Posts Tagged ‘abvp’

ಉಡುಪಿ: ಅಪ್ರಾಪ್ತ ಪ್ರಾಯದ ವಿದ್ಯಾರ್ಥಿನಿ ನಂದಿತಾ ಪೂಜಾರಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು (ಎಬಿವಿಪಿ) ವತಿಯಿಂದ ಎಂದು ಉಡುಪಿ ನಗರದಲ್ಲಿ ವಿವಿಧ ಕಾಲೇಜುಗಳ ೆಬಿವಿಪಿ ವಿದ್ಯಾರ್ಥಿಗಳು ಪ್ರತಿಭಟನಾ ಪ್ರದರ್ಶನ ನಡೆಸಿದರು.

ರಾಜ್ಯದಲ್ಲಿ ಮಹಿಳೆಯರ ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ಮತ್ತು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ರೂಪಿಸಬೇಕು. ಅತ್ಯಾಚಾರ ಪ್ರಕರಣಗಳು ದಾಖಲಾದಾಗ, ಅಂಥ ಸ್ಥಳಗಳಿಗೆ ಎಸ್ಪಿ ಹಾಗೂ ಡಿಸಿ ಭೇಟಿ ನೀಡುವಂಥಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಅತ್ಯಾಚಾರಿಗಳ ಸ್ವೇಚ್ಛಾಚಾರಕ್ಕೆ ಕಡಿವಾಣ ಹಾಕಲಾಗದೆ ಕೈ ಕಟ್ಟಿ ಕುಳಿತಿರುವ ಸರಕಾರದ ಕ್ರಮದಿಂದಾಗಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ
ಕುಸಿದುಬಿದ್ದಿದೆ ಎಂದು ಆರೋಪಿಸಿದ ಎಬಿವಿಪಿ ನಾಯಕರು, ಅಕ್ರಮ ಶಾಲೆಗಳನ್ನು ಮುಚ್ಚಬೇಕು ಮತ್ತು ಕಾಲೇಜು ಕ್ಯಾಂಪಸ್ ಗಳಲ್ಲಿ ಸೂಕ್ತ ಭದ್ರತಾ ನೀತಿಯನ್ನು ಕೂಡಲೇ ಜ್ಯಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಎಬಿವಿಪಿ ಮುಂದಾಳುಗಳಾದ ಅಕ್ಷಯ ಕಮ್ಮರಡಿ, ಪಾರಿತೋಷ್ ಡಿ. ಜೈನ್, ಕಾರ್ತಿಕ್, ಸಹನಾ, ಗಣೇಶ್, ಸುಬ್ರಮಣಿ ಮೊದಲಾದವರು ಪ್ರತಿಭಟನಾ ಪ್ರದರ್ಶನದ ನೇತೃತ್ವ ವಹಿಸಿದ್ದರು.

* ಶ್ರೀರಾಮ ದಿವಾಣ.
# ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿತ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತನ್ನ ವೈವಾಹಿಕ ಸ್ಥಿತಿಗತಿಯ ಬಗ್ಗೆ ಯಾವುದೇ ಮಾಹಿತಿಯನ್ನೂ ಉಲ್ಲೇಖಿಸದೆ ಸತ್ಯ ವಿಷಯವನ್ನು ಮುಚ್ಚಿಟ್ಟದ್ದು ತಪ್ಪು ಮತ್ತು ಈ ವಿಚಾರದಲ್ಲಿ ಮೋದಿ ದೋಷಿ ಎಂಬುದನ್ನು ಇದೀಗ ನ್ಯಾಯಾಲಯವೇ ಸ್ಪಷ್ಟಪಡಿಸಿದೆ.

ಚುನಾವಣಾ ಆಯೋಗಕ್ಕೆ ಸಲ್ಲಿಸುವ ಅಫಿಡವಿತ್ ನಲ್ಲಿ ಸತ್ಯವನ್ನು ಬಚ್ಚಿಡುವುದು ಒಂದು ಅಪರಾಧವಾಗಿದೆ. ಈ ಅಪರಾಧ ಎಸಗಿದವರಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ. ಆದರೆ ಈ ಸಂಬಂಧದ ದೂರನ್ನು ನೀಡುವುದಾದರೆ, ದೂರು ನೀಡುವವರು ಒಂದು ವರ್ಷದ ಅವಧಿಯೊಳಗೆ ನೀಡಬೇಕಾಗುತ್ತದೆ. ಒಂದು ವರ್ಷದ ಬಳಿಕ ದೂರು ನೀಡಿದರೆ ಏನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅಲಹಾಬಾದ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅಸಹಾಯಕತೆ ವ್ಯಕ್ತಪಡಿಸಿದೆ.

2012ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿತ್ ನಲ್ಲಿ ಆಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಸತ್ಯವನ್ನು ಮುಚ್ಚಿಟ್ಟು ಅಫಿಡವಿತ್ ಸಲ್ಲಿಸಿದ್ದು ನಿಜ ಎಂಬುದನ್ನು ಅಲಹಾಬಾದ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಖಚಿತಪಡಿಸಿದೆ. ಇದು ಅಪರಾಧವೆಂಬುದನ್ನೂ ನ್ಯಾಯಾಲಯ ದೃಢಪಡಿಸಿದೆ. ಆದರೆ ಈ ಸಂಬಂಧದ ದೂರನ್ನು ಎಎಪಿ ಮುಖಂಡರಾದ ನಿಶಾಂತ್ ವರ್ಮಾ ನಿಯಮಾವಳಿ ಪ್ರಕಾರ ನಿಗದಿತ ಒಂದು ವರ್ಷದ ಅವಧಿಯೊಳಗೆ ನೀಡಬೇಕಾಗಿತ್ತು. ಆದರೆ, ಒಂದು ವರ್ಷ ನಾಲ್ಕು ತಿಂಗಳ ಬಳಿಕ ದೂರು ನೀಡಿದ ಕಾರಣ ಏನೂ ಮಾಡಲು ಸಾಧ್ಯವಿಲ್ಲ ಎಂಬ ಅಸಹಾಯಕತೆಯನ್ನು ವ್ಯಕ್ತಪಡಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿ ಕೈಚೆಲ್ಲಿದೆ ನ್ಯಾಯಾಲಯ.

ಒಂದು ದೇಶದ ಪ್ರಧಾನಮಂತ್ರಿಯಂಥ ಉನ್ನತ ಮತ್ತು ಶ್ರೇಷ್ಠ ಹುದ್ದೆಯನ್ನು ಅಲಂಕರಿಸುವ, ಅಲಂಕರಿಸಿರುವ ವ್ಯಕ್ತಿ ಕೇವಲ ರಾಜಕಾರಣಿಯಾಗಿದ್ದರೆ, ಒಂದು ಪಕ್ಷದ ನಾಯಕನಾಗಿದ್ದರೆ ಸಾಲದು. ಆತ ಸತ್ಯಸಂಧನೂ, ಪ್ರಾಮಾಣಿಕನೂ, ನಿಷ್ಪಕ್ಷಪಾತ- ಪಾರದರ್ಶಕ ವ್ಯಕ್ತಿತ್ವದವನೂ, ನಿಜವಾದ ಅರ್ಥದಲ್ಲಿ ಸಾಮರ್ಥ್ಯವಂತನೂ ಆಗಿರಬೇಕು. ಆದರೆ, ಇಂದು ಸತ್ಯವನ್ನು ಮತ್ತು ಅಪರಾಧ ಕೃತ್ಯಗಳನ್ನು ಮುಚ್ಚಿ ಹಾಕುವ ಸಾಮಥ್ರ್ಯವನ್ನೇ ದೇಶವಾಳಲು ಬೇಕಾದ ಸಾಮಥ್ರ್ಯ ಎಂದು ರಾಜಕೀಯ ಪಕ್ಷಗಳು, ರಾಜಕೀಯ ನಾಯಕರು, ಪಕ್ಷಗಳ ಮತ್ತು ನಾಯಕರ ಅಂಧಾಭಿಮಾನಿಗಳು ತಿಳಿದುಕೊಂಡಿರುವುದೇ ನಮ್ಮ ದೇಶದ ದುರಂತ.

ಇಲ್ಲಿ ನರೇಂದ್ರ ಮೋದಿ ತಪ್ಪೆಸಗಿರುವುದು ನಿಜ, ಇದು ಕೇವಲ ತಪ್ಪು ಮಾತ್ರವಲ್ಲ, ಆ ತಪ್ಪು ಒಂದು ಅಪರಾಧ ಕೃತ್ಯವೂ ಆಗಿದೆ ಎಂಬುದನ್ನು ಗಂಭಿರವಾಗಿಯೇ ಗಮನಿಸಬೇಕಾಗಿದೆ. ಆ ಕಾರಣಕ್ಕೇ ಅವರು ದೋಷಿಯೂ ಹೌದು. ಇಂಥದೊಂದು ಅಪರಾಧಕ್ಕೆ ಆರು ತಿಂಗಳು ಜೈಲಲ್ಲಿರಬೇಕಾದ ವ್ಯಕ್ತಿ, ಆ ಸತ್ಯವನ್ನು 2014ರವರೆಗೂ ಬಚ್ಚಿಡಲು ಯಶಸ್ವಿಯಾಗುವ ಮೂಲಕ ಶಿಕ್ಷೆ ಅನುಭವಿಸುವುದರಿಂದ ಅದೇಗೋ ಬಚಾವಾಗಿದ್ದಾರೆ. ಇಂಥ ವ್ಯಕ್ತಿ ದೇಶಕ್ಕೆ ಮಾದರಿ, ಆದರ್ಶ ಎಂದು ಹೇಳಲು ಸಾಧ್ಯವೇ ? ಸಾಧುವೇ ? ವಿಪರ್ಯಾಸವೇ ಸರಿ. ಇಂಥ ವ್ಯಕ್ತಿ ಪ್ರಧಾನಿಯಾಗಿ ಮುಂದುವರಿಯುವುದು ದೇಶಕ್ಕೆ ಭೂಷಣವೇ ? ಜನತೆ, ಮುಖ್ಯವಾಗಿ ಸಂಸ್ಕೃತಿ, ಪರಂಪರೆ, ಸಂಪ್ರದಾಯ, ನೈತಿಕತೆ ಇತ್ಯಾದಿಗಳ ಬಗ್ಗೆ ಭಾರೀ ಮಾತನಾಡುವ ಬಿಜೆಪಿ ಈ ಬಗ್ಗೆ ಇನ್ನಾದರೂ ಯೋಚಿಸಬೇಕು.

ಇವತ್ತು ಏನಾಗಿದೆ ಎಂದರೆ, ಯಾವುದೇ ಅಪರಾಧ ಕೃತ್ಯವೆಸಗಿ ಸಿಕ್ಕಿಬಿದ್ದವನು ಮಾತ್ರ ದುಷ್ಟ, ಭ್ರಷ್ಟ, ಕೊಲೆಗಡುಕ, ಅತ್ಯಾಚಾರಿ ಇತ್ಯಾದಿಯಾಗಿ ಬಹಿರಂಗವಾಗಿ ಕರೆಸಿಕೊಳ್ಳುತ್ತಾನೆ. ಇಂಥವರ ವಿರುದ್ಧ ಮಾಧ್ಯಮಗಳೂ ಪುಂಕಾನುಪುಂಕವಾಗಿ ಅತಿರಂಜಿತ, ರೋಮಾಂಚನಕಾರಿ ವರದಿಗಳನ್ನು ದಿನಗಟ್ಟಲೆ ಪ್ರಸಾರ ಮಾಡುತ್ತೆ. ಆದರೆ ಅಧಿಕೃತವಾಗಿ ಸಿಕ್ಕಿಬೀಳದ, ಆದರೆ ಅನಧಿಕೃತವಾಗಿ ಅಪರಾಧಿಗಳೇ ಆಗಿರುವ ಪ್ರಭಾವಶಾಲೀ ರಾಜಕಾರಣಿ/ಉದ್ಯಮಿಗಳನ್ನು ಮಾದರಿ ಪುರುಷರೆಂದು, ಸಮರ್ಥ ನಾಯಕರೆಂದು ಬಿಂಬಿಸಿ ದೈವತ್ವಕ್ಕೇರಿಸಲಾಗುತ್ತದೆ. ಪಕ್ಷಗಳು ತಮ್ಮ ನಾಯಕರನ್ನು, ಯಾವ್ಯಾವುದೋ ಲಾಭ ಪಡೆದುಕೊಂಡವರು ಋಣ ಸಂದಾಯ ಮಾಡುವ ಪ್ರಕ್ರಿಯೆ ಭಾಗವಾಗಿ ಆಸ್ಥಾನ ವಿದ್ವಾಂಸರಂತೆ, ಭಟ್ಟಂಗಿಗಳಂತೆ ವರ್ತಿಸುವ ಮೂಲಕ ಅವರ ವಿರುದ್ಧ, ಅವರ ತಪ್ಪು ನಡೆಗಳ ಬಗ್ಗೆ ಯಾರೊಬ್ಬರೂ ಮಾತನಾಡದಂಥ ಪರಿಸ್ಥಿತಿಯನ್ನು ಸೃಷ್ಟಿಸಿಬಿಡುತ್ತಾರೆ. ಇದೂ ನಮ್ಮದೊಂದು ವ್ಯವಸ್ಥೆ !

ತನ್ನ ವೈವಾಹಿಕ ಸ್ಥಿತಿಗತಿಯನ್ನು ಮುಚ್ಚಿಟ್ಟ ನರೇಂದ್ರ ಮೋದಿ, ಗುಜರಾತ್ ನಲ್ಲಿ ನಡೆದ, ನಡೆಸಿದ ಜನಾಂಗೀಯ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ, ನಕಲಿ ಎನ್ಕೌಂಟರ್ ಗಳಿಗೆ ಸಂಬಂಧಪಟ್ಟಂತೆ, ಭ್ರಷ್ಟಾಚಾರದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಅದೆಷ್ಟು ವಾಸ್ತವಾಂಶಗಳನ್ನು ಮುಚ್ಚಿಟ್ಟಿರುವ ಸಾಧ್ಯತೆಗಳಿವೆ. ಅಧಿಕಾರ ಇದ್ದರೆ, ಇರುವಾಗ ಅಧಿಕಾರಮದದಿಂದ ಅಧಿಕಾರವನ್ನು ದುರುಪಯೋಗಪಡಿಸುವುದು ರಾಜಕೀಯದಲ್ಲಿ ಹೊಸದಾದ ವಿಷಯವೇನೂ ಅಲ್ಲ. ಮೋದಿಯವರೂ ಈ ರೀತಿ ಮಾಡಿರಲಾರರು ಎಂದು ಹೇಳಲು ಇನ್ನಂತೂ ಖಂಡಿತಾ ಸಾಧ್ಯವಿಲ್ಲ. ವಾದಕ್ಕೆ ಬೇಕಾಗಿ ಏನಾದರೂ ವಾದಿಸಬಹುದು.

ಆದರೆ, ಈಗಾಗಲೇ ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿದ ಕೆಲವು ಪ್ರಕರಣಗಳಲ್ಲಿ ನರೇಂದ್ರ ಮೋದಿಯವರ ಅಂದಿನ ಗುಜರಾತ್ ರಾಜ್ಯ ಸಚಿವ ಸಂಪುಟದ ಒಂದಿಬ್ಬರು ಸಚಿವರು, ಶಾಸಕರು, ಪಕ್ಷದ ಮುಖಂಡರು ಆರೋಪಿಗಳಾಗಿ ದಾಖಲಾಗಿದ್ದಾರೆ. ಕೆಲವರನ್ನು ಈಗಾಗಲೇ ನ್ಯಾಯಾಲಯವೇ ಅಪರಾಧಿಗಳು ಎಂದು ಘೋಷಿಸಿದ್ದೂ ಆಗಿದೆ. ಒಂದು ಎನ್ಕೌಂಟರ್ ಪ್ರಕರಣದಲ್ಲಿ ಮೊದಿಯವರ ಬಲಕೈ ಬಂಟ ಎಂದು ಕರೆಸಿಕೊಳ್ಳುತ್ತಿರುವ, ಬಿಜೆಪಿಯ ಸಂಭಾವ್ಯ ರಾಷ್ಟ್ರಾಧ್ಯಕ್ಷ ಎಂದೂ ಹೇಳಲಾಗುತ್ತಿರುವ ಅಮಿತ್ ಶಾ ಅವರೂ ಆರೋಪಿ ಎಂದು ಗುರುತಿಸಲ್ಪಟ್ಟಿದ್ದಾರೆ. ಇದನ್ನೆಲ್ಲಾ ನೊಡಿದರೆ, ಮೋದಿ ಗುಜರಾತ್ ನಲ್ಲಿ ಹೇಗೆ ಅಧಿಕಾರ ಚಲಾಯಿಸಿರಬಹುದು ಎಂಬುದನ್ನು ಊಹಿಸಲು ಎಷ್ಟು ಕಷ್ಟಪಡುವ ಅಗತ್ಯ ಇಲ್ಲ ಎನಿಸುತ್ತದೆ.

