Posts Tagged ‘court’

ಉಡುಪಿ: ಉಡುಪಿ ನಗರದ ಕಾಡಬೆಟ್ಟು ಜೀವನ್ ನಗರದ ರಾಮಣ್ಣ ಶೆಟ್ಟಿ ಕಂಪೌಂಡಿನಲ್ಲಿರುವ ನಿವಾಸಿ ಶ್ರೀಮತಿ ಪ್ರಭಾಮಣಿ ಶೆಟ್ಟಿ ಎಂಬವರು ತಮ್ಮ ಮನೆಯಲ್ಲಿ ಒಬ್ಬರೇ ಇದ್ದಾಗ ಮೈಮೇಲಿದ್ದ ಚಿನ್ನಾಭರಣ ಮತ್ತು ಇತರ ಬೆಲೆ ಬಾಳುವ ವಸ್ತುಗಳನ್ನು ದೋಚುವ ಉದ್ಧೇಶದಿಂದ ಮನೆಗೆ ಅಕ್ರಮ ಪ್ರವೇಶ ಮಾಡಿ ಅಡುಗೆ ಮನೆಯಲ್ಲಿದ್ದ ಪ್ರಭಾಮಣಿ ಶೆಟ್ಟಿಯವರ ಕುತ್ತಿಗೆಗೆ ಇಲೆಕ್ಟ್ರಿಕ್ ವಯರ್ ಬಿಗಿದು ಕೊಲೆ ಮಾಡಲು ಯತ್ನಿಸಿ, ಪ್ರಭಾಮಣಿ ಬೊಬ್ಬಿಟ್ಟಾಗ, ಪರಿಸರವಾಸಿಗಳು ಬರುವುದನ್ನು ನೋಡಿ ಓಡಿ ಹೋಗಿ ತಪ್ಪಿಸಿಕೊಂಡ ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿ ಕಿದಿಯೂರು ಗ್ರಾಮದ ಶಿವಗಿರಿ ನಿವಾಸಿ ಗಿರೀಶ್ ಕುಮಾರ್ ಎಂಬಾತನಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಿವಶಂಕರ ಬಿ.ಅಮರಣ್ಣನವರ್ ಅವರು ಇಂದು 4 ವರ್ಷ ಕಠಿಣ ಸಜೆ ಮತ್ತು 2 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

2013ರ ಜೂನ್ 28ರಂದು ಪೂರ್ವಾಹ್ನ 11 ಗಂಟೆಗೆ ಗಿರೀಶ್ ಕುಮಾರ್ ಈ ಕೊಲೆ ಯತ್ನ ಕೃತ್ಯ ಎಸಗಿದ್ದನು. ಇದರಿಂದಾಗಿ ಪ್ರಭಾಮಣಿ ಶೆಟ್ಟಿಯವರ ಕುತ್ತಿಗೆಗೆ ಸಾದಾ ಸ್ವರೂಪದ ಗಾಯವಾಗಿತ್ತು. ಪ್ರಭಾಮಣಿಯವರ ಬೊಬ್ಬೆ ಕೇಳಿ ಮನೆಗೆ ಬಂದ ಮನೆ ಪಕ್ಕದ ಶ್ರೀಮತಿ ಸುಲೋಚನಾ ಹಾಗೂ ಶ್ರೀಮತಿ ಸುಧಾ ಸಾಕ್ಷಿದಾರರಾಗಿದ್ದರು. ಕೃತ್ಯದ ಬಗ್ಗೆ ಪ್ರಭಾಮಣಿ ನೀಡಿದ ದೂರಿನಂತೆ ಉಡುಪಿ ನಗರ ಠಾಣೆೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಪ್ಪಿಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯ ಮೇಲಿನ ಆರೋಪಗಳು ಸಾಬೀತಾದ ಕಾರಣ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಸ್.ಜಿತೂರಿ ವಾದಿಸಿದ್ದರು.

* ಶ್ರೀರಾಮ ದಿವಾಣ.
# ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿತ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತನ್ನ ವೈವಾಹಿಕ ಸ್ಥಿತಿಗತಿಯ ಬಗ್ಗೆ ಯಾವುದೇ ಮಾಹಿತಿಯನ್ನೂ ಉಲ್ಲೇಖಿಸದೆ ಸತ್ಯ ವಿಷಯವನ್ನು ಮುಚ್ಚಿಟ್ಟದ್ದು ತಪ್ಪು ಮತ್ತು ಈ ವಿಚಾರದಲ್ಲಿ ಮೋದಿ ದೋಷಿ ಎಂಬುದನ್ನು ಇದೀಗ ನ್ಯಾಯಾಲಯವೇ ಸ್ಪಷ್ಟಪಡಿಸಿದೆ.

ಚುನಾವಣಾ ಆಯೋಗಕ್ಕೆ ಸಲ್ಲಿಸುವ ಅಫಿಡವಿತ್ ನಲ್ಲಿ ಸತ್ಯವನ್ನು ಬಚ್ಚಿಡುವುದು ಒಂದು ಅಪರಾಧವಾಗಿದೆ. ಈ ಅಪರಾಧ ಎಸಗಿದವರಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ. ಆದರೆ ಈ ಸಂಬಂಧದ ದೂರನ್ನು ನೀಡುವುದಾದರೆ, ದೂರು ನೀಡುವವರು ಒಂದು ವರ್ಷದ ಅವಧಿಯೊಳಗೆ ನೀಡಬೇಕಾಗುತ್ತದೆ. ಒಂದು ವರ್ಷದ ಬಳಿಕ ದೂರು ನೀಡಿದರೆ ಏನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅಲಹಾಬಾದ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅಸಹಾಯಕತೆ ವ್ಯಕ್ತಪಡಿಸಿದೆ.

2012ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿತ್ ನಲ್ಲಿ ಆಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಸತ್ಯವನ್ನು ಮುಚ್ಚಿಟ್ಟು ಅಫಿಡವಿತ್ ಸಲ್ಲಿಸಿದ್ದು ನಿಜ ಎಂಬುದನ್ನು ಅಲಹಾಬಾದ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಖಚಿತಪಡಿಸಿದೆ. ಇದು ಅಪರಾಧವೆಂಬುದನ್ನೂ ನ್ಯಾಯಾಲಯ ದೃಢಪಡಿಸಿದೆ. ಆದರೆ ಈ ಸಂಬಂಧದ ದೂರನ್ನು ಎಎಪಿ ಮುಖಂಡರಾದ ನಿಶಾಂತ್ ವರ್ಮಾ ನಿಯಮಾವಳಿ ಪ್ರಕಾರ ನಿಗದಿತ ಒಂದು ವರ್ಷದ ಅವಧಿಯೊಳಗೆ ನೀಡಬೇಕಾಗಿತ್ತು. ಆದರೆ, ಒಂದು ವರ್ಷ ನಾಲ್ಕು ತಿಂಗಳ ಬಳಿಕ ದೂರು ನೀಡಿದ ಕಾರಣ ಏನೂ ಮಾಡಲು ಸಾಧ್ಯವಿಲ್ಲ ಎಂಬ ಅಸಹಾಯಕತೆಯನ್ನು ವ್ಯಕ್ತಪಡಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿ ಕೈಚೆಲ್ಲಿದೆ ನ್ಯಾಯಾಲಯ.

ಒಂದು ದೇಶದ ಪ್ರಧಾನಮಂತ್ರಿಯಂಥ ಉನ್ನತ ಮತ್ತು ಶ್ರೇಷ್ಠ ಹುದ್ದೆಯನ್ನು ಅಲಂಕರಿಸುವ, ಅಲಂಕರಿಸಿರುವ ವ್ಯಕ್ತಿ ಕೇವಲ ರಾಜಕಾರಣಿಯಾಗಿದ್ದರೆ, ಒಂದು ಪಕ್ಷದ ನಾಯಕನಾಗಿದ್ದರೆ ಸಾಲದು. ಆತ ಸತ್ಯಸಂಧನೂ, ಪ್ರಾಮಾಣಿಕನೂ, ನಿಷ್ಪಕ್ಷಪಾತ- ಪಾರದರ್ಶಕ ವ್ಯಕ್ತಿತ್ವದವನೂ, ನಿಜವಾದ ಅರ್ಥದಲ್ಲಿ ಸಾಮರ್ಥ್ಯವಂತನೂ ಆಗಿರಬೇಕು. ಆದರೆ, ಇಂದು ಸತ್ಯವನ್ನು ಮತ್ತು ಅಪರಾಧ ಕೃತ್ಯಗಳನ್ನು ಮುಚ್ಚಿ ಹಾಕುವ ಸಾಮಥ್ರ್ಯವನ್ನೇ ದೇಶವಾಳಲು ಬೇಕಾದ ಸಾಮಥ್ರ್ಯ ಎಂದು ರಾಜಕೀಯ ಪಕ್ಷಗಳು, ರಾಜಕೀಯ ನಾಯಕರು, ಪಕ್ಷಗಳ ಮತ್ತು ನಾಯಕರ ಅಂಧಾಭಿಮಾನಿಗಳು ತಿಳಿದುಕೊಂಡಿರುವುದೇ ನಮ್ಮ ದೇಶದ ದುರಂತ.

