Posts Tagged ‘ರೈತರು’

http://www.udupibits.in
# ಉಡುಪಿಯಲ್ಲಿ ರೇಷ್ಮೆ ಬೆಳೆಯತ್ತ ಆಕರ್ಷಿತರಾಗಿದ್ದಾರೆ ಹೊಸ ರೈತರು. ಕಳೆದ ಸಾಲಿನಲ್ಲಿ ಸುಮಾರು ಒಟ್ಟು 75 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿದ್ದ ರೇಷ್ಮೆ, ಪ್ರಸಕ್ತ ಸಾಲಿನಲ್ಲಿ ಮತ್ತೆ ಹೊಸದಾಗಿ 12 ಎಕರೆ ಪ್ರದೇಶದಲ್ಲಿ ವ್ಯಾಪಿಸುವ ಮೂಲಕ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿದೆ.

ಉಡುಪಿ ಜಿಲ್ಲೆಯ 15 ಹೊಸ ರೈತರು ರೇಷ್ಮೆ ಕೃಷಿಯತ್ತ ಆಕರ್ಷಿತರಾಗಿದ್ದಾರೆ. ಕಾರ್ಕಳ ತಾಲೂಕಿನ ಮಾಳ, ಅಜೆಕಾರು, ಹೆಬ್ರಿ, ಮುದ್ರಾಡಿಯಲ್ಲಿ, ಕುಂದಾಪುರ ತಾಲೂಕಿನ ಅಜ್ರಿ, ಕೊಡ್ಲಾಡಿ, ಕರ್ಕುಂಜೆ, ಅಮಾಸೆಬೈಲು, ಕೆರಾಡಿ, ಮಾರಣಕಟ್ಟೆಯಂತಹ ಪ್ರದೇಶಗಳಲ್ಲಿ ರೇಷ್ಮೆ ಕೃಷಿಯತ್ತ ರೈತರು ವಾಲಿದ್ದಾರೆ.

ಅತ್ಯಂತ ವೈಜ್ಞಾನಿಕವಾಗಿ ಬೆಳೆಯುವ ಬೆಳೆ ರೇಷ್ಮೆ; ನಾಜೂಕಾದ ಈ ಬೆಳೆಯನ್ನು ರೇಷ್ಮೆ ಇಲಾಖೆಯ ಪರಿಣಿತರು ನೀಡಿದ ತರಬೇತಿ ಮತ್ತು ಮಾಹಿತಿಯಂತೆ ಬೆಳೆಯಬೇಕು.

ಇರುವೆ, ಜಿರಳೆಗಳ ಕಾಟ ಹಾಗೂ ಹೆಚ್ಚಿನ ಕಾಳಜಿ ಮತ್ತು ಜಾಗ್ರತೆ ರೇಷ್ಮೆ ಮೊಟ್ಟೆಯ ಬಗ್ಗೆ ರೈತರಿಗಿರಬೇಕು. ಉಡುಪಿಯಲ್ಲಿ 91 ರೈತ ಕುಟುಂಬ ರೇಷ್ಮೆ ಬೆಳೆಯಲ್ಲಿ ತಮ್ಮನ್ನು ತೊಡಗಿಸಿದ್ದು, ಹೆಚ್ಚಿನ ಕುಟುಂಬಗಳು ಪರಿಶಿಷ್ಟ ಪಂಗಡಕ್ಕೆ ಸೇರಿದವರದು.

ರೇಷ್ಮೆ ಇಲಾಖೆ ರೈತರಿಗೆ ವಿ 1 ತಳಿಯನ್ನು ಶಿಫಾರಸ್ಸು ಮಾಡಿದ್ದು, ಹೆಚ್ಚಿನ ಉತ್ಪಾದನೆ ಬರುವಂತೆ ನೋಡಿಕೊಂಡಿದ್ದಾರೆ. ಕಡಿಮೆ ಪ್ರದೇಶದಲ್ಲಿ ಹೆಚ್ಚಿನ ಇಳುವರಿ ತೆಗೆಯುವ ಬಗ್ಗೆ ಈಗಾಗಲೇ ಆಸಕ್ತ ರೈತರಿಗೆ ತರಬೇತಿ ನೀಡಿದೆ. ಐದು ದಿನಗಳ ಕಾಲ ತರಬೇತಿ ಮತ್ತು ಒಂದು ದಿನ ಮೈಸೂರಿನ ರೇಷ್ಮೆ ಬೆಳೆಯುವ ಪ್ರದೇಶಗಳಿಗೆ ಭೇಟಿ ನೀಡಿ ಪ್ರಾತ್ಯಕ್ಷಿಕೆ ಹಾಗೂ ಉಡುಪಿಯ ಯಶಸ್ವೀ ರೈತರ ಅನಿಸಿಕೆಗಳನ್ನು ಹಂಚಿಕೊಳ್ಳಲು ಹೊಸ ರೈತರಿಗೆ ಅವಕಾಶ ಮಾಡಿಕೊಡಲಾಗಿದೆ ಎನ್ನುತ್ತಾರೆ ರೇಷ್ಮೆ ಇಲಾಖೆ ಅಧಿಕಾರಿ ಉಪೇಂದ್ರ ನಾಯಕ್ ಅವರು.

