Posts Tagged ‘ಹಾಸ್ಟೆಲ್’

ಉಡುಪಿ: ಆವರಣ ಗೋಡೆಯಿಂದ ಬಿದ್ದು ಕೈ ಮೂಳೆ ಮುರಿತಕ್ಕೊಳಗಾದ, ಕಾರ್ಕಳ ತಾಲೂಕಿನ ಮುನಿಯಾಲಿನಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯದ ವಿದ್ಯಾರ್ಥಿ ತುರ್ತು ಚಿಕಿತ್ಸೆ ಒದಗಿಸದೆ ವಸತಿ ನಿಲಯದ ವಾರ್ಡನ್ ಹಾಗೂ ಅಡುಗೆ ಸಿಬ್ಬಂದಿ ನಿರ್ಲಕ್ಷಿಸಿ ಅಮಾನವೀಯತೆ ಮೆರೆದ ವಿದ್ಯಾಮಾನ ನಡೆದಿದೆ.

ಅಜೆಕಾರಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸುರೇಶ್ ಎಂಬವರ ಪುತ್ರ ರಾಘವೇಂದ್ರ (11) ಎಂಬಾತ ವಸತಿ ನಿಲಯದಲ್ಲಿದ್ದು, ಆರನೇ ತರಗತಿ ಕಲಿಯುತ್ತಿದ್ದಾನೆ. ನವೆಂಬರ್ 9ರಂದು ಆದಿತ್ಯವಾರ ಸಂಜೆ 5 ಗಂಟೆ ಸುಮಾರಿಗೆ ಆವರಣ ಗೋಡೆ ಮೇಲೆ ಹಾಕಿದ್ದ ಬಟ್ಟೆಗಳನ್ನು ತೆಗೆಯಲೆಂದು ಗೋಡೆ ಹತ್ತಿದ ಸಮಯದಲ್ಲಿ ಕೆಳಗೆ ಬಿದ್ದು ರಾಘವೇಂದ್ರನ ಕೈ ಮೂಳೆ ಮುರಿದಿತ್ತು.

ಈ ಸಂದರ್ಭದಲ್ಲಿ ವಸತಿ ನಿಲಯದಲ್ಲಿ ಅಡುಗೆ ಸಿಬ್ಬಂದಿ ಭಾಸ್ಕರ್ ಎಂಬವರು ಇದ್ದರಾದರೂ ಅವರು ಯಾವುದೇ ಗಾಯಾಳು ವಿದ್ಯಾರ್ಥಿಗೆ ಯಾವುದೇ ತುರ್ತು ಚಿಕಿತ್ಸೆ ಒದಗಿಸಲು ಮುಂದಾಗಲಿಲ್ಲ. ಬದಲಾಗಿ ವಿಷಯವನ್ನು ವಾರ್ಡನ್ ಸಂತೋಷ್ ಅವರಿಗೆ ತಿಳಿಸಿ ಕೈ ತೊಳೆದುಕೊಂಡರೆನ್ನಲಾಗಿದೆ.

ಘಟನೆ ನಡೆದ ದಿನವೇ ವಿಷಯ ವಾರ್ಡನ್ ಸಂತೋಷ್ ಅವರ ಗಮನಕ್ಕೆ ಬಂದಿತ್ತಾದರೂ, ಅವರು ಸಹ ವಸತಿ ನಿಲಯಕ್ಕೆ ಬಂದು ಗಾಯಾಳು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ಒದಗಿಸುವ ಪ್ರಾಥಮಿಕ ಕರ್ತವ್ಯವವನ್ನು ಸಹ ಅವರು ಮಾಡಲಿಲ್ಲವೆನ್ನಲಾಗಿದೆ. ಈ ವಸತಿ ನಿಲಯದ ಸಿಬ್ಬಂದಿಗಳು ಎಷ್ಟೊಂದು ಬೇಜವಾಬ್ದಾರರು ಎಂದರೆ, ಬಾಲಕ ಬಿದ್ದು ಕೈ ಮುರಿಸಿಕೊಂಡ ಬಗ್ಗೆ ಕನಿಷ್ಟ ಮಾಹಿತಿಯನ್ನೂ ಕೂಡಾ ಯಾರೊಬ್ಬರೂ ಬಾಲಕನ ಹೆತ್ತವರಿಗೆ ತಿಳಿಸಲಿಲ್ಲವೆಂದು ದೂರಲಾಗಿದೆ.

