಭಿಪ್ರಾಯ, ನಿಲುವುಗಳು ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳ ಅಧಿಕೃತ ನಿಲುವುಗಳಾ ಎನ್ನುವುದು ಬಿಜೆಪಿ ಮತ್ತು ಸಂಘ ಪರಿವಾರದ ಸಂಬಂಧಿಸಿದ ಸಂಘಟನೆಗಳು ಸ್ಪಷ್ಟಪಡಿಸಿಬೇಕು. ಬಿಜೆಪಿ ಮತ್ತು ಸಂಬಂಧಿಸಿದ ಸಂಘಟನೆಗಳು ಹೀಗೆ ಮಾಡುತ್ತವೆ ಎಂದು ಹೇಳಲಾಗುವುದಿಲ್ಲ. ಕಾರಣ, ಈ ವಿಷಯದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ನಿಷೇಧಿತ ನಕ್ಸಲೀಯ ಸಂಘಟನೆಯಾದ ಸಿಪಿಐ (ಮಾವೋವಾದಿ) ಪಕ್ಷದ ನೀತಿಯನ್ನೇ ಅನುಸರಿಸಬಹುದು. ನಕ್ಸಲರು ಆಕ್ರಮಣ ಮಾಡಲು ಸೂಕ್ತ ಕಾಲ ಎಂದು ಕಂಡು ಬಂದಾಗ ಆಕ್ರಮಣ ನಡೆಸಿಬಿಡುತ್ತವೆ. ಬಳಿಕ ಪ್ರಭುತ್ವದ ಕಾರ್ಯಾಚರಣೆ ಚುರುಕುಗೊಂಡಾಗ, ಹಿಂದೆ ಸರಿದು ಬಿಡುತ್ತದೆ. ಇದು ನಕ್ಸಲ್ ಸಂಘಟನೆಯ ಒಂದು ಯುದ್ಧತಂತ್ರ. ಸಂಘ ಪರಿವಾರ ಕೂಡಾ ಹೀಗೆಯೇ ಮಾಡಿಬಿಡುವ ಸಾಧ್ಯತೆ ಇದೆ. ಭಾಷಣಗಳಲ್ಲಿ ತನ್ನ ನಿಜ ಮುಖವನ್ನು ಪ್ರದರ್ಶಿಸುವುದು. ಬಳಿಕ ಸಮಸ್ಯೆಯಾದಾಗ ‘ಅದು ಒಬ್ಬ ವ್ಯಕ್ತಿಯ ವಯುಕ್ತಿಕ ಅಭಿಪ್ರಾಯ, ಅವರ ಅಭಿಪ್ರಾಯಕ್ಕೂ ಸಂಘಟನೆಗೂ ಸಂಬಂಧವೇ ಇಲ್ಲ’ ಎಂದು ಹೇಳಿಬಿಡಬಹುದು.

ಶಾಸಕ ಸುನಿಲ್ ಕುಮಾರ್ ಆಗಲೀ, ಸಂಘ ಪರಿವಾರದ ಸಂಘಟನೆಗಳಾಗಲೀ ಸ್ಪಷ್ಟನೆ ಕೊಡುವುದಕ್ಕಿಂತಲೂ ಮುಖ್ಯವಾದುದು, ನಮ್ಮ ದೇಶದ ಕೇಂದ್ರ ಮತ್ತು ರಾಜ್ಯ ಸರಕಾರಗಳು, ರಾಷ್ಟ್ರಪತಿ, ರಾಜ್ಯಪಾಲರು, ಚುನಾವಣಾ ಆಯೋಗ, ಲೋಕಸಭಾಧ್ಯಕ್ಷರು, ವಿಧಾನಸಭೆಯ ಸಭಾಪತಿಗಳು, ಪೊಲೀಸ್ ಇಲಾಖಾಧಿಕಾರಿಗಳೆಲ್ಲ ಏನು ಮಾಡುತ್ತಿದ್ದಾರೆ ಎಂಬುದು ಬಹಿರಂಗವಾಗಬೇಕು. ಭಾರತದ ಸಂವಿಧಾನದಲ್ಲಿ ಸಂವಿಧಾನದ್ಧವಾಗಿ ಪ್ರಮಾಣ ವಚನ ಸ್ವೀಕರಿಸಿಕೊಂಡು ಶಾಸಕನಾದ ವ್ಯಕ್ತಿ ಹೀಗೆ ಭಾಷಣ ಮಾಡಲು ಅವಕಾಶ ಇದೆಯೇ, ಇಲ್ಲವೇ, ಇಲ್ಲವೆಂದಾದರೆ ಹಾಗೆ ಮಾಡಿದ ವ್ಯಕ್ತಿಯ ವಿರುದ್ಧ ಮತ್ತು ಪಕ್ಷ ಮತ್ತು ಸಂಘಟನೆಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬುದನ್ನು ಸಂಬಂಧಪಟ್ಟ ಸಂಸ್ಥೆಗಳು ಹಾಗೂ ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಿರುವ ಉನ್ನತ ಅಧಿಕಾರಿಗಳು ಸ್ಪಷ್ಟಪಡಿಸಬೇಕು.