ಉಡುಪಿಯಲ್ಲಿ ಕ್ಷೇತ್ರ ಮಟ್ಟದ ಅಧಿಕಾರಿಗಳ ಕೊರತೆ ಇದ್ದರೂ, ರೈತರ ಆಸಕ್ತಿಗೆ ಪೂರಕವಾಗಿ ಇಲಾಖೆ ಸ್ಪಂದಿಸುತ್ತಿರುವುದರಿಂದ ನೆಲೆ ವಿಸ್ತರಿಸುವಲ್ಲಿ ಉಡುಪಿಯಲ್ಲಿ ರೇಷ್ಮೆ ಯಶಸ್ಸು ಕಾಣುತ್ತಿದೆ.

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಅಡಿಕೆ ಕೊಳೆ ರೋಗವನ್ನು ಹತೋಟಿ ಮಾಡಲು ಬೇರೆ ಬೇರೆ ಕಂಪೆನಿಗಳು ಸಾವಯವ ಸಸ್ಯ ಜನ್ಯ ಔಷಧಿಗಳನ್ನು ಬೇರೆ ಬೇರೆ ರೀತಿಯ ಅನೇಕ ಹೆಸರಿನಲ್ಲಿ (Bio-fite, Bio-pot, Agri-Biotech, Agri-foss, Agri-pos, Fito-Phose, Eco-Min, Pro-Alex, MCF, Beco-Min) ಮಾರುಕಟ್ಟೆಯಲ್ಲಿ ಅಧಿಕ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ರೀತಿ ಮಾರಾಟ ಮಾಡುತ್ತಿರುವ ಔಷಧಿಯನ್ನು ರೈತರು ಸಿಂಪಡಿಸಿ ನಂತರದಲ್ಲಿ ಈ ರೀತಿ ಔಷಧಿಯನ್ನು ಸಿಂಪಡಿಸಿದ ತೋಟಗಳಲ್ಲಿ ಅಡಿಕೆ ಕಾಯಿಗಳು ಉದುರುವುದು, ಕೊಳೆಯುವುದು, ಒಡೆಯುವುದು, ಬೇಗ ಮಾಗುವುದು, ಈ ರೀತಿ ಸಮಸ್ಯೆಗಳು ಉಲ್ಬಣಿಸಿ ಅಡಿಕೆ ಬೆಳೆಗಾರರಿಗೆ ಇಳುವರಿ ಕಡಿಮೆಯಾಗಿ ನಷ್ಟವಾಗುತ್ತಿರುವ ಬಗ್ಗೆ ಅನೇಕ ರೈತರು ಹಾಗೂ ರೈತ ಮುಖಂಡರು ಇಲಾಖೆಗೆ ಮಾಹಿತಿ ನೀಡಿ ದೂರು ಸಲ್ಲಿಸಿರುತ್ತಾರೆ. ಈ ರೀತಿ ಸಾವಯವ ಸಸ್ಯ ಜನ್ಯ ಮೂಲ ಔಷಧಿಯನ್ನು ನಿಯಂತ್ರಿಸಲು ಯಾವುದೇ ರೀತಿಯ ನಿಯಮಗಳಿರುವುದಿಲ್ಲ. ಇಲಾಖೆ ಹಾಗೂ ಸಂಶೋಧನಾ ಸಂಸ್ಧೆಗಳು ಈ ರೀತಿ ಔಷಧಿಯನ್ನು ಉಪಯೋಗಿಸಬಾರದಾಗಿ ರೈತರಲ್ಲಿ ಈಗಾಗಲೇ ಅನೇಕ ಮನವಿ ಬಾರಿ ಮಾಡಿದೆ.ಈ ರೀತಿಯ ಔಷಧಿಗಳನ್ನು ಸಿಂಪಡಿಸಲು ಇಲಾಖಾ ಹಾಗೂ ಸಂಶೋಧನ ಸಂಸ್ಥೆಗಳು ಶಿಫಾರಸ್ಸು ಮಾಡಿರುವುದಿಲ್ಲ. ಇದರ ಬದಲಾಗಿ ಅಡಿಕೆ ಕೊಳೆ ರೋಗವನ್ನು ಸರ್ಮಪಕವಾಗಿ ನಿಯಂತ್ರಿಸಲು ಶೇ. 1 ರ ಬೋರ್ಡೋ ದ್ರಾವಣವನ್ನು ಸಿಂಪಡಿಸಲು ರೈತರಲ್ಲಿ ಮನವಿ ಮಾಡಲಾಗಿದೆ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

