Posts Tagged ‘anna hajare’

ಉಡುಪಿ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಮತ್ತು ಮಾಜಿ ಕೇಂದ್ರ ಮಂತ್ರಿ ಉಡುಪಿಯ ಆಸ್ಕರ್ ಫೆರ್ನಾಂಡಿಸ್ ಸಹಿತ ನಾಲ್ವರ ವಿರುದ್ಧ ಬಿಜೆಪಿ ನಾಯಕ, ಮಾಜಿ ಕೇಂದ್ರ ಮಂತ್ರಿ ಸುಬ್ರಹ್ಮಣ್ಯಂ ಸ್ವಾಮಿಯವರು ಅಂದಾಜು 2000 ಕೋಟಿ ರು. ಮಿಕ್ಕಿದ ಹಗರಣವೊಂದಕ್ಕೆ ಸಂಬಂಧಿಸಿದಂತೆ ದೆಹಲಿಯ ಮೆಟ್ರೋಪೊಲಿಟಿನ್ ನ್ಯಾಯಾಲಯದಲ್ಲಿ ಖಾಸಗಿ ದಾವೆ ದಾಖಲಿಸಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಕೋಶಾಧಿಕಾರಿ ಮೋತಿಲಾಲ್ ವೋರಾ ಹಾಗೂ ಆಸ್ಕರ್ ಫೆರ್ನಾಂಡಿಸ್ ವಿರುದ್ಧ ಸುಬ್ರಹ್ಮಣ್ಯ ಸ್ವಾಮಿ ಬಹುಕೋಟಿ ಹಗರಣದ ಬಗ್ಗೆ ದೂರು ನೀಡಿದ್ದಾರೆ. ಆರೋಪಗಳ ಬಗ್ಗೆ ನ್ಯಾಯಾಧೀಶರಾದ ಗೋಮತಿ ಮನೋಚ ಅವರ ಸಮಸಕ್ಷಮದಲ್ಲಿ ಜೂನ್ 2ರಂದು ಸುಮಾರು ಒಂದು ಗಂಟೆ ಕಾಲ ಸ್ವಾಮಿ ವಾದ ಮಂಡಿಸಿದ್ದಾರೆ.

‘ನ್ಯಾಷನಲ್ ಹೆರಾಲ್ಡ್ ನ್ಯೂಸ್ ಪೇಪರ್ ಪಬ್ಲಿಶಿಂಗ್ ಕಂಪೆನಿ’ಯು ಅಂದಾಜು 2000 ಕೋಟಿ ರು.ಗೂ ಮಿಕ್ಕಿದ ಚರ ಸ್ಥಿರ ಆಸ್ತಿ ಹೊಂದಿದೆ. ಇದನ್ನು ಮೇಲೆ ಹೆಸರಿಸಿದ ನಾಲ್ವರು ಕಾಂಗ್ರೆಸ್ ನಾಯಕರು ತಮ್ಮ ಸ್ವಾಧೀನಪಡಿಸಿಕೊಳ್ಳಲು ಕ್ರಿಮಿನಲ್ ಸಂಚು ಹೂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ನ್ಯಾಯವಾದಿಯೂ ಆದ ಸ್ವಾಮಿ, ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ನಾಲ್ವರಿಗೂ ಸಮನ್ಸ್ ಜ್ಯಾರಿಗೊಳಿಸಬೇಕೆಂದು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡರು.

