Posts Tagged ‘dss’

ಉಡುಪಿ: ಸರಕಾರದ ನಿಯಮಾವಳಿಗಳು ಮತ್ತು ಮೀಸಲಾತಿ ನಿಯಮಗಳನ್ನು ಉಲ್ಲಂಘಿಸಿ ಉಪನ್ಯಾಸಕರನ್ನು ನೇಮಕ ಮಾಡುವ ನಿಟ್ಟಿನಲ್ಲಿ ಬ್ರಹ್ಮಾವರದ ಎಸ್.ಎಂ.ಎಸ್.ಅನುದಾನಿತ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಗೆ ಆದೇಶ ನೀಡಿದ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)ಯ ಉಡುಪಿ ಜಿಲ್ಲಾ ಶಾಖೆಯು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಒತ್ತಾಯಿಸುತ್ತದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕ ರಮೇಶ್ ಕೋಟ್ಯಾನ್ ತಿಳಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಸೆ.01ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು, ಸಚಿವ ಕಿಮ್ಮನೆಯವರು ಒತ್ತಡಕ್ಕೆ ಒಳಗಾಗಿದ್ದಾರೆ ಮತ್ತು ಅವರು ದಲಿತ ವಿರೋಧಿ ಎಂದು ಆರೋಪಿಸಿದರು.

ಎಸ್.ಎಂ.ಎಸ್.ಕಾಲೇಜಿನ ಆಡಳಿತ ಮಂಡಳಿಯು ಕನ್ನಡ ಮತ್ತು ಇಂಗ್ಲೀಷ್ ಉಪನ್ಯಾಸಕರ ಹುದ್ದೆಗಳಿಗೆ ಉಪನ್ಯಾಸಕರನ್ನು ನೇಮಕಾತಿ ಮಾಡುವ ಉದ್ಧೇಶದಿಂದ 2009ರ ಮೇ 22ರಂದು ನಾಡಿನಲ್ಲಿ ಹೆಚ್ಚು ಪ್ರಸಾರವಿರುವ ದಿನ ಪತ್ರಿಕೆಯಲ್ಲಿ ಜಾಹೀರಾತು ನೀಡಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಅನೇಕ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದವರಲ್ಲಿ ಅತೀ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಅಭ್ಯರ್ಥಿಗಳನ್ನು ಬಿಟ್ಟು, ಕಡಿಮೆ ಅಂಕ ಪಡೆದ ಇತರ ವರ್ಗಗಳಿಗೆ ಸೇರಿದ ಇಬ್ಬರು ಅಭ್ಯಥರ್ಿಗಳನ್ನು ನಿಯಮಾವಳಿಗಳನ್ನು ಮೀರಿ ನೇಮಕಾತಿ ಮಾಡಿಸಿಕೊಂಡಿದ್ದರು ಎಂದು ರಮೇಶ್ ದೂರಿದರು.

ಸಮಿತಿಯ ಮನವಿಯ ಮೇರೆಗೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನಿಯಮ ಬಾಹಿರ ನೇಮಕಾತಿಯನ್ನು ರದ್ದುಪಡಿಸಿ, ಮರು ಪತ್ರಿಕಾ ಜಾಹೀರಾತು ನೀಡಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ನಿರ್ದೇಶನ ನೀಡಿದ್ದರು. ಎಸ್.ಎಂ.ಎಸ್.ಕಾಲೇಜು ಆಡಳಿತ ಮಂಡಳಿಯು ಎರಡನೇ ಬಾರಿ ಪತ್ರಿಕಾ ಜಾಹೀರಾತು ನೀಡುವಾಗ ಕಡಿಮೆ ಪ್ರಸಾರ ಸಂಖ್ಯೆ ಹೊಂದಿರುವ ಪತ್ರಿಕೆಗೆ ಜಾಹೀರಾತು ನೀಡಿತು. ಇದರಿಂದಾಗಿ ಹೆಚ್ಚಿನ ಅರ್ಹ ಅಭ್ಯರ್ಥಿಗಳಿಗೆ ವಿಷಯ ತಿಳಿಯದೇ ಇದ್ದುದರಿಂದ, ಕೇವಲ ಐದು ಮಂದಿ ಮಾತ್ರ ಆಡಳಿತ ಮಂಡಳಿಗೆ ಬೇಕಾದವರೇ ಅರ್ಜಿಗಳನ್ನು ಸಲ್ಲಿಸಿದ್ದು, ಇದರಲ್ಲಿ ಕಡಿಮೆ ಅಂಕಗಳನ್ನು ಪಡೆದ ಪ್ರಸನ್ನ ಅಡಿಗ ಹಾಗೂ ಶ್ರೀಮತಿ ಝಾನ್ಸಿ ಬಾರ್ನೆಸ್ ಎಂಬವರನ್ನು ನೇಮಕಾತಿ ಮಾಡಿಕೊಳ್ಳುವ ಮೂಲಕ ಇಲ್ಲೂ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಕೋಟ್ಯಾನ್ ಅಪಾದಿಸಿರು.

ಪ್ರಕರಣವು ಸದನ ಸಮಿತಿ, ಕರ್ನಾಟಕ ಲೋಕಾಯುಕ್ತ ಹಾಗೂ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಆಯೋಗದಲ್ಲಿ ವಿಚಾರಣೆಗೆ ಬಾಕಿ ಇದ್ದು, ಈ ಸಂದರ್ಭದಲ್ಲಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಂಡಿರುವುದು ನ್ಯಾಯಾಂಗ ನಿಂದನೆಯೂ ಆಗಿದೆ ಎಂದು ರಮೇಶ್ ಕೋಟ್ಯಾನ್ ಹೇಳಿದರು.

ಎಸ್.ಎಂ.ಎಸ್. ಅನುದಾನಿತ ಪದವಿಪೂರ್ವ ಕಾಲೇಜು ಭಾಷಾ ಅಲ್ಪಸಂಖ್ಯಾತರ ಸಂಸ್ಥೆ ಎಂದು ನೋಂದಾವಣೆಯಾಗಿದ್ದರೂ, ಸರಕಾರದ ನಿಯಮಾವಳಿಯಂತೆ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೇಕಡಾವಾರು 25ರಷ್ಟು ಇಲ್ಲದೇ ಇರುವುದರಿಂದ 2012ರ ಜುಲೈ 24ರ ತನ್ನ ಆದೇಶದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯು ಎಸ್.ಎಂ.ಎಸ್.ಪದವಿಪೂರ್ವ ಕಾಲೇಜನ್ನು ಮತೀಯ ಅಲ್ಪ ಸಂಖ್ಯಾತ ಕಾಲೇಜು ಎಂದು ಘೋಷಿಸಿರುವುದನ್ನು ತಿರಸ್ಕರಿಸಿರುತ್ತದೆ ಎಂದು ಸ್ಪಷ್ಟಪಡಿಸಿದ ರಮೇಶ್ ಕೋಟ್ಯಾನ್, ಸಂಸ್ಥೆಯೂ ಎರಡನೇ ಬಾರಿಯೂ ನಿಯಮಾವಳಿಗಳನ್ನು ಉಲ್ಲಂಘಿಸಿ ಉಪನ್ಯಾಸಕರನ್ನು ನೇಮಕಾತಿ ಮಾಡಿರುವುದರಿಂದ ಈ ನೇಮಕಾತಿಯನ್ನು ಸಹ ರದ್ದುಗೊಳಿಸುವಂತೆ ಸರಕಾರವನ್ನು ಆಗ್ರಹಿಸಲಾಗಿದೆ ಎಂದು ತಿಳಿಸಿದರು.