ರೈತರು ಶೇ. 1 ರ ಬೋರ್ಡೋ ದ್ರಾವಣವನ್ನು ತಯಾರಿಸಲು 1 ಕೆ.ಜಿ. ಸುಣ್ಣ ಹಾಗೂ 1 ಕೆ.ಜಿ ಮೈಲುತುತ್ತನ್ನು ಮೊದಲಿಗೆ ತಲಾ 10 ಲೀ. ನೀರಿನಲ್ಲಿ ಬೇರೆ ಬೇರೆಯಾಗಿ ಕರಗಿಸಿ, ನಂತರ 80 ಲೀಟರ್ ನೀರುಳ್ಳ 1 ಡ್ರಮ್ಮಿಗೆ ಈ ಎರಡು ಕರಗಿದ ದ್ರಾವಣಗಳನ್ನು ಒಂದೇ ಸಮಯದಲ್ಲಿ ಮಿಶ್ರಣ ಮಾಡಿ ತಯಾರಿಸಬೇಕಾಗುತ್ತದೆ. ಈ ರೀತಿಯಾಗಿ ತಯಾರಿಸಿದ ಶೇ. 1 ರ ಬೋರ್ಡೋ ದ್ರಾವಣವನ್ನು ಅಡಿಕೆ ಮರದ ಗೊನೆಗಳು ಹಾಗೂ ಎಲೆಗಳ ಭಾಗಗಳು ಚೆನ್ನಾಗಿ ತೊಯ್ಯುವಂತೆ ಸಿಂಪಡಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

