Posts Tagged ‘cpim’

ಉಡುಪಿ: ಕೆಲವು ವರ್ಷಗಳ ಹಿಂದೆ ಕಾರ್ಕಳ ತಾಲೂಕಿನ ಸೀತಾನದಿ ಪರಿಸರ ಪ್ರದೇಶದಲ್ಲಿ ನಡೆದ ಶಿಕ್ಷಕ ಮತ್ತು ಬಡ್ಡಿ ವ್ಯಾಪಾರಿ ಭೋಜ ಶೆಟ್ಟಿ ಹಾಗೂ ಇನ್ನೋರ್ವರನ್ನು ಗುಂಡು ಹಾರಿಸಿ ಹತ್ಯಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ ಎಲ್ಲಾ ಶಂಕಿತ ನಕ್ಸಲ್ ಆರೋಪಿಗಳನ್ನೂ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಇಂದು ಆರೋಪಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.

ಚಂದ್ರಶೇಖರ ಗೋರಬಾಳ್ ಯಾನೆ ತಿಪ್ಪೇಶ್, ನಂದ ಕುಮಾರ್, ದೇವೇಂದ್ರಪ್ಪ ಯಾನೆ ವಿಷ್ಣು ಯಾನೆ ದೇವಣ್ಣ ಹಾಗೂ ಆಶಾ ಯಾನೆ ಸುಧಾ ಯಾನೆ ಚಂದ್ರಾ ಯಾನೆ ಇಂದಿರಾ ಯಾನೆ ನಳಿನಿ ಯಾನೆ ಸಿಂಧು ಯಾನೆ ನಂದಿನಿ ಯಾನೆ ಪವಿತ್ರಾ ಆರೋಪಮುಕ್ತರಾದ ಶಂಕಿತ ನಕ್ಸಲರಾಗಿದ್ದಾರೆ.

2008 ರ ಮೇ 15 ರಂದು ಕಾರ್ಕಳ ತಾಲೂಕಿನ ಹೆಬ್ರಿ ಪೋಲೀಸ್ ಠಾಣಾ ವ್ಯಾಪ್ತಿಯ ನಾಡ್ಪಾಲು ಗ್ರಾಮದ ಸೀತಾನದಿ ಬಳಿಯ ಬಾಳುಬ್ಬೆ ನಿವಾಸಿ, ಸ್ಥಳೀಯ ಶಾಲಾ ಶಿಕ್ಷಕ ಮತ್ತು ಬಡ್ಡಿ ವ್ಯಾಪಾರಿ ಭೋಜ ಶೆಟ್ಟಿ ಹಾಗೂ ಇನ್ನೋರ್ವರನ್ನು ಗುಂಡು ಹಾರಿಸಿ ಹತ್ಯೆಗೈದ ಆರೋಪ ದೇವೇಂದ್ರಪ್ಪ, ನಂದ ಕುಮಾರ್, ಚಂದ್ರಶೇಖರ ಗೋರಬಾಳ್ ಹಾಗೂ ಆಶಾ ಇವರ ಮೇಲಿತ್ತು.

2003 ರ ನವೆಂಬರ್ ನಲ್ಲಿ ಈದು ರಾಮಪ್ಪ ಪೂಜಾರಿ ಎಂಬವರ ಮನೆಯಲ್ಲಿ ನಡೆದ ಪೋಲೀಸ್ ಕಾರ್ಯಾಚರಣೆಯಲ್ಲಿ ಪೊಲೀಸರು ನಕ್ಷಲ್ ನಾಯಕಿಯರಾದ ಹಾಜಿಮಾ ಹಾಗೂ ಪಾರ್ವತಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. ಯಶೋದಾ ಅವರನ್ನು ಗುಂಡಿನ ಗಾಯಗಳೊಂದಿಗೆ ಸೆರೆ ಹಿಡಿದಿದ್ದರು. ಈ ಸಂದರ್ಭದಲ್ಲಿ ಓರ್ವ ಯುವಕ ಓದಿ ಪರಾರಿಯಾಗಿದ್ದನು. ಇವರಲ್ಲಿ ಯಶೋದಾ ನ್ಯಾಯಾಲಯ ವಿಚಾರಣೆ ಎದುರಿಸಿ ಇದೀಗ ದೋಷಮುಕ್ತಿಗೊಂದಿದ್ದಾಳೆ. ಅಂದು ಓಡಿ ಪರಾರಿಯಾದ ಯುವಕನನ್ನು ವಿಷ್ಣು ಎಂದು ಗುರುತಿಸಲಾಗಿತ್ತು. ಬಳಿಕ ಪೋಲೀಸ್ ಬಂಧನಕ್ಕೆ ಒಳಗಾದ ದೇವೇಂದ್ರಪ್ಪ ಅವರೇ ವಿಷ್ಣು ಎಂದು ಗುರುತಿಸಲಾಗಿತ್ತು.

ಭೋಜ ಶೆಟ್ಟಿ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪರವಾಗಿ ಉಡುಪಿಯ ಹಿರಿಯ ಮತ್ತು ಪ್ರಸಿದ್ಧ ವಕೀಲರಾದ ಎಂ.ಶಾಂತಾರಾಮ ಶೆಟ್ಟಿ ವಾದಿಸಿದ್ದರು.

ಇಂದು ಖುಲಾಸೆಗೊಂಡವರಲ್ಲಿ ಆಶಾ ಅವರು ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು, ಮುಖ್ಯ ವಾಹಿನಿಯಲ್ಲಿ ಸಹಜ ಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ಮೈಸೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಂದ್ರಶೇಖರ ಗೋರಬಾಳ್ ಅವರ ಮೇಲೆ ಬೇರೆ ಯಾವುದೇ ಪ್ರಕರಣವೂ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇಲ್ಲದೇ ಇರುವುದರಿಂದ ಇನ್ನೋಂದೆರಡು ದಿನಗೋಳಗೆ ನ್ಯಾಯಾಂಗ ಬಂಧನದಿಂದ ಬಿಡುಗಡೆಗೊಳ್ಳಲಿದ್ದಾರೆ. ನಂದ ಕುಮಾರ್ ಹಾಗೂ ದೇವೇಂದ್ರಪ್ಪ ಇವರ ವಿರುದ್ಧ ಇನ್ನೂ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ, ಇವರ ನ್ಯಾಯಾಂಗ ಬಂಧನ ಮುಂದುವರಿಯಲಿದೆ.

http://www.udupibits.in news
ಉಡುಪಿ: ಕೈಗಾರಿಕೋದ್ಯಮಿಗಳು, ಅಧಿಕಾರಿಗಳು, ಶ್ರೀಮಂತರು ಸುಳ್ಳು ದಾಖಲೆ ಸೃಷ್ಟಿಸಿ ಮತ್ತು ಕಾನೂನಿನ ಕಣ್ಣಿಗೆ ಮಣ್ಣೆರಚಿ ನೂರಾರು, ಸಾವಿರಾರು ಎಕರೆ ಸರಕಾರಿ ಭೂಮಿಯನ್ನು ಕಬಳಿಸಿದ್ದಾರೆ. ಹೀಗೆ ಕಬಳಿಸಿರುವ ಭೂಮಿಯನ್ನು ಯಾವುದೇ ರಿಯಾಯಿತಿಯೂ ಮಾಡದೆ ನಿರ್ದಾಕ್ಷಿಣ್ಯವಾಗಿ ಸರಕಾರ ಸ್ವಾಧೀನಪಡಿಸಿಕೊಳ್ಳಬೇಕು. ಸ್ವಾಧೀನಪಡಿಸಿಕೊಂಡ ಭೂಮಿಯನ್ನು ನಿವೇಶನ ರಹಿತರಿಗೆ ವಿತರಿಸಲು ಬಳಕೆ ಮಾಡಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ನಾಯಕ ನಿತ್ಯಾನಂದ ಸ್ವಾಮಿ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

10 ಎಕರೆಗಿಂತ ಕಡಿಮೆ ಭೂಮಿಯಲ್ಲಿ ಅಕ್ರಮ ಸಾಗುವಳಿ ಮಾಡುವವರಿಗೆ ಭೂಮಿಯ ಹಕ್ಕುಪತ್ರ ಕೊಡಬೇಕು, ಒಕ್ಕಲೆಬ್ಬಿಸುವ ಪ್ರಯತ್ನ ಕೈಬಿಡಬೇಕು, ಬಡ ನಿವೇಶನ ರಹಿತರಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಅರ್ಹತೆ ಇದ್ದವರ ಪಟ್ಟಿ ಮಾಡಿ ಕೊಡಬೇಕು ಮತ್ತು ನಿವೇಶನ ವಿತರಿಸಲು ತುತರ್ು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸಂಘದ ಉಡುಪಿ ತಾಲೂಕು ಸಮಿತಿಯ ವತಿಯಿಂದ ಉಡುಪಿ ತಾಲೂಕು ಕಚೇರಿ ಮುಂದೆ ಆರಂಭಿಸಲಾದ ಅನಿರ್ಧಿಷ್ಟಾವಧಿ ಧರಣಿಯ ಎರಡನೇ ದಿನವಾದ ಇಂದು (28.10.2014) ಪೂರ್ವಾಹ್ನ ನಿತ್ಯಾನಂದ ಸ್ವಾಮಿ ಮಾತನಾಡಿದರು.

ಸುಪ್ರೀಂ ಕೋರ್ಟ್ ಆದೇಶವನ್ನು ಮುಮದಿಟ್ಟುಕೊಂಡು ರಾಜ್ಯ ಸರಕಾರ ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ಬಗರ್ ಹುಕುಂ ಸಾಗುವಳಿದಾರರು ಜೀವನ ನಿರ್ವಹಣೆಗಾಗಿ ಒಂದೆರಡು ಎಕರೆ ಭೂಮಿಯಲ್ಲಿ ಸಾಗುವಳಿ ಮಾಡುವವರಾಗಿದ್ದು, ಇವರನ್ನು ಒಕ್ಕಲೆಬ್ಬಿಸಲು ನೋಟೀಸ್ ಮಾಡುವ ಸರಕಾರ, ಸಾವಿರಾರು ಎಕರೆ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿರುವ ಶ್ರೀಮಂತ ಭೂಗಳ್ಳರಿಗೆ ಮಾತ್ರ ನೋಟೀಸ್ ಮಾಡುತ್ತಿಲ್ಲ. ಭೂಗಳ್ಳರೊಂದಿಗೆ ಬಗರ್ ಹುಕುಂ ಸಾಗುವಳಿದಾರರನ್ನು ಹೋಲಿಸಬಾರದು ಎಂದು ನಿತ್ಯಾನಂದ ಸ್ವಾಮಿ ಮನವಿ ಮಾಡಿದರು.

ಸರಕಾರ ಬದಲಾಗಬಹುದು, ಆದರೆ ಭೂಮಿಗೆ ಸಂಬಂಧಿಸಿದಂತೆ ಸರಕಾರದ ಧೋರಣೆ ಬದಲಾಗುವವರೆಗೂ, ನಿವೇಶನದ ವಿಷಯ ತಾರ್ಕಿಕ ಅಂತ್ಯ ಕಾಣುವವರೆಗೂ ಸಂಘ ನಿವೇಶನ ರಹಿತರ ಪರವಾದ ಹೋರಾಟವನ್ನು ಮುಂದುವರಿಸಲಿದೆ. ಸರಕಾರ ಅಕ್ರಮ ಸಕ್ರಮಕ್ಕೆ ಇದೀಗ ಮುಂದಾಗಿದ್ದು, ಇದು ಸಂಗದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ನಿತ್ಯಾನಂದ ಸ್ವಾಮಿ ತಿಳಿಸಿದರು.

ಸಂಘದ ಪ್ರಮುಖರಾದ ಕೆ.ಶಂಕರ್, ಬಾಲಕೃಷ್ಣ ಶೆಟ್ಟಿ, ಎಚ್.ವಿಠಲ, ಕೆ.ಲಕ್ಷ್ಮಣ್, ವಿದ್ಯಾರಾಜ್ ಮೊದಲಾದವರು ಧರಣಿಯ ನೇತೃತ್ವ ವಹಿಸಿದ್ದರು.

ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಮತ್ತು ಉಡುಪಿ ತಾಲೂಕು ಕಚೇರಿ ಮುಂದೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ನಿವೇಶನ ರಹಿತರ ಪರವಾದ ಅನಿರ್ಧಿಷ್ಟಾವಧಿ ಧರಣಿ ನಡೆಯುತ್ತಿದೆ.

