Posts Tagged ‘bajaranga dal’

* ಶ್ರೀರಾಮ ದಿವಾಣ.
# ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿತ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತನ್ನ ವೈವಾಹಿಕ ಸ್ಥಿತಿಗತಿಯ ಬಗ್ಗೆ ಯಾವುದೇ ಮಾಹಿತಿಯನ್ನೂ ಉಲ್ಲೇಖಿಸದೆ ಸತ್ಯ ವಿಷಯವನ್ನು ಮುಚ್ಚಿಟ್ಟದ್ದು ತಪ್ಪು ಮತ್ತು ಈ ವಿಚಾರದಲ್ಲಿ ಮೋದಿ ದೋಷಿ ಎಂಬುದನ್ನು ಇದೀಗ ನ್ಯಾಯಾಲಯವೇ ಸ್ಪಷ್ಟಪಡಿಸಿದೆ.

ಚುನಾವಣಾ ಆಯೋಗಕ್ಕೆ ಸಲ್ಲಿಸುವ ಅಫಿಡವಿತ್ ನಲ್ಲಿ ಸತ್ಯವನ್ನು ಬಚ್ಚಿಡುವುದು ಒಂದು ಅಪರಾಧವಾಗಿದೆ. ಈ ಅಪರಾಧ ಎಸಗಿದವರಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ. ಆದರೆ ಈ ಸಂಬಂಧದ ದೂರನ್ನು ನೀಡುವುದಾದರೆ, ದೂರು ನೀಡುವವರು ಒಂದು ವರ್ಷದ ಅವಧಿಯೊಳಗೆ ನೀಡಬೇಕಾಗುತ್ತದೆ. ಒಂದು ವರ್ಷದ ಬಳಿಕ ದೂರು ನೀಡಿದರೆ ಏನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅಲಹಾಬಾದ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅಸಹಾಯಕತೆ ವ್ಯಕ್ತಪಡಿಸಿದೆ.

2012ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿತ್ ನಲ್ಲಿ ಆಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಸತ್ಯವನ್ನು ಮುಚ್ಚಿಟ್ಟು ಅಫಿಡವಿತ್ ಸಲ್ಲಿಸಿದ್ದು ನಿಜ ಎಂಬುದನ್ನು ಅಲಹಾಬಾದ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಖಚಿತಪಡಿಸಿದೆ. ಇದು ಅಪರಾಧವೆಂಬುದನ್ನೂ ನ್ಯಾಯಾಲಯ ದೃಢಪಡಿಸಿದೆ. ಆದರೆ ಈ ಸಂಬಂಧದ ದೂರನ್ನು ಎಎಪಿ ಮುಖಂಡರಾದ ನಿಶಾಂತ್ ವರ್ಮಾ ನಿಯಮಾವಳಿ ಪ್ರಕಾರ ನಿಗದಿತ ಒಂದು ವರ್ಷದ ಅವಧಿಯೊಳಗೆ ನೀಡಬೇಕಾಗಿತ್ತು. ಆದರೆ, ಒಂದು ವರ್ಷ ನಾಲ್ಕು ತಿಂಗಳ ಬಳಿಕ ದೂರು ನೀಡಿದ ಕಾರಣ ಏನೂ ಮಾಡಲು ಸಾಧ್ಯವಿಲ್ಲ ಎಂಬ ಅಸಹಾಯಕತೆಯನ್ನು ವ್ಯಕ್ತಪಡಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿ ಕೈಚೆಲ್ಲಿದೆ ನ್ಯಾಯಾಲಯ.

ಒಂದು ದೇಶದ ಪ್ರಧಾನಮಂತ್ರಿಯಂಥ ಉನ್ನತ ಮತ್ತು ಶ್ರೇಷ್ಠ ಹುದ್ದೆಯನ್ನು ಅಲಂಕರಿಸುವ, ಅಲಂಕರಿಸಿರುವ ವ್ಯಕ್ತಿ ಕೇವಲ ರಾಜಕಾರಣಿಯಾಗಿದ್ದರೆ, ಒಂದು ಪಕ್ಷದ ನಾಯಕನಾಗಿದ್ದರೆ ಸಾಲದು. ಆತ ಸತ್ಯಸಂಧನೂ, ಪ್ರಾಮಾಣಿಕನೂ, ನಿಷ್ಪಕ್ಷಪಾತ- ಪಾರದರ್ಶಕ ವ್ಯಕ್ತಿತ್ವದವನೂ, ನಿಜವಾದ ಅರ್ಥದಲ್ಲಿ ಸಾಮರ್ಥ್ಯವಂತನೂ ಆಗಿರಬೇಕು. ಆದರೆ, ಇಂದು ಸತ್ಯವನ್ನು ಮತ್ತು ಅಪರಾಧ ಕೃತ್ಯಗಳನ್ನು ಮುಚ್ಚಿ ಹಾಕುವ ಸಾಮಥ್ರ್ಯವನ್ನೇ ದೇಶವಾಳಲು ಬೇಕಾದ ಸಾಮಥ್ರ್ಯ ಎಂದು ರಾಜಕೀಯ ಪಕ್ಷಗಳು, ರಾಜಕೀಯ ನಾಯಕರು, ಪಕ್ಷಗಳ ಮತ್ತು ನಾಯಕರ ಅಂಧಾಭಿಮಾನಿಗಳು ತಿಳಿದುಕೊಂಡಿರುವುದೇ ನಮ್ಮ ದೇಶದ ದುರಂತ.