ಚುನಾವಣಾ ಆಯೋಗಕ್ಕೆ ನೀಡಿದ ಅಫಿಡವಿತ್ನಲ್ಲಿ ವೈವಾಹಿಕ ಸತ್ಯವನ್ನು ಮುಚ್ಚಿಡುವ ಮೂಲಕ ನರೇಂದ್ರ ಮೋದಿ ತಪ್ಪೆಸಗಿದ್ದಾರೆ, ಆದರೆ ಶಿಕ್ಷೆಯಿಂದ ಪಾರಾಗಿದ್ದಾರೆ ಎಂದು ಅಲಹಾಬಾದ್ ಮ್ಯಾಜಿಸ್ಟ್ರೇಟ್ ಕೋರ್ಟ್ ಘೋಷಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಒಂದು ಮುಖವಾಡ ಅಧಿಕೃತವಾಗಿಯೇ ಕಳಚಿಹಾಕಲ್ಪಟ್ಟಿದೆ. ಈ ಮಹತ್ವದ ಬೆಳವಣಿಗೆ ನಡೆದ ಬೆನ್ನಿಗೇ, ಸುಪ್ರೀಂ ಕೋರ್ಟ್ ನೂತನವಾಗಿ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಜೊತೆ ಸಮಾಲೋಚನೆ ನಡೆಸದೆ, ಅವರು ನೀಡಿದ ಪಟ್ಟಿಯಿಂದ ಮಾಜಿ ಸಾಲಿಸಿಟರ್ ಜನರಲ್ ಮತ್ತು ಹಿರಿಯ ನ್ಯಾಯವಾದಿ ಗೋಪಾಲ್ ಸುಬ್ರಹ್ಮಣ್ಯಂ ಅವರ ಹೆಸರನ್ನು ಕೈಬಿಟ್ಟು, ನೂತನ ನ್ಯಾಯಮೂರ್ತಿಗಳನ್ನು ಏಕಪಕ್ಷೀಯವಾಗಿ ನೇಮಕ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ ಎಂದು ಸ್ವತಹಾ ಮುಖ್ಯ ನ್ಯಾಯಮೂರ್ತಿಗಳಾದ ಆರ್.ಎಂ.ಲೋಧಾ ಅವರು ಬಹಿರಂಗವಾಗಿಯೇ ಅಸಮಾಧಾನ ಮತ್ತು ಆಕ್ಷೇಪ ವ್ಯಕ್ತಪಡಿಸುವ ಮೂಲಕ ಮೋದಿಯವರ ಸರ್ವಾಧಿಕಾರಿ, ನಿರಂಕುಶ ಆಡಳಿತ ವೈಖರಿಯನ್ನು ಬಟಾಬಯಲು ಮಾಡಿದ್ದಾರೆ.

ನ್ಯಾಯಾಂಗದ ಸ್ವಾತಂತ್ರ್ಯದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಲೋಧಾ ಅವರು ಖಡಾಖಂಡಿತವಾಗಿ ಹೇಳಿರುವುದು ಎಲ್ಲರೂ ಗಮನಿಸಲೇ ಬೇಕಾದ ಸೂಕ್ಷ್ಮ ವಿಷಯವಾಗಿದೆ. ಪ್ರಧಾನಿ ಮೋದಿ ಹಾಗೂ ಕೇಂದ್ರದ ಬಿಜೆಪಿ ಸರಕಾರವು, ನ್ಯಾಯಾಂಗವು ತಮ್ಮ ಮತ್ತು ತಮ್ಮ ಸರಕಾರದ ಪರವಾಗಿರಬೇಕು ಎಂಬ ರೀತಿಯಲ್ಲಿದ್ದಾರೆ, ಆದರೆ ನ್ಯಾಯಾಂಗ ಹಾಗೆ ನಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ಸಾರಿ ಹೇಳಿದಂತೆಯೇ ಇದೆ.

ನರೇಂದ್ರ ಮೋದಿಯವರು ಗುಜರಾತ್ ನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ರಾಜ್ಯಕ್ಕೆ ಲೋಕಾಯುಕ್ತರನ್ನೇ ನೇಮಕ ಮಾಡಿರಲಿಲ್ಲ ಎನ್ನುವುದು ನಿಗೂಢ ರಹಸ್ಯವೇನೂ ಅಲ್ಲ. ತಮ್ಮ ಮೂಗಿನ ನೇರಕ್ಕೆ ನಡೆದುಕೊಳ್ಳದ ಸಚಿವರು, ಇತರ ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಹಾಗೂ ಅಧಿಕಾರಿಗಳು ಸಹ ಮೋದಿಯೊಂದಿಗೆ ಸಹಜವಾಗಿ ಮುನ್ನಡೆಯಲಿಕ್ಕಾಗದೆ ಕೊನೆಗೆ ಪಕ್ಷವನ್ನು ಮತ್ತು ಅಧಿಕಾರವನ್ನು ತೊರೆದು ಹೋಗುವಂತೆ ಕಾರ್ಯತಂತ್ರ ರೂಪಿಸಿ ಯಶಸ್ವಿಯಾದವರು ಇದೇ ಮೋದಿ ಎನ್ನುವುದೂ ಗುಟ್ಟಿನ ವಿಷಯವೇನೂ ಆಗಿ ಉಳಿದಿಲ್ಲ. ಇಂಥ ಅನೇಕಾನೇಕ ಮೋದಿ ಮಾದರಿಗಳನ್ನು ದೇಶದ ಜನರು ಗೊತ್ತಿದ್ದೋ- ಗೊತ್ತಿಲ್ಲದೆಯೋ, ಅಭಿವೃದ್ಧಿ ಎಂದು ನಂಬಿಯೋ-ಭ್ರಮಿಸಿಯೋ ಒಟ್ಟಿನಲ್ಲಿ ದೇಶದ ಪ್ರಧಾನಿಯನ್ನಾಗಿ ಮಾಡಿದ್ದಾರೆ, ಮಾಡಿ ಆಗಿದೆ. ಎಲ್ಲಾ ಆದ ಬಳಿಕ ಈಗ ಮೋದಿ ಮಾದರಿ ಏನೆಂಬುದು ಇದೀಗ ಒಂದೊಂದಾಗಿಯೇ ಬೆತ್ತಲೆಯಾಗತೊಡಗಿದೆ.

ಮೋದಿ ಇದೇ ಮಾದರಿಗಳನ್ನು ನೆಚ್ಚಿಕೊಂಡು ತಮ್ಮ ಆಡಳಿತ ಶೈಲಿಯನ್ನು ಮುಂದುವರಿಸಿದ್ದೇ ಆದರೆ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯ ನಡುವೆ ಮುಂದಿನ ದಿನಗಳಲ್ಲಿ ಗಂಭೀರವಾದ ಸಂಘರ್ಷ ನಡೆಯಬಹುದು. ಹೀಗೆ ನಡೆದುದೇ ಆದರೆ ಅದು ನಮ್ಮ ದೇಶಕ್ಕೆ ಒಳ್ಳೆಯ ಬೆಳವಣಿಗೆಯಾಗಲು ಸಾಧ್ಯವಿಲ್ಲ. ನ್ಯಾಯಾಂಗದ ಮೂಲಕವೇ ಮೋದಿಯ ಗುಜರಾತ್ ಮಾದರಿ ಎಂಬ ಭ್ರಮೆಯ ಕೆಲವು ತುಣುಕುಗಳು ಇದೀಗ ಕಳಚಿಬಿದ್ದಿರುವುದರಿಂದ, ಬಿಜೆಪಿ ತಡ ಮಾಡದೆ ಪ್ರಧಾನಿಯಂಥ ಶ್ರೇಷ್ಠ ಸ್ಥಾನದಿಂದ ಮೋದಿಯವರನ್ನು ವಜಾಗೊಳಿಸಿ ಇನ್ನೊಬ್ಬ ಸಮರ್ಥ ವ್ಯಕ್ತಿಯನ್ನು ಆ ಸ್ಥಾನಕ್ಕೇರಿಸಿದರೆ ಮಾತ್ರ ಭಾರತ ಪ್ರಪಾತಕ್ಕೆ ಬೀಳುವುದನ್ನು ತಡೆದು ನಿಲ್ಲಿಸಬಹುದು !

# ಗುಜರಾತ್ ನ ದ್ವಾರಕೆಯ ಶಂಕರಾಚಾರ್ಯ ಪೀಠದ ಸ್ವಾಮೀ ಸ್ವರೂಪಾನಂದರು, ‘ಶಿರಡಿ ಸಾಯಿಬಾಬಾ ಅವತಾರ ಪುರುಷರಲ್ಲ. ಅವರು ದೇವರೂ ಅಲ್ಲ. ಅವರೊಬ್ಬ ಮಾನವ. ಅವರನ್ನು ಆರಾಧಿಸಬೇಡಿ. ಬಾಬಾ ದೇಗುಲಗಳನ್ನು ಕಟ್ಟಬೇಡಿ’ ಎಂದು ಕರೆಕೊಟ್ಟಿದ್ದು ವಿವಾದಕ್ಕೆ ಕಾರಣವಾಗಿದೆ.

‘ಸನಾತನ ಧರ್ಮದಲ್ಲಿ ವಿಷ್ಣುವಿಗೆ 24 ಅವತಾರಗಳಿವೆ. ಕಲಿಯುಗದಲ್ಲಿ ಕಲ್ಕಿ ಮತ್ತು ಬುದ್ಧ ಹೊರತುಪಡಿಸಿ ಮತ್ಯಾವುದೇ ಅವತಾರದ ಬಗ್ಗೆ ಪ್ರಸ್ತಾಪವಿಲ್ಲ. ಹಾಗಾಗಿ ಶಿರಡಿ ಸಾಯಿಬಾಬಾ ಅವರನ್ನು ಗುರು ಹಾಗೂ ಮಾದರಿ ಪುರುಷ ಎಂದು ಪರಿಗಣಿಸಬಾರದು’ ಎಂದೂ ಸ್ವರೂಪಾನಂದರು ಅಪ್ಪಣೆ ಹೊರಡಿಸಿದ್ದು, ಇದೀಗ ಚರ್ಚೆಗೆ ಒಳಗಾಗಿದೆ.

ವೈದಿಕ ಧರ್ಮದ ಪವಿತ್ರ ಗ್ರಂಥಗಳಾದ ವೇದಗಳ ಪ್ರಕಾರ ದೇವರು ನಿರಾಕಾರ, ನಿರ್ಗುಣ ಮತ್ತು ಸರ್ವಾಂತರ್ಯಾಮಿ. ದೇವರಿಗೆ ಹುಟ್ಟು ಇಲ್ಲ, ಸಾವೂ ಇಲ್ಲ, ತಂದೆಯೂ ಇಲ್ಲ, ತಾಯಿಯೂ ಇಲ್ಲ. ಮದುವೆ-ಮಕ್ಕಳ ಪ್ರಶ್ನೆಯೂ ಉದ್ಭವಿಸುವುದಿಲ್ಲ. ವಿಗ್ರಹಾರಾಧನೆಗೆ ಇಲ್ಲಿ ಅವಕಾಶವೇ ಇಲ್ಲ. ವಿಗ್ರಹಾರಾಧನೆ ನರಕದ ಮೊದಲನೇ ಮೆಟ್ಟಿಲು. ಹೀಗಿದ್ದೂ ಸ್ವರೂಪಾನಂದರು ಹಾಗೂ ಸ್ವರೂಪಾನಂಧರಂಥವರು ವಿಗ್ರಹಾರಾಧನೆ ಮಾಡುತ್ತಿರುವುದು ಯಾಕೋ ? ತಾವೂ ವಿಗ್ರಹಾರಾಧನೆ ಮಾಡುವುದನ್ನು ಕೈಬಿಟ್ಟು, ಭಕ್ತ ಜನರೂ ವಿಗ್ರಹಾರಾಧನೆಯಿಂದ ಹಿಂದೆ ಸರಿಯುವಂತೆ ಯಾಕೆ ತಿಳಿಹೇಳುವುದಿಲ್ಲ ?

ಶಿರಡಿ ಸಾಯಿಬಾಬಾ ದೇವರಲ್ಲವೆಂದಾದರೆ, ರಾಘವೇಂದ್ರರೂ ದೇವರಲ್ಲ, ಶ್ರೀರಾಮನೂ ದೇವರಲ್ಲ, ಶ್ರೀಕೃಷ್ಣನೂ ದೇವರಲ್ಲ ಎಂದೇ ಅರ್ಥ. ಶಂಕರಾಚಾರ್ಯರನ್ನೂ,
ಮಧ್ವಾಚಾರ್ಯರನ್ನೂ ಗುರು ಎಂದಾಗಲೀ, ಅವತಾರ ಪುರುಷರೆಂದಾಗಲೀ ಪರಿಗಣಿಸುವಂತಿಲ್ಲ ಎಂದೇ ಅರ್ಥ. ಸಾಯಿಬಾಬಾರನ್ನು ಆರಾಧಿಸಬಾರದೆಂದರೆ, ಶ್ರೀರಾಮನನ್ನೂ ಆರಾಧಿಸಬೇಕಾಗಿಲ್ಲ, ಶ್ರೀಕೃಷ್ಣನನ್ನೂ ಆರಾಧಿಸಬೇಕಾಗಿಲ್ಲ. ಇವರೆಲ್ಲರೂ ಇತಿಹಾಸದಲ್ಲಿ ದಾಖಲಾಗಿರುವ ಪುರುಷರಷ್ಟೇ ಆಗಿದ್ದಾರೆ. ಇವರಾರಿಗೂ ದೇಗುಲಗಳನ್ನೂ ಕಟ್ಟಬೇಕಾಗಿಲ್ಲ ಎಂದೇ ಅರ್ಥವಾಗುತ್ತದೆ.

ಸ್ವರೂಪಾನಂದರು ಪ್ರಸ್ತಾಪಿಸಿದ ವಿಷ್ಣು ಕೂಡಾ ವೇದಗಳ ಪ್ರಕಾರ ದೇವರಲ್ಲ. ವಿಷ್ಣು ಸಹಿತ ಇತರ ದೇವ-ದೇವಿಯರು ಕೇವಲ ಕಾಲ್ಪನಿಕ. ಪುರಾಣ ಕಥೆಗಳಲ್ಲಿ ಬರುವ ಕಲ್ಪಿತ ಪಾತ್ರಗಳು. ದೇವರಿಗೂ ಅವತಾರವೆಂಬುದು ಇರುವುದಿಲ್ಲ. ಇರಲು ಸಾಧ್ಯವಿಲ್ಲ. ದೇವರಿಗೆ ಅವತಾರ ಇಲ್ಲ ಎಂದ ಮೇಲೆ ಹುಲು ಮಾನವರಿಗೆ ಅವತಾರ ಎತ್ತಲು ಸಾಧ್ಯವೇ ? ಖಂಡಿತಾ ಇಲ್ಲ. ಆತ್ಮಕ್ಕೆ ಮೋಕ್ಷವಾಗದಿದ್ದಲ್ಲಿ ಪುನರ್ಜನ್ಮವಾಗಬಹುದು. ಅಂದರೆ, ಅವತಾರವೆಂದರೆ ಪುನರ್ಜನ್ಮ ಎಂದಾಯಿತು. ಒಬ್ಬ ಮಾನವನಿಗೆ ಮೋಕ್ಷವಾಗದಿದ್ದಲ್ಲಿ ಆತ ಮತ್ತೆ ಅವತಾರ ಎತ್ತಬಹುದು ಅಥವಾ ಪುನರ್ಜನ್ಮವಾಗಬಹುದು.