ಘಟನೆ ನಡೆದ ಮರುದಿನ ಮಧ್ಯಾಹ್ನದ ವರೆಗೂ ಗಾಯಾಳು ವಿದ್ಯಾರ್ಥಿಯನ್ನು ಕಡೆಗಣಿಸಿದ ವಸತಿ ನಿಲಯದ ಅಧಿಕೃತರು, ಮರುದಿನ ಅಪರಾಹ್ನ ಬಾಲಕನನ್ನು ಬೈಕೊಂದರಲ್ಲಿ ಕರೆದುಕೊಂಡು ಹೋಗಿ ತಂದೆ ಸುರೇಶ್ ಅವರ ಸ್ವಾಧೀನದಲ್ಲಿ ಬಿಟ್ಟು ಕೈ ತೊಳೆದುಕೊಂಡಿದ್ದಾರೆ. ಹೆತ್ತವರು ಸೋಮವಾರ ರಾತ್ರಿ ಗಾಯಾಳು ರಾಘವೇಂದ್ರನನ್ನು ಉಡುಪಿಯ ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆತಂದು ಒಳರೋಗಿಯಾಗಿ ದಾಖಲಿಸಿದ್ದಾರೆ.

ಭ್ರಷ್ಟ ಅಧಿಕಾರಿಗಳು, ದುಷ್ಟ ರಾಜಕಾರಣಿಗಳು..!

Posted: ಆಗಷ್ಟ್ 21, 2014 in Uncategorized
ಟ್ಯಾಗ್ ಗಳು:, , , , , , , , , , , , , , , , , , , , , , , , , , , , , , , , , , , , , , , , , , , , , , , , , ,

# ಭ್ರಷ್ಟ, ದುಷ್ಟ, ಸ್ವಾರ್ಥಿ, ಕುತಂತ್ರಿ, ಜಾತಿವಾದಿ, ನಿಷ್ಕಾಳಜಿಯ ಮಂತ್ರಿಗಳು/ ಜನಪ್ರತಿನಿಧಿಗಳು/ ರಾಜಕಾರಣಿಗಳು ಹಾಗೂ ಸರಕಾರಿ ಅಧಿಕಾರಿಗಳು/ ನೌಕರರ ಬೇಜವಾಬ್ದಾರಿ, ಹೊಣೆಗೇಡಿ, ಅದಕ್ಷ ಆಡಳಿತ ವ್ಯವಸ್ಥೆಯಿಂದಾಗಿಯೇ ಬಡವರ, ನೊಂದವರ, ಶೋಷಿತರ ಮತ್ತು ನಾಡಿನ ಬಹುತೇಕ ಯಾವುದೇ ಸಮಸ್ಯೆಗಳೂ ಪರಿಹಾರ ಕಾಣದೆ ಎಲ್ಲವೂ ನೆನೆಗುದಿಯಲ್ಲಿರಲು ಮುಖ್ಯ ಕಾರಣವಾಗಿದೆ. ಹಣ ಮತ್ತು ಮತ ಬ್ಯಾಂಕ್ ರಾಜಕಾರಣವೇ ಇವರ ಬಂಡವಾಳ.
ಎಲ್ಲಿಂದೆಲ್ಲ, ಯಾವುದರಿಂದೆಲ್ಲ ದೊಡ್ಡ ಮೊತ್ತದ ಆರ್ಥಿಕ ಲಾಭ ಇದೆಯೋ ಅಲ್ಲಿಗೆಲ್ಲ ಇಂಥವರು ಗಮನ ಕೊಡುತ್ತಾರೆ, ಭೇಟಿ ಕೊಡುತ್ತಾರೆ. ಎಲ್ಲೆಲ್ಲಿಂದೆಲ್ಲಾ ಯಾವುದೇ ಲಾಭವಿಲ್ಲವೋ ಅದರ ಕಡೆಗೆ ದಿವ್ಯ ನಿರ್ಲಕ್ಷ್ಯ. ಅಂತಿಮವಾಗಿ ಅನಿವಾರ್ಯವಾದರೆ ಭೇಟಿಯ, ಕಾಳಜಿಯ ನಾಟಕವಾಡುತ್ತಾರೆ. ಇಂಥ ನಾಟಕ ಪ್ರದರ್ಶನದಲ್ಲೂ ಪ್ರಚಾರ ಪಡೆದುಕೊಂಡು ಅಲ್ಲೂ ಲಾಭ ಮಾಡಿಕೊಳ್ಳುವ ಅಯೋಗ್ಯರು ನಮ್ಮನ್ನಾಳುವವರು.

ಯಾವುದೇ ಪ್ರಕರಣ, ವಿಷಯ, ಬೆಳವಣಿಗೆಗಳಿರಲಿ. ಅವುಗಳ ಹಾದಿ ತಪ್ಪಿಸುವುದು, ಅವುಗಳನ್ನು ತಮಗೆ ಬೇಕಾದಂತೆ ದುರ್ಬಳಕೆ ಮಾಡಿಕೊಳ್ಳುವುದು, ತಿರುಚುವುದು ಇವರೇ. ಬೆಂಕಿಯಲ್ಲಿ ಚಳಿ ಕಾಯಿಸಿಕೊಂಡಂತೆ. ಸತ್ಯದ ತಲೆ ಮೇಲೆಯೇ ಮೊಳೆ ಹೊಡೆಯುವುದರಲ್ಲಿ ಇವರದು ಎತ್ತಿದ ಕೈ. ಸುಳ್ಳನ್ನು ಸತ್ಯವೆಂದು ಬಿಂಬಿಸುವ ಕಲೆಯೂ ಇವರಿಗೆ ಕರಗತ.