ಇಲ್ಲಿ ನರೇಂದ್ರ ಮೋದಿ ತಪ್ಪೆಸಗಿರುವುದು ನಿಜ, ಇದು ಕೇವಲ ತಪ್ಪು ಮಾತ್ರವಲ್ಲ, ಆ ತಪ್ಪು ಒಂದು ಅಪರಾಧ ಕೃತ್ಯವೂ ಆಗಿದೆ ಎಂಬುದನ್ನು ಗಂಭಿರವಾಗಿಯೇ ಗಮನಿಸಬೇಕಾಗಿದೆ. ಆ ಕಾರಣಕ್ಕೇ ಅವರು ದೋಷಿಯೂ ಹೌದು. ಇಂಥದೊಂದು ಅಪರಾಧಕ್ಕೆ ಆರು ತಿಂಗಳು ಜೈಲಲ್ಲಿರಬೇಕಾದ ವ್ಯಕ್ತಿ, ಆ ಸತ್ಯವನ್ನು 2014ರವರೆಗೂ ಬಚ್ಚಿಡಲು ಯಶಸ್ವಿಯಾಗುವ ಮೂಲಕ ಶಿಕ್ಷೆ ಅನುಭವಿಸುವುದರಿಂದ ಅದೇಗೋ ಬಚಾವಾಗಿದ್ದಾರೆ. ಇಂಥ ವ್ಯಕ್ತಿ ದೇಶಕ್ಕೆ ಮಾದರಿ, ಆದರ್ಶ ಎಂದು ಹೇಳಲು ಸಾಧ್ಯವೇ ? ಸಾಧುವೇ ? ವಿಪರ್ಯಾಸವೇ ಸರಿ. ಇಂಥ ವ್ಯಕ್ತಿ ಪ್ರಧಾನಿಯಾಗಿ ಮುಂದುವರಿಯುವುದು ದೇಶಕ್ಕೆ ಭೂಷಣವೇ ? ಜನತೆ, ಮುಖ್ಯವಾಗಿ ಸಂಸ್ಕೃತಿ, ಪರಂಪರೆ, ಸಂಪ್ರದಾಯ, ನೈತಿಕತೆ ಇತ್ಯಾದಿಗಳ ಬಗ್ಗೆ ಭಾರೀ ಮಾತನಾಡುವ ಬಿಜೆಪಿ ಈ ಬಗ್ಗೆ ಇನ್ನಾದರೂ ಯೋಚಿಸಬೇಕು.

ಇವತ್ತು ಏನಾಗಿದೆ ಎಂದರೆ, ಯಾವುದೇ ಅಪರಾಧ ಕೃತ್ಯವೆಸಗಿ ಸಿಕ್ಕಿಬಿದ್ದವನು ಮಾತ್ರ ದುಷ್ಟ, ಭ್ರಷ್ಟ, ಕೊಲೆಗಡುಕ, ಅತ್ಯಾಚಾರಿ ಇತ್ಯಾದಿಯಾಗಿ ಬಹಿರಂಗವಾಗಿ ಕರೆಸಿಕೊಳ್ಳುತ್ತಾನೆ. ಇಂಥವರ ವಿರುದ್ಧ ಮಾಧ್ಯಮಗಳೂ ಪುಂಕಾನುಪುಂಕವಾಗಿ ಅತಿರಂಜಿತ, ರೋಮಾಂಚನಕಾರಿ ವರದಿಗಳನ್ನು ದಿನಗಟ್ಟಲೆ ಪ್ರಸಾರ ಮಾಡುತ್ತೆ. ಆದರೆ ಅಧಿಕೃತವಾಗಿ ಸಿಕ್ಕಿಬೀಳದ, ಆದರೆ ಅನಧಿಕೃತವಾಗಿ ಅಪರಾಧಿಗಳೇ ಆಗಿರುವ ಪ್ರಭಾವಶಾಲೀ ರಾಜಕಾರಣಿ/ಉದ್ಯಮಿಗಳನ್ನು ಮಾದರಿ ಪುರುಷರೆಂದು, ಸಮರ್ಥ ನಾಯಕರೆಂದು ಬಿಂಬಿಸಿ ದೈವತ್ವಕ್ಕೇರಿಸಲಾಗುತ್ತದೆ. ಪಕ್ಷಗಳು ತಮ್ಮ ನಾಯಕರನ್ನು, ಯಾವ್ಯಾವುದೋ ಲಾಭ ಪಡೆದುಕೊಂಡವರು ಋಣ ಸಂದಾಯ ಮಾಡುವ ಪ್ರಕ್ರಿಯೆ ಭಾಗವಾಗಿ ಆಸ್ಥಾನ ವಿದ್ವಾಂಸರಂತೆ, ಭಟ್ಟಂಗಿಗಳಂತೆ ವರ್ತಿಸುವ ಮೂಲಕ ಅವರ ವಿರುದ್ಧ, ಅವರ ತಪ್ಪು ನಡೆಗಳ ಬಗ್ಗೆ ಯಾರೊಬ್ಬರೂ ಮಾತನಾಡದಂಥ ಪರಿಸ್ಥಿತಿಯನ್ನು ಸೃಷ್ಟಿಸಿಬಿಡುತ್ತಾರೆ. ಇದೂ ನಮ್ಮದೊಂದು ವ್ಯವಸ್ಥೆ !