‘ಅದ್ವೈತ ಮತ ಸ್ಥಾಪಕರಾದ ಆದಿ ಶಂಕರರನ್ನು ಒಂದು ಕಡೆ ರುದ್ರ ದೇವರ ಅವತಾರವೆಂತಲೂ, ಇನ್ನೊಂದು ಕಡೆ ಮಣಿಮಂತ ನೆಂಬ ದೈತ್ಯನೆಂತಲೂ, ಮತ್ತೊಂದು ಕಡೆ ‘ರಂಡಾಪುತ್ರ’ನೆಂತಲೂ ಸಂಬೋಧಿಸಿರುವುದನ್ನು ಗಮನಿಸುವಾಗ ಆಚಾರ್ಯತ್ರಯರು ಅದ್ವೈತ, ದ್ವೈತ, ವಿಶಿಷ್ಟಾದ್ವೈತ ಎಂಬ ಹೆಸರಿನಲ್ಲಿ ತಮ್ಮದೇ ಆದ ಸಿದ್ಧಾಂತವನ್ನು ಪ್ರಚಾರ ಮಾಡಲು ಹೊರಟು ಪರಸ್ಪರ ದೂಷಿಸುತ್ತಾ, ಬೇರೆ ಬೇರೆ ಮತಗಳನ್ನು ಸ್ಥಾಪಿಸಿ ಶಿಷ್ಯಾದಿಗಳನ್ನು ಬೆಳೆಸಿಕೊಂಡು ಎಂದೆಂದಿಗೂ ಒಂದಾಗದಂತೆ, ಸದಾಕಾಲವೂ ಜಗಳಾಡುವಂತೆ ಒಂದು ವಿಶಿಷ್ಟ ಮಾರ್ಗವನ್ನು ನಿರ್ಮಿಸಿ ಹೋದರು’ (ಋಗ್ವೇದ ದರ್ಶನ, ಭಾಷ್ಯಕಾರರು: ಶ್ರೀ.ಪಂ.ಸುಧಾಕರ ಚತುರ್ವದೀ)

ಆದಿ ಶಂಕರರು ಮಣಿಮಂತ ರಾಕ್ಷಸನ ಅವತಾರ ಎಂಬ ವಿಷಯವನ್ನು, ಉಡುಪಿ ಕೃಷ್ಣ ದೇವಸ್ಥಾನದ ಚಂದ್ರಶಾಲೆಯಲ್ಲಿವಿದ್ಯಾವಾಚಸ್ಪತಿ ರಾಮಾನಾಥಾಚಾರ್ಯರು ನಡೆಸುತ್ತಿದ್ದ
ಪ್ರವಚನದಲ್ಲಿಯೂ ಈ ಹಿಂದೆ ಹೇಳುತ್ತಿದ್ದರು. ಇದನ್ನೆಲ್ಲ ನಂಬುವುದಾದರೆ, ಶಂಕರರು ಗುಜರಾತಿನ ದ್ವಾರಕಾದಲ್ಲಿ ಪ್ರತಿಷ್ಠಾಪಿಸಿದ ಶಾರದಾ ಪೀಠದ ಒಬ್ಬರು
ಸ್ವಾಮಿಯಾಗಿದ್ದಾರೆ, ಈ ಸ್ವರೂಪಾನಂದರು ಎಂಬುದು ಸ್ಪಷ್ಟವಾಗುತ್ತದೆ. ಇಂಥವರು ಕೊಡುವ ಕರೆಗೆ ಏನಾದರೂ ಬೆಲೆ ಇರಲು ಸಾಧ್ಯವೇ ? ಯಾರಾದರೂ ಗಂಭೀರವಾಗಿ ಪರಿಗಣಿಸಲು ಸಾಧ್ಯವೇ ? ಖಂಡಿತಾ ಸಾಧ್ಯವಿಲ್ಲ.

ವಿಷ್ಣುವಿನ 24 ಅವತಾರಗಳಲ್ಲಿ ಬುದ್ಧನೂ ಒಬ್ಬ ಎಂಬುದು ಸ್ವರೂಪಾನಂದರ ವಾದ. ಹಾಗಾದರೆ ಸ್ವರೂಪಾನಂದರು ಪ್ರಸ್ತಾಪಿಸುವ ಹಿಂದೂ ಮತೀಯರು (ಗಮನಿಸಿ: ಹಿಂದೂ ಧರ್ಮವಲ್ಲ. ಧರ್ಮವೊಂದೇ. ಅದು ಮಾನವಧರ್ಮ). ಬುದ್ಧನನ್ನು ಯಾಕೆ ಆರಾಧಿಸುವುದಿಲ್ಲ ? ಹಿಂದೂ ಮತೀಯರು ಯಾಕೆ ಬುದ್ಧನಿಗೆ ದೇಗುಲ ನಿರ್ಮಿಸುವುದಿಲ್ಲ ? ಬುದ್ಧ ದೇವಾಲಯಗಳನ್ನು ಧ್ವಂಸಗೊಳಿಸಿದವರು ಯಾರು ? ಬುದ್ಧನ ಅನುಯಾಯಿಗಳನ್ನು ಹಿಂಸಿಸಿ ಅವರಲ್ಲಿ ಹೆಚ್ಚಿನವರೂ ದೇಶ ತೊರೆದು ಹೋಗುವಂತಾಗಲು ಯಾರು ಕಾರಣರು ? ಈ ಎಲ್ಲಾ ವಿಚಾರಗಳ ಬಗ್ಗೆ ಸ್ವರೂಪಾನಂದರು ಯಾಕೆ ಜಾಣ ಮೌನ ವಹಿಸುತ್ತಾರೆ ?

ಸಾಯಿಬಾಬಾರು ಗುರುವಾಗಲೀ, ಮಾದರಿ ಪುರುಷನಾಗಲೀ ಅಲ್ಲ ಎಂದ ಮೇಲೆ ಶಂಕರರು ಗುರುವಾಗುವುದು ಹೇಗೆ ? ಮಾದರಿ ಪುರುಷನಾಗುವುದು ಹೇಗೆ ? ಮಣಿಮಂತ ದೈತ್ಯನ ಅವತಾರವೆಂದು ಅದ್ವೈತ ಮತೀಯ ಪಂಡಿತರಿಂದ ಕರೆಸಲ್ಪಟ್ಟ ಶಂಕರರು ಪ್ರತಿಷ್ಠಾಪಿಸಿದ ಪೀಠದಲ್ಲಿ ಸ್ವಾಮೀ ಸ್ವರೂಪಾನಂದರು ಕುಳಿತುಕೊಂಡಿರುವುದು, ಸ್ವರೂಪಾನಂದರ ಭಾಷೆಯಲ್ಲಿಯೇ ಹೇಳುವುದಾದರೆ ‘ಸಂಚು ರೂಪಿಸಿ ಹಣ ಮಾಡಿಕೊಳ್ಳಲು’ ಎಂದು ಕಾಣುತ್ತದೆ.

ಇನ್ನು ಕಲ್ಕಿ ಬಗ್ಗೆ. ಕಲ್ಕಿ ಎಂದರೆ ಒಬ್ಬ ವ್ಯಕ್ತಿಯಲ್ಲ. ಕಲ್ಕಿ ಎಂಬುದು ಒಂದು ಅವಸ್ಥೆ. ಅಪ್ರಮಾಣಿಕತೆ, ಅಸತ್ಯದಿಂದ ಕೂಡಿದ ಜೀವನ ನಡೆಸುವುದು, ಅನೀತಿಯುತ ಬದುಕು ಸಾಗಿಸುವುದು, ಎಲ್ಲೆಲ್ಲೂ ಅಧರ್ಮ ತಾಂಡವ ನೃತ್ಯವಾಡುವುದು. ಮೋಸ, ವಂಚನೆ, ದ್ರೋಹ, ಕಳ್ಳತನ, ಕೊಲೆ, ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ತಂದೆಯೇ ಮಗಳ ಮೇಲೆ ಅತ್ಯಾಚಾರ ನಡೆಸುವುದು, ಆಳುವವರೂ, ಆಳಿಸಿಕೊಳ್ಳುವವರೂ ಭ್ರಷ್ಟರೂ, ದುಷ್ಟರೂ ಆಗಿರುವ ಸ್ಥಿತಿಯೇ ಕಲ್ಕಿ ಸ್ಥಿತಿ. ಅದೀಗ ಚಾಲ್ತಿಯಲ್ಲಿದೆ. ಈ ಅವತಾರಕ್ಕೆ ಸ್ವಾಮೀ ಸ್ವರೂಪಾನಂದರೂ ಸಾಕ್ಷಿಯಾಗಿದ್ದಾರೆ. ಸ್ವರೂಪಾನಂದರು ಯಾರನ್ನು ಗುರುಗಳು, ಮಾದರಿ ಪುರುಷನೆಂದು ಭಾವಿಸಿಕೊಂಡಿದ್ದಾರೋ ಅವರು ಹಾಗೂ ಅವರಂಥವರೆಲ್ಲರೂ ಈ ಸ್ಥಿತಿಗೆ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಕಾರಣಕರ್ತರಾಗಿದ್ದಾರೆ ಎಂದು ಹೇಳದೆ ನಿರ್ವಾಹವೇ ಇಲ್ಲವಾಗಿದೆ.

‘ಸಾಯಿಬಾಬಾ ಆರಾಧನೆಯ ಹಿಂದೆ ಹಿಂದೂಗಳನ್ನು ವಿಭಜಿಸುವ ಸಂಚಿದೆ. ಬಾಬಾ ಮಾಂಸಾಹಾರಿಯಾಗಿದ್ದರು. ಅಯೋಧ್ಯೆಯ ರಾಮಜನ್ಮ ಭೂಮಿ ವಿವಾದದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ದೇಶಾದ್ಯಂತ ಸಾಯಿಬಾಬಾ ಮಂದಿರಗಳನ್ನು ನಿರ್ಮಿಸಲಾಯಿತು’ ಎಂಬ ಹೇಳಿಕೆ ಸ್ವರೂಪಾನಂದರನ್ನು ಪೂರ್ಣವಾಗಿ ಬೆತ್ತಲು ಮಾಡಿದೆ ಎಂದೇ ಹೇಳಬಹುದು.

ವೈದಿಕ ಧರ್ಮದ ಪವಿತ್ರ ಗ್ರಂಥಗಳಾದ ವೇದಗಳನ್ನು ನಂಬುವುದಾರೆ, ‘ಪ್ರಪಂಚದಲ್ಲಿರುವ ಮನುಷ್ಯ ಜಾತಿಯೆಲ್ಲಾ ಒಂದೇ ಆಗಿದೆ. ಮನುಷ್ಯ-ಮನುಷ್ಯರ ನಡುವೆ ಯಾವುದೇ
ಜಾತಿ-ಮಾರ್ಗ-ದೇಶದ ಅಡ್ಡಗೋಡೆಯನ್ನು ನಿಲ್ಲಿಸುವುದು ಜಘನ್ಯತಮ ಅಪರಾಧ’ (ಸ್ವಾಮೀ ಅಚ್ಯುತಾನಂದ ಸರಸ್ವತೀ ಅವರ ‘ವೇದ ಜ್ಯೋತಿ’ ಚತುರ್ವೇದ ಶತಕ). ಸ್ವಾಮೀ ಸ್ವರೂಪಾನಂದರು ಮನುಷ್ಯ- ಮನುಷ್ಯರ ನಡುವೆ ಹಿಂದೂ-ಮುಸ್ಲೀಮ್ ಎಂದು ಅಡ್ಡಗೋಡೆ ನಿಲ್ಲಿಸುವ ಮೂಲಕ ಹೇಯ ಅಪರಾಧ ಎಸಗಿದ್ದಾರೆ.

ಸಾಯಿಬಾಬಾ ಮಾಂಸಾಹಾರಿಯಾಗಿದ್ದರು ಎನ್ನುವುದರ ಜೊತೆಗೆ, ನಮ್ಮ ದೇಶದ ಬಹುಸಂಖ್ಯಾತರಾಗಿರುವ ಮಾಂಸಾಹಾರೀ ಜನವರ್ಗದ ಜನರನ್ನೂ ಅವಮಾನಿಸುವ ಕೆಲಸ ಮಾಡಿದ್ದಾರೆ ಸ್ವರೂಪಾನಂದರು. ಮಾತ್ರವಲ್ಲ, ಪ್ರಾಣಿಬಲಿ ಕೇಳುವ ದೈವ-ದೇವ- ದೇವಿಯರನ್ನು ಸಹ ಅಪಮಾನಿಸಿದ್ದಾರೆ. ನನಗನಿಸುತ್ತಿದೆ, ನರೇಂದ್ರ ಮೋದಿ ನೇತೃತ್ವದ ಕೇಮದ್ರದ ಬಿಜೆಪಿ ಸರಕಾರದ ತಪ್ಪು ಕ್ರಮಗಳ ಕಡೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಗುಜರಾತಿನ ದ್ವಾರಕಾ ಪೀಠದ ಸ್ವರೂಪಾನಂದರು ಹೀಗೊಂದು ವಿವಾದಾಸ್ಪದ ಹೇಳಿಕೆ ಎಂಬ ಕಲ್ಲು ಎಸೆದು ಬಿಟ್ಟಿರಬೇಕು. ‘ಒಂದು ಕಲ್ಲು, ಎರಡು ಗುರಿ’ ಎನ್ನುವ ಸಂಚಿನ ಭಾಗವಾಗಿ ಹೀಗೊಂದು ವಿವಾದ ಸೃಷ್ಟಿಸಿರಬೇಕು.

ಬಹುತೇಕ ಕಡೆಗಳಲ್ಲೂ ಶಿರಡಿ ಸಾಯಿಬಾಬಾ ಮಂದಿರಗಳನ್ನು ಪ್ರತಿಷ್ಟೆ ಮಾಡಿಸಿ, ಆರಾಧಿಸುವವರು ಬ್ರಾಹ್ಮಣೇತರರು. (ಸದ್ಗುರು ಭಗವಾನ್ ಶ್ರೀ ನಿತ್ಯಾನಂದ ಮಂದಿರಗಳ ಸ್ಥಾಪಕರೂ ಬ್ರಹ್ಮಾಣೇತರರೇ ಆಗಿದ್ದಾರೆ. ಇದೇ ಕಾರಣಕ್ಕೆ ಕೊಲ್ಲೂರಿನಲ್ಲಿ ಸಮಾಧಿ ವಿವಾದ ಸೃಷ್ಟಿಸಿದ್ದನ್ನು, ವಿಹಿಂಪ-ಆರ್.ಎಸ್.ಎಸ್. ಪರಿವಾರ ಸಂಘಟನೆಗಳು ಸಮಾಧಿ ವಿವಾದದ ಬಗ್ಗೆಯಾಗಲೀ, ನಿತ್ಯಾನಂದ ಮಠಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ಕಲ್ಲೆಸೆದು ನಾಶ-ನಷ್ಟ ಉಂಟುಮಾಡಿದ ಕುರಿತಾಗಲೀ ಕನಿಷ್ಟ ಖಂಡಿಸುವ ಕೆಲಸವನ್ನೂ ಮಾಡದೆ ಜಾಣ ಮೌನ ವಹಿಸಿರುವುದನ್ನು ಇಲ್ಲಿ ನೆನಪಿಸಬಹುದು. ಮಾತ್ರವಲ್ಲ ಇವುಗಳನ್ನೆಲ್ಲ ಒಂದೇ ದೃಷ್ಟಿಕೋನದಲ್ಲಿ ನೋಡಬಹುದು).

ಶಿರಡಿ ಸಾಯಿಬಾಬಾ ಮಂದಿರಕ್ಕೆ ಲಕ್ಷಾಂತರ ಮಂದಿ ಭಕ್ತರಿದ್ದಾರೆ. ಕೊಟ್ಯಂತರ ರು. ಆದಾಯವಿದೆ. ಶಂಕರಾಚಾರ್ಯ ಪೀಠದ ಸ್ವಾಮಿಯವರ ಸಂಚಿನ ಮತ್ತು ವಿಭಜನಾವಾದಿ ಹೇಳಿಕೆಯಿಂದ, ಶಿರಡಿ ಮಂದಿರದ ಭಕ್ತರ ಸಂಖ್ಯೆ ಕಡಿಮೆಯಾಗಬಹುದು. ಆದಾಯ ಕುಂಠಿತವಾಗಬಹುದು. ಇದೇ ಭಕ್ತರು ಭವಿಷ್ಯದಲ್ಲಿ ಬ್ರಾಹ್ಮಣರ ದೇವಸ್ಥಾನಗಳ, ದೇವರುಗಳ ಭಕ್ತರಾಗಬಹುದು. ಶಿರಡಿ ಸಾಯಿಬಾಬಾ ಮಂದಿರಗಳಿಗೆ ಸಲ್ಲಿಕೆಯಾಗುವ ಒಂದಿಷ್ಟು ಕಾಣಿಕೆಯಾದರೂ ಮುಂದಿನ ದಿನಗಳಲ್ಲಿ ಬ್ರಾಹ್ಮಣರ ದೇವಸ್ಥಾನಗಳಿಗೆ ಕಾಣಿಕೆಯಾಗಿ ಹರಿದು ಬರಬಹುದು !

ದೇಶವಾಸಿಗಳಲ್ಲಿ ಭ್ರಮೆಯನ್ನು ಸೃಷ್ಟಿಸಿ, ಭಾರೀ ನಿರೀಕ್ಷೆಯೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಇರಿಸಿದ ಮತ್ತು ಇರಿಸಲಿರುವ ತಪ್ಪು ಕ್ರಮಗಳ ಕಡೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಸಂಚಿನ ಭಾಗವಾಗಿಯೂ ಸ್ವರೂಪಾನಂದರಿಂದ ಇಂಥ ಹೇಳಿಕೆಯನ್ನು ಕೊಡಿಸಿರಬಹುದು. ಹಿಂದೂ-ಮುಸ್ಲೀಮರ ನಡುವೆ ವಿಷಬೀಜ ಬಿತ್ತುವ ವಿಭಜನಾವಾದಿ ಹೇಳಿಕೆಯೂ ಇದಾಗಿರುವುದರಿಂದ ಈ ಹೇಳಿಕೆಯ ಹಿಂದೆ ಬಹುದೊಡ್ಡ ಷಡ್ಯಂತ್ರ ಇರುವ ಎಲ್ಲಾ ಸಾಧ್ಯತೆಗಳೂ ಇವೆ.

ದೇಶದ ಜನರು, ಭ್ರಷ್ಟ ರಾಜಕಾರಣಿಗಳು ಹಾಗೂ ಖಾವಿಯ ಮರೆಯಲ್ಲಿ ಅಡಗಿರುವ ದುಷ್ಟ ಸ್ವಾಮೀಗಳ ನಡೆ-ನುಡಿಗಳನ್ನು ಎಚ್ಚರದಿಂದ ಗಮನಿಸಬೇಕಾದ ಕೆಟ್ಟ ಕಾಲಘಟ್ಟ ಇದೀಗ ನಿರ್ಮಾಣವಾಗಿದೆ !
– ಶ್ರೀರಾಮ ದಿವಾಣ.