ಇಲ್ಲಿ ನರೇಂದ್ರ ಮೋದಿ ತಪ್ಪೆಸಗಿರುವುದು ನಿಜ, ಇದು ಕೇವಲ ತಪ್ಪು ಮಾತ್ರವಲ್ಲ, ಆ ತಪ್ಪು ಒಂದು ಅಪರಾಧ ಕೃತ್ಯವೂ ಆಗಿದೆ ಎಂಬುದನ್ನು ಗಂಭಿರವಾಗಿಯೇ ಗಮನಿಸಬೇಕಾಗಿದೆ. ಆ ಕಾರಣಕ್ಕೇ ಅವರು ದೋಷಿಯೂ ಹೌದು. ಇಂಥದೊಂದು ಅಪರಾಧಕ್ಕೆ ಆರು ತಿಂಗಳು ಜೈಲಲ್ಲಿರಬೇಕಾದ ವ್ಯಕ್ತಿ, ಆ ಸತ್ಯವನ್ನು 2014ರವರೆಗೂ ಬಚ್ಚಿಡಲು ಯಶಸ್ವಿಯಾಗುವ ಮೂಲಕ ಶಿಕ್ಷೆ ಅನುಭವಿಸುವುದರಿಂದ ಅದೇಗೋ ಬಚಾವಾಗಿದ್ದಾರೆ. ಇಂಥ ವ್ಯಕ್ತಿ ದೇಶಕ್ಕೆ ಮಾದರಿ, ಆದರ್ಶ ಎಂದು ಹೇಳಲು ಸಾಧ್ಯವೇ ? ಸಾಧುವೇ ? ವಿಪರ್ಯಾಸವೇ ಸರಿ. ಇಂಥ ವ್ಯಕ್ತಿ ಪ್ರಧಾನಿಯಾಗಿ ಮುಂದುವರಿಯುವುದು ದೇಶಕ್ಕೆ ಭೂಷಣವೇ ? ಜನತೆ, ಮುಖ್ಯವಾಗಿ ಸಂಸ್ಕೃತಿ, ಪರಂಪರೆ, ಸಂಪ್ರದಾಯ, ನೈತಿಕತೆ ಇತ್ಯಾದಿಗಳ ಬಗ್ಗೆ ಭಾರೀ ಮಾತನಾಡುವ ಬಿಜೆಪಿ ಈ ಬಗ್ಗೆ ಇನ್ನಾದರೂ ಯೋಚಿಸಬೇಕು.

ಇವತ್ತು ಏನಾಗಿದೆ ಎಂದರೆ, ಯಾವುದೇ ಅಪರಾಧ ಕೃತ್ಯವೆಸಗಿ ಸಿಕ್ಕಿಬಿದ್ದವನು ಮಾತ್ರ ದುಷ್ಟ, ಭ್ರಷ್ಟ, ಕೊಲೆಗಡುಕ, ಅತ್ಯಾಚಾರಿ ಇತ್ಯಾದಿಯಾಗಿ ಬಹಿರಂಗವಾಗಿ ಕರೆಸಿಕೊಳ್ಳುತ್ತಾನೆ. ಇಂಥವರ ವಿರುದ್ಧ ಮಾಧ್ಯಮಗಳೂ ಪುಂಕಾನುಪುಂಕವಾಗಿ ಅತಿರಂಜಿತ, ರೋಮಾಂಚನಕಾರಿ ವರದಿಗಳನ್ನು ದಿನಗಟ್ಟಲೆ ಪ್ರಸಾರ ಮಾಡುತ್ತೆ. ಆದರೆ ಅಧಿಕೃತವಾಗಿ ಸಿಕ್ಕಿಬೀಳದ, ಆದರೆ ಅನಧಿಕೃತವಾಗಿ ಅಪರಾಧಿಗಳೇ ಆಗಿರುವ ಪ್ರಭಾವಶಾಲೀ ರಾಜಕಾರಣಿ/ಉದ್ಯಮಿಗಳನ್ನು ಮಾದರಿ ಪುರುಷರೆಂದು, ಸಮರ್ಥ ನಾಯಕರೆಂದು ಬಿಂಬಿಸಿ ದೈವತ್ವಕ್ಕೇರಿಸಲಾಗುತ್ತದೆ. ಪಕ್ಷಗಳು ತಮ್ಮ ನಾಯಕರನ್ನು, ಯಾವ್ಯಾವುದೋ ಲಾಭ ಪಡೆದುಕೊಂಡವರು ಋಣ ಸಂದಾಯ ಮಾಡುವ ಪ್ರಕ್ರಿಯೆ ಭಾಗವಾಗಿ ಆಸ್ಥಾನ ವಿದ್ವಾಂಸರಂತೆ, ಭಟ್ಟಂಗಿಗಳಂತೆ ವರ್ತಿಸುವ ಮೂಲಕ ಅವರ ವಿರುದ್ಧ, ಅವರ ತಪ್ಪು ನಡೆಗಳ ಬಗ್ಗೆ ಯಾರೊಬ್ಬರೂ ಮಾತನಾಡದಂಥ ಪರಿಸ್ಥಿತಿಯನ್ನು ಸೃಷ್ಟಿಸಿಬಿಡುತ್ತಾರೆ. ಇದೂ ನಮ್ಮದೊಂದು ವ್ಯವಸ್ಥೆ !

ತನ್ನ ವೈವಾಹಿಕ ಸ್ಥಿತಿಗತಿಯನ್ನು ಮುಚ್ಚಿಟ್ಟ ನರೇಂದ್ರ ಮೋದಿ, ಗುಜರಾತ್ ನಲ್ಲಿ ನಡೆದ, ನಡೆಸಿದ ಜನಾಂಗೀಯ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ, ನಕಲಿ ಎನ್ಕೌಂಟರ್ ಗಳಿಗೆ ಸಂಬಂಧಪಟ್ಟಂತೆ, ಭ್ರಷ್ಟಾಚಾರದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಅದೆಷ್ಟು ವಾಸ್ತವಾಂಶಗಳನ್ನು ಮುಚ್ಚಿಟ್ಟಿರುವ ಸಾಧ್ಯತೆಗಳಿವೆ. ಅಧಿಕಾರ ಇದ್ದರೆ, ಇರುವಾಗ ಅಧಿಕಾರಮದದಿಂದ ಅಧಿಕಾರವನ್ನು ದುರುಪಯೋಗಪಡಿಸುವುದು ರಾಜಕೀಯದಲ್ಲಿ ಹೊಸದಾದ ವಿಷಯವೇನೂ ಅಲ್ಲ. ಮೋದಿಯವರೂ ಈ ರೀತಿ ಮಾಡಿರಲಾರರು ಎಂದು ಹೇಳಲು ಇನ್ನಂತೂ ಖಂಡಿತಾ ಸಾಧ್ಯವಿಲ್ಲ. ವಾದಕ್ಕೆ ಬೇಕಾಗಿ ಏನಾದರೂ ವಾದಿಸಬಹುದು.