ತನ್ನ ವೈವಾಹಿಕ ಸ್ಥಿತಿಗತಿಯನ್ನು ಮುಚ್ಚಿಟ್ಟ ನರೇಂದ್ರ ಮೋದಿ, ಗುಜರಾತ್ ನಲ್ಲಿ ನಡೆದ, ನಡೆಸಿದ ಜನಾಂಗೀಯ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ, ನಕಲಿ ಎನ್ಕೌಂಟರ್ ಗಳಿಗೆ ಸಂಬಂಧಪಟ್ಟಂತೆ, ಭ್ರಷ್ಟಾಚಾರದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಅದೆಷ್ಟು ವಾಸ್ತವಾಂಶಗಳನ್ನು ಮುಚ್ಚಿಟ್ಟಿರುವ ಸಾಧ್ಯತೆಗಳಿವೆ. ಅಧಿಕಾರ ಇದ್ದರೆ, ಇರುವಾಗ ಅಧಿಕಾರಮದದಿಂದ ಅಧಿಕಾರವನ್ನು ದುರುಪಯೋಗಪಡಿಸುವುದು ರಾಜಕೀಯದಲ್ಲಿ ಹೊಸದಾದ ವಿಷಯವೇನೂ ಅಲ್ಲ. ಮೋದಿಯವರೂ ಈ ರೀತಿ ಮಾಡಿರಲಾರರು ಎಂದು ಹೇಳಲು ಇನ್ನಂತೂ ಖಂಡಿತಾ ಸಾಧ್ಯವಿಲ್ಲ. ವಾದಕ್ಕೆ ಬೇಕಾಗಿ ಏನಾದರೂ ವಾದಿಸಬಹುದು.

ಆದರೆ, ಈಗಾಗಲೇ ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿದ ಕೆಲವು ಪ್ರಕರಣಗಳಲ್ಲಿ ನರೇಂದ್ರ ಮೋದಿಯವರ ಅಂದಿನ ಗುಜರಾತ್ ರಾಜ್ಯ ಸಚಿವ ಸಂಪುಟದ ಒಂದಿಬ್ಬರು ಸಚಿವರು, ಶಾಸಕರು, ಪಕ್ಷದ ಮುಖಂಡರು ಆರೋಪಿಗಳಾಗಿ ದಾಖಲಾಗಿದ್ದಾರೆ. ಕೆಲವರನ್ನು ಈಗಾಗಲೇ ನ್ಯಾಯಾಲಯವೇ ಅಪರಾಧಿಗಳು ಎಂದು ಘೋಷಿಸಿದ್ದೂ ಆಗಿದೆ. ಒಂದು ಎನ್ಕೌಂಟರ್ ಪ್ರಕರಣದಲ್ಲಿ ಮೊದಿಯವರ ಬಲಕೈ ಬಂಟ ಎಂದು ಕರೆಸಿಕೊಳ್ಳುತ್ತಿರುವ, ಬಿಜೆಪಿಯ ಸಂಭಾವ್ಯ ರಾಷ್ಟ್ರಾಧ್ಯಕ್ಷ ಎಂದೂ ಹೇಳಲಾಗುತ್ತಿರುವ ಅಮಿತ್ ಶಾ ಅವರೂ ಆರೋಪಿ ಎಂದು ಗುರುತಿಸಲ್ಪಟ್ಟಿದ್ದಾರೆ. ಇದನ್ನೆಲ್ಲಾ ನೊಡಿದರೆ, ಮೋದಿ ಗುಜರಾತ್ ನಲ್ಲಿ ಹೇಗೆ ಅಧಿಕಾರ ಚಲಾಯಿಸಿರಬಹುದು ಎಂಬುದನ್ನು ಊಹಿಸಲು ಎಷ್ಟು ಕಷ್ಟಪಡುವ ಅಗತ್ಯ ಇಲ್ಲ ಎನಿಸುತ್ತದೆ.

ಚುನಾವಣಾ ಆಯೋಗಕ್ಕೆ ನೀಡಿದ ಅಫಿಡವಿತ್ನಲ್ಲಿ ವೈವಾಹಿಕ ಸತ್ಯವನ್ನು ಮುಚ್ಚಿಡುವ ಮೂಲಕ ನರೇಂದ್ರ ಮೋದಿ ತಪ್ಪೆಸಗಿದ್ದಾರೆ, ಆದರೆ ಶಿಕ್ಷೆಯಿಂದ ಪಾರಾಗಿದ್ದಾರೆ ಎಂದು ಅಲಹಾಬಾದ್ ಮ್ಯಾಜಿಸ್ಟ್ರೇಟ್ ಕೋರ್ಟ್ ಘೋಷಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಒಂದು ಮುಖವಾಡ ಅಧಿಕೃತವಾಗಿಯೇ ಕಳಚಿಹಾಕಲ್ಪಟ್ಟಿದೆ. ಈ ಮಹತ್ವದ ಬೆಳವಣಿಗೆ ನಡೆದ ಬೆನ್ನಿಗೇ, ಸುಪ್ರೀಂ ಕೋರ್ಟ್ ನೂತನವಾಗಿ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಜೊತೆ ಸಮಾಲೋಚನೆ ನಡೆಸದೆ, ಅವರು ನೀಡಿದ ಪಟ್ಟಿಯಿಂದ ಮಾಜಿ ಸಾಲಿಸಿಟರ್ ಜನರಲ್ ಮತ್ತು ಹಿರಿಯ ನ್ಯಾಯವಾದಿ ಗೋಪಾಲ್ ಸುಬ್ರಹ್ಮಣ್ಯಂ ಅವರ ಹೆಸರನ್ನು ಕೈಬಿಟ್ಟು, ನೂತನ ನ್ಯಾಯಮೂರ್ತಿಗಳನ್ನು ಏಕಪಕ್ಷೀಯವಾಗಿ ನೇಮಕ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ ಎಂದು ಸ್ವತಹಾ ಮುಖ್ಯ ನ್ಯಾಯಮೂರ್ತಿಗಳಾದ ಆರ್.ಎಂ.ಲೋಧಾ ಅವರು ಬಹಿರಂಗವಾಗಿಯೇ ಅಸಮಾಧಾನ ಮತ್ತು ಆಕ್ಷೇಪ ವ್ಯಕ್ತಪಡಿಸುವ ಮೂಲಕ ಮೋದಿಯವರ ಸರ್ವಾಧಿಕಾರಿ, ನಿರಂಕುಶ ಆಡಳಿತ ವೈಖರಿಯನ್ನು ಬಟಾಬಯಲು ಮಾಡಿದ್ದಾರೆ.