ಕೊಲ್ಲೂರು ನಿತ್ಯಾನಂದ ಮಂದಿರಕ್ಕೆ ಕಲ್ಲೆಸೆದು ಹಾನಿ: ಲಕ್ಷಾಂತರ ರು.ನಷ್ಟ !

Posted: ಜೂನ್ 21, 2014 in Uncategorized
ಟ್ಯಾಗ್ ಗಳು:, , , , , , , , , , , , , , , , , , , , , , , , , , , , , , , , , , , , , , , , , , , , , , , , , , , , , , , , ,

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಹೊರವಲಯದಲ್ಲಿರುವ ಸದ್ಗುರು ಭಗವಾನ್ ಶ್ರೀ ನಿತ್ಯಾನಂದ ಮಂದಿರ ಹಾಗೂ ಗುರು ನಿತ್ಯಾನಂದರ ನೇರ ಶಿಷ್ಯರಾಗಿದ್ದ ಶ್ರೀ ವಿಮಲಾನಂದ ಸ್ವಾಮೀಜಿಯವರ ಸಮಾಧಿಗೆ ಸ್ಥಳೀಯ ದುಷ್ಕರ್ಮಿಗಳು ಕಳೆದ ರಾತ್ರಿ ಕಲ್ಲೆಸೆದು ವ್ಯಾಪಕ ಹಾನಿ ಮಾಡಿದ ಘಟನೆ ನಡೆದಿದೆ.

ಜೂನ್ 20ರ ಮಧ್ಯರಾತ್ರಿ ಭಾರೀ ಮಳೆ ಬೀಳುತ್ತಿದ್ದು, ಇದೇ ಸಮಯದಲ್ಲಿ ಕಿಡಿಗೇಡಿಗಳು ಮಂದಿರ ಮತ್ತು ಸಮಾಧಿಗೆ ನಿರಂತರವಾಗಿ ದೊಡ್ಡ ದೊಡ್ಡ ಕಲ್ಲುಗಳನ್ನು
ಎಸೆಯಲಾರಂಭಿಸಿದರೆನ್ನಲಾಗಿದೆ. ಇದರಿಂದಾಗಿ ಮಂದಿರ ಮತ್ತು ಸಮಾಧಿಗೆ ಲಕ್ಷಾಂತರ ರು. ನಷ್ಟ ಉಂಟಾಗಿದೆ ಎಂದು ದೂರಲಾಗಿದೆ.

ವಿಮಲಾನಂದ ಸ್ವಾಮೀಜಿಗಳನ್ನು ಸ್ಥಳಾಂತರಕ್ಕೆ ಸರಕಾರದ ಮೇಲೆ ಒತ್ತಡ ಹಾಕಿದ ಪಟ್ಟಭದ್ರ ಹಿತಾಸಕ್ತಿಗಳೇ ಈ ದುಷ್ಕೃತ್ಯವನ್ನು ಎಸಗಿದ್ದಾರೆ ಎಂ ಬಲವಾಗಿ ಸಂಶಯಿಸಲಾಗಿದೆ. ಈ ದುಷ್ಟ ಶಕ್ತಿಗಳನ್ನು ಹೊರತುಪಡಿಸಿದರೆ, ಕೊಲ್ಲೂರು ಪರಿಸರದಲ್ಲಿ ನಿತ್ಯಾನಂದ ಮಂದಿರದ ಬಗ್ಗೆಯಾಗಲಿ, ವಿಮಲಾನಂದರ ಸಮಾಧಿಯ ಬಗ್ಗೆಯಾಗಲಿ ಎಲ್ಲರೂ ಗೌರವವನ್ನು ಹೊಂದಿದವರೇ ಆಗಿದ್ದಾರೆ ಎಂದು ನಿತ್ಯಾನಂದ ಮಂದಿರದ ಭಕ್ತಾಭಿಮಾನಿಗಳು ಅಭಿಪ್ರಾಯ
ವ್ಯಕ್ತಪಡಿಸಿದ್ದಾರೆ.

ದೂರು-ಖಂಡನೆ:
ಸ್ಥಾಪಿತ ಹಿತಾಸಕ್ತಿಗಳು ಎಸಗಿದ ಹೀನಾತಿಹೀನ ದುಷ್ಕೃತ್ಯದ ವಿರುದ್ಧ ನಿತ್ಯಾನಂದ ಮಂದಿರದ ವ್ಯವಸ್ಥಾಪಕರಾದ ಜಯಾನಂದ ಅವರು ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೇಮಾರು ಸಾಂದೀಪನಿ ಆಶ್ರಮದ ಈಶ ವಿಠಲದಾಸ ಸ್ವಾಮೀಜಿ, ತುಳು ರಂಗಭೂಮಿ ಮತ್ತು ಚಲನಚಿತ್ರ ನಿರ್ಮಾಪಕರೂ, ನಿರ್ದೇಶಕರೂ ಆದ ವಿಜಯ ಕುಮಾರ್ ಕೊಡಿಯಾಲಬೈಲ್, ಲೇಖಕರಾದ ಜಯಂತ್ ಪಡುಬಿದ್ರಿ, ಶ್ರೀರಾಮ ದಿವಾಣ ಸಹಿತ ಹಲವಾರು ಮಂದಿ ಮಂದಿರಕ್ಕೆ ಕಲ್ಲೆಸೆದು ಹಾನಿಯುಂಟುಮಡಿದವರ ಹೇಯ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಆರೋಪಿಗಳನ್ನು ಕೂಡಲೇ ಪತ್ತೆಹಚ್ಚಿ ಬಂಧಿಸಬೇಕು ಎಂದು ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

# ಹೌದು, ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇವಲ ಹತ್ತೇ ಹತ್ತು ದಿನಗಳಲ್ಲಿಯೇ, ತನ್ನದೂ ಸಹ ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರು ತುಳಿದ ದಾರಿಯೇ ಆಗಿದೆ ಎನ್ನುವುದನ್ನು ಹಾಲಿ ಪ್ರಧಾನಿ ನರೇಂದ್ರ ಮೋದಿ ತೋರಿಸಿಕೊಡಲು ಹೊರಟಿರುವುದು ಸ್ಪಷ್ಟವಾಗಿದೆ.

ಚುನಾವಣೆಗೆ ಮೊದಲು, ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ, ಯಾವೆಲ್ಲಾ ವಿಷಯಗಳ ಬಗ್ಗೆ ಬಿಜೆಪಿ ಮತ್ತು ಸಂಘ ಪರಿವಾರ ಎದುರಾಡಿತ್ತೋ, ಆ ವಿಷಯಗಳನ್ನೇ ಬಿಜೆಪಿ ನೃತೃತ್ವದ ಎನ್.ಡಿ.ಎ. ಸರಕಾರ ಅನುಸರಿಸುತ್ತಿರುವುದನ್ನು ನೋಡಿದರೆ, ಸಿಂಗ್ ಹತ್ತು ವರ್ಷಗಳಲ್ಲಿ ಮಾಡದೇ ಇದ್ದುದನ್ನು ಮೋದಿ ಹತ್ತೇ ತಿಂಗಳಲ್ಲಿ ಮಾಡಿಬಿಡುವಂತೆ ಕಾಣುತ್ತಿದೆ !

ಕಾಶ್ಮೀರ: 16ನೇ ಸಾರ್ವತ್ರಿಕ ಲೋಕಸಭಾ ಮಹಾಚುನಾವಣೆಯ ಬಹುತೇಕ ಫಲಿತಾಂಶಗಳೂ ಮೇ.16ರಂದು ಮಧ್ಯಾಹ್ನವೇ ಹೊರಬಂದಿತ್ತು. ಬಿಜೆಪಿ ಬಹುಮತ ಬಂದಿತ್ತು. ಮೋದಿ ಪ್ರಧಾನಿಯಾಗುವುದೂ ಸ್ಪಷ್ಟವಾಗಿತ್ತು. ಬಿಜೆಪಿ, ಸಮಘ ಪರಿವಾರದ ನಾಯಕರು,
ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಮುಳುಗಿದ್ದರು. ಆಶ್ಚರ್ಯವೆಂದರೆ ಇದೇ ದಿನ ರಾತ್ರಿ ಗಂಟೆ 7.35ಕ್ಕೆ ಜಮ್ಮುವಿನ ಪೂಂಛ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್ ಸಮೀಪ ನಮ್ಮ ದೇಶದ ಸೇನಾ ನೆಲೆಗಳ ಮೇಲೆ ಪಾಕಿಸ್ಥಾನದ ಸೈನಿಕರು ಗುಂಡಿನ ದಾಳಿ ನಡೆಸಿ ಕದನ ವಿರಾಮವನ್ನು ಉಲ್ಲಂಘಿಸಿದ್ದರು. ಈ ಮೂಲಕ ಪಾಕ್ ಮೋದಿಯವರನ್ನು ಸ್ವಾಗತಿಸಿತ್ತು, ಗುಂಡಿನ ಸವಾಲನ್ನೂ ಹಾಕಿತ್ತು.

ಸಂಭ್ರಮಾಚರಣೆಯಲ್ಲಿ ಮುಳುಗಿದ್ದ ಕಾರಣಕ್ಕೇ ಇರಬೇಕು, ಬಿಜೆಪಿ-ಸಂಘ ಪರಿವಾರದ ಯಾವೊಬ್ಬ ನಾಯಕರಾಗಲೀ, ಭಾವೀ ಪ್ರಧಾನಿಯಾಗಲೀ ಕದನ ವಿರಾಮ ಉಲ್ಲಂಘಿಸಿದ ಪಾಕ್ ಕ್ರಮದ ವಿರುದ್ಧ ಒಂದೇ ಒಂದು ಖಂಡನಾ ಹೇಳಿಕೆಯನ್ನೂ ನೀಡದೆ ಮೌನ ವಹಿಸಿತು. ಚುನಾವಣೆಗಿಂತ ಮೊದಲೇ ಏನಾದರೂ ಈ ಘಟನೆ ನಡೆಯುತ್ತಿದ್ದರೆ ಭೂಮಿಯೇ ಅಡಿ ಮೇಲಾಗಿಬಿಟ್ಟಿತು ಎಂಬಂತೆ ಇವರೆಲ್ಲ ದೇಶದ್ಯಾಂತ ಭೂಮಿ-ಆಕಾಶ ಒಂದು ಮಾಡುತ್ತಿದ್ದರೋ ಏನೋ ? ಕದನ ವಿರಾಮ ಉಲ್ಲಂಘಿಸಿದ ಪಾಕ್ಗೆ ಸರಿಯಾಗಿ ಪಾಠ ಕಲಿಸಬೇಕೆಂದೂ, ಪ್ರಧಾನಿ ಸಿಂಗ್ ಮೌನ ಮುರಿದು ಸವಾಲಿಗೆ ಪ್ರತಿ ಸವಾಲು ಹಾಕಬೇಕೆಂದೂ ಫರ್ಮಾನು ಹೊರಡಿಸುತ್ತಿದ್ದರೋ ಏನೋ ? ಚುನಾವಣೆ ಮುಗಿದು ಬಿಜೆಪಿಗೆ ಬಹುಮತ ಪ್ರಾಪ್ತಿ ಆದ ಕಾರಣವಿರಬೇಕು, ವಿರೋಧ ಪಕ್ಷದಲ್ಲಿದ್ದಾಗ ಒಂದೇ ಒಂದು ಅವಕಾಶವನ್ನೂ ಕಳೆದುಕೊಳ್ಳಬಾರದೆಂಬಂತೆ ಬೊಬ್ಬೆರಿಯುತ್ತಿದ್ದವರ ಬಾಯಿ ಬಂದಾಗಿತ್ತು !

ಜಮ್ಮು ಗಡಿಯಲ್ಲಿ ಪಾಕ್ ಕದನ ವಿರಾಮ ಉಲ್ಲಂಘಿಸಿದ ಕೇವಲ ಎಡರೇ ಎರಡು ದಿನಗಳ ಅಂತರದಲ್ಲಿ ಕಾಶ್ಮೀರ ಪ್ರತ್ಯೇಕತಾವಾದಿ ಹೋರಾಟಗಾರ ಮತ್ತು ಹುರಿಯತ್ ನಾಯಕ ಸಯ್ಯದ್ ಅಲಿ ಶಾ ಗಿಲಾನಿ, ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಿದರೆ ಭಾರತಕ್ಕೆ ಒಳಿತು ಎಂಬ ಸವಾಲನ್ನೊಡ್ಡಿದ್ದರು. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಯಾವುದೇ ಕೊಡುಗೆ ಕೊಡಲೂ ಸಆಧ್ಯವಾಗಲಿಲ್ಲ ಎಂಬ ಮೋದಿಯವರ ಹೇಳಿಕೆಗೆ ನೇರವಾಗಿಯೇ ಪ್ರತಿಕ್ರಿಯಿಸಿದ್ದ ಗಿಲಾನಿ, ಕಾಶ್ಮೀರದಲ್ಲಿ ನಡೆಯುತ್ತಿರುವುದು ಸ್ವಾತಂತ್ರ್ಯ ಚಳುವಳಿಯಾಗಿದ್ದು, ಈ ಚಳುವಳಿಯನ್ನು ಅರಿತುಕೊಳ್ಳುವ ಅವಕಾಶವಿದೆ ಎಂದು ತೊಡೆತಟ್ಟಿದ್ದರು.

ಗಿಲಾನಿಯ ನೇರಾನೇರ ಸವಾಲಿಗೂ ಮೋದಿ ತುಟಿ ಪಿಟಕ್ ಅನ್ನಲಿಲ್ಲ. ಸಂಘ ಪರಿವಾರವೂ ಜಾಣ ಮೌನ ತಾಳಿತು. ಇದೆಲ್ಲಕ್ಕೂ ಉತ್ತರವಾಗಿ ಮೋದಿ ತನ್ನ ಪ್ರಮಾಣವಚನ ಸಮಾರಂಭಕ್ಕೆ ಪಾಕ್ ಪ್ರಧಾನಿ ನವಾಜ್ ಷರೀಫ್ ರನ್ನು ರತ್ನಗಂಬಳಿ ಹಾಸಿ ಸ್ವಾಗತಿಸಿದರು, ಯಾವುದೇ ಎಚ್ಚರಿಕೆಯನ್ನೂ ನೀಡದೆ ಮಾತುಕತೆ ನಡೆಸಿ ಕಳುಹಿಸಿಕೊಟ್ಟರು.

ಕಳೆದ ವರ್ಷ ಭಾರತ-ಪಾಕ್ ಗಡಿಯಲ್ಲಿ ಪಾಕ್ ಸೈನಿಕರು ಭಾರತದ ವೀರ ಯೋಧ ಹೇಮಂತ್ ಅವರನ್ನು ಬರ್ಬರವಾಗಿ ಕೊಂದುಹಾಕಿದ್ದರು. ಮಾತ್ರವಲ್ಲ, ದೇಹದಿಂದ ತಲೆ ಕತ್ತರಿಸಿ ತಮ್ಮ ದೇಶಕ್ಕೆ ಕೊಂಡೊಯ್ಯುವ ಮೂಲಕ ಅಮಾನುಷತೆಯನ್ನೂ ಮೆರೆದಿದ್ದರು. ನಿಯೋಜಿತ ಪ್ರಧಾನಿ ಮೋದಿ ತನ್ನ ಪ್ರಮಾಣವಚನ ಕಾರ್ಯಕ್ರಮಕ್ಕೆ ಅದೇ ಪಾಕ್ ನ ಪ್ರಧಾನಿ ಷರೀಫ್ ರನ್ನು
ಆಹ್ವಾನಿಸಿದ್ದನ್ನು ತಿಳಿದುಕೊಂಡ, ಹುತಾತ್ಮ ಹೇಮಂತ್ ಅವರ ವಿಧವೆ ಪತ್ನಿ ಧರ್ಮಾವತಿ, ದೆಹಲಿಯಲ್ಲಿ ಮೋದಿಯವರು ಷರೀಫ್ ಜೊತೆಗೆ ಕೈಕುಲುಕುತ್ತಿದ್ದಾಗ ಉತ್ತರ ಪ್ರದೇಶದ ಮಥುರಾದಲ್ಲಿ, ‘ಪಾಕ್ ಪ್ರಧಾನಿ ಷರೀಫ್ ಭಾರತಕ್ಕೆ ಕಾಲಿಡುವುದಾದರೆ ಹೊತ್ತೊಯ್ದ ತನ್ನ ಪತಿಯ ಶಿರದೊಂದಿಗೆ ಬರಲಿ’ ಎಂಬ ಬೇಡಿಕೆಯೋಂದಿಗೆ ನಿರಶನ ಕೈಗೊಂಡಿದ್ದರು.