ಆದರೆ, ಈಗಾಗಲೇ ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿದ ಕೆಲವು ಪ್ರಕರಣಗಳಲ್ಲಿ ನರೇಂದ್ರ ಮೋದಿಯವರ ಅಂದಿನ ಗುಜರಾತ್ ರಾಜ್ಯ ಸಚಿವ ಸಂಪುಟದ ಒಂದಿಬ್ಬರು ಸಚಿವರು, ಶಾಸಕರು, ಪಕ್ಷದ ಮುಖಂಡರು ಆರೋಪಿಗಳಾಗಿ ದಾಖಲಾಗಿದ್ದಾರೆ. ಕೆಲವರನ್ನು ಈಗಾಗಲೇ ನ್ಯಾಯಾಲಯವೇ ಅಪರಾಧಿಗಳು ಎಂದು ಘೋಷಿಸಿದ್ದೂ ಆಗಿದೆ. ಒಂದು ಎನ್ಕೌಂಟರ್ ಪ್ರಕರಣದಲ್ಲಿ ಮೊದಿಯವರ ಬಲಕೈ ಬಂಟ ಎಂದು ಕರೆಸಿಕೊಳ್ಳುತ್ತಿರುವ, ಬಿಜೆಪಿಯ ಸಂಭಾವ್ಯ ರಾಷ್ಟ್ರಾಧ್ಯಕ್ಷ ಎಂದೂ ಹೇಳಲಾಗುತ್ತಿರುವ ಅಮಿತ್ ಶಾ ಅವರೂ ಆರೋಪಿ ಎಂದು ಗುರುತಿಸಲ್ಪಟ್ಟಿದ್ದಾರೆ. ಇದನ್ನೆಲ್ಲಾ ನೊಡಿದರೆ, ಮೋದಿ ಗುಜರಾತ್ ನಲ್ಲಿ ಹೇಗೆ ಅಧಿಕಾರ ಚಲಾಯಿಸಿರಬಹುದು ಎಂಬುದನ್ನು ಊಹಿಸಲು ಎಷ್ಟು ಕಷ್ಟಪಡುವ ಅಗತ್ಯ ಇಲ್ಲ ಎನಿಸುತ್ತದೆ.

ಚುನಾವಣಾ ಆಯೋಗಕ್ಕೆ ನೀಡಿದ ಅಫಿಡವಿತ್ನಲ್ಲಿ ವೈವಾಹಿಕ ಸತ್ಯವನ್ನು ಮುಚ್ಚಿಡುವ ಮೂಲಕ ನರೇಂದ್ರ ಮೋದಿ ತಪ್ಪೆಸಗಿದ್ದಾರೆ, ಆದರೆ ಶಿಕ್ಷೆಯಿಂದ ಪಾರಾಗಿದ್ದಾರೆ ಎಂದು ಅಲಹಾಬಾದ್ ಮ್ಯಾಜಿಸ್ಟ್ರೇಟ್ ಕೋರ್ಟ್ ಘೋಷಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಒಂದು ಮುಖವಾಡ ಅಧಿಕೃತವಾಗಿಯೇ ಕಳಚಿಹಾಕಲ್ಪಟ್ಟಿದೆ. ಈ ಮಹತ್ವದ ಬೆಳವಣಿಗೆ ನಡೆದ ಬೆನ್ನಿಗೇ, ಸುಪ್ರೀಂ ಕೋರ್ಟ್ ನೂತನವಾಗಿ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಜೊತೆ ಸಮಾಲೋಚನೆ ನಡೆಸದೆ, ಅವರು ನೀಡಿದ ಪಟ್ಟಿಯಿಂದ ಮಾಜಿ ಸಾಲಿಸಿಟರ್ ಜನರಲ್ ಮತ್ತು ಹಿರಿಯ ನ್ಯಾಯವಾದಿ ಗೋಪಾಲ್ ಸುಬ್ರಹ್ಮಣ್ಯಂ ಅವರ ಹೆಸರನ್ನು ಕೈಬಿಟ್ಟು, ನೂತನ ನ್ಯಾಯಮೂರ್ತಿಗಳನ್ನು ಏಕಪಕ್ಷೀಯವಾಗಿ ನೇಮಕ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ ಎಂದು ಸ್ವತಹಾ ಮುಖ್ಯ ನ್ಯಾಯಮೂರ್ತಿಗಳಾದ ಆರ್.ಎಂ.ಲೋಧಾ ಅವರು ಬಹಿರಂಗವಾಗಿಯೇ ಅಸಮಾಧಾನ ಮತ್ತು ಆಕ್ಷೇಪ ವ್ಯಕ್ತಪಡಿಸುವ ಮೂಲಕ ಮೋದಿಯವರ ಸರ್ವಾಧಿಕಾರಿ, ನಿರಂಕುಶ ಆಡಳಿತ ವೈಖರಿಯನ್ನು ಬಟಾಬಯಲು ಮಾಡಿದ್ದಾರೆ.

ನ್ಯಾಯಾಂಗದ ಸ್ವಾತಂತ್ರ್ಯದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಲೋಧಾ ಅವರು ಖಡಾಖಂಡಿತವಾಗಿ ಹೇಳಿರುವುದು ಎಲ್ಲರೂ ಗಮನಿಸಲೇ ಬೇಕಾದ ಸೂಕ್ಷ್ಮ ವಿಷಯವಾಗಿದೆ. ಪ್ರಧಾನಿ ಮೋದಿ ಹಾಗೂ ಕೇಂದ್ರದ ಬಿಜೆಪಿ ಸರಕಾರವು, ನ್ಯಾಯಾಂಗವು ತಮ್ಮ ಮತ್ತು ತಮ್ಮ ಸರಕಾರದ ಪರವಾಗಿರಬೇಕು ಎಂಬ ರೀತಿಯಲ್ಲಿದ್ದಾರೆ, ಆದರೆ ನ್ಯಾಯಾಂಗ ಹಾಗೆ ನಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ಸಾರಿ ಹೇಳಿದಂತೆಯೇ ಇದೆ.

ನರೇಂದ್ರ ಮೋದಿಯವರು ಗುಜರಾತ್ ನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ರಾಜ್ಯಕ್ಕೆ ಲೋಕಾಯುಕ್ತರನ್ನೇ ನೇಮಕ ಮಾಡಿರಲಿಲ್ಲ ಎನ್ನುವುದು ನಿಗೂಢ ರಹಸ್ಯವೇನೂ ಅಲ್ಲ. ತಮ್ಮ ಮೂಗಿನ ನೇರಕ್ಕೆ ನಡೆದುಕೊಳ್ಳದ ಸಚಿವರು, ಇತರ ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಹಾಗೂ ಅಧಿಕಾರಿಗಳು ಸಹ ಮೋದಿಯೊಂದಿಗೆ ಸಹಜವಾಗಿ ಮುನ್ನಡೆಯಲಿಕ್ಕಾಗದೆ ಕೊನೆಗೆ ಪಕ್ಷವನ್ನು ಮತ್ತು ಅಧಿಕಾರವನ್ನು ತೊರೆದು ಹೋಗುವಂತೆ ಕಾರ್ಯತಂತ್ರ ರೂಪಿಸಿ ಯಶಸ್ವಿಯಾದವರು ಇದೇ ಮೋದಿ ಎನ್ನುವುದೂ ಗುಟ್ಟಿನ ವಿಷಯವೇನೂ ಆಗಿ ಉಳಿದಿಲ್ಲ. ಇಂಥ ಅನೇಕಾನೇಕ ಮೋದಿ ಮಾದರಿಗಳನ್ನು ದೇಶದ ಜನರು ಗೊತ್ತಿದ್ದೋ- ಗೊತ್ತಿಲ್ಲದೆಯೋ, ಅಭಿವೃದ್ಧಿ ಎಂದು ನಂಬಿಯೋ-ಭ್ರಮಿಸಿಯೋ ಒಟ್ಟಿನಲ್ಲಿ ದೇಶದ ಪ್ರಧಾನಿಯನ್ನಾಗಿ ಮಾಡಿದ್ದಾರೆ, ಮಾಡಿ ಆಗಿದೆ. ಎಲ್ಲಾ ಆದ ಬಳಿಕ ಈಗ ಮೋದಿ ಮಾದರಿ ಏನೆಂಬುದು ಇದೀಗ ಒಂದೊಂದಾಗಿಯೇ ಬೆತ್ತಲೆಯಾಗತೊಡಗಿದೆ.

