Posts Tagged ‘ವಿದ್ಯಾರ್ಥಿ’

ಉಡುಪಿ: ಆವರಣ ಗೋಡೆಯಿಂದ ಬಿದ್ದು ಕೈ ಮೂಳೆ ಮುರಿತಕ್ಕೊಳಗಾದ, ಕಾರ್ಕಳ ತಾಲೂಕಿನ ಮುನಿಯಾಲಿನಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯದ ವಿದ್ಯಾರ್ಥಿ ತುರ್ತು ಚಿಕಿತ್ಸೆ ಒದಗಿಸದೆ ವಸತಿ ನಿಲಯದ ವಾರ್ಡನ್ ಹಾಗೂ ಅಡುಗೆ ಸಿಬ್ಬಂದಿ ನಿರ್ಲಕ್ಷಿಸಿ ಅಮಾನವೀಯತೆ ಮೆರೆದ ವಿದ್ಯಾಮಾನ ನಡೆದಿದೆ.

ಅಜೆಕಾರಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸುರೇಶ್ ಎಂಬವರ ಪುತ್ರ ರಾಘವೇಂದ್ರ (11) ಎಂಬಾತ ವಸತಿ ನಿಲಯದಲ್ಲಿದ್ದು, ಆರನೇ ತರಗತಿ ಕಲಿಯುತ್ತಿದ್ದಾನೆ. ನವೆಂಬರ್ 9ರಂದು ಆದಿತ್ಯವಾರ ಸಂಜೆ 5 ಗಂಟೆ ಸುಮಾರಿಗೆ ಆವರಣ ಗೋಡೆ ಮೇಲೆ ಹಾಕಿದ್ದ ಬಟ್ಟೆಗಳನ್ನು ತೆಗೆಯಲೆಂದು ಗೋಡೆ ಹತ್ತಿದ ಸಮಯದಲ್ಲಿ ಕೆಳಗೆ ಬಿದ್ದು ರಾಘವೇಂದ್ರನ ಕೈ ಮೂಳೆ ಮುರಿದಿತ್ತು.

ಈ ಸಂದರ್ಭದಲ್ಲಿ ವಸತಿ ನಿಲಯದಲ್ಲಿ ಅಡುಗೆ ಸಿಬ್ಬಂದಿ ಭಾಸ್ಕರ್ ಎಂಬವರು ಇದ್ದರಾದರೂ ಅವರು ಯಾವುದೇ ಗಾಯಾಳು ವಿದ್ಯಾರ್ಥಿಗೆ ಯಾವುದೇ ತುರ್ತು ಚಿಕಿತ್ಸೆ ಒದಗಿಸಲು ಮುಂದಾಗಲಿಲ್ಲ. ಬದಲಾಗಿ ವಿಷಯವನ್ನು ವಾರ್ಡನ್ ಸಂತೋಷ್ ಅವರಿಗೆ ತಿಳಿಸಿ ಕೈ ತೊಳೆದುಕೊಂಡರೆನ್ನಲಾಗಿದೆ.

ಘಟನೆ ನಡೆದ ದಿನವೇ ವಿಷಯ ವಾರ್ಡನ್ ಸಂತೋಷ್ ಅವರ ಗಮನಕ್ಕೆ ಬಂದಿತ್ತಾದರೂ, ಅವರು ಸಹ ವಸತಿ ನಿಲಯಕ್ಕೆ ಬಂದು ಗಾಯಾಳು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ಒದಗಿಸುವ ಪ್ರಾಥಮಿಕ ಕರ್ತವ್ಯವವನ್ನು ಸಹ ಅವರು ಮಾಡಲಿಲ್ಲವೆನ್ನಲಾಗಿದೆ. ಈ ವಸತಿ ನಿಲಯದ ಸಿಬ್ಬಂದಿಗಳು ಎಷ್ಟೊಂದು ಬೇಜವಾಬ್ದಾರರು ಎಂದರೆ, ಬಾಲಕ ಬಿದ್ದು ಕೈ ಮುರಿಸಿಕೊಂಡ ಬಗ್ಗೆ ಕನಿಷ್ಟ ಮಾಹಿತಿಯನ್ನೂ ಕೂಡಾ ಯಾರೊಬ್ಬರೂ ಬಾಲಕನ ಹೆತ್ತವರಿಗೆ ತಿಳಿಸಲಿಲ್ಲವೆಂದು ದೂರಲಾಗಿದೆ.