ನ್ಯಾಯಾಂಗದ ಸ್ವಾತಂತ್ರ್ಯದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಲೋಧಾ ಅವರು ಖಡಾಖಂಡಿತವಾಗಿ ಹೇಳಿರುವುದು ಎಲ್ಲರೂ ಗಮನಿಸಲೇ ಬೇಕಾದ ಸೂಕ್ಷ್ಮ ವಿಷಯವಾಗಿದೆ. ಪ್ರಧಾನಿ ಮೋದಿ ಹಾಗೂ ಕೇಂದ್ರದ ಬಿಜೆಪಿ ಸರಕಾರವು, ನ್ಯಾಯಾಂಗವು ತಮ್ಮ ಮತ್ತು ತಮ್ಮ ಸರಕಾರದ ಪರವಾಗಿರಬೇಕು ಎಂಬ ರೀತಿಯಲ್ಲಿದ್ದಾರೆ, ಆದರೆ ನ್ಯಾಯಾಂಗ ಹಾಗೆ ನಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ಸಾರಿ ಹೇಳಿದಂತೆಯೇ ಇದೆ.

ನರೇಂದ್ರ ಮೋದಿಯವರು ಗುಜರಾತ್ ನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ರಾಜ್ಯಕ್ಕೆ ಲೋಕಾಯುಕ್ತರನ್ನೇ ನೇಮಕ ಮಾಡಿರಲಿಲ್ಲ ಎನ್ನುವುದು ನಿಗೂಢ ರಹಸ್ಯವೇನೂ ಅಲ್ಲ. ತಮ್ಮ ಮೂಗಿನ ನೇರಕ್ಕೆ ನಡೆದುಕೊಳ್ಳದ ಸಚಿವರು, ಇತರ ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಹಾಗೂ ಅಧಿಕಾರಿಗಳು ಸಹ ಮೋದಿಯೊಂದಿಗೆ ಸಹಜವಾಗಿ ಮುನ್ನಡೆಯಲಿಕ್ಕಾಗದೆ ಕೊನೆಗೆ ಪಕ್ಷವನ್ನು ಮತ್ತು ಅಧಿಕಾರವನ್ನು ತೊರೆದು ಹೋಗುವಂತೆ ಕಾರ್ಯತಂತ್ರ ರೂಪಿಸಿ ಯಶಸ್ವಿಯಾದವರು ಇದೇ ಮೋದಿ ಎನ್ನುವುದೂ ಗುಟ್ಟಿನ ವಿಷಯವೇನೂ ಆಗಿ ಉಳಿದಿಲ್ಲ. ಇಂಥ ಅನೇಕಾನೇಕ ಮೋದಿ ಮಾದರಿಗಳನ್ನು ದೇಶದ ಜನರು ಗೊತ್ತಿದ್ದೋ- ಗೊತ್ತಿಲ್ಲದೆಯೋ, ಅಭಿವೃದ್ಧಿ ಎಂದು ನಂಬಿಯೋ-ಭ್ರಮಿಸಿಯೋ ಒಟ್ಟಿನಲ್ಲಿ ದೇಶದ ಪ್ರಧಾನಿಯನ್ನಾಗಿ ಮಾಡಿದ್ದಾರೆ, ಮಾಡಿ ಆಗಿದೆ. ಎಲ್ಲಾ ಆದ ಬಳಿಕ ಈಗ ಮೋದಿ ಮಾದರಿ ಏನೆಂಬುದು ಇದೀಗ ಒಂದೊಂದಾಗಿಯೇ ಬೆತ್ತಲೆಯಾಗತೊಡಗಿದೆ.

ಮೋದಿ ಇದೇ ಮಾದರಿಗಳನ್ನು ನೆಚ್ಚಿಕೊಂಡು ತಮ್ಮ ಆಡಳಿತ ಶೈಲಿಯನ್ನು ಮುಂದುವರಿಸಿದ್ದೇ ಆದರೆ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯ ನಡುವೆ ಮುಂದಿನ ದಿನಗಳಲ್ಲಿ ಗಂಭೀರವಾದ ಸಂಘರ್ಷ ನಡೆಯಬಹುದು. ಹೀಗೆ ನಡೆದುದೇ ಆದರೆ ಅದು ನಮ್ಮ ದೇಶಕ್ಕೆ ಒಳ್ಳೆಯ ಬೆಳವಣಿಗೆಯಾಗಲು ಸಾಧ್ಯವಿಲ್ಲ. ನ್ಯಾಯಾಂಗದ ಮೂಲಕವೇ ಮೋದಿಯ ಗುಜರಾತ್ ಮಾದರಿ ಎಂಬ ಭ್ರಮೆಯ ಕೆಲವು ತುಣುಕುಗಳು ಇದೀಗ ಕಳಚಿಬಿದ್ದಿರುವುದರಿಂದ, ಬಿಜೆಪಿ ತಡ ಮಾಡದೆ ಪ್ರಧಾನಿಯಂಥ ಶ್ರೇಷ್ಠ ಸ್ಥಾನದಿಂದ ಮೋದಿಯವರನ್ನು ವಜಾಗೊಳಿಸಿ ಇನ್ನೊಬ್ಬ ಸಮರ್ಥ ವ್ಯಕ್ತಿಯನ್ನು ಆ ಸ್ಥಾನಕ್ಕೇರಿಸಿದರೆ ಮಾತ್ರ ಭಾರತ ಪ್ರಪಾತಕ್ಕೆ ಬೀಳುವುದನ್ನು ತಡೆದು ನಿಲ್ಲಿಸಬಹುದು !