‘ನ್ಯಾಷನಲ್ ಹೆರಾಲ್ಡ್ ನ್ಯೂಸ್ ಪೇಪರ್ ಪಬ್ಲಿಶಿಂಗ್ ಕಂಪೆನಿ’ ಸುದ್ಧಿ ಮಾಧ್ಯಮಗಳನ್ನು ಪ್ರಕಟಿಸುವ ಗುರಿಯನ್ನು ಹೊಂದಿರುವ ಕಂಪೆನಿಯಾಗಿದ್ದು, ಇದಕ್ಕೆ ಸರಕಾರ ಈ ಹಿಂದೆ ದೆಹಲಿ, ಲಕ್ನೊ, ಭೋಪಾಲ್ ಮುಂತಾದೆಡೆಗಳಲ್ಲಿ ಉಚಿತವಾಗಿ ಭೂಮಿಯನ್ನು ನೀಡಿದೆ. ಇದೀಗ ಈ ಬಹುಕೋಟಿ ಮೊತ್ತದ ಕಂಪೆನಿಯನ್ನು ‘ಯಂಗ್ ಇಂಡಿಯನ್’ ಎಂಬ ಕಂಪೆನಿ ತನ್ನ ಕೈವಶ ಮಾಡಿಕೊಳ್ಳಲು ಮುಂದಾಗಿದೆ ಎಂದು ಸ್ವಾಮಿ ವಿವರ ನೀಡಿದ್ದಾರೆ.

ನ್ಯಾಷನಲ್ ಹೆರಾಲ್ಡ್ ನ್ಯೂಸ್ ಪೇಪರ್ ಪಬ್ಲಿಶಿಂಗ್ ಕಂಪೆನಿಗಿರುವ ಯಾವ ಉದ್ಧೇಶಗಳೂ ಯಂಗ್ ಇಂಡಿಯನ್ ಕಂಪೆನಿಗಿಲ್ಲ. ಅದಲ್ಲದೆ, ನ್ಯಾಷನಲ್ ಹೆರಾಲ್ಡ್ ಕಂಪೆನಿಯು ಸರಕಾರದಿಂದ ಲಾಭಗಳನ್ನು ಪಡೆದುಕೊಂಡಿದೆ. ಇದೀಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ ಹಾಗೂ ಆಸ್ಕರ್ ಫೆರ್ನಾಂಡಿಸ್ ಇವರುಗಳಿರುವ ಯಂಗ್ ಇಂಡಿಯನ್ ಕಂಪೆನಿಯು ನ್ಯಾಷನಲ್ ಹೆರಾಲ್ಡ್ ಕಂಪೆನಿಯನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಲು ಮುಂದಾಗಿರುವುದು ಅಕ್ರಮವೆಂದು ಸ್ವಾಮಿ ಅಪಾದಿಸಿದ್ದಾರೆ.

‘ಯಂಗ್ ಇಂಡಿಯನ್’ ಕಂಪೆನಿಯ 76 ಶೇಕಡಾ ಶೇರುಗಳನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ ಹಾಗೂ ಆಸ್ಕರ್ ಫೆರ್ನಾಂಡಿಸ್ ಖರೀದಿಸಿದ್ದಾರೆ. ಆದರೆ ಇವರೆಲ್ಲರೂ ತಮ್ಮ ಸ್ವಂತ ಹಣವನ್ನು ಯಂಗ್ ಇಂಡಿಯನ್ ಕಂಪೆನಿಯ ಶೇರು ಖರೀದಿಗೆ ಉಪಯೋಗಿಸುವ ಬದಲಾಗಿ ಕಾಂಗ್ರೆಸ್ ಪಕ್ಷದ ಫಂಡ್ನಿಂದ 90 ಕೋಟಿ ರು.ಗಳನ್ನು ಇದಕ್ಕೆ ಪಡೆದುಕೊಂಡು ಶೇರುಗಳನ್ನು ಖರೀದಿಸಿದ್ದಾರೆ ಎಂದು ಸ್ವಾಮಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ನ್ಯಾಷನಲ್ ಹೆರಾಲ್ಡ್ ಕಂಪೆನಿ ನೆಹರೂ ಕುಟುಂಬದ ಖಾಸಗಿ ಆಸ್ತಿಯಲ್ಲ. ಈ ಕಂಪೆನಿಗೆ ಸರಕಾರವೂ ಆಸ್ತಿ ಇತ್ಯಾದಿಗಳನ್ನು ನೀಡಿ ಬೆಳೆಸಿದೆ. ಈ ಗೋಲ್ ಮಾಲ್ ಪ್ರಕರಣದಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ನ ಸ್ಯಾಮ್ ಪಿತ್ರೋಡ ಹಾಗೂ ಸುಮನ್ ದುಬೆ ಸಹ ಶಾಮೀಲಾಗಿದ್ದಾರೆಂದು ಸುಬ್ರಹ್ಮಣ್ಯಂ ಸ್ವಾಮಿ ಆರೋಪಿಸಿದ್ದಾರೆ.