ದಸಂಸ ಪ್ರಮುಖರಾದ ಕೆ.ಕರುಣಾಕರ ಮಾಸ್ತರ್ ಮಲ್ಪೆ, ಎಂ.ದೇವದಾಸ್, ಪ್ರಶಾಂತ್ ತೊಟ್ಟಂ, ಕೃಷ್ಣ ಬಜೆ ಕುಕ್ಕೆಹಳ್ಳಿ, ರವಿ ಪಲಿಮಾರು, ಸುಂದರ್ ಎನ್.ಅಂಜಾರು ಮೊದಲಾದವರು ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಉಡುಪಿ: ಪಡುಬಿದ್ರಿ ಗ್ರಾಮದಲ್ಲಿ ಸ್ಥಾಪನೆಗೊಂಡ ಸುಜ್ಲಾನ್ ಕಂಪೆನಿಗಾಗಿ ಭೂಮಿ ಕಳೆದುಕೊಂಡು ನಿರ್ವಸಿತರಾದ ಮೂಲನಿವಾಸಿ ಕಡುಬಡ ಕೊರಗ ಕುಟುಂಬಗಳಿಗೆ ಪುನರ್ವಸತಿ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ), ಡಿವೈಎಫ್ಐ ಮತ್ತು ಕರ್ನಾಟಕ ಜನಪರ ವೇದಿಕೆ ಇವುಗಳ ಜಂಟೀ ಆಶ್ರಯದಲ್ಲಿ ಜುಲೈ 22ರಂದು ಪಡುಬಿದ್ರಿಯಲ್ಲಿ ಹಕ್ಕೊತ್ತಾಯ ಜಾಥಾ ಹಾಗೂ ಹಕ್ಕೊತ್ತಾಯ ಸಭೆ ನಡೆಯಿತು.

ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬೇಡಿ ಆರ್ಆರ್ ಕಾಲನಿಯಿಂದ ಹೊರಟ ಜಾಥಾ, ಪಡುಬಿದ್ರಿ ಗ್ರಾ.ಪಂ.ಕಚೇರಿ ಮುಂಭಾಗದಲ್ಲಿ ಸಮಾಪ್ತಿಗೊಂಡಿತು. ಜಾಥಾದುದ್ದಕ್ಕೂ ಜಾಥಾದಲ್ಲಿ ಪಾಲ್ಗೊಂಡವರು ಸರಕಾರ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಸುಜ್ಲಾನ್ ಕಂಪೆನಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜಾಥಾದ ಬಳಿಕ ಗ್ರಾ.ಪಂ.ಕಚೇರಿ ಎದುರು ಸಭೆ ನಡೆಸಲಾಯಿತು. ದಲಿತ ಚಿಂತಕರಾದ ಲೋಲಾಕ್ಷ, ದಸಂಸ ವಿಭಾಗೀಯ ಸಂಚಾಲಕರಾದ ಶೇಖರ ಹೆಜಮಾಡಿ, ಡಿವೈಎಫ್ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷರಾದ ಶ್ರೀರಾಮ ದಿವಾಣ, ದಲಿತ ಪರ ಹೋರಾಟಗಾರರಾದ ಲಿಂಗಪ್ಪ ನಂತೂರು ಮೊದಲಾದವರು ನಿರ್ವಸಿತ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡುವಂತೆ ಸರಕಾರವನ್ನು ಒತ್ತಾಯಿಸಿದರು. ಸಂತ್ರಸ್ತ ಕುಟುಂಬಗಳ ಪರವಾಗಿ ಎಂಎಸ್ಡಬ್ಲೂ ಪದವೀಧರೆ ಶ್ರೀಮತಿ ಮಾತನಾಡಿದರು.

ಭಾರತ ಅಭ್ಯುದಯ ಪ್ರತಿಷ್ಠಾನದ ಅಧ್ಯಕ್ಷರಾದ ಉಮಾನಾಥ ಪಡುಬಿದ್ರಿ, ದಸಂಸ ಮುಖಂಡರಾದ ಹರೀಶ್ ಕಂಚಿನಡ್ಕ, ಕೇಶವ ಸಿ.ಸಾಲ್ಯಾನ್, ಡಿವೈಎಫ್ಐ ಮುಖಂಡರಾದ ವರಪ್ರಸಾದ್ ಬಜಾಲ್, ವಿಠಲ ಮಲೆಕುಡಿಯ, ಜನಪರ ವೇದಿಕೆ ಮುಖಂಡರಾದ ಮೊಹಮ್ಮದ್ ಹಂದಟ್ಟು, ಹೇಮಂತ್ ಕುಂದರ್, ಶೇಖರ ಶೆಟ್ಟಿ, ಪ್ರಕಾಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಹಕ್ಕೊತ್ತಾಯ ಸಭೆಯ ಬಳಿಕ ಗ್ರಾ.ಪಂ.ಅಧ್ಯಕ್ಷರಾದ ವಿಜಯ ಸನಿಲ್ ಹಾಗೂ ಪಿಡಿಓ ಮಮತಾ ಶೆಟ್ಟಿ ಇವರ ಮೂಲಕ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಸುಜ್ಲಾನ್ ಕಂಪೆನಿಯು ಇದುವರೆಗೆ ನಡೆಸಿದ ಎಲ್ಲಾ ವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕು, ಸುಜ್ಲಾನ್ ವಶದಲ್ಲಿರುವ ಹೆಚ್ಚುವರಿ ಭೂಮಿಯನ್ನು ಸರಕಾರ ವಶಪಡಿಸಿಕೊಂಡು ನಿರ್ವಸಿತರಿಗೆ ಹಾಗೂ ಭೂರಹಿತರಿಗೆ ಹಂಚಬೇಕು, ಪಡುಬಿದ್ರಿ ಗ್ರಾಮದ ಸರ್ವೆ ನಂಬ್ರ 69/1 ರಲ್ಲಿರುವ ಭೂಮಿ ಪ್ರಸ್ತುತ ಕೆಐಡಿಬಿ ಸ್ವಾಧೀನದಲ್ಲಿದ್ದು, ಇದನ್ನು ಯಾವುದೇ ಕಾರಣಕ್ಕೂ ಸುಜ್ಲಾನ್ ಗೆ ನೀಡಬಾರದು, ಬದಲಾಗಿ ಇದನ್ನೂ ಸಹ ನಿರ್ವಸಿತರಿಗೆ ಹಾಗೂ ಭೂರಹಿತರಿಗೆ ವಿತರಿಸಬೇಕು, ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರನ್ನು ಸಂಪುಟದಿಂದ ಕೈಬಿಡಬೇಕು, ನಿರ್ವಸಿತ ಕೊರಗ ಕುಟುಂಬದಲ್ಲಿ ಮೂವರು ಪದವೀಧರ ವಿದ್ಯಾರ್ಥಿನಿಯರಿದ್ದು, ಇವರಿಗೆ ಸೂಕ್ತ ಉದ್ಯೋಗ ನೀಡಬೇಕು ಎಂಬ ಬೇಡಿಕೆಗಳನ್ನು ಸರಕಾರದ ಮುಂದೆ ಇರಿಸಲಾಗಿದೆ.

ಉಡುಪಿ: ಕುದಿ ಗ್ರಾಮದ ಸರ್ವೆ ನಂಬ್ರ 85/2ರ ಹತ್ತು ಸೆಂಟ್ಸ್ ಸ್ಥಳವನ್ನು ಕಬಳಿಸುವ ದುರುದ್ಧೇಶದಿಂದ ಇಲ್ಲಿ ವಾಸವಾಗಿರುವ ವೇದವ್ಯಾಸ ಅಡಿಗ ಎಂಬವರ ಬಡ ಬ್ರಾಹ್ಮಣ ಕುಟುಂಬಕ್ಕೆ ಕಿರುಕುಳ ನೀಡಿ ಒಕ್ಕಲೆಬ್ಬಿಸುವ ಹುನ್ನಾರದೊಂದಿಗೆ ಸ್ಥಳೀಯ
ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರು ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿ ಫಲಭರಿತ ಮರಗಳನ್ನು ಕಡಿದು ನಾಶಪಡಿಸಿದ್ದು, ಇದರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮಕೈಗೊಳ್ಳದೇ ಇದ್ದಲ್ಲಿ ಬೀದಿಗಿಳಿದು ಹೋರಾಟ ನಡೆಸುವುದಾಗಿ ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ದೇಜಪ್ಪ ಹಿರಿಯಡ್ಕ ಮುನ್ನೆಚ್ಚರಿಕೆ ನೀಡಿದ್ದಾರೆ.