ಉಡುಪಿ: ಪೆರ್ಡೂರು ಎಂಬೂರು ಆಫ್ರೀಕಾ ಖಂಡದ ಯಾವುದೋ ಒಂದು ಕಾಡಿನ ಮೂಲೆಯಲ್ಲೇನೂ ಇಲ್ಲ. ಹೀಗಿದ್ದೂ ಹೆದ್ದಾರಿಯಲ್ಲಿ ವಾಹನವನ್ನು ತಡೆದು ನಿಲ್ಲಿಸಿ ದಲಿತ ಯುವಕರ ಮೇಲೆ ಹಲ್ಲೆ ನಡೆಸಿ ಇಂದಿಗೂ ರಾಜಾರೋಷವಾಗಿ ಪೆರ್ಡೂರು, ಹಿರಿಯಡ್ಕ ಪರಿಸರದ ಬಜರಂಗದಳ ಕಾರ್ಯಕರ್ತರನ್ನು ಬಂಧಿಸಲು ಘಟನೆ ನಡೆದು 20 ದಿನಗಳಾದರೂ ಹಿರಿಯಡ್ಕ ಪೊಲೀಸರಿಗೆ ಯಾಕೆ ಸಾಧ್ಯವಾಗುತ್ತಿಲ್ಲ ? ಇವರಿಗೆ ಕೇಳಿಸಿಕೊಳ್ಳುವ ಕಿವಿ, ಯೋಚಿಸುವ ಮಿದುಳು ಯಾವುದೂ ಇಲ್ಲವೇ ? ಪೊಲೀಸರು ಸಾಮಾನ್ಯ ನಾಗರಿಕರಿಗೆ ವಿಶೇಷ ರಕ್ಷಣೆ ಒದಗಿಸಿಕೊಡುವ ಅಗತ್ಯವೇನೂ ಇಲ್ಲ. ಕನಿಷ್ಟ ಕರ್ತವ್ಯವನ್ನು ಪಾಲಿಸುವ ಮೂಲಕ ಬದುಕುವ ಹಕ್ಕನ್ನು ಕೊಟ್ಟರೆ ಸಾಕು. ಆದರೆ, ಈ ಪೊಲೀಸರು ಅದಕ್ಷರಾಗಿ, ಕ್ರಿಮಿನಲ್ಗಳೊಂದಿಗೆ ಶಾಮೀಲಾಗಿಕೊಂಡು ತಾವು ಕ್ರಿಮಿನಲ್ ಗಳಾದರೆ ಈ ಸಮಾಜವನ್ನು ರಕ್ಷಿಸುವವರು ಯಾರು ?
ಹೀಗೆಂದು ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮುಖಾಮುಖಿಯಾಗಿ ನಿಂತು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದವರು ಖ್ಯಾತ ಚಿಂತಕ, ಹಿರಿಯ ವಿಮರ್ಶಕ ಜಿ.ರಾಜಶೇಖರ್ ರವರು. ಅಮ್ಮುಂಜೆಯ ಯುವಕರ ಮೇಲೆ ಕುಕ್ಕೆಹಳ್ಳಿಯಲ್ಲಿ ಹಲ್ಲೆ ನಡೆಸಿ, ದರೋಡೆ ಮಾಡಿದ ಪೆರ್ಡೂರಿನ ಬಜರಂಗಿಗಳನ್ನು ಬಂಧಿಸುವಂತೆ ಮತ್ತು ಆರೋಪಿಗಳನ್ನು ರಕ್ಷಿಸುತ್ತಿರುವ ಹಿರಿಯಡ್ಕ ಠಾಣಾಧಿಕಾರಿ ಲಕ್ಷ್ಮಣ್ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಇಂದು ಸಂಜೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಉಡುಪಿ ಎಸ್ಪಿ ಕಚೇರಿ ಮುಂದೆ ನಡೆಸಿದ ಬೃಹತ್ ಪ್ರತಿಭಟನಾ ಧರಣಿಯಲ್ಲಿ ಅವರು ಮಾತನಾಡುತ್ತಿದ್ದರು. ಹಿಟ್ಲರ್ ನ ನಾಝಿಸಂ ಮತ್ತು ಮುಸಲೋನಿಯ ಫ್ಯಾಸಿಸಂ ಆರ್ಎಸ್ಎಸ್ ಗೆ ಮಾದರಿಯಾಗಿದೆ. ಇಂಥ ಆರ್ಎಸ್ ಎಸ್ ಗೆ ವಿದ್ಯಾರ್ಥಿಗಳ ನಡುವೆ ಕೆಲಸ ಮಾಡಲು