# 128 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷವನ್ನು 2014ರಲ್ಲಿ ನಡೆದ 16ನೇ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ದೇಶದ ಮತದಾರರು ಮಖಾಡೆ ಮಲಗಿಸಿದ್ದಾರೆ. ಸ್ವಾತಂತ್ರ್ಯ ಲಭಿಸಿದ ನಂತರದಲ್ಲಿ ಮಹಾತ್ಮ ಗಾಂಧಿಯವರು ನೀಡಿದ ಸೂಚನೆಯಂತೆ ಪಕ್ಷವನ್ನು ಗೌರವದಿಂದಲೇ ವಿಸರ್ಜನೆ ಮಾಡುತ್ತಿದ್ದರೆ, ಇದೀಗ ಇಂಥ ಮುಖಭಂಗ ಅನುಭವಿಸಬೇಕಾಗಿ ಬರುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ, ಚಳುವಳಿಗೆ ಈ ರೀತಿಯ ಅಪಮಾನವಾಗಲು, ಕಳೆದ ಕೆಲವು ದಶಕಗಳಿಂದ ಕಾಂಗ್ರೆಸ್ನ ನಾಯಕತ್ವ ವಹಿಸಿದ ಪ್ರತಿಯೋರ್ವ ನಾಯಕನೂ, ಮುಖ್ಯವಾಗಿ ಗಾಂಧಿ ಕುಟುಂಬ ವರ್ಗವೇ ನೇರವಾಗಿ ಹೊಣೆಗಾರರು.

ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಈ ಸಲದ ಚುನಾವಣೆಯನ್ನು ಈ ಹಿನ್ನೆಲೆಯಲ್ಲಿ ನೋಡಬೇಕು ಎಂದು ಕಾಂಗ್ರೆಸಿಗರು ಹೇಳಬಹುದು. ಆದರೆ, ಸ್ವಾತಂತ್ರ್ಯಪೂರ್ವದಲ್ಲಿ ಸ್ಥಾಪನೆಗೊಂಡು, ಸುಧೀರ್ಘ ಕಾಲದಿಂದ ಅಧಿಕಾರ ಅನುಭವಿಸಿಕೊಂಡು ಬಂದು ದೇಶಕ್ಕೆ ದೇಶವನ್ನೇ ಭ್ರಷ್ಟವನ್ನಾಗಿಸಿದ, ಇಂದಿಗೂ ಕಾಂಗ್ರೆಸ್ ಮೂಲಕವಾಗಿಯಾದರೇ ಸುಲಭವಾಗಿ ಅಧಿಕಾರ ಅನುಭವಿಸಬಹುದು ಎಂದು ನಂಬಿಕೊಂಡಿರುವ ನಾಯಕರ ಪಕ್ಷವಾದ ಕಾಂಗ್ರೆಸ್ನ್ನು ಹಾಗೆ ಹತ್ತರಲ್ಲಿ ಹನ್ನೊಂದನೇ ಪಕ್ಷ ಎಂದು ಪರಿಗಣಿಸಿ ವಿಮರ್ಶಿಸಲು, ರಿಯಾಯಿತಿ ನೀಡಲು ಸಾಧ್ಯವಿಲ್ಲ.

ಸ್ವಾತಂತ್ರ್ಯ ಹೋರಾಟ ನಡೆಸಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು ನಮ್ಮ ಪಕ್ಷ ಎಂಬ ಭ್ರಮೆ, ತಮ್ಮದು ಅತೀ ದೊಡ್ಡ ರಾಷ್ಟ್ರೀಯ ಮಟ್ಟದ ರಾಜಕೀಯ ಪಕ್ಷ ಎನ್ನುವ ದುರಹಂಕಾರ, ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾವುದೇ ಪಕ್ಷಗಳಿಗೂ ಪೂರ್ಣ ಐದು ವರ್ಷಗಳ ಕಾಲ ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ ಎನ್ನುವ ವರಸೆ ಇತ್ಯಾದಿಗಳೊಂದಿಗೆ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ನಾಯಕತ್ವಕ್ಕೆ, ದೇಶದ ಜನರ ನಿಜವಾದ ನಾಡಿಮಿಡಿತ ಅರಿತುಕೊಳ್ಳುವ ಪ್ರಾಮಾಣಿಕವಾದ ಆಸಕ್ತಿಯಾಗಲಿ, ಕಾಳಜಿಯಾಗಲಿ ಇಲ್ಲ ಎನ್ನುವುದು ಈಗಾಗಲೇ ಸಾಬೀತಾಗಿರುವಂಥದ್ದೇ.

ಗಾಂಧಿ ಹೊರತುಪಡಿಸಿ ಬೇರೆ ಗತಿಯೇ ಇಲ್ಲದ ಪಕ್ಷ ಕಾಂಗ್ರೆಸ್. ಗಾಂಧಿ ಬಿಟ್ಟರೆ ಕಾಂಗ್ರೆಸ್ ನಂಥ ರಾಷ್ಟ್ರೀಯ ಪಕ್ಷದಲ್ಲಿ ನಾಯಕತ್ವಕ್ಕೆ ಅರ್ಹತೆ, ಯೋಗ್ಯತೆ ಇರುವ ಇನ್ನೊಬ್ಬ ವ್ಯಕ್ತಿ ಇಲ್ಲ. ಸೋನಿಯಾ ಗಾಂಧಿ ನಮಗೆ ಬದುಕುವ ಹಕ್ಕು ಕೊಟ್ಟವರು ಎಂದು ತಲೆಬುಡವಿಲ್ಲದಂತ ಭಾಷಣ ಮಾಡಲು ನಾಚಿಕೆಪಡಲಾರದ ಆಸ್ಕರ್ ಫೆರ್ನಾಂಡಿಸ್ ರಂಥವರು ಮಾತ್ರ ಈ ಪಕ್ಷದಲ್ಲಿ ನಾಯಕತ್ವಕ್ಕೆ ಏರಲು ಸಾಧ್ಯ.

ಕಾಂಗ್ರೆಸ್ ಅಧಿನಾಯಕಿಯಾಗಿದ್ದ ಇಂದಿರಾ ಗಾಂಧಿ ಹತ್ಯೆಯಾದಾಗ, ಪೈಲೆಟ್ ಆಗಿದ್ದ ರಾಜೀವ್ ಗಾಂಧಿಯವರನ್ನು ಕರೆತಂದು ಪಕ್ಷದ ಚುಕ್ಕಾಣಿ ವಹಿಸಿಕೊಡಲಾಗುತ್ತದೆ, ಬೆನ್ನಿಗೇ ಪ್ರಧಾನಿ ಮಾಡಲಾಗುತ್ತದೆ. ರಾಜೀವ್ ಗಾಂಧಿ ಹತ್ಯೆಯಾದಾಗ, ಪತಿ ಕಳೆದುಕೊಂಡ ದುಖಃದಲ್ಲಿದ್ದ ಸೋನಿಯಾ ಗಾಂಧಿಯವರನ್ನು ಕರೆತಂದು ಪಕ್ಷದ ನಾಯಕತ್ವ ನೀಡಲಾಗುತ್ತದೆ. ಪ್ರಧಾನಿಯನ್ನಾಗಿ ಆರ್ಥಿಕ ತಜ್ಞ ಡಾ.ಮನಮೋಹನ್ ಸಿಂಗ್ ರನ್ನು ಆಯ್ಕೆ ಮಾಡಿದ ಬಳಿಕವೂ, ಅವರನ್ನು ಸೋನಿಯಾ ಗಾಂಧಿಯವರ ಜೊತೆಗೆ ಸೋನಿಯಾ ಪುತ್ರ ರಾಹುಲ್ ಗಾಂಧಿಯೂ
ನಿಯಂತ್ರಿಸುವಂಥ ಶೋಷನೀಯ ಪರಿಸ್ಥಿತಿಯನ್ನು ಸೃಷ್ಟಿಸಲಾಗುತ್ತದೆ. ರಾಹುಲ್ ಗಾಂಧಿಯನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ. ಪಕ್ಷದಲ್ಲಿ ಯಾವುದೇ ಪ್ರಮುಖ ಪದಾಧಿಕಾರಿ ಅಲ್ಲದಿದ್ದರೂ ಪ್ರಿಯಾಂಕಾ ಗಾಂಧಿಯ ಭಾವಚಿತ್ರದ ಫ್ಲೆಕ್ಸ್ ಗಳನ್ನು ಹಾದಿ ಬೀದಿಯಲ್ಲಿ ಪ್ರದರ್ಶಿಸಲಾಗುತ್ತದೆ. ಇದೆಲ್ಲವೂ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸಾಧ್ಯ.

ಗಾಂಧಿ ಕುಟುಂಬನ್ನು ಹೊಗಳುವುದು ಬಿಟ್ಟರೆ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಒಂದು ಸ್ಪಷ್ಟವಾದ ಕಾರ್ಯಕ್ರಮಗಳಿಲ್ಲ, ಯೋಜನೆಗಳಿಲ್ಲ, ಗುರಿಗಳಿಲ್ಲ, ಧ್ಯೇಯೋದ್ಧೇಶಗಳೂ ಇಲ್ಲ. ಬಡತನದ ಬಗ್ಗೆ, ಬಡವರ ಬಗ್ಗೆ ಮಾತನಾಡುವ ಪಕ್ಷ ಕಾಂಗ್ರೆಸ್. ಆದರೆ, ಬಡತನವನ್ನು ಹೋಗಲಾಡಿಸಲು ಬೇಕಾದ ದೂರದೃಷ್ಟಿಯ, ಶಾಸ್ವತವಾದ ಯೋಜನೆಗಳನ್ನು ರೂಪಿಸದೆ, ಬಡವರು ಬಡವರಾಗಿಯೇ ಉಳಿದು, ಸರಕಾರವನ್ನು ಖಾಯಂ ಆಗಿ ಅಂಗಲಾಚಿಕೊಂಡೇ ಇರಬೇಕು ಎಂಬಂತೆ ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿ ವಿತರಣೆ ಮಾಡುವ ಕಾರ್ಯಕ್ರಮವನ್ನು
ಜ್ಯಾರಿಗೊಳಿಸುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಅಕ್ಕಿಗೆ ಇರುವ ಬೆಲೆ ಕೊಟ್ಟು ಖರೀದಿಸುವ ಸ್ವಾಭಿಮಾನಿ ಆಗುವ ರೀತಿಯಲ್ಲಿ, ಶ್ರೀಮಂತನಾಗಬೇಕೆಂಬ ನಿಟ್ಟಿನಲ್ಲಿ ಯಾವ ಕಾರ್ಯಕ್ರಮವನ್ನು ಈ ಪಕ್ಷ ಜ್ಯಾರಿಗೆ ತರುವುದೇ ಇಲ್ಲ. ಬಡವರಿಗೆ ವಿತರಣೆಯಾಗಬೇಕಾದ ಅಕ್ಕಿ ಸಹ ನ್ಯಾಯಬೆಲೆ ಅಂಗಡಿಗಳಲ್ಲಿರದೆ ಮತ್ತೆಲ್ಲೋ ಗೋಡೌನ್ ಗಳಲ್ಲಿ
ಪತ್ತೆಯಾಗುತ್ತದೆ. ಒಂದು ಕಾರ್ಯಕ್ರಮವನ್ನು ಒಳ್ಳೆಯ ರೀತಿಯಲ್ಲಿ ಅನುಷ್ಟನಗೊಳ್ಳುವಂತೆ ನಿರ್ವಹಣೆ ಮಡುವ ಕಳಕಳಿ ಸಹ ಇವರಿಗಿಲ್ಲ. ಯಾರಿಗೂ ಯಾವ ಅಗತ್ಯವೂ ಇಲ್ಲದಿದ್ದರೂ ಶ್ರೀಮಂತ ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಡಲು ಆಧಾರ್ ಕಾರ್ಡ್ ನಂಥ ನಿಷ್ರ್ಪಯೋಜಕ ಕಾರ್ಯಕ್ರಮಗಳನ್ನು ಜ್ಯಾರಿಗೆ ತಂದು ಬಡವರಿಗೆ ಹಿಂಸೆ ನೀಡಿದ ಪಕ್ಷವೂ ಇದುವೇ.