ಘಟನೆ ನಡೆದ ಮರುದಿನ ಮಧ್ಯಾಹ್ನದ ವರೆಗೂ ಗಾಯಾಳು ವಿದ್ಯಾರ್ಥಿಯನ್ನು ಕಡೆಗಣಿಸಿದ ವಸತಿ ನಿಲಯದ ಅಧಿಕೃತರು, ಮರುದಿನ ಅಪರಾಹ್ನ ಬಾಲಕನನ್ನು ಬೈಕೊಂದರಲ್ಲಿ ಕರೆದುಕೊಂಡು ಹೋಗಿ ತಂದೆ ಸುರೇಶ್ ಅವರ ಸ್ವಾಧೀನದಲ್ಲಿ ಬಿಟ್ಟು ಕೈ ತೊಳೆದುಕೊಂಡಿದ್ದಾರೆ. ಹೆತ್ತವರು ಸೋಮವಾರ ರಾತ್ರಿ ಗಾಯಾಳು ರಾಘವೇಂದ್ರನನ್ನು ಉಡುಪಿಯ ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆತಂದು ಒಳರೋಗಿಯಾಗಿ ದಾಖಲಿಸಿದ್ದಾರೆ.

# ವಿದ್ಯೆ ಯಾರೊಬ್ಬರ ಸ್ವತ್ತೂ ಅಲ್ಲ. ಸತತ ಅಭ್ಯಾಸ ಮತ್ತು ಪ್ರಯತ್ನದಿಂದ ಉನ್ನತ ಶಿಕ್ಷಣ ಪಡೆಯಲು ಸಾಧ್ಯ ಎಂಬುದನ್ನು ಈ ಬಾರಿಯ ಸಿಇಟಿಯಲ್ಲಿ 3249ನೇ ರ್ಯಾಂಕ್ ಪಡೆದು ವೈದ್ಯಕೀಯ ಶಿಕ್ಷಣ ಪಡೆಯಲು ಅರ್ಹತೆ ಪಡೆದಿರುವ ರಾಜ್ಯದ ಮೂಲ ನಿವಾಸಿಗಳಾದ ಕೊರಗ ಸಮುದಾಯದ ಪ್ರಪ್ರಥಮ ವಿದ್ಯಾರ್ಥಿನಿ ಕು.ಸ್ನೇಹಾ ನಿರೂಪಿಸಿದ್ದಾರೆ.

ರಾಜ್ಯದ ಮೂಲ ನಿವಾಸಿಗಳಾದ ಜೇನು ಕುರುಬ ಮತ್ತು ಕೊರಗ ಸಮುದಾಯಗಳಲ್ಲಿ ಈ ಸಾಧನೆ ಮಾಡಿದ ರಾಜ್ಯದ ಪ್ರಥಮ ವಿದ್ಯಾರ್ಥಿ ಎನ್ನುವ ಸಾದನೆ ಇವರದ್ದು.

ಕುಂದಾಪುರ ಸಮೀಪದ ತೆಕ್ಕಟ್ಟೆಯ ಉಳ್ತೂರಿನ ಸ್ನೇಹಾ, ಕೊರಗ ಸಮುದಾಯದ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿರುವ ಕೊರಗ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷರಾದ ಗಣೇಶ್ ಹಾಗೂ ಅಂಕೋಲದ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿರುವ ಜಯಶ್ರೀ ದಂಪತಿಗಳ ಪ್ರಥಮ ಪುತ್ರಿ. ಇನ್ನೂರ್ವ ಪುತ್ರಿ ನೇಹಾ. ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು 1ರಿಂದ 4ನೇ ತರಗತಿಯವರೆಗೆ ಅಂಕೋಲದ ನಿರ್ಮಲ ಹೃದಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದ ಈಕೆ, 5ನೇ ತರಗತಿಯನ್ನು ಕುಂದಾಪುರದ ಹೋಲಿ ರೋಜರಿ ಶಾಲೆಯಲ್ಲಿ ಪಡೆದಿದ್ದಾಳೆ. 6ನೇ ತರಗತಿಯಿಂದ 10ನೇ ತರಗತಿ ವರೆಗಿನ ವಿಧ್ಯಾಭ್ಯಾಸವನ್ನು ಹೆಬ್ರಿಯ ಚಾರ ನವೋದಯ ವಿದ್ಯಾಲಯದಲ್ಲಿ ಪಡೆದ ಈಕೆ,
ಎಸ್.ಎಸ್.ಎಲ್.ಸಿ.ಯಲ್ಲಿ ಶೇ.89.33 ಅಂಕ ಪಡೆದಿದ್ದಾಳೆ.