ದೇವಸ್ಥಾನದ ಮುಖ್ಯಸ್ಥರಾದ ಕುದಿ ವಸಂತ ಶೆಟ್ಟಿ, ಅರ್ಚಕರಾದ ಗುರುರಾಜ ಭಟ್ ಹಾಗೂ ಇತರರು ಅಡಿಗರವರ ಸ್ಥಳಕ್ಕೆ ಪದೇ ಪದೇ ಅಕ್ರಮ ಪ್ರವೇಶ ಮಾಡುವುದು, ಬಲವಂತವಾಗಿಯೇ ಲಕ್ಷಾಂತರ ರು. ಬೆಲೆ ಬಾಳುವ ಬೋಗಿ ಮರ, ಫಲಭರಿತ ತೆಂಗಿನ ಮರಗಳನ್ನು ಕಡಿದಿದ್ದಾರೆ. ಸರಕಾರಿ ಜಾಗದಲ್ಲಿರುವ ಕೊಳವೆಬಾವಿಯನ್ನೂ ನಾಶಪಡಿಸಿದ್ದಾರೆ. ಆಕ್ಷೇಪಿಸಿದಾಗ ಜಾಗ ಬಿಟ್ಟು ತೆರಳುವಂತೆಯೂ, ಹೋಗದಿದ್ದರೆ ಬಿಡುವುದಿಲ್ಲವೆಂದು ಜೀವ ಬೆದರಿಕೆ
ಹಾಕುತ್ತಿದ್ದಾರೆ. ಇಂಥ ಯಾವುದೇ ದೌರ್ಜನ್ಯ ಮತ್ತು ಅಕ್ರಮಗಳ ವಿರುದ್ಧವೂ ಪೊಲೀಸ್ ಇಲಾಖೆಯಾಗಲಿ, ಅರಣ್ಯ ಇಲಾಖೆಯಾಗಲಿ, ಕಂದಾಯ ಇಲಾಖೆಯಾಗಲಿ ಇದುವರೆಗೂ ಸೂಕ್ತ ಕ್ರಮ ಕೈಗೊಳ್ಳದೆ ಪಕ್ಷಪಾತವೆಸಗಿದೆ ಎಂದು ದೇಜಪ್ಪ ಹಿರಿಯಡ್ಕ ಆರೋಪಿಸಿದ್ದಾರೆ.

ವೇದವ್ಯಾಸ ಅಡಿಗ ಕುಟುಂಬ ಹತ್ತು ಸೆಂಟ್ಸ್ ಸ್ಥಳದಲ್ಲಿ ಕಾನೂನು ಬದ್ಧವಾಗಿಯೇ ವಾಸ್ತವ್ಯವಿದ್ದಾರೆ. ಕಳೆದ 15ಕ್ಕೂ ಅಧಿಕ ವರ್ಷಗಳಿಂದ ಇಲ್ಲಿ ವಾಸ್ತವ್ಯವಿರುವ ಬಡ ಕುಟುಂಬದ ಸ್ಥಿರಾಸ್ತಿಯನ್ನು ಕಬಳಿಸುವ ಉದ್ಧೇಶದಿಂದ ಇದೀ ಈ ಜಾಗ ದೇವಸ್ಥಾನಕ್ಕೆ ಸೇರಿದ್ದು ಎಂದು ವಾದಿಸಲಾಗುತ್ತಿದೆ. ಆದರೆ ವಾಸ್ತವವಾಗಿ ಈ ಜಾಗ ದೇವಸ್ಥಾನಕ್ಕೆ ಸೇರಿದ್ದಲ್ಲ. ಸರಕಾರದಿಂದ ಅಡಿಗರ ಕಕುಟುಂಬಕ್ಕೆ ಕಾನೂನುಬದ್ಧವಾಗಿ ಲಭಿಸಿದ ಭೂಮಿ ಎಂದು ದಸಂಸ ಮುಖಂಡ ದೇಜಪ್ಪ ಸ್ಪಷ್ಟಪಡಿಸಿದ್ದಾರೆ.

ಬಡ ಕುಟುಂಬದ ಮೇಲೆ ದೌರ್ಜನ್ಯ ನಡೆಸುತ್ತಿರುವವರ ವಿರುದ್ಧ ತಡಮಡದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿರುವ ದಸಂಸ ಮುಖಂಡ ದೇಜಪ್ಪ ಅವರು, ವೇದವ್ಯಾಸ ಅಡಿಗ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದೂ ಮನವಿ
ಮಾಡಿದ್ದಾರೆ.

# ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ತನಿಕೋಡು ಚೆಕ್ ಪೋಸ್ಟ್ ನಲ್ಲಿ ಜಾನಾವಾರು ಸಾಗಾಟ ಮಾಡುತ್ತಿದ್ದ ಮಂಗಳೂರು ಸಮೀಪದ ಜೋಕಟ್ಟೆಯ ಕಬೀರ್ (28) ಎಂಬವರನ್ನು ಗುಂಡು ಹೊಡೆದು ಕೊಲೆಗೈದ ಎಎನ್ಎಫ್ ಪೊಲೀಸ್ ಪೇದೆ ನವೀನ್ ನಾಯ್ಕ ಎಂಬವರಿಗೆ ಕಾರ್ಕಳ ವಿಧಾನಸಭೆಯ ಭಾರತೀಯ ಜನತಾ ಪಾರ್ಟಿಯ ಶಾಸಕ ವಿ.ಸುನಿಲ್ ಕುಮಾರ್ ಹಾಗೂ ಸಂಘ ಪರಿವಾರದ ಕೆಲವು ಮಂದಿ ನಾಯಕರು 50 ಸಾವಿರ ರು.ಗಳಿಂದ 50 ಲಕ್ಷ ರು.ಗಳವರೆಗೆ ನಗದು ಬಹುಮಾನ ಘೊಷಿಸಿದ್ದಾರೆ.

ಇದೊಂದು ಅತೀ ಕೆಟ್ಟ ಬೆಳವಣಿಗೆ. ಅಕ್ಷಮ್ಯ ಅಪರಾಧವೇ ಸರಿ. ಕೆಲವೊಂದು ಮುಸ್ಲಿಂ ಉಗ್ರಗಾಮಿ ಸಂಘಟನೆಗಳು ತಮ್ಮ ಶತ್ರುಗಳನ್ನು ಕೊಂದವರಿಗೆ ಬಹುಮಾನ ಘೋಷಿಸಿರುವುದು ಈ ಹಿಂದೆ ಪತ್ರಿಕೆಗಳಲ್ಲಿ ವರದಿಯಾದುದಿದೆ. ಅವುಗಳಾದರೋ ಅಧಿಕೃತವಾಗಿಯೇ ಉಗ್ರಗಾಮಿ ಸಂಘಟನೆಗಳು. ಇದೇ ಕಾರಣಕ್ಕೆ ಹಲವು ದೇಶಗಳು ಇಂಥ ಸಂಘಟನೆಗಳನ್ನು ನಿಷೇಧಿಸಿದ್ದು ಜಗಜ್ಜಾಹೀರು. ಆದರೆ, ಈ ಸಂಘ ಪರಿವಾರದ ಸಂಘಟನೆಗಳಿಗೇನಾಗಿದೆ ?