ದೇಶದಲ್ಲಿ ಸಮರ್ಥವಾದೊಂದು ಚುನಾವಣಾ ಆಯೋಗ ಇರುತ್ತಿದ್ದರೆ, ಬಿಜೆಪಿಯಂಥ ಪಕ್ಷ ನೋಂದಣಿಯೇ ಆಗುತ್ತಿರಲಿಲ್ಲ. ಹೋಗಲಿ, ಹೇಗೋ ನೋಂದಣಿಯಾಯಿತು. ನೋಂದಣಿಯಾದ ಮೇಲೆ ಪಕ್ಷಗಳ ನಡೆ-ನುಡಿ ಬಹಿರಂಗಕ್ಕೆ ಬಂದ ಬಳಿಕವಾದರೂ, ಪಕ್ಷದ ನಿಜವಾದ ಧ್ಯೇಯೋದ್ಧೇಶಗಳು ಜಗಜ್ಜಾಹೀರುಗೊಂಡ ಬಳಿಕವಾದರೂ ಅಂಥ ಪಕ್ಷದ ನೋಂದಣಿಯನ್ನು ರದ್ದುಗೊಳಿಸುವ ಕೆಲಸ ಮಾಡಬೇಡವೇ ? ಯಾಕೆ ಈ ತುರ್ತು ಕೆಲಸವನ್ನು ಚುನಾವಣಾ ಆಯೋಗ ಅಥವಾ ಇತರ ಸಂಸ್ಥೆಗಳು, ಹಿರಿಯ ಅಧಿಕಾರಿಗಳು ಮಾಡುತ್ತಿಲ್ಲ ? ಶಾಸಕರ ಶಾಸಕತ್ವವನ್ನಾದರೂ ರದ್ದುಪಡಿಸಬೇಡವೇ ?

ಇದು ಬಿಜೆಪಿಗೆ ಮಾತ್ರ ಸೀಮಿತವಾದ ಮಾತಲ್ಲ. ಇತರ ಕೆಲವು ಪ್ರಮುಖ ರಾಜಕೀಯ ಪಕ್ಷಗಳೂ ಬಿಜೆಪಿಯ ಸಾಲಿನಲ್ಲೇ ಇವೆ. ಶಾಸಕ ಸುನಿಲ್ ಕುಮಾರ್ ರಂಥ ಇನ್ನಷ್ಟು ಜನಪ್ರತಿನಿಧಿಗಳೂ ಈ ಪಟ್ಟಿಯಲ್ಲಿದ್ದಾರೆ. ಇಂಥವರೆಲ್ಲರ ಪಟ್ಟಿಯೊಂದನ್ನು ತಯಾರಿಸಿ ಇವರುಗಳ ವಿರುದ್ಧ ಕ್ರಮಕೈಗೊಳ್ಳುವ ಕನಿಷ್ಟ ಕರ್ತವ್ಯವನ್ನೂ ಯಾಕೆ ಯಾವ ಜವಾಬ್ದಾರಿಯುತ ಸಂಸ್ಥೆಗಳೂ ಮಾಡುತ್ತಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ. ಸಂವಿಧಾನಬದ್ಧವಾಗಿ ನಡೆಯದ ಜನಪ್ರತಿನಿಧಿಗಳ ಜನಪ್ರತಿನಿಧಿತ್ವವನ್ನು ಯಾವುದೇ ಮುಲಾಜಿಲ್ಲದೆ ರದ್ದುಪಡಿಸಬೇಕು. ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುವಂಥ ಸಂಸ್ಥೆಗಳು, ಅವುಗಳು ಎಷ್ಟೇ ದೊಡ್ಡ ಸಂಸ್ಥೆಗಳಾಗಿರಲಿ ಅಂಥ ಸಂಸ್ಥೆಗಳನ್ನು ನಿಷೇಧಿಸಬೇಕು.