ನಂತರ ಮೂಡುಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ (ಪಿ.ಸಿ.ಎಂ.ಬಿ) ಶಿಕ್ಷಣ ಪಡೆದು, ಶೇ.93.5 ಅಂಕ ಪಡೆದಿದ್ದಾರೆ. ಅಲ್ಲದೇ ಸಿ.ಇ.ಟಿ.ಯಲ್ಲಿ ಮೆಡಿಕಲ್ ವಿಭಾಗ ಅಲ್ಲದೇ, ಇಂಜಿನಿಯರಿಂಗ್ ವಿಭಾಗದಲ್ಲಿ 10875ನೇ ರ್ಯಾಂಕ್ ಪಡೆದಿದ್ದಾರೆ.

ಚೆಸ್ ಮತ್ತು ಕನ್ನಡ ಪುಸ್ತಕಗಳನ್ನು ಓದುವ ಅಭ್ಯಾಸ ಹೊಂದಿದ್ದು, ಹೆತ್ತವರ ಆಶಯದಂತೆ ವೈದ್ಯಕೀಯ ಶಿಕ್ಷಣ ಪಡೆದು ಗ್ರಾಮೀಣ ಪ್ರದೇಶದ ಜನತೆಗೆ ಸೇವೆ ನೀಡುವ ಗುರಿಯನ್ನು ಹೊಂದಿದ್ದಾರೆ.

ಮಗಳ ಈ ಸಾಧನೆ ಕುರಿತು ಹೆಮ್ಮೆಯಿಂದ ಮಾತನಾಡಿದ ತಂದೆ ಗಣೇಶ್, ಮಗಳ ಸಾಧನೆ ತುಂಬಾ ಸಂತೋಷ ತಂದಿದ್ದು, ಮಗಳು ವೈದ್ಯಳಾಗಿ ತಮ್ಮ ಸಮುದಾಯ ಮತ್ತು ಗ್ರಾಮೀಣ ಜನರಿಗೆ ಉತ್ತಮ ಸೇವೆ ನೀಡಲಿ, ತುಂಬಾ ಕಷ್ಟಪಟ್ಟು ಮಗಳಿಗೆ ಶಿಕ್ಷಣ ನೀಡಿದ್ದು, ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ಆಸ್ತಿ ಪಾಸ್ತಿ ಮಾಡದೇ ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎನ್ನುತ್ತಾರೆ.

ನಾಲ್ಕನೇ ವಯಸ್ಸಿನಲ್ಲಿ ತನ್ನ ಕೈ ಹಿಡಿದು ಪಲ್ಸ್ ಪರೀಕ್ಷಿಸುತ್ತೇನೆ ಎಂದಿದ್ದ ಮಗಳು ವೈದ್ಯಳಾಗಲಿ ಎಂದು ತಾನು ಆಶಿಸಿದ್ದು, ಈಗ ಅದನ್ನು ನನಸು ಮಾಡುತ್ತಿದ್ದಾಳೆ ಎನ್ನುವ ತಾಯಿ ಜಯಶ್ರೀ, ಮಗಳು ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಮಗಳು ಹಾಸ್ಟೆಲ್ನಲ್ಲಿದ್ದ ವೇಳೆ ಆಗಾಗ್ಗೇ ದೂರವಾಣಿ ಮೂಲಕ ಸಂಪರ್ಕಿಸಿ ಓದಲು ಪ್ರೋತ್ಸಾಹ ನೀಡಿದ್ದಾಗಿ ಹೇಳುತ್ತಾರೆ.

ಹೆಚ್ಚು ಮೂಢನಂಬಿಕೆಗಳನ್ನು ಹೊಂದಿರುವ ಈ ಸಮುದಾಯದಲ್ಲಿ ಹಿಂದೆ ಮಕ್ಕಳು ಮನೆಯಿಂದ ಹೊರ ಹೋದರೆ ತಮ್ಮ ದೇವರು ಶಾಪ ನೀಡುತ್ತಾನೆ ಎಂಬ ನಂಬಿಕೆಯಿದ್ದು, ಈ ಎಲ್ಲಾ ಮೂಢನಂಬಿಕೆಗಳನ್ನು ಬದಿಗೊತ್ತಿ ತನ್ನ ಹೆಚ್ಚಿನ ಅವಧಿಯ ವಿಧ್ಯಾಭ್ಯಾಸವನ್ನು ಮನೆಯಿಂದ ಹೊರಗೆ ಸುಮಾರು 7 ವರ್ಷ ಹಾಸ್ಟಲ್ ನಲ್ಲಿ ಉಳಿದುಕೊಂಡು ಉನ್ನತ ಶಿಕ್ಷಣ ಹಾದಿಯಲ್ಲಿ ನಡೆದಿರುವ ಕು.ಸ್ನೇಹಾಳನ್ನು ಜಿಲ್ಲಾ ಐಟಿಡಿಪಿ ಅಧಿಕರಿ ಉದಯಕುಮರ್ ಶೆಟ್ಟಿ ಅಭಿನಂಧಿಸಿದ್ದಾರೆ.