ವಿರೋಧ ಪಕ್ಷದಲ್ಲಿದ್ದ ಅಷ್ಟೂ ವರ್ಷಗಳ ಕಾಲ ಪಾಕ್ ಗಡಿಯಿಂದ ಗುಂಡು ಹಾರಿದ್ದಕ್ಕೆ, ಪ್ರಧಾನಿ ಸಿಂಗ್ ಪಾಕ್ ಪ್ರಧಾನಿಯ ಜೊತೆ ಮಾತನಾಡಿದ್ದಕ್ಕೆಲ್ಲ ಇನ್ನೇನು ಭಾರತ ಪಾಕ್ ಕೈವಶವಾಗಿಹೋಯಿತು ಎಂಬಂತಾಡುತ್ತಿದ್ದ ಬಿಜೆಪಿ, ಸಂಘ ಪರಿವಾರ, ಮೋದಿಯವರಿಗೆಲ್ಲ ಅದೇ ಪಾಕ್ ಪ್ರಧಾನಿ ಜೊತೆಗೆ ಕೈಕುಲುಕುತ್ತಿದ್ದಾಗ ನಾಚಿಕೆಯಾದರೂ ಆಗಬೇಕಲ್ಲ ? ಇಲ್ಲ, ಅವರಿಗೇನೂ ಆಗಿರಲಾರದು. ಯಾಕೆಂದರೆ, ಅವರಿಗೆ ಅದಾಗಲೇ ಮನಮೋಹನ್ ಸಿಂಗ್ ಮಾರ್ಗವನ್ನು ಅನುಸರಿಸಿಯಾಗಿತ್ತು !

ಇವುಗಳೆಲ್ಲದರ ನಡುವೆ ಪ್ರಧಾನಿ ಮೋದಿ, ಕಾಶ್ಮೀರದಿಂದ ವಲಸೆಹೋದ ಪಂಡಿತರಿಗೆ ಮತ್ತೆ ಕಾಶ್ಮೀರದಲ್ಲೇ ಪುನರ್ವಸತಿ ಒದಗಿಸುವುದಾಗಿ ಹೇಳಿಕೊಂಡಿದ್ದಾರೆ. ಈ
ಹೇಳಿಕೆಯನ್ನೋದುವಾಗ ಒಂದೆಡೆ ಖುಷಿಯೇನೋ ಆಗುತ್ತದೆ. ಆದರೆ, ಮತ್ತೊಂದೆಡೆ ಹೀಗೆ ಸರಕಾರಿ ಪುನರ್ವಸತಿಯನ್ನು ನಂಬಿ ಕಾಶ್ಮೀರಕ್ಕೆ ಮರಳುವವರ ಜೀವಕ್ಕೆ ಸರಕಾರ ಯಾವ ಮತ್ತು ಎಷ್ಟು ಭದ್ರತೆ ಓದಗಿಸಲಿದೆ ಮತ್ತು ನಾಳೆ ಅವರುಗಳ ಜೀವಕ್ಕೇನಾದರೂ ಆದಲ್ಲಿ ಅದರ ಹೊಣೆಯನ್ನು ಬಿಜೆಪಿ ಮತ್ತೆ ಮನಮೋಹನ್ ಸಿಂಗ್ ಅವರ ತಲೆಗೆ ಕಟ್ಟಿ ಕೈಚೆಲ್ಲಲಿದೆಯೇ ಎಂಬುದರ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಅಧಿಕಾರಕ್ಕೆ ಬಂದ ವಾರದೊಳಗೆಯೇ ಮೊದಿ ಗಾಳಿಯಲ್ಲಿ ಗುಂಡು ಹಾರಿಸಲು ಕಲಿತುಕೊಂಡಿದ್ದಾರೆ ಎನ್ನುವುದಕ್ಕೆ ಇಂಥ
ಸ್ಪಷ್ಟತೆಯಿಲ್ಲದ ‘ಹೇಳಿಕೆಗಳು’ ಪುಷ್ಟಿ ಒದಗಿಸುತ್ತದೆ.

ಪ್ರಧಾನಿ ಕಾರ್ಯಾಲಯದ ಸಚಿವ ಜಿತೇಂದ್ರ ಸಿಂಗ್ ಅವರು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಕೊಡುವ ಸಂವಿಧಾನದ 370ನೇ ಕಲಂ ಬಗ್ಗೆ ಚರ್ಚೆಯಾಗಬೇಕೆಂದು ಕರೆಕೊಟ್ಟರು. ಹೀಗೊಂದು ಕರೆಯನ್ನು ಇದುವರೆಗೂ ಯಾರೂ ಕೊಟ್ಟಿಲ್ಲ ಎಂಬಂತೆ ಸಚಿವ ಜಿತೇಂದ್ರರು ಕರೆಕೊಟ್ಟು ಸ್ವಯಂ ಬೀಗಿಕೊಂಡಿರಲೂಬಹುದು. ಆದರೆ ಎಲ್ಲರಿಗೂ ತಿಳಿದೇ ಇರುವಂತೆ 370ನೇ ಕಲಂ ಬಗ್ಗೆ ಜಮ್ಮು ಕಾಶ್ಮೀರ ರಾಜ್ಯ ಯಾವಾಗ ಭರತದೊಂದಿಗೆ ವಿಲೀನಗೊಂಡಿತೋ, ಅಂದಿನಿಂದಲೇ ಈ ಕಲಂ ಬಗ್ಗೆಯೂ ಚರ್ಚೆ ನಡೆಯುತ್ತಲೇ ಇದೆ.

ಸಚಿವ ಜಿತೇಂದ್ರರ ಹೇಳಿಕೆಗೆ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ತಿರುಗೇಟನ್ನೂ ಕೊಟ್ಟದ್ದಾಯಿತು. 370ನೇ ಕಲಂ ರದ್ದಾದರೆ ಕಾಶ್ಮೀರ ಭಾರತದೊಂದಿಗೆ ಇರಲಾರದು ಎಂಬುದು ಅವರ ಸ್ಪಷ್ಟ ನುಡಿ. ಇನ್ನೆರಡು ರಾಜ್ಯಗಳ ಮುಖ್ಯಮಂತ್ರಿಗಳೂ ಈ ಬಗ್ಗೆ ಗೌರವದಿಂದಲೇ ‘ದುಡುಕದಿರಿ’ ಎಂಬ ಕಿವಿಮಾತನ್ನೂ ಸಚಿವ ಜಿತೇಂದ್ರರಿಗೆ ನೀಡಿದ್ದಾಯಿತು. ಆದರೆ, ಇದಾವುದಕ್ಕೂ ನರೇಂದ್ರ ಮೋದಿಯವರ ಸಿಂಹ ಘರ್ಜನೆ ಕೇಳಿಬರಲೇ ಇಲ್ಲ !

ನಮ್ಮ ದೇಶದ ರಕ್ಷಣಾ ಇಲಾಖೆಯಲ್ಲಿ ವಿದೇಶಿ ಕಂಪೆನಿಗಳಿಗೆ 26 ಶೇಕಡಾ ಬಂಡವಾಳ ಹೂಡಲು ಡಾ.ಮನಮೋಹನ್ ಸಿಂಗ್ ರವರ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ತಮ್ಮ
ಆಡಳಿತಾವಧಿಯಲ್ಲಿ ಅವಕಾಶಮಾಡಿಕೊಟ್ಟಿತ್ತು. ಆಗ ವಿರೋಧ ಪಕ್ಷವಾಗಿದ್ದ ಇದೇ ಬಿಜೆಪಿ, ಸಂಘ ಪರಿವಾರ ಯುಪಿಎ ಸರಕಾರದ ಈ ನಡೆಯನ್ನು ಖಂಡಿಸಿ ದೇಶದ್ಯಾಂತ ಬೀದಿಗಿಳಿಸಿದು ಪ್ರತಿಭಟನೆ ನಡೆಸಿತ್ತು. ಅದೇ ಬಿಜೆಪಿ ಈಗ ಅಧಿಕಾರದಲ್ಲಿದೆ. ಬಿಜೆಪಿಯ ಮೋದಿ ಪ್ರಧಾನಿಯಾಗಿದ್ದಾರೆ. ಮೋದಿ ಹೇಳುತ್ತಿದ್ದಾರೆ: ‘ದೇಶದ ರಕ್ಷಣಾ ಇಲಾಖೆಯಲ್ಲಿ 100 ಶೇಕಡಾ ಬಂಡವಾಳ ಹೂಡಲು ವಿದೇಶಕ್ಕೆ ಅವಕಾಶ ಮಾಡಿಕೊಡಲಾಗುವುದು’.

ಸ್ವಾಭಿಮಾನ, ದೇಶಾಭಿಮಾನವಿರುವ ಯಾವನೇ ಒಬ್ಬ ಭಾರತೀಯನೂ ನಮ್ಮ ದೇಶದ ರಕ್ಷಣಾ ಇಲಾಖೆಯಲ್ಲಿ ನೂರು ಶೇಕಡಾ ವಿದೇಶಿ ಬಂಡವಾಳ ಹೂಡಿಕೆ (ಎಫ್.ಡಿ.ಐ.)ಗೆ ಅವಕಾಶ ಮಾಡಿಕೊಡುವ ಕ್ರಮವನ್ನು ಎಷ್ಟು ಮಾತ್ರಕ್ಕೂ ಒಪ್ಪಲಾರ, ಒಪ್ಪಬಾರದು. ಆದರೆ, ಬಿಜೆಪಿ, ಸಂಘ ಪರಿವಾರದ ಒಬ್ಬನೇ ಒಬ್ಬ ನಾಯಕನಾಗಲೀ, ಕಾರ್ಯಕರ್ತರಾಗಲಿ ಮೋದಿ ಮೇಲಿನ ಹುಚ್ಚು ಅಭಿಮಾನದ ಸಂಭ್ರಮದಲ್ಲು ತೇಲಾಡುತ್ತಿದ್ದಾರೆಯೇ ವಿನಹಾ ನಮ್ಮ ದೇಶದ ಅಳಿವು ಉಳಿವಿನ ಗಂಭೀರವಾದ ವಿಷಯವಾದ ಎಫ್.ಡಿ.ಐ. ಬಗ್ಗೆ ಚಕಾರ ಶಬ್ದ ಮಾತಾಡುತ್ತಿಲ್ಲ. ಎಲ್ಲರೂ ತಮ್ಮಗಳ ಬಾಯಿಗೆ ಬೀಗ ಹಾಕಿ ಕೈಕಟ್ಟಿ ಕುಳಿತುಕೊಂಡು ಟಿವಿ ಛಾನೆಲ್ಗಳಲ್ಲಿ ಮೋದಿಯವರನ್ನು ನೋಡುತ್ತಾ ಯಾವುದೋ ಲೋಕದಲ್ಲಿ ವಿಹರಿಸುತ್ತಿದ್ದಾರೆ. ಇದೆಲ್ಲದರ ಬಗ್ಗೆ ಮಾತಾಡಲು ಸಮರ್ಥವಾದೊಂದು ವಿರೋಧ ಪಕ್ಷವೂ ಇಲ್ಲದೆ ದೇಶ ಬಡವಾಗಿದೆ.

ದಿನ ಬಳಕೆಯ, ಅಗತ್ಯ ವಸ್ತುಗಳ ದರ ಏರಿಕೆಯನ್ನೇ ಮುಂದಿಟ್ಟುಕೊಂಡು ಚುನಾವಣೆಗಿಳಿದ ಮೋದಿ, ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಡಿಸೆಲ್ ದರವನ್ನು ಏರಿಸುವ ಮೂಲಕ ದೇಶದ ಆಡಳಿತ ವ್ಯವಸ್ಥೆಯಲ್ಲಿ ಬದಲಾಗಿದ್ದು ಕೇವಲ ಪಕ್ಷ ಮತ್ತು ಮುಖಗಳು ಮಾತ್ರ, ಆಡಳಿತ ನೀತಿಯಲ್ಲಿ ಏನೇನೂ ಬದಲಾಗಿಲ್ಲ ಎಂಬುದನ್ನು ಜಗಜ್ಜಾಹೀರುಪಡಿಸಿದರು.

ಒಂದೆಡೆಯಿಂದ ಡಿಸೆಲ್ ದರ ಏರಿಸಿದ ಮೊದಿ ಸರಕಾರ ಮತ್ತೊಂದೆಡೆಯಲ್ಲಿ ರೈಲು ಪ್ರಯಾಣ ದರ ಏರಿಸುವದಾಗಿಯೂ ಪ್ರಕಟಿಸಿತು. ರೈಲ್ವೆ ದರ ಏರಿಕೆ ಮಾಡುವುದಾಗಿ ಘೋಷಿಸಿದ ಮೋದಿ ಸಂಪುಟದ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡರು, ಅದೇ ಉಸಿರಿನಲ್ಲಿ ರೈಲ್ವೆ ದರ ಏರಿಸಲು ಕಳೆದ ಯುಪಿಎ ಸರಕಾರವೇ ಕಾರಣವೆಂದೂ, ಅವರು ಮಾಡಿಟ್ಟ ಹೊಂಡವನ್ನು ತುಂಬುವುದು ಅನಿವಾರ್ಯವಾದ ಕಾರಣ ರೈಲ್ವೆ ದರ ಏರಿಕೆ ಅನಿವಾರ್ಯವೆಂದು ತಮ್ಮ ಎಮದಿನ ಮಾತಿನ ಶೈಲಿಯಲ್ಲಿ ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತೆ ಜನತೆಗೆ ವರದಿ ಒಪ್ಪಿಸಿದ್ದಾರೆ.

ಪ್ರಸ್ತುತದ ಎಲ್ಲಾ ಸಮಸ್ಯೆಗಳಿಗೂ, ಅವ್ಯವಸ್ಥೆಗಳಿಗೂ, ನಷ್ಟಗಳಿಗೂ, ಸಾಲಗಳಿಗೂ ಕಳೆದ ಹತ್ತು ವರ್ಷಗಳಲ್ಲಿ ಯುಪಿಎ ಆಡಳಿತವೇ ಕಾರಣ ಎಂಬುದನ್ನು ಚುನಾವಣೆಯ ಸಮಯದಲ್ಲೇ ಮೋದಿ ಹೋದಲ್ಲಿ ಬಂದಲ್ಲಿ ಹೇಳಿಕೊಂಡು ಬಂದಿದ್ದಾರೆ. ಮತದಾರರು ಬಿಜೆಪಿಗೆ ಬಹುಮತವನ್ನೂ ಒದಗಿಸಿಕೊಟ್ಟಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕವೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಆಡಳಿತ ಪಕ್ಷವೊಂದು ಸುಮ್ಮನೇ ಆರೋಪ ಮಾಡುವುದರ ಬದಲಾಗಿ ಇಡೀ ದೇಶದ ಹಾಲಿ ಸ್ಥಿತಿ ಗತಿಗಳ ಬಗ್ಗೆ ಯಾಕೆ ಒಂದು ಸಮಗ್ರವಾದ ಶ್ವೇತಪತ್ರ ಹೊರಗೆ ತರಬಾರದು ? ಶ್ವೇತಪತ್ರ ಬಿಡುಗಡೆ ಮಾಡಿದ್ದೇ ಅದಲ್ಲಿ ಎಲ್ಲವೂ ಸ್ಪಷ್ಟವಾಗುತ್ತದೆ ತಾನೇ ?
– ಶ್ರೀರಾಮ ದಿವಾಣ.

# 128 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷವನ್ನು 2014ರಲ್ಲಿ ನಡೆದ 16ನೇ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ದೇಶದ ಮತದಾರರು ಮಖಾಡೆ ಮಲಗಿಸಿದ್ದಾರೆ. ಸ್ವಾತಂತ್ರ್ಯ ಲಭಿಸಿದ ನಂತರದಲ್ಲಿ ಮಹಾತ್ಮ ಗಾಂಧಿಯವರು ನೀಡಿದ ಸೂಚನೆಯಂತೆ ಪಕ್ಷವನ್ನು ಗೌರವದಿಂದಲೇ ವಿಸರ್ಜನೆ ಮಾಡುತ್ತಿದ್ದರೆ, ಇದೀಗ ಇಂಥ ಮುಖಭಂಗ ಅನುಭವಿಸಬೇಕಾಗಿ ಬರುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ, ಚಳುವಳಿಗೆ ಈ ರೀತಿಯ ಅಪಮಾನವಾಗಲು, ಕಳೆದ ಕೆಲವು ದಶಕಗಳಿಂದ ಕಾಂಗ್ರೆಸ್ನ ನಾಯಕತ್ವ ವಹಿಸಿದ ಪ್ರತಿಯೋರ್ವ ನಾಯಕನೂ, ಮುಖ್ಯವಾಗಿ ಗಾಂಧಿ ಕುಟುಂಬ ವರ್ಗವೇ ನೇರವಾಗಿ ಹೊಣೆಗಾರರು.

ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಈ ಸಲದ ಚುನಾವಣೆಯನ್ನು ಈ ಹಿನ್ನೆಲೆಯಲ್ಲಿ ನೋಡಬೇಕು ಎಂದು ಕಾಂಗ್ರೆಸಿಗರು ಹೇಳಬಹುದು. ಆದರೆ, ಸ್ವಾತಂತ್ರ್ಯಪೂರ್ವದಲ್ಲಿ ಸ್ಥಾಪನೆಗೊಂಡು, ಸುಧೀರ್ಘ ಕಾಲದಿಂದ ಅಧಿಕಾರ ಅನುಭವಿಸಿಕೊಂಡು ಬಂದು ದೇಶಕ್ಕೆ ದೇಶವನ್ನೇ ಭ್ರಷ್ಟವನ್ನಾಗಿಸಿದ, ಇಂದಿಗೂ ಕಾಂಗ್ರೆಸ್ ಮೂಲಕವಾಗಿಯಾದರೇ ಸುಲಭವಾಗಿ ಅಧಿಕಾರ ಅನುಭವಿಸಬಹುದು ಎಂದು ನಂಬಿಕೊಂಡಿರುವ ನಾಯಕರ ಪಕ್ಷವಾದ ಕಾಂಗ್ರೆಸ್ನ್ನು ಹಾಗೆ ಹತ್ತರಲ್ಲಿ ಹನ್ನೊಂದನೇ ಪಕ್ಷ ಎಂದು ಪರಿಗಣಿಸಿ ವಿಮರ್ಶಿಸಲು, ರಿಯಾಯಿತಿ ನೀಡಲು ಸಾಧ್ಯವಿಲ್ಲ.

ಸ್ವಾತಂತ್ರ್ಯ ಹೋರಾಟ ನಡೆಸಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು ನಮ್ಮ ಪಕ್ಷ ಎಂಬ ಭ್ರಮೆ, ತಮ್ಮದು ಅತೀ ದೊಡ್ಡ ರಾಷ್ಟ್ರೀಯ ಮಟ್ಟದ ರಾಜಕೀಯ ಪಕ್ಷ ಎನ್ನುವ ದುರಹಂಕಾರ, ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾವುದೇ ಪಕ್ಷಗಳಿಗೂ ಪೂರ್ಣ ಐದು ವರ್ಷಗಳ ಕಾಲ ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ ಎನ್ನುವ ವರಸೆ ಇತ್ಯಾದಿಗಳೊಂದಿಗೆ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ನಾಯಕತ್ವಕ್ಕೆ, ದೇಶದ ಜನರ ನಿಜವಾದ ನಾಡಿಮಿಡಿತ ಅರಿತುಕೊಳ್ಳುವ ಪ್ರಾಮಾಣಿಕವಾದ ಆಸಕ್ತಿಯಾಗಲಿ, ಕಾಳಜಿಯಾಗಲಿ ಇಲ್ಲ ಎನ್ನುವುದು ಈಗಾಗಲೇ ಸಾಬೀತಾಗಿರುವಂಥದ್ದೇ.

ಗಾಂಧಿ ಹೊರತುಪಡಿಸಿ ಬೇರೆ ಗತಿಯೇ ಇಲ್ಲದ ಪಕ್ಷ ಕಾಂಗ್ರೆಸ್. ಗಾಂಧಿ ಬಿಟ್ಟರೆ ಕಾಂಗ್ರೆಸ್ ನಂಥ ರಾಷ್ಟ್ರೀಯ ಪಕ್ಷದಲ್ಲಿ ನಾಯಕತ್ವಕ್ಕೆ ಅರ್ಹತೆ, ಯೋಗ್ಯತೆ ಇರುವ ಇನ್ನೊಬ್ಬ ವ್ಯಕ್ತಿ ಇಲ್ಲ. ಸೋನಿಯಾ ಗಾಂಧಿ ನಮಗೆ ಬದುಕುವ ಹಕ್ಕು ಕೊಟ್ಟವರು ಎಂದು ತಲೆಬುಡವಿಲ್ಲದಂತ ಭಾಷಣ ಮಾಡಲು ನಾಚಿಕೆಪಡಲಾರದ ಆಸ್ಕರ್ ಫೆರ್ನಾಂಡಿಸ್ ರಂಥವರು ಮಾತ್ರ ಈ ಪಕ್ಷದಲ್ಲಿ ನಾಯಕತ್ವಕ್ಕೆ ಏರಲು ಸಾಧ್ಯ.

ಕಾಂಗ್ರೆಸ್ ಅಧಿನಾಯಕಿಯಾಗಿದ್ದ ಇಂದಿರಾ ಗಾಂಧಿ ಹತ್ಯೆಯಾದಾಗ, ಪೈಲೆಟ್ ಆಗಿದ್ದ ರಾಜೀವ್ ಗಾಂಧಿಯವರನ್ನು ಕರೆತಂದು ಪಕ್ಷದ ಚುಕ್ಕಾಣಿ ವಹಿಸಿಕೊಡಲಾಗುತ್ತದೆ, ಬೆನ್ನಿಗೇ ಪ್ರಧಾನಿ ಮಾಡಲಾಗುತ್ತದೆ. ರಾಜೀವ್ ಗಾಂಧಿ ಹತ್ಯೆಯಾದಾಗ, ಪತಿ ಕಳೆದುಕೊಂಡ ದುಖಃದಲ್ಲಿದ್ದ ಸೋನಿಯಾ ಗಾಂಧಿಯವರನ್ನು ಕರೆತಂದು ಪಕ್ಷದ ನಾಯಕತ್ವ ನೀಡಲಾಗುತ್ತದೆ. ಪ್ರಧಾನಿಯನ್ನಾಗಿ ಆರ್ಥಿಕ ತಜ್ಞ ಡಾ.ಮನಮೋಹನ್ ಸಿಂಗ್ ರನ್ನು ಆಯ್ಕೆ ಮಾಡಿದ ಬಳಿಕವೂ, ಅವರನ್ನು ಸೋನಿಯಾ ಗಾಂಧಿಯವರ ಜೊತೆಗೆ ಸೋನಿಯಾ ಪುತ್ರ ರಾಹುಲ್ ಗಾಂಧಿಯೂ
ನಿಯಂತ್ರಿಸುವಂಥ ಶೋಷನೀಯ ಪರಿಸ್ಥಿತಿಯನ್ನು ಸೃಷ್ಟಿಸಲಾಗುತ್ತದೆ. ರಾಹುಲ್ ಗಾಂಧಿಯನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ. ಪಕ್ಷದಲ್ಲಿ ಯಾವುದೇ ಪ್ರಮುಖ ಪದಾಧಿಕಾರಿ ಅಲ್ಲದಿದ್ದರೂ ಪ್ರಿಯಾಂಕಾ ಗಾಂಧಿಯ ಭಾವಚಿತ್ರದ ಫ್ಲೆಕ್ಸ್ ಗಳನ್ನು ಹಾದಿ ಬೀದಿಯಲ್ಲಿ ಪ್ರದರ್ಶಿಸಲಾಗುತ್ತದೆ. ಇದೆಲ್ಲವೂ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸಾಧ್ಯ.

ಗಾಂಧಿ ಕುಟುಂಬನ್ನು ಹೊಗಳುವುದು ಬಿಟ್ಟರೆ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಒಂದು ಸ್ಪಷ್ಟವಾದ ಕಾರ್ಯಕ್ರಮಗಳಿಲ್ಲ, ಯೋಜನೆಗಳಿಲ್ಲ, ಗುರಿಗಳಿಲ್ಲ, ಧ್ಯೇಯೋದ್ಧೇಶಗಳೂ ಇಲ್ಲ. ಬಡತನದ ಬಗ್ಗೆ, ಬಡವರ ಬಗ್ಗೆ ಮಾತನಾಡುವ ಪಕ್ಷ ಕಾಂಗ್ರೆಸ್. ಆದರೆ, ಬಡತನವನ್ನು ಹೋಗಲಾಡಿಸಲು ಬೇಕಾದ ದೂರದೃಷ್ಟಿಯ, ಶಾಸ್ವತವಾದ ಯೋಜನೆಗಳನ್ನು ರೂಪಿಸದೆ, ಬಡವರು ಬಡವರಾಗಿಯೇ ಉಳಿದು, ಸರಕಾರವನ್ನು ಖಾಯಂ ಆಗಿ ಅಂಗಲಾಚಿಕೊಂಡೇ ಇರಬೇಕು ಎಂಬಂತೆ ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ ವಿತರಣೆ ಮಾಡುವ ಕಾರ್ಯಕ್ರಮವನ್ನು
ಜ್ಯಾರಿಗೊಳಿಸುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಅಕ್ಕಿಗೆ ಇರುವ ಬೆಲೆ ಕೊಟ್ಟು ಖರೀದಿಸುವ ಸ್ವಾಭಿಮಾನಿ ಆಗುವ ರೀತಿಯಲ್ಲಿ, ಶ್ರೀಮಂತನಾಗಬೇಕೆಂಬ ನಿಟ್ಟಿನಲ್ಲಿ ಯಾವ ಕಾರ್ಯಕ್ರಮವನ್ನು ಈ ಪಕ್ಷ ಜ್ಯಾರಿಗೆ ತರುವುದೇ ಇಲ್ಲ. ಬಡವರಿಗೆ ವಿತರಣೆಯಾಗಬೇಕಾದ ಅಕ್ಕಿ ಸಹ ನ್ಯಾಯಬೆಲೆ ಅಂಗಡಿಗಳಲ್ಲಿರದೆ ಮತ್ತೆಲ್ಲೋ ಗೋಡೌನ್ ಗಳಲ್ಲಿ
ಪತ್ತೆಯಾಗುತ್ತದೆ. ಒಂದು ಕಾರ್ಯಕ್ರಮವನ್ನು ಒಳ್ಳೆಯ ರೀತಿಯಲ್ಲಿ ಅನುಷ್ಟನಗೊಳ್ಳುವಂತೆ ನಿರ್ವಹಣೆ ಮಡುವ ಕಳಕಳಿ ಸಹ ಇವರಿಗಿಲ್ಲ. ಯಾರಿಗೂ ಯಾವ ಅಗತ್ಯವೂ ಇಲ್ಲದಿದ್ದರೂ ಶ್ರೀಮಂತ ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಡಲು ಆಧಾರ್ ಕಾರ್ಡ್ ನಂಥ ನಿಷ್ರ್ಪಯೋಜಕ ಕಾರ್ಯಕ್ರಮಗಳನ್ನು ಜ್ಯಾರಿಗೆ ತಂದು ಬಡವರಿಗೆ ಹಿಂಸೆ ನೀಡಿದ ಪಕ್ಷವೂ ಇದುವೇ.

ಕಾಂಗ್ರೆಸ್ ಪಕ್ಷದ ಗೆಲುವು ಕಾಂಗ್ರೆಸ್ ನಾಯಕರಿಗೆ ಮುಖ್ಯವಲ್ಲ, ಇತರ ಪಕ್ಷಗಳ ಸೋಲೂ ಸಹ ಕಾಂಗ್ರೆಸ್ ನಾಯಕರಿಗೆ ಮುಖ್ಯವಲ್ಲ. ಈ ಪಕ್ಷದಲ್ಲಿ ಎಲ್ಲರೂ ನಾಯಕರೇ.
ನಾಯಕರಾಗಲಿಕ್ಕಾಗಿಯೇ ಈ ಪಕ್ಷದಲ್ಲಿರುವವರ ಗರಿಷ್ಟ ಪ್ರಯತ್ನ. ಚುನಾವಣೆ ಇಲ್ಲದಿದ್ದಾಗ ಮೌನವಾಗಿರುವ, ಚುನಾವಣೆ ಹತ್ತಿರ ಬಂದಾಗ ತಡಬಡಾಯಿಸಿ ನಿದ್ದೆಯಿಂದೆದ್ದವರಂತೆ ವರ್ತಿಸುವ ಪಕ್ಷ ಕಾಂಗ್ರೆಸ್. ಇಲ್ಲಿರುವವರಿಗೆ ಇರುವುದೊಂದೇ ಉದ್ಧೇಶ. ಅದು, ನಾನು ಗೆಲ್ಲಬೇಕು. ಅವನು ಸೋಲಬೇಕು. ಆ ಅವನು ಬೇರೆ ಪಕ್ಷದ ಅಭ್ಯರ್ಥಿಯಲ್ಲ. ತನ್ನ ಕಾಂಗ್ರೆಸ್ ಪಕ್ಷದ ಅಭ್ಯಥೀಯೇ ಆಗಿರುತ್ತಾನೆ ಎನ್ನುವುದು ಈ ಪಕ್ಷದ ನಾಯಕತ್ವದಲ್ಲಿನ ಬೌದ್ಧಿಕ, ಸಂಘಟನಾತ್ಮಕ ದಿವಾಳಿತನಕ್ಕೆ ಸಾಕ್ಷಿ.

ಉಡುಪಿ-ಚಿಕ್ಕಮಗಳೂರು, ಮಂಗಳೂರು, ಮಂಡ್ಯ ಮೊದಲಾದ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣ. ಇದನ್ನು ಕಾಂಗ್ರೆಸ್ ನಾಯಕರೇ ಒಪ್ಪಿಕೊಂಡಿದ್ದಾರೆ. ನಡುವೆ, ಸ್ವಲ್ಪವೂ ನಾಚಿಕೆ ಇಲ್ಲದೆ ಮೋದಿ ಅಲೆ ಕಾರಣ ಅಂತಲೂ ಹೇಳುತ್ತಾರೆ. ಯಾವುದೇ ಅಲೆ ಸುಮ್ಮನೇ ಹುಟ್ಟಿಕೊಳ್ಳುವುದಿಲ್ಲ. ಅದಕ್ಕೆ ಪೂರಕವಾಗಿ ತಮ್ಮ ಪಕ್ಷದ ಮತ್ತು ತಮ್ಮ ಪಕ್ಷದ ನೇತೃತ್ವದಲ್ಲಿರುವ ಸರಕಾರದ ಆಡಳಿತ ಶೈಲಿಯೂ ಕಾರಣವಾಗಿರುತ್ತದೆ ಎನ್ನುವುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಆತ್ಮ ವಿಮರ್ಶೆ, ಆತ್ಮಾವಲೋಕನ ಎನ್ನುವುದು ಏನಿದ್ದರೂ ಅದೆಲ್ಲವೂ ಗಾಂಧಿ ಕುಟುಂಬಕ್ಕೆ ಹಾಗೂ ಗಾಂಧಿ ಕುಟುಂಬದ ಜೊತೆಗೆ ಆಪ್ತವಾಗಿರುವ ನಾಯಕರುಗಳ ಮನಸ್ಸಿಗೆ ನೋವಾಗದಂತೆಯೇ ನಡೆಯಬೇಕು ಕಾಂಗ್ರೆಸ್ ಪಕ್ಷದಲ್ಲಿನ ನಾಯಕರು.

ನಮ್ಮ ದೇಶದಲ್ಲಿ ಜಾತಿ, ಮತ, ವರ್ಗ, ವರ್ಣ, ಲಿಂಗ ಭೇದವಿಲ್ಲದೆ,
ವಿದ್ಯಾವಂತ-ಅವಿದ್ಯಾವಂತ, ಉದ್ಯೋಗಿ-ನಿರುದ್ಯೋಗಿ, ಸ್ಲಂ ನಿವಾಸಿಯಿಂದ ಹಿಡಿದು, ಡಾಲರ್ ಕಾಲನಿಯ ನಿವಾಸಿಯವರೆಗೂ, ಚಾ ಮಾರಾಟ ಮಾಡುವವನಿಂದ ಆರಂಭಿಸಿ, ಕಾರ್ಪೋರೇಟ್ ಉದ್ಯಮಿಯವರೆಗೂ ಯಾರೂ ಬೇಕಾದರೂ ಚಉನಾವಣೆಯಲ್ಲಿ ಸ್ಪರ್ಧಿಸಬಹುದು, ಚುನಾವಣೆಯಲ್ಲಿ ಸ್ಪರ್ಧಿಸಿ ಜನಪ್ರತಿನಿಧಿಯಾಗಿ ಆಯ್ಕೆಯಾದರೆ, ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದರೂ ರಾಜ್ಯಸಭಾ ಸದಸ್ಯರಾದವರೂ, ಮಂತ್ರಿಯಾದ ಬಳಿಕ ಸಂಸದರಾಗುವ ಮೂಲಕ ಮತ್ತು ರಾಜ್ಯಸಭಾ ಸದಸ್ಯರಾಗುವ ಮೂಲಕವೂ ದೇಶವನ್ನಾಳುವ ಮಂತ್ರಿಯಾಗಬಹುದು ಎನ್ನುವ ಕನಿಷ್ಟ ತಿಳುವಳಿಕೆಯೂ ಇಲ್ಲದವರಂತೆ ನಡೆದುಕೊಳ್ಳುವ ಹಾಸ್ಯಸ್ಪದ ವ್ಯಕ್ತಿಗಳಿಗೇ ಕಾಂಗ್ರೆಸ್ ಪಕ್ಷದಲ್ಲಿ ಎತ್ತರದ ಮಣೆ.