ಮೋದಿ ಇದೇ ಮಾದರಿಗಳನ್ನು ನೆಚ್ಚಿಕೊಂಡು ತಮ್ಮ ಆಡಳಿತ ಶೈಲಿಯನ್ನು ಮುಂದುವರಿಸಿದ್ದೇ ಆದರೆ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯ ನಡುವೆ ಮುಂದಿನ ದಿನಗಳಲ್ಲಿ ಗಂಭೀರವಾದ ಸಂಘರ್ಷ ನಡೆಯಬಹುದು. ಹೀಗೆ ನಡೆದುದೇ ಆದರೆ ಅದು ನಮ್ಮ ದೇಶಕ್ಕೆ ಒಳ್ಳೆಯ ಬೆಳವಣಿಗೆಯಾಗಲು ಸಾಧ್ಯವಿಲ್ಲ. ನ್ಯಾಯಾಂಗದ ಮೂಲಕವೇ ಮೋದಿಯ ಗುಜರಾತ್ ಮಾದರಿ ಎಂಬ ಭ್ರಮೆಯ ಕೆಲವು ತುಣುಕುಗಳು ಇದೀಗ ಕಳಚಿಬಿದ್ದಿರುವುದರಿಂದ, ಬಿಜೆಪಿ ತಡ ಮಾಡದೆ ಪ್ರಧಾನಿಯಂಥ ಶ್ರೇಷ್ಠ ಸ್ಥಾನದಿಂದ ಮೋದಿಯವರನ್ನು ವಜಾಗೊಳಿಸಿ ಇನ್ನೊಬ್ಬ ಸಮರ್ಥ ವ್ಯಕ್ತಿಯನ್ನು ಆ ಸ್ಥಾನಕ್ಕೇರಿಸಿದರೆ ಮಾತ್ರ ಭಾರತ ಪ್ರಪಾತಕ್ಕೆ ಬೀಳುವುದನ್ನು ತಡೆದು ನಿಲ್ಲಿಸಬಹುದು !

ಉಡುಪಿ: ಇಲ್ಲಿನ ಪ್ರತಿಷ್ಟಿತ ಅಂಬಲಪಾಡಿ ಶ್ರೀ ಮಹಾಕಾಳಿ ಮತ್ತು ಜನಾರ್ದನ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಯ ಪಟ್ಟಿಯಿಂದ ಕೈಬಿಡಬೇಕೆಂದು ಕೋರಿ (ಡಿನೋಮಿನೇಶನ್) ದೇವಸ್ಥಾನದ ಆಡಳಿತ ಮೊಕ್ತೇಸರರು ಉಡುಪಿ ಪ್ರಿನ್ಸಿಪಲ್ ಸಿವಿಲ್ ಸೀನಿಯರ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಹೂಡಿದ ವ್ಯಾಜ್ಯವನ್ನು ನ್ಯಾಯಾಲಯವು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದೆ.

ಅಂಬಲಪಾಡಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದ ನೀ.ಅಣ್ಣಾಜಿ ಬಲ್ಲಾಳರು 2003ರಲ್ಲಿ ಈ ವ್ಯಾಜ್ಯವನ್ನು ನ್ಯಾಯಾಲಯದಲ್ಲಿ ಹೂಡಿದ್ದರು. ನ್ಯಾಯಾಲಯದಲ್ಲಿ ವ್ಯಾಜ್ಯದ ವಿಚಾರಣೆ ನಡೆಯುತ್ತಿರುವಂತೆಯೇ ಮಧ್ಯೆ ಅಣ್ಣಾಜಿ ಬಲ್ಲಾಳರು ನಿಧನರಾಗಿದ್ದರು. ಬಳಿಕ ಈ ವ್ಯಾಜ್ಯವನ್ನು ಅಣ್ಣಾಜಿ ಬಲ್ಲಾಳರ ಪುತ್ರರಾದ, ಹಾಲಿ ದೇವಸ್ಥಾನದ ಆಡಳಿತ
ಮೊಕ್ತೇಸರರಾದ ಡಾ.ನೀ.ವಿಜಯ ಬಲ್ಲಾಳರು ಮುಂದುವರಿಸಿದ್ದರು.

2003ರಿಂದ ಆರಂಭಗೊಂಡು ಕಳೆದ ಹತ್ತು ವರ್ಷಗಳ ಸುಧೀರ್ಘ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯವು ಅಂತಿಮವಾಗಿ ಇದೇ ಮೇ. 15ರಂದು ಬಲ್ಲಾಲರ ವ್ಯಾಜ್ಯವನ್ನೇ ವಜಾಗೊಳಿಸಿ ಆದೇಶಿಸಿದೆ. ದಶಕದ ಕಾಲ ನಡೆದ ವಿಚಾರಣಾ ಪ್ರಕ್ರಿಯೆಯಲ್ಲಿ ಸರಕಾರದ ಪರವಾಗಿ ಇಬ್ಬರು ಸರಕಾರಿ ವಕೀಲರು ಈ ಪ್ರಕರಣದ ಬಗ್ಗೆ ವಾದಿಸಿದ್ದರು.

ಎಲ್ಲಾ ಜಾತಿಯ ಜನರೂ ಅಂಬಲಪಾಡಿ ದೇವಸ್ಥಾನದ ಭಕ್ತರಾಗಿದ್ದು, ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದಲೂ ಆಸ್ತಿಕರು ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಯಾತ್ರಾರ್ಥಿಗಳಾಗಿ ಬರುತ್ತಿರುತ್ತಾರೆ. ವಾರ್ಷಿಕವಾಗಿ ಕೋಟ್ಯಂತರ ರು. ಸಂಪಾದನೆ ಇರುವ ದೇವಸ್ಥಾನಕ್ಕೆ, ಹಿಂದಿನಿಂದಲೂ ಸರಕಾರದ ತಸ್ತೀಕು ಇತ್ಯಾದಿಗಳು ಲಭಿಸುತ್ತಿದ್ದು ಸಾರ್ವಜನಿಕ ದೇವಸ್ಥಾನವೆಂದು ಜನಜನಿತವಾಗಿದೆ.

ಈ ನಡುವೆ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಯ ಪಟ್ಟಿಯಿಂದ ‘ಡಿ’ನೋಟಿಫೀಕೇಶನ್ಗೊಳಿಸುವ ಪ್ರಯತ್ನ ಆರಂಭಿಸಲಾಯಿತು. ಇದಾದರೆ ಸಾರ್ವಜನಿಕ
ದೇವಸ್ಥಾನವಾಗಿರುವುದು ಒಂದು ಕುಟುಂಬದ ಸೊತ್ತಾಗಿ ಬದಲಾವಣೆ ಆಗಿಬಿಡುವ ಅಪಾಯವಿತ್ತು ಎನ್ನಲಾಗಿದೆ.

ಇದೀಗ ಈ ಸಂಬಂಧ ಬಲ್ಲಾಳರು ಹೂಡಿದ್ದ ವ್ಯಾಜ್ಯವನ್ನು ನ್ಯಾಯಾಲಯವು ವಜಾಗೊಳಿಸಿದ ಹಿನ್ನೆಲೆಯಲ್ಲಿ ದೇವಸ್ಥಾನ ಸಾರ್ವಜನಿಕ ದೇವಸ್ಥಾನವಾಗಿಯೇ ಉಳಿಯುವಂತಾಗಿದೆ. ಸಾರ್ವಜನಿಕರು ನ್ಯಾಯಾಲಯದ ಈ ತೀರ್ಪನ್ನು ಸ್ವಾಗತಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.

ಉಡುಪಿ: ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಉಚ್ಛಾಟಿತ ರಾಜ್ಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿಯವರು, ನ್ಯಾಯಾಲಯದ ಆದೇಶವೊಂದನ್ನು ತಪ್ಪಾಗಿ ವ್ಯಾಖ್ಯಾನಿಸುವುದರ ಜೊತೆಗೆ ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿರುವುದು ಇದೀಗ ಬಹಿರಂಗವಾಗಿದೆ.

ಫೆಬ್ರವರಿ 20ರಂದು ಬೆಂಗಳೂರಿನಲ್ಲಿರುವ ರೆಡ್ ಕ್ರಾಸ್ ಸೊಸೈಟಿಯ ರಾಜ್ಯ ಶಾಖೆಯ ಕಚೇರಿ ಸಭಾಂಗಣದಲ್ಲಿ ನಡೆದ ರಾಜ್ಯ ಆಡಳಿತ ಮಂಡಳಿಯ ಸಭೆಯಲ್ಲಿ ರಾಜ್ಯ ಸಭಾಪತಿಯಾಗಿದ್ದ ರಾಜೀವ್ ಶೆಟ್ಟಿಯವರನ್ನು ಅವರ ಮೇಲಿನ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯ ಸಭಾಪತಿ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿತ್ತು ಮತ್ತು ರಾಜ್ಯ ಆಡಳಿತ ಮಂಡಳಿ ಸದಸ್ಯತ್ವದಿಂದ ಅಮಾನತು ಮಾಡಲಾಗಿತ್ತು. ಈ ಬಹುಮತದ ನಿರ್ಣಯವನ್ನು ದೃಢೀಕರಿಸಲು ಮತ್ತು ಇತರ ವಿಷಯಗಳನ್ನು ಚರ್ಚಿಸಲು ಮಾರ್ಚ್ 27ರಂದು ಆಡಳಿತ ಮಂಡಳಿ ಸಭೆ ಕರೆಯಲಾಗಿತ್ತು.

