Posts Tagged ‘chemicals scam’

http://www.udupibits.in news
ಉಡುಪಿ: ಒಂದು ವರ್ಷ ಎರಡು ತಿಂಗಳ ಬಳಿಕ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಅವರ ಅಮಾನತು ಹಿಂತೆಗೆದುಕೊಂಡ ರಾಜ್ಯ ಸರಕಾರ, ಅವರನ್ನು ದೂರದ ಉತ್ತರ ಕರ್ನಾಟಕ ಪ್ರದೇಶದ ರಕ್ತನಿಧಿ ವಿಭಾಗವೇ ಇಲ್ಲದ ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕು ಸರಕಾರಿ ಆಸ್ಪತ್ರೆಗೆ ಶಿಕ್ಷಾರ್ಹ ವರ್ಗಾವಣೆ ಮಾಡಿರುವ ಕ್ರಮವನ್ನು ಖಂಡಿಸಿ ಮತ್ತು ಈ ವರ್ಗಾವಣೆಯನ್ನು ಹಿಂಪಡೆದುಕೊಂಡು ಮತ್ತೆ ಉಡುಪಿ ಜಿಲ್ಲಾಸ್ಪತ್ರೆಗೆ ಮರು ನೇಮಕ ಮಾಡುವಂತೆ ಆಗ್ರಹಿಸಿ ನವೆಂಬರ್ 15ರಂದು ಬೆಳಗ್ಗೆ ಗಂಟೆ 10ರಿಂದ ಸಂಜೆ ಗಂಟೆ 5ರ ವರೆಗೆ ಉಡುಪಿ ತಾಲೂಕು ಪಂಚಾಯತ್ ಕಾರ್ಯಾಲಯದ ಆವರಣದಲ್ಲಿರುವ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಮೋದ್ ಮಧ್ವರಾಜ್ ಅವರ ಕಚೇರಿ ಮುಂದೆ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಲು ಉಡುಪಿ ನಾಗರಿಕರ ವೇದಿಕೆ ನಿರ್ಧರಿಸಿದೆ.

ವೇದಿಕೆಯ ಅಧ್ಯಕ್ಷರಾದ ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಉಡುಪಿಯಲ್ಲಿ ನಡೆದ ವೇದಿಕೆ ಪ್ರಮುಖರ ಸಭೆಯಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು.

ಉಡುಪಿ ಜಿಲ್ಲಾಸ್ಪತ್ರೆ, ಜಿಲ್ಲಾ ಕೇಂದ್ರವಾಗಿರುವ ಉಡುಪಿಯಲ್ಲಿ ಇರುವುದರಿಂದ; ಈ ಪ್ರಕ್ರಿಯೆಯಲ್ಲಿ ಜಿಲ್ಲಾ ಕೇಂದ್ರದ ಶಾಸಕರಾದ ಪ್ರಮೋದ್ ಮಧ್ವರಾಜ್ ಅವರ ಪಾತ್ರ ಪ್ರಮುಖವಾದುದು ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಹೋರಾಟದ ಮೊದಲ ಹಂತವಾಗಿ ನ.15ರಂದು ಶನಿವಾರ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಲು ಸಭೆಯಲ್ಲಿ ಒಕ್ಕೊರಲ ತೀರ್ಮಾನ ತೆಗೆದುಕೊಳ್ಳಲಾಯಿತು.

ಡಾ.ಶರತ್ ಕುಮಾರ್ ರಾವ್ ಜಿಲ್ಲಾಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವಧಿಯಲ್ಲಿ ವಾರ್ಷಿಕ 9 ಸಾವಿರಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹವಾಗುತ್ತಿದ್ದರೆ, ಇದೀಗ ಈ ಸಂಗ್ರಹ 5 ಸಾವಿರಕ್ಕಿಂತಲೂ ಕಡಿಮೆಯಾಗಿದೆ ಎಂಬ ಅಂಶ ಸಭೆಯಲ್ಲಿ ಚರ್ಚೆಗೆ ಬಂತು. ಉಡುಪಿ ನಾಗರಿಕರ ವೇದಿಕೆ ನಡೆಸುತ್ತಿರುವ ಹೋರಾಟ ಕೇವಲ ಡಾ.ಶರತ್ ಕುಮಾರ್ ಅವರ ಪರವಾದುದಷ್ಟೇ ಅಲ್ಲದೆ, ಇದು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿರುವ ರಕ್ತನಿಧಿ ವಿಭಾಗವನ್ನು ಉಳಿಸುವ ಒಂದು ಹೋರಾಟವೂ ಆಗಿದೆ ಎನ್ನುವ ವಿಷಯವನ್ನೂ ಸಭೆ ಅಂಗೀಕರಿಸಿತು.

ಡಾ.ಶರತ್ ಕುಮಾರ್ ರಾವ್ ಅವರು ಓರ್ವ ಪೆಥೋಲಜಿಸ್ಟ್ ಆಗಿದ್ದು, ಅವರನ್ನು ರಕ್ತನಿಧಿ ವಿಭಾಗವೇ ಇಲ್ಲದ ದೂರದ ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕು ಆಸ್ಪತ್ರೆಗೆ ವರ್ಗಾವಣೆ ಮಾಡಿರುವುದು ಧ್ವೇಷದಿಂದಲ್ಲದೆ ಬೇರೇನೂ ಅಲ್ಲ ಎನ್ನುವ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತಗೊಂಡಿತು.

ನವೆಂಬರ್ 15ರ ಹೋರಾಟವನ್ನು ಮುಂದಿನ ದಿನಗಳಲ್ಲಿ ಉಡುಪಿ ನಗರಸಭೆಯ 35 ವಾರ್ಡ್ ಗಳಲ್ಲಿ ಮತ್ತು ಉಡುಪಿ ತಾಲೂಕಿನಾದ್ಯಂತದ ಎಲ್ಲಾ ಹೋಬಳಿ ಕೇಂದ್ರಗಳಿಗೆ ವಿಸ್ತರಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

ನ.15ರ ಧರಣಿ ಸತ್ಯಾಗ್ರಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಡಾ.ಪಿ.ವಿ.ಭಂಡಾರಿ ನಾಗರಿಕರಲ್ಲಿ ವಿನಂತಿಸಿಕೊಂಡಿದ್ದಾರೆ.