ಮೋದಿ ಚಹಾ ಮಾರಾಟ ಮಾಡುತ್ತಿದ್ದರೆಂಬುದನ್ನೇ ಚುನಾವಣಾ ಪ್ರಚಾರದಲ್ಲಿ ತೇಲಿಬಿಟ್ಟು ವ್ಯಂಗ್ಯವಾಡಿದರು ಕಾಂಗ್ರೆಸ್ ನಾಯಕರು. ಬಿಜೆಪಿ ಅದಕ್ಕೆ ಸರಿಯಾಗಿಯೇ ತಿರುಗೇಟು ನೀಡಿ ಕಪಾಳಮೋಕ್ಷವನ್ನೇ ಮಾಡಿತು. ಇಷ್ಟಾದರೂ ಕಾಂಗ್ರೆಸ್ ನಾಯಕರಿಗೆ ಬುದ್ದಿ ಬರಲಿಲ್ಲ. ಇದೀಗ, ಕೇಂದ್ರದಲ್ಲಿ ಮಂತ್ರಿಯಾದ ಶ್ರೀಮತಿ ಸ್ಮೃತಿ ಇರಾನಿಯವರು ಕಡಿಮೆ ಕಲಿತವರು ಎಂದು ಕಾಂಗ್ರೆಸ್ ನಾಯಕರು ಬೊಗಳಿದ್ದಾರೆ. ಕಾಂಗ್ರೆಸ್ ಸರಕಾರದಲ್ಲಿದ್ದ ಹೆಚ್ಚು ಕಲಿತ ಮಂತ್ರಿಗಳೇ ಸರಣಿ ಹಗರಣದ ಮೂಲಕ ನಿರಂತರವಾಗಿ ಹಗಲು ದರೋಡೆ ಮಾಡುವ ಮೂಲಕ ಪಕ್ಷವನ್ನು ಇಂದು ಈ ಪರಿಸ್ಥಿತಿಗೆ ತಂದು ನಿಲ್ಲಿಸಿದರು ಎನ್ನುವುದು ಇವರಿಗೆಲ್ಲ ಅರ್ಥವೇ ಆಗುವುದಿಲ್ಲ.

ಸರಣಿ ಹಗರಣಗಳ ಮೂಲಕ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ನಡೆಸಿದ ದುರಾಡಳಿತಕ್ಕೆ ಜನರು ರೋಸಿ ಹೋಗಿದ್ದರು. ಎಲ್ಲಿ ಮಾತು ಬೇಕೋ ಅಲ್ಲಿ ಮಾತನಾಡಬೇಕು, ಎಲ್ಲಿ ಗಟ್ಟಿ ಧ್ವನಿ ಎತ್ತಬೇಕೋ ಅಲ್ಲಿ ಗಟ್ಟಿಧ್ವನಿಯನ್ನೇ ಎತ್ತಬೇಕು. ಇದು ಜನರ ನಿರೀಕ್ಷೆ. ಪ್ರಧಾನಿಯಾಗಿ ಮನಮೋಹನ್ ಸಿಂಗ್ ಮೌನದಲ್ಲೇ ಎಲ್ಲವನ್ನೂ ನಿರ್ವಹಿಸಿದರು. ಪ್ರಧಾನಿ ಮೌನ ತಾಳಿದಾಗ, ಅದನ್ನು ತುಂಬಲು ಪಕ್ಷವಾದರೂ ಧ್ವನಿ ಎತ್ತಬಹುದಿತ್ತು. ಆ ಕೆಲಸವನ್ನು ಪಕ್ಷವೂ ಮಾಡಿತೋರಿಸಲಿಲ್ಲ. ಒಂದೆಡೆ ಪ್ರಧಾನಿಯ ಮೌನ, ಇನ್ನೊಂದೆಡೆ ರಾಹುಲ್ ಗಾಂಧಿಯ ಉಪ್ಪು, ಹುಳಿ, ಖಾರ ಯಾವುದೂ ಇಲ್ಲದ ಸಪ್ಪೆ ಭಾಷಣ.

ಪ್ರಧಾನಿ ಸಿಂಗ್ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರವನ್ನು ರಾಹುಲ್ ಗಾಂಧಿ ಬಹಿರಂಗವಾಗಿ ಹರಿದು ಹಾಕುವ ಮೂಲಕ ಅಪ್ರಬುದ್ಧತೆಯನ್ನು
ಪ್ರದರ್ಶಿಸಲಾಯಿತು. ಇಂಥ ಹಲವು ಅತೀ ಕೆಟ್ಟ ವರ್ತನೆಗಳ ಮೂಲಕ ರಾಹುಲ್ ಗಾಂಧಿಯನ್ನು ದೇಶದ ನಾಯಕನನ್ನಾಗಿ ರೂಪಿಸಲು ಕಾಂಗ್ರೆಸ್ ನಾಯಕತ್ವ ವಿಫಲ ಪ್ರಯತ್ನ ನಡೆಸಿತು. ಇದೆಲ್ಲವೂ ಅಪಕ್ವ, ಅಪ್ರಬುದ್ಧತೆಯ ನಡವಳಿಕೆ. ದೇಶದ ನಾಗರಿಕರು ಇಂಥ
ಪ್ರಹಸನಗಳನ್ನೆಲ್ಲ ಅರ್ಥಮಾಡಿಕೊಳ್ಳುತ್ತಾರೆ ಎಂಬ ಕನಿಷ್ಟ ತಿಳಿವಳಿಕೆಯೂ ಕಾಂಗ್ರೆಸ್ ನಾಯಕತ್ವಕ್ಕೆ ಹೊಳೆಯದೇ ಹೋಯಿತು.

ಯಾವುದರಿಂದಲೂ, ಯಾವಾಗಲೂ ಪಾಠ ಕಲಿಯದ ಪಕ್ಷ ಕಾಂಗ್ರೆಸ್. ಜನರ ನಾಡಿಮಿಡಿತವನ್ನು ಕಿಂಚಿತ್ತೂ ಅರ್ಥ ಮಾಡಿಕೊಳ್ಳದ ಅಥವಾ ಗೊತ್ತಿದ್ದರೂ, ಗೊತ್ತೇ ಇಲ್ಲದವರಂತೆ ನಡೆದುಕೊಳ್ಳುವ ಪಕ್ಷ ಕಾಂಗ್ರೆಸ್. ಈ ಪಕ್ಷ ಹೀಗೆ ದಿಕ್ಕು ದೆಸೆ ಇಲ್ಲದೆ ಆನೆ ನಡೆದ್ದೇ ದಾರಿ ಎಂಬಂತೆ ಭ್ರಮಿಸಿಕೊಂಡು ನಡೆಯುತ್ತಾ ಹೋದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಜನರು ಶಾಶ್ವತವಾಗಿ ಪಾಠ ಕಲಿಸುವ ದಿನಗಳು ಬರಬಹುದೆಂದು ಅನಿಸುತ್ತಿದೆ. – ಶ್ರೀರಾಮ ದಿವಾಣ.

# ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್.)ದ ಸಕ್ರಿಯ ಕಾರ್ಯಕರ್ತ, ಆರ್.ಎಸ್.ಎಸ್. ನ ರಾಜಕೀಯ ಮುಖವಾದ ಬಿಜೆಪಿಯ ಮುಖಂಡ, ಗುಜರಾತ್ ನಲ್ಲಿ ಸಾವಿರಾರು ಮಂದಿ ಕೋಮುಗಲಭೆಯಲ್ಲಿ ಕೊಲೆಯಾಗುತ್ತಿದ್ದಾಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಇಂದು ನಮ್ಮ ದೇಶದ ಪ್ರಧಾನ ಮಂತ್ರಿಯಾಗಿದ್ದಾರೆ.

ಭಾರತ, ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ದೇಶ. ಇಂಥ ದೇಶದ ಅತ್ಯುನ್ನತ ಅಧಿಕಾರ ಸ್ಥಾನವಾದ ಪ್ರಧಾನಿ ಪಟ್ಟಕ್ಕೆ ಏರುವುದು ಎಂದರೆ, ಸಾಮಾನ್ಯ ವಿಷಯವೇನೂ ಅಲ್ಲ. ಬಡ ಕುಟುಂಬಕ್ಕೆ ಸೇರಿದ, ಚಹಾ ಮಾರುತ್ತಿದ್ದ ಮೋದಿ ಪ್ರಧಾನಿಯಾಗಿರುವುದು ಮಹತ್ತರವಾದ ಸಾಧನೆಯೇ ಸರಿ. ಇದಕ್ಕಾಗಿ ಮೋದಿಯನ್ನು ಅಭಿನಂದಿಸಲೇಬೇಕು.

ಮೋದಿ ಎತ್ತರಕ್ಕೇರಿದ್ದಾರೆ, ನಿಜ. ಆದರೆ ಹೇಗೆ ಈ ಎತ್ತರಕ್ಕೇರಿದ್ದಾರೆ ? ಯಾಕೆ ಈ ಎತ್ತರಕ್ಕೇರಿದ್ದಾರೆ ? ಎತ್ತರಕ್ಕೇರಿಸಿದವರು ಯಾರು ? ಅವರ್ಯಾಕೆ ಮೋದಿಯವರನ್ನು ಈ ಎತ್ತರಕ್ಕೇರಿಸಿದ್ದಾರೆ ಎಂಬಿತ್ಯಾದಿ ವಿಷಯಗಳೂ ಸ್ಪಷ್ಟವಾಗಬೇಕು, ಚರ್ಚೆಯಾಗಬೇಕು.

ನಮ್ಮದು ಪ್ರಜಾಪ್ರಭುತ್ವ ದೇಶ. ಪ್ರಜಾಪ್ರಭುತ್ವ ದೇಶವಾದರೂ, ಪ್ರಜಾಪ್ರಭುತ್ವಕ್ಕೆ ಆದರ್ಶವಾಗುವಂತೆ, ಮಾದರಿಯಾಗುವ ರೀತಿಯಲ್ಲಿ, ಇಲ್ಲಿ ಚುನಾವಣೆಗಳು ನಡೆದುದು ಇಲ್ಲವೇ ಇಲ್ಲ ಎನ್ನಬಹುದು. ಹಣ, ಹೆಂಡ, ಟಿವಿ, ಬಟ್ಟೆ ಇತ್ಯಾದಿ ಏನೆಲ್ಲಾ ಸಾಧ್ಯವೋ, ಅವುಗಳನ್ನೆಲ್ಲ ಮತದಾರರಿಗೆ ವಿತರಿಸಿ, ಆಸೆ-ಅಮಿಷಗಳನ್ನೊಡ್ಡಿ, ಭ್ರಷ್ಟರನ್ನಾಗಿಸಿ ಮತಗಳನ್ನು ಖರೀದಿಸಿ ಚುನಾವಣಾ ಕಣದಲ್ಲಿದ್ದ ಬಲಿಷ್ಟ ಪಕ್ಷಗಳು ಮತ್ತು ಅಭ್ಯರ್ಥಿಗಳೇ ಸಂಸದರು, ಶಾಸಕರು ಆಗುತ್ತಿರುವ ಅವ್ಯವಸ್ಥೆ ದೇಶದಲ್ಲಿದೆ.

ದೇಶವನ್ನು ಬಹುಕಾಲ ಆಳಿದ ಕಾಂಗ್ರೆಸ್ ಪಕ್ಷಕ್ಕಾಗಲೀ, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕಾಗಲೀ, ಅಲ್ಪ ಕಾಲದ ಆಡಳಿತ ನಡೆಸಿದ ಬಿಜೆಪಿ ನೇತೃತ್ವದ ಎನ್ಡಿಎಗಾಗಲಿ, ತೃತಿಯ ಶಕ್ತಿಗಳಿಗಾಗಲಿ ಭಾರತದ ಮತದಾರರನ್ನು (ಈ ಮಾತು ಪ್ರಜ್ಞಾವಂತ ಮತ್ತು ಪ್ರಬುದ್ಧ ಮತದಾರರಿಗೆ ಅನ್ವಯವಾಗುವುದಿಲ್ಲ) ಪ್ರಜ್ಞಾವಂತರನ್ನಾಗಿ, ಪ್ರಬುದ್ದರನ್ನಾಗಿ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ. ರಾಜಕೀಯ ಪಕ್ಷಗಳು ಸಹ ಪ್ರಜೆಗಳನ್ನು ಪ್ರಜ್ಞಾವಂತರನ್ನಾಗಿ ಮಾಡಬೇಕೆಂಬ ಕಾಳಜಿ, ಕಳಕಳಿ, ಆಸಕ್ತಿಯಿಂದ ಪರಿಣಾಮಕಾರಿಯಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡದ್ದಾಗಲಿ, ಯೋಜನೆಗಳನ್ನು ರೂಪಿಸಿದ್ದಾಗಲಿ ಇಲ್ಲವೇ ಇಲ್ಲ.

ಹೀಗಾಗಿಯೇ ಇಂದು ಕೂಡಾ ದೊಡ್ಡ ಸಂಖ್ಯೆಯ ಮತದಾರರಿಗೆ ಸಂವಿಧಾನದ, ಕಾನೂನಿನ ಸ್ಪಷ್ಟ ಅರಿವಿಲ್ಲ. ಸ್ವಾಭಿಮಾನದ ಕೊರತೆ, ಗುಲಾಮಗಿರಿ, ಜೀತದ ಮಾದರಿಯ ಬದುಕು ಅವರಾದಾಗಿದೆ. ಮುಗ್ಧತೆ, ಅಮಾಯಕತೆ ಮತ್ತು ಬಡತನದ ಕಾರಣಕ್ಕೂ ವಿಚಾರ ವಿಮರ್ಶೆ ಮಾಡುವ ಶಕ್ತಿ ಇಲ್ಲದೆ ಮತದಾರ ಮತದಾನ ಮಾಡುವ ಶೋಚನೀಯ ಪರಿಸ್ಥಿತಿ ಇಂದು ನೆಲೆನಿಂತಿದೆ.

ಭ್ರಷ್ಟ ಮತ್ತು ದುಷ್ಟ ರಾಜಕೀಯ ಪಕ್ಷಗಳಿಗೂ, ರಾಜಕಾರಣಿಗಳಿಗೂ ಬೇಕಿರುವುದು ಸಹ ಇದೇ ಅವ್ಯವಸ್ಥೆ. ಹಾಗಾಗಿ ದೇಶದ ಚುನಾವಣಾ ವ್ಯವಸ್ಥೆಯೇ ಅವ್ಯವಸ್ಥೆಯಿಂದ ಕೂಡಿದೆ. ಚುನಾವಣಾ ವ್ಯವಸ್ಥೆಯೇ ಪ್ರಜಾಪ್ರಭುತ್ವದ ಅಡಿಗಲ್ಲು ಆಗಿರುವಾಗ, ಈ ವ್ಯವಸ್ಥೆಯೇ ಅವ್ಯವಸ್ಥೆಯಿಂದ ಕೂಡಿರುವಾಗ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ ? ಈ
ಅವ್ಯವಸ್ಥೆಯನ್ನು, ಇಂಥ ಅವ್ಯವಸ್ಥೆಯಲ್ಲಿ ಆಡಳಿತಕ್ಕೆ ಬಂದ ವ್ಯಕ್ತಿಗಳನ್ನು, ಪಕ್ಷಗಳನ್ನು ಕೊಂಡಾಡಲು, ಅಭಿಮಾನಪಡಲು, ಹೆಮ್ಮೆಪಡಲು ಸಾಧ್ಯವೇ ಎಂದರೆ, ಇಲ್ಲ ಎಂಬುದೇ ಇಂದಿನ ಖಚಿತ ಉತ್ತರವಾಗಿದೆ.

ಇಂಥ ಶೋಚನೀಯ ಸಂದರ್ಭದಲ್ಲಿಯೇ, ಕೆಟ್ಟು ಹೋಗುತ್ತಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟೂ ಕೆಡಿಸುವ ಪ್ರಕ್ರಿಯೆಯ ಭಾಗವಾಗಿ, ಒಂದು ಹೆಜ್ಜೆ ಮುಂದೆ ಹೋಗಿ ಭಾರತೀಯ ಜನತಾ ಪಾರ್ಟಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿತು. ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಸಹ ತಮಗೆ ಮತಯಾಚಿಸದೆ, ಮೋದಿಗೆ ಮತ ನೀಡುವಂತೆ ವಿನಂತಿಸುವ ಮೂಲಕ ಪರೋಕ್ಷವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಧ್ಯಕ್ಷೀಯ ಮಾದರಿ
ವ್ಯವಸ್ಥೆಯನ್ನಾಗಿ ಪರಿವರ್ತಿಸುವ ಮೂಲಕ ಸಂವಿಧಾನಕ್ಕೆ ಅಪಚಾರವೆಸಗಿತು. ಚುನಾವಣೆಗೆ ಮೊದಲು ಸಂವಿಧಾನಕ್ಕೆ ಅಪಚಾರವೆಸಗಿದ ಮೋದಿ, ಚುನಾವಣೆಯಲ್ಲಿ ಬಹುಮತ ಪಡೆದು ಪ್ರಧಾನಿಯಾಗಿ ನಿಯೋಜಿತಗೊಂಡ ಬಳಿಕ ಸಂವಿಧಾನವನ್ನು ಅಭಿನಂದಿಸಿದ್ದು ವ್ಯವಸ್ಥೆಯ ವ್ಯಂಗ್ಯವೇ ಸರಿ.