ಎಬಿವಿಪಿ, ರಾಜಕೀಯವಾಗಿ ಕೆಲಸ ಮಾಡಲು ಬಿಜೆಪಿ ಇರುವಂತೆ ನೀಚತನದ ಕ್ರಿಮಿನಲ್, ಗೂಂಡಾ ಕೆಲಸ ಮಾಡಲು ಬಜರಂಗ ದಳವೆಂಬ ಪಡೆ ಇದೆ. ಇಂಥ ನೀಚತನದ ಕೆಲಸ ಈ ಪಡೆಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಕಳೆದ 20 ವರ್ಷಗಳಿಂದ ನಡೆಯುತ್ತಿದೆ ಎಂದು ಆರೋಪಿಸಿದ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರೂ ಆದ ರಾಜಶೇಖರ್, ಇನ್ನಾದರೂ ಮಾನವಂತರಾಗಿ, ಸಂಘ ಪರಿವಾರದ ಗುಲಾಮರಾಗಬೇಡಿ ಎಂದು ಪೊಲೀಸರಿಗೆ ಮನವಿ ಮಾಡಿಕೊಂಡರು.
ಧರಣಿಯನ್ನುದ್ಧೇಶಿಸಿ ಮಾತನಾಡಿದ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್ ಅವರು, ಕರಾವಳಿ ಜಿಲ್ಲೆಗಳಲ್ಲಿ ನಡೆಯುವ ಕೋಮು ಗಲಭೆಗಳ ಹಿಂದಿನ ರಿಮೋಟ್ ಕಂಟ್ರೋಲರ್ ಕಲ್ಲಡ್ಕ ಪ್ರಭಾಕರ ಭಟ್ಟರ ಮೇಲೆ ಒಂದೇ ಒಂದು ಕೇಸು ದಾಖಲಿಸಲು ಇಲ್ಲಿನ ಪೊಲೀಸರಿಗೆ ಇದುವರೆಗೆ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು. ಬರಹಗಾರರಾದ ಪ್ರೊ.ಕೆ.ಫಣಿರಾಜ್, ಪ್ರೊ.ಹಯವದನ ಮೂಡುಸಗ್ರಿ, ಜಿ.ಪಂ.ಸದಸ್ಯೆ ಮಲ್ಲಿಕಾ ಅಶೋಕ್, ಪಿಎಫ್ಐ ನಾಯಕ ಹನೀಫ್ ಕಾಪು ಹಾಗೂ ಎಸ್ ಡಿಪಿಐ ಮುಂದಾಳು ಇಲಿಯಾಸ್ ಧರಣಿಯನ್ನುದ್ಧೇಶಿಸಿ ಮಾತನಾಡಿದರು. ದಸಂಸ ಮುಖಂಡರಾದ ಜಯನ್ ಮಲ್ಪೆ, ಗಣೇಶ್ ನೆರ್ಗಿ, ಸುಂದರಿ ಪುತ್ತೂರು, ಸರೋಜಾ ಕೆಮ್ಮಣ್ಣು, ಸರಸ್ವತಿ ಶಂಕರ್ ಕಿನ್ನಿಮೂಲ್ಕಿ, ಮಂಜುನಾಥ ಅಮ್ಮುಂಜೆ, ವಿಶ್ವನಾಥ ಕೊಳಲಗಿರಿ, ದೇಜಪ್ಪ ಹಿರಿಯಡ್ಕ, ಮಂಜುನಾಥ ಕಪ್ಪೆಟ್ಟು, ಸಾಧು ಚಿಟ್ಪಾಡಿ ಮೊದಲಾದವರು ಧರಣಿಯ ನೇತೃತ್ವ ವಹಿಸಿದ್ದರು.
ಧರಣಿಯ ಬಳಿಕ ಉಡುಪಿ ಜಿಲ್ಲಾ ಪೊಲೀಸ್ ಇಲಾಖಾಧಿಕಾರಿಗಳ ಮೂಲಕ ಪಶ್ಚಿಮ ವಲಯದ ಐಜಿಪಿ ಪ್ರತಾಪ್ ರೆಡ್ಡಿಯವರಿಗೆ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು. ಮನವಿಯನ್ನು ಉಡುಪಿಯ ಪ್ರಭಾರ ಡಿವೈಎಸ್ಪಿ ಜಯಂತ್ ವಿ.ಶೆಟ್ಟಿ ಸ್ವೀಕರಿಸಿದರು.

