Posts Tagged ‘ವಸತಿ ನಿಲಯ’

ಉಡುಪಿ: ಆವರಣ ಗೋಡೆಯಿಂದ ಬಿದ್ದು ಕೈ ಮೂಳೆ ಮುರಿತಕ್ಕೊಳಗಾದ, ಕಾರ್ಕಳ ತಾಲೂಕಿನ ಮುನಿಯಾಲಿನಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯದ ವಿದ್ಯಾರ್ಥಿ ತುರ್ತು ಚಿಕಿತ್ಸೆ ಒದಗಿಸದೆ ವಸತಿ ನಿಲಯದ ವಾರ್ಡನ್ ಹಾಗೂ ಅಡುಗೆ ಸಿಬ್ಬಂದಿ ನಿರ್ಲಕ್ಷಿಸಿ ಅಮಾನವೀಯತೆ ಮೆರೆದ ವಿದ್ಯಾಮಾನ ನಡೆದಿದೆ.

ಅಜೆಕಾರಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸುರೇಶ್ ಎಂಬವರ ಪುತ್ರ ರಾಘವೇಂದ್ರ (11) ಎಂಬಾತ ವಸತಿ ನಿಲಯದಲ್ಲಿದ್ದು, ಆರನೇ ತರಗತಿ ಕಲಿಯುತ್ತಿದ್ದಾನೆ. ನವೆಂಬರ್ 9ರಂದು ಆದಿತ್ಯವಾರ ಸಂಜೆ 5 ಗಂಟೆ ಸುಮಾರಿಗೆ ಆವರಣ ಗೋಡೆ ಮೇಲೆ ಹಾಕಿದ್ದ ಬಟ್ಟೆಗಳನ್ನು ತೆಗೆಯಲೆಂದು ಗೋಡೆ ಹತ್ತಿದ ಸಮಯದಲ್ಲಿ ಕೆಳಗೆ ಬಿದ್ದು ರಾಘವೇಂದ್ರನ ಕೈ ಮೂಳೆ ಮುರಿದಿತ್ತು.

ಈ ಸಂದರ್ಭದಲ್ಲಿ ವಸತಿ ನಿಲಯದಲ್ಲಿ ಅಡುಗೆ ಸಿಬ್ಬಂದಿ ಭಾಸ್ಕರ್ ಎಂಬವರು ಇದ್ದರಾದರೂ ಅವರು ಯಾವುದೇ ಗಾಯಾಳು ವಿದ್ಯಾರ್ಥಿಗೆ ಯಾವುದೇ ತುರ್ತು ಚಿಕಿತ್ಸೆ ಒದಗಿಸಲು ಮುಂದಾಗಲಿಲ್ಲ. ಬದಲಾಗಿ ವಿಷಯವನ್ನು ವಾರ್ಡನ್ ಸಂತೋಷ್ ಅವರಿಗೆ ತಿಳಿಸಿ ಕೈ ತೊಳೆದುಕೊಂಡರೆನ್ನಲಾಗಿದೆ.

ಘಟನೆ ನಡೆದ ದಿನವೇ ವಿಷಯ ವಾರ್ಡನ್ ಸಂತೋಷ್ ಅವರ ಗಮನಕ್ಕೆ ಬಂದಿತ್ತಾದರೂ, ಅವರು ಸಹ ವಸತಿ ನಿಲಯಕ್ಕೆ ಬಂದು ಗಾಯಾಳು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ಒದಗಿಸುವ ಪ್ರಾಥಮಿಕ ಕರ್ತವ್ಯವವನ್ನು ಸಹ ಅವರು ಮಾಡಲಿಲ್ಲವೆನ್ನಲಾಗಿದೆ. ಈ ವಸತಿ ನಿಲಯದ ಸಿಬ್ಬಂದಿಗಳು ಎಷ್ಟೊಂದು ಬೇಜವಾಬ್ದಾರರು ಎಂದರೆ, ಬಾಲಕ ಬಿದ್ದು ಕೈ ಮುರಿಸಿಕೊಂಡ ಬಗ್ಗೆ ಕನಿಷ್ಟ ಮಾಹಿತಿಯನ್ನೂ ಕೂಡಾ ಯಾರೊಬ್ಬರೂ ಬಾಲಕನ ಹೆತ್ತವರಿಗೆ ತಿಳಿಸಲಿಲ್ಲವೆಂದು ದೂರಲಾಗಿದೆ.