http://www.udupibits.in news

ಉಡುಪಿ: ಪ್ರತೀ ವರ್ಷದಂತೆ ಈ ವರ್ಷವು ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯ ಭತ್ತ ಕಠಾವು ಯಂತ್ರಗಳು ಬಂದಿದ್ದರೂ, ಮದ್ಯವರ್ತಿಗಳು ಹೆಚ್ಚಾಗಿದ್ದು, ರೈತರಿಂದ ಮನಬಂದಂತೆ ಬಾಡಿಗೆ ವಸೂಲಿ ಮಾಡುವ ವ್ಯೆವಸ್ಥೆ ಅವ್ಯಾಹತವಾಗಿ ನಡೆದುಕೊಂಡೇ ಬಂದಿದೆ. ಈ ಬಗ್ಗೆ ಹಿಂದಿನ ವರ್ಷಗಳಂತೆ ಈ ವರ್ಷವೂ ದರ ನಿಯಂತ್ರಣಕ್ಕೆ ರೈತರಿಂದ ಹಾಗೂ ಭಾರತೀಯ ಕಿಸಾನ್ ಸಂಘದ ಗ್ರಾಮ ಸಮಿತಿಗಳಿಂದ ಬೇಡಿಕೆಗಳು ಬಂದ ಕಾರಣ ಸಂಘಟನೆ, ಯಂತ್ರ
ಸರಬರಾಜುದಾರರೊಂದಿಗೆ ಮಾತುಕತೆ ನಡೆಸಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಫ್ತಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಪ್ರಾರಂಭವಾದ ಯಂತ್ರಗಳ ಬಾಡಿಗೆ ಕೇಂದ್ರಗಳ ಪೈಕಿ, ಅಜೆಕಾರಿನ ಕೇಂದ್ರದಲ್ಲಿ ಮಾತ್ರ ಕಠಾವು ಯಂತ್ರ ಬಂದಿದ್ದರೂ, ನುರಿತ ಚಾಲಕರ ಸಮಸ್ಯೆಯಿಂದ ರೈತರಿಗೆ ಈ ಬಾರಿ ಅದರ ಪ್ರಯೋಜನ ಸಿಗುವ ಸಾಧ್ಯತೆ ಕಡಿಮೆ ಎಂದು ಕೃಷಿ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಜಿಲ್ಲೆಯ ಮೂರು ಕಡೆ ಪ್ರಾರಂಭವಾಗುವ ಬಾಡಿಗೆ ಕೇಂದ್ರಗಳ ಮೂಲಕ ಲಭ್ಯವಾಗುವ ಕಠಾವು ಯಂತ್ರಗಳು ಜಿಲ್ಲೆಯ ರೈತರ ಸಂಪೂರ್ಣ
ಬೇಡಿಕೆಗಳನ್ನು ಪೂರೈಸಲೂ ಕೂಡ ಅಸಾಧ್ಯವಾಗಿದೆ. ಬಾಡಿಗೆ ಕೇಂದ್ರಗಳು ಭತ್ತ ಕಠಾವು ಯಂತ್ರಗಳಿಗೆ ಪ್ರತೀ ಗಂಟೆಗೆ 1600 ರು. ಬಾಡಿಗೆ ನಿಗದಿಪಡಿಸಿದ್ದು, ರೈತರು ಮುಂಚಿತವಾಗಿ ಬುಕ್ ಮಾಡಿ, 20 % ಹಣವನ್ನು ಮುಂಗಡ ಠೇವಣಿಯಾಗಿ ಇಡಬೇಕಾಗಿದೆ ಎಂದು ಸತ್ಯನಾರಾಯಣ ಉಡುಪ ವಿವರ ನೀಡಿದ್ದಾರೆ.

ಮಳೆಯ ಕಾರಣ ಕಠಾವು ವಿಳಂಬವಾಗಿದ್ದಲ್ಲದೇ, ಹವಾಮಾನ ಇಲಾಖೆಯ ಸೂಚನೆಯಂತೆ ಮುಂದಿನ ವಾರದಲ್ಲಿ ಪುನ: ಮಳೆ ಪ್ರಾರಂಭವಾಗಬಹುದೆಂಬ ಆತಂಕದಲ್ಲಿ ರೈತರು ಪೈಪೋಟಿಗೆ ಬಿದ್ದವರಂತೆ ಕಠಾವಿಗೆ ಮುಂದಾಗಿದ್ದಾರೆ. ಇದನ್ನೆ ನೆಪವಾಗಿಟ್ಟುಕೊಂಡು, ಯಂತ್ರ ಬಾಡಿಗೆದಾರರು ಬಾಡಿಗೆಯನ್ನು 2500 ರು.ಗಳಿಂದ 2800 ರು.ಗಳವರೆಗೆ ಪ್ರತಿ ಗಂಟೆಗೆ ರೈತರಿಂದ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ ಎಂದು ಉಡುಪ ಮಾಹಿತಿ ನೀಡಿದ್ದಾರೆ.

ಈ ಕಾರಣದಿಂದ ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಹಿರಿಯಡ್ಕ ಮುಂಡಾಜೆಯ ಸುರೇಶ ನಾಯಕ್ ನೇತೃತ್ವದಲ್ಲಿ ಕೆಲವು ಯಂತ್ರ ಸರಬರಾಜುದಾರರನ್ನು ಸಂಪರ್ಕಿಸಿ, ಮಾತುಕತೆ ನೆಡೆಸಿತು. ಭಾರತೀಯ ಕಿಸಾನ್ ಸಂಘದ ಗ್ರಾಮ ಸಮಿತಿಗಳ ಮೂಲಕ ಅಥವಾ ಗ್ರಾಮಗಳ ರೈತರು ಒಂದು ಗುಂಪಾಗಿ ತಮಗೆ ಅಗತ್ಯವಿರುವಷ್ಟು ಯಂತ್ರಗಳನ್ನು ತಿಳಿಸಿದಲ್ಲಿ, 2000 ರು.ಗಳಿಂದ 2200 ರು.ಗಳ ಗರಿಷ್ಠ ದರದಲ್ಲಿ ಭತ್ತ ಕಠಾವು ಯಂತ್ರಗಳನ್ನು ಒದಗಿಸಿಕೊಡಲು ಸರಬರಾಜುದಾರರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಉಡುಪ ಸ್ಪಷ್ಟಪಡಿಸಿದ್ದಾರೆ.