ಕಾಂಗ್ರೆಸ್ ಪಕ್ಷದ ಗೆಲುವು ಕಾಂಗ್ರೆಸ್ ನಾಯಕರಿಗೆ ಮುಖ್ಯವಲ್ಲ, ಇತರ ಪಕ್ಷಗಳ ಸೋಲೂ ಸಹ ಕಾಂಗ್ರೆಸ್ ನಾಯಕರಿಗೆ ಮುಖ್ಯವಲ್ಲ. ಈ ಪಕ್ಷದಲ್ಲಿ ಎಲ್ಲರೂ ನಾಯಕರೇ.
ನಾಯಕರಾಗಲಿಕ್ಕಾಗಿಯೇ ಈ ಪಕ್ಷದಲ್ಲಿರುವವರ ಗರಿಷ್ಟ ಪ್ರಯತ್ನ. ಚುನಾವಣೆ ಇಲ್ಲದಿದ್ದಾಗ ಮೌನವಾಗಿರುವ, ಚುನಾವಣೆ ಹತ್ತಿರ ಬಂದಾಗ ತಡಬಡಾಯಿಸಿ ನಿದ್ದೆಯಿಂದೆದ್ದವರಂತೆ ವರ್ತಿಸುವ ಪಕ್ಷ ಕಾಂಗ್ರೆಸ್. ಇಲ್ಲಿರುವವರಿಗೆ ಇರುವುದೊಂದೇ ಉದ್ಧೇಶ. ಅದು, ನಾನು ಗೆಲ್ಲಬೇಕು. ಅವನು ಸೋಲಬೇಕು. ಆ ಅವನು ಬೇರೆ ಪಕ್ಷದ ಅಭ್ಯರ್ಥಿಯಲ್ಲ. ತನ್ನ ಕಾಂಗ್ರೆಸ್ ಪಕ್ಷದ ಅಭ್ಯಥೀಯೇ ಆಗಿರುತ್ತಾನೆ ಎನ್ನುವುದು ಈ ಪಕ್ಷದ ನಾಯಕತ್ವದಲ್ಲಿನ ಬೌದ್ಧಿಕ, ಸಂಘಟನಾತ್ಮಕ ದಿವಾಳಿತನಕ್ಕೆ ಸಾಕ್ಷಿ.

ಉಡುಪಿ-ಚಿಕ್ಕಮಗಳೂರು, ಮಂಗಳೂರು, ಮಂಡ್ಯ ಮೊದಲಾದ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣ. ಇದನ್ನು ಕಾಂಗ್ರೆಸ್ ನಾಯಕರೇ ಒಪ್ಪಿಕೊಂಡಿದ್ದಾರೆ. ನಡುವೆ, ಸ್ವಲ್ಪವೂ ನಾಚಿಕೆ ಇಲ್ಲದೆ ಮೋದಿ ಅಲೆ ಕಾರಣ ಅಂತಲೂ ಹೇಳುತ್ತಾರೆ. ಯಾವುದೇ ಅಲೆ ಸುಮ್ಮನೇ ಹುಟ್ಟಿಕೊಳ್ಳುವುದಿಲ್ಲ. ಅದಕ್ಕೆ ಪೂರಕವಾಗಿ ತಮ್ಮ ಪಕ್ಷದ ಮತ್ತು ತಮ್ಮ ಪಕ್ಷದ ನೇತೃತ್ವದಲ್ಲಿರುವ ಸರಕಾರದ ಆಡಳಿತ ಶೈಲಿಯೂ ಕಾರಣವಾಗಿರುತ್ತದೆ ಎನ್ನುವುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಆತ್ಮ ವಿಮರ್ಶೆ, ಆತ್ಮಾವಲೋಕನ ಎನ್ನುವುದು ಏನಿದ್ದರೂ ಅದೆಲ್ಲವೂ ಗಾಂಧಿ ಕುಟುಂಬಕ್ಕೆ ಹಾಗೂ ಗಾಂಧಿ ಕುಟುಂಬದ ಜೊತೆಗೆ ಆಪ್ತವಾಗಿರುವ ನಾಯಕರುಗಳ ಮನಸ್ಸಿಗೆ ನೋವಾಗದಂತೆಯೇ ನಡೆಯಬೇಕು ಕಾಂಗ್ರೆಸ್ ಪಕ್ಷದಲ್ಲಿನ ನಾಯಕರು.

ನಮ್ಮ ದೇಶದಲ್ಲಿ ಜಾತಿ, ಮತ, ವರ್ಗ, ವರ್ಣ, ಲಿಂಗ ಭೇದವಿಲ್ಲದೆ,
ವಿದ್ಯಾವಂತ-ಅವಿದ್ಯಾವಂತ, ಉದ್ಯೋಗಿ-ನಿರುದ್ಯೋಗಿ, ಸ್ಲಂ ನಿವಾಸಿಯಿಂದ ಹಿಡಿದು, ಡಾಲರ್ ಕಾಲನಿಯ ನಿವಾಸಿಯವರೆಗೂ, ಚಾ ಮಾರಾಟ ಮಾಡುವವನಿಂದ ಆರಂಭಿಸಿ, ಕಾರ್ಪೋರೇಟ್ ಉದ್ಯಮಿಯವರೆಗೂ ಯಾರೂ ಬೇಕಾದರೂ ಚಉನಾವಣೆಯಲ್ಲಿ ಸ್ಪರ್ಧಿಸಬಹುದು, ಚುನಾವಣೆಯಲ್ಲಿ ಸ್ಪರ್ಧಿಸಿ ಜನಪ್ರತಿನಿಧಿಯಾಗಿ ಆಯ್ಕೆಯಾದರೆ, ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದರೂ ರಾಜ್ಯಸಭಾ ಸದಸ್ಯರಾದವರೂ, ಮಂತ್ರಿಯಾದ ಬಳಿಕ ಸಂಸದರಾಗುವ ಮೂಲಕ ಮತ್ತು ರಾಜ್ಯಸಭಾ ಸದಸ್ಯರಾಗುವ ಮೂಲಕವೂ ದೇಶವನ್ನಾಳುವ ಮಂತ್ರಿಯಾಗಬಹುದು ಎನ್ನುವ ಕನಿಷ್ಟ ತಿಳುವಳಿಕೆಯೂ ಇಲ್ಲದವರಂತೆ ನಡೆದುಕೊಳ್ಳುವ ಹಾಸ್ಯಸ್ಪದ ವ್ಯಕ್ತಿಗಳಿಗೇ ಕಾಂಗ್ರೆಸ್ ಪಕ್ಷದಲ್ಲಿ ಎತ್ತರದ ಮಣೆ.

ಮೋದಿ ಚಹಾ ಮಾರಾಟ ಮಾಡುತ್ತಿದ್ದರೆಂಬುದನ್ನೇ ಚುನಾವಣಾ ಪ್ರಚಾರದಲ್ಲಿ ತೇಲಿಬಿಟ್ಟು ವ್ಯಂಗ್ಯವಾಡಿದರು ಕಾಂಗ್ರೆಸ್ ನಾಯಕರು. ಬಿಜೆಪಿ ಅದಕ್ಕೆ ಸರಿಯಾಗಿಯೇ ತಿರುಗೇಟು ನೀಡಿ ಕಪಾಳಮೋಕ್ಷವನ್ನೇ ಮಾಡಿತು. ಇಷ್ಟಾದರೂ ಕಾಂಗ್ರೆಸ್ ನಾಯಕರಿಗೆ ಬುದ್ದಿ ಬರಲಿಲ್ಲ. ಇದೀಗ, ಕೇಂದ್ರದಲ್ಲಿ ಮಂತ್ರಿಯಾದ ಶ್ರೀಮತಿ ಸ್ಮೃತಿ ಇರಾನಿಯವರು ಕಡಿಮೆ ಕಲಿತವರು ಎಂದು ಕಾಂಗ್ರೆಸ್ ನಾಯಕರು ಬೊಗಳಿದ್ದಾರೆ. ಕಾಂಗ್ರೆಸ್ ಸರಕಾರದಲ್ಲಿದ್ದ ಹೆಚ್ಚು ಕಲಿತ ಮಂತ್ರಿಗಳೇ ಸರಣಿ ಹಗರಣದ ಮೂಲಕ ನಿರಂತರವಾಗಿ ಹಗಲು ದರೋಡೆ ಮಾಡುವ ಮೂಲಕ ಪಕ್ಷವನ್ನು ಇಂದು ಈ ಪರಿಸ್ಥಿತಿಗೆ ತಂದು ನಿಲ್ಲಿಸಿದರು ಎನ್ನುವುದು ಇವರಿಗೆಲ್ಲ ಅರ್ಥವೇ ಆಗುವುದಿಲ್ಲ.

ಸರಣಿ ಹಗರಣಗಳ ಮೂಲಕ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ನಡೆಸಿದ ದುರಾಡಳಿತಕ್ಕೆ ಜನರು ರೋಸಿ ಹೋಗಿದ್ದರು. ಎಲ್ಲಿ ಮಾತು ಬೇಕೋ ಅಲ್ಲಿ ಮಾತನಾಡಬೇಕು, ಎಲ್ಲಿ ಗಟ್ಟಿ ಧ್ವನಿ ಎತ್ತಬೇಕೋ ಅಲ್ಲಿ ಗಟ್ಟಿಧ್ವನಿಯನ್ನೇ ಎತ್ತಬೇಕು. ಇದು ಜನರ ನಿರೀಕ್ಷೆ. ಪ್ರಧಾನಿಯಾಗಿ ಮನಮೋಹನ್ ಸಿಂಗ್ ಮೌನದಲ್ಲೇ ಎಲ್ಲವನ್ನೂ ನಿರ್ವಹಿಸಿದರು. ಪ್ರಧಾನಿ ಮೌನ ತಾಳಿದಾಗ, ಅದನ್ನು ತುಂಬಲು ಪಕ್ಷವಾದರೂ ಧ್ವನಿ ಎತ್ತಬಹುದಿತ್ತು. ಆ ಕೆಲಸವನ್ನು ಪಕ್ಷವೂ ಮಾಡಿತೋರಿಸಲಿಲ್ಲ. ಒಂದೆಡೆ ಪ್ರಧಾನಿಯ ಮೌನ, ಇನ್ನೊಂದೆಡೆ ರಾಹುಲ್ ಗಾಂಧಿಯ ಉಪ್ಪು, ಹುಳಿ, ಖಾರ ಯಾವುದೂ ಇಲ್ಲದ ಸಪ್ಪೆ ಭಾಷಣ.

ಪ್ರಧಾನಿ ಸಿಂಗ್ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರವನ್ನು ರಾಹುಲ್ ಗಾಂಧಿ ಬಹಿರಂಗವಾಗಿ ಹರಿದು ಹಾಕುವ ಮೂಲಕ ಅಪ್ರಬುದ್ಧತೆಯನ್ನು
ಪ್ರದರ್ಶಿಸಲಾಯಿತು. ಇಂಥ ಹಲವು ಅತೀ ಕೆಟ್ಟ ವರ್ತನೆಗಳ ಮೂಲಕ ರಾಹುಲ್ ಗಾಂಧಿಯನ್ನು ದೇಶದ ನಾಯಕನನ್ನಾಗಿ ರೂಪಿಸಲು ಕಾಂಗ್ರೆಸ್ ನಾಯಕತ್ವ ವಿಫಲ ಪ್ರಯತ್ನ ನಡೆಸಿತು. ಇದೆಲ್ಲವೂ ಅಪಕ್ವ, ಅಪ್ರಬುದ್ಧತೆಯ ನಡವಳಿಕೆ. ದೇಶದ ನಾಗರಿಕರು ಇಂಥ
ಪ್ರಹಸನಗಳನ್ನೆಲ್ಲ ಅರ್ಥಮಾಡಿಕೊಳ್ಳುತ್ತಾರೆ ಎಂಬ ಕನಿಷ್ಟ ತಿಳಿವಳಿಕೆಯೂ ಕಾಂಗ್ರೆಸ್ ನಾಯಕತ್ವಕ್ಕೆ ಹೊಳೆಯದೇ ಹೋಯಿತು.

ಯಾವುದರಿಂದಲೂ, ಯಾವಾಗಲೂ ಪಾಠ ಕಲಿಯದ ಪಕ್ಷ ಕಾಂಗ್ರೆಸ್. ಜನರ ನಾಡಿಮಿಡಿತವನ್ನು ಕಿಂಚಿತ್ತೂ ಅರ್ಥ ಮಾಡಿಕೊಳ್ಳದ ಅಥವಾ ಗೊತ್ತಿದ್ದರೂ, ಗೊತ್ತೇ ಇಲ್ಲದವರಂತೆ ನಡೆದುಕೊಳ್ಳುವ ಪಕ್ಷ ಕಾಂಗ್ರೆಸ್. ಈ ಪಕ್ಷ ಹೀಗೆ ದಿಕ್ಕು ದೆಸೆ ಇಲ್ಲದೆ ಆನೆ ನಡೆದ್ದೇ ದಾರಿ ಎಂಬಂತೆ ಭ್ರಮಿಸಿಕೊಂಡು ನಡೆಯುತ್ತಾ ಹೋದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಜನರು ಶಾಶ್ವತವಾಗಿ ಪಾಠ ಕಲಿಸುವ ದಿನಗಳು ಬರಬಹುದೆಂದು ಅನಿಸುತ್ತಿದೆ. – ಶ್ರೀರಾಮ ದಿವಾಣ.

# ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್.)ದ ಸಕ್ರಿಯ ಕಾರ್ಯಕರ್ತ, ಆರ್.ಎಸ್.ಎಸ್. ನ ರಾಜಕೀಯ ಮುಖವಾದ ಬಿಜೆಪಿಯ ಮುಖಂಡ, ಗುಜರಾತ್ ನಲ್ಲಿ ಸಾವಿರಾರು ಮಂದಿ ಕೋಮುಗಲಭೆಯಲ್ಲಿ ಕೊಲೆಯಾಗುತ್ತಿದ್ದಾಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಇಂದು ನಮ್ಮ ದೇಶದ ಪ್ರಧಾನ ಮಂತ್ರಿಯಾಗಿದ್ದಾರೆ.

