Posts Tagged ‘cognress govt’

ಉಡುಪಿ: ಪಡುಬಿದ್ರಿ ಗ್ರಾಮದಲ್ಲಿ ಸ್ಥಾಪನೆಗೊಂಡ ಸುಜ್ಲಾನ್ ಕಂಪೆನಿಗಾಗಿ ಭೂಮಿ ಕಳೆದುಕೊಂಡು ನಿರ್ವಸಿತರಾದ ಮೂಲನಿವಾಸಿ ಕಡುಬಡ ಕೊರಗ ಕುಟುಂಬಗಳಿಗೆ ಪುನರ್ವಸತಿ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ), ಡಿವೈಎಫ್ಐ ಮತ್ತು ಕರ್ನಾಟಕ ಜನಪರ ವೇದಿಕೆ ಇವುಗಳ ಜಂಟೀ ಆಶ್ರಯದಲ್ಲಿ ಜುಲೈ 22ರಂದು ಪಡುಬಿದ್ರಿಯಲ್ಲಿ ಹಕ್ಕೊತ್ತಾಯ ಜಾಥಾ ಹಾಗೂ ಹಕ್ಕೊತ್ತಾಯ ಸಭೆ ನಡೆಯಿತು.

ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬೇಡಿ ಆರ್ಆರ್ ಕಾಲನಿಯಿಂದ ಹೊರಟ ಜಾಥಾ, ಪಡುಬಿದ್ರಿ ಗ್ರಾ.ಪಂ.ಕಚೇರಿ ಮುಂಭಾಗದಲ್ಲಿ ಸಮಾಪ್ತಿಗೊಂಡಿತು. ಜಾಥಾದುದ್ದಕ್ಕೂ ಜಾಥಾದಲ್ಲಿ ಪಾಲ್ಗೊಂಡವರು ಸರಕಾರ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಸುಜ್ಲಾನ್ ಕಂಪೆನಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜಾಥಾದ ಬಳಿಕ ಗ್ರಾ.ಪಂ.ಕಚೇರಿ ಎದುರು ಸಭೆ ನಡೆಸಲಾಯಿತು. ದಲಿತ ಚಿಂತಕರಾದ ಲೋಲಾಕ್ಷ, ದಸಂಸ ವಿಭಾಗೀಯ ಸಂಚಾಲಕರಾದ ಶೇಖರ ಹೆಜಮಾಡಿ, ಡಿವೈಎಫ್ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷರಾದ ಶ್ರೀರಾಮ ದಿವಾಣ, ದಲಿತ ಪರ ಹೋರಾಟಗಾರರಾದ ಲಿಂಗಪ್ಪ ನಂತೂರು ಮೊದಲಾದವರು ನಿರ್ವಸಿತ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡುವಂತೆ ಸರಕಾರವನ್ನು ಒತ್ತಾಯಿಸಿದರು. ಸಂತ್ರಸ್ತ ಕುಟುಂಬಗಳ ಪರವಾಗಿ ಎಂಎಸ್ಡಬ್ಲೂ ಪದವೀಧರೆ ಶ್ರೀಮತಿ ಮಾತನಾಡಿದರು.

ಭಾರತ ಅಭ್ಯುದಯ ಪ್ರತಿಷ್ಠಾನದ ಅಧ್ಯಕ್ಷರಾದ ಉಮಾನಾಥ ಪಡುಬಿದ್ರಿ, ದಸಂಸ ಮುಖಂಡರಾದ ಹರೀಶ್ ಕಂಚಿನಡ್ಕ, ಕೇಶವ ಸಿ.ಸಾಲ್ಯಾನ್, ಡಿವೈಎಫ್ಐ ಮುಖಂಡರಾದ ವರಪ್ರಸಾದ್ ಬಜಾಲ್, ವಿಠಲ ಮಲೆಕುಡಿಯ, ಜನಪರ ವೇದಿಕೆ ಮುಖಂಡರಾದ ಮೊಹಮ್ಮದ್ ಹಂದಟ್ಟು, ಹೇಮಂತ್ ಕುಂದರ್, ಶೇಖರ ಶೆಟ್ಟಿ, ಪ್ರಕಾಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಹಕ್ಕೊತ್ತಾಯ ಸಭೆಯ ಬಳಿಕ ಗ್ರಾ.ಪಂ.ಅಧ್ಯಕ್ಷರಾದ ವಿಜಯ ಸನಿಲ್ ಹಾಗೂ ಪಿಡಿಓ ಮಮತಾ ಶೆಟ್ಟಿ ಇವರ ಮೂಲಕ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಸುಜ್ಲಾನ್ ಕಂಪೆನಿಯು ಇದುವರೆಗೆ ನಡೆಸಿದ ಎಲ್ಲಾ ವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕು, ಸುಜ್ಲಾನ್ ವಶದಲ್ಲಿರುವ ಹೆಚ್ಚುವರಿ ಭೂಮಿಯನ್ನು ಸರಕಾರ ವಶಪಡಿಸಿಕೊಂಡು ನಿರ್ವಸಿತರಿಗೆ ಹಾಗೂ ಭೂರಹಿತರಿಗೆ ಹಂಚಬೇಕು, ಪಡುಬಿದ್ರಿ ಗ್ರಾಮದ ಸರ್ವೆ ನಂಬ್ರ 69/1 ರಲ್ಲಿರುವ ಭೂಮಿ ಪ್ರಸ್ತುತ ಕೆಐಡಿಬಿ ಸ್ವಾಧೀನದಲ್ಲಿದ್ದು, ಇದನ್ನು ಯಾವುದೇ ಕಾರಣಕ್ಕೂ ಸುಜ್ಲಾನ್ ಗೆ ನೀಡಬಾರದು, ಬದಲಾಗಿ ಇದನ್ನೂ ಸಹ ನಿರ್ವಸಿತರಿಗೆ ಹಾಗೂ ಭೂರಹಿತರಿಗೆ ವಿತರಿಸಬೇಕು, ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರನ್ನು ಸಂಪುಟದಿಂದ ಕೈಬಿಡಬೇಕು, ನಿರ್ವಸಿತ ಕೊರಗ ಕುಟುಂಬದಲ್ಲಿ ಮೂವರು ಪದವೀಧರ ವಿದ್ಯಾರ್ಥಿನಿಯರಿದ್ದು, ಇವರಿಗೆ ಸೂಕ್ತ ಉದ್ಯೋಗ ನೀಡಬೇಕು ಎಂಬ ಬೇಡಿಕೆಗಳನ್ನು ಸರಕಾರದ ಮುಂದೆ ಇರಿಸಲಾಗಿದೆ.