ಈ ಹಾರ್ವೆಸ್ಟ್ರ್ ಯಂತ್ರಗಳು ಬೆಲ್ಟ್ ಆಧಾರಿತವಾಗಿದ್ದು, ನೀರಿರುವ ಗದ್ದೆಗಳಲ್ಲೂ ಕಟಾವು ಮಾಡಲು ಸಾಧ್ಯವಿದೆ. ಅದೇ ರೀತಿ ಟಯರ್ ಆಧಾರಿತ ಯಂತ್ರಗಳನ್ನು ಬೇಕಿದ್ದರೆ ತರಿಸಲು ತಯಾರಿದ್ದು, ಅದನ್ನು ಪ್ರತಿ ಗಂಟೆಗೆ 1800 ರು.ಗಳಂತೆ ಬಾಡಿಗೆಗೆ ನೀಡಲೂ ಸಾಧ್ಯವಿರುವುದಾಗಿ ಯಂತ್ರ ಸರಬರಾಜುದಾರರು ತಿಳಿಸಿದ್ದರೂ, ನೀರಿನ ಗದ್ದೆಗಳಲ್ಲಿ ಕಠಾವು ಮಾಡಲು ಕಷ್ಟಸಾಧ್ಯವೆಂದು ಮಾತುಕತೆಯಲ್ಲಿ ಅಭಿಪ್ರಾಯಕ್ಕೆ ಬರಲಾಯಿತು ಎಂದು ಉಡುಪ ತಿಳಿಸಿದ್ದಾರೆ.

ಈ ರೀತಿ ಭಾರತೀಯ ಕಿಸಾನ್ ಸಂಘದ ಗ್ರಾಮ ಸಮಿತಿಗಳ ಮೂಲಕ ಅಥವಾ ಗ್ರಾಮಗಳ ರೈತರು ಒಂದು ಗುಂಪಾಗಿ, ಕಠಾವು ಯಂತ್ರಕ್ಕೆ ಬೇಡಿಕೆ ಸಲ್ಲಿಸಿದರೆ ಅಂತಹ ರೈತರ ಗುಂಪಿಗೆ ಯಂತ್ರಗಳನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಸಹಕಾರ ನೀಡಲು ಸಂಘಟನೆ ತಯಾರಿದೆ. ಹೆಚ್ಚು ಹೆಚ್ಚು ಕಠಾವು ಪ್ರದೇಶಗಳಿದ್ದಲ್ಲಿ, ಕನಿಷ್ಠ ಬಾಡಿಗೆಗೆ ಯಂತ್ರ
ಸರಬರಾಜುದಾರರು ಮುಂದಾಗುತ್ತಾರೆ. ಇದಕ್ಕಿಂತ ಕಡಿಮೆ ದರದಲ್ಲಿ ಕಠಾವು ಯಂತ್ರಗಳನ್ನು ಒದಗಿಸಲು ಯಾವುದೇ ಯಂತ್ರ ಸರಬರಾಜುದಾರರು ತಯಾರಿದ್ದರೆ, ಆ ಬಗ್ಗೆ ಸಂಪರ್ಕಿಸಿದಲ್ಲಿ ರೈತರ ಹಿತದೃಷ್ಠಿಯಿಂದ ಅಂತಹವರ ಮಾಹಿತಿಯನ್ನೂಪ್ರಕಟ ಮಾಡಲು ಸಂಘಟನೆ ಬದ್ದವಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಬಿ.ವಿ.ಪೂಜಾರಿ ಪೆರ್ಡೂರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ಅವರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