ಆಗಸ್ಟ್ 18ರಂದು ಹೀಗೆಯೇ ಆಯಿತು. ಉಡುಪಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆಯಲ್ಲಿ ಉಡುಪಿ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ ಸಭೆ) ನಡೆಯಿತು. ಸಭೆಯಲ್ಲಿ ಭಾಗವಹಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಾರ್ಡನ್ ಗಿರಿಧರ ಗಾಣಿಗ ಎಂಬವರು ತಮ್ಮ ಇಲಾಖೆಯ ಸರದಿ ಬಂದಾಗ ಎದ್ದು ನಿಂತವರೆ, ಬಿಸಿಎಂ ಹಾಸ್ಟೆಲ್ ಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಪ್ರಕಟವಾದ ಪತ್ರಿಕಾ ಹೇಳಿಕೆಯೊಂದರ ಮೇಲೆ ಹರಿಹಾಯ್ದಿದ್ದರು.

ವಾರ್ಡನ್ ಗಿರಿಧರ್ ಗಾಣಿಗರು ಬಿಸಿಎಂ ಹಾಸ್ಟೆಲ್ ಗಳ ಕುಂದು ಕೊರತೆ ಬಗ್ಗೆ, ಸಮಸ್ಯೆಗಳ ಕುರಿತು, ಸರಕಾರ ಏನು ಮಾಡುತ್ತಿದೆ, ಸರಕಾರದಿಂದ ಏನೆಲ್ಲಾ ಬರುತ್ತಿದೆ, ಯಾವುದೆಲ್ಲಾ ಬರುತ್ತಿದೆ, ಎಷ್ಟು ಬರುತ್ತಿದೆ, ಇದರಲ್ಲಿ ಯಾವ ಬದಲವಣೆ, ಹೆಚ್ಚಳವನ್ನು ಸರಕಾರ ಮಾಡಬೇಕಾಗಿದೆ, ನಾವೇನು ಮಾಡುತ್ತಿದ್ದೇವೆ, ಹಾಸ್ಟೆಲ್ ವ್ಯವಸ್ಥೆ ಸುಧಾರಿಸಬೇಕಾದರೆ ಮುಂದಿನ ದಿನಗಳಲ್ಲಿ ಸರಕಾರವೇನು ಮಾಡಬೇಕು, ಶಾಸಕರಿಂದ ತಮ್ಮ ಇಲಾಖೆ ಏನನ್ನು ಬಯಸುತ್ತದೆ ಇತ್ಯಾದಿ ವಿಚಾರಗಳನ್ನು ಸಭೆಯ ಮುಂದಿಡಬೇಕಾಗಿತ್ತು. ಇದು ಅಗತ್ಯವೂ, ಅನಿವಾರ್ಯವೂ ಆಗಿದೆ. ವಾರ್ಡನ್ ಹೀಗೆ ಮಾಡಿದರಾ ಎಂದು ಕೇಳಿದರೆ ಅವರು ಹಾಗೆ ಮಾಡಲೇ ಇಲ್ಲ ಎಂಬುದಾಗಿದೆ ಉತ್ತರ.