ಈ ಸಭೆಯ ವಿರುದ್ಧ ತಡೆಯಾಜ್ಞೆ ಕೋರಿ ರೆಡ್ ಕ್ರಾಸ್ ಸೊಸೈಟಿಯ ರಾಜ್ಯ ಅಡಳಿತ ಮಂಡಳಿಯ ಸದಸ್ಯರಾದ ರವೀಂದ್ರನಾಥ್, ಎಚ್.ಆರ್. ಮುರಳೀಧರ್, ಡಾ.ಸುಂದರೇ ಗೌಡ ಹಾಗೂ ಪೆರಿಕೋ ಪ್ರಭು ಎಂಬವರು ಬೆಂಗಳೂರು ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಬಸ್ರೂರು ಅವರನ್ನು ಉಚ್ಛಾಟಿಸಿದ ಆಡಳಿತ ಮಂಡಳಿಯ ನಿರ್ಣಯಕ್ಕಾಗಲೀ, ಮಾ.27ರ ಸಭೆಗಾಗಲೀ ತಡಯಾಜ್ಞೆ ನೀಡದೆ, ಮಾ.27ರಂದು ನಡೆಯಲಿರುವ ಸಭೆಯಲ್ಲಿ ಒಂದನೇ ಅಜೆಂಡಾವನ್ನು ಮುಂದಿನ ವಿಚಾರಣೆಯವರೆಗೆ ಚರ್ಚಿಸುವಂತಿಲ್ಲ, ಇತರ ವಿಷಯಗಳನ್ನು ಚರ್ಚಿಸಬಹುದು, ಈ ಸಭೆಯಲ್ಲಿ ಬಸ್ರೂರು ಅವರು ಕೇವಲ ಒಬ್ಬ ವೀಕ್ಷಕರಾಗಿ ಮಾತ್ರ ಉಪಸ್ಥಿತರಿರಬಹುದು, ಆದರೆ ಬಸ್ರೂರು ಅವರು ಸಭೆಯಲ್ಲಿ ಮಾತನಾಡುವ ಹಾಗಿಲ್ಲ ಮತ್ತು ಅವರಿಗೆ ಮತದಾನದ ಹಕ್ಕು ಇರುವುದಿಲ್ಲ ಎಂದು ಸ್ಪಷ್ಟಪಡಿಸಿ ಆದೇಶ ನೀಡಿತ್ತು.

(ಕೋರ್ಟ್ ಆದೇಶ: An order of ad interim injunction is issued against defendants restraining them friom discussing the agenda No.1 dated : 20.02.2014 in the meeting held on 27.03.2014 till next date of hearing. however, the defendants are at liberty to discuss other agenda at SI.No.2 to 7 in thet meeting.)

ಆದರೆ, ನ್ಯಾಯಾಲಯದ ಈ ಆದೇಶವನ್ನು ತಪ್ಪಾಗಿ ಆರ್ಥೈಸಿದ ಬಸ್ರೂರು ರಾಜೀವ್ ಶೆಟ್ಟಿ ಅವರು, ಉದ್ಧೇಶಪೂರ್ವಕವಾಗಿಯೇ ಸಾರ್ವಜನಿಕರನ್ನು ಗೊಂದಲಕ್ಕೀಡುಮಾಡಲು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಉಡುಪಿ ಜಿಲ್ಲಾ ಶಾಖೆಯ ಪದಾಧಿಕಾರಿಗಳ ಮೂಲಕ, ರೆಡ್ ಕ್ರಾಸ್ ಸೊಸೈಟಿಯ ರಾಜ್ಯ ಶಾಖೆಯ ಲೆಟರ್ ಹೆಡ್ ದುರ್ಬಳಕೆ ಮಾಡಿಕೊಂಡು ಮಾರ್ಚ್ 25ರಂದು ಉಡುಪಿಯ ಮಾಧ್ಯಮಗಳಿಗೆ ‘ಬಸ್ರೂರು ರಾಜೀವ್ ಶೆಟ್ಟಿಯವರನ್ನು ಅಮಾನತು ಮಾಡಲಾದ ನಿರ್ಣಯಕ್ಕೆ ತಡೆಯಾಜ್ಞೆ ನೀಡಲಾಗಿದೆ’ ಎಂಬ ಸುಳ್ಳು ಮಾಹಿತಿಯನ್ನೊಳಗೊಂಡ ಪತ್ರಿಕಾ ಹೇಳಿಕೆಯನ್ನು ರೆಡ್ ಕ್ರಾಸ್ ಸೋಸೈಟಿಯ ಉಡುಪಿ ಜಿಲ್ಲಾ ಶಾಖೆಯ ಈ ಮೇಲ್ ಐಡಿ ಮೂಲಕ ಈ ಮೈಲ್ ಮಾಡಿದ್ದರು. ಆದರೆ, ಪತ್ರಿಕಾ ಹೇಳಿಕೆಯೊಂದಿಗೆ ನ್ಯಾಯಾಲಯ ನೀಡಿದ ತೀರ್ಪಿನ ಯಥಾಪ್ರತಿಯನ್ನು ಕಳುಹಿಸಿಕೊಡದ ಕಾರಣಕ್ಕೆ ಬಹುತೇಕ ಮಾಧ್ಯಮಗಳೂ ಬಸ್ರೂರು ನೀಡಿದ ಪತ್ರಿಕಾ ಹೇಳಿಕೆಯನ್ನು ಪ್ರಕಟಿಸಿರಲಿಲ್ಲ.

ಗೌರವಾನ್ವಿತ ರಾಜ್ಯಪಾಲರು ಘನ ಅಧ್ಯಕ್ಷರಾಗಿರುವ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಕರ್ನಾಟಕ ರಾಜ್ಯ ಶಾಖೆಯ ಲೆಟರ್ ಹೆಡ್ ನ್ನು ದುರುಪಯೋಗಪಡಿಸಿರುವುದು, ನ್ಯಾಯಾಲಯ ನೀಡಿದ ನಿಜವಾದ ಆದೇಶವನ್ನು ಮರೆಮಾಚಿ ತಪ್ಪು ಮಾಹಿತಿಯನ್ನು ಪತ್ರಿಕಾ ಹೇಳಿಕೆಯಾಗಿ ನೀಡಿರುವುದು ಇತ್ಯಾದಿಗಳು ಇಲ್ಲಿ ಸ್ಪಷ್ಟವಾಗಿದೆ.

ಮಾರ್ಚ್ 27ರಂದು ನಡೆದ ರೆಡ್ ಕ್ರಾಸ್ ಸೊಸೈಟಿಯ ರಾಜ್ಯ ಆಡಳಿತ ಮಂಡಳಿ ಸಭೆಯಲ್ಲಿ ಕೇವಲ ವೀಕ್ಷಕರಾಗಿಯಷ್ಟೇ ಬಸ್ರೂರು ರಾಜೀವ್ ಶೆಟ್ಟಿ ಉಪಸ್ಥಿತರಿದ್ದರು. ಇವರ
ಸಮ್ಮುಖದಲ್ಲಿಯೇ ಸಭೆ ಕೆಲವೊಂದು ಪ್ರಮುಖ ನಿರ್ಣಯಗಳನ್ನು ಮಂಡಿಸಿ ಅಂಗೀಕರಿಸಿತು. ನೂತನ ರಾಜ್ಯ ಸಭಾಪತಿ ಹಾಗೂ ಗೌರವ ಕೋಶಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.

ಉಡುಪಿ: ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಉಚ್ಛಾಟಿತ ರಾಜ್ಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿಯವರು, ನ್ಯಾಯಾಲಯದ ಆದೇಶವೊಂದನ್ನು ತಪ್ಪಾಗಿ ವ್ಯಾಖ್ಯಾನಿಸುವುದರ ಜೊತೆಗೆ ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿರುವುದು ಇದೀಗ ಬಹಿರಂಗವಾಗಿದೆ.

ಫೆಬ್ರವರಿ 20ರಂದು ಬೆಂಗಳೂರಿನಲ್ಲಿರುವ ರೆಡ್ ಕ್ರಾಸ್ ಸೊಸೈಟಿಯ ರಾಜ್ಯ ಶಾಖೆಯ ಕಚೇರಿ ಸಭಾಂಗಣದಲ್ಲಿ ನಡೆದ ರಾಜ್ಯ ಆಡಳಿತ ಮಂಡಳಿಯ ಸಭೆಯಲ್ಲಿ ರಾಜ್ಯ ಸಭಾಪತಿಯಾಗಿದ್ದ ರಾಜೀವ್ ಶೆಟ್ಟಿಯವರನ್ನು ಅವರ ಮೇಲಿನ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯ ಸಭಾಪತಿ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿತ್ತು ಮತ್ತು ರಾಜ್ಯ ಆಡಳಿತ ಮಂಡಳಿ ಸದಸ್ಯತ್ವದಿಂದ ಅಮಾನತು ಮಾಡಲಾಗಿತ್ತು. ಈ ಬಹುಮತದ ನಿರ್ಣಯವನ್ನು ದೃಢೀಕರಿಸಲು ಮತ್ತು ಇತರ ವಿಷಯಗಳನ್ನು ಚರ್ಚಿಸಲು ಮಾರ್ಚ್ 27ರಂದು ಆಡಳಿತ ಮಂಡಳಿ ಸಭೆ ಕರೆಯಲಾಗಿತ್ತು.

ಈ ಸಭೆಯ ವಿರುದ್ಧ ತಡೆಯಾಜ್ಞೆ ಕೋರಿ ರೆಡ್ ಕ್ರಾಸ್ ಸೊಸೈಟಿಯ ರಾಜ್ಯ ಅಡಳಿತ ಮಂಡಳಿಯ ಸದಸ್ಯರಾದ ರವೀಂದ್ರನಾಥ್, ಎಚ್.ಆರ್. ಮುರಳೀಧರ್, ಡಾ.ಸುಂದರೇ ಗೌಡ ಹಾಗೂ ಪೆರಿಕೋ ಪ್ರಭು ಎಂಬವರು ಬೆಂಗಳೂರು ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಬಸ್ರೂರು ಅವರನ್ನು ಉಚ್ಛಾಟಿಸಿದ ಆಡಳಿತ ಮಂಡಳಿಯ ನಿರ್ಣಯಕ್ಕಾಗಲೀ, ಮಾ.27ರ ಸಭೆಗಾಗಲೀ ತಡಯಾಜ್ಞೆ ನೀಡದೆ, ಮಾ.27ರಂದು ನಡೆಯಲಿರುವ ಸಭೆಯಲ್ಲಿ ಒಂದನೇ ಅಜೆಂಡಾವನ್ನು ಮುಂದಿನ ವಿಚಾರಣೆಯವರೆಗೆ ಚರ್ಚಿಸುವಂತಿಲ್ಲ, ಇತರ ವಿಷಯಗಳನ್ನು ಚರ್ಚಿಸಬಹುದು, ಈ ಸಭೆಯಲ್ಲಿ ಬಸ್ರೂರು ಅವರು ಕೇವಲ ಒಬ್ಬ ವೀಕ್ಷಕರಾಗಿ ಮಾತ್ರ ಉಪಸ್ಥಿತರಿರಬಹುದು, ಆದರೆ ಬಸ್ರೂರು ಅವರು ಸಭೆಯಲ್ಲಿ ಮಾತನಾಡುವ ಹಾಗಿಲ್ಲ ಮತ್ತು ಅವರಿಗೆ ಮತದಾನದ ಹಕ್ಕು ಇರುವುದಿಲ್ಲ ಎಂದು ಸ್ಪಷ್ಟಪಡಿಸಿ ಆದೇಶ ನೀಡಿತ್ತು.

(ಕೋರ್ಟ್ ಆದೇಶ: An order of ad interim injunction is issued against defendants restraining them friom discussing the agenda No.1 dated : 20.02.2014 in the meeting held on 27.03.2014 till next date of hearing. however, the defendants are at liberty to discuss other agenda at SI.No.2 to 7 in thet meeting.)

ಆದರೆ, ನ್ಯಾಯಾಲಯದ ಈ ಆದೇಶವನ್ನು ತಪ್ಪಾಗಿ ಆರ್ಥೈಸಿದ ಬಸ್ರೂರು ರಾಜೀವ್ ಶೆಟ್ಟಿ ಅವರು, ಉದ್ಧೇಶಪೂರ್ವಕವಾಗಿಯೇ ಸಾರ್ವಜನಿಕರನ್ನು ಗೊಂದಲಕ್ಕೀಡುಮಾಡಲು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಉಡುಪಿ ಜಿಲ್ಲಾ ಶಾಖೆಯ ಪದಾಧಿಕಾರಿಗಳ ಮೂಲಕ, ರೆಡ್ ಕ್ರಾಸ್ ಸೊಸೈಟಿಯ ರಾಜ್ಯ ಶಾಖೆಯ ಲೆಟರ್ ಹೆಡ್ ದುರ್ಬಳಕೆ ಮಾಡಿಕೊಂಡು ಮಾರ್ಚ್ 25ರಂದು ಉಡುಪಿಯ ಮಾಧ್ಯಮಗಳಿಗೆ ‘ಬಸ್ರೂರು ರಾಜೀವ್ ಶೆಟ್ಟಿಯವರನ್ನು ಅಮಾನತು ಮಾಡಲಾದ ನಿರ್ಣಯಕ್ಕೆ ತಡೆಯಾಜ್ಞೆ ನೀಡಲಾಗಿದೆ’ ಎಂಬ ಸುಳ್ಳು ಮಾಹಿತಿಯನ್ನೊಳಗೊಂಡ ಪತ್ರಿಕಾ ಹೇಳಿಕೆಯನ್ನು ರೆಡ್ ಕ್ರಾಸ್ ಸೋಸೈಟಿಯ ಉಡುಪಿ ಜಿಲ್ಲಾ ಶಾಖೆಯ ಈ ಮೇಲ್ ಐಡಿ ಮೂಲಕ ಈ ಮೈಲ್ ಮಾಡಿದ್ದರು. ಆದರೆ, ಪತ್ರಿಕಾ ಹೇಳಿಕೆಯೊಂದಿಗೆ ನ್ಯಾಯಾಲಯ ನೀಡಿದ ತೀರ್ಪಿನ ಯಥಾಪ್ರತಿಯನ್ನು ಕಳುಹಿಸಿಕೊಡದ ಕಾರಣಕ್ಕೆ ಬಹುತೇಕ ಮಾಧ್ಯಮಗಳೂ ಬಸ್ರೂರು ನೀಡಿದ ಪತ್ರಿಕಾ ಹೇಳಿಕೆಯನ್ನು ಪ್ರಕಟಿಸಿರಲಿಲ್ಲ.

ಗೌರವಾನ್ವಿತ ರಾಜ್ಯಪಾಲರು ಘನ ಅಧ್ಯಕ್ಷರಾಗಿರುವ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಕರ್ನಾಟಕ ರಾಜ್ಯ ಶಾಖೆಯ ಲೆಟರ್ ಹೆಡ್ ನ್ನು ದುರುಪಯೋಗಪಡಿಸಿರುವುದು, ನ್ಯಾಯಾಲಯ ನೀಡಿದ ನಿಜವಾದ ಆದೇಶವನ್ನು ಮರೆಮಾಚಿ ತಪ್ಪು ಮಾಹಿತಿಯನ್ನು ಪತ್ರಿಕಾ ಹೇಳಿಕೆಯಾಗಿ ನೀಡಿರುವುದು ಇತ್ಯಾದಿಗಳು ಇಲ್ಲಿ ಸ್ಪಷ್ಟವಾಗಿದೆ.

ಮಾರ್ಚ್ 27ರಂದು ನಡೆದ ರೆಡ್ ಕ್ರಾಸ್ ಸೊಸೈಟಿಯ ರಾಜ್ಯ ಆಡಳಿತ ಮಂಡಳಿ ಸಭೆಯಲ್ಲಿ ಕೇವಲ ವೀಕ್ಷಕರಾಗಿಯಷ್ಟೇ ಬಸ್ರೂರು ರಾಜೀವ್ ಶೆಟ್ಟಿ ಉಪಸ್ಥಿತರಿದ್ದರು. ಇವರ
ಸಮ್ಮುಖದಲ್ಲಿಯೇ ಸಭೆ ಕೆಲವೊಂದು ಪ್ರಮುಖ ನಿರ್ಣಯಗಳನ್ನು ಮಂಡಿಸಿ ಅಂಗೀಕರಿಸಿತು. ನೂತನ ರಾಜ್ಯ ಸಭಾಪತಿ ಹಾಗೂ ಗೌರವ ಕೋಶಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.

ಉಡುಪಿ: ತಂಪು ಪಾನೀಯಕ್ಕೆ ಅಮಲು ಪದಾರ್ಥ ಬೆರೆಸಿ ಕುಡಿಸಿ, ಪ್ರಜ್ಞಾಹೀನಳಾದಾಗ ಅತ್ಯಾಚಾರವೆಸಗಿ, ಬಳಿಕ ಮದುವೆಯಾಗುವುದಾಗಿ ಮಾತುಕೊಟ್ಟು ಕೊನೆಗೆ ವಂಚಿಸಿದ ಶಂಕರಪುರ ಸಮೀಪದ ಮೂಡಬೆಟ್ಟು ಗ್ರಾಮದ ಶಿವಾನಂದ ನಗರ ನಿವಾಸಿ ಪೈಂಟರ್ ರಘುರಾಮ (41) ಎಂಬಾತನಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನರೇಂದ್ರ ಕುಮಾರ ಗುಣಕಿ ಅವರು ಮೂರು ವರ್ಷಗಳ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದ ಎರಡನೇ ಆರೋಪಿ ಐತಪ್ಪ ಎಂಬವರನ್ನು ದೋಷಮುಕ್ತಿಗೊಳಿಸಿದ್ದಾರೆ.
2007 ರಲ್ಲಿ ಶಂಕರಪುರದಲ್ಲಿರುವ ಮಾವನ ಮನೆಗೆ ಹೋಗಲೆಂದು ಉಡುಪಿ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾದು ನಿಂತಿದ್ದ ಯುವತಿಯನ್ನು ಆರೋಪಿ ತಾನೂ ಸಹ ಶಂಕರಪುರಕ್ಕೆ ಹೋಗುವುದಾಗಿ ಹೇಳಿ ತನ್ನ ಕಾರಿಗೆ ಹತ್ತಿಸಿದ್ದ. ಬಳಿಕ ಕಾರ್ಕಳದಲ್ಲಿ ತಾನು ಪೈಂಟಿಂಗ್ ಮಡುತ್ತಿದ್ದ ಹೊಸ ಕಟ್ಟಡಕ್ಕೆ ಕರೆದೊಯ್ದು, ಅಲ್ಲಿ ತಂಪು ಪಾನೀಯಕ್ಕೆ ಅಮಲು ಪದಾರ್ಥ ಬೆರೆಸಿ ಕುಡಿಸಿ, ಪ್ರಜ್ಙಾಹೀನಳಾದಾಗ ಅತ್ಯಾಚಾರವೆಸಗಿದ್ದ. ಯುವತಿಗೆ ಎಚ್ಚರವಾದಾಗ, ನಡೆದ ವಿಷಯವನ್ನು ಮನೆಯವರಲ್ಲಿ ಹೇಳಬಾರದೆಂದೂ, ಹೇಳಿದರೆ ಕೊಲೆ ಮಾಡುವುದಾಗಿಯೂ ಬೆದರಿಸಿ, ಮುಂದಕ್ಕೆ ಮದುವೆಯಾಗುವುದಾಗಿ ಮಾತು ಕೊಟ್ಟಿದ್ದ ಎಂದು ರಘುರಾಮ್ ವಿರುದ್ಧ ಯುವತಿ ಆರೋಪಿಸಿದ್ದಳು.
ಈ ಘಟನೆಯ ಬಳಿಕ ರಘುರಾಮ ಹಲವಾರು ಬಾರಿ ತಾನು ಪೈಂಟಿಂಗ್ ಮಾಡುತ್ತಿದ್ದ ಕಟ್ಟಡಕ್ಕೆ ಕರೆದೊಯ್ದು ಸಂಭೋಗ ನಡೆಸಿದ್ದಾನೆ. ಗರ್ಭಪಾತವನ್ನೂ ನಡೆಸಿದ್ದಾನೆ. ಕೊನೆಗೆ ತಂಗಿಯ ನೆಪ ಮುಂದಿಟ್ಟು ಮದುವೆಯಾಗಲು ನಿರಾಕರಿಸಿದ. ಇದನ್ನು ಪ್ರಶ್ನಿಸಿ, ನ್ಯಾಯ ಕೇಳಲು, ತಾನು 2009 ರ ಮಾರ್ಚ್ 9 ರಂದು ಆರೋಪಿಯ ಮನೆಗೆ ಹೋದಾಗ, ಆರೋಪಿ ರಘುರಾಮ, ಐತಪ್ಪ ಹಾಗೂ ಇತರರು ತನ್ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈಯ್ದು, ಕೊಲೆ ಬೆದರಿಕೆ ಹಾಕಿದರೆಂದು ದೂರಲಾಗಿತ್ತು.
ಈ ಬಗ್ಗೆ ನೊಂದ ಯುವತಿ ದಸಂಸ ನಾಯಕ ಜಯನ್ ಮಲ್ಪೆಯವರ ಮೂಲಕ ಮಲ್ಪೆ ಪೋಲಿಸ್ ಠಾಣೆಗೆ ದುರು ನೀಡಿದ್ದು, ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಅಂದಿನ ಉಡುಪಿ ವೃತ್ತ ನಿರೀಕ್ಷಕ ಎಸ್.ವಿ.ಗಿರೀಶ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಸ್.ಜಿತೂರಿ ವಾದಿಸಿದ್ದರು.

ಉಡುಪಿ: ಐದರ ಹರೆಯದ ಮಗನನ್ನು ಕಳೆದ 37 ದಿನಗಳ ಹಿಂದೆ ಅಪಹರಣ ಮಾಡಿ
ದಿಗ್ಭಂಧನದಲ್ಲಿರಿಸಿದ ಪ್ರಕರಣದ ಆರೋಪಿ ಪಣಿಯಾಡಿ ಯಮುನಾ ನಿಲಯದ ನಿವಾಸಿ, ಟ್ಯಾಕ್ಸಿ ಚಾಲಕ ಸುರೇಶ್ ನಾಯ್ಕನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಉಡುಪಿ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅಬ್ದುಲ್ ರೆಹಮಾನ್ ಅವರು, ಅಪ್ರಾಪ್ತ ಪ್ರಾಯದ ಬಾಲಕನ ಅಭಿಪ್ರಾಯದಂತೆ ಅತನನ್ನು ತಂದೆಯ ತಮ್ಮನೊಂದಿಗೆ ಕಳುಹಿಸಿಕೊಟ್ಟಿರುವ ವಿದ್ಯಾಮಾನ ಇಂದು ಸಂಜೆ ನಡೆದಿದೆ. ಈ ತೀರ್ಪಿನಿಂದಾಗಿ ತಾಯಿ ಸಂಗೀತಾಳ ರೋಧನ ಮುಗಿಲು ಮುಟ್ಟಿದೆ. ಉಡುಪಿ ನಗರ ಠಾಣೆಯ ಪೊಲೀಸರು ಸುರೇಶ್ ನಾಯ್ಕನನ್ನು ಶುಕ್ರವಾರ ಬೆಳಗ್ಗೆ
ಬಂಧಿಸಿದ್ದರು. ಸುರೇಶ್ ನಾಯ್ಕ ಕಳೆದ 37 ದಿನಗಳಿಂದ ದಿಗ್ಭಂದನದಲ್ಲಿರಿಸಿದ್ದ ಐದರ ಹರೆಯದ ಬಾಲಕನನ್ನೂ ವಶಕ್ಕೆ ಪಡೆದುಕೊಂಡಿದ್ದರು. ಸಂಜೆ ಉಡುಪಿ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಧೀಶರು ತಂದೆ ಸುರೇಶ್ ನಾಯ್ಕ ಹಾಗೂ ತಾಯಿ ಸಂಗೀತಾಳ ಸಮಕ್ಷಮ ಮಗನಲ್ಲಿ ಯಾರ ಜೊತೆ ಹೋಗುವುದಾಗಿ ಕೇಳಿದಾಗ ಮಗು ತಂದೆ ಜೊತೆ ಹೋಗುವುದಾಗಿ ಹೇಳಿದ್ದಾನೆ. ಬಳಿಕ ನ್ಯಾಯಾಧೀಶರು, ತಂದೆಯನ್ನು ಜೈಲಿಗೆ ಹಾಕುವುದಾಗಿ ತಿಳಿಸಿ, ಯಾರ ಜೊತೆ ಹೋಗುವುದಾಗಿ ಮತ್ತೆ ಪ್ರಶ್ನಿಸಿದಾಗ, ಮಗು ಚಿಕ್ಕಪ್ಪನ ಜೊತೆ ಹೋಗುವುದಾಗಿ ಉತ್ತರಿಸಿದ್ದಾನೆ. ಕಳೆದ 37 ದಿನಗಳಿಂದ ತಂದೆಯ ದಿಗ್ಭಂದನದಲ್ಲಿದ್ದ ಮಗನ ಅಭಿಪ್ರಾಯಕ್ಕೆ ಮನ್ನಣೆ ನೀಡಿದ ನ್ಯಾಯಾಧೀಶರು, ಮಗನನ್ನು ತಂದೆಯ ತಮ್ಮನಿಗೆ ಒಪ್ಪಿಸಿ ಆದೇಶ ನೀಡಿದ್ದಾರೆ. 2012 ರ ಡಿಸೆಂಬರ್ 11 ರಂದು ಸಂಜೆ ಸುರೇಶ್ ನಾಯ್ಕ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿ, ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದ. ಗಂಡನ ದೌರ್ಜನ್ಯದಿಂದಾಗಿ ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಗೀತಾ ನೀಡಿದ ಹೇಳಿಕೆಯ ಪ್ರಕಾರ, ಸುರೇಶ್ ನಾಯ್ಕ ಹಾಗೂ ಈತನ ತಾಯಿ ಶ್ರೀಮತಿ ಪ್ರೇಮಾ ಎಂಬವರ ವಿರುದ್ಧ ಉಡುಪಿ ನಗರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದರು. ಡಿ.12 ರಂದು ಸುರೇಶ್ ನಾಯ್ಕ ಹಾಗೂ ಪ್ರೇಮಾರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಯಾಧೀಶರಾದ ಅಬ್ದುಲ್ ರೆಹಮಾನ್ ಅವರು ಆರೋಪಿಗಳಿಗೆ ಜಾಮೀನು ನೀಡಿ ಬಿಡುಗಡೆಗೊಳಿಸಿದ್ದರು. ಡಿ.12 ರಂದು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಸಂದರ್ಭದಲ್ಲಿ ತಾಯಿ ಸಂಗೀತಾ, ತನ್ನ ಮಗನನ್ನು ಗಂಡ ತನ್ನ ಮೇಲೆ ಹಲ್ಲೆ ನಡೆಸುತ್ತಿರುವಾಗ ಗಂಡನ ಮಿತ್ರ ಸಲೀಂ ಎಂಬಾತ ಬಲವಂತವಾಗಿ ಮನೆಯಿಂದ ಕರೆದೊಯ್ದಿದ್ದಾನೆ ಎಂಬುದಾಗಿ ನೀಡಿದ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಳ್ಳದೆ ಸಂಗೀತಾಳಿಗೆ ಅನ್ಯಾಯ ಮಾಡಿದ್ದರು. ಬಳಿಕ ಮಧ್ಯ ಪ್ರವೇಶ ಮಾಡಿದ ಸಾಂತ್ವನ ಮಹಿಳಾ ಸಹಾಯವಾಣಿಯ ಅಧಿಕೃತರು, ಸಂಗೀತಾಳ ಹೇಳಿಕೆಯನ್ನು ದಾಖಲಿಸಿ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಗೆ ದೂರು ನೀಡಿದ್ದರು.
ಮಕ್ಕಳ ಕಲ್ಯಾಣ ಸಮಿತಿಯು ಡಿ.22 ರಂದು ಸುರೇಶ್ ನಾಯ್ಕನಿಗೆ ಸಮನ್ಸ್ ಹೊರಡಿಸಿ, ಡಿ.29 ರಂದು ಮಗುವನ್ನು ಸಮಿತಿ ಮುಂದೆ ಹಾಜರುಪಡಿಸುವಂತೆ ಆದೇಶಿಸಿದ್ದರು. ಸುರೇಶ್ ಈ ಆದೇಶವನ್ನು ಕಡೆಗಣಿಸಿದ ಕಾರಣ, ಡಿ.29 ರಂದು ಸಮಿತಿಯು ಬಾಲಕನ ಸಹಿತ ಸುರೇಶ್ ನಾಯ್ಕನನ್ನು 2013 ರ ಜ. 5 ರಂದು ಸಮಿತಿ ಮುಂದೆ ಹಾಜರುಪಡಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಬಾಡಿ ವಾರೆಂಟ್ ಹೊರಡಿಸಿದ್ದರು.
ಈ ನಡುವೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ತೊರವಿ ಅವರು ತಾಯಿ ಸಮಗೀತಾ ಹಾಗೂ ಅಪ್ರಾಪ್ತ ಪ್ರಾಯದ ಮಗುವಿನ ಪರವಾಗಿ ಮಧ್ಯಪ್ರವೇಶ ಮಾಡಿ ಪೊಲೀಸರಿಗೆ ಬಿಸಿ ಮುಟ್ಟಿಸಿದ ಹಿನ್ನೆಲೆಯಲ್ಲಿ, ಜ.2 ರಂದು ಉಡುಪಿ ನಗರ ಠಾಣೆಯ ಪೊಲೀಸರು ಸುರೇಶ್ ನಾಯ್ಕ ಹಾಗೂ ಸಲೀಂ ವಿರುದ್ಧ ಅಪಹರಣ ಪ್ರಕರಣ
ದಾಖಲಿಸಿಕೊಂಡಿದ್ದರು. ಸಲೀಂನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ನ್ಯಾಯಾಧೀಶರಾದ ಅಬ್ದುಲ್ ರೆಹಮಾನ್ ಅವರು ಆರೋಪಿ ಸಲೀಂಗೆ ಜಾಮೀನು ನೀಡಿ
ಆದೇಶಿಸಿದ್ದರು.
ಸಿಡಬ್ಲ್ಯುಸಿ ಬಾಡಿ ವಾರೆಂಟ್ ಹೊರಡಿಸಿದ ಹಿನ್ನೆಲೆಯಲ್ಲಿ ಮತ್ತು ಅಪಹರಣ ಪ್ರಕರಣ ದಾಖಲಿಸಿಕೊಂಡ ಕಾರಣ ಸ್ವತಹ ಪೊಲೀಸರೇ ಆರೋಪಿ ಸುರೇಶನನ್ನು ಹುಡುಕಾಡಿದ್ದರು ಮತ್ತು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದರು. ಸುರೇಶ್ ತನ್ನ ಮನೆಗೆ ಬೀಗ ಹಾಕಿದ್ದು, ತಲೆಮರೆಸಿಕೊಂಡಿದ್ದಾನೆಂದು ಪೊಲೀಸರು ಹೇಳಿಕೊಂಡಿದ್ದರು. ಇದೀಗ ಶುಕ್ರವಾರ ಬೆಳಗ್ಗೆ ಆರೋಪಿ ಸುರೇಶನನ್ನು ಬಂಧಿಸಿರುವ ಪೊಲೀಸರು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರಾದ ಅಬ್ದುಲ್ ರೆಹಮಾನ್ ಅವರು ಸುರೇಶನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಕಳೆದ 37 ದಿನಗಳಿಂದ ಆರೋಪಿಯ ದಿಗ್ಭಂದನದಲ್ಲಿದ್ದ ಅಪ್ರಾಪ್ತ ಪ್ರಾಯದ ಬಾಲಕನ ಮಾತಿನಂತೆ ಬಾಲಕನನ್ನು ತಂದೆಯ ತಮ್ಮನೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಬೆಳವಣಿಗೆಯಿಂದ ತಾಯಿ ಸಂಗೀತಾ ದಿಕ್ಕು ತೋಚದವಂತಳಾಗಿದ್ದಾಳೆ. ವರದಿ: ಶ್ರೀರಾಮ ದಿವಾಣ.