ಈ ಬಗ್ಗೆ ಸುರೇಶ ನಾಯಕ್ (9480016147, 8971465847), ಭಾ.ಕಿ. ಸಂ.ಪದಾಧಿಕಾರಿಗಳಾದ ಸತ್ಯನಾರಾಯಣ ಉಡುಪ ಜಪ್ತಿ (9448843888), ಕುಂದಾಪುರ ತಾಲೂಕಿನ ಪ್ರ.ಕಾರ್ಯದರ್ಶಿ ವೆಂಕಟೇಶ ಹೆಬ್ಬಾರ್ ಹೊಸ್ಕೋಟೆ (9844425186), ಉಡುಪಿ ತಾಲೂಕಿನ ಪ್ರ.ಕಾರ್ಯದರ್ಶಿ ಆಸ್ತೀಕ ಶಾಸ್ತ್ರಿ ಗುಂಡ್ಮಿ (9019646953), ಕಾರ್ಕಳ ತಾಲೂಕಿನ ಪ್ರ. ಕಾರ್ಯದರ್ಶಿ ಗೋವಿಂದರಾಜ್ ಭಟ್ ಕಡ್ತಲ (9880232804), ಉಡುಪಿ ಕಾರ್ಯಾಲಯ (0820-2536450), ಕಾರ್ಕಳ ಕಾರ್ಯಾಲಯ (08258-233035), ಕುಂದಾಪುರ ಕಾರ್ಯಾಲಯ (08254-235469) ಗಳಿಗೆ ಸಂಪರ್ಕಿಸಬಹುದೆಂದು ಭಾ. ಕಿ. ಸಂ. ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ಮೂರು ವರ್ಷಗಳಿಂದ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಗೆ ಈ ಬಗ್ಗೆ ಸಂಘಟನೆ ಮನವಿ ಮಾಡಿಕೊಳ್ಳುತ್ತಿದ್ದು, ಕಳೆದ ವರ್ಷ ಕೃಷಿ ಇಲಾಖಾ ಜಂಟಿ ನಿರ್ದೇಶಕರು ಸಭೆ ಕರೆದಿದ್ದರೂ, ಯಂತ್ರ ಸರಬರಾಜುದಾರರ್ಯಾರೂ ಬಾರದ ಕಾರಣ ಗೊಂದಲದಲ್ಲಿ ಕೊನೆಗೊಂಡಿತ್ತು. ಆದರೆ ಈ ವರ್ಷ ಜಿಲ್ಲಾಧಿಕಾರಿಗಳು ಅಕ್ಟೋಬರ್ 29ರಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ರೈತ ಪ್ರತಿನಿಧಿಗಳ ಹಾಗೂ ಯಂತ್ರ ಸರಬರಾಜುದಾರ ಸಭೆ ಕರೆದಿರುವ ಬಗ್ಗೆ ಸಂಘಟನೆಗೆ ಆಮಂತ್ರಣ ಬಂದಿದೆಯಾದರೂ ಈ ಪ್ರಯತ್ನ ಮೊದಲೇ ಆಗ ಬೇಕಿತ್ತು, ಈಗ ವಿಳಂಬವಾಯಿತು ಎಂದು ಸಂಘಟನೆ ಅಬಿಪ್ರಾಯಪಟ್ಟಿದೆ.

http://www.udupibits.in news

ಉಡುಪಿ: ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ಮತ್ತು ರೈತ ಸೂರ್ಯ ಯೋಜನೆಯಲ್ಲಿನ ಅವ್ಯವಹಾರ ಸಹಿತ ಪ್ರಮುಖ ಐದು ಪ್ರಮುಖ ಪ್ರಕರಣಗಳ ವಿರುದ್ಧ ಜಿಲ್ಲಾ ಕೃಷಿಕ ಸಂಘದ ಸದಸ್ಯರು ಇಂದು (18.10.2014) ಪೂರ್ವಾಹ್ನ ಉಡುಪಿಯ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರವರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಹೊಸ ಪಂಪು ವಿದ್ಯುತ್ ಸಂಪರ್ಕಕ್ಕೆ 10 ಸಾವಿರ ರು. ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡುವುದು, ವಿದ್ಯುತ್ ದರ ಏರಿಕೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಲೈನ್ ಮೆನ್ ಗಳನ್ನು ನೇಮಕಾತಿ ಮಾಡದಿರುವುದರ ವಿರುದ್ಧವೂ ಕೃಷಿಕರು ಪ್ರತಿಭಟಿಸಿದರು. ರೈತ ಸೂರ್ಯ ಯೋಜನೆಯಲ್ಲಿ ರಾಜ್ಯದ ರೈತರು ಪಾಲ್ಗೊಳ್ಳಬೇಕೆಂದು ಪ್ರಚಾರಪಡಿಸಿದ ಅಲ್ಪ ಕಾಲದಲ್ಲಿಯೇ ಆನ್ ಲೈನ್ ನಲ್ಲಿ ಎಲ್ಲಾ ಕೋಟಾ ಮುಕ್ತಾಯಗೊಂಡಿರುವುದು ಈ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಅನುಮಾನಕ್ಕೆ ಕಾರಣವಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೃಷಿಕರು ಸರಕಾರವನ್ನು ಒತ್ತಾಯಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯುತ್ ನಿರ್ವಹಣೆಗಾಗಿ ಲೈನ್ ಮೆನ್ ಗಳ ಕೊರತೆಯಿದ್ದು, ಕೂಡಲೇ ಲೈನ್ ಮೆನ್ ಗಳನ್ನು ನೇಮಕಾತಿ ಮಾಡುವ ಮೂಲಕ ಈ ಕೊರತೆಯನ್ನು ನೀಗಿಸಬೇಕು, ಈ ಬಾರಿ ಸಾಕಷ್ಟು ಮಳೆಯಾಗಿರುವುದರಿಂದ ವಿದ್ಯುತ್ ಲೋಡ್ ಶೆಡ್ಡಿಂಗ್ ಕೈಬಿಡಬೇಕು ಮತ್ತು ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ದರ ಅಧಿಕವಿರುವುದರಿಂಝದ ವಿದ್ಯುತ್ ದರ ಕಡಿಮೆ ಮಾಡಬೇಕು ಎಂದೂ ಕೃಷಿಕರು ರಾಜ್ಯ ಸರಕಾರವನ್ನು ಆಗ್ರಹಿಸಿದರು.