ಮಾದರಿಯಾಗಬೇಕಾದ, ಆದರ್ಶವಾಗಬೇಕಾದ ಪಕ್ಷಗಳು, ಸಂಘಟನೆಗಳು, ಜನಪ್ರತಿನಿಧಿಗಳು, ಸಂವಿಧಾನ ವಿರೋಧಿಯಾಗಿ, ಕಾನೂನು ಬಾಗಿರವಾಗಿ ನಡೆದುಕೊಳ್ಳುವುದು, ಇವುಗಳು ಒಂದು ಮನೋರಂಜನೆಯ ವಿಷಯ ಎಂಬಂತೆ ಪತ್ರಿಕೆಗಳಲ್ಲಿ, ಟಿವಿ ಛಾನೆಲ್ ಗಳಲ್ಲಿ ಪ್ರಸಾರವಾಗುವುದು, ಮರುದಿನವೇ ಇವುಗಳೆಲ್ಲವನ್ನೂ ಎಲ್ಲರೂ ಮರೆತುಬಿಡುವುದು ಇಂದು ನಡೆಯುತ್ತಿದೆ. ಕಳೆದ ಐದಾರು ದಶಕಗಳಿಂದಲೂ ದೇಶದಲ್ಲಿ ಹೀಗೆಯೇ ನಡೆದುಕೊಂಡು ಬಂದಿದೆ. ಕ್ರಮ ತೆಗೆದುಕೊಳ್ಳಬೇಕಾದವರು ಜಾಣ ಮೌನ ವಹಿಸಿಕೊಂಡು ಬಂದಿದ್ದಾರೆ. ಹಾಗಾಗಿಯೇ ಇಂಥ ಅಕ್ರಮಗಳು ಯಾವುದೇ ಅಡೆತಡೆಗಳೂ ಇಲ್ಲದೆ ಮುಂದುವರಿದುಕೊಂಡು ಬಂದಿದೆ.

ಕಳೆದ ಆರು ದಶಕಗಳಿಂದ ದೇಶ ಮತ್ತು ರಾಜ್ಯವನ್ನಾಳಿದ ಸರಕಾರಗಳು, ಮಂತ್ರಿಗಳು, ಉನ್ನತ ಸರಕಾರಿ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಗಳನ್ನು, ಕರ್ತವ್ಯಗಳನ್ನು ಸಮರ್ಥವಾಗಿ, ದಕ್ಷತೆಯಿಂದ ನಿರ್ವಹಿಸದೇ ಇದ್ದುದೇ ಇಂದಿನ ಇಂಥ ಎಲ್ಲಾ ಅವಾಂತರಗಳಿಗೂ ಮೂಲ ಕಾರಣ. ಬಹುಕಾಲ ನಮ್ಮನ್ನಾಳಿದ ಕಾಂಗ್ರೆಸ್ ಪಕ್ಷವೇ ಒಂದು ಮಾನ್ಯತೆ ಕಳೆದುಕೊಳ್ಳಬೇಕಾದ, ರದ್ದುಗೊಳಬೇಕಾದ ಪಕ್ಷವಾಗಿರುವಾಗ, ಈ ಪಕ್ಷದಲ್ಲೇ ಜನಪ್ರತಿನಿಧಿತ್ವವನ್ನು ಕಳೆದುಕೊಳ್ಳಬೇಕಾದ ಜನಪ್ರತಿನಿಧಿಗಳು ಇರುವಾಗ, ಇಂಥ ಪಕ್ಷದ ಸರಕಾರ ಸಂವಿಧಾನಬದ್ಧವಾಗಿ, ಕಾನೂನು ಪ್ರಕಾರ ನಡೆದುಕೊಳ್ಳುವ ಸಾಹಸವನ್ನು ಪ್ರದರ್ಶಿಸಲು ಸಾಧ್ಯವಿಲ್ಲ ತಾನೇ ? ಇಲ್ಲಿ ಆಗಿರುವುದು ಸಹ ಇದುವೇ ! – ಶ್ರೀರಾಮ ದಿವಾಣ.