ತಮ್ಮದು ಸಾಂಸ್ಕೃತಿಕ ಸಂಘಟನೆ, ರಾಜಕೀಯ ಪಕ್ಷ ಎಂದೆಲ್ಲಾ ಘೋಷಿಸಿಕೊಂಡು ಕೊಲೆಗಡುಕನಿಗೆ ಬಹುಮಾನ ಪ್ರಕಟಿಸಿದರೆ, ಮುಸ್ಲೀಮ್ ಉಗ್ರ ಸಂಘಟನೆಗಳಿಗೂ, ಸಂಘ ಪರಿವಾರದ ಸಂಘಟನೆಗಳಿಗೂ ವ್ಯತ್ಯಾಸವಿಲ್ಲದಂತಾಗುತ್ತದೆ. ಮುಸ್ಲೀಮ್ ಉಗ್ರ ಸಂಘಟನೆಯ ಹಾದಿಯನ್ನೇ ಸಂಘ ಪರಿವಾರದ ಸಂಘಟನೆಗಳೂ ಹಿಡಿಯುತ್ತಿದೆ ಎಂದೇ ಭಾವಿಸಬೇಕಾಗುತ್ತದೆ. ಸಂಘ ಪರಿವಾರದ ಸಂಘಟನೆಗಳು ಮುಸ್ಲೀಮ್ ಧ್ವೇಷವನ್ನೇ ಉಸಿರಾಡುತ್ತಿರುವುದೇ ಇವರು ಹೀಗೆ ಹೇಳಲು ಕಾರಣವೆಂಬುದನ್ನು ಯಾರೂ ಬೇಕಾದರೂ ಅರ್ಥೈಸಿಕೊಳ್ಳಬಹುದು. ಆದರೆ, ಹೀಗೆ ಘೋಷಿಸುವುದು ಕಾನೂನು ಬಾಹಿರ, ಅನೈತಿಕ.

‘ಕಬೀರ್ ನನ್ನು ಕೊಲೆಗೈದ ನವೀನ್ ನಾಯ್ಕನಿಗೆ ಧನ ಸಹಾಯದ ಜೊತೆಗೆ, ಇಂಥ ಘಟನೆಗಳು ಇನ್ನಷ್ಟೂ ನಡೆಯಬೇಕು, ನವೀನ್ ನಾಯ್ಕನಂಥವರು ನೂರಾರು ಜನ ತಯಾರಾಗಬೇಕು’ ಎಂದೂ ಶಾಸಕ ಸುನಿಲ್ಕುಮಾರ್ ತನ್ನ ಭಾಷಣದಲ್ಲಿ ಘೋಷಿಸಿದ್ದರು. ಇದು ಅಪರಾಧ ಕೃತ್ಯಕ್ಕೆ ಬಹಿರಂಗವಾಗಿಯೇ ಬೆಂಬಲ, ಪ್ರೋತ್ಸಾಹ, ಪ್ರಚೋದನೆ ಕೊಟ್ಟಂತೆ. ಕೊಲೆ ಮಾಡುವುದು ಎಷ್ಟು ಅಪರಾಧವೋ, ಕೊಲೆಗೆ ಪ್ರೋತ್ಸಾಹ, ಪ್ರಚೋದನೆ, ಕೊಲೆಗಾರನಿಗೆ ಬೆಂಬಲ ನೀಡುವುದು ಸಹ ಅಷ್ಟೇ ದೊಡ್ಡ ಅಪರಾಧ. ಒಂದು ರೀತಿಯಲ್ಲಿ ಇದು ಇಂಥದ್ದೇ ಮುಂದಿನ ಕೊಲೆಗಳಿಗೆ ಸುಪಾರಿ ಕೊಟ್ಟಂತೆ.

ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸುವ ಸಂದರ್ಭದಲ್ಲಿ ಸಹ ಯಾವುದೇ ದೇಶಗಳೂ ಕೂಡಾ ಭಯೋತ್ಪಾದಕರ ಹತ್ಯೆಗೆ ಬಹಿರಂಗವಾಗಿ ಕರೆ ಕೊಡುವುದಿಲ್ಲ. ಬದಲಾಗಿ ಭಯೋತ್ಪಾದಕರ ಭಾವಚಿತ್ರವನ್ನು ಸಾರ್ವಜನಿಕಗೊಳಿಸುವುದರ ಜೊತೆಗೆ ಮಾಹಿತಿ ನೀಡಿದವರಿಗೆ ಲಕ್ಷಾಂತರ ರು.ಗಳ ಬಹುಮಾನ ಘೋಷಿಸುತ್ತವೆ. ನಕ್ಸಲೀಯ ಚಳುವಳಿಯಲ್ಲಿ ನಿರತರಾದವರ ಭಾವಚಿತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ, ಇವರ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಪ್ರಕಟಿಸುತ್ತದೆ. ಇದರ ಅರ್ಥ, ಶಂಕಿತ ಆರೋಪಿಗಳು ಜೀವಂತ ಸೆರೆ ಸಿಕ್ಕಬೇಕು ಎಂಬುದಲ್ಲದೇ ಮತ್ತೇನೂ ಅಲ್ಲ. ಆರೋಪಿಗಳು ಜೀವಂತ ಸೆರೆ
ಹಿಡಿಯಲ್ಪಡಬೇಕು. ಬಳಿಕ ಇವರನ್ನು ಇಲಾಖಾಧಿಕಾರಿಗಳು ವಿಚಾರಣೆಗೆ ಒಳಪಡಿಸಿ ಮತ್ತಷ್ಟೂ ಮಾಹಿತಿಗಳನ್ನು ಸಂಗ್ರಹಿಸಬೇಕು, ನಂತರ ನ್ಯಾಯಾಲಯ ವಿಚಾರಣೆಗೆ ಗುರಿಪಡಿಸಬೇಕು, ಅಂತಿಮವಾಗಿ ಅಪರಾಧ ಸಾಬೀತಾಗಿ ಶಿಕ್ಷೆ ನೀಡಬೇಕು ಎಂಬ ಉದ್ಧೇಶವೇ ಇಲ್ಲಿರುವುದು ಹೊರತು ಬೇರೇನೂ ಅಲ್ಲ. ವಾಸ್ತವ ಮತ್ತು ಆಶಯ ಹೀಗಿರುವಾಗ ಕೊಲೆ ಆರೋಪಿಯೋರ್ವನಿಗೆ ನಗದು ಬಹುಮಾನ ಘೋಷಿಸುವುದು, ಇಂಥ ಕೃತ್ಯಗಳು ಇನ್ನಷ್ಟೂ ನಡೆಯಬೇಕು ಎಂದು ಪ್ರಚೋದಿಸುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ.

ಶಾಸಕ ಸುನಿಲ್ ಕುಮಾರ್ ಹಾಗೂ ಇತರ ಕೆಲವರು ವ್ಯಕ್ತಪಡಿಸಿರುವ ಅಭಿಪ್ರಾಯ, ನಿಲುವುಗಳು ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳ ಅಧಿಕೃತ ನಿಲುವುಗಳಾ ಎನ್ನುವುದು ಬಿಜೆಪಿ ಮತ್ತು ಸಂಘ ಪರಿವಾರದ ಸಂಬಂಧಿಸಿದ ಸಂಘಟನೆಗಳು ಸ್ಪಷ್ಟಪಡಿಸಿಬೇಕು. ಬಿಜೆಪಿ ಮತ್ತು ಸಂಬಂಧಿಸಿದ ಸಂಘಟನೆಗಳು ಹೀಗೆ ಮಾಡುತ್ತವೆ ಎಂದು ಹೇಳಲಾಗುವುದಿಲ್ಲ. ಕಾರಣ, ಈ ವಿಷಯದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ನಿಷೇಧಿತ ನಕ್ಸಲೀಯ ಸಂಘಟನೆಯಾದ ಸಿಪಿಐ (ಮಾವೋವಾದಿ) ಪಕ್ಷದ ನೀತಿಯನ್ನೇ ಅನುಸರಿಸಬಹುದು. ನಕ್ಸಲರು ಆಕ್ರಮಣ ಮಾಡಲು ಸೂಕ್ತ ಕಾಲ ಎಂದು ಕಂಡು ಬಂದಾಗ ಆಕ್ರಮಣ ನಡೆಸಿಬಿಡುತ್ತವೆ. ಬಳಿಕ ಪ್ರಭುತ್ವದ ಕಾರ್ಯಾಚರಣೆ ಚುರುಕುಗೊಂಡಾಗ, ಹಿಂದೆ ಸರಿದು ಬಿಡುತ್ತದೆ. ಇದು ನಕ್ಸಲ್ ಸಂಘಟನೆಯ ಒಂದು ಯುದ್ಧತಂತ್ರ. ಸಂಘ ಪರಿವಾರ ಕೂಡಾ ಹೀಗೆಯೇ ಮಾಡಿಬಿಡುವ ಸಾಧ್ಯತೆ ಇದೆ. ಭಾಷಣಗಳಲ್ಲಿ ತನ್ನ ನಿಜ ಮುಖವನ್ನು ಪ್ರದರ್ಶಿಸುವುದು. ಬಳಿಕ ಸಮಸ್ಯೆಯಾದಾಗ ‘ಅದು ಒಬ್ಬ ವ್ಯಕ್ತಿಯ ವಯುಕ್ತಿಕ ಅಭಿಪ್ರಾಯ, ಅವರ ಅಭಿಪ್ರಾಯಕ್ಕೂ ಸಂಘಟನೆಗೂ ಸಂಬಂಧವೇ ಇಲ್ಲ’ ಎಂದು ಹೇಳಿಬಿಡಬಹುದು.