ಘಟನೆ ನಡೆದ ಮರುದಿನ ಮಧ್ಯಾಹ್ನದ ವರೆಗೂ ಗಾಯಾಳು ವಿದ್ಯಾರ್ಥಿಯನ್ನು ಕಡೆಗಣಿಸಿದ ವಸತಿ ನಿಲಯದ ಅಧಿಕೃತರು, ಮರುದಿನ ಅಪರಾಹ್ನ ಬಾಲಕನನ್ನು ಬೈಕೊಂದರಲ್ಲಿ ಕರೆದುಕೊಂಡು ಹೋಗಿ ತಂದೆ ಸುರೇಶ್ ಅವರ ಸ್ವಾಧೀನದಲ್ಲಿ ಬಿಟ್ಟು ಕೈ ತೊಳೆದುಕೊಂಡಿದ್ದಾರೆ. ಹೆತ್ತವರು ಸೋಮವಾರ ರಾತ್ರಿ ಗಾಯಾಳು ರಾಘವೇಂದ್ರನನ್ನು ಉಡುಪಿಯ ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆತಂದು ಒಳರೋಗಿಯಾಗಿ ದಾಖಲಿಸಿದ್ದಾರೆ.

ಉಡುಪಿ: ಕಿನ್ನಿಮೂಲ್ಕಿಯಲ್ಲಿರುವ ವಿದ್ಯಾರ್ಥಿನಿಯರ ಸರಕಾರಿ ವಸತಿ ನಿಲಯದ ವಾರ್ಡನ್ ವಿದ್ಯಾರ್ಥಿನಿಯರನ್ನು ಹೀಯಾಳಿಸುವುದು, ಜಾತಿ ಕೇಳಿ ಅವಮಾನ ಮಾಡುವುದು ಇತ್ಯಾದಿ ಮಾಡುತ್ತಿದ್ದಾನೆ. ಇದಕ್ಕಾಗಿ ಈತ ವಸತಿ ನಿಲಯಕ್ಕೆ ಬಂದು ವಿದ್ಯಾರ್ಥಿನಿಯರ ಕ್ಷಮೆ ಯಾಚಿಸಬೇಕು ಎಂದು ಎಬಿವಿಪಿ ನಾಯಕಿ ಕು. ಅಕ್ಷತಾ ಒತ್ತಾಯಿಸಿದ್ದಾರೆ.
ಎಸ್ಸಿ, ಎಸ್ಟಿ ಮತ್ತು ಓಬಿಸಿ ಹಾಸ್ಟೆಲ್ ಗಳ ಸುಧಾರಣೆಗೆ ಆಗ್ರಹಿಸಿ ಎಬಿವಿಪಿ ವತಿಯಿಂದ ಉಡುಪಿ ಸರ್ವಿಸ್ ಬಸ್ ನಿಲ್ದಾಣ ಬಳಿಯ ಗಡಿಯಾರ ಗೋಪುರದ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಪ್ರದರ್ಶನದಲ್ಲಿ ಅವರು ಮಾತನಾಡುತ್ತಿದ್ದರು.
ಉಡುಪಿಯ ಸರಕಾರಿ ಹಾಸ್ಟೆಲ್ ಗಳು ಸಮಸ್ಯೆಗಳ ಗೂಡಾಗಿದೆ. ಇಲ್ಲಿ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಹಾಸ್ಟೆಲ್ ಗಳಲ್ಲಿರುವ ವಿದ್ಯಾರ್ಥಿಗಳ ಸಮ್ಯೆಗಳನ್ನು ಕೇಳಲು ಯಾರೂ ಬರುತ್ತಿಲ್ಲ. ಹಾಸ್ಟೆಲ್ ನಲ್ಲಿರುವ ಸಮಸ್ಯೆಗಳ ಬಗ್ಗೆ ಬಗ್ಗೆ ಅಧಿಕಾರಿಗಳ ಸಭೆಗಳೂ ನಡೆಯುತ್ತಿಲ್ಲ. ಹಾಸ್ಟೆಲ್ ಗಳಲ್ಲಿ ಕೊಚ್ಚಿಲಕ್ಕಿ ಅನ್ನ ಮಾಡುತ್ತಾರೆ. ಕೊಚ್ಚಿಲಕ್ಕಿ ಅನ್ನ ತಿಂದು ಅಭ್ಯಾಸವಿಲ್ಲದ ಕಾರಣ ನಾವೆಲ್ಲ ದೈಹಿಕವಾಗಿ ಗಟ್ಟಿಯಾಗಿಲ್ಲ ಎಂದು ಹೇಳಿದ ಅಕ್ಷತಾ, ಹಾಸ್ಟೆಲ್ ಗಳಲ್ಲಿ ಗ್ರಂಥಾಲಯ, ಕಂಪ್ಯೂಟರ್ ಇತ್ಯಾದಿ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ನೂರ ಹತ್ತಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳಿರುವ ಹಾಸ್ಟೆಲ್ಗಳಲ್ಲಿ ಕೇವಲ ಮೂರು ಶೌಚಾಲಯಗಳಿವೆ. ಇದು ಎಲ್ಲಿಗೆ ಸಾಕು ಎಂದು ಇದೇ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಪ್ರಶ್ನಿಸಿದರು.