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮಧ್ವರಾಜ್ ಅವರನ್ನು ಜಿಲ್ಲೆಯಿಂದ ಸಚಿವರನ್ನಾಗಿ ಆಯ್ಕೆ ಮಾಡುವಂತೆ ಜಿಲ್ಲೆಯ ದಲಿತ ಮುಖಂಡರ ನಿಯೋಗವೊಂದು ಬೆಂಗಳೂರಿಗೆ ತೆರಳಿ ಕೆಪಿಸಿಸಿ ಅದ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡು ಒತ್ತಡ ಹಾಕಿದೆ.
ಪ್ರಮೋದ್ ಅವರು ಬಡವರು, ದಲಿತರು, ಮಹಿಳೆಯರ ಬಗ್ಗೆ ಅಪಾರವಾದ ಕಾಳಜಿಯುಳ್ಳವರು. ಜನ ಸಾಮಾನ್ಯರ ಕೈಗೆ ಸಿಕ್ಕುವಂಥ ವ್ಯಕ್ತಿ. ಯಾವುದೇ ಒಂದು ಜಾತಿಯವರ ಪರವಾಗಿಯಷ್ಟೇ ಕೆಲಸ ಮಾಡಿದವರೂ ಅಲ್ಲ. ಇವರನ್ನು ಸಚಿವರನ್ನಾಗಿ ಮಡಿದಲ್ಲಿ ಮಾತ್ರ ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಗೆ ಪ್ರಯೋಜನವಾಗಲಿದೆ. ಮಾತ್ರವಲ್ಲ, ಪ್ರಮೋದರು ಸಚಿವರಾದರೆ ಮಾತ್ರವೇ ಜಿಲ್ಲೆಯ ಎಲ್ಲಾ ಜಾತಿ, ಮತ, ವರ್ಗಗಳ ಜನರಿಗೂ ಉಪಕಾರವಾಗಲಿದೆ ಎಂದು ದಲಿತ ನಾಯಕರು ಡಾ.ಪರಮೇಶ್ವರ್ ಅವರಿಗೆ ಮನವರಿಕೆ ಮಾಡಿಕೊಟ್ಟರು ಎಂದು ತಿಳಿದುಬಂದಿದೆ. ಕಾಪು ಕ್ಷೇತ್ರದಿಂದ ಶಾಸಕರಾದ ವಿನಯ ಕುಮಾರ್ ಸೊರಕೆಯವರು ಸಂಸದರಾಗಿದ್ದ ಅವಧಿಯಲ್ಲಿಯೂ ಅವರು ಜಿಲ್ಲೆಗಾಗಲೀ, ಜಿಲ್ಲೆಯ ಬಡ ಜನರಿಗಾಗಲೀ ಮಾಡಿದ್ದೇನೂ ಇಲ್ಲ. ಸ್ವಜಾತಿ ವಾದಿಯಾದ ಸೊರಕೆಯವರು ತಮ್ಮ ಸುತ್ತಲೂ ಸ್ವಜಾತಿ ಬಾಂಧವರನ್ನೇ ಇಟ್ಟುಕೊಂಡು ರಾಜಕೀಯ ಮಾಡಿದವರು. ಸೊರಕೆಯವರನ್ನು ಸಚಿವರನ್ನಾಗಿ ಮಡಿದಲ್ಲಿ ಇತರ ಯವ ಜಾತಿಯವರಿಗೂ ಯಾವುದೇ ಲಾಭವಾಗದು. ಸೊರಕೆಯವರನ್ನು ಸುತ್ತುವರಿದಿರುವ ಅವರ ಸ್ವಜಾತಿ ಬಾಂಧವರೂ ಇತರ ಯಾರನ್ನೂ ಶಾಸಕರ ಹತ್ತಿರ ಸುಳಿಯಲೂ ಬಿಡಲಾರದ ಸ್ಥಿತಿ ನಿರ್ಮಾಣವಾಗುವುದು ಖಚಿತ ಎಂದು ದಲಿತ ಮುಖಂಡರು ಸೊರಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ. ಉಡುಪಿ ಜಿಲ್ಲೆಯಿಂದ ಸಚಿವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಸೊರಕೆಯವರ ಬದಲಾಗಿ ಪ್ರಮೋದ್ ಮಧ್ವರಾಜ್ ಅವರನ್ನು ಪರಿಗಣಿಸಬೇಕು. ಪ್ರಮೋದರನ್ನು ಸಚಿವರನ್ನಾಗಿ ಮಾಡಿದಲ್ಲಿ ಜಿಲ್ಲೆಯ ಸಮಸ್ತ ದಲಿತ ಸಮುದಾಯ ಪ್ರಮೋದ್ ಜೊತೆಗೆ ಸಹಕರಿಸಲಿದೆ. ಮಾತ್ರವಲ್ಲ, ಮುಂಬರುವ ಲೋಕಸಭ ಚುನಾವಣೆಯಲ್ಲಿ ದಲಿತ ಸಮುದಾಯ ಕಾಂಗ್ರೆಸ್ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಲಿದೆ ಎಂದು ದಲಿತರ ನಿಯೋಗ ಕೆಪಿಸಿಸಿ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟಿತು. ಕೆಪಿಸಿಸಿ ಅಧ್ಯಕ್ಷರು ನಿಯೋಗದ ಜೊತೆಗೆ ಸಕರಾತ್ಮಕವಾಗಿ ಸ್ಪಂದಿಸಿತು ಎಂದು ಮಾಹಿತಿ ಮೂಲಗಳು ತಿಳಿಸಿವೆ.

ಉಡುಪಿ: ರಾಜ್ಯದ ಮುಜರಾಯಿ, ಬಂದರು, ಒಳನಾಡು ಜಲಸಾರಿಗೆ ಸಚಿವರೂ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕೋಟ ಶ್ರೀನಿವಾಸ ಪೂಜಾರಿಯವರ ಸರಕಾರಿ ಕಾರಿಗೆ ಕಲ್ಲೆಸೆದು ಹಾನಿ ಮಾಡಿದರೆನ್ನಲಾದ ಪ್ರಕರಣದ ಆರೋಪಿಗಳೂ, ಸಚಿವರ ಅಧಿಕೃತ ಆಪ್ತ ಸಹಾಯಕರಾದ ರಾಘವೇಂದ್ರ ಗಾಣಿಗರ ಮನೆಗೆ 8 ಬೈಕ್ ಗಳಲ್ಲಿ ಬಂದು ಅವಾಚ್ಯ ಶಬ್ದಗಳಿಂದ ಬೈಯ್ದು, ರಾಘವೇಂದ್ರರ ಪತ್ನಿ ಆರತಿ ಅವರ ಕುತ್ತಿಗೆಯಲ್ಲಿದ್ದ 5 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಕಿತ್ತುಕೊಂಡು, ಜೀವ ಬೆದರಿಕೆ ಹಾಕಿ ಪರಾರಿಯಾದರು ಎಮದು ಹೇಳಲಾದ ಪ್ರಕರಣದ ಐವರು ಆರೋಪಿಗಳಿಗೆ ಇಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿದೆ.