ಇತ್ತೀಚೆಗೆ ಈ ಸಮುದಾಯದಲ್ಲಿ ಪಿ.ಹೆಚ್.ಡಿ ಪದವಿ ಪಡೆದಿರುವ ಸಬಿತಾ ಹಾಗೂ ಈಗ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ಪಡೆದಿರುದ ಕು.ಸ್ನೇಹಾರವರ ಸಾಧನೆ ಇಡೀ ಸಮುದಾಯಕ್ಕೆ ಸ್ಪೂರ್ತಿ ನೀಡಿದೆ.
– ಬಿ.ಶಿವಕುಮಾರ್, ವಾರ್ತಾ ಇಲಾಖೆ, ಉಡುಪಿ.

ಉಡುಪಿ: ಅಲೆವೂರು ಗ್ರಾಮದ ಪಡು ಅಲೆವೂರು ಶಾಲೆ ಬಳಿಯ ಚಪಾತಿ ನಗರ ನಿವಾಸಿ ರಮೇಶ್ ಎಸ್.ಬಳೆಗಾರ ಎಂಬವರ ಪುತ್ರಿ ಹೇಮಲತಾ (17) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜ.20 ರ ರಾತ್ರಿ ಗಂಟೆ 9.30 ರ ಬಳಿಕ ಜ.21 ರ ನಸುಕಿನ 2 ಗಂಟೆಯ ಮಧ್ಯೆ ಯಾವುದೋ ವಿಷ ಪದಾರ್ಥ ಸೇವಿಸಿದ ಪರಿಣಾಮವಾಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಹೇಮಲತಾಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಹುಡುಗಿ ಜ.24 ರ ಮಧ್ಯಾಹ್ನ 2 ಗಂಟೆಗೆ ಮೃತಪಟ್ಟಳು.
ಅಲೆವೂರು ನೆಹರೂ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದ ಹೇಮಲತಾ 9 ನೇ ತರಗತಿಯಲ್ಲಿ ಎರಡು ಬಾರಿ ಅನುತ್ತೀರ್ಣಳಾದ ಕಾರಣ 2012 ರ ಜೂನ್ನಲ್ಲಿ ಶಾಲೆ ತೊರೆದಿದ್ದಳು. ಬಳಿಕ ಅಲೆವೂರಿನಲ್ಲಿರುವ ತಾಯಿಯ ಬಳೆ ಅಂಗಡಿಯಲ್ಲಿ ತಾಯಿಯೊಂದಿಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳೆನ್ನಲಾಗಿದೆ.
ಈಕೆಗೆ ಹತ್ತಿರದ ಸಂಬಂಧಿಯೊಂದಿಗೆ ವಿವಾಹ ನಿಶ್ಚಯವಾಗಿದ್ದು, ಆತ ಈಕೆಯ ಮನೆಗೆ ಆಗಾಗ ಬರುತ್ತಿದ್ದ ಎನ್ನಲಾಗಿದೆ. ಈತ ಹೊಡೆದ ಕಾರಣ ಮನನೊಂದು ಹೇಮಲತಾ ವಿಷ ಕುಡಿದಳೆಂದು ಹೇಳಲಾಗುತ್ತಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.

ಉಡುಪಿ: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಎಂಎಸ್ ಡಬ್ಲ್ಯು ವಿದ್ಯಾರ್ಥಿಗಳಿಗಾಗಿ ವಿಭಾಗದ ಸ್ಪರ್ಷ ಕಮ್ಯುನಿಟಿ ಡೆವಲೆಪ್ ಮೆಂಟ್ ನ ವತಿಯಿಂದ ಇಂದು ಬೆಳಗ್ಗೆ ಕಾಲೇಜಿನಲ್ಲಿ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಪತ್ರಕರ್ತ ಶ್ರೀರಾಮ ದಿವಾಣ ಮಾಹಿತಿಹಕ್ಕು ಕಾಯ್ದೆ ಬಗ್ಗೆ ಉಪನ್ಯಾಸ ನೀಡಿದರು. ವಿಭಾಗ ಮುಖ್ಯಸ್ಥರಾದ ಫಾ.ಸಿ.ಬರ್ಬೋಝ ಹಾಗೂ ಪ್ರಾದ್ಯಾಪಕಿ ಲಿಲ್ಲಿ ಪುಷ್ಪಾ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು. ವಿದ್ಯಾರ್ಥಿ ಪ್ರತಿನಿಧಿ ಧನಂಜಯ್ ಕಾರ್ಯಕ್ರಮ ನಿರ್ವಹಿಸಿದರು.