ಪ್ರಕರಣದ ಮುಂದಿನ ವಿಚಾರಣೆ ದೆಹಲಿಯ ಮೆಟ್ರೋಪೊಲಿಟಿನ್ ನ್ಯಾಯಾಲಯದಲ್ಲಿ ಜೂನ್ 23ಕ್ಕೆ ನಡೆಯಲಿದೆ.

ಉಡುಪಿ: ಉಡುಪಿ ಜಿಲ್ಲೆಯ ಮಾಹಿತಿಹಕ್ಕು ಕಾರ್ಯಕರ್ತ ವಂಡಾರು ವಾಸುದೇವ ಅಡಿಗ ಅವರನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿ ಜನವರಿ 24 ರಂದು ಗುರುವಾರ ಬೆಳಗ್ಗೆ ಗಂಟೆ 10 ರಿಮದ 12 ರ ವರೆಗೆ ಉಡುಪಿ ಬನ್ನಂಜೆಯಲ್ಲಿರುವ ತಾಲೂಕು ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ಕರ್ನಾಟಕ ಜನಪರ ವೇದಿಕೆ ನಿರ್ಧರಿಸಿದೆ.
ಇಂದು ಕೋಟದಲ್ಲಿ ನಡೆದ ವೇದಿಕೆಯ ಉಡುಪಿ ಜಿಲ್ಲಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಯಿತು.
ದೇಶದಲ್ಲಿಯೇ ಎಲ್ಲಿಯೇ ಇರಲಿ ಮಾಹಿತಿಹಕ್ಕು ಕಾರ್ಯಕರ್ತರ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿಕೊಡುವ ನಿಟ್ಟಿನಲ್ಲಿ ಮಸೂದೆ ಮಂಡಿಸಬೇಕು, ಇನ್ನು ಮುಮದೆ ಯಾವುದೇ ಕಾರಣಕ್ಕೂ ಮಾಹಿತಿಹಕ್ಕು ಕಾಯಿದೆ-2005 ಕ್ಕೆ ಕಾಯಿದೆಯನ್ನು ಬಲಹೀನಗೊಳಿಸುವ ರೀತಿಯಲ್ಲಿ ಯಾವುದೇ ತಿದ್ದುಪಡಿಗಳನ್ನು ಮಾಡಬಾರದು, ಕಾಯಿದೆಯನ್ನು ಇನ್ನಷ್ಟೂ ಸಶಕ್ತಗೊಳಿಸಬೇಕು ಮತ್ತು ಮಾಹಿತಿಹಕ್ಕು ಕಾರ್ಯಕರ್ತರ ಜೀವಕ್ಕೆ ಸೂಕ್ತ ಭದ್ರತೆಯನ್ನು ಖಾತ್ರಿ ಪಡಿಸಬೇಕು ಎಂದು ಸತ್ಯಾಗ್ರಹದ ಮೂಲಕ ಕೇಂದ್ರ ಸರಕಾರವನ್ನು ಆಗ್ರಹಿಸಲು ನಿರ್ಣಯಿಸಲಾಯಿತು.