ಮೇಲಿನ ಈ ಎರಡೂ ಪ್ರಕರಣಗಳ ಆರೋಪಿಗಳಾದ ಉಮೇಶ್ ಪೂಜಾರಿ, ರತ್ನಾಕರ ಪೂಜಾರಿ, ವಿಜಯ ಪೂಜಾರಿ, ಅರವಿಂದ ಪೂಜಾರಿ ಹಾಗೂ ಶರತ್ ಗಾಣಿಗ ಎಂಬವರೇ ನಿರೀಕ್ಷಣಾ ಜಾಮೀನು ಪಡೆದುಕೊಂಡವರಾಗಿದ್ದಾರೆ. ಆರೋಪಿಗಳ ಪರವಾಗಿ ಹಿರಿಯ ವಕೀಲರಾದ ಎಂ.ಶಾಂತಾರಾಮ ಶೆಟ್ಟಿ ವಾದಿಸಿದ್ದರು.
ಇದೇ ಪ್ರಕರಣದ ಇನ್ನಿಬ್ಬರು ಪ್ರಮುಖ ಆರೋಪಿಗಳಾದ ಉಡುಪಿ ತಾಲೂಕು ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಹಾಗೂ ನಾಗರಾಜ ಮರಕಾಲ ಎಂಬವರನ್ನು ಪ್ರಕರಣ ನಡೆದ ಮರುದಿನವೇ ಪೊಲೀಸರು ಪೊಲೀಸ್ ಠಾಣೆಗೆ ಮಾತುಕತೆಗೆಂದು ಕರೆದು ಬಳಿಕ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಎರಡು ದಿನ ನ್ಯಾಯಾಂಗ ಬಂಧನದಲ್ಲಿದ್ದ ಇವರು ಬಳಿಕ ಜಾಮೀನು ಪಡೆದುಕೊಂಡು ಬಿಡುಗಡೆಯಾಗಿದ್ದರು.
ರಾಘವೇಂದ್ರ ಗಾಣಿಗರ ಮನೆಗೆ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂದಿಸಿದಂತೆ ರಾಘವೇಂದ್ರರ ಪತ್ನಿ ಆರತಿ ಹಾಗೂ ಸಚಿವರ ಕಾರಿಗೆ ಹಾನಿ ಮಾಡಿದ ಪ್ರಕರಣದ ಬಗ್ಗೆ ಸಚಿವರ ಅಳಿಯ ರಾಘವೇಂದ್ರ ಪೂಜಾರಿ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಜೈಲಿನಿಂದ ಮರಳಿದ ತಾ.ಪಂ.ಸದಸ್ಯ ರಾಘವೇಂದ್ರ ಕಾಂಚನ್ ಇತ್ತೀಚೆಗೆ ಮಾಧ್ಯಮಗೋಷ್ಟಿ ನಡೆಸಿ ಸಚಿವರ ಕಾರಿಗೆ ಕಲ್ಲೆಸೆದು ಹಾನಿ ಮಾಡಿದರು ಎಂದು ಆರೋಪಿಸಲಾದ ಪ್ರಕರಣ ನಡೆದ ಸಮಯದಲ್ಲಿ ತಾನು ಕೋಟ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಅಶೋಕ್ ಜೊತೆ ಇದ್ದೆ. ತನ್ನನ್ನು ಈ ಎರಡೂ ಪ್ರಕರಣದಲ್ಲಿ ಫಿಕ್ಸ್ ಮಾಡಲಾಗಿದೆ. ಈ ಬಗ್ಗೆ ತಾನು
ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ಸಿದ್ದ, ದೂರು ನೀಡಿದವರು ಪ್ರಮಾಣ ಮಾಡಲು ಬರಬೇಕು ಎಂದು ಬಹಿರಂಗ ಸವಾಲು ಹಾಕಿರುವುದನ್ನು ಇಲ್ಲಿ ನೆನೆಯಬಹುದು.