ಉಡುಪಿ: ಮುಂದಿನ ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯಾ ಪ್ರಕರಣಗಳನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಕಟ್ಟು ನಿಟ್ಟಾಗಿ ತಡೆಹಿಡಿಯಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಾಸದ್ ಶೆಟ್ಟಿ ಮುನ್ನೆಚ್ಚರಿಕೆ ನೀಡಿದ್ದಾರೆ.
ವಿಹಿಂಪ ರಾಜ್ಯ ಸಮಿತಿ ನೀಡಿದ ಕರೆಯಂತೆ ವಿಹಿಂಪ ಮತ್ತು ಬಜರಂಗ ದಳ ಇವುಗಳ ಜಿಲ್ಲಾ ಘಟಕಗಳು ಸಂಯುಕ್ತವಾಗಿ ಗೋ ಹತ್ಯಾ ಪ್ರಕರಣಗಳನ್ನು ವಿರೋಧಿಸಿ ಉಡುಪಿ ಸರ್ವಿಸ್ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆಸಿದ ಪ್ರತಿಭಟನಾ ಧರಣಿಯನ್ನು ಉದ್ಧೇಶಿಸಿ ಅವರು ಮಾತನಾಡುತ್ತಿದ್ದರು.
ಮಣಿಪಾಲದ ಕೇರಳ ಹೋಟೆಲ್, ನೀಲ್ ಕಮಲ್, ಹಾಟ್ ಸ್ಪಾಟ್ಗಳಲ್ಲಿ ಅಕ್ರಮವಾಗಿ ಗೋ ಮಾಂಸ ಪದಾರ್ಥ ಮಾರಾಟ ಮಾಡಲಾಗುತ್ತಿದೆ. ಮಟಪಾಡಿ, ಹೊನ್ನಾಳ, ಉಪ್ಪಿನಕೋಟೆ, ಚಾಂತಾರು, ಬಾರಕೂರು, ಹಂದಾಡಿ, ಕುಮ್ರಗೋಡು ಮುಂತಾದ ಪ್ರದೇಶಗಳಲ್ಲಿ ಅಕ್ರಮವಾಗಿ
ಜಾನುವಾರುಗಳನ್ನು ಕದ್ದು, ಕೆಲವು ನಿಗೂಢ ಸ್ಥಳಗಳಲ್ಲಿ ಅದರ ಮಾಂಸ ತಯಾರು
ಮಾಡಲಾಗುತ್ತಿದೆ. ಬ್ರಹ್ಮಾವರ ನಗರದ ಕೋಳಿ ಅಂಗಡಿ ಮತ್ತು ಮಾಮಸದಂಗಡಿಗಳಲ್ಲಿ ಕೋಲ್ಡ್ ಸ್ಟೋರೆಜ್ ನಲ್ಲಿ ಇರಿಸಿ ಯಾವುದೇ ಪರವಾನಿಗೆ ಇಲ್ಲದೆ ಇವುಗಳ ಮಾಂಸ ಮಾರಾಟ ಮಾಡಲಾಗುತ್ತಿದೆ. ಬ್ರಹ್ಮಾವರ ನಗರದ ಹೃದಯ ಭಾಗಗಳಾದ ಬಸ್ ನಿಲ್ದಾಣ, ಮೀನು ಮಾರ್ಕೆಟ್ ಬಳಿ, ಸಂತೆ ಮಾರ್ಕೆಟ್, ಆಕಾಶವಾಣಿ ವೃತ್ತದ ಗಾಂಧಿ ಮೈದಾನ, ಇಂದಿರಾ ನಗರ
ಮೈದಾನಗಳಲ್ಲಿ ಗುಪ್ತವಾಗಿ ದನಗಳ ಕಳ್ಳ ಸಾಗಾಟ ರಾಜಾರೋಷವಾಗಿ ನಡೆಯುತ್ತಿದೆ ಎಂದು ಇದೇ ಸಂದರ್ಭದಲ್ಲಿ ವಿಹಿಂಪ ಆರೋಪಿಸಿತು.
ಕುಂದಾಪುರ ತಾಲೂಕಿನ ಕಾರ್ಕಳ ನಗರದ ಮಾರ್ಕೆಟ್ ರೋಡ್ನ ಹಲವಾರು ಕೋಲ್ಡ್ ಸ್ಟೋರೆಜ್ ಗಳಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ. ದುರ್ಗಾ ಗ್ರಾಮದ ಮಸೀದಿ ಬಳಿ, ಸಾಣೂರು ಫಾಮರ್್ ಎದುರು, ಕಾಬೆಟ್ಟು ಸರ್ಕಲ್ ಬಳಿ ಅಕ್ರಮ ಕಸಾಯಿಖಾನೆಗಳು
ಕಾರ್ಯಾಚರಿಸುತ್ತಿವೆ. ಬಂಗ್ಲೆಗುಡ್ಡೆಯ ಹಲವಾರು ಮನೆಗಳಲ್ಲಿ ದನವನ್ನು ಅಕ್ರಮವಾಗಿ ಕಡಿಯಲಾಗುತ್ತಿದೆ ಎಂದೂ ವಿಹಿಂಪ ಗಂಭೀರ ಅಪಾದನೆ ಮಾಡಿದೆ.
ಗೋಮಾಂಸ ಮಾರಾಟ ಇತ್ಯಾದಿ ಪ್ರಕರಣಗಳನ್ನು ಪತ್ತೆಹಚ್ಚಲು ಗುಪ್ತಚರ ಇಲಾಕೆಯನ್ನು ಉಪಯೋಗಿಸಬೇಕು ಎಂದು ಒತ್ತಾಯಿಸಿದ ವಿಹಿಂಪ, ಗೋ ಹತ್ಯಾ ಸಂಬಂಧಿ ಪ್ರಕರಣಗಳನ್ನು ತಡೆಗಟ್ಟಲು ರಾಜ್ಯ ಸರಕಾರ, ಪೊಲೀಸ್ ಇಲಾಖೆ, ಸ್ಥಳೀಯ ಆಡಳಿತಗಳು ವಿಫಲವಾಗಿವೆ ಎಂದು ವಿಹಿಂಪ ದೂರಿದೆ.
ಪ್ರತಿಭಟನಾ ಧರಣಿಯಲ್ಲಿ ಬಾಳ್ಕುದ್ರು ಮಠದ ನೃಸಿಂಹ ಸ್ವಾಮೀಜಿ, ಆರ್ಎಸ್ಎಸ್ ನ ಶಂಭು ಶೆಟ್ಟಿ, ಜಿಲ್ಲಾ ಗೋರಕ್ಷಾ ಪ್ರಮುಖ್ ಶ್ರೀಧರ ಕಾಮತ್, ಬಜರಂಗ ದಳ ಜಿಲ್ಲಾ ಸಂಚಾಲಕ ಸುನಿಲ್ ಕೆ.ಆರ್., ವಿವಿಧ ಸಂಘಟನೆಗಳ ಪ್ರಮುಖರಾದ ಮಟ್ಟಾರ್ ರತ್ನಾಕರ್ ಹೆಗ್ಡೆ, ಶ್ಯಾಮಲಾ ಕುಂದರ್, ಗೀತಾಂಜಲಿ ಸುವರ್ಣ, ಕೇಶವರಾಯ ಪ್ರಭು, ಸುಬ್ರಹ್ಮಣ್ಯ ಹೊಳ್ಳ, ಗಣಪತಿ ಪ್ರಭು, ಗಿರೀಶ್ ಕುಂದಾಪುರ, ದಿನೇಶ್ ಮೆಂಡನ್, ರಾಜ್ ಬಂಗೇರ, ಅನಿಲ್, ಅರುಣ್ ಮೊದಲಾದವರು ಭಾಗವಹಿಸಿದ್ದರು.

