Posts Tagged ‘dr.v.b.patil ias’

ಉಡುಪಿ: ರಾಜ್ಯದ 19 ಜಿಲ್ಲೆಗಳಲ್ಲಿ 2012-13 ಮತ್ತು 2013-14ನೇ ಸಾಲಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ನಡೆದ ರಾಸಾಯನಿಕ ಮತ್ತು ರಕ್ತ ಶೇಖರಣಾ ಟ್ಯೂಬ್ ಗಳ ಖರೀದಿಯಲ್ಲಿನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಹಾಲಿ ಆರೋಗ್ಯ ಸಚಿವ ಯು.ಟಿ.ಖಾದರ್, ಮಾಜಿ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿಂದಿನ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್, ನಿರ್ದೇಶಕ ಡಾ.ಧನ್ಯ ಕುಮಾರ್, ಆಯುಕ್ತ ವಿ.ಬಿ.ಪಾಟೀಲ್, ವೈದ್ಯಕೀಯ ಸಹ ನಿದೇಶಕ ಡಾ.ಕೆ.ಬಿ. ಈಶ್ವರಪ್ಪ, ರಾಜ್ಯ ಮಟ್ಟದ ಇತರ ಅಧಿಕಾರಿಗಳು, 19 ಜಿಲ್ಲೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಸರ್ಜನ್ ರವರು, ಜಿಲ್ಲಾಸ್ಪತ್ರೆಗಳ ಇತರ ಅಧಿಕಾರಿಗಳು, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಪ್ರಭಾವೀ ಗುತ್ತಿಗೆದಾರರ ಸಹಿತ ಅನೇಕರನ್ನು ವಿಚಾರಣೆಗೆ ಒಳಪಡಿಸಬೇಕಾದ ಅನಿವಾರ್ಯತೆ ಇರುವುದರಿಂದ ಬಹುಕೋಟಿ ರಾಸಾಯನಿಕ ಹಗರಣವನ್ನು ಕೂಡಲೇ ಸಿಬಿಐ ತನಿಖೆಗೆ ಹಸ್ತಾಂತರಿಸಬೇಕು ಎಂಬ ಪ್ರಮುಖ ಬೇಡಿಕೆಯೊಂದಿಗೆ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ, ಮಾನವಹಕ್ಕು ಮತ್ತು ಮಾಹಿತಿಹಕ್ಕು ಕಾರ್ಯಕರ್ತ ಶ್ರೀರಾಮ ದಿವಾಣ ಹಾಗೂ ಅವರ ಬೆಂಬಲಿಗರು ಸೆಪ್ಟೆಂಬರ್ 6ರಂದು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಒಂದು ದಿನದ ಸತ್ಯಾಗ್ರಹ ನಡೆಸಿದರು.

ರಾಸಾಯನಿಕ ಹಗರಣದ ಬಗ್ಗೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅವರಿಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ದಕ್ಷ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಜೆ. ಅವರು ಈ ಮೇಲ್ (madan17@gmail.com) ಮೂಲಕ ತಾರೀಕು 23.03.2013ರಂದು ಮಾಹಿತಿ ನೀಡಿದ್ದರು. ಮಾಹಿತಿ ನೀಡಿದ ಬಳಿಕ ಡಾ.ಶರತ್ ಕುಮಾರ್ ರಾವ್ ಅವರನ್ನು ಆರೋಗ್ಯ ಇಲಾಖೆಯ ಕೆಲವು ಮಂದಿ ನಿರ್ಧಿಷ್ಟ ಅಧಿಕಾರಿಗಳು ಹಾಗೂ ಪ್ರಭಾವೀ ಸ್ಥಾಪಿತ ಹತಾಸಕ್ತಿಯುಳ್ಳ ಖಾಸಗಿ ವ್ಯಕ್ತಿಗಳು ಜೊತೆ ಸೇರಿಕೊಂಡು ಅತ್ಯಂತ ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಿ ನಖಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಯಿಂದ ಸುಳ್ಳು ದೂರು ಕೊಡಿಸಿ, ಈ ಸುಳ್ಳು ದೂರಿನ ಆಧಾರದಲ್ಲಿಯೇ ಸರಿಯಾಗಿ ತನಿಖೆಯನ್ನೂ ನಡೆಸದೆ ತಾರೀಕು 07.09.2013ರಂದು ಅಮಾನತು ಪಡಿಸಿದ್ದಾರೆ. ಅಮಾನತುಪಡಿಸಿ 07.09.2014ಕ್ಕೆ ಒಂದು ವರ್ಷವಾಗುತ್ತಿದೆಯಾದರೂ, ಇನ್ನೂ ಸಹ ಕರ್ತವ್ಯಕ್ಕೆ ಮರು ನೇಮಕಾತಿ ಮಾಡದೆ ವಿವಿಧ ರೀತಿಯಲ್ಲಿ ಮಾನಸಿಕ ಹಿಂಸೆ ನೀಡುತ್ತಾ ಸಹಜ ನ್ಯಾಯವನ್ನು ನಿರಾಕರಿಸುತ್ತಿದೆ. ಆದುದರಿಂದ, ತಕ್ಷಣವೇ ಡಾ.ಶರತ್ ಅವರನ್ನು ಕರ್ತವ್ಯಕ್ಕೆ ಮರು ನೇಮಕಾತಿ ಮಾಡಬೇಕು ಮತ್ತು ಡಾ.ಶರತ್ ವಿರುದ್ಧ ಷಡ್ಯಂತ್ರ ಹೂಡಿದ, ಸಹಜ ನ್ಯಾಯವನ್ನು ನಿರಾಕರಿಸಿದ (ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯೂ ಆಗಿದೆ) ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಪಡಿಸಿ, ಆರೋಗ್ಯ ಇಲಾಖೆ ಹೊರತುಪಡಿಸಿದ ಉನ್ನತ ಮಟ್ಟದ ಅಧಿಕಾರಿಗಳಿಂದ ಅಥವಾ ಉನ್ನತ ಮಟ್ಟದ ತನಿಖಾ ಸಂಸ್ಥೆಗಳಿಂದ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸತ್ಯಾಗ್ರಹದ ಮೂಲಕ ಶ್ರೀರಾಮ ದಿವಾಣ ಹಾಗೂ ಇತರರು ಸರಕಾರವನ್ನು ಒತ್ತಾಯಿಸಿದರು.

ರಾಸಾಯನಿಕ ಹಗರಣದ ಬಗ್ಗೆ ಡಾ.ಶರತ್ ಕುಮಾರ್ ರಾವ್ ಅವರು ತಾರೀಕು 23.03..2013ರಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅವರಿಗೆ ಮದನ್ ಗೋಪಾಲ್ ಅವರ madan17@gmail.com ಎಂಬ ಈ ಮೇಲ್ ಐಡಿಗೆ ದೂರು ನೀಡಿದ್ದರು. ಈ ದೂರಿನ ಬಗ್ಗೆ ತನಿಖೆ ನಡೆಸುವಂತೆ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅವರು ಇಲಾಖಾ ನಿರ್ದೇಶಕರಾದ ಡಾ.ಧನ್ಯ ಕುಮಾರ್ ಅವರಿಗೆ ಆದೇಶಿಸದಿದ್ದರೂ ಸಹ, ಧನ್ಯ ಕುಮಾರ್ ಅವರು ಪ್ರ. ಕಾರ್ಯದರ್ಶಿ ಮದನ್ ಗೋಪಾಲ್ ಅವರ ಈ ಮೇಲ್ ಐಡಿಯಿಂದ ಅಡ್ಡ ದಾರಿಯ ಮೂಲಕ ದೂರಿನ ಪ್ರತಿಯನ್ನು ಕಳವು (?) ಮಾಡಿದ್ದಾರೆ ಮತ್ತು ಈ ದೂರಿನ ಬಗ್ಗೆ ತನಿಖೆ ನಡೆಸುವಂತೆ ವೈದ್ಯಕೀಯ ಸಹ ನಿರ್ದೇಶಕ ಡಾ.ಕೆ.ಬಿ. ಈಶ್ವರಪ್ಪರಿಗೆ ಸೂಚಿಸಿದ್ದಾರೆ. ಡಾ.ಕೆ.ಬಿ.ಈಶ್ವರಪ್ಪ ಅವರು ಪಕ್ಷಪಾತದಿಂದ ಕೂಡಿದ ತನಿಖೆ ನಡೆಸಿ ಭ್ರಷ್ಟರನ್ನು ರಕ್ಷಿಸಿದ್ದಾರೆ. ಪ್ರಾಮಾಣಿಕ ವೈದ್ಯಾಧಿಕಾರಿ ಡಾ.ಶರತ್ ಅವರನ್ನು ಅಮಾನತುಪಡಿಸಲು ಕಾರಣಕರ್ತರಾಗಿದ್ದಾರೆ. ಆದುದರಿಂದ, ಮದನ್ ಗೋಪಾಲ್ ಅವರ ಈ ಮೇಲ್ ಐಡಿಯಿಂದ ಡಾ.ಶರತ್ ಅವರ ದೂರಿನ ಪ್ರತಿಯನ್ನು ಕಳವು ಮಾಡಿದ (ಹೀಗೆ ಮಾಡುವುದು ಐಟಿ ಕಾಯಿದೆ ಪ್ರಕಾರ ಅಪರಾಧವಾಗಿದೆ) ಡಾ.ಧನ್ಯ ಕುಮಾರ್ ಹಾಗೂ ಬಹುಕೋಟಿ ಹಗರಣವನ್ನು ಮುಚ್ಚಿ ಹಾಕುವ ಮೂಲಕ ಭ್ರಷ್ಟರನ್ನು ರಕ್ಷಿಸಿ, ದಕ್ಷ ವೈದ್ಯಾಧಿಕಾರಿ ಡಾ.ಶರತ್ ಅವರನ್ನು ಶಿಕ್ಷಿಸುವ ಏಕೈಕ ಉದ್ಧೇಶದಿಂದಲೇ ನಕಲಿ ತನಿಖೆ ನಡೆಸಿದ ಡಾ.ಕೆ.ಬಿ.ಈಶ್ವರಪ್ಪ ಇವರನ್ನು ಕೂಡಲೇ ಅಮಾನತುಪಡಿಸಬೇಕು ಮತ್ತು ಇವರುಗಳ ವಿರುದ್ಧ ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕೆಂದು ಶ್ರೀರಾಮ ದಿವಾಣ ಆಗ್ರಹಿಸಿದ್ದಾರೆ.

ಹಗರಣದ ತನಿಖೆ ನಡೆಸಿದ ಆರೋಗ್ಯ ಇಲಾಖಾ ಜಾಗೃತ ಕೋಶದ ಮುಖ್ಯ ಜಾಗೃತಾಧಿಕಾರಿ ಡಾ.ಕೆ.ಎಚ್.ನರಸಿಂಹಮೂರ್ತಿಯವರನ್ನು ಯಾರ ಒತ್ತಡಕ್ಕೆ ಒಳಗಾಗಿ, ಯಾಕಾಗಿ ವರ್ಗಾವಣೆ ಮಾಡಲಾಯಿತು ? ಡಾ.ನರಸಿಂಹಮೂರ್ತಿಯವರು ಸಲ್ಲಿಸಿದ ತನಿಖಾ ವರದಿ ಮೇಲೆ ಇಲಾಖೆ ತೆಗೆದುಕೊಂಡ ಕ್ರಮವೇನು ? ಎಂಬುದನ್ನು ಆರೋಗ್ಯ ಇಲಾಕಖೆ ಹೊರತುಪಡಿಸಿ ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಹಾಗೂ ಡಾ.ನರಸಿಂಹಮೂರ್ತಿಯವರು ನಡೆಸಿದ ತನಿಖಾ ವರದಿಯನ್ನು ಕೂಡಲೇ ಬಹಿರಂಗಪಡಿಸಬೇಕೆಂದು ಸತ್ಯಾಗ್ರಹ ನಿರತರು ಒತ್ತಾಯಿಸಿದರು.

ಉಡುಪಿ ಜಿಲ್ಲಾ ಸರಕಾರಿ ಅಸ್ಪತ್ರೆಗೆ ಸಂಬಂಧಿಸಿದಂತೆ ಮಾತ್ರ, ಬಹುಕೋಟಿ ರಾಸಾಯನಿಕ ಹಗರಣದ ಬಗ್ಗೆ ಕರ್ನಾಟಕ ಜನಪರ ವೇದಿಕೆಯು ನೀಡಿದ ಪತ್ರಿಕಾ ಹೇಳಿಕೆಯ ಆಧಾರದಲ್ಲಿ ಸುಮೊಟೊ ಆಗಿ ಕರ್ನಾಟಕ ಲೋಕಾಯುಕ್ತ ಇಲಾಖೆ ತನಿಖೆ ಕೈಗೆತ್ತಿಕೊಂಡಿದ್ದು, ಈ ಪ್ರಕರಣದಲ್ಲಿ ಸಾಕ್ಷ್ಯ ನುಡಿದ ಮಹಿಳಾ ಸಾಕ್ಷಿದಾರರಿಗೆ ಅಧಿಕಾರಿಗಳು ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಮೋದ್ ಮದ್ವರಾಜ್ ನಿರಂತರವಾಗಿ ಕಿರುಕುಳ ಕೊಡುತ್ತಿದ್ದು, ಈ ಬಗ್ಗೆ ಸಂತ್ರಸ್ತ ಮಹಿಳೆ ಉಡುಪಿ ಜಿಲ್ಲಾಧಿಕಾರಿಯವರಿಗೆ ಮೂರು ಬಾರಿ ಪ್ರತ್ಯೇಕವಾಗಿ ಲಿಖಿತ ದೂರು ಸಲ್ಲಿಸಿದರೂ ಜಿಲ್ಲಾಧಿಕಾರಿಗಳಾದ ಡಾ.ಎಂ.ಟಿ.ರೇಜು ಹಾಗೂ ಡಾ.ಮುದ್ದುಮೋಹನ್ ಅವರು ತನಿಖೆಯನ್ನೇ ನಡೆಸದೆ ಗಂಭೀರ ಕರ್ತವ್ಯ ಲೋಪವೆಸಗಿದ್ದಾರೆ. ಇದೊಂದು ಗಂಭೀರ ಮಹಿಳಾ ದೌರ್ಜನ್ಯದ ಪ್ರಕರಣ, ಮಾತ್ರವಲ್ಲ ಮಹಿಳಾ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯ ಪ್ರಕರಣವೂ ಆಗಿರುತ್ತದೆ. ಆದುದರಿಂದ ತಡಮಾಡದೆ ಈ ಸಂಬಂಧ ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಬಂಧಿಸಬೇಕು ಎಂದು ಸತ್ಯಾಗ್ರಹ ನಿರತರು ಒತ್ತಾಯಿಸಿದರು.

ಸತ್ಯಾಗ್ರಹ ಸ್ಥಳಕ್ಕೆ ಸಂಜೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆಯವರು ಮನವಿ ಸ್ವೀಕರಿಸಿ ಮಾತನಾಡುತ್ತಾ, ಯಾರೊಂದಿಗೂ ವಿಚಾರ ವಿಮರ್ಶೆ ನಡೆಸದೆ ಅವಸರದಲ್ಲಿ ಡಾ.ಶರತ್ ಕುಮಾರ್ ರಾವ್ ಅವರನ್ನು ಅಮಾನತುಪಡಿಸುವ ಪ್ರಕ್ರಿಯೆಯಲ್ಲಿ ಅಚಾತುರ್ಯ ನಡೆದಿದ್ದು ನಿಜವೆಂದು ಒಪ್ಪಿಕೊಂಡರಲ್ಲದೆ, ಮನವಿಯನ್ನು ತಲುಪಿಸಬೇಕಾದವರಿಗೆ ತಲುಪಿಸುವುದಾಗಿ ತಿಳಿಸಿದರು.

ಖ್ಯಾತ ಮನೋವೈದ್ಯರಾದ ಡಾ.ಪಿ.ವಿ.ಭಂಡಾರಿ, ಗಣ್ಯರಾದ ನಾಗಭೂಷಣ ಶೇಟ್, ಪದ್ಮಾಸಿನಿ, ರೊನಾಲ್ಡ್ ಕ್ಯಾಸ್ತಲಿನೊ, ರೋಶನ್ ಮೆಂಡೋನ್ಸಾ, ರಾಜೇಶ್ ಪೂಜಾರಿ, ದೇಜಪ್ಪ ಹಿರಿಯಡ್ಕ, ರಸೂಲ್ ಕಟಪಾಡಿ, ಪ್ರಕಾಶ್ ಪೂಜಾರಿ, ಸುರೇಶ್ ಹಿರಿಯಡ್ಕ, ಕೆ.ಎನ್.ಪ್ರಭು, ಶೇಖರ ಶೆಟ್ಟಿ, ಸತೀಶ್ ನಾಯ್ಕ , ಪ್ರಭಾಕರ್, ಸುದರ್ಶನ್, ದೀಪಾ ಬೆಳ್ಳೆ, ಸುಜಾತಾ, ಶಾಲಿನಿ, ಅಂಬಿಕಾ, ಶ್ರೀದೇವಿ, ಸಂಜೀವ ಪೂಜಾರಿ ಮೊದಲದವರು ಸತ್ಯಾಗ್ರಹಕ್ಕೆ ಬೆಂಬಲ
ವ್ಯಕ್ತಪಡಿಸಿ ಭಾಗವಹಿಸಿದರು.

300 ಕ್ಕೂ ಅಧಿಕ ಪುಟಗಳ ದಾಖಲಾತಿಗಳ ಸಹಿತ ಹತ್ತು ಪುಟಗಳ ಮನವಿ ಪತ್ರವನ್ನು ಮುಖ್ಯಮಂತ್ರಿಗಳು, ರಾಜ್ಯಪಾಲರು, ವಿಧಾನಸಭೆಯ ಸಭಾಪತಿಗಳು, ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ, ಪ್ರಧಾನಮಂತ್ರಿಗಳು, ಕೇಂದ್ರದ ಆರೋಗ್ಯ ಮಂತ್ರಿಗಳು, ರಾಷ್ಟ್ರಪತಿಗಳು, ಉಪ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಶ್ರೀರಾಮ ದಿವಾಣ ತಿಳಿಸಿದ್ದಾರೆ.

ಉಡುಪಿ: ರಾಜ್ಯದ 19 ಜಿಲ್ಲೆಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ನಡೆದ ಬಹುಕೋಟಿ ರಾಸಾಯನಿಕ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂಬ ಒತ್ತಾಯ ಮತ್ತು ವರ್ಷದ ಹಿಂದೆ ಅಮಾನತುಗೊಂಡಿರುವ ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗದ ದಕ್ಷ ವೈದ್ಯಾಧಿಕಾರಿ ಡಾ.ಶರತ್ ಕುಮರ್ ರಾವ್ ಅವರಿಗೆ ರಾಜ್ಯ ಸರಕಾರ ಸಹಜ ನ್ಯಾಯವನ್ನು ನಿರಾಕರಿಸುತ್ತಿರುವುದನ್ನು ಪ್ರತಿಭಟಿಸಿ ಸೆಪ್ಟೆಂಬರ್ 1 ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ ಗಂಟೆ 5ರ ವರೆಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸತ್ಯಾಗ್ರಹ ನಡೆಸಲಿರುವುದಾಗಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಶ್ರೀರಾಮ ದಿವಾಣ ತಿಳಿಸಿದ್ದಾರೆ.

ಹಾಲಿ ಆರೋಗ್ಯ ಸಚಿವ ಯು.ಟಿ.ಖಾದರ್, ಮಾಜಿ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮದನ್ ಗೋಪಾಲ್, ನಿರ್ದೇಶಕ ಡಾ.ಧನ್ಯ ಕುಮಾರ್, ಆಯುಕ್ತ ವಿ.ಬಿ.ಪಾಟೀಲ್, ವೈದ್ಯಕೀಯ ಸಹ ನಿರ್ದೇಶಕ ಡಾ.ಕೆ.ಬಿ.ಈಶ್ವರಪ್ಪ ಸಹಿತ ಇಲಾಖೆಯ ಇತರ ಅಧಿಕಾರಿಗಳು, 19 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಸರ್ಜನ್ ಗಳು, ಇತರ ಅಧಿಕಾರಿಗಳು, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಗುತ್ತಿಗೆದಾರರ ಸಹಿತ ಅನೇಕ ಪ್ರಭಾವಿಗಳ ಪಾತ್ರದ ಬಗ್ಗೆ ಈ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವುದು ಅತೀ ಅಗತ್ಯವಾಗಿರುವುದರಿಂದ ರಾಸಾಯನಿಕ ಹಗರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸುವುದು ಅನಿವಾರ್ಯವೆಂದು ಮಾಹಿತಿಹಕ್ಕು ಕಾರ್ಯಕರ್ತರೂ ಆದ ಶ್ರೀರಾಮ ದಿವಾಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಸಾಯನಿಕ ಹಗರಣದ ಬಗ್ಗೆ ಮೊದಲ ಬಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ಪ್ರಾಮಾಣಿಕ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಅವರನ್ನು ಕೆಲವು ಮಂದಿ ನಿರ್ಧಿಷ್ಟ ಸರಕಾರಿ ಅಧಿಕಾರಿಗಳು ಹಾಗೂ ಸ್ಥಾಪಿತ ಹಿತಾಸಕ್ತ ಖಾಸಗಿ ಪ್ರಭಾವೀ ವ್ಯಕ್ತಿಗಳು ಷಡ್ಯಂತ್ರ ರೂಪಿಸಿ ಸುಳ್ಳು ದೂರು ಕೊಡಿಸಿ, ಇದರ ಆಧಾರದಲ್ಲಿ ಸರಿಯಾಗಿ ತನಿಖೆ ನಡೆಸದೆ ಅಮಾನತು ಮಾಡುವಂತೆ ಮಾಡಿದರು. ಅಮಾನತುಗೊಳಿಸಿ ಸೆಪ್ಟೆಂಬರ್ 7ಕ್ಕೆ ಒಂದು ವರ್ಷವಾದರೂ ಇನ್ನೂ ಸಹ ಅಮಾನತು ಹಿಂತೆಗೆದುಕೊಳ್ಳದೆ ಸರಕಾರಿ ಅಧಿಕಾರಿಯೊಬ್ಬರಿಗೆ ಸಲ್ಲಬೇಕಾದ ಸಹಜ ನ್ಯಾಯನ್ನೂ ಸಲ್ಲದಂತೆ ಮಾಡಲಾಗಿದೆ. ಸರಕಾರದ ಈ ಕ್ರಮ ಅತ್ಯಂತ ಖಂಡನೀಯ ಎಂದು ಮಾನವಹಕ್ಕುಗಳ ಕಾರ್ಯಕರ್ತರಾದ ಶ್ರೀರಾಮ ದಿವಾಣ ತಿಳಿಸಿದ್ದಾರೆ.

ಬಹುಕೋಟಿ ರಾಸಾಯನಿಕ ಹಗರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಜನಪರ ವೇದಿಕೆ ನೀಡಿದ ಪತ್ರಿಕಾ ಹೇಳಿಕೆಯ ಆಧಾರದಲ್ಲಿ ಕರ್ನಾಟಕ ಲೋಕಾಯುಕ್ತವು ಉಡುಪಿ ಜಿಲ್ಲಾಸ್ಪತ್ರೆಗೆ ಸೀಮಿತವಾಗಿ ಸುಮೊಟೋ ಆಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾಸ್ಪತ್ರೆಯ ಡಾ.ಆನಂದ ನಾಯಕ್, ಮೋಹನದಾಸ ಕಿಣಿ ಹಾಗೂ ಕುಮಾರಸ್ವಾಮಿ ಎಂಬವರನ್ನು ಅಮಾನತುಗೊಳಿಸುವಂತೆ ಲೋಕಾಯುಕ್ತ ಅಧಿಕಾರಿಗಳು ಸರಕಾರಕ್ಕೆ ಪತ್ರ ಬರೆದಿದೆ. ಸರಕಾರ ಮೋಹನದಾಸ ಕಿಣಿ ಹಾಗೂ ಕುಮಾರಸ್ವಾಮೀ ಅವರನ್ನು ಮಾತ್ರ ಅಮಾನತುಗೊಳಿಸಿ ಕೈತೊಳೆದುಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನುಡಿದ ಮಹಿಳಾ ಸರಕಾರಿ ಉದ್ಯೋಗಿಯೊಬ್ಬರಿಗೆ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಹಾಗೂ ಕೆಲವು ಮಂದಿ ಅಧಿಕಾರಿಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಜಿಲ್ಲಾಧಿಕಾರಿಗಳಿಗೆ ಮೂರು ಬಾರಿ ಲಿಖಿತ ದೂರು ನೀಡಿದರೂ ಜಿಲ್ಲಾಧಿಕಾರಿಗಳು ಒತ್ತಡಕ್ಕೆ ಒಳಗಾಗಿ ದೂರಿನ ಬಗ್ಗೆ ತನಿಖೆ ನಡೆಸದೆ ನೊಂದ ಮಹಿಳೆಗೆ ಅನ್ಯಾಯವೆಸಗಿದ್ದಾರೆ. ಮಾತ್ರವಲ್ಲ ಗಂಭೀರ ಕರ್ತವ್ಯಲೋಪವೆಸಗಿದ್ದಾರೆ ಎಂದು ಶ್ರೀರಾಮ ದಿವಾಣ ಆರೋಪಿಸಿದ್ದಾರೆ.

ಈ ಎಲ್ಲಾ ವಿಷಯಗಳನ್ನು ಮುಂದಿಟ್ಟುಕೊಂಡು ಬೇಡಿಕೆ ಮುಂದಿಟ್ಟು ಸತ್ಯಾಗ್ರಹ ನಡೆಸುತ್ತಿದ್ದು, ಸತ್ಯಾಗ್ರಹದಿಂದ ನ್ಯಾಯ ಲಭಿಸದೇ ಇದ್ದಲ್ಲಿ ಮುಮದಿನ ದಿನಗಳಲ್ಲಿ ಹೋರಾಟವನ್ನು ರಾಜ್ಯದ ಮತ್ತು ದೇಶದ ರಾಜಧಾನಿಗೂ ವಸ್ತರಿಸಲಾಗುವುದು ಎಂದು ಶ್ರೀರಾಮ ದಿವಾಣ ಪತ್ರಿಕಾ ಹೇಳಿಕೆ ಮೂಲಕ ಮುನ್ನೆಚ್ಚರಿಕೆ ನೀಡಿದ್ದಾರೆ.