ಇದೇ ಸಂದರ್ಭದಲ್ಲಿ, ರಾಮ ಪೂಜಾರಿಯವರ ಪತ್ನಿ ಜಯಂತಿ ನೀಡಿದ ದೂರಿಗೆ ಸಂಬಂದಪಟ್ಟ ಪ್ರಕರಣದಲ್ಲಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಲು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನರೇಂದ್ರ ಕುಮಾರ ಗುಣಕಿ ಅವರು ನಿರಾಕರಿಸಿದ್ದಾರೆ. ಸಚಿವರ ಆಪ್ತ ಸಹಾಯಕ ರಾಘವೇಂದ್ರ ಗಾಣಿಗ, ಕೃಷ್ಣ ದೇವಾಡಿಗ ಸಾಸ್ತಾನ, ರಾಕೇಶ್ ಹಾಗೂ ಇತರ ಇಬ್ಬರು ತಮ್ಮ ಮನೆಗೆ ಅಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ರಾಮ ಪೂಜಾರಿಯವರಿಗೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದರು. ಬಳಿಕ ತನ್ನ ಬಟ್ಟೆ ಹರಿದುಹಾಕಿ ಅತ್ಯಾಚಾರ ನಡೆಸುವುದಾಗಿ ಹೇಳುತ್ತಾ ಅತ್ಯಾಚಾರ ನಡೆಸಲು ಮುಂದಾಗಿ, ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿ, ಬೊಬ್ಬೆ ಹೊಡೆದಾಗ 5 ಪವನ್ ತೂಕದ ಚಿನ್ನದ ಸರ ಕಸಿದುಕೊಂಡರು. ನಂತರ ಪೊಲೀಸರಿಗೆ ದೂರು ನೀಡಿದರೆ ಸಚಿವರ ಕೊಲೆಗೆ ಯತ್ನಿಸಿದಿರೆಂದು ದೂರು ಕೊಡಿಸಿ ಜೈಲಿಗೆ ಹಾಕುವುದಾಗಿ ಬೆದರಿಸಿ ಹೋದರೆಂದು ರಾಮ ಪೂಜಾರಿ ಪತ್ನಿ ಜಯಂತಿ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಪ್ರಕರಣದ ಆರೋಪಿಗಳಿಗೆ ಜಿಲ್ಲಾ ನ್ಯಾಯಾಯ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆರೋಪಿಗಳು ಇನ್ನು ಹೈಕೋರ್ಟ್ ಮೆಟ್ಟಿಲೇರುವುದು ಅಥವಾ ಪೊಲೀಸರಿಗೆ ಇಲ್ಲವೇ ನ್ಯಾಯಾಲಯಕ್ಕೆ ಶರಣಾಗುವುದು ಅನಿವಾರ್ಯವಾಗಿದೆ.

ಉಡುಪಿ: ಅತ್ಯಾಚಾರ ಪ್ರಕರಣಗಳ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಸೋಮವಾರ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಇಂದು ಸಂಜೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಯಿತು.