ಈ ಬಗ್ಗೆ ಕರಪತ್ರ ಪ್ರಕಟಿಸಿ ವಿತರಿಸುವ ಮೂಲಕ ಜನಜಾಗೃತಿ ಮೂಡಿಸಲು ಮತ್ತು ಮುಂದಿನ ದಿನಗಳಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಮಾಹಿತಿಹಕ್ಕು ಕಾಯಿದೆ ಬಗ್ಗೆ ಶಿಬಿರಗಳನ್ನು, ಕಾರ್ಯಾಗಾರಗಳನ್ನು ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಜ.24 ರಂದು ನಡೆಯಲಿರುವ ಸತ್ಯಾಗ್ರಹದಲ್ಲಿ ಮಾಹಿತಿಹಕ್ಕು ಕಾರ್ಯಕರ್ತರು, ಭ್ರಷ್ಟಾಚಾರವನ್ನು ವಿರೋದಿಸುವವವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವೇದಿಕೆ ಮನವಿ ಮಾಡಿಕೊಂಡಿದೆ.

ಉಡುಪಿ ಜಿಲ್ಲೆಯ ಪ್ರಮುಖ ಮಾಹಿತಿಹಕ್ಕು ಕಾರ್ಯಕರ್ತ ಉಡುಪಿ ತಾಲೂಕು ವಂಡಾರು ಗ್ರಾಮದ ನಿವಾಸಿ ವಾಸುದೇವ ಅಡಿಗ ಅವರ ಶವ ಅವರು ಅಪಹರಣಕ್ಕೆ ಒಳಗಾದ ಐದು ದಿನಗಳ ಬಳಿಕ ಪತ್ತೆಯಾಗಿದೆ.
ವಂಡಾರು ವಾಸುದೇವ ಅಡಿಗರನ್ನು ಜನವರಿ 7 ರಂದು ರಾತ್ರಿ ಗಂಟೆ 8 ರಿಂದ 9 ರ ನಡುವೆ ವಂಡಾರಿನಲ್ಲಿರುವ ಅವರ ಮನೆ ಪಕ್ಕದಿಂದಲೇ ಅಪಹರಿಸಲಾಗಿತ್ತು. ಶಿರೂರು ಮೂರುಕೈ ಎಂಬಲ್ಲಿಂದ ತಮ್ಮ ಬೈಕ್ ನಲ್ಲಿ ಮನೆಗೆ ಮರಳುತ್ತಿದ್ದ ಅಡಿಗರನ್ನು ವಾಹನದಲ್ಲಿ ಬಂದ ತಂಡವೊಂದು ಬಲವಂತವಾಗಿ ಅಪಹರಿಸುವಲ್ಲಿ ಯಶಸ್ವಿಯಾಗಿತ್ತು. ಬೈಕ್ ನ ಕಿಕ್ಕರಿನಲ್ಲಿ ಒಂದು ಚಪ್ಪಲಿ, ಅಲ್ಪ ಸ್ವಲ್ಪ ದೂರದಲ್ಲಿ ಪೆನ್ನು, ಡೈರಿ ಮತ್ತು ಮೊಬೈಲ್ ಬಳಿಕ ಪತ್ತೆಯಾಗಿತ್ತು. ಶಿರೂರು ಮೂರುಕೈಯಿಂದ ಅವರು ಹೊರಡುವಾಗ ಅವರ ಕೈಯ್ಯಲ್ಲಿ ಮಾಹಿತಿಹಕ್ಕು ಕಾಯಿದೆ-2005 ರ ಪ್ರಕಾರ ಅರ್ಜಿ ಹಾಕಿ ಪಡೆದುಕೊಂಡ ಕೆಲವೊಂದು ಅಮೂಲ್ಯ ದಾಖಲೆಗಳು ಇತ್ತು ಎನ್ನಲಾಗಿದ್ದು, ಬೈಕ್ ನಲ್ಲಿ ಈ ದಾಖಲೆಗಳು ಲಭಿಸದ ಹಿನ್ನೆಲೆಯಲ್ಲಿ ಅಪಹರಣಕಾರರು ಈ ಅಮೂಲ್ಯ ದಾಖಲೆಗಳನ್ನು ಸಹ ಅಪಹರಿಸಿರಬಹುದು ಎಂದು ಶಂಕಿಸಲಾಗಿದೆ. ಮಾತ್ರವಲ್ಲ, ಮುಖ್ಯವಾಗಿ ಮಾಹಿತಿಹಕ್ಕು ಕಾಯಿದೆ ಪ್ರಕಾರ ಪಡೆದುಕೊಂಡ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದ ಅಮೂಲ್ಯ ಕಡತಗಳಿಗಾಗಿಯೇ ವಾಸುದೇವ ಅಡಿಗ ಅವರನ್ನು
ಅಪಹರಿಸಿರಬಹುದು ಎಂದೂ ಬಲವಾಗಿ ಅನುಮಾನಿಸಲಾಗಿದೆ.