ಉಡುಪಿಯ ಬಿಸಿಎಂ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಸ್ವಂತ ಕಟ್ಟಡವಿಲ್ಲ. ಕಳೆದ ಐದು ವರ್ಷಗಳಿಂದ ಅಲ್ಲಿ ಇಲ್ಲಿ ಬಾಡಿಗೆ ಕಟ್ಟಡದಲ್ಲಿ ಹಾಸ್ಟೆಲ್ ಕಾರ್ಯ
ನಿರ್ವಹಿಸುತ್ತಿದೆ. ಲೋಕೋಪಯೋಗಿ ಇಲಾಖೆ ನಿಗದಿಪಡಿಸಿದ ದರದಲ್ಲಿ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳಿರುವ ಉತ್ತಮ ಬಾಡಿಗೆ ಕಟ್ಟಡಗಳನ್ನು ಪಡೆದುಕೊಳ್ಳಲು
ಸಾಧ್ಯವಾಗುತ್ತಿಲ್ಲ. ಪ್ರಸ್ತುತ ತೊಟ್ಟಂ ಎಂಬಲ್ಲಿ ಹಾಸ್ಟೆಲ್ ಇದ್ದು, ಇಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದ ಕಾರಣ ಪ್ರತಿದಿನವೂ ವಿದ್ಯಾರ್ಥಿನಿಯರು ಬಹಳಷ್ಟು ಸಂಕಟಗಳನ್ನು ಅನುಭವಿಸುತ್ತಿದ್ದಾರೆ. 125 ಮಂದಿಗೆ ಈ ಹಾಸ್ಟೆಲ್ ನಲ್ಲಿ ಪ್ರವೇಶಕ್ಕೆ ಅವಕಾಶವಿದೆ. ಆದರೆ ಈಗ ಇರುವ ವಿದ್ಯಾರ್ಥಿನಿಯರ ಸಂಖ್ಯೆ ಕೇವಲ 82. ಎಷ್ಟು ಸಂಖ್ಯೆಯ ವಿದ್ಯಾರ್ಥಿನಿಯರಿಗೆ ಪ್ರವೇಶಕ್ಕೆ ಅವಕಾಶವಿದೆಯೋ, ಅಷ್ಟು ಸಂಖ್ಯೆಯ
ವಿದ್ಯಾರ್ಥಿನಿಯರು ಹಾಸ್ಟೆಲ್ ನಲ್ಲಿ ಇಲ್ಲವಾದರೂ, ಇರುವ ವಿದ್ಯಾರ್ಥಿನಿಯರಿಗೂ ಈ ಹಾಸ್ಟೆಲ್ ನಲ್ಲಿ ಶೌಚಾಲಯಗಳಿಲ್ಲ. ಬಾತ್ ರೂಮ್ ಗಳು ಇಲ್ಲ. ಡ್ರೆಸ್ಸಿಂಗ್ ರೂಮ್ ಇಲ್ಲ. ಬಟ್ಟೆ ಬರೆಗಳ ಬ್ಯಾಗ್ ಮತ್ತು ಕಾಲೇಜು ಪುಸ್ತಕಗಳ ಬ್ಯಾಗ್ ಇಡಲು
ಸ್ಥಳಾವಕಾಶವಿಲ್ಲ. ನೆಲದಲ್ಲೇ ಮಲಗಬೇಕಾದ ದುರವಸ್ಥೆ ಇದೆ. ಈ ಸತ್ಯವನ್ನು, ವಾಸ್ತವಾಂಶಗಳನ್ನು ಗಿರಿಧರ್ ಗಾಣಿಗ ಸಹಿತ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಗೆ ಸೇರಿದ ಯಾವನೇ ಅಧಿಕಾರಿ ಇದುವರೆಗೆ ತಾಲೂಕು ಮಟ್ಟದ್ದಿರಬಹುದು, ಜಿಲ್ಲಾ ಮಟ್ಟದ್ದಿರಬಹುದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳಿದ್ದಿಲ್ಲ, ಹೇಳುವುದೂ ಇಲ್ಲ. ಯಾಕೆಂದು ಅರ್ಥವಾಗುವುದಿಲ್ಲ.

ಬಿಸಿಎಂ ವಿದ್ಯಾರ್ಥಿನಿಯರ ಹಾಸ್ಟೇಲಿಗೊಂದು ಸ್ವಂತ ಕಟ್ಟಡ ಬೇಕು. ಸ್ವಂತ ಕಟ್ಟಡ ಬೇಕಾದರೆ ಸ್ವಂತ ಜಾಗ ಬೇಕು. ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಲ್ಲಿ ಮಾತುಕತೆ ನಡೆಸಿ ಸೂಕ್ತ ಆದೇಶ ಮಾಡುವ ಮೂಲಕ ಆ ಜಾಗವನ್ನು ಆದಷ್ಟು ಬೇಗ ನಮ್ಮ ಇಲಾಖೆಗೆ ಒದಗಿಸಿ ಕೊಡಬೇಕು. ಲೋಕೋಪಯೋಗಿ ಇಲಾಖೆ ನಿಗದಿಪಡಿಸಿದ ದರ ಕಡಿಮೆ ಇರುವುದರಿಂದ ಈ ದರದಲ್ಲಿ ಉತ್ತಮ ಬಾಡಿಗೆ ಕಟ್ಟಡ ಇಲಾಖೆಗೆ ಸಿಗುತ್ತಿಲ್ಲ. ಆದುದರಿಂದ ಸರಕಾರದ ಮಟ್ಟದಲ್ಲಿ ಮಾತಾಡಿ ಲೋಕೋಪಯೋಗಿ ನಿಗದಿಪಡಿಸಿದ ದರವನ್ನು ಏರಿಸಬೇಕು. ತೊಟ್ಟಂನಲ್ಲಿರುವ ವಿದ್ಯಾರ್ಥಿನಿ ನಿಲಯದಲ್ಲಿ 82 ವಿದ್ಯಾರ್ಥಿನಿಯರಿಗೆ ಇರುವುದು ಕೇವಲ ಎರಡೇ ಎರಡು ಶೌಚಾಲಯ ಮತ್ತು ಎರಡೇ ಎರಡು ಬಾತ್ ರೂಮುಗಳು ಮಾತ್ರ. ಡ್ರೆಸ್ಸಿಂಗ್ ರೂಮ್ ಇಲ್ಲವೇ ಇಲ್ಲ. ಮಲಗಲು, ಬ್ಯಾಗ್ ಗಳನ್ನು ಇಡಲು ಸ್ಥಳವಿಲ್ಲ. ಓದುವ ವಾತಾವರಣವೇ ಇಲ್ಲ ಎಂಬ ಸತ್ಯವನ್ನು ವಾರ್ಡನ್ ಗಿರಿಧರ್ ಗಾಣಿಗ ಹೇಳುವುದಿಲ್ಲ. ವಾಸ್ತವಾಂಶಗಳನ್ನು ಶಾಸಕರಿರುವ ಅಥವಾ ಸಚಿವರಿರುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳದೇ ಇದ್ದರೆ ಅಭಿವೃದ್ಧಿಯಾಗಲು ಸಾಧ್ಯವೇ ? ಕನಿಷ್ಟ ಮಟ್ಟದ ಸುಧಾರಣೆಯನ್ನಾದರೂ ಸಾಧಿಸಲು ಸಾಧ್ಯವೇ ? ಇಲ್ಲವೇ ಇಲ್ಲ. ಆದರೆ ಇದನ್ನೆಲ್ಲಾ ಇವರುಗಳು ಯಾಕಾಗಿ ಮನವರಿಕೆ ಮಾಡಿಕೊಳ್ಳುವುದಿಲ್ಲ ಎನ್ನುವುದೂ ತಿಳಿಯುವುದಿಲ್ಲ.

ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸುವಂಥ ಶಾಸಕರಿಗೂ, ಸಚಿವರಿಗೂ ಇದ್ಯಾವುದೂ ಬೇಕಾಗಿಲ್ಲ. ಇಂಥವುಗಳ ಬಗ್ಗೆ ನೈಜ ಕಾಳಜಿ ಇರುತ್ತಿದ್ದರೆ, ವಿಷಯ ಪತ್ರಿಕೆಗಳಲ್ಲಿ ಪ್ರಕಟವಾದ ಬಳಿಕವಾದರೂ ಸ್ಥಳಕ್ಕೆ ಭೇಟಿ ಕೊಡಬಹುದಿತ್ತು. ಸ್ಥಳಕ್ಕೆ ಭೇಟಿ ಕೊಡುವುದು ಬಿಡಿ, ಸತ್ಯವನ್ನು ಅರಿತುಕೊಳ್ಳಬೇಕೆಂಬ ಕನಿಷ್ಟ ಪ್ರಾಮಾಣಿಕ ಕಾಳಜಿಯೂ ಸಹ ಇವರಲ್ಲಿ ಇಲ್ಲವಾಗಿದೆ. ಇವರಿಗೆ ಅಭಿವೃದ್ಧಿ, ಪ್ರಗತಿ ಎಂದರೆ ರಸ್ತೆ ಕಾಂಕ್ರಿಟೀಕರಣ, ಡಾಮರೀಕರಣ, ಸೇತುವೆ, ದೊಡ್ಡ ದೊಡ್ಡ ಕಟ್ಟಡಗಳು ಇತ್ಯಾದಿಗಳು ಮಾತ್ರ. ಇಲ್ಲಿ ದೊಡ್ಡ ಮೊತ್ತದ ಹಣ ಸರಕಾರದಿಂದ ಬಿಡುಗಡೆಗೊಳ್ಳುತ್ತವೆ. ಇದರಲ್ಲಿ ಅಷ್ಟೇ ದೊಡ್ಡ ಮೊತ್ತದ ಕಮಿಷನ್ ಹಣವೂ ಜೇಬಿಗಿಳಿಸಲಾಗುತ್ತದೆ. ಇದಕ್ಕೇ ಇರಬೇಕು ಜನಪ್ರತಿನಿಧಿಗಳು ಹಾಗೂ ಸರಕಾರಿ ಅಧಿಕಾರಿಗಳು, ನೌಕರರು ಇದಕ್ಕೆ ಕೊಡುವಷ್ಟು ಕಾಳಜಿ ಮತ್ತು ಆಸಕ್ತಿಯನ್ನು ಇತರ ವಿಷಯಗಳ ಕಡೆಗೆ ಕೊಡದಿರುವುದು.