ಗೋದ್ರಾ ದುರಂತದಲ್ಲಿ ಕರಸೇವಕರು ಸತ್ತ ಬಳಿಕ, ಗುಜರಾತ್ನಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಮಹಿಳೆಯರು, ಮಕ್ಕಳೆಂದು ನೋಡದೆ ಸಾವಿರಾರು ಮಂದಿ ಮುಸ್ಲೀಮರನ್ನು ಹತ್ಯೆಗೈದರು. ಗರ್ಭಿಣಿ ಮಹಿಳೆಯ ಹೊಟ್ಟೆಯನ್ನು ಸೀಳಿ ಭ್ರೂಣವನ್ನು ತ್ರಿಶೂಲದಲ್ಲಿ ಚುಚ್ಚಿಕೊಂಡು ಕೇಕೆ ಹಾಕುತ್ತಾ ಮೆರವಣಿಗೆ ಮಾಡುವಷ್ಟು ಕ್ರೂರ ಹಿಂಸಾಚಾರವನ್ನು ಗುಜರಾತ್ ನಲ್ಲಿ ಪ್ರದರ್ಶಿಸಿದರು.

ರಾಜ್ಯವೊಂದರ ಮುಖ್ಯಸ್ಥ ಮುಖ್ಯಮಂತ್ರಿ. ಗುಜರಾತ್ ಮುಖ್ಯಮಂತ್ರಿಯಾಗಿದ್ದವರು ನರೇಂದ್ರ ಮೋದಿ. ರಾಜ್ಯದಲ್ಲಿ ನಡೆಯುತ್ತಿದ್ದ ಕ್ರೂರ ಕೋಮುಗಲಭೆಯನ್ನು ಪರಿಣಾಮಕಾರಿಯಾಗಿ ತಡೆಯಲು ಮೋದಿಗೆ ಸಾಧ್ಯವಾಗಲೇ ಇಲ್ಲ. ತಡೆಯಲು ಸಾಧ್ಯವಾಗಲಿಲ್ಲ ಎನ್ನುವುದಕ್ಕಿಂತಲೂ ಮುಖ್ಯಮಂತ್ರಿಯಂಥ ಜವಾಬ್ದಾರಿಯುತ ಸ್ಥಾನದಲ್ಲಿರುವ ಮೋದಿಯ ಪರೋಕ್ಷ ಬೆಂಬಲದಿಂದಲೇ ಕೋಮುಗಲಭೆ ನಡೆಯಿತು ಎನ್ನುವ ಗಂಭೀರ ಆರೋಪ ಇಲ್ಲಿ ವ್ಯಕ್ತವಾಯಿತು.

ಸಹಜವಾಗಿಯೇ ಗುಜರಾತ್ ಕೋಮುಗಲಭೆ ಮತ್ತು ಮುಖ್ಯಮಂತ್ರಿ ನರೇಂದ್ರ ಮೋದಿ ವ್ಯಾಪಕ ಚರ್ಚೆಗೀಡಾದರು. ಸಂಘ ಪರಿವಾರ ಮತ್ತು ಬಿಜೆಪಿ ಹೊರತುಪಡಿಸಿ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳೂ ಮೋದಿ ನೇತೃತ್ವದ ಸರಕಾರವನ್ನು ಖಂಡಿಸಿದರು. ಕೋಮುವಾದ ವಿರೋಧಿ ಸಂಘಟನೆಗಳು, ಮಾನವಹಕ್ಕು ಹೋರಾಟಗಾರರು ಬೀದಿಗಿಳಿದು ಮೋದಿ ವರ್ತನೆಗಳ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದರು. ಇಂದಿಗೂ ಈ ಗಲಭೆಗೆ ಸಂಬಂಧಿಸಿದ ಅನೇಕ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ.

ಗುಜರಾತ್ ಕೋಮುಗಲಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೊಲೆಯಾಗಿ ಹೋದವರು ಮುಸ್ಲೀಮರು. ಈ ಸಾಮೂಹಿಕ ಹತ್ಯಾಕಾಂಡವನ್ನು ಸಮರ್ಥವಾಗಿ ತಡೆಗಟ್ಟದೆ ನಡೆಯಬಿಟ್ಟವರೆಂಬ ಅಪಾದನೆಗೆ ಒಳಗಾದವರು ಮುಖ್ಯಮಂತ್ರಿ ನರೇಂದ್ರ ಮೋದಿ. ಈ ಹಿಂಸಾ ಕೃತ್ಯಗಳ ಮೂಲಕ ಅಲ್ಪಸಂಖ್ಯಾತರ ಮನದಲ್ಲಿ, ಜೀವಪರ, ಮನುಷ್ಯಪರ ಜನರ ನಡುವೆ ಹೇಗೆ ಮೋದಿ ಖಳ ನಾಯಕರಾದರೋ, ಹಾಗೆಯೇ ಮುಸ್ಲೀಮ್ ಧ್ವೇಷವನ್ನೇ ಉಸಿರಾಡುವ ಸಂಘ ಪರಿವಾರದ ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳ ಮನದಲ್ಲಿ ಮೋದಿ ಹೀರೋ ಆಗಿಬಿಟ್ಟರು.

ಅಯೋಧ್ಯೆ ಮಸೀದಿ ಧ್ವಂಸ ಕೃತ್ಯದ ಬಳಿಕ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಹೇಗೆ ಹೀರೋ ಆದರೋ, ಅದಕ್ಕಿಂತಲೂ ದೊಡ್ಡಮಟ್ಟಿಗೆ ಹಿಂದುತ್ವವಾದಿಗಳಿಗೆ ಮೋದಿ ಆಶಾಕಿರಣವಾದರು, ಸ್ಪೂರ್ತಿಯ ಚಿಲುಮೆಯಾದರು. ಇದೇ ಹೊತ್ತಲ್ಲಿ, ಜಿನ್ನಾ ಬಗ್ಗೆ ಮೆಚ್ಚುಗೆಯ ಮಾತನ್ನಾಡುವ ಮೂಲಕ ಸಂಘ ಪರಿವರದ ಮಧ್ಯೆ ಅಡ್ವಾಣಿ ಝೀರೋ ಆಗಿಬಿಟ್ಟಿದ್ದರು. ಗುಜರಾತ್ ಹತ್ಯಾಕಾಂಡ ನಡೆಯುವುದಕ್ಕಿಂತ ಮೊದಲು ಮೋದಿ ಹೀರೋ ಆಗದೆ, ಬಳಿಕವೇ ಹೀರೋ ಆಗಿದ್ದು ಎನ್ನುವುದನ್ನು, ಜಿನ್ನಾ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ ನಂತರವೇ ಅಡ್ವಾಣಿ ಝೀರೋ ಆಗಿದ್ದು ಎಂಬ ವಾಸ್ತವಾಂಶಗಳನ್ನು ನಿರಾಕರಿಸಲು ಸಾಧ್ಯವೇ ?

ಮುಸ್ಲೀಮರ ಮಾರಣಹೋಮದೊಂದಿಗೆ ಮೋದಿ ಶಕ್ತಿಯಾಗಿ ಮೂಡಿಬಂದರು. ಆದರೆ ಈ ವಿಷಯವನ್ನು ಬಹಿರಂಗವಾಗಿ ಮುಂದಿಟ್ಟುಕೊಂಡು ಚುನಾವಣೆಗೆ ಹೋಗಲು ಸಾಧ್ಯವಿಲ್ಲವಲ್ಲ ? ಹಾಗಾಗಿ ಆ ಮುಖಕ್ಕೆ ಅಭಿವೃದ್ಧಿ ಎಂಬ ಬಟ್ಟೆ ತೊಡಿಸಿ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಅತ್ಯಂತ ವ್ಯವಸ್ಥಿತವಾಗಿ ಪ್ರಚುರಪಡಿಸಲಾಯಿತು. ಸಂಘ ಶಕ್ತಿ ಇದರಲ್ಲಿ ಯಶಸ್ವಿಯೂ ಆಯಿತು.

ಒಂದು ಕಡೆ ಹಾಗಾದರೆ, ಇನ್ನೊಂದು ಕಡೆ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ, ಸರಣಿ ಭ್ರಷ್ಟಚಾರದ ಹಗರಣಗಳು, ಆಧಾರ್ ಹಿಂಸೆ, ಕಾಂಗ್ರೆಸ್ ನಾಯಕರ ದುರಹಂಕಾರದ ವರ್ತನೆಗಳು, ಎಡಬಿಡಂಗಿತನದ ನಡವಳಿಕೆಗಳು, ಹಾಸ್ಯಾಸ್ಪದ ಮತ್ತು ಬಾಲಿಶ ಹೇಳಿಕೆಗಳು, ಮನಮೋಹನ್ ಸಿಂಘರ ಮೌನ, ರಾಹುಲ್ ಗಾಂಧಿಯನ್ನು ನಾಯಕನನ್ನಾಗಿ ಮಾಡುವ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರ ನಕಲಿ ಪ್ರಹಸನಗಳು ಇತ್ಯಾದಿಗಳನೇಕ ವಿಷಯಗಳು ಕಾಂಗ್ರೆಸ್ ಮತ್ತು ಕಾಂಗ್ರೆಸ್ ಸರಕಾರದ ವಿರುದ್ಧ ಕೆಲಸ ಮಾಡಿದವು.

ಮೋದಿಯ ಆಕ್ರೋಶಭರಿತ, ಭಾವಾವೇಶದ, ಆಕರ್ಷಕ ವಾಗ್ಪಟುತ್ವದ ಎದುರು ರಾಹುಲ್ ಗಾಂಧಿಯ ನೀರಸ, ಸಪ್ಪೆ, ವಿಚಾರಗಳೇ ಇಲ್ಲದ ಹಳಸಲು ಭಾಷಣ, ಸಂಘ ಪರಿವಾರದ ಸಂಘಟಿತ, ತಳ ಮಟ್ಟದ ಕಾರ್ಯಾಚರಣೆಯ ಮುಂದೆ, ಪಕ್ಷದ ಮೇಲೆ ಅಭಿಮಾನವೇ ಇಲ್ಲದ ಕಾಂಗ್ರೆಸ್ ನಾಯಕರ ಹಾಗೂ ಕಾರ್ಯಕರ್ತರ ಉದಾಸೀನದ ಚಟುವಟಿಕೆ ಇತ್ಯಾದಿಗಳಿಂದಾಗಿ ಮತದಾರರು ಮೋದಿಯ ಮೋಡಿಗೆ ಒಳಗಾದರು. ಬಿಜೆಪಿ ಸಹಿತ ‘ಸಂಘ’ ಪರಿವಾರ ಸೃಷ್ಟಿಸಿದ ಮೋದಿಯ ಗುಜರಾತ್ ಮಾದರಿ ಅಭಿವೃದ್ಧಿ ಎಂಬ ಭ್ರಮೆಯನ್ನು ವಾಸ್ತವ ಗೊತ್ತಿದ್ದವರು ಮತ್ತು ಗೊತ್ತಿಲ್ಲದವರು ಎರಡೂ ವರ್ಗದ ಜನ ನಂಬಿದರು.

ಮೋದಿ ಅಭಿಮಾನಿಗಳಿಗೆ ಗುಜರಾತ್ ಮಾದರಿ ಅಭಿವೃದ್ಧಿ ಎಂದರೆ ವಾಸ್ತವವಾಗಿ ಏನೆಂದು ಚೆನ್ನಾಗಿಯೇ ಗೊತ್ತಿದೆ. ಅವರೀಗಾಗಲೇ ಹೇಳತೊಡಗಿದ್ದಾರೆ: ಇನ್ನು ಮುಸ್ಲೀಮರ ಕಥೆ ಮುಗಿದ ಹಾಗೆಯೇ.., ಎಸ್ ಸಿ/ಎಸ್ ಟಿ, ಒಬಿಸಿ, ಅಲ್ಪಸಂಖ್ಯಾತ ಮೀಸಲಾತಿ ಇನ್ನು ಹೋಗುತ್ತೆ.., 370ನೇ ವಿಧಿ ರದ್ದಾಗಿಬಿಡುತ್ತೆ, ಏಕರೂಪ ನಾಗರಿಕ ಸಂಹಿತೆ ಜ್ಯಾರಿಯಾಗುತ್ತೆ, ಪಾಕಿಸ್ಥಾನ ಮತ್ತು ಚೀನಾ ಜೊತೆ ಯುದ್ಧ ನಡೆಸಿ ಆ ಎರಡೂ ಶತ್ರುದೇಶಗಳನ್ನು ಸರ್ವನಾಶ ಮಾಡಿಬಿಡ್ತಾರೆ ಎಂಬಿತ್ಯಾದಿಯಾಗಿ ಹತ್ತು ಹಲವಾರು ಕನಸುಗಳನ್ನು, ಆಶಯಗಳನ್ನು ಹೊರಗಡೆ ಹಾಕತೊಡಗಿದ್ದಾರೆ.

ಗುಜರಾತ್ ಮಾದರಿ ಅಭಿವೃದ್ಧಿಯ ನಿಜವಾದ ಸತ್ಯ ತಿಳಿಯದಿರುವ ಮತ್ತು ಕಾಂಗ್ರೆಸ್ ದುರಾಡಳಿತದಿಂದ ರೋಸಿ ಹೋದ ಮತದಾರರು, ಇನ್ನಾದರೂ ದಿನ ಬಳಕೆ ವಸ್ತುಗಳ ಬೆಲೆ ಇಳಿಕೆಯಾಗಬಹುದು, ಪೆಟ್ರೋಲ್, ಡೀಸಿಲ್ ದರ ಕಡಿಮೆ ಆಗಬಹುದು, ಆಧಾರ್ ಹಿಂಸೆ ಇನ್ನು ಉದ್ಭವವಾಗದು, ಎಲ್ಲರಿಗೂ ಪಡಿತರ ಸಿಗಬಹುದು, ಭ್ರಷ್ಟಾಚಾರದ ಹಗರಣಗಳು ನಡೆಯಲಾರದು ಹೀಗೆ ಅನೇಕ ಬಯಕೆಗಳ ಮಂಡಿಗೆಯನ್ನು ಮೆಲ್ಲತೊಡಗಿದ್ದಾರೆ.

ಒಂದೆಡೆ ಯಾವುದೇ ಸದುದ್ಧೇಶದ ಗುರಿ, ಉದ್ಧೇಶಗಳಿಲ್ಲದ ಕಾಂಗ್ರೆಸ್ ಜನಪ್ರತಿನಿಧಿಗಳು ಮತ್ತು ನಾಯಕರು ಹಾಗೂ ಇವರ ದುರಾಡಳಿತ. ಇನ್ನೊಂದೆಡೆ ಅತರಂಗದಲ್ಲಿ ನಕರಾತ್ಮಕವಾದರೂ ಬಹಿರಂಗಕ್ಕೆ ಸಕಾರಾತ್ಮಕವಾಗಿರುವ ದೂರದೃಷ್ಟಿಯಿಂದ ಕೂಡಿರುವ ಧ್ಯೇಯೋದ್ಧೇಶಗಳನ್ನು ಹೊಂದಿರುವ ಸಂಘ ಪರಿವಾರ ಮತ್ತು ಇವರ ಶಿಸ್ತುಬದ್ಧವಾದ ಸಂಘಟನಾ ಕೌಶಲ್ಯ. ಮತ್ತೊಂದೆಡೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ಎಂದು ತೋರಿಸಲು ಕೊಡಲು ಶಕ್ತವಾಗದ ಎನ್.ಜಿ.ಓ. ಮಾದರಿಯ ಇತರ ಪಕ್ಷಗಳು. ಇವುಗಳ ನಡುವೆ ಭ್ರಮನಿರಸನಗೊಂಡ ಮತದಾರರು ಮೋದಿ ಎಂಬ ಭ್ರಮೆಯನ್ನು ನಂಬಿದ್ದಾರೆ.

ಕೊನೆಗೊಂದು ಮಾತು: ಲೋಕಸಭೆಯ ಸಂಸದರ ಸಂಖ್ಯಾಬಲವೆಂಬ ರಾಜಕೀಯದಾಟದಲ್ಲಿ ಬಿಜೆಪಿ ಬಹುಮತ ಸಾಧಿಸಿರಬಹುದು. ಮೋದಿಯನ್ನೇ ಮುಂದಿಟ್ಟು ಬಿಜೆಪಿ ಚುನಾವಣೆಗಿಳಿದ ಕಾರಣ ಒಂದು ಪರಮ ಸತ್ಯವನ್ನು ಬಿಜೆಪಿ ನೆನಪಿಟ್ಟುಕೊಳ್ಳಬೇಕಾಗುತ್ತದೆ. ಮೋದಿಗೆ ದೇಶದ ಕೇವಲ 31 ಶೇಕಡಾ ಮತದಾರರಷ್ಟೇ ಮತ ಹಾಕಿದ್ದಾರೆ. ಉಳಿದ 69 ಶೇಕಡಾ ಮತದಾರರು ಮೋದಿಯನ್ನು ಒಪ್ಪಿಲ್ಲ. ಮಾತ್ರವಲ್ಲ, ಮೋದಿ ಎಂಬ ಭ್ರಮೆಗೆ ಒಳಗಾಗಿಲ್ಲ ! – ಶ್ರೀರಾಮ ದಿವಾಣ.