ಭಾರತ, ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ದೇಶ. ಇಂಥ ದೇಶದ ಅತ್ಯುನ್ನತ ಅಧಿಕಾರ ಸ್ಥಾನವಾದ ಪ್ರಧಾನಿ ಪಟ್ಟಕ್ಕೆ ಏರುವುದು ಎಂದರೆ, ಸಾಮಾನ್ಯ ವಿಷಯವೇನೂ ಅಲ್ಲ. ಬಡ ಕುಟುಂಬಕ್ಕೆ ಸೇರಿದ, ಚಹಾ ಮಾರುತ್ತಿದ್ದ ಮೋದಿ ಪ್ರಧಾನಿಯಾಗಿರುವುದು ಮಹತ್ತರವಾದ ಸಾಧನೆಯೇ ಸರಿ. ಇದಕ್ಕಾಗಿ ಮೋದಿಯನ್ನು ಅಭಿನಂದಿಸಲೇಬೇಕು.

ಮೋದಿ ಎತ್ತರಕ್ಕೇರಿದ್ದಾರೆ, ನಿಜ. ಆದರೆ ಹೇಗೆ ಈ ಎತ್ತರಕ್ಕೇರಿದ್ದಾರೆ ? ಯಾಕೆ ಈ ಎತ್ತರಕ್ಕೇರಿದ್ದಾರೆ ? ಎತ್ತರಕ್ಕೇರಿಸಿದವರು ಯಾರು ? ಅವರ್ಯಾಕೆ ಮೋದಿಯವರನ್ನು ಈ ಎತ್ತರಕ್ಕೇರಿಸಿದ್ದಾರೆ ಎಂಬಿತ್ಯಾದಿ ವಿಷಯಗಳೂ ಸ್ಪಷ್ಟವಾಗಬೇಕು, ಚರ್ಚೆಯಾಗಬೇಕು.

ನಮ್ಮದು ಪ್ರಜಾಪ್ರಭುತ್ವ ದೇಶ. ಪ್ರಜಾಪ್ರಭುತ್ವ ದೇಶವಾದರೂ, ಪ್ರಜಾಪ್ರಭುತ್ವಕ್ಕೆ ಆದರ್ಶವಾಗುವಂತೆ, ಮಾದರಿಯಾಗುವ ರೀತಿಯಲ್ಲಿ, ಇಲ್ಲಿ ಚುನಾವಣೆಗಳು ನಡೆದುದು ಇಲ್ಲವೇ ಇಲ್ಲ ಎನ್ನಬಹುದು. ಹಣ, ಹೆಂಡ, ಟಿವಿ, ಬಟ್ಟೆ ಇತ್ಯಾದಿ ಏನೆಲ್ಲಾ ಸಾಧ್ಯವೋ, ಅವುಗಳನ್ನೆಲ್ಲ ಮತದಾರರಿಗೆ ವಿತರಿಸಿ, ಆಸೆ-ಅಮಿಷಗಳನ್ನೊಡ್ಡಿ, ಭ್ರಷ್ಟರನ್ನಾಗಿಸಿ ಮತಗಳನ್ನು ಖರೀದಿಸಿ ಚುನಾವಣಾ ಕಣದಲ್ಲಿದ್ದ ಬಲಿಷ್ಟ ಪಕ್ಷಗಳು ಮತ್ತು ಅಭ್ಯರ್ಥಿಗಳೇ ಸಂಸದರು, ಶಾಸಕರು ಆಗುತ್ತಿರುವ ಅವ್ಯವಸ್ಥೆ ದೇಶದಲ್ಲಿದೆ.

ದೇಶವನ್ನು ಬಹುಕಾಲ ಆಳಿದ ಕಾಂಗ್ರೆಸ್ ಪಕ್ಷಕ್ಕಾಗಲೀ, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕಾಗಲೀ, ಅಲ್ಪ ಕಾಲದ ಆಡಳಿತ ನಡೆಸಿದ ಬಿಜೆಪಿ ನೇತೃತ್ವದ ಎನ್ಡಿಎಗಾಗಲಿ, ತೃತಿಯ ಶಕ್ತಿಗಳಿಗಾಗಲಿ ಭಾರತದ ಮತದಾರರನ್ನು (ಈ ಮಾತು ಪ್ರಜ್ಞಾವಂತ ಮತ್ತು ಪ್ರಬುದ್ಧ ಮತದಾರರಿಗೆ ಅನ್ವಯವಾಗುವುದಿಲ್ಲ) ಪ್ರಜ್ಞಾವಂತರನ್ನಾಗಿ, ಪ್ರಬುದ್ದರನ್ನಾಗಿ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ. ರಾಜಕೀಯ ಪಕ್ಷಗಳು ಸಹ ಪ್ರಜೆಗಳನ್ನು ಪ್ರಜ್ಞಾವಂತರನ್ನಾಗಿ ಮಾಡಬೇಕೆಂಬ ಕಾಳಜಿ, ಕಳಕಳಿ, ಆಸಕ್ತಿಯಿಂದ ಪರಿಣಾಮಕಾರಿಯಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡದ್ದಾಗಲಿ, ಯೋಜನೆಗಳನ್ನು ರೂಪಿಸಿದ್ದಾಗಲಿ ಇಲ್ಲವೇ ಇಲ್ಲ.

ಹೀಗಾಗಿಯೇ ಇಂದು ಕೂಡಾ ದೊಡ್ಡ ಸಂಖ್ಯೆಯ ಮತದಾರರಿಗೆ ಸಂವಿಧಾನದ, ಕಾನೂನಿನ ಸ್ಪಷ್ಟ ಅರಿವಿಲ್ಲ. ಸ್ವಾಭಿಮಾನದ ಕೊರತೆ, ಗುಲಾಮಗಿರಿ, ಜೀತದ ಮಾದರಿಯ ಬದುಕು ಅವರಾದಾಗಿದೆ. ಮುಗ್ಧತೆ, ಅಮಾಯಕತೆ ಮತ್ತು ಬಡತನದ ಕಾರಣಕ್ಕೂ ವಿಚಾರ ವಿಮರ್ಶೆ ಮಾಡುವ ಶಕ್ತಿ ಇಲ್ಲದೆ ಮತದಾರ ಮತದಾನ ಮಾಡುವ ಶೋಚನೀಯ ಪರಿಸ್ಥಿತಿ ಇಂದು ನೆಲೆನಿಂತಿದೆ.

ಭ್ರಷ್ಟ ಮತ್ತು ದುಷ್ಟ ರಾಜಕೀಯ ಪಕ್ಷಗಳಿಗೂ, ರಾಜಕಾರಣಿಗಳಿಗೂ ಬೇಕಿರುವುದು ಸಹ ಇದೇ ಅವ್ಯವಸ್ಥೆ. ಹಾಗಾಗಿ ದೇಶದ ಚುನಾವಣಾ ವ್ಯವಸ್ಥೆಯೇ ಅವ್ಯವಸ್ಥೆಯಿಂದ ಕೂಡಿದೆ. ಚುನಾವಣಾ ವ್ಯವಸ್ಥೆಯೇ ಪ್ರಜಾಪ್ರಭುತ್ವದ ಅಡಿಗಲ್ಲು ಆಗಿರುವಾಗ, ಈ ವ್ಯವಸ್ಥೆಯೇ ಅವ್ಯವಸ್ಥೆಯಿಂದ ಕೂಡಿರುವಾಗ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ ? ಈ
ಅವ್ಯವಸ್ಥೆಯನ್ನು, ಇಂಥ ಅವ್ಯವಸ್ಥೆಯಲ್ಲಿ ಆಡಳಿತಕ್ಕೆ ಬಂದ ವ್ಯಕ್ತಿಗಳನ್ನು, ಪಕ್ಷಗಳನ್ನು ಕೊಂಡಾಡಲು, ಅಭಿಮಾನಪಡಲು, ಹೆಮ್ಮೆಪಡಲು ಸಾಧ್ಯವೇ ಎಂದರೆ, ಇಲ್ಲ ಎಂಬುದೇ ಇಂದಿನ ಖಚಿತ ಉತ್ತರವಾಗಿದೆ.

ಇಂಥ ಶೋಚನೀಯ ಸಂದರ್ಭದಲ್ಲಿಯೇ, ಕೆಟ್ಟು ಹೋಗುತ್ತಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟೂ ಕೆಡಿಸುವ ಪ್ರಕ್ರಿಯೆಯ ಭಾಗವಾಗಿ, ಒಂದು ಹೆಜ್ಜೆ ಮುಂದೆ ಹೋಗಿ ಭಾರತೀಯ ಜನತಾ ಪಾರ್ಟಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿತು. ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಸಹ ತಮಗೆ ಮತಯಾಚಿಸದೆ, ಮೋದಿಗೆ ಮತ ನೀಡುವಂತೆ ವಿನಂತಿಸುವ ಮೂಲಕ ಪರೋಕ್ಷವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಧ್ಯಕ್ಷೀಯ ಮಾದರಿ
ವ್ಯವಸ್ಥೆಯನ್ನಾಗಿ ಪರಿವರ್ತಿಸುವ ಮೂಲಕ ಸಂವಿಧಾನಕ್ಕೆ ಅಪಚಾರವೆಸಗಿತು. ಚುನಾವಣೆಗೆ ಮೊದಲು ಸಂವಿಧಾನಕ್ಕೆ ಅಪಚಾರವೆಸಗಿದ ಮೋದಿ, ಚುನಾವಣೆಯಲ್ಲಿ ಬಹುಮತ ಪಡೆದು ಪ್ರಧಾನಿಯಾಗಿ ನಿಯೋಜಿತಗೊಂಡ ಬಳಿಕ ಸಂವಿಧಾನವನ್ನು ಅಭಿನಂದಿಸಿದ್ದು ವ್ಯವಸ್ಥೆಯ ವ್ಯಂಗ್ಯವೇ ಸರಿ.

ಗೋದ್ರಾ ದುರಂತದಲ್ಲಿ ಕರಸೇವಕರು ಸತ್ತ ಬಳಿಕ, ಗುಜರಾತ್ನಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಮಹಿಳೆಯರು, ಮಕ್ಕಳೆಂದು ನೋಡದೆ ಸಾವಿರಾರು ಮಂದಿ ಮುಸ್ಲೀಮರನ್ನು ಹತ್ಯೆಗೈದರು. ಗರ್ಭಿಣಿ ಮಹಿಳೆಯ ಹೊಟ್ಟೆಯನ್ನು ಸೀಳಿ ಭ್ರೂಣವನ್ನು ತ್ರಿಶೂಲದಲ್ಲಿ ಚುಚ್ಚಿಕೊಂಡು ಕೇಕೆ ಹಾಕುತ್ತಾ ಮೆರವಣಿಗೆ ಮಾಡುವಷ್ಟು ಕ್ರೂರ ಹಿಂಸಾಚಾರವನ್ನು ಗುಜರಾತ್ ನಲ್ಲಿ ಪ್ರದರ್ಶಿಸಿದರು.

ರಾಜ್ಯವೊಂದರ ಮುಖ್ಯಸ್ಥ ಮುಖ್ಯಮಂತ್ರಿ. ಗುಜರಾತ್ ಮುಖ್ಯಮಂತ್ರಿಯಾಗಿದ್ದವರು ನರೇಂದ್ರ ಮೋದಿ. ರಾಜ್ಯದಲ್ಲಿ ನಡೆಯುತ್ತಿದ್ದ ಕ್ರೂರ ಕೋಮುಗಲಭೆಯನ್ನು ಪರಿಣಾಮಕಾರಿಯಾಗಿ ತಡೆಯಲು ಮೋದಿಗೆ ಸಾಧ್ಯವಾಗಲೇ ಇಲ್ಲ. ತಡೆಯಲು ಸಾಧ್ಯವಾಗಲಿಲ್ಲ ಎನ್ನುವುದಕ್ಕಿಂತಲೂ ಮುಖ್ಯಮಂತ್ರಿಯಂಥ ಜವಾಬ್ದಾರಿಯುತ ಸ್ಥಾನದಲ್ಲಿರುವ ಮೋದಿಯ ಪರೋಕ್ಷ ಬೆಂಬಲದಿಂದಲೇ ಕೋಮುಗಲಭೆ ನಡೆಯಿತು ಎನ್ನುವ ಗಂಭೀರ ಆರೋಪ ಇಲ್ಲಿ ವ್ಯಕ್ತವಾಯಿತು.

ಸಹಜವಾಗಿಯೇ ಗುಜರಾತ್ ಕೋಮುಗಲಭೆ ಮತ್ತು ಮುಖ್ಯಮಂತ್ರಿ ನರೇಂದ್ರ ಮೋದಿ ವ್ಯಾಪಕ ಚರ್ಚೆಗೀಡಾದರು. ಸಂಘ ಪರಿವಾರ ಮತ್ತು ಬಿಜೆಪಿ ಹೊರತುಪಡಿಸಿ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳೂ ಮೋದಿ ನೇತೃತ್ವದ ಸರಕಾರವನ್ನು ಖಂಡಿಸಿದರು. ಕೋಮುವಾದ ವಿರೋಧಿ ಸಂಘಟನೆಗಳು, ಮಾನವಹಕ್ಕು ಹೋರಾಟಗಾರರು ಬೀದಿಗಿಳಿದು ಮೋದಿ ವರ್ತನೆಗಳ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದರು. ಇಂದಿಗೂ ಈ ಗಲಭೆಗೆ ಸಂಬಂಧಿಸಿದ ಅನೇಕ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ.

ಗುಜರಾತ್ ಕೋಮುಗಲಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೊಲೆಯಾಗಿ ಹೋದವರು ಮುಸ್ಲೀಮರು. ಈ ಸಾಮೂಹಿಕ ಹತ್ಯಾಕಾಂಡವನ್ನು ಸಮರ್ಥವಾಗಿ ತಡೆಗಟ್ಟದೆ ನಡೆಯಬಿಟ್ಟವರೆಂಬ ಅಪಾದನೆಗೆ ಒಳಗಾದವರು ಮುಖ್ಯಮಂತ್ರಿ ನರೇಂದ್ರ ಮೋದಿ. ಈ ಹಿಂಸಾ ಕೃತ್ಯಗಳ ಮೂಲಕ ಅಲ್ಪಸಂಖ್ಯಾತರ ಮನದಲ್ಲಿ, ಜೀವಪರ, ಮನುಷ್ಯಪರ ಜನರ ನಡುವೆ ಹೇಗೆ ಮೋದಿ ಖಳ ನಾಯಕರಾದರೋ, ಹಾಗೆಯೇ ಮುಸ್ಲೀಮ್ ಧ್ವೇಷವನ್ನೇ ಉಸಿರಾಡುವ ಸಂಘ ಪರಿವಾರದ ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳ ಮನದಲ್ಲಿ ಮೋದಿ ಹೀರೋ ಆಗಿಬಿಟ್ಟರು.

ಅಯೋಧ್ಯೆ ಮಸೀದಿ ಧ್ವಂಸ ಕೃತ್ಯದ ಬಳಿಕ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಹೇಗೆ ಹೀರೋ ಆದರೋ, ಅದಕ್ಕಿಂತಲೂ ದೊಡ್ಡಮಟ್ಟಿಗೆ ಹಿಂದುತ್ವವಾದಿಗಳಿಗೆ ಮೋದಿ ಆಶಾಕಿರಣವಾದರು, ಸ್ಪೂರ್ತಿಯ ಚಿಲುಮೆಯಾದರು. ಇದೇ ಹೊತ್ತಲ್ಲಿ, ಜಿನ್ನಾ ಬಗ್ಗೆ ಮೆಚ್ಚುಗೆಯ ಮಾತನ್ನಾಡುವ ಮೂಲಕ ಸಂಘ ಪರಿವರದ ಮಧ್ಯೆ ಅಡ್ವಾಣಿ ಝೀರೋ ಆಗಿಬಿಟ್ಟಿದ್ದರು. ಗುಜರಾತ್ ಹತ್ಯಾಕಾಂಡ ನಡೆಯುವುದಕ್ಕಿಂತ ಮೊದಲು ಮೋದಿ ಹೀರೋ ಆಗದೆ, ಬಳಿಕವೇ ಹೀರೋ ಆಗಿದ್ದು ಎನ್ನುವುದನ್ನು, ಜಿನ್ನಾ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ ನಂತರವೇ ಅಡ್ವಾಣಿ ಝೀರೋ ಆಗಿದ್ದು ಎಂಬ ವಾಸ್ತವಾಂಶಗಳನ್ನು ನಿರಾಕರಿಸಲು ಸಾಧ್ಯವೇ ?

ಮುಸ್ಲೀಮರ ಮಾರಣಹೋಮದೊಂದಿಗೆ ಮೋದಿ ಶಕ್ತಿಯಾಗಿ ಮೂಡಿಬಂದರು. ಆದರೆ ಈ ವಿಷಯವನ್ನು ಬಹಿರಂಗವಾಗಿ ಮುಂದಿಟ್ಟುಕೊಂಡು ಚುನಾವಣೆಗೆ ಹೋಗಲು ಸಾಧ್ಯವಿಲ್ಲವಲ್ಲ ? ಹಾಗಾಗಿ ಆ ಮುಖಕ್ಕೆ ಅಭಿವೃದ್ಧಿ ಎಂಬ ಬಟ್ಟೆ ತೊಡಿಸಿ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಅತ್ಯಂತ ವ್ಯವಸ್ಥಿತವಾಗಿ ಪ್ರಚುರಪಡಿಸಲಾಯಿತು. ಸಂಘ ಶಕ್ತಿ ಇದರಲ್ಲಿ ಯಶಸ್ವಿಯೂ ಆಯಿತು.

ಒಂದು ಕಡೆ ಹಾಗಾದರೆ, ಇನ್ನೊಂದು ಕಡೆ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ, ಸರಣಿ ಭ್ರಷ್ಟಚಾರದ ಹಗರಣಗಳು, ಆಧಾರ್ ಹಿಂಸೆ, ಕಾಂಗ್ರೆಸ್ ನಾಯಕರ ದುರಹಂಕಾರದ ವರ್ತನೆಗಳು, ಎಡಬಿಡಂಗಿತನದ ನಡವಳಿಕೆಗಳು, ಹಾಸ್ಯಾಸ್ಪದ ಮತ್ತು ಬಾಲಿಶ ಹೇಳಿಕೆಗಳು, ಮನಮೋಹನ್ ಸಿಂಘರ ಮೌನ, ರಾಹುಲ್ ಗಾಂಧಿಯನ್ನು ನಾಯಕನನ್ನಾಗಿ ಮಾಡುವ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರ ನಕಲಿ ಪ್ರಹಸನಗಳು ಇತ್ಯಾದಿಗಳನೇಕ ವಿಷಯಗಳು ಕಾಂಗ್ರೆಸ್ ಮತ್ತು ಕಾಂಗ್ರೆಸ್ ಸರಕಾರದ ವಿರುದ್ಧ ಕೆಲಸ ಮಾಡಿದವು.

ಮೋದಿಯ ಆಕ್ರೋಶಭರಿತ, ಭಾವಾವೇಶದ, ಆಕರ್ಷಕ ವಾಗ್ಪಟುತ್ವದ ಎದುರು ರಾಹುಲ್ ಗಾಂಧಿಯ ನೀರಸ, ಸಪ್ಪೆ, ವಿಚಾರಗಳೇ ಇಲ್ಲದ ಹಳಸಲು ಭಾಷಣ, ಸಂಘ ಪರಿವಾರದ ಸಂಘಟಿತ, ತಳ ಮಟ್ಟದ ಕಾರ್ಯಾಚರಣೆಯ ಮುಂದೆ, ಪಕ್ಷದ ಮೇಲೆ ಅಭಿಮಾನವೇ ಇಲ್ಲದ ಕಾಂಗ್ರೆಸ್ ನಾಯಕರ ಹಾಗೂ ಕಾರ್ಯಕರ್ತರ ಉದಾಸೀನದ ಚಟುವಟಿಕೆ ಇತ್ಯಾದಿಗಳಿಂದಾಗಿ ಮತದಾರರು ಮೋದಿಯ ಮೋಡಿಗೆ ಒಳಗಾದರು. ಬಿಜೆಪಿ ಸಹಿತ ‘ಸಂಘ’ ಪರಿವಾರ ಸೃಷ್ಟಿಸಿದ ಮೋದಿಯ ಗುಜರಾತ್ ಮಾದರಿ ಅಭಿವೃದ್ಧಿ ಎಂಬ ಭ್ರಮೆಯನ್ನು ವಾಸ್ತವ ಗೊತ್ತಿದ್ದವರು ಮತ್ತು ಗೊತ್ತಿಲ್ಲದವರು ಎರಡೂ ವರ್ಗದ ಜನ ನಂಬಿದರು.

ಮೋದಿ ಅಭಿಮಾನಿಗಳಿಗೆ ಗುಜರಾತ್ ಮಾದರಿ ಅಭಿವೃದ್ಧಿ ಎಂದರೆ ವಾಸ್ತವವಾಗಿ ಏನೆಂದು ಚೆನ್ನಾಗಿಯೇ ಗೊತ್ತಿದೆ. ಅವರೀಗಾಗಲೇ ಹೇಳತೊಡಗಿದ್ದಾರೆ: ಇನ್ನು ಮುಸ್ಲೀಮರ ಕಥೆ ಮುಗಿದ ಹಾಗೆಯೇ.., ಎಸ್ ಸಿ/ಎಸ್ ಟಿ, ಒಬಿಸಿ, ಅಲ್ಪಸಂಖ್ಯಾತ ಮೀಸಲಾತಿ ಇನ್ನು ಹೋಗುತ್ತೆ.., 370ನೇ ವಿಧಿ ರದ್ದಾಗಿಬಿಡುತ್ತೆ, ಏಕರೂಪ ನಾಗರಿಕ ಸಂಹಿತೆ ಜ್ಯಾರಿಯಾಗುತ್ತೆ, ಪಾಕಿಸ್ಥಾನ ಮತ್ತು ಚೀನಾ ಜೊತೆ ಯುದ್ಧ ನಡೆಸಿ ಆ ಎರಡೂ ಶತ್ರುದೇಶಗಳನ್ನು ಸರ್ವನಾಶ ಮಾಡಿಬಿಡ್ತಾರೆ ಎಂಬಿತ್ಯಾದಿಯಾಗಿ ಹತ್ತು ಹಲವಾರು ಕನಸುಗಳನ್ನು, ಆಶಯಗಳನ್ನು ಹೊರಗಡೆ ಹಾಕತೊಡಗಿದ್ದಾರೆ.

ಗುಜರಾತ್ ಮಾದರಿ ಅಭಿವೃದ್ಧಿಯ ನಿಜವಾದ ಸತ್ಯ ತಿಳಿಯದಿರುವ ಮತ್ತು ಕಾಂಗ್ರೆಸ್ ದುರಾಡಳಿತದಿಂದ ರೋಸಿ ಹೋದ ಮತದಾರರು, ಇನ್ನಾದರೂ ದಿನ ಬಳಕೆ ವಸ್ತುಗಳ ಬೆಲೆ ಇಳಿಕೆಯಾಗಬಹುದು, ಪೆಟ್ರೋಲ್, ಡೀಸಿಲ್ ದರ ಕಡಿಮೆ ಆಗಬಹುದು, ಆಧಾರ್ ಹಿಂಸೆ ಇನ್ನು ಉದ್ಭವವಾಗದು, ಎಲ್ಲರಿಗೂ ಪಡಿತರ ಸಿಗಬಹುದು, ಭ್ರಷ್ಟಾಚಾರದ ಹಗರಣಗಳು ನಡೆಯಲಾರದು ಹೀಗೆ ಅನೇಕ ಬಯಕೆಗಳ ಮಂಡಿಗೆಯನ್ನು ಮೆಲ್ಲತೊಡಗಿದ್ದಾರೆ.

ಒಂದೆಡೆ ಯಾವುದೇ ಸದುದ್ಧೇಶದ ಗುರಿ, ಉದ್ಧೇಶಗಳಿಲ್ಲದ ಕಾಂಗ್ರೆಸ್ ಜನಪ್ರತಿನಿಧಿಗಳು ಮತ್ತು ನಾಯಕರು ಹಾಗೂ ಇವರ ದುರಾಡಳಿತ. ಇನ್ನೊಂದೆಡೆ ಅತರಂಗದಲ್ಲಿ ನಕರಾತ್ಮಕವಾದರೂ ಬಹಿರಂಗಕ್ಕೆ ಸಕಾರಾತ್ಮಕವಾಗಿರುವ ದೂರದೃಷ್ಟಿಯಿಂದ ಕೂಡಿರುವ ಧ್ಯೇಯೋದ್ಧೇಶಗಳನ್ನು ಹೊಂದಿರುವ ಸಂಘ ಪರಿವಾರ ಮತ್ತು ಇವರ ಶಿಸ್ತುಬದ್ಧವಾದ ಸಂಘಟನಾ ಕೌಶಲ್ಯ. ಮತ್ತೊಂದೆಡೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ಎಂದು ತೋರಿಸಲು ಕೊಡಲು ಶಕ್ತವಾಗದ ಎನ್.ಜಿ.ಓ. ಮಾದರಿಯ ಇತರ ಪಕ್ಷಗಳು. ಇವುಗಳ ನಡುವೆ ಭ್ರಮನಿರಸನಗೊಂಡ ಮತದಾರರು ಮೋದಿ ಎಂಬ ಭ್ರಮೆಯನ್ನು ನಂಬಿದ್ದಾರೆ.

ಕೊನೆಗೊಂದು ಮಾತು: ಲೋಕಸಭೆಯ ಸಂಸದರ ಸಂಖ್ಯಾಬಲವೆಂಬ ರಾಜಕೀಯದಾಟದಲ್ಲಿ ಬಿಜೆಪಿ ಬಹುಮತ ಸಾಧಿಸಿರಬಹುದು. ಮೋದಿಯನ್ನೇ ಮುಂದಿಟ್ಟು ಬಿಜೆಪಿ ಚುನಾವಣೆಗಿಳಿದ ಕಾರಣ ಒಂದು ಪರಮ ಸತ್ಯವನ್ನು ಬಿಜೆಪಿ ನೆನಪಿಟ್ಟುಕೊಳ್ಳಬೇಕಾಗುತ್ತದೆ. ಮೋದಿಗೆ ದೇಶದ ಕೇವಲ 31 ಶೇಕಡಾ ಮತದಾರರಷ್ಟೇ ಮತ ಹಾಕಿದ್ದಾರೆ. ಉಳಿದ 69 ಶೇಕಡಾ ಮತದಾರರು ಮೋದಿಯನ್ನು ಒಪ್ಪಿಲ್ಲ. ಮಾತ್ರವಲ್ಲ, ಮೋದಿ ಎಂಬ ಭ್ರಮೆಗೆ ಒಳಗಾಗಿಲ್ಲ ! – ಶ್ರೀರಾಮ ದಿವಾಣ.

ಉಡುಪಿ: ಊಟಕ್ಕೆ ಕುಳಿತಿದ್ದವರನ್ನು ಪಂಕ್ತಿಯಿಂದ ಎಬ್ಬಿಸುವ ಕೆಲಸವನ್ನು ಮನುಷ್ಯರಾದವರು ಮಾಡಲು ಸಾಧ್ಯವಿಲ್ಲ ಅದು ಸಂಸ್ಕೃತಿಯೂ ಅಲ್ಲ. ಪಂಕ್ತಿಯಿಂದ ಎಬ್ಬಿಸುವ ಮೂಲಕ ಉಡುಪಿಯ ಮಠ ಸಂಸ್ಕೃತಿ ಜನರು ಶೂದ್ರರು ಕೀಳು ಜನರು ಎಂಬುದನ್ನು ನೇರವಾಗಿ ಹೇಳಿದ್ದಾರೆ. ಇದನ್ನು ಶೂದ್ರರು ಇನ್ನಾದರೂ ಅರ್ಥಮಾಡಿಕೊಳ್ಳಬೇಕು, ನಮ್ಮದು ಮಠ ಸಂಸ್ಕೃತಿ ಅಲ್ಲ. ದೈವಗಳ, ಗರೋಡಿಗಳ ಸಂಸ್ಕೃತಿ ನಮ್ಮದು. ಬ್ರಾಹ್ಮಣರ ಸಂಸ್ಕಾರ ನಮಗೆ ಬೇಕಾಗಿಲ್ಲ. ನಮ್ಮ ಸಂಸ್ಕಾರ ಬ್ರಾಹ್ಮಣರಿಗಿಲ್ಲ. ಎಲ್ಲದಕ್ಕೂ ಮೊದಲು ಶೂದ್ರರು ಮಾನಸಿಕ ಗುಲಾಮಗಿರಿಯಿಂದ ಹೊರಗೆ ಬರಬೇಕು, ಹೊರಗೆ ಬಾರದ ಹೊರತು ಉದ್ಧಾರವಾಗಲು ಸಾಧ್ಯವಿಲ್ಲ ಎಂದು ಸಾಮಾಜಿಕ ಹೋರಾಟಗಾರ್ತಿ, ಸಾಹಿತಿ ಅತ್ರಾಡಿ ಅಮೃತಾ ಶೆಟ್ಟಿ ಹೇಳಿದರು.

ಪಂಕ್ತಿಭೇದ ಮತ್ತು ಮಡ ಮಡೆಸ್ನಾನಗಳನ್ನು ನಿಷೇಧಿಸಬೇಕೆಂದು ರಾಜ್ಯ ಸರಕಾರವನ್ನು ಆಗ್ರಹಿಸಿ ಸಿಪಿಐಎಂ ಪಕ್ಷವು ಉಡುಪಿ ಸರ್ವಿಸ್ ಬಸ್ ನಿಲ್ದಾಣ ಪರಿಸರದಲ್ಲಿ ಮೇ.5ರಿಂದ ಆರಂಭಿಸಿದ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹದ ಮೂರನೇ ದಿನವಾದ ಮೇ.7ರಂದು ಅವರು ಮಾತನಾಡುತ್ತಿದ್ದರು.

ಜಾತಿಯನ್ನು ಸೃಷ್ಟಿಸಿದವರು ಬ್ರಾಹ್ಮಣರು. ಹಿಂದೂ ಎನ್ನುವುದು ಇಂದು ಒಂದು ರಾಜಕೀಯ ನಾಣ್ಯವಾಗಿ ಬಳಕೆಯಾಗುತ್ತಿದೆ. ಇಲ್ಲದೇ ಇದ್ದಲ್ಲಿ ವನಿತಾ ಶೆಟ್ಟಿಯವರನ್ನು ಊಟದ ಪಂಕ್ತಿಯಿಂದ ಎಬ್ಬಿಸಿದ ಬಗ್ಗೆ ಹಿಂದೂ ಸಂಘಟನೆಗಳು ಯಾಕೆ ಧ್ವನಿ ಎತ್ತಿಲ್ಲ ಎಂದು ಪ್ರಶ್ನಿಸಿದ ಅಮೃತಾ ಶೆಟ್ಟಿ, ಗುಡಿ ನಿರ್ಮಿಸುವುದರಿಂದ ಹಿಡಿದು ದೇವಸ್ಥಾನದ ಸ್ವಚ್ಛತೆ ಸಹಿತ ಪ್ರತಿಯೊಂದು ಕೆಲಸಗಳನ್ನೂ ಮಾಡುವುದು ಅಕ್ಕಿ, ಮಟ್ಟು ಗುಳ್ಳ ಬೆಳೆಸುವುದು ಶೂದ್ರ ರೈತರು. ಶೂದ್ರ ಸಮುದಾಯದ ಜನರ ಶ್ರಮ ಇಲ್ಲದಿರುತ್ತಿದ್ದಲ್ಲಿ ದೇವಸ್ಥಾನಗಳೇ ಇರುತ್ತಿರಲಿಲ್ಲ. ಆದರೆ ಇಂದು ಮಠದವರಿಗೆ ಈ ಶೂದ್ರರು ಊಟಕ್ಕೆ ಮಾತ್ರ ಬೇಕಾಗಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ದಲಿತರ ಕಾಲನಿಗಳಿಗೆ ಭೇಟಿ ಕೊಡಲು ಬಂದಾಗ ದಲಿತರು, ನಿಮ್ಮ ದೈವ ಯಾವುದು, ನಿಮ್ಮ ಕುಲ ದೇವರು ಯಾರು ಎಂದೇನಾದರೂ ಕೇಳಿದರಾ ಎಂದು ಪೇಜಾವರ ಸ್ವಾಮೀಜಿಗಳಿಗೆ ಬಹಿರಂಗವಾಗಿಯೇ ಪ್ರಶ್ನಿಸಿದ ಅತ್ರಾಡಿ ಅಮೃತಾ ಶೆಟ್ಟಿ, ಪೇಜಾವರ ಸ್ವಾಮೀಜಿಗಳು ಮೊತ್ತ ಮೊದಲು ತಮ್ಮದೇ ಮಠದಲ್ಲಿ ತುಂಬಿಕೊಂಡಿರುವ ಕೊಳಕುಗಳನ್ನು ಸರ್ಫ್ ಹಾಕಿ ತೊಳೆಯಬೇಕೆಂದು ವ್ಯಂಗ್ಯವಾಡಿದರು.

ಧರಣಿಯನ್ನುದ್ಧೇಶಿಸಿ ಮಾತನಾಡಿದ ಬೆಳ್ತಂಗಡಿಯ ನ್ಯಾಯವಾದಿ ಬಿ.ಎಂ.ಭಟ್ ಅವರು, ಉಡುಪಿ ಮಠದಲ್ಲಿ ವನಿತಾ ಶೆಟ್ಟಿಯವರನ್ನು ಊಟದ ಪಂಕ್ತಿಯಿಂದ ಎಬ್ಬಿಸಿದ್ದು ಹಿಂದೂ ವಿರೋಧಿ ಕ್ರಮ. ಹಾಗಾದರೆ ಇಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯೂ ಊಟಕ್ಕೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದಾಯಿತು. ಬಾಂಗ್ಲಾ ವಲಸಿಗರನ್ನು ಓಡಿಸಬೇಕು ಎನ್ನುವ ಸಂಘ ಪರಿವಾರ ಪಂಕ್ತಿಯಿಂದ ಎಬ್ಬಿಸಿದವರನ್ನು ಎಲ್ಲಿಗೆ ಓಡಿಸುತ್ತಾರೆಯೇ ಎಂದು ಸವಾಲೆಸೆದರು.

ಹಿಂದುತ್ವವಾದಿಗಳಲ್ಲಿ ಮನುಷ್ಯತ್ವವಿಲ್ಲ: ಬಿ.ಎಂ.ಭಟ್

ಜಾತಿ ನಾಶವಾಗದ ವಿನಹಾ ದೇಶ ಉದ್ಧಾರವಾಗದು ಎಂದು ಹೇಳಿದ ಸಿಪಿಐಎಂ ಮುಖಂಡರೂ ಆದ ಬಿ.ಎಂ.ಭಟ್, ಸೌಜನ್ಯಾ ಅತ್ಯಾಚಾರಕ್ಕೀಡಾಗಿ ಕೊಲೆಯಾದಾಗ, ವನಿತಾರನ್ನು ಊಟದ ಪಂಕ್ತಿಯಿಂದ ಎಬ್ಬಿಸಿದಾಗ ಹಿಂದುತ್ವವಾದಿಗಳಿಗೆ ನೋವಾಗಿಲ್ಲವೆಂದದಾರೆ, ಇವರಲ್ಲಿ ನಯಾಪೈಸೆಯ ಮನುಷ್ಯತ್ವವೇ ಇಲ್ಲವೆಂದರ್ಥ ಎಂದು ತಿಳಿಸಿದರು.

ಕವಯತ್ರಿ ಸುಕನ್ಯಾ ಕಳಸ, ಕುಂದಾಪುರದ ಸಿಐಟಿಯು ನಾಯಕ ಸುರೇಶ್ ಕಲಾಗಾರ್, ಸಿಪಿಐಎಂ ಮುಖಂಡರುಗಳಾದ ಕೆ.ಶಂಕರ್, ಪಿ.ವಿಶ್ವನಾಥ ರೈ, ಬಾಲಕೃಷ್ಣ ಶೆಟ್ಟಿ, ಈಶ್ವರಿ ಬೆಳ್ತಂಗಡಿ ಮುಂತಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.

# ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ತನಿಕೋಡು ಚೆಕ್ ಪೋಸ್ಟ್ ನಲ್ಲಿ ಜಾನಾವಾರು ಸಾಗಾಟ ಮಾಡುತ್ತಿದ್ದ ಮಂಗಳೂರು ಸಮೀಪದ ಜೋಕಟ್ಟೆಯ ಕಬೀರ್ (28) ಎಂಬವರನ್ನು ಗುಂಡು ಹೊಡೆದು ಕೊಲೆಗೈದ ಎಎನ್ಎಫ್ ಪೊಲೀಸ್ ಪೇದೆ ನವೀನ್ ನಾಯ್ಕ ಎಂಬವರಿಗೆ ಕಾರ್ಕಳ ವಿಧಾನಸಭೆಯ ಭಾರತೀಯ ಜನತಾ ಪಾರ್ಟಿಯ ಶಾಸಕ ವಿ.ಸುನಿಲ್ ಕುಮಾರ್ ಹಾಗೂ ಸಂಘ ಪರಿವಾರದ ಕೆಲವು ಮಂದಿ ನಾಯಕರು 50 ಸಾವಿರ ರು.ಗಳಿಂದ 50 ಲಕ್ಷ ರು.ಗಳವರೆಗೆ ನಗದು ಬಹುಮಾನ ಘೊಷಿಸಿದ್ದಾರೆ.

ಇದೊಂದು ಅತೀ ಕೆಟ್ಟ ಬೆಳವಣಿಗೆ. ಅಕ್ಷಮ್ಯ ಅಪರಾಧವೇ ಸರಿ. ಕೆಲವೊಂದು ಮುಸ್ಲಿಂ ಉಗ್ರಗಾಮಿ ಸಂಘಟನೆಗಳು ತಮ್ಮ ಶತ್ರುಗಳನ್ನು ಕೊಂದವರಿಗೆ ಬಹುಮಾನ ಘೋಷಿಸಿರುವುದು ಈ ಹಿಂದೆ ಪತ್ರಿಕೆಗಳಲ್ಲಿ ವರದಿಯಾದುದಿದೆ. ಅವುಗಳಾದರೋ ಅಧಿಕೃತವಾಗಿಯೇ ಉಗ್ರಗಾಮಿ ಸಂಘಟನೆಗಳು. ಇದೇ ಕಾರಣಕ್ಕೆ ಹಲವು ದೇಶಗಳು ಇಂಥ ಸಂಘಟನೆಗಳನ್ನು ನಿಷೇಧಿಸಿದ್ದು ಜಗಜ್ಜಾಹೀರು. ಆದರೆ, ಈ ಸಂಘ ಪರಿವಾರದ ಸಂಘಟನೆಗಳಿಗೇನಾಗಿದೆ ?

ತಮ್ಮದು ಸಾಂಸ್ಕೃತಿಕ ಸಂಘಟನೆ, ರಾಜಕೀಯ ಪಕ್ಷ ಎಂದೆಲ್ಲಾ ಘೋಷಿಸಿಕೊಂಡು ಕೊಲೆಗಡುಕನಿಗೆ ಬಹುಮಾನ ಪ್ರಕಟಿಸಿದರೆ, ಮುಸ್ಲೀಮ್ ಉಗ್ರ ಸಂಘಟನೆಗಳಿಗೂ, ಸಂಘ ಪರಿವಾರದ ಸಂಘಟನೆಗಳಿಗೂ ವ್ಯತ್ಯಾಸವಿಲ್ಲದಂತಾಗುತ್ತದೆ. ಮುಸ್ಲೀಮ್ ಉಗ್ರ ಸಂಘಟನೆಯ ಹಾದಿಯನ್ನೇ ಸಂಘ ಪರಿವಾರದ ಸಂಘಟನೆಗಳೂ ಹಿಡಿಯುತ್ತಿದೆ ಎಂದೇ ಭಾವಿಸಬೇಕಾಗುತ್ತದೆ. ಸಂಘ ಪರಿವಾರದ ಸಂಘಟನೆಗಳು ಮುಸ್ಲೀಮ್ ಧ್ವೇಷವನ್ನೇ ಉಸಿರಾಡುತ್ತಿರುವುದೇ ಇವರು ಹೀಗೆ ಹೇಳಲು ಕಾರಣವೆಂಬುದನ್ನು ಯಾರೂ ಬೇಕಾದರೂ ಅರ್ಥೈಸಿಕೊಳ್ಳಬಹುದು. ಆದರೆ, ಹೀಗೆ ಘೋಷಿಸುವುದು ಕಾನೂನು ಬಾಹಿರ, ಅನೈತಿಕ.

‘ಕಬೀರ್ ನನ್ನು ಕೊಲೆಗೈದ ನವೀನ್ ನಾಯ್ಕನಿಗೆ ಧನ ಸಹಾಯದ ಜೊತೆಗೆ, ಇಂಥ ಘಟನೆಗಳು ಇನ್ನಷ್ಟೂ ನಡೆಯಬೇಕು, ನವೀನ್ ನಾಯ್ಕನಂಥವರು ನೂರಾರು ಜನ ತಯಾರಾಗಬೇಕು’ ಎಂದೂ ಶಾಸಕ ಸುನಿಲ್ಕುಮಾರ್ ತನ್ನ ಭಾಷಣದಲ್ಲಿ ಘೋಷಿಸಿದ್ದರು. ಇದು ಅಪರಾಧ ಕೃತ್ಯಕ್ಕೆ ಬಹಿರಂಗವಾಗಿಯೇ ಬೆಂಬಲ, ಪ್ರೋತ್ಸಾಹ, ಪ್ರಚೋದನೆ ಕೊಟ್ಟಂತೆ. ಕೊಲೆ ಮಾಡುವುದು ಎಷ್ಟು ಅಪರಾಧವೋ, ಕೊಲೆಗೆ ಪ್ರೋತ್ಸಾಹ, ಪ್ರಚೋದನೆ, ಕೊಲೆಗಾರನಿಗೆ ಬೆಂಬಲ ನೀಡುವುದು ಸಹ ಅಷ್ಟೇ ದೊಡ್ಡ ಅಪರಾಧ. ಒಂದು ರೀತಿಯಲ್ಲಿ ಇದು ಇಂಥದ್ದೇ ಮುಂದಿನ ಕೊಲೆಗಳಿಗೆ ಸುಪಾರಿ ಕೊಟ್ಟಂತೆ.

ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸುವ ಸಂದರ್ಭದಲ್ಲಿ ಸಹ ಯಾವುದೇ ದೇಶಗಳೂ ಕೂಡಾ ಭಯೋತ್ಪಾದಕರ ಹತ್ಯೆಗೆ ಬಹಿರಂಗವಾಗಿ ಕರೆ ಕೊಡುವುದಿಲ್ಲ. ಬದಲಾಗಿ ಭಯೋತ್ಪಾದಕರ ಭಾವಚಿತ್ರವನ್ನು ಸಾರ್ವಜನಿಕಗೊಳಿಸುವುದರ ಜೊತೆಗೆ ಮಾಹಿತಿ ನೀಡಿದವರಿಗೆ ಲಕ್ಷಾಂತರ ರು.ಗಳ ಬಹುಮಾನ ಘೋಷಿಸುತ್ತವೆ. ನಕ್ಸಲೀಯ ಚಳುವಳಿಯಲ್ಲಿ ನಿರತರಾದವರ ಭಾವಚಿತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ, ಇವರ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಪ್ರಕಟಿಸುತ್ತದೆ. ಇದರ ಅರ್ಥ, ಶಂಕಿತ ಆರೋಪಿಗಳು ಜೀವಂತ ಸೆರೆ ಸಿಕ್ಕಬೇಕು ಎಂಬುದಲ್ಲದೇ ಮತ್ತೇನೂ ಅಲ್ಲ. ಆರೋಪಿಗಳು ಜೀವಂತ ಸೆರೆ
ಹಿಡಿಯಲ್ಪಡಬೇಕು. ಬಳಿಕ ಇವರನ್ನು ಇಲಾಖಾಧಿಕಾರಿಗಳು ವಿಚಾರಣೆಗೆ ಒಳಪಡಿಸಿ ಮತ್ತಷ್ಟೂ ಮಾಹಿತಿಗಳನ್ನು ಸಂಗ್ರಹಿಸಬೇಕು, ನಂತರ ನ್ಯಾಯಾಲಯ ವಿಚಾರಣೆಗೆ ಗುರಿಪಡಿಸಬೇಕು, ಅಂತಿಮವಾಗಿ ಅಪರಾಧ ಸಾಬೀತಾಗಿ ಶಿಕ್ಷೆ ನೀಡಬೇಕು ಎಂಬ ಉದ್ಧೇಶವೇ ಇಲ್ಲಿರುವುದು ಹೊರತು ಬೇರೇನೂ ಅಲ್ಲ. ವಾಸ್ತವ ಮತ್ತು ಆಶಯ ಹೀಗಿರುವಾಗ ಕೊಲೆ ಆರೋಪಿಯೋರ್ವನಿಗೆ ನಗದು ಬಹುಮಾನ ಘೋಷಿಸುವುದು, ಇಂಥ ಕೃತ್ಯಗಳು ಇನ್ನಷ್ಟೂ ನಡೆಯಬೇಕು ಎಂದು ಪ್ರಚೋದಿಸುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ.

ಶಾಸಕ ಸುನಿಲ್ ಕುಮಾರ್ ಹಾಗೂ ಇತರ ಕೆಲವರು ವ್ಯಕ್ತಪಡಿಸಿರುವ ಅಭಿಪ್ರಾಯ, ನಿಲುವುಗಳು ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳ ಅಧಿಕೃತ ನಿಲುವುಗಳಾ ಎನ್ನುವುದು ಬಿಜೆಪಿ ಮತ್ತು ಸಂಘ ಪರಿವಾರದ ಸಂಬಂಧಿಸಿದ ಸಂಘಟನೆಗಳು ಸ್ಪಷ್ಟಪಡಿಸಿಬೇಕು. ಬಿಜೆಪಿ ಮತ್ತು ಸಂಬಂಧಿಸಿದ ಸಂಘಟನೆಗಳು ಹೀಗೆ ಮಾಡುತ್ತವೆ ಎಂದು ಹೇಳಲಾಗುವುದಿಲ್ಲ. ಕಾರಣ, ಈ ವಿಷಯದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ನಿಷೇಧಿತ ನಕ್ಸಲೀಯ ಸಂಘಟನೆಯಾದ ಸಿಪಿಐ (ಮಾವೋವಾದಿ) ಪಕ್ಷದ ನೀತಿಯನ್ನೇ ಅನುಸರಿಸಬಹುದು. ನಕ್ಸಲರು ಆಕ್ರಮಣ ಮಾಡಲು ಸೂಕ್ತ ಕಾಲ ಎಂದು ಕಂಡು ಬಂದಾಗ ಆಕ್ರಮಣ ನಡೆಸಿಬಿಡುತ್ತವೆ. ಬಳಿಕ ಪ್ರಭುತ್ವದ ಕಾರ್ಯಾಚರಣೆ ಚುರುಕುಗೊಂಡಾಗ, ಹಿಂದೆ ಸರಿದು ಬಿಡುತ್ತದೆ. ಇದು ನಕ್ಸಲ್ ಸಂಘಟನೆಯ ಒಂದು ಯುದ್ಧತಂತ್ರ. ಸಂಘ ಪರಿವಾರ ಕೂಡಾ ಹೀಗೆಯೇ ಮಾಡಿಬಿಡುವ ಸಾಧ್ಯತೆ ಇದೆ. ಭಾಷಣಗಳಲ್ಲಿ ತನ್ನ ನಿಜ ಮುಖವನ್ನು ಪ್ರದರ್ಶಿಸುವುದು. ಬಳಿಕ ಸಮಸ್ಯೆಯಾದಾಗ ‘ಅದು ಒಬ್ಬ ವ್ಯಕ್ತಿಯ ವಯುಕ್ತಿಕ ಅಭಿಪ್ರಾಯ, ಅವರ ಅಭಿಪ್ರಾಯಕ್ಕೂ ಸಂಘಟನೆಗೂ ಸಂಬಂಧವೇ ಇಲ್ಲ’ ಎಂದು ಹೇಳಿಬಿಡಬಹುದು.

ಶಾಸಕ ಸುನಿಲ್ ಕುಮಾರ್ ಆಗಲೀ, ಸಂಘ ಪರಿವಾರದ ಸಂಘಟನೆಗಳಾಗಲೀ ಸ್ಪಷ್ಟನೆ ಕೊಡುವುದಕ್ಕಿಂತಲೂ ಮುಖ್ಯವಾದುದು, ನಮ್ಮ ದೇಶದ ಕೇಂದ್ರ ಮತ್ತು ರಾಜ್ಯ ಸರಕಾರಗಳು, ರಾಷ್ಟ್ರಪತಿ, ರಾಜ್ಯಪಾಲರು, ಚುನಾವಣಾ ಆಯೋಗ, ಲೋಕಸಭಾಧ್ಯಕ್ಷರು, ವಿಧಾನಸಭೆಯ ಸಭಾಪತಿಗಳು, ಪೊಲೀಸ್ ಇಲಾಖಾಧಿಕಾರಿಗಳೆಲ್ಲ ಏನು ಮಾಡುತ್ತಿದ್ದಾರೆ ಎಂಬುದು ಬಹಿರಂಗವಾಗಬೇಕು. ಭಾರತದ ಸಂವಿಧಾನದಲ್ಲಿ ಸಂವಿಧಾನದ್ಧವಾಗಿ ಪ್ರಮಾಣ ವಚನ ಸ್ವೀಕರಿಸಿಕೊಂಡು ಶಾಸಕನಾದ ವ್ಯಕ್ತಿ ಹೀಗೆ ಭಾಷಣ ಮಾಡಲು ಅವಕಾಶ ಇದೆಯೇ, ಇಲ್ಲವೇ, ಇಲ್ಲವೆಂದಾದರೆ ಹಾಗೆ ಮಾಡಿದ ವ್ಯಕ್ತಿಯ ವಿರುದ್ಧ ಮತ್ತು ಪಕ್ಷ ಮತ್ತು ಸಂಘಟನೆಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬುದನ್ನು ಸಂಬಂಧಪಟ್ಟ ಸಂಸ್ಥೆಗಳು ಹಾಗೂ ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಿರುವ ಉನ್ನತ ಅಧಿಕಾರಿಗಳು ಸ್ಪಷ್ಟಪಡಿಸಬೇಕು.

ದೇಶದಲ್ಲಿ ಸಮರ್ಥವಾದೊಂದು ಚುನಾವಣಾ ಆಯೋಗ ಇರುತ್ತಿದ್ದರೆ, ಬಿಜೆಪಿಯಂಥ ಪಕ್ಷ ನೋಂದಣಿಯೇ ಆಗುತ್ತಿರಲಿಲ್ಲ. ಹೋಗಲಿ, ಹೇಗೋ ನೋಂದಣಿಯಾಯಿತು. ನೋಂದಣಿಯಾದ ಮೇಲೆ ಪಕ್ಷಗಳ ನಡೆ-ನುಡಿ ಬಹಿರಂಗಕ್ಕೆ ಬಂದ ಬಳಿಕವಾದರೂ, ಪಕ್ಷದ ನಿಜವಾದ ಧ್ಯೇಯೋದ್ಧೇಶಗಳು ಜಗಜ್ಜಾಹೀರುಗೊಂಡ ಬಳಿಕವಾದರೂ ಅಂಥ ಪಕ್ಷದ ನೋಂದಣಿಯನ್ನು ರದ್ದುಗೊಳಿಸುವ ಕೆಲಸ ಮಾಡಬೇಡವೇ ? ಯಾಕೆ ಈ ತುರ್ತು ಕೆಲಸವನ್ನು ಚುನಾವಣಾ ಆಯೋಗ ಅಥವಾ ಇತರ ಸಂಸ್ಥೆಗಳು, ಹಿರಿಯ ಅಧಿಕಾರಿಗಳು ಮಾಡುತ್ತಿಲ್ಲ ? ಶಾಸಕರ ಶಾಸಕತ್ವವನ್ನಾದರೂ ರದ್ದುಪಡಿಸಬೇಡವೇ ?

ಇದು ಬಿಜೆಪಿಗೆ ಮಾತ್ರ ಸೀಮಿತವಾದ ಮಾತಲ್ಲ. ಇತರ ಕೆಲವು ಪ್ರಮುಖ ರಾಜಕೀಯ ಪಕ್ಷಗಳೂ ಬಿಜೆಪಿಯ ಸಾಲಿನಲ್ಲೇ ಇವೆ. ಶಾಸಕ ಸುನಿಲ್ ಕುಮಾರ್ ರಂಥ ಇನ್ನಷ್ಟು ಜನಪ್ರತಿನಿಧಿಗಳೂ ಈ ಪಟ್ಟಿಯಲ್ಲಿದ್ದಾರೆ. ಇಂಥವರೆಲ್ಲರ ಪಟ್ಟಿಯೊಂದನ್ನು ತಯಾರಿಸಿ ಇವರುಗಳ ವಿರುದ್ಧ ಕ್ರಮಕೈಗೊಳ್ಳುವ ಕನಿಷ್ಟ ಕರ್ತವ್ಯವನ್ನೂ ಯಾಕೆ ಯಾವ ಜವಾಬ್ದಾರಿಯುತ ಸಂಸ್ಥೆಗಳೂ ಮಾಡುತ್ತಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ. ಸಂವಿಧಾನಬದ್ಧವಾಗಿ ನಡೆಯದ ಜನಪ್ರತಿನಿಧಿಗಳ ಜನಪ್ರತಿನಿಧಿತ್ವವನ್ನು ಯಾವುದೇ ಮುಲಾಜಿಲ್ಲದೆ ರದ್ದುಪಡಿಸಬೇಕು. ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುವಂಥ ಸಂಸ್ಥೆಗಳು, ಅವುಗಳು ಎಷ್ಟೇ ದೊಡ್ಡ ಸಂಸ್ಥೆಗಳಾಗಿರಲಿ ಅಂಥ ಸಂಸ್ಥೆಗಳನ್ನು ನಿಷೇಧಿಸಬೇಕು.

ಮಾದರಿಯಾಗಬೇಕಾದ, ಆದರ್ಶವಾಗಬೇಕಾದ ಪಕ್ಷಗಳು, ಸಂಘಟನೆಗಳು, ಜನಪ್ರತಿನಿಧಿಗಳು, ಸಂವಿಧಾನ ವಿರೋಧಿಯಾಗಿ, ಕಾನೂನು ಬಾಗಿರವಾಗಿ ನಡೆದುಕೊಳ್ಳುವುದು, ಇವುಗಳು ಒಂದು ಮನೋರಂಜನೆಯ ವಿಷಯ ಎಂಬಂತೆ ಪತ್ರಿಕೆಗಳಲ್ಲಿ, ಟಿವಿ ಛಾನೆಲ್ ಗಳಲ್ಲಿ ಪ್ರಸಾರವಾಗುವುದು, ಮರುದಿನವೇ ಇವುಗಳೆಲ್ಲವನ್ನೂ ಎಲ್ಲರೂ ಮರೆತುಬಿಡುವುದು ಇಂದು ನಡೆಯುತ್ತಿದೆ. ಕಳೆದ ಐದಾರು ದಶಕಗಳಿಂದಲೂ ದೇಶದಲ್ಲಿ ಹೀಗೆಯೇ ನಡೆದುಕೊಂಡು ಬಂದಿದೆ. ಕ್ರಮ ತೆಗೆದುಕೊಳ್ಳಬೇಕಾದವರು ಜಾಣ ಮೌನ ವಹಿಸಿಕೊಂಡು ಬಂದಿದ್ದಾರೆ. ಹಾಗಾಗಿಯೇ ಇಂಥ ಅಕ್ರಮಗಳು ಯಾವುದೇ ಅಡೆತಡೆಗಳೂ ಇಲ್ಲದೆ ಮುಂದುವರಿದುಕೊಂಡು ಬಂದಿದೆ.

ಕಳೆದ ಆರು ದಶಕಗಳಿಂದ ದೇಶ ಮತ್ತು ರಾಜ್ಯವನ್ನಾಳಿದ ಸರಕಾರಗಳು, ಮಂತ್ರಿಗಳು, ಉನ್ನತ ಸರಕಾರಿ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಗಳನ್ನು, ಕರ್ತವ್ಯಗಳನ್ನು ಸಮರ್ಥವಾಗಿ, ದಕ್ಷತೆಯಿಂದ ನಿರ್ವಹಿಸದೇ ಇದ್ದುದೇ ಇಂದಿನ ಇಂಥ ಎಲ್ಲಾ ಅವಾಂತರಗಳಿಗೂ ಮೂಲ ಕಾರಣ. ಬಹುಕಾಲ ನಮ್ಮನ್ನಾಳಿದ ಕಾಂಗ್ರೆಸ್ ಪಕ್ಷವೇ ಒಂದು ಮಾನ್ಯತೆ ಕಳೆದುಕೊಳ್ಳಬೇಕಾದ, ರದ್ದುಗೊಳಬೇಕಾದ ಪಕ್ಷವಾಗಿರುವಾಗ, ಈ ಪಕ್ಷದಲ್ಲೇ ಜನಪ್ರತಿನಿಧಿತ್ವವನ್ನು ಕಳೆದುಕೊಳ್ಳಬೇಕಾದ ಜನಪ್ರತಿನಿಧಿಗಳು ಇರುವಾಗ, ಇಂಥ ಪಕ್ಷದ ಸರಕಾರ ಸಂವಿಧಾನಬದ್ಧವಾಗಿ, ಕಾನೂನು ಪ್ರಕಾರ ನಡೆದುಕೊಳ್ಳುವ ಸಾಹಸವನ್ನು ಪ್ರದರ್ಶಿಸಲು ಸಾಧ್ಯವಿಲ್ಲ ತಾನೇ ? ಇಲ್ಲಿ ಆಗಿರುವುದು ಸಹ ಇದುವೇ ! – ಶ್ರೀರಾಮ ದಿವಾಣ.

ಉಡುಪಿ: ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮುಖವಾಡ ಕಳಚಿಬಿದ್ದಿದೆ. ಎಲ್ಲವೂ ಸೋಗಲಾಡಿತನ, ಬೂಟಾಟಿಕೆ ಎಂಬುದು ಅವರ ನಡೆ ನುಡಿಯಿಂದಾಗಿಯೇ ಬಹಿರಂಗವಾಗಿದೆ. ಜಾತ್ಯಾತೀತ ಸರಕಾರ ಎನ್ನುವ ರಾಜ್ಯದ ಕಾಂಗ್ರೆಸ್ ಸರಕಾರ ಪಂಕ್ತಿಭೇದವೆಂಬ ಅನಿಷ್ಟ ಪದ್ಧತಿಯನ್ನು ಇನ್ನೂ ನಿಷೇಧಿಸಿಲ್ಲ. ಮನಸ್ಸು ಮತ್ತು ಕಾಳಜಿ ಇದ್ದಿದ್ದೇ ಆದಲ್ಲಿ ಸುಗ್ರೀವಾಜ್ಞೆ ಮೂಲಕ ಇನ್ನಾದರೂ ಪಂಕ್ತಿಭೇದವನ್ನು ನಿಷೇಧಿಸಲಿ ಎಂದು ಮಾಜಿ ಶಾಸಕ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮ ರೆಡ್ಡಿ ರಾಜ್ಯ ಸರಕಾರಕ್ಕೆ ಸವಾಲು ಹಾಕಿದ್ದಾರೆ.

ಉಡುಪಿ ಕೃಷ್ಣ ದೇವಸ್ಥಾನ ಸಹಿತ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲೂ ಪಂಕ್ತಿಭೇದವನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಪಕ್ಷದ ರಾಜ್ಯ ಸಮಿತಿ ಕರೆಯಂತೆ ಮೇ.5ರಂದು ಬೆಳಗ್ಗೆ ಉಡುಪಿ ಸರ್ವಿಸ್ ಬಸ್ ನಿಲ್ದಾಣ ಪರಿಸರದಲ್ಲಿ ಆರಂಭಗೊಂಡ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೃಷ್ಣ ದೇವಸ್ಥಾನದಲ್ಲಿ ಊಟದ ಪಂಕ್ತಿಯಿಂದ ವನಿತಾ ಶೆಟ್ಟಿಯವರನ್ನು ಎಬ್ಬಿಸಿದ ಪ್ರಕರಣ ಕ್ಷಮೆ ಕೇಳಿ ಮರೆತುಬಿಡುವ ವಿಷಯವ ಅಲ್ಲವೇ ಅಲ್ಲ. ದುಡ್ಡಿಗೆ ಭೇದವಿಲ್ಲದ ಇಲ್ಲಿ ಊಟಕ್ಕೆ ಮಾತ್ರ ಅದು ಹೇಗೆ ಭೇದ ಮಾಡಲಾಗುತ್ತಿದೆ ಎಂಬುದು ಸ್ಪಷ್ಟವಾಗಬೇಕು. ಸ್ವಾಮೀಜಿಗಳು ಮತ್ತೆ ಎಲ್ಲಾ ಜಾತಿ ಜನರನ್ನೂ ಆಹ್ವಾನಿಸಿ ಉಟದ ಪಂಕ್ತಿಯಲ್ಲಿ ಕುಳ್ಳಿರಿಸಿ ಅವರ ಜೊತೆಗೆ ಊಟ ಮಾಡಲಿ ಎಂದು ರೆಡ್ಡಿ ತಿಳಿಸಿದರು.

ಜಾತ್ಯತೀತ ಸರಕಾರ ಎನ್ನುವ ರಾಜ್ಯದ ಕಾಂಗ್ರೆಸ್ ಸರಕಾರ ಕೋಮುವಾದದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೆರಡು ಮೊಕದ್ದಮೆಗಳ ಆರೋಪಿಯಾಗಿರುವ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಯಾಕೆ ಬಂಧಿಸುತ್ತಿಲ್ಲ ಎಂದು ಪ್ರಶ್ನಿಸಿದ ಶ್ರೀರಾಮ ರೆಡ್ಡಿ, ಕರಾವಳಿ ಜಿಲ್ಲೆಗಳಲ್ಲಿ ಸಂಘ ಪರಿವಾರದ ಕೋಮುವಾದಿ ಅಟ್ಟಹಾಸ ಮುಂದುವರಿದಿದೆ. ಆದರೆ ಕಾಂಗ್ರೆಸ್ ಸರಕಾರ ತಪ್ಪಿತಸ್ಥರ ವಿರುದ್ಧ ಯಾವೊಂದೂ ಕಾನೂನು ಕ್ರಮವನ್ನೂ ಜಾರಿಗೊಳಿಸುತ್ತಿಲ್ಲವೆಂದು ಆರೋಪಿಸಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು, ಸಿಪಿಐಎಂ ಮುಖಂಡರಾದ ಕೆ.ಶಂಕರ್, ಬಾಲಕೃಷ್ಣ ಶೆಟ್ಟಿ, ಪಿ.ವಿಶ್ವನಾಥ ರೈ, ವೆಂಕಟೇಶ್ ಕೋಣಿ ಮೊದಲಾದವರು ಧರಣಿಯಲ್ಲಿ ಉಪಸ್ಥಿತರಿದ್ದರು.