ಇಂಥ ವಿಷಯಗಳು ಒಂದೆರಡಲ್ಲ. ಅದೆಷ್ಟೋ ಇದೆ. ಗ್ರಾಮ ಪಂಚಾಯಿತಿಗೋ, ತಾಲೂಕು ಪಂಚಾಯಿತಿಗೋ, ಜಿಲ್ಲಾ ಪಂಚಾಯಿತಿಗೋ ಪಕ್ಷದ ಹೆಸರಿನಲ್ಲಿ ಸದಸ್ಯರಾಗಿಬಿಡುತ್ತಾರೆ. ಸದಸ್ಯರಾದ ಬಳಿಕ ಸಾಮಾನ್ಯ ಸಭೆಗಳಲ್ಲಿ ಬೆಂಚು ಬಿಸಿ ಮಾಡುವುದು ಬಿಟ್ಟರೆ ಬೇರೆ ಮಾಡುವುದೇನೂ ಇಲ್ಲ (ಎಲ್ಲರೂ ಅಲ್ಲ). ಸಭೆಯಿಂದ ನಿರ್ಗಮಿಸುವ ಮೊದಲು ಗೌರವ ಧನದ ಕವರ್ ಪಡೆದುಕೊಳ್ಳಲು ಮಾತ್ರ ಇವರು ಮರೆಯುವುದಿಲ್ಲ. ಉಳಿದ ಸಮಯಗಳಲ್ಲಿ ವರ್ಗಾವಣೆ ರಾಜಕೀಯದಲ್ಲಿ, ತಮ್ಮ ಕ್ಷೇತ್ರಗಳಲ್ಲಿ ಗುಂಪುಗಾರಿಕೆ ನಡೆಸುವುದರಲ್ಲಿ, ಸೇಡಿನ ರಾಜಕಾರಣ ನಡೆಸುವುದರಲ್ಲಿ ಸಕ್ರಿಯವಾಗಿರುತ್ತಾರೆ.

ಜನಪ್ರತಿನಿಧಿಗಳಾಗಿರುವ ಕಾರಣಕ್ಕೆ, ಸರಕಾರದ ಕಾರ್ಯಕ್ರಮ ಎಂಬ ಕಾರಣಕ್ಕೆ ಇವರಿಗೆ ಮಾಧ್ಯಮ ಪ್ರಚಾರ ಸಿಕ್ಕೇ ಸಿಗುತ್ತವೆ, ಸರಕಾರ ಮತ್ತು ಇವರು ವಯುಕ್ತಿಕವಾಗಿಯೋ, ಸಂಸ್ಥೆಗಳ ಹೆಸರಿನಲ್ಲಿ ಬಹಳಷ್ಟು ಜಾಹೀರಾತುಗಳನ್ನೂ ಮಾಧ್ಯಮಗಳಿಗೆ
ಕೊಡಮಾಡುತ್ತಾರಾದ್ದರಿಂದ ಮಾಧ್ಯಮಗಳೂ ಇವರಿಗೆ ಸಾಕಷ್ಟು ಪ್ರಚಾರವನ್ನು ಕೊಡುತ್ತವೆ, ವಿರುದ್ಧವಂತೂ ಬರೆಯುವುದಿಲ್ಲ. ಬರೆದರೂ ಅದು ಬರುವುದು ಸಣ್ಣದಾಗಿ ಒಂದು ಮೂಲೆಯಲ್ಲಿ, ಯಾರೂ ನೋಡದ ಜಾಗದಲ್ಲಿಯೇ.

ಚುನಾವಣೆ ಸಮೀಪಿಸುವಾಗ ಜನ ಮರುಳು ಯೋಜನೆಗಳ ಜ್ಯಾರಿ, ಮತದಾರರನ್ನು ಮಂಗ ಮಾಡುವ ಭಾಷಣ, ಹಾದಿ ಬೀದಿಯಲ್ಲಿ ಫ್ಲೆಕ್ಸ್ ಬ್ಯಾನರ್, ಕೌಟೌಟ್ ಗಳು. ಕಾಮಗಾರಿಗಳಿಗೆ ಸರಕಾರ ಬಿಡುಗಡೆ ಮಾಡಿದ ಹಣವನ್ನು ತಮ್ಮಪ್ಪನ ತಿಜೋರಿಯಿಂದಲೇ ಕೊಟ್ಟಿದ್ದು ಎಂಬಂತೆ ಅಲ್ಲಿಗೆ ಅಷ್ಟು ಕೋಟಿ ಕೊಟ್ಟೆ, ಇಲ್ಲಿಗೆ, ಇದಕ್ಕೆ ಇಷ್ಟು ಕೋಟಿ ಕೊಟ್ಟೆ ಎಂಬ ಪ್ರಚಾರ ಬೇರೆ. ಥೂ..

ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡುವುದೇ ತಮ್ಮ ಗುರಿ ಎಂದು ಚುನಾವಣೆಗೆ ಮೊದಲು ಬೋಂಗು ಬಿಟ್ಟು ಭಾರೀ ಸುಭಗರಾಗುವ ಇವರು, ಆಯ್ಕೆಯಾದ ಬಳಿಕ ನಡೆಸಿದ್ದು, ನಡೆಸುವುದು ಭ್ರಷ್ಟಾಚಾರವನ್ನೇ. ಭ್ರಷ್ಟರನ್ನು ರಕ್ಷಿಸುವುದೇ ದಿನಚರಿಯಾಗುತ್ತದೆ. ಇಂಥ ಗೋಮುಖವ್ಯಾಘ್ರರಿಂದಾಗಿಯೇ ನಮ್ಮ ದೇಶ ಇನ್ನೂ ಸಹ ಸುಧಾರಿಸಿಲ್ಲ. – ಶ್ರೀರಾಮ ದಿವಾಣ.