ವಿದ್ಯುತ್ ಕ್ಷೇತ್ರದಲ್ಲಿನ ಹಲವು ಸಮಸ್ಯೆಗಳಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾ ಶಕ್ತಿಯ ಕೊರತೆ ಮತ್ತು ಭ್ರಷ್ಟಾಚಾರವೇ ಕಾರಣವಾಗಿದೆ ಎಂದು ಪ್ರತಿಭಟನಾ ಸಭೆಯನ್ನುದ್ಧೇಶಿಸಿ ಮಾತನಾಡಿದ ಸಂಘದ ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು ಆರೋಪಿಸಿದರು.

ಪ್ರತಿಭಟನಾ ಸಭೆಯ ಬಳಿಕ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾ ಕೃಷಿಕ ಸಂಘದ ಪದಾಧಿಕಾರಿಗಳು ಕಾರ್ಯನಿವರ್ಾಹಕ ಇಂಜಿನಿಯರ್ ರವರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಟ್ ಕುದಿ, ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್, ಕೋಶಾಧಿಕಾರಿ ಪಾಂಡುರಂಗ ನಾಯಕ್ ಹಿರಿಯಡ್ಕ, ಕಾರ್ಯದರ್ಶಿ ರವೀಂದ್ರ ಪೂಜಾರಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಉಡುಪಿ: ಬಿಜೆಪಿ ರೈತ ಮೋರ್ಛಾ ರಾಜ್ಯ ಸಮಿತಿ ಕರೆಯಂತೆ ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಛಾ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಆಗಸ್ಟ್ 4ರಂದು ಬೆಳಗ್ಗೆ ಉಡುಪಿ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಸಿ, ಮೆಸ್ಕಾಂ ಅಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಅನಿಯಮಿತ ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕು, ಕನಿಷ್ಟ 12 ಗಂಟೆ 3 ಫೆಸ್ ವಿದ್ಯುತ್ ಪೂರೈಸಬೇಕು, ಸುಟ್ಟುಹೋದ ಟ್ರಾನ್ಸ್ ಫಾರ್ಮರ್ ಗಳನ್ನು ತಕ್ಷಣ ಬದಲಾಯಿಸಬೇಕು, ರೈತರ ಪಂಪ್ ಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, ಹಳೆಯ ತಂತಿಗಳನ್ನು ಮತ್ತು ಕಂಬಗಳನ್ನು ಬದಲಿಸಿ ವಿದ್ಯುತ್ ನಷ್ಟ ತಪ್ಪಿಸಿ ರೈತರ ಪಂಪ್ ಸೆಟ್ ಗಳನ್ನು ಉಳಿಸಬೇಕು, ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಬೇಕು ಹಾಗೂ ಲೈನ್ ಮ್ಯಾನ್ ಗಳ ಕೊರತೆ ನೀಗಿಸಬೇಕು ಎಂಬ ಬೇಡಿಕೆಗಳನ್ನು ಸರಕಾರ ಮತ್ತು ಮೆಸ್ಕಾಂ ಮುಂದಿಡಲಾಯಿತು.

ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿದ್ಯುತ್ ಕೊಡಿ, ಇಲ್ಲವೇ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಸವಾಲು ಹಾಕಿದರು. ರೈತಮೋರ್ಛಾ ಉಡುಪಿ ಗ್ರಾಮಾಂತರ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮಾತನಾಡಿ, ಒಂದು ತಿಂಗಳಲ್ಲಿ 28 ದಿನ ಸದನದಲ್ಲಿ ನಿದ್ದೆ ಮಾಡಿದ ಸಿದ್ಧರಾಮಯ್ಯರಿಂದ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ, ಉತ್ತಮ ಆಡಳಿತ ನೀಡುತ್ತಾರೆಂದು ನಿರೀಕ್ಷಿಸಲೂ ಸಾಧ್ಯವಿಲ್ಲ, ರಾಜ್ಯದಲ್ಲಿರುವುದು ರೈತ ವಿರೋಧಿ ಸರಕಾರವೆಂದು ಆರೋಪಿಸಿದರು.

ರೈತಮೋರ್ಛಾ ಜಿಲ್ಲಾಧ್ಯಕ್ಷ ದೇವದಾಸ ಹೆಬ್ಬಾರ್, ಪ್ರ.ಕಾರ್ಯದರ್ಶಿ ರಾಘವೇಂದ್ರ ಉಪ್ಪೂರು, ಪಕ್ಷದ ಮುಖಂಡರಾದ ಶ್ಯಾಮಲಾ ಕುಂದರ್, ವಿಲಾಸ್ ನಾಯಕ್, ಜಯಂತಿ ವಾಸುದೇವ, ಶ್ಯಾಮಪ್ರಸಾದ ಕುಡ್ವ, ಸುಭಾಶಿತ್ ಶೆಟ್ಟಿಗಾರ್, ಸುರೇಶ್ ನಾಯಕ್ ಕೊಯಿಲಾಡಿ, ಶೈಲೇಂದ್ರ, ಸಂಧ್ಯಾ ರಮೇಶ್, ಅಶೋಕ್ ಕುಮಾರ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ವೀಣಾ ಶೆಟ್ಟಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಉಡುಪಿ: ಆವರಣವಿಲ್ಲದ ಬಾವಿಯ ಪಕ್ಕ ಹುಲ್ಲು ಕೊಯ್ಯುತ್ತಿರುವಾಗ ಅಕಸ್ಮಾತ್ ಕಾಲು ಜಾರಿ ಬಾವಿಗೆ ಬಿದ್ದು ಅವಿವಾಹಿತ ಯುವತಿ ದೀಪಾ (21) ಮೃತಪಟ್ಟ ದುರ್ಘಟನೆ ಆದಿತ್ಯವಾರ ಸಂಜೆ ಚೇರ್ಕಾಡಿ ಗ್ರಾಮದ ಬೆನಗಲ್ ಎಂಬಲ್ಲಿ ಸಂಭವಿಸಿದೆ.
ಈ ಬಗ್ಗೆ ಮೃತಳ ಅಣ್ಣ ಸುರೇಶ್ ನಾಯ್ಕ ನೀಡಿದ ದೂರಿನ ಆಧಾರದಲ್ಲಿ ಬ್ರಹ್ಮಾವರ ಠಾಣೆಯ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಡುಪಿ: ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ನಿವಾಸಿ ಮುಕ್ತಾನಂದ ಶೆಟ್ಟಿ (48) ಎಂಬವರು ಹುಲ್ಲು ಕಠಾವು ಮಾಡುತ್ತಿದ್ದಾಗ ಅಕಸ್ಮಾತ್ ಬಾವಿಗೆ ಬಿದ್ದು
ಮೃತಪಟ್ಟಿದ್ದಾರೆ.
ಈ ಬಗ್ಗೆ ಮೃತರ ಸಹೋದರ ಚಂದ್ರಹಾಸ ಶೆಟ್ಟಿ ನೀಡಿದ ದೂರಿನ ಪ್ರಕಾರ ಕಾರ್ಕಳ ಠಾಣೆಯ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.