ರಾಜ್ಯದಲ್ಲಿ ಪ್ರವೇಶ ಬಯಸುವ ವಿದ್ಯಾಥರ್ಿಗಳಲ್ಲಿ 80 ಶೇಕಡಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಲು ಈಗ ಇರುವ ಹಾಸ್ಟೆಲ್ ಗಳಿಗೆ ಆಗುತ್ತಿಲ್ಲ. ಅರ್ಜಿ ಸಲ್ಲಿಸುವ 50 ಶೇಕಡಾ ವಿದ್ಯಾರ್ಥಿಗಳಿಗಾದರೂ ಪ್ರವೇಶಾವಕಾಶ ಕಲ್ಪಿಸಿಕೊಡಲು ಅಗತ್ಯವಾದ ಹಾಸ್ಟೆಲ್ ಗಳನ್ನು ಪ್ರಾರಂಭಿಸಬೇಕು, ಶೇ.45 ರಷ್ಟು ಹಾಸ್ಟೆಲ್ಗಳು ಬಾಡಿಗೆ ಕಟ್ಟಡಗಳಲ್ಲಿವೆ. ಖಾಸಗಿಯವರಿಗೆ ಪ್ರತೀ ವರ್ಷ ಕೋಟ್ಯಂತರ ರು. ಬಾಡಿಗೆ ನೀಡುವ ಮೂಲಕ ಖಾಸಗಿಯವರನ್ನು ಉದ್ಧಾರ ಮಾಡಲಾಗುತ್ತಿದೆ. ಹಾಗಾಗಿ ಹಸ್ಟೆಲ್ಗಳಿಗಾಗಿ ಸ್ವಂತ ಕಟ್ಟಡಗಳನ್ನು ನಿರ್ಮಿಸಬೇಕು, ಶೇ. 55 ವಿದ್ಯಾರ್ಥಿಗಳಿಗೆ ಕೊಠಡಿ
ಸೌಲಭ್ಯಗಳಿಲ್ಲವಾದುದರಿಂದ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಬೇಕು, ಶೇ. 95 ರಷ್ಟು ವಿದ್ಯಾರ್ಥಿಗಳಿಗೆ ಸ್ನಾನಗೃಹಗಳ ಕೊರತೆ ಇದ್ದು, ಹೆಚ್ಚುವರಿ ಸ್ನಾನಗೃಹಗಳನ್ನು ನಿರ್ಮಿಸಬೇಕು, ಉನ್ನತ ಪದವೀಧರರನ್ನು ಖಾಯಂ ನಿಲಯ ಪಾಲಕರನ್ನಾಗಿ ನೇಮಿಸಬೇಕು, ಹಾಸ್ಟೆಲ್ ಗಳ ಸಮರ್ಥ ನಿರ್ವಹಣೆಗಾಗಿ ಸ್ವಾಯತ್ತ ಪ್ರಾಧಿಕಾರವನ್ನು ರಚಿಸಬೇಕು, ವಿದ್ಯಾರ್ಥಿಯೊಬ್ಬನ ಆಹಾರ ಭತ್ಯೆಯನ್ನು 850 ರು. ನಿಂದ 2500 ರು.ಗೆ ಹೆಚ್ಚಿಸಬೇಕು, ಅಧ್ಯಯನ ಕೊಠಡಿ, ಟೇಬಲ್, ಕುರ್ಚಿ, ಯುಪಿಎಸ್, ಕಂಪ್ಯೂಟರ್, ಇಂಟರ್ ನೆಟ್, ಗ್ರಂಥಾಲಯ ಸೌಲಭ್ಯವನ್ನು ಒದಗಿಸಬೇಕು, ಸೋಲಾರ್ ವ್ಯವಸ್ಥೆ ಅಳವಡಿಸಬೇಕು, ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಒದಗಿಸಬೇಕು, ವಿದ್ಯಾರ್ಥಿನಿಯರ ಹಾಸ್ಟೆಲ್ ಗಳಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಒದಗಿಸಬೇಕು, ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜ್ಯಾರಿಗೊಳಿಸಬೇಕು, ಮೊಬೈಲ್ ವಾರ್ಡನ್ ಗಳನ್ನು ವಜಾಗೊಳಿಸಬೇಕು ಇತ್ಯಾದಿ ಬೇಡಿಕೆಗಳನ್ನು ಪ್ರತಿಭಟನಾಕಾರರು ಸರಕಾರದ ಮುಂದಿಟ್ಟರು.
ಪ್ರತಿಭಟನಾ ಪ್ರದರ್ಶನದ ಬಳಿಕ ಗಡಿಯಾರ ಗೋಪುರದಿಂದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ತಾಲೂಕು ವಿಸ್ತರಣಾಧಿಕಾರಿ ಕಚೇರಿಗೆ ಭೇಟಿ ನಿಡಿದ ವಿದ್ಯಾರ್ಥಿಗಳು, ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು. ವಿದ್ಯಾರ್ಥಿ ನಾಯಕರಾದ ಅಕ್ಷಯ್ ಕಮ್ಮರಡಿ, ಶಶಿರ್, ಲೋಕೇಶ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.