ಉಡುಪಿ: ಕಿನ್ನಿಮೂಲ್ಕಿಯಲ್ಲಿರುವ ವಿದ್ಯಾರ್ಥಿನಿಯರ ಸರಕಾರಿ ವಸತಿ ನಿಲಯದ ವಾರ್ಡನ್ ವಿದ್ಯಾರ್ಥಿನಿಯರನ್ನು ಹೀಯಾಳಿಸುವುದು, ಜಾತಿ ಕೇಳಿ ಅವಮಾನ ಮಾಡುವುದು ಇತ್ಯಾದಿ ಮಾಡುತ್ತಿದ್ದಾನೆ. ಇದಕ್ಕಾಗಿ ಈತ ವಸತಿ ನಿಲಯಕ್ಕೆ ಬಂದು ವಿದ್ಯಾರ್ಥಿನಿಯರ ಕ್ಷಮೆ ಯಾಚಿಸಬೇಕು ಎಂದು ಎಬಿವಿಪಿ ನಾಯಕಿ ಕು. ಅಕ್ಷತಾ ಒತ್ತಾಯಿಸಿದ್ದಾರೆ.
ಎಸ್ಸಿ, ಎಸ್ಟಿ ಮತ್ತು ಓಬಿಸಿ ಹಾಸ್ಟೆಲ್ ಗಳ ಸುಧಾರಣೆಗೆ ಆಗ್ರಹಿಸಿ ಎಬಿವಿಪಿ ವತಿಯಿಂದ ಉಡುಪಿ ಸರ್ವಿಸ್ ಬಸ್ ನಿಲ್ದಾಣ ಬಳಿಯ ಗಡಿಯಾರ ಗೋಪುರದ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಪ್ರದರ್ಶನದಲ್ಲಿ ಅವರು ಮಾತನಾಡುತ್ತಿದ್ದರು.
ಉಡುಪಿಯ ಸರಕಾರಿ ಹಾಸ್ಟೆಲ್ ಗಳು ಸಮಸ್ಯೆಗಳ ಗೂಡಾಗಿದೆ. ಇಲ್ಲಿ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಹಾಸ್ಟೆಲ್ ಗಳಲ್ಲಿರುವ ವಿದ್ಯಾರ್ಥಿಗಳ ಸಮ್ಯೆಗಳನ್ನು ಕೇಳಲು ಯಾರೂ ಬರುತ್ತಿಲ್ಲ. ಹಾಸ್ಟೆಲ್ ನಲ್ಲಿರುವ ಸಮಸ್ಯೆಗಳ ಬಗ್ಗೆ ಬಗ್ಗೆ ಅಧಿಕಾರಿಗಳ ಸಭೆಗಳೂ ನಡೆಯುತ್ತಿಲ್ಲ. ಹಾಸ್ಟೆಲ್ ಗಳಲ್ಲಿ ಕೊಚ್ಚಿಲಕ್ಕಿ ಅನ್ನ ಮಾಡುತ್ತಾರೆ. ಕೊಚ್ಚಿಲಕ್ಕಿ ಅನ್ನ ತಿಂದು ಅಭ್ಯಾಸವಿಲ್ಲದ ಕಾರಣ ನಾವೆಲ್ಲ ದೈಹಿಕವಾಗಿ ಗಟ್ಟಿಯಾಗಿಲ್ಲ ಎಂದು ಹೇಳಿದ ಅಕ್ಷತಾ, ಹಾಸ್ಟೆಲ್ ಗಳಲ್ಲಿ ಗ್ರಂಥಾಲಯ, ಕಂಪ್ಯೂಟರ್ ಇತ್ಯಾದಿ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ನೂರ ಹತ್ತಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳಿರುವ ಹಾಸ್ಟೆಲ್ಗಳಲ್ಲಿ ಕೇವಲ ಮೂರು ಶೌಚಾಲಯಗಳಿವೆ. ಇದು ಎಲ್ಲಿಗೆ ಸಾಕು ಎಂದು ಇದೇ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಪ್ರಶ್ನಿಸಿದರು.
ರಾಜ್ಯದಲ್ಲಿ ಪ್ರವೇಶ ಬಯಸುವ ವಿದ್ಯಾಥರ್ಿಗಳಲ್ಲಿ 80 ಶೇಕಡಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಲು ಈಗ ಇರುವ ಹಾಸ್ಟೆಲ್ ಗಳಿಗೆ ಆಗುತ್ತಿಲ್ಲ. ಅರ್ಜಿ ಸಲ್ಲಿಸುವ 50 ಶೇಕಡಾ ವಿದ್ಯಾರ್ಥಿಗಳಿಗಾದರೂ ಪ್ರವೇಶಾವಕಾಶ ಕಲ್ಪಿಸಿಕೊಡಲು ಅಗತ್ಯವಾದ ಹಾಸ್ಟೆಲ್ ಗಳನ್ನು ಪ್ರಾರಂಭಿಸಬೇಕು, ಶೇ.45 ರಷ್ಟು ಹಾಸ್ಟೆಲ್ಗಳು ಬಾಡಿಗೆ ಕಟ್ಟಡಗಳಲ್ಲಿವೆ. ಖಾಸಗಿಯವರಿಗೆ ಪ್ರತೀ ವರ್ಷ ಕೋಟ್ಯಂತರ ರು. ಬಾಡಿಗೆ ನೀಡುವ ಮೂಲಕ ಖಾಸಗಿಯವರನ್ನು ಉದ್ಧಾರ ಮಾಡಲಾಗುತ್ತಿದೆ. ಹಾಗಾಗಿ ಹಸ್ಟೆಲ್ಗಳಿಗಾಗಿ ಸ್ವಂತ ಕಟ್ಟಡಗಳನ್ನು ನಿರ್ಮಿಸಬೇಕು, ಶೇ. 55 ವಿದ್ಯಾರ್ಥಿಗಳಿಗೆ ಕೊಠಡಿ
ಸೌಲಭ್ಯಗಳಿಲ್ಲವಾದುದರಿಂದ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಬೇಕು, ಶೇ. 95 ರಷ್ಟು ವಿದ್ಯಾರ್ಥಿಗಳಿಗೆ ಸ್ನಾನಗೃಹಗಳ ಕೊರತೆ ಇದ್ದು, ಹೆಚ್ಚುವರಿ ಸ್ನಾನಗೃಹಗಳನ್ನು ನಿರ್ಮಿಸಬೇಕು, ಉನ್ನತ ಪದವೀಧರರನ್ನು ಖಾಯಂ ನಿಲಯ ಪಾಲಕರನ್ನಾಗಿ ನೇಮಿಸಬೇಕು, ಹಾಸ್ಟೆಲ್ ಗಳ ಸಮರ್ಥ ನಿರ್ವಹಣೆಗಾಗಿ ಸ್ವಾಯತ್ತ ಪ್ರಾಧಿಕಾರವನ್ನು ರಚಿಸಬೇಕು, ವಿದ್ಯಾರ್ಥಿಯೊಬ್ಬನ ಆಹಾರ ಭತ್ಯೆಯನ್ನು 850 ರು. ನಿಂದ 2500 ರು.ಗೆ ಹೆಚ್ಚಿಸಬೇಕು, ಅಧ್ಯಯನ ಕೊಠಡಿ, ಟೇಬಲ್, ಕುರ್ಚಿ, ಯುಪಿಎಸ್, ಕಂಪ್ಯೂಟರ್, ಇಂಟರ್ ನೆಟ್, ಗ್ರಂಥಾಲಯ ಸೌಲಭ್ಯವನ್ನು ಒದಗಿಸಬೇಕು, ಸೋಲಾರ್ ವ್ಯವಸ್ಥೆ ಅಳವಡಿಸಬೇಕು, ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಒದಗಿಸಬೇಕು, ವಿದ್ಯಾರ್ಥಿನಿಯರ ಹಾಸ್ಟೆಲ್ ಗಳಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಒದಗಿಸಬೇಕು, ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜ್ಯಾರಿಗೊಳಿಸಬೇಕು, ಮೊಬೈಲ್ ವಾರ್ಡನ್ ಗಳನ್ನು ವಜಾಗೊಳಿಸಬೇಕು ಇತ್ಯಾದಿ ಬೇಡಿಕೆಗಳನ್ನು ಪ್ರತಿಭಟನಾಕಾರರು ಸರಕಾರದ ಮುಂದಿಟ್ಟರು.
ಪ್ರತಿಭಟನಾ ಪ್ರದರ್ಶನದ ಬಳಿಕ ಗಡಿಯಾರ ಗೋಪುರದಿಂದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ತಾಲೂಕು ವಿಸ್ತರಣಾಧಿಕಾರಿ ಕಚೇರಿಗೆ ಭೇಟಿ ನಿಡಿದ ವಿದ್ಯಾರ್ಥಿಗಳು, ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು. ವಿದ್ಯಾರ್ಥಿ ನಾಯಕರಾದ ಅಕ್ಷಯ್ ಕಮ್ಮರಡಿ, ಶಶಿರ್, ಲೋಕೇಶ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.