ಕಳೆದ ಮೂರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ, ಭಾರೀ ಅವ್ಯವಹಾರಗಳಿಗೂ
ಕಾರಣವಾಗಿರುವ ವಾರಾಹಿ ನೀರಾವರಿ ಯೋಜನೆ, ಮಂದರ್ತಿ ದೇವಾಲಯ, ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ಮತ್ತು ಇಂಜಿನಿಯರ್ ಕಾರ್ಯದರ್ಶಿ ಆಗಿರುವ ಸರಕಾರಿ ಸಂಸ್ಥೆಯೇ ಆಗಿರುವ ನಿರ್ಮಿತಿ ಕೇಂದ್ರ, ಗೋಳಿಯಂಗಡಿ ಮತ್ತು ನಾಲ್ಕೂರಿನ ಗಣಿ ಮಾಫಿಯಾವೇ ಮೊದಲಾದವುಗಳ ಬಹುಕೋಟಿ ಹಗರಣಗಳನ್ನು ಬಯಲೆಗೆಳೆಯುವ ಸಲುವಾಗಿ ವಂಡಾರು ವಾಸುದೇವ ಅಡಿಗರು ಮಾಹಿತಿಹಕ್ಕು ಪ್ರಕಾರ ಅಜರ್ಿ ಸಲ್ಲಿಸಿ ಅನೇಕ ಅಗತ್ಯ ಮಾಹಿತಿಗಳನ್ನು ಪಡೆದುಕೊಂಡಿದ್ದರು.
ಇವುಗಳಲ್ಲಿ ಕೆಲವು ಮಾಹಿತಿಗಳನ್ನು ಪರಿಶೀಲಿಸಿದಾಗ ಬಹುಕೋಟಿ ಹಗರಣ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಈ ಕಾರಣಕ್ಕೆ ಇವುಗಳ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಅಡಿಗರು ಹಿರಿಯ ವಕೀಲರೊಬ್ಬರಲ್ಲಿ ಮಾತುಕತೆ ಸಹ ನಡೆಸಿದ್ದರು.
ಈ ನಡುವೆ ಕೆಲವರು ಅಡಿಗರ ಜೊತೆಗೆ ರಾಜಿ ಮಾತುಕತೆ ನಡೆಸಿದ್ದರು. ಪ್ರಾಮಾಣಿಕರೂ, ಸರಳ ಜೀವಿಯೂ, ಅಷ್ಟೇ ದಿಟ್ಟತನ ಮತ್ತು ನೇರವಂತಿಕೆಯ ವ್ಯಕ್ತಿತ್ವದವರಾಗಿದ್ದ ವಾಸುದೇವ ಅಡಿಗರು ಹಗರಣಕೋರರ ಜೊತೆಗೆ ಯಾವುದೇ ರೀತಿಯ ರಾಜಿಗೂ ಒಪ್ಪಿರಲಿಲ್ಲ. ಇದರ ಪರಿಣಾಮವಾಗಿ ರಾಜಿಗೆ ಮುಂದಾದ ‘ಗಣ್ಯರು’ ಪರೋಕ್ಷವಾಗಿ ವಾಸುದೇವ ಅಡಿಗರಿಗೆ ಬೆದರಿಕೆಯನ್ನೂ ಹಾಕಿದ್ದರು.