ಸುಮಾರು 50 ಮಂದಿ ಸೇರಿದ್ದ ಪ್ರತಿಭಟನೆಯಲ್ಲಿ ಮಹಿಳೆಯರು ಅತ್ಯಾಚಾರಿಗಳ ವಿರುದ್ಧ ಘೋಷಣೆಗಳಿರುವ ಫಲಕಗಳನ್ನು ಪ್ರದರ್ಶಿಸಿದರು. ಕೇಂದ್ರ ಸರಕಾರಕ್ಕಾಗಲೀ, ರಾಜ್ಯ ಸರಕಾರಕ್ಕಾಗಲಿ, ಜಿಲ್ಲಾಡಳಿತಕ್ಕಾಗಲೀ ಯಾವುದೇ ಲಿಖಿತ ಮನವಿಯನ್ನೂ ಸಲ್ಲಿಸದೆ ಕಟಾಚಾರಕ್ಕೆಂಬಂತೆ ಮಹಿಳಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ಇದೇ ಮಹಿಳಾ ಕಾಂಗ್ರೆಸ್ ನ ನಾಯಕಿಯರು, ಪಕ್ಷದ ಪುರುಷ ನಾಯಕರ ಜೊತೆಗೆ ಕೆಲವು ವಾರಗಳ ಹಿಂದೆ, ಪತ್ನಿಯ ದೇಹದ ವಿವಿಧ ಭಾಗಗಳಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕತ್ತು ಹಿಸುಕಿ ಕೊಲೆಗೆ ಯತ್ನಿಸಿ, ಚರಂಡಿಗೆಸೆದ ಪ್ರಕರಣದಲ್ಲಿ ಆರೋಪಿ ಗಂಡನ ಪರವಾಗಿ ಪೊಲೀಸರಿಗೆ ರಾಜಕೀಯ ಒತ್ತಡ ಬೀರಿದ್ದಲ್ಲದೆ, ಗಾಯಾಳು ಮಹಿಳೆಗೆ ಪ್ರಕರಣದಲ್ಲಿ ರಾಜಿಯಾಗುವಂತೆ ಒತ್ತಡ ಹಾಕಲು ಓಡಾಡಿದ ಪ್ರಸಂಗ ನಡೆದು ಇದು ಬಹಿರಂಗಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಉಡುಪಿ: ಧರ್ಮ ಇಲ್ಲದಿರುವುದೇ ಎಲ್ಲಾ ಸಮಸ್ಯೆಗಳಿಗೂ ಕಾರಣವಾಗಿದೆ. ರಾಜಕೀಯ ಮತ್ತು ಆರ್ಥಿಕ ಕಾರಣಗಳಿಂದಾಗಿ ಕೆಲವು ಸಮಸ್ಯೆಗಳು ಸೃಷ್ಟಿಯಾಗಿವೆ. ಪೌರೋಹಿತ್ಯ ಕೆಲವೊಂದು ಸಂದರ್ಭದಲ್ಲಿ ಧರ್ಮವನ್ನು ವಿರೂಪಗೊಳಿಸುವುದೂ ಇದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಜತೆ ಕಾರ್ಯದರ್ಶಿ ಮುಹಮ್ಮದ್ ಕುಞ್ಙಿ ಅವರು ತಿಳಿಸಿದ್ದಾರೆ.
ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಇಂದು ಮಧ್ಯಾಹ್ನ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರೆಸ್ ಕ್ಲಬ್ ನಲ್ಲಿ ನಡೆದ `ಈದ್ ಸ್ನೇಹಕೂಟ’ ದಲ್ಲಿ ಅವರು ಮಾತನಾಡುತ್ತಿದ್ದರು.
ಎಲ್ಲಾ ಧರ್ಮಗಳೂ ಸಹೋದರತೆಯನ್ನೇ ಸಾರಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಕಿರಣ ಮಂಜನಬೈಲ್ ಅವರು ಹೇಳಿದರು.
ಜಮಾಅತೆ ಇಸ್ಲಾಮೀ ಹಿಂದ್ ವಲಯ ಸಂಚಾಲಕರಾದ ಅಬ್ದುಲ್ ಸಲಾಮ್ ಉಪ್ಪಿನಂಗಡಿ, ಉಡುಪಿ ನಗರ ಸಂಚಾಲಕ ಮಹಮ್ಮದ್ ಮರಕಡ, ಉಪ ವಲಯ ಸಹ ಸಂಚಾಲಕ ಶಬ್ಬೀರ್ ಅಹಮ್ಮದ್ ಮಲ್ಪೆ, ಇದ್ರೀಸ್ ಹೂಡೆ, ಹುಸೇನ್ ಕೋಡಿಬೆಂಗ್ರೆ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಜಯಕರ ಸುವರ್ಣ ಸಮಾರಂಭದಲ್ಲಿ ಉಪಸ್ಥಿತರಿದ್ದರು.