ಶಾಸಕ ಸುನಿಲ್ ಕುಮಾರ್ ಆಗಲೀ, ಸಂಘ ಪರಿವಾರದ ಸಂಘಟನೆಗಳಾಗಲೀ ಸ್ಪಷ್ಟನೆ ಕೊಡುವುದಕ್ಕಿಂತಲೂ ಮುಖ್ಯವಾದುದು, ನಮ್ಮ ದೇಶದ ಕೇಂದ್ರ ಮತ್ತು ರಾಜ್ಯ ಸರಕಾರಗಳು, ರಾಷ್ಟ್ರಪತಿ, ರಾಜ್ಯಪಾಲರು, ಚುನಾವಣಾ ಆಯೋಗ, ಲೋಕಸಭಾಧ್ಯಕ್ಷರು, ವಿಧಾನಸಭೆಯ ಸಭಾಪತಿಗಳು, ಪೊಲೀಸ್ ಇಲಾಖಾಧಿಕಾರಿಗಳೆಲ್ಲ ಏನು ಮಾಡುತ್ತಿದ್ದಾರೆ ಎಂಬುದು ಬಹಿರಂಗವಾಗಬೇಕು. ಭಾರತದ ಸಂವಿಧಾನದಲ್ಲಿ ಸಂವಿಧಾನದ್ಧವಾಗಿ ಪ್ರಮಾಣ ವಚನ ಸ್ವೀಕರಿಸಿಕೊಂಡು ಶಾಸಕನಾದ ವ್ಯಕ್ತಿ ಹೀಗೆ ಭಾಷಣ ಮಾಡಲು ಅವಕಾಶ ಇದೆಯೇ, ಇಲ್ಲವೇ, ಇಲ್ಲವೆಂದಾದರೆ ಹಾಗೆ ಮಾಡಿದ ವ್ಯಕ್ತಿಯ ವಿರುದ್ಧ ಮತ್ತು ಪಕ್ಷ ಮತ್ತು ಸಂಘಟನೆಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬುದನ್ನು ಸಂಬಂಧಪಟ್ಟ ಸಂಸ್ಥೆಗಳು ಹಾಗೂ ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಿರುವ ಉನ್ನತ ಅಧಿಕಾರಿಗಳು ಸ್ಪಷ್ಟಪಡಿಸಬೇಕು.

ದೇಶದಲ್ಲಿ ಸಮರ್ಥವಾದೊಂದು ಚುನಾವಣಾ ಆಯೋಗ ಇರುತ್ತಿದ್ದರೆ, ಬಿಜೆಪಿಯಂಥ ಪಕ್ಷ ನೋಂದಣಿಯೇ ಆಗುತ್ತಿರಲಿಲ್ಲ. ಹೋಗಲಿ, ಹೇಗೋ ನೋಂದಣಿಯಾಯಿತು. ನೋಂದಣಿಯಾದ ಮೇಲೆ ಪಕ್ಷಗಳ ನಡೆ-ನುಡಿ ಬಹಿರಂಗಕ್ಕೆ ಬಂದ ಬಳಿಕವಾದರೂ, ಪಕ್ಷದ ನಿಜವಾದ ಧ್ಯೇಯೋದ್ಧೇಶಗಳು ಜಗಜ್ಜಾಹೀರುಗೊಂಡ ಬಳಿಕವಾದರೂ ಅಂಥ ಪಕ್ಷದ ನೋಂದಣಿಯನ್ನು ರದ್ದುಗೊಳಿಸುವ ಕೆಲಸ ಮಾಡಬೇಡವೇ ? ಯಾಕೆ ಈ ತುರ್ತು ಕೆಲಸವನ್ನು ಚುನಾವಣಾ ಆಯೋಗ ಅಥವಾ ಇತರ ಸಂಸ್ಥೆಗಳು, ಹಿರಿಯ ಅಧಿಕಾರಿಗಳು ಮಾಡುತ್ತಿಲ್ಲ ? ಶಾಸಕರ ಶಾಸಕತ್ವವನ್ನಾದರೂ ರದ್ದುಪಡಿಸಬೇಡವೇ ?

ಇದು ಬಿಜೆಪಿಗೆ ಮಾತ್ರ ಸೀಮಿತವಾದ ಮಾತಲ್ಲ. ಇತರ ಕೆಲವು ಪ್ರಮುಖ ರಾಜಕೀಯ ಪಕ್ಷಗಳೂ ಬಿಜೆಪಿಯ ಸಾಲಿನಲ್ಲೇ ಇವೆ. ಶಾಸಕ ಸುನಿಲ್ ಕುಮಾರ್ ರಂಥ ಇನ್ನಷ್ಟು ಜನಪ್ರತಿನಿಧಿಗಳೂ ಈ ಪಟ್ಟಿಯಲ್ಲಿದ್ದಾರೆ. ಇಂಥವರೆಲ್ಲರ ಪಟ್ಟಿಯೊಂದನ್ನು ತಯಾರಿಸಿ ಇವರುಗಳ ವಿರುದ್ಧ ಕ್ರಮಕೈಗೊಳ್ಳುವ ಕನಿಷ್ಟ ಕರ್ತವ್ಯವನ್ನೂ ಯಾಕೆ ಯಾವ ಜವಾಬ್ದಾರಿಯುತ ಸಂಸ್ಥೆಗಳೂ ಮಾಡುತ್ತಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ. ಸಂವಿಧಾನಬದ್ಧವಾಗಿ ನಡೆಯದ ಜನಪ್ರತಿನಿಧಿಗಳ ಜನಪ್ರತಿನಿಧಿತ್ವವನ್ನು ಯಾವುದೇ ಮುಲಾಜಿಲ್ಲದೆ ರದ್ದುಪಡಿಸಬೇಕು. ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುವಂಥ ಸಂಸ್ಥೆಗಳು, ಅವುಗಳು ಎಷ್ಟೇ ದೊಡ್ಡ ಸಂಸ್ಥೆಗಳಾಗಿರಲಿ ಅಂಥ ಸಂಸ್ಥೆಗಳನ್ನು ನಿಷೇಧಿಸಬೇಕು.