ಈ ನಡುವೆ ಗಣಿ ಮಾಫೀಯಾವೊಂದರ ಮೇಲೆ ಗಣಿ ಅಧಿಕಾರಿಗಳು ನಾಲ್ಕು ಕೋಟಿ ರು. ದಂಡ ವಿಧಿಸಿದ ಪ್ರಕ್ರಿಯೆಯೂ ನಡೆದಿದೆ. ದಂಡ ವಿಧಿಸಿದ ಅಧಿಕಾರಿಯನ್ನು ಗಣಿ ಮಾಫಿಯಾವು ಆಡಳಿತ ಪಕ್ಷದ ಪ್ರಭಾವೀ ಶಾಸಕರೊಬ್ಬರ ಮೂಲಕ ಎತ್ತಂಗಡಿ ಮಾಡುವಲ್ಲಿ ಯಶಸ್ವಿಯಾಗಿತ್ತು. ಮಾತ್ರವಲ್ಲ, ಇದೇ ಗಣಿ ಮಾಫಿಯಾಕ್ಕೆ ದಂಡ ಪಾವತಿಸುವ ಮೊದಲೇ ಜಿಲ್ಲಾಧಿಕಾರಿಗಳು ಜಿಲ್ಲೆಯ ಮತ್ತೊಂದೆಡೆ ಗಣಿಗಾರಿಕೆ ನಡೆಸಲು ಪರವಾನಿಗೆ ನೀಡುವ ಮೂಲಕ ಪರೋಕ್ಷವಾಗಿ ನಾನು ನಿಮ್ಮೊಂದಿಗಿದ್ದೇನೆ ಎಂಬ ಸಂದೇಶವನ್ನು ನೀಡಲಾಗಿತ್ತು.
ಸರಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೆಂಬಲದೊಂದಿಗೆ ಉಡುಪಿ ಜಲ್ಲೆಯ ದುಷ್ಟರ ತಂಡವೊಂದು ದಿಟ್ಟ ಮಾಹಿತಿಹಕ್ಕು ಕಾರ್ಯಕರ್ತ ವಂಡಾರು ವಾಸುದೇವ ಅಡಿಗರನ್ನು ಅಪಹರಿಸಿ, ಕೊಲೆ ಮಾಡಲು ಸುಪಾರಿ ನೀಡಿರುವ ಸಾಧ್ಯತೆ ಬಲವಾಗಿದೆ.
ಅಡಿಗರ ಶವ ಇದೀಗ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪರಿಣತ ತಂಡ ‘ಗಣ್ಯ’ ರಿಂದ ಸುಪಾರಿಪಡೆದುಕೊಂಡು ವಾಸುದೇವ ಅಡಿಗರನ್ನು ಅಪಹರಿಸಿ, ಕೊಲೆ ಮಾಡಿರುವ ಸಾಧ್ಯತೆಯೇ ಹೆಚ್ಚಿದೆ. ಈ ‘ಗಣ್ಯ’ ರನ್ನು ಗುರುತಿಸುವ ಮನಸ್ಸು, ಕಾಳಜಿ, ಪ್ರಾಮಾಣಿಕತೆ, ಕರ್ತವ್ಯ ದಕ್ಷತೆ ಸ್ಥಳೀಯ ಪೊಲೀಸ್ ಅಧಿಕಾರಿಗಳಲ್ಲಿ ಇರಲು ಅಸಾಧ್ಯ. ಮತ್ತೆ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿ ಮುಚ್ಚಿಹಾಕುವ ಪ್ರಹಸನ ಮಾಡುವ ಬದಲಾಗಿ, ಸಿಬಿಐ ತನಿಖೆಗೆ ಒಪ್ಪಿಸುವುದು ಅತೀ ಅಗತ್ಯ. ಆರ್ಟಿಐ ಕಾರ್ಯಕರ್ತ ವಂಡಾರು ವಾಸುದೇವ ಅಡಿಗರ ಅಪಹರಣ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ರಾಜ್ಯ ಸರಕರ ಕೂಡಲೇ ಸಿಬಿಐ ತನಿಖೆಗೆ ಹಸ್ತಾಂತರಿಸಬೇಕು ಎಂಬುದು udupibits.com ನ ಆಗ್ರಹ. ಇದು ಮಾಹಿತಿಹಕ್ಕು ಕಾರ್ಯಕರ್ತರೆಲ್ಲರ ಒತ್ತಾಯವೂ ಆಗಿದೆ.

