Posts Tagged ‘ವಿದ್ಯುತ್’

http://www.udupibits.in news

ಉಡುಪಿ: ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ಮತ್ತು ರೈತ ಸೂರ್ಯ ಯೋಜನೆಯಲ್ಲಿನ ಅವ್ಯವಹಾರ ಸಹಿತ ಪ್ರಮುಖ ಐದು ಪ್ರಮುಖ ಪ್ರಕರಣಗಳ ವಿರುದ್ಧ ಜಿಲ್ಲಾ ಕೃಷಿಕ ಸಂಘದ ಸದಸ್ಯರು ಇಂದು (18.10.2014) ಪೂರ್ವಾಹ್ನ ಉಡುಪಿಯ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರವರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಹೊಸ ಪಂಪು ವಿದ್ಯುತ್ ಸಂಪರ್ಕಕ್ಕೆ 10 ಸಾವಿರ ರು. ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡುವುದು, ವಿದ್ಯುತ್ ದರ ಏರಿಕೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಲೈನ್ ಮೆನ್ ಗಳನ್ನು ನೇಮಕಾತಿ ಮಾಡದಿರುವುದರ ವಿರುದ್ಧವೂ ಕೃಷಿಕರು ಪ್ರತಿಭಟಿಸಿದರು. ರೈತ ಸೂರ್ಯ ಯೋಜನೆಯಲ್ಲಿ ರಾಜ್ಯದ ರೈತರು ಪಾಲ್ಗೊಳ್ಳಬೇಕೆಂದು ಪ್ರಚಾರಪಡಿಸಿದ ಅಲ್ಪ ಕಾಲದಲ್ಲಿಯೇ ಆನ್ ಲೈನ್ ನಲ್ಲಿ ಎಲ್ಲಾ ಕೋಟಾ ಮುಕ್ತಾಯಗೊಂಡಿರುವುದು ಈ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಅನುಮಾನಕ್ಕೆ ಕಾರಣವಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೃಷಿಕರು ಸರಕಾರವನ್ನು ಒತ್ತಾಯಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯುತ್ ನಿರ್ವಹಣೆಗಾಗಿ ಲೈನ್ ಮೆನ್ ಗಳ ಕೊರತೆಯಿದ್ದು, ಕೂಡಲೇ ಲೈನ್ ಮೆನ್ ಗಳನ್ನು ನೇಮಕಾತಿ ಮಾಡುವ ಮೂಲಕ ಈ ಕೊರತೆಯನ್ನು ನೀಗಿಸಬೇಕು, ಈ ಬಾರಿ ಸಾಕಷ್ಟು ಮಳೆಯಾಗಿರುವುದರಿಂದ ವಿದ್ಯುತ್ ಲೋಡ್ ಶೆಡ್ಡಿಂಗ್ ಕೈಬಿಡಬೇಕು ಮತ್ತು ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ದರ ಅಧಿಕವಿರುವುದರಿಂಝದ ವಿದ್ಯುತ್ ದರ ಕಡಿಮೆ ಮಾಡಬೇಕು ಎಂದೂ ಕೃಷಿಕರು ರಾಜ್ಯ ಸರಕಾರವನ್ನು ಆಗ್ರಹಿಸಿದರು.

ವಿದ್ಯುತ್ ಕ್ಷೇತ್ರದಲ್ಲಿನ ಹಲವು ಸಮಸ್ಯೆಗಳಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾ ಶಕ್ತಿಯ ಕೊರತೆ ಮತ್ತು ಭ್ರಷ್ಟಾಚಾರವೇ ಕಾರಣವಾಗಿದೆ ಎಂದು ಪ್ರತಿಭಟನಾ ಸಭೆಯನ್ನುದ್ಧೇಶಿಸಿ ಮಾತನಾಡಿದ ಸಂಘದ ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು ಆರೋಪಿಸಿದರು.

ಪ್ರತಿಭಟನಾ ಸಭೆಯ ಬಳಿಕ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾ ಕೃಷಿಕ ಸಂಘದ ಪದಾಧಿಕಾರಿಗಳು ಕಾರ್ಯನಿವರ್ಾಹಕ ಇಂಜಿನಿಯರ್ ರವರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಟ್ ಕುದಿ, ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್, ಕೋಶಾಧಿಕಾರಿ ಪಾಂಡುರಂಗ ನಾಯಕ್ ಹಿರಿಯಡ್ಕ, ಕಾರ್ಯದರ್ಶಿ ರವೀಂದ್ರ ಪೂಜಾರಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಉಡುಪಿ: ಬಿಜೆಪಿ ರೈತ ಮೋರ್ಛಾ ರಾಜ್ಯ ಸಮಿತಿ ಕರೆಯಂತೆ ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಛಾ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಆಗಸ್ಟ್ 4ರಂದು ಬೆಳಗ್ಗೆ ಉಡುಪಿ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಸಿ, ಮೆಸ್ಕಾಂ ಅಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಅನಿಯಮಿತ ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕು, ಕನಿಷ್ಟ 12 ಗಂಟೆ 3 ಫೆಸ್ ವಿದ್ಯುತ್ ಪೂರೈಸಬೇಕು, ಸುಟ್ಟುಹೋದ ಟ್ರಾನ್ಸ್ ಫಾರ್ಮರ್ ಗಳನ್ನು ತಕ್ಷಣ ಬದಲಾಯಿಸಬೇಕು, ರೈತರ ಪಂಪ್ ಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, ಹಳೆಯ ತಂತಿಗಳನ್ನು ಮತ್ತು ಕಂಬಗಳನ್ನು ಬದಲಿಸಿ ವಿದ್ಯುತ್ ನಷ್ಟ ತಪ್ಪಿಸಿ ರೈತರ ಪಂಪ್ ಸೆಟ್ ಗಳನ್ನು ಉಳಿಸಬೇಕು, ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಬೇಕು ಹಾಗೂ ಲೈನ್ ಮ್ಯಾನ್ ಗಳ ಕೊರತೆ ನೀಗಿಸಬೇಕು ಎಂಬ ಬೇಡಿಕೆಗಳನ್ನು ಸರಕಾರ ಮತ್ತು ಮೆಸ್ಕಾಂ ಮುಂದಿಡಲಾಯಿತು.

ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿದ್ಯುತ್ ಕೊಡಿ, ಇಲ್ಲವೇ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಸವಾಲು ಹಾಕಿದರು. ರೈತಮೋರ್ಛಾ ಉಡುಪಿ ಗ್ರಾಮಾಂತರ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮಾತನಾಡಿ, ಒಂದು ತಿಂಗಳಲ್ಲಿ 28 ದಿನ ಸದನದಲ್ಲಿ ನಿದ್ದೆ ಮಾಡಿದ ಸಿದ್ಧರಾಮಯ್ಯರಿಂದ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ, ಉತ್ತಮ ಆಡಳಿತ ನೀಡುತ್ತಾರೆಂದು ನಿರೀಕ್ಷಿಸಲೂ ಸಾಧ್ಯವಿಲ್ಲ, ರಾಜ್ಯದಲ್ಲಿರುವುದು ರೈತ ವಿರೋಧಿ ಸರಕಾರವೆಂದು ಆರೋಪಿಸಿದರು.

ರೈತಮೋರ್ಛಾ ಜಿಲ್ಲಾಧ್ಯಕ್ಷ ದೇವದಾಸ ಹೆಬ್ಬಾರ್, ಪ್ರ.ಕಾರ್ಯದರ್ಶಿ ರಾಘವೇಂದ್ರ ಉಪ್ಪೂರು, ಪಕ್ಷದ ಮುಖಂಡರಾದ ಶ್ಯಾಮಲಾ ಕುಂದರ್, ವಿಲಾಸ್ ನಾಯಕ್, ಜಯಂತಿ ವಾಸುದೇವ, ಶ್ಯಾಮಪ್ರಸಾದ ಕುಡ್ವ, ಸುಭಾಶಿತ್ ಶೆಟ್ಟಿಗಾರ್, ಸುರೇಶ್ ನಾಯಕ್ ಕೊಯಿಲಾಡಿ, ಶೈಲೇಂದ್ರ, ಸಂಧ್ಯಾ ರಮೇಶ್, ಅಶೋಕ್ ಕುಮಾರ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ವೀಣಾ ಶೆಟ್ಟಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಉಡುಪಿ: ಇಲ್ಲಿನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ನಿಯಮಿತ) ನೌಕರರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗಾಗಿ ಆದಿತ್ಯವಾರ ನಡೆದ ಚುನಾವಣೆಯಲ್ಲಿ, ಒಂದು ಗುಂಪಿಗೆ ಸೇರಿದ 11 ಮಂದಿ ಮತ್ತು ಇನ್ನೊಂದು ಗುಂಪಿಗೆ ಸೇರಿದ 4 ಮಂದಿ ವಿಜಯಿಯಾಗಿದ್ದಾರೆ.

11 ಸಾಮಾನ್ಯ, 2 ಮಹಿಳಾ ಮೀಸಲು, ತಲಾ ಒಂದೊಂದು ಹಿಂದುಳಿದ ವರ್ಗ ಮತ್ತು
ಪ.ಜಾತಿ/ಪ.ಪ.ಪಂಗಡದ ಮೀಸಲು ಸ್ಥಾನಗಳಿಗೆ, ಹೀಗೆ ಒಟ್ಟು 15 ಸ್ಥಾನಗಳಿಗಾಗಿ ಚುನಾವಣೆ ನಡೆದಿತ್ತು. ಎರಡು ಗುಂಪುಗಳು ತಮ್ಮ ಪರವಾಗಿ 15 ಮಂದಿಯನ್ನು ಚುನಾವಣಾ
ಕಣಕ್ಕಿಳಿಸಿತ್ತು. ಓರ್ವ ಪಕ್ಷೇತರ ಅಭ್ಯರ್ಥಿಯೂ ಸ್ಪರ್ಧಿಸಿದ್ದರು. ಒಟ್ಟು 671 ಮತದಾರರಿದ್ದು, 640 ಮಂದಿ ಮತ ಚಲಾಯಿಸಿದ್ದರು.

ಕೆ.ಎಂ.ನಂದಕುಮಾರ್ ಗುಂಪಿನ ಎಸ್.ಗಣರಾಜ ಭಟ್, ಪ್ರಾಣೇಶ್ ಎಸ್.ಕೆ., ಎನ್.ನವೀನ್ ಕುಮಾರ್, ಎಂ.ತಿಮ್ಮಪ್ಪ, ಅಣ್ಣಪ್ಪ, ವಿಜಯ ಕುಮಾರ್, ಬಾಬಣ್ಣ ಪೂಜಾರಿ,
ಕೆ.ಎಂ.ನಂದಕುಮಾರ್ (ಸಾಮಾನ್ಯ ಮೀಸಲು), ಉಷಾ ಆರ್.ಐತಾಳ್, ಭಾಗ್ಯಲಕ್ಷ್ಮಿ ಎಚ್.ಕೆ. (ಮಹಿಳಾ ಮೀಸಲು), ಉಪೇಂದ್ರ ವಾಗ್ಲೆ (ಹಿಂದುಳಿದ ವರ್ಗ ಮೀಸಲು) ಹಾಗೂ ಕೆ.ರಂಗಪ್ಪ (ಪ.ಜಾತಿ/ಪ.ಪಂಗಡ ಮೀಸಲು), ಕೆ.ಸದಾಶಿವ ಭಟ್ ಗುಂಪಿನ ಕುಮಾರ್, ಚಿದಾನಂದ ಕೆ., ಸದಾನಂದ ಪೂಜಾರಿ, ಕೆ.ಸದಾಶಿವ ಭಟ್ (ಸಾಮಾನ್ಯ ಮೀಸಲು) ಆಡಳಿತ ಮಂಡಳಿ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ.

ಉಡುಪಿ: ಕುಡುಕ ಮಹಾಶಯನೋರ್ವ ಇದ್ದಕ್ಕಿದ್ದಂತೆ ವಿದ್ಯುತ್ ಕಂಬವೇರಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ವಿದ್ಯಾಮಾನ ಅ.6 ರಂದು ಮಧ್ಯಾಹ್ನ ಉಡುಪಿಯಲ್ಲಿ ನಡೆಯಿತು. ಮಂಗಳೂರಿನವನೆನ್ನಲಾದ ರಾಜೇಶ್ ಹಾಗೂ ಪ್ರವೀಣ್ ಇಬ್ಬರೂ ಮಿತ್ರರು. ಇವರು ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಉಡುಪಿ ನಗರದ ಗೀತಾಂಜಲಿ ಟಾಕೀಸ್ ಪಕ್ಕ ರಸ್ತೆ ಬದಿ ನಿಂತುಕೊಂಡು ಹರಟುತ್ತಿದ್ದರು. ಇಬ್ಬರೂ ವಿಪರೀತ ಮದ್ಯಪಾನ ಮಾಡಿದ್ದರು.
ಸುಮಾರು ಒಂದೂಕಾಲರ ಸಮಯಕ್ಕೆ ಪರಿಸರದಲ್ಲಿದ್ದವರು ನೋಡ ನೋಡುತ್ತಿದ್ದಂತೆಯೇ ಯಾವುದೇ ಭಯವಿಲ್ಲದೆ ದಿಢೀರನೇ ರಾಜೇಶ್ (40) ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬ
ಏರತೊಡಗಿದ್ದಾನೆ. ಸ್ಥಳದಲ್ಲಿದ್ದವರಿಗೆ ಆತಂಕವಾಗಿದೆ. ಅತ್ತ ಆತ ವಿದ್ಯುತ್ ಕಂಬವೇರುತ್ತಿದ್ದಂತೆಯೇ, ಇತ್ತ ಕೆಲವರು ನೇರವಾಗಿ ಮೆಸ್ಕಾಂಗೆ ಮೋಬೈಲ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಕಂಬವೇರಿದ ರಾಜೇಶ್ ನೇರವಾಗಿ ವಿದ್ಯುತ್ ಬಲ್ಬ್ ಮೇಲೆ ಹೋಗಿ ಕುಳಿತಿದ್ದಾನೆ, ತಂತಿಯನ್ನು ಹಿಡಿದುಕೊಂಡು ನಿಂತಿದ್ದಾನೆ. ಮೇಲಿನ ಭಾಗದಲ್ಲಿದ್ದ ತಂತಿಯನ್ನು ಹಿಡಿದುಕೊಂಡು, ಕೆಳ ಭಾಗದಲ್ಲಿದ್ದ ತಂತಿಯಲ್ಲಿ ನಡೆದು ಸರ್ಕಸ್ ಮಡಿದ್ದಾನೆ. ಸ್ಥಳದಲ್ಲಿ ನೂರಾರು ಜನರು ಆಸಕ್ತಿ, ಕುತೂಹಲದಿಮದ ಜಮಾಯಿಸಿದ್ದಾರೆ.
ಅಷ್ಟರಲ್ಲಿ ಸ್ಥಳಕ್ಕೆ ಬಂದ ‘ಹೊಯ್ಸಳ’ ಸಿಬ್ಬಂದಿಗಳು ಸಾರ್ವಜನಿಕರ ಜೊತೆ ಸೇರಿಕೊಂಡು ಕೆಳಗಿಳಿಯುವಂತೆ ರಾಜೇಶನಿಗೆ ಮನವಿ ಮಾಡತೊಡಗಿದ್ದಾರೆ. ಮನವೊಲಿಸುವ ಪ್ರಕ್ರಿಯೆ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಮಾರು ಅರ್ಧ ಗಂಟೆಯ ಪ್ರಹಸನದ ಬಳಿಕ ವಿದ್ಯುತ್ ತಂತಿಯಿಂದ ಪಕ್ಕದಲ್ಲೇ ಇದ್ದ ವೆಸ್ಟ್ ಕೋಸ್ಟ್ ಕಟ್ಟಡದ ಮೊದಲ ಮಹಡಿಯ ಸಿಟೌಟ್ ಗೆ ಸಾಹಸದಿಂದಲೇ ಜಂಪ್ ಮಾಡಿದ್ದಾನೆ. ಇಲ್ಲಿಗೆ ಒಂದು ಅಧ್ಯಾಯ
ಮುಕ್ತಯವಾಗಿದೆ.
ವೆಸ್ಟ್ ಕೋಸ್ಟ್ ಬಿಲ್ಡಿಂಗ್ ನ ಮೊದಲ ಮಹಡಿಯಿಂದ ಎರಡನೇ ಮಹಡಿಗೂ ಸಾಹಸ ಮಾಡುತ್ತಲೇ ಏರಿ ಹೋಗಿದ್ದಾನೆ. ಇಲ್ಲಿಂದ ಪಕ್ಕದ ಆಭರಣ ಜ್ಯುವೆಲ್ಲರ್ಸ್ ಕಟ್ಟಡದ ಮೇಲ್ಭಗಕ್ಕೆ ಹೋಗಿದ್ದಾನೆ. ಅಲ್ಲಿಂದ ಪಕ್ಕದ ಮತ್ತೊಂಡು ಹಂಚಿನ ಮನೆ ಕಟ್ಟಡಕ್ಕೆ ಹಾರಿದ್ದಾನೆ. ಅಷ್ಟರಲ್ಲಿ ಕೆಲವು ಮಂದಿ ಕಾರ್ಮಿಕ ಯುವಕರು ಆತನನ್ನು ಹಿಡಿದಿಡುವಲ್ಲಿ
ಯಶಸ್ವಿಯಾಗಿದ್ದಾರೆ.
ಅಷ್ಟರಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಏಣಿ ಇರಿಸಿ ಆತನನ್ನು ಹಿಡಿದಿರಿಸಿದ ಸ್ಥಳಕ್ಕೆ ಹೋಗಿ, ಆತನ ಸೊಂಟಕ್ಕೆ ಹಗ್ಗ ಬಿಗಿದು ಕೆಳಕ್ಕಿಳಿಸಿದ್ದಾರೆ. ಬಳಿಕ ಹೊಯ್ಸಳದಲ್ಲಿ ಜಿಲ್ಲಾಸ್ಪತ್ರೆಗೆ ಸಾಗಿಸಿ ದಾಖಲಿಸಲಾಯಿತು.
ಅಂದಾಜು ಮುಕ್ಕಾಲು ಗಂಟೆಗಳ ಕಾಲ ಕುಡುಕ ರಾಜೇಶನ ವಿದ್ಯುತ್ ತಂತಿಯ ಮೇಲಿನ ಅಪಾಯಕಾರಿ ಸಾಹಸವನ್ನು ನೂರಾರು ಜನರು ನೋಡುತ್ತಾ ಮನೋರಂಜನೆ ಅನುಭವಿಸಿದರು. ಜೊತೆಗೆ ಸಾರ್ವಜನಿಕರ ಆತಂಕಕ್ಕೂ ಕಾರಣನಾದ.

ಉಡುಪಿ: ಉಡುಪಿ ವಿದ್ಯುತ್ ಪರಿವೀಕ್ಷಕರ ಕಚೇರಿಯ ಉಪ ವಿದ್ಯುತ್ ಪರಿವೀಕ್ಷಕ ಎನ್.ವಿ.ಶ್ರೀನಿವಾಸ್ ಹಾಗೂ ಕಚೇರಿ ಗುಮಾಸ್ತ ಕೆ.ಶ್ರೀಧರ್ ಎಂಬವರು ಲಂಚ ಪಡೆದುದು ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನರೇಂದ್ರ ಕುಮಾರ ಗುಣಕಿ ಅವರು ಎರಡು ವರ್ಷ ಜೈಲು ಶಿಕ್ಷೆ ಮತ್ತು 4 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಪರಾಧಿಗಳು ದಂಡ ನೀಡಲು ತಪ್ಪಿದಲ್ಲಿ 4 ವಾರ ಕಾಲ
ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.
ಶಿರ್ವ ಗ್ರಾಮದ ನಿವಾಸಿ ಜೆರೋಮ್ ಬರ್ಬೋಜ ಎಂಬವರಿಗೆ ವಿದ್ಯುತ್ ಗುತ್ತಿಗೆದಾರ ಎಂಬ ಪರವಾನಿಗೆ ನೀಡುವ ನಿಟ್ಟಿನಲ್ಲಿ, ವಿದ್ಯುತ್ ಪರಿವೀಕ್ಷಕರ ಕಚೇರಿಯ ಶ್ರೀನಿವಾಸ್ ಹಾಗೂ ಶ್ರೀಧರ್ ಅವರು ಬರ್ಬೋಜರಲ್ಲಿ ಲಂಚದ ಬೇಡಿಕೆ ಮುಂದಿಟ್ಟಿದ್ದರು.
ಪರವಾನಿಗೆಗಾಗಿ ಅಧಿಕಾರಿ ಹಾಗೂ ಗುಮಾಸ್ತ ಲಂಚದ ಬೇಡಿಕೆ ಮುಂದಿಟ್ಟ ಬಗ್ಗೆ ಬರ್ಬೋಜ ಅವರು ಕನಾಟಕ ಲೋಕಾಯುಕ್ತ ಇಲಾಖೆಯ ಉಡುಪಿ ಪೋಲೀಸ್ ಠಾಣೆಗೆ 2008 ರ ಮೇ 19 ರಂದು ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಡಿವೈಎಸ್ಪಿ ಡಾ.ಪ್ರಭುದೇವ ಬಿ.ಮಾನೆ ಅವರು ಸಿಬ್ಬಂದಿಗಳ ಜೊತೆಗೆ ದಾಳಿ ನಡೆಸಿ ರೆಡ್ಹ್ಯಾಂಡಾಗಿ ಆರೋಪಿಗಳನ್ನು ದಸ್ತಗಿರಿ ಮಾಡಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.
ಲೋಕಾಯುಕ್ತ ಇನ್ಸ್ ಪೆಕ್ಟರ್ಗಳಾದ ಬೆಳ್ಳಿಯಪ್ಪ ಕೆ.ಯು ಹಾಗೂ ಬಿ.ಪಿ.ದಿನೇಶ್ ಕುಮಾರ್ ಅವರು ಪ್ರಕರಣದ ತನಿಖೆ ನಡೆಸಿದ್ದರು. 2009 ರ ಅಕ್ಟೋಬರ್ 22 ರಂದು ಇನ್ಸ್ಪೆಕ್ಟರ್ ದಿನೇಶ್ ಕುಮಾರ್ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಲೋಕಾಯುಕ್ತ ಇಲಾಖೆಯ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಭಾಸ್ಕರ ಹೆಗ್ಡೆ ವಾದಿಸಿದ್ದರು.