ಉಡುಪಿ: ಅಸ್ಸಾಂನಲ್ಲಿ ಒಬ್ಬ ಹಿಂದೂವಿನ ಮೇಲೆ ನಡೆದ ಹಲ್ಲೆ ಇಡೀ ಹಿಂದೂ ಸಮಾಜದ ಮೇಲೆ ನಡೆದ ಹಲ್ಲೆಯಾಗಿದ್ದು, ಇದನ್ನು ಹಿಂದೂಗಳು ಸವಾಲಾಗಿ ಸ್ವೀಕರಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಜಗದೀಶ ಶೇಣವ ಅವರು ಹೇಳಿದ್ದಾರೆ.
ಅಸ್ಸಾಂ ದಂಗೆಯನ್ನು ಖಂಡಿಸಿ ಮತ್ತು ಬಾಂಗ್ಲಾ ನುಸುಳುಕೋರರನ್ನು ಹೊರಹಾಕುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗ ದಳ ಇವುಗಳ ಜಂಟೀ ಆಶ್ರಯದಲ್ಲಿ ಉಡುಪಿ ಜಟ್ಕಾ ಸ್ಟ್ಯಾಂಡ್ ನಲ್ಲಿ ಇಂದು ಬೆಳಗ್ಗೆ ನಡೆದ ಬಹಿರಂಗ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಸಂಘಟನೆಗಳ ಪ್ರಮುಖರಾದ ಶಂಭು ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಸುನಿಲ್ ಕೆ., ಮಟ್ಟಾರ್ ರತ್ನಾಕರ ಹೆಗ್ಡೆ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರತಿಭಟನೆಯ ಬಳಿಕ ಎರಡೂ ಸಂಘಟನೆಗಳ ಪ್ರಮುಖರ ನಿಯೋಗ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ
ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಉಡುಪಿ: ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ಹೆಸರಲ್ಲಿ (spring zouk- 2012) ಉಡುಪಿ ಜಿಲ್ಲಾಡಳಿತ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆಯು ನಂಗಾನಾಚ್ ಉತ್ಸವವನ್ನು ಆಯೋಜಿಸಿದೆ ಎಂದು ಜಿಲ್ಲೆಯ ಪ್ರಜ್ನಾವಂತ ನಾಗರಿಕರು ಆರೋಪಿಸಿದ್ದು, ಈ ಉತ್ಸವವನ್ನು ಕೂಡಲೇ ಸ್ಥಗಿತಗೊಳಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ಹಾಗೂ ಉಡುಪಿಯ ಬಿಜೆಪಿ ಶಾಸಕ ಕೆ.ರಘುಪತಿ ಭಟ್ ಅವರ ಮೂಗಿನ ನೇರಕ್ಕೆ ಸಂರಕ್ಷಿತ ಪ್ರದೇಶವಾದ ಮಲ್ಪೆಯ ಸೈಂಟ್ ಮೇರೀಸ್ ಐಲ್ಯಾಂಡಲ್ಲಿ ಇಂತಹದೊಂದು ಮೋಜು – ಮಸ್ತಿ ಉತ್ಸವ ನಡೆಯುತ್ತಿರುವುದು ಇಡೀ ಜಿಲ್ಲೆಯ ಜನರೇ ನಾಚಿಕೆ ಪಡುವಂತಹ ವಿಷಯವಾಗಿದೆ. ಮಹಿಳೆಯರನ್ನು ಮಾತೆ ಎಂದೆಲ್ಲಾ ಸಂಭೊದಿಸುತ್ತಾ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಅಪಾರ ಗೌರವ ಇದೆ ಎಂದೆಲ್ಲಾ ಮಾತನಾಡುತ್ತಾ ರಾಜ್ಯದ ಬಿಜೆಪಿ ಸರಕಾರ ರೇವ್ ಪಾರ್ಟಿ ಹಮ್ಮಿಕೊಂಡಿದೆ ಎಂದು ಹೆಸರು ತಿಳಿಸಲಿಚ್ಚಿಸದ ಉಡುಪಿ ನಗರದ ಗಣ್ಯ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ.
ಪೋಲೀಸ್ ಅಧಿಕಾರಿಗಳನ್ನು, ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳನ್ನು, ಕರಾವಳಿ ಕಾವಲು ಪೋಲೀಸ್ ಪಡೆಯ ಅಧಿಕಾರಿಗಳನ್ನು, ಎಲ್ಲಕ್ಕಿಂತ ಮುಖ್ಯವಾಗಿ ಜಿಲ್ಲೆಯ ಜನರನ್ನು ಕತ್ತಲಲ್ಲಿಟ್ಟು ಜಿಲ್ಲಾಡಳಿತ ಈ ರೀತಿಯ ಉತ್ಸವ ನಡೆಸುತ್ತಿರುವುದು ಹಲವಾರು ಸಂಶಯಗಳಿಗೆ ಕಾರಣವಾಗಿದೆ. ಇದರಿಂದಾಗಿ ಜಿಲ್ಲೆಯ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸಲು ಸಾಧ್ಯವೇ ಇಲ್ಲ. ಬದಲಾಗಿ ಜಿಲ್ಲೆಗೆ, ರಾಜ್ಯಕ್ಕೆ, ಇಡೀ ದೇಶಕ್ಕೆ ವಿಶ್ವ ಭೂಪಟದಲ್ಲಿ ಕೆಟ್ಟ ಹೆಸರು ದಾಖಲಾಗಬಹುದಷ್ಟೇ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿತ್ರಗಳು: ಶ್ರೀರಾಮ ದಿವಾಣ.