ಉಡುಪಿ: ರಾಜ್ಯದಲ್ಲಿ ಭೀಕರ ಬರಗಾಲವಿದ್ದು ಜನ- ಜಾನುವಾರು ಸಂಕಷ್ಟ
ಅನುಭವಿಸುತ್ತಿದ್ದರೂ, ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ, ಕೇಂದ್ರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ರೈತಮೋರ್ಛಾದ ಉಡುಪಿ ಜಿಲ್ಲಾ ಘಟಕದ ಕಾರ್ಯಕರ್ತರು ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಸಿದರು.
ಪ್ರತಿಭಟನೆಯ ಬಳಿಕ 9 ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಯಿತು. ಶಾಸಕ ರಘುಪತಿ ಭಟ್, ರೈತಮೋರ್ಛಾದ ಜಿಲ್ಲಾಧ್ಯಕ್ಷ ಹರ್ಷವರ್ಧನ ಹೆಗ್ಡೆ, ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ ಉಪ್ಪೂರು, ಅಶೋಕ್ ಶೆಟ್ಟಿ ಮುದ್ರಾಡಿ, ಮಾಜಿ ಜಿ.ಪಂ.ಅಧ್ಯಕ್ಷೆ ಗ್ಲ್ಯಾಡಿಸ್ ಅಲ್ಮೇಡಾ, ಲೀಲಾ ಅಮೀನ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಉಡುಪಿ: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಕಾಲೇಜಿನ ‘ಸಮಾನ ಅವಕಾಶ ಕೇಂದ್ರ’ ದ ವತಿಯಿಂದ ಆ.4 ರಂದು ಪತ್ರಿಕಾರಂಗ ಮತ್ತು ಮಾಹಿತಿಹಕ್ಕು ಕಾಯ್ದೆ ಬಗ್ಗೆ ಒಂದು ದಿನದ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ನೇರಿ ಕರ್ನೇಲಿಯೋ ಅವರು
ಉದ್ಘಾಟಿಸಿದರು. ತೀರ್ಥಹಳ್ಳಿಯ ‘ಅಂತರಂಗ’ ವಾರ ಪತ್ರಿಕೆಯ ಸಂಪಾದಕರಾದ ರಮೇಶ್ ಶೆಟ್ಟಿ ಪತ್ರಿಕಾ ರಂಗದ ಬಗ್ಗೆ ಹಾಗೂ ಉಡುಪಿಯ ‘ಜನಪರ ರಾಜಕೀಯ’ ಪಾಕ್ಷಿಕ ಮತ್ತು
‘www.udupibits.com’ ನ ಸಂಪಾದಕರಾದ ಶ್ರೀರಾಮ ದಿವಾಣ ಅವರು ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಸಮಾನ ಅವಕಾಶ ಕೇಂದ್ರದ ಮುಖ್ಯಸ್ಥರಾದ ಪ್ರೊ.ಸಿರಿಲ್ ಮಥಾಯಸ್, ವಿದ್ಯಾರ್ಥಿ ನಾಯಕ ಸಚಿನ್ ಹಾಗೂ ನಾಯಕಿ ರೇಷ್ಮಾ ಉಪಸ್ಥಿತರಿದ್ದರು.

ಇದೀಗ ಬಂದ ಸುದ್ದಿ.. ಉಡುಪಿ: ಇಲ್ಲಿನ ಆದಿ ಉಡುಪಿಯಲ್ಲಿರುವ ಸಾರಿಗೆ ಇಲಾಖಾ ಕಚೇರಿಗೆ (ಆರ್.ಟಿ.ಓ) ಮಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ಇಂದು ಸಂಜೆ ದಾಳಿ ನಡೆಸಿದ್ದಾರೆ.
ದಾಳಿ ನಡೆಸಿದ ಬೆನ್ನಿಗೆ ಲೋಕಾಯುಕ್ತ ಅಧಿಕಾರಿಗಳು ಕಚೇರಿಯ ಹೊರಗಿನಿಂದ ಬಾಗಿಲು ಹಾಕಿದ್ದು, ಒಳಗೆ ಇರುವ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳ ವಶದಲ್ಲಿರುವ ಹೆಚ್ಚುವರಿ, ಅನಧಿಕೃತ ಹಣದ ತಪಾಸಣೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ತನಿಖೆ ಮುಂದುವರಿದಿದ್ದು, ಪೂರ್ಣಗೊಂಡಿಲ್ಲ. ದ.ಕ.ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಮತ್ತು ಉಡುಪಿ ಜಿಲ್ಲಾ ಲೋಕಾಯುಕ್ತದ ಪ್ರಭಾರ ಡಿವೈಎಸ್ಪಿ ಜಗಮಯ್ಯ ಅವರು ದಾಳಿಯ ನೇತೃತ್ವ ವಹಿಸಿಕೊಂಡಿದ್ದಾರೆ. ವರದಿ: ಶ್ರೀರಾಮ ದಿವಾಣ.

ಉಡುಪಿ: ಮಾಹಿತಿ ಹಕ್ಕು ಕಾಯ್ದೆಯನ್ನು ಸಮರ್ಥವಾಗಿ ಉಪಯೋಗಿಸುವ ಮೂಲಕ ಬಹಳಷ್ಟು ಹಗರಣಗಳನ್ನು ಬಯಲುಮಾಡಲು ಸಾಧ್ಯ. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಆರ್ ಟಿ ಐ ಒಂದು ಪರಿಣಾಮಕಾರಿ ಅಸ್ತ್ರ. ಜನಲೋಕಪಾಲ್ ಗೆ ಒತ್ತಾಯಿಸಿ ಅದು ಜ್ಯಾರಿಯಾದರೆ, ದೇಶದಲ್ಲೊಬ್ಬ ಸರ್ವಾಧಿಕಾರಿ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಹೀಗೆ ಮಾಡುವ ಬದಲು, ಈಗ ಇರುವ ಕಾನೂನುಗಳನ್ನು ಪ್ರತಿಯೊಬ್ಬನೂ ಬಳಸಿಕೊಳ್ಳುವ ಮೂಲಕ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಸಾಕಷ್ಟು ಸಾಧಿಸಲು ಸಾಧ್ಯ ಎಂದು ಜನಪರ ರಾಜಕೀಯ ಮತ್ತು udupibits.com ನ ಸಂಪಾದಕರೂ, ಕರ್ನಾಟಕ ಜನಪರ ವೇದಿಕೆಯ ಸಂಚಾಲಕರೂ ಆದ ಶ್ರೀರಾಮ ದಿವಾಣ ಹೇಳಿದರು.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಪೆರಂಪಳ್ಳಿಯ ಟ್ರಿನಿಟಿ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಡಿ.27 ರಂದು ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಉಪನ್ಯಾಸ ನೀಡಿ ದಿವಾಣ ಮಾತನಾಡುತ್ತಿದ್ದರು.
ಶಿಬಿರಾಧಿಕಾರಿಗಳಾದ ಶ್ರೀಮತಿ ಅನ್ನಮ್ಮ, ಜೋಸೆಫ್ ಪೀಟರ್ ಫೆರ್ನಾಂಡಿಸ್, ಸಹಾಯಕ ಶಿಬಿರಾಧಿಕಾರಿಗಳಾದ ಮಂಜುನಾಥ್, ಶ್ರೀಮತಿ ಪೂರ್ಣಿಮಾ, ಕು.ಪುಷ್ಪಾ ಹಾಗೂ ಭರತ್ ಕುಮಾರ್ ಉಪಸ್ಥಿತರಿದ್ದರು.