ಮಾದರಿಯಾಗಬೇಕಾದ, ಆದರ್ಶವಾಗಬೇಕಾದ ಪಕ್ಷಗಳು, ಸಂಘಟನೆಗಳು, ಜನಪ್ರತಿನಿಧಿಗಳು, ಸಂವಿಧಾನ ವಿರೋಧಿಯಾಗಿ, ಕಾನೂನು ಬಾಗಿರವಾಗಿ ನಡೆದುಕೊಳ್ಳುವುದು, ಇವುಗಳು ಒಂದು ಮನೋರಂಜನೆಯ ವಿಷಯ ಎಂಬಂತೆ ಪತ್ರಿಕೆಗಳಲ್ಲಿ, ಟಿವಿ ಛಾನೆಲ್ ಗಳಲ್ಲಿ ಪ್ರಸಾರವಾಗುವುದು, ಮರುದಿನವೇ ಇವುಗಳೆಲ್ಲವನ್ನೂ ಎಲ್ಲರೂ ಮರೆತುಬಿಡುವುದು ಇಂದು ನಡೆಯುತ್ತಿದೆ. ಕಳೆದ ಐದಾರು ದಶಕಗಳಿಂದಲೂ ದೇಶದಲ್ಲಿ ಹೀಗೆಯೇ ನಡೆದುಕೊಂಡು ಬಂದಿದೆ. ಕ್ರಮ ತೆಗೆದುಕೊಳ್ಳಬೇಕಾದವರು ಜಾಣ ಮೌನ ವಹಿಸಿಕೊಂಡು ಬಂದಿದ್ದಾರೆ. ಹಾಗಾಗಿಯೇ ಇಂಥ ಅಕ್ರಮಗಳು ಯಾವುದೇ ಅಡೆತಡೆಗಳೂ ಇಲ್ಲದೆ ಮುಂದುವರಿದುಕೊಂಡು ಬಂದಿದೆ.

ಕಳೆದ ಆರು ದಶಕಗಳಿಂದ ದೇಶ ಮತ್ತು ರಾಜ್ಯವನ್ನಾಳಿದ ಸರಕಾರಗಳು, ಮಂತ್ರಿಗಳು, ಉನ್ನತ ಸರಕಾರಿ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಗಳನ್ನು, ಕರ್ತವ್ಯಗಳನ್ನು ಸಮರ್ಥವಾಗಿ, ದಕ್ಷತೆಯಿಂದ ನಿರ್ವಹಿಸದೇ ಇದ್ದುದೇ ಇಂದಿನ ಇಂಥ ಎಲ್ಲಾ ಅವಾಂತರಗಳಿಗೂ ಮೂಲ ಕಾರಣ. ಬಹುಕಾಲ ನಮ್ಮನ್ನಾಳಿದ ಕಾಂಗ್ರೆಸ್ ಪಕ್ಷವೇ ಒಂದು ಮಾನ್ಯತೆ ಕಳೆದುಕೊಳ್ಳಬೇಕಾದ, ರದ್ದುಗೊಳಬೇಕಾದ ಪಕ್ಷವಾಗಿರುವಾಗ, ಈ ಪಕ್ಷದಲ್ಲೇ ಜನಪ್ರತಿನಿಧಿತ್ವವನ್ನು ಕಳೆದುಕೊಳ್ಳಬೇಕಾದ ಜನಪ್ರತಿನಿಧಿಗಳು ಇರುವಾಗ, ಇಂಥ ಪಕ್ಷದ ಸರಕಾರ ಸಂವಿಧಾನಬದ್ಧವಾಗಿ, ಕಾನೂನು ಪ್ರಕಾರ ನಡೆದುಕೊಳ್ಳುವ ಸಾಹಸವನ್ನು ಪ್ರದರ್ಶಿಸಲು ಸಾಧ್ಯವಿಲ್ಲ ತಾನೇ ? ಇಲ್ಲಿ ಆಗಿರುವುದು ಸಹ ಇದುವೇ ! – ಶ್ರೀರಾಮ ದಿವಾಣ.

ಧರ್ಮಸ್ಥಳ ಗ್ರಾಮದ ಪಾಂಗಾಳ ಮನೆಯ ಚಂದಪ್ಪ ಗೌಡ-ಕುಸುಮಾವತಿ ದಂಪತಿಗಳ ಐವರು ಮಕ್ಕಳಲ್ಲಿ ಎರಡನೆಯವಳಾದ ಸೌಜನ್ಯಾ (17), ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ದ್ವಿತಿಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿ.

2012ರ ಅಕ್ಟೋಬರ್ 09 ರಂದು ಸಂಜೆ ಗಂಟೆ 4.15 ಕ್ಕೆ ಎಂದಿನಂತೆ ಕಾಲೇಜ್ ನಿಂದ ಹೊರಟು ನೇತ್ರಾವತಿ ಸ್ನಾನಘಟ್ಟ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ಮನೆ ಕಡೆ ನಡೆದುಕೊಂಡು ಹೊರಟಿದ್ದಾಳೆ. ಇದನ್ನು ಈಕೆಯ ಮಾವ ವಿಠಲ ಗೌಡರು ನೋಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ನಿಗೂಢವಾಗಿ ಕಾಣೆಯಾಗಿದ್ದಾಳೆ. ಐದಡಿ ಐದಿಂಚು ಎತ್ತರದ, ಬಿಳಿ ಬಣ್ಣದ, ಸಪೂರ ಶರೀರದ ಸೌಜನ್ಯಾ ಅಂದು ಬಿಳಿ ಬಣ್ಣದ ಗೆರೆಗಳಿರುವ ಕಾಲೇಜು
ಯೂನಿಫಾರಂನಲ್ಲಿದ್ದಳು.

ಈ ಬಗ್ಗೆ ಚಂದಪ್ಪ ಗೌಡರು ನೀಡಿದ ಲಿಖಿತ ದೂರನ್ನು ಬೆಳ್ತಂಗಡಿ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಐತು ನಾಯ್ಕ ಅದೇ ದಿನ ರಾತ್ರಿ ಗಂಟೆ 10.30 ಕ್ಕೆ ಸ್ವೀಕರಿಸುತ್ತಾರೆ. 250/2012ರಂತೆ ‘ಹುಡುಗಿ ಕಾಣೆ’ ಎಂದು ಎಫ್ಐಆರ್ ದಾಖಲಿಸುತ್ತಾರೆ.

ಬಹುತೇಕ ಸಂದರ್ಭಗಳಲ್ಲಿ ಜನರು ಪೊಲೀಸ್ ಠಾಣೆಗೆ ಬಂದು ತಮಗಾದ ಅನ್ಯಾಯದ ಬಗ್ಗೆ ಮೌಖಿಕ ದೂರು ನೀಡುತ್ತಾರೆ. ಆಗ ಪೊಲೀಸರು ದೂರನ್ನು ಆಲಿಸಿ, ‘ಅವಳು ಯಾವನಾದರು ಹುಡುಗನ ಜತೆ ಹೋಗಿರಬಹುದು, ಲವ್ವರ್ ಇದಾನಾ ವಿಚಾರಿಸಿ ನೋಡಿ, ಸಿಗ್ತಾಳೆ ಬಿಡಿ’ ಎಂದು ಹೇಳಿ ದೂರುದಾರರನ್ನು ಠಾಣೆಯಿಂದ ಸಾಗಹಾಕುತ್ತಾರೆ. ಕಾಣೆಯಾದ ಹುಡುಗಿಯನ್ನು ಹುಡುಕುವ ಯಾವ ಪ್ರಯತ್ನವನ್ನೂ ಪೊಲೀಸರು ಮಾಡುವುದಿಲ್ಲ. ಹುಡುಗಿ ಆನಂತರವೂ ಪತ್ತೆಯಾಗಿಲ್ಲ ಎಂದಾದರೆ ಬಳಿಕ ಪ್ರಕರಣ ದಾಖಲಿಸುತ್ತಾರೆ.

ಪೊಲೀಸರ ಇಂಥ ಬೇಜವಾಬ್ದಾರಿಯಿಂದಾಗಿಯೇ ಸೈನೆಡ್ ಕಿಲ್ಲರ್ ಮೋಹನ್ ಕುಮಾರ್
ಕುಕೃತ್ಯಕ್ಕೆ ಅನೇಕ ಮಂದಿ ಹೆಣ್ಣು ಮಕ್ಕಳು ಸರಣಿಯಲ್ಲಿ ಬಲಿಯಾದರು. ಸೌಜನ್ಯಾ ಕಾಣೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಪೊಲೀಸರು ಇದೇ ರೀತಿ ನಿರ್ಲಕ್ಷ್ಯ ಮಾಡಿರುವ ಸಾಧ್ಯತೆಗಳಿವೆ. ಇಲ್ಲಿ ಪೊಲೀಸರು ಎಸಗಿದ ಲೋಪವೇನು ಮತ್ತು ಯಾಕೆ ಲೋಪವೆಸಗಿದರು ಎಂಬ ಬಗ್ಗೆ ತನಿಖೆ ನಡೆಸಿ, ಲೋಪವೆಸಗಿದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವಂತಾಗಬೇಕು. ಸೌಜನ್ಯಾ ಕಾಣೆಯಾದ ಮರುದಿನ ಅಕ್ಟೋಬರ್ 10 ರಂದು ಪೊಲೀಸರು ಚಂದಪ್ಪ ಅವರ ತಮ್ಮ ಜಗದೀಶ್ ಎಂಬವರ ಹೇಳಿಕೆಯೊಂದನ್ನು ದಾಖಲಿಸಿಕೊಳ್ಳುತ್ತಾರೆ. ಆ ಹೇಳಿಕೆಯಲ್ಲಿ ಹೀಗಿದೆ: ಕಾಣೆಯಾದ ಸೌಜನ್ಯಾಳನ್ನು ನಾನು, ರಮೇಶ, ಉಮೇಶ, ಗಣೇಶ, ದಿನೇಶರೊಂದಿಗೆ ಧರ್ಮಸ್ಥಳ ಮಣ್ಣಸಂಕದ ಬಳಿ ಹುಡುಕುತ್ತಾ ಇರುವಾಗ ಈ ದಿನ ತಾರೀಕು 10.10.12ರಂದು ಸುಮಾರು 13.30 ಗಂಟೆಯ ವೇಳೆಗೆ ಧರ್ಮಸ್ಥಳ ಗ್ರಾಮದ ಪ್ರಕೃತಿ ಚಿಕಿತ್ಸಾಲಯ ಶಾಂತಿವನದ ಗೇಟಿನ ಎದುರು ಭಾಗ ಧರ್ಮಸ್ಥಳ-ಬೆಳ್ತಂಗಡಿ ರಸ್ತೆಯ ಪಶ್ಚಿಮ ಭಾಗದಲ್ಲಿ ಹರಿದು ಹೊಗುವ ತೋಡಿನ ಸಮೀಪ ಮಣ್ಣಸಂಕ ಎಂಬಲ್ಲಿ ಕಾಡುಗಿಡಗಳಿರುವ ಪ್ರದೇಶದಲ್ಲಿ ಮರ ಒಂದರ ಬುಡದ ಬಳಿ ಯೋರೋ ದುಷ್ಕರ್ಮಿಗಳು ಸೌಜನ್ಯಾಳನ್ನು ಬಲತ್ಕಾರವಾಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದು ಕಂಡುಬಂದಿರುತ್ತದೆ. ಈ ಘಟನೆಯು 9.10.12ರಂದು ಸಂಜೆ 4.15 ಗಂಟೆಯಿಂದ 10.10.12ರಂದು 12.30 ಗಂಟೆ ಮಧ್ಯೆ ಆಗಿರಬಹುದು ಇತ್ಯಾದಿ..

ಸೌಜನ್ಯಾಳ ಶವ ಕಂಡುಬಂದಿದ್ದು ಮಧ್ಯರಾತ್ರಿ 12.30 ಕ್ಕೋ, ಮಧ್ಯಾಹ್ನ 12.30 ಕ್ಕೋ ಎಂಬುದು ಇಲ್ಲಿ ಸ್ಪಷ್ಟವಾಗುವುದಿಲ್ಲ. ಈ ಹೇಳಿಕೆಯ ಆಧಾರದಲ್ಲಿ ಪೊಲೀಸರು ಅದೇ ದಿನ ಮಧ್ಯಾಹ್ನ 2.30 ಕ್ಕೆ ಹುಡುಗಿ ಕಾಣೆ ಪ್ರಕರಣವನ್ನು ಕಲಂ 376 (ಅತ್ಯಾಚಾರ) ಮತ್ತು 302 (ಕೊಲೆ) ಪ್ರಕರಣವನ್ನಾಗಿ ಪರಿವರ್ತಿಸುತ್ತಾರೆ.

ಗಮನಿಸಬೇಕಾದ ಅಂಶ: ಜಗದೀಶ ಅವರ ಹೇಳಿಕೆಯಲ್ಲಿ ‘ದುಷ್ಕರ್ಮಿಗಳು’ ಎಂಬುದಾಗಿ ಇದೆಯೇ ಹೊರತು ‘ದುಷ್ಕರ್ಮಿ’ ಎಂದಿಲ್ಲ. ಅಂದರೆ, ಅತ್ಯಾಚಾರವೆಸಗಿ ಕೊಲೆಗೈದುದು ಒಬ್ಬನಲ್ಲ, ಒಬ್ಬರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದ ದುಷ್ಕರ್ಮಿಗಳು.

ಹುಡುಗಿ ಕಾಣೆ ಪ್ರಕರಣವನ್ನು ಅತ್ಯಾಚಾರ-ಕೊಲೆ ಪ್ರಕರಣವಾಗಿ ಪರಿವರ್ತಿಸಿದ ಬಗ್ಗೆ ಪೊಲೀಸರು ಬೆಳ್ತಂಗಡಿಯ ಸಿಜೆಎಂ ಮತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ ನಿವೇದಿಸುವ ಸಂದರ್ಭದಲ್ಲಿ ಪೊಲೀಸರು ಹೀಗೆ ದಾಖಲಿಸಿಕೊಂಡಿದ್ದಾರೆ: 10.10.12ರಂದು 13.30 ಗಂಟೆಗೆ ಜಗದೀಶ ಎಂಬವರು … ಎಂಬವರುಗಳೊಂದಿಗೆ ಕಾಣೆಯಾದ ಸೌಜನ್ಯಾಳ ಹುಡುಕಾಟದಲ್ಲಿದ್ದು, ಆಕೆಯ ಮೃತದೇಹವು 10.10.12ರಂದು 12.30 ಗಂಟೆಗೆ … ಮಣ್ಣಸಂಕ ಎಂಬಲ್ಲಿ
ಪತ್ತೆಯಾಗಿದ್ದು, ಸದ್ರಿಯವಳನ್ನು ಯೋರೋ ದುಷ್ಕರ್ಮಿಗಳು ನಿರ್ಜನ ಪ್ರದೇಶಕ್ಕೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಕರೆದೊಯ್ದು ಬಲತ್ಕರವಾಗಿ ಅತ್ಯಾಚಾರ ನಡೆಸಿ ಕೊಲೆ ಮಾಡಿರುತ್ತಾರೆ. ಪಿರ್ಯಾದನ್ನು 13.30 ಗಂಟೆಗೆ ಸ್ಥಳದಲ್ಲಿ ಬೆಳ್ತಂಗಡಿ
ಪಿ.ಎಸ್.ಐ.ಯೋಗೀಶ್ ಕುಮಾರ್ ಸ್ವೀಕರಿಸಿ..

ಜಗದೀಶ ಹಾಗೂ ಇತರರು ಹುಡುಕಾಡಿದ್ದು ಗಂಟೆ 13.30 ಕ್ಕೆ. ಶವ ಪತ್ತೆಯಾಗಿದ್ದು ಗಂಟೆ 12.30 ಕ್ಕೆ ! ಇದು ಹೇಗೆ ಸಾಧ್ಯ ? ಪೊಲೀಸರೇ ಉತ್ತರಿಸಬೇಕು.

16.10.12ರಂದು ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಭಾಸ್ಕರ ರೈ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ನಿವೇದನೆಯಲ್ಲಿ ಹೀಗಿದೆ: 11.10.12ರಂದು ರಾತ್ರಿ ಹೊತ್ತಿನಲ್ಲಿ ಧರ್ಮಸ್ಥಳದ ಗೊಮ್ಮಟಬೆಟ್ಟದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೇಲ್ಕಂಡ ಸಂತೋಷ್ ರಾವ್ ನನ್ನು ಸಾರ್ವಜನಿಕರು ಹಿಡಿದು ಥಳಿಸಿ ನಂತರ 12.10.12ರಂದು ಬೆಳಗ್ಗಿನ ಜಾವ 2 ಗಂಟೆಗೆ ಬೆಳ್ತಂಗಡಿ ಠಾಣೆಗೆ ಹಾಜರುಪಡಿಸಿರುತ್ತಾರೆ. ಆತನನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಯೋಗ್ಯ ರೀತಿಯಲ್ಲಿ ವಿಚಾರಿಸಿದಾಗ ಆರೋಪಿಯು ಸಮರ್ಪಕವಾದ ಮಾಹಿತಿ ಹಾಗೂ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಲಿಲ್ಲ. ಆರೋಪಿಯ ಮೈಮೇಲೆ ಗಾಯಗಳ ಗುರುತು ಕಂಡು ಬಂದಿದ್ದರಿಂದ ಆತನನ್ನು ವೈದೈಕೀಯ ಪರೀಕ್ಷೆಯ ಬಗ್ಗೆ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ತಪಸಣೆಗೆ
ಒಳಪಡಿಸಲಾಯ್ತು. ಮತ್ತು ಆ ಬಗ್ಗೆ ವೈದ್ಯಾಧಿಕಾರಿಯವರು ನೀಡಿದ ದೃಢಪತ್ರವನ್ನು ಪಡೆದುಕೊಮಡಿದ್ದು, ಆರೋಪಿಯು ಸಂಭೋಗ ಕ್ರಿಯೆ ನಡೆಸಲು ಸಮರ್ಥನಿರುತ್ತಾನೆ ಮತ್ತು ಮೃತನ ಮೈಮೇಲೆ ಎಡಕೋಲು ಕೈಯ್ಯಲ್ಲಿ, ಕಾಲಿನ ಮೊಣಗಂಟು, ಮೂಗಿನ ಎಡಬದಿ, ಎಡ ಮತ್ತು ಬಲ ಪಕ್ಕೆಲುಬುಗಳಲ್ಲಿ, ಕುತ್ತಿಗೆಯ ಭಾಗದಲ್ಲಿ ಸುಮಾರು 48 ಗಂಟೆಯ ಮೊದಲು ಉಂಟಾದ ತರಚಿದ ಹಾಗೂ ಗೀರಿದ ನಮೂನೆಯ ಗಾಯಗಳು ಇರುವುದಾಗಿ ದೃಢೀಕರಿಸಿರುತ್ತಾರೆ. ಮುಂದುವರಿದು ಆರೋಪಿಯನ್ನು ಕೂಲಂಕುಶವಾಗಿ ವಿಚಾರಿಸಿದಾಗ ಮಾನಸಿಕ ಅಸ್ವಸ್ಥನಂತೆ
ವರ್ತಿಸುತ್ತಿರುವುದು ಕಂಡುಬಂತು.

ಈ ನಿವೇದನೆಯಲ್ಲಿ ಸಂತೋಷ್ ರಾವ್ ಅವರನ್ನು ರಾತ್ರಿ ಎಷ್ಟು ಗಂಟೆಗೆ ಹಿಡಿದರು ಎಂಬ ಬಗ್ಗೆ ಮಾಹಿತಿ ಇಲ್ಲ. ಸಾರ್ವಜನಿಕರು ಹಿಡಿದರು ಎಂದು ಇದೆಯೇ ಹೊರತು ಈ ಸಾರ್ವಜನಿಕರು ಯಾರು ಎಂಬುದೂ ಇಲ್ಲ. ಸಂತೋಷ್ ಅವರ ಯಾವ ರೀತಿಯ ವರ್ತನೆ ಸಾರ್ವಜನಿಕರಿಗೆ
ಅನುಮಾನಾಸ್ಪದವಾಗಿ ಕಂಡಿತು ಎನ್ನುವುದರ ಬಗ್ಗೆಯೂ ವಿವರಗಳಿಲ್ಲ. ಸಾರ್ವಜನಿಕರು ಹಿಡಿದು ಥಳಿಸಿದರು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಸಾರ್ವಜನಿಕರಿಂದ ಹಲ್ಲೆಗೆ ಒಳಗಾದ ವ್ಯಕ್ತಿ ಸಹಜವಾಗಿಯೇ ಗಾಯಗೊಂಡಿರುತ್ತಾರೆ. ಗಾಯಾಳುವನ್ನು ಮೊತ್ತ ಮೊದಲು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಅವರಿಗಾದ ಗಾಯಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು. ಇದು ಮಾನವೀಯ ಕ್ರಮವೂ ಹೌದು. ಪೊಲೀಸರ ಕರ್ತವ್ಯವೂ ಹೌದು. ಮಾತ್ರವಲ್ಲ, ಅವರಿಗೆ ಥಳಿಸಿದವರ ವಿರುದ್ಧ ಪೊಲೀಸರು ಸೂಕ್ತ ಕಲಂಗಳಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನೂ ದಾಖಲಿಸುವುದು ಅಗತ್ಯ ಕ್ರಮವಾಗಿತ್ತು. ಆದರೆ ಇಲ್ಲಿ, ಪೊಲೀಸರು ತಮ್ಮ ಕನಿಷ್ಟ ಕರ್ತವ್ಯವನ್ನೂ ನೆರವೇರಿಸಿಲ್ಲ. ಪೊಲೀಸರ ಅಮಾನವೀಯ ನಡವಳಿಕೆ ಮತ್ತು ಗಂಭೀರ ಕರ್ತವ್ಯಲೋಪಕ್ಕೆ ಸೂಕ್ತ ಶಿಕ್ಷೆಯಾಗಬೇಡವೇ ? ಇನ್ನಾದರೂ ಸಂತೋಷ್ ಅವರಿಗೆ ಥಳಿಸಿದವರ ಮೇಲೆ ಬೆಳ್ತಂಗಡಿ ಪೊಲೀಸರು ಕೇಸು ದಾಖಲಿಸುವಂತಾಗಬೇಕು. ಸಂತೋಷ್ ರಾವ್ ಅವರನ್ನು ಹಿಡಿದು ಥಳಿಸಿದವರಲ್ಲಿ ಪ್ರಮುಖನಾದವನು ಮಲ್ಲಿಕ್ ಜೈನ್.

ಸಂತೋಷ್ ರಾವ್ ಅವರನ್ನು ಸಾರ್ವಜನಿಕರು (ಮಲ್ಲಿಕ್ ಜೈನ್ ಹಾಗೂ ಇತರರು) ಹಿಡಿದು ಥಳಿಸಿದ್ದು ಪೊಲೀಸರ ಪ್ರಕಾರ 11.10.12 ರ ರಾತ್ರಿ. ಹೀಗೆ ಹಿಡಿದು ಥಲಿಸಿದ ಸಾರ್ವಜನಿಕರು ಸಂತೋಷ್ ಅವರನ್ನು ಪೊಲೀಸ್ ಠಾಣೆಗೆ ಹಾಜರುಪಡಿಸಿದ್ದು ಮರುದಿನ ಬೆಳಗ್ಗಿನ ಜಾವ 2 ಗಂಟೆಗೆ. ಹಿಂದಿನ ದಿನ ರಾತ್ರಿ ಹಿಡಿದು ಥಳಿಸಿದ ಬಳಿಕ ಮರುದಿನ ಬೆಳಗ್ಗಿನ ಜಾವ 2 ಗಂಟೆ ವರೆಗೆ ಸಂತೋಷ್ ಅವರನ್ನು ಮಲ್ಲಿಕ್ ಜೈನ್ ಹಾಗೂ ಇತರರು ಎಲ್ಲಿಗೆ ಕರೆದೊಯ್ದರು, ಹಾಗೆ ಕರೆದೊಯ್ದುದು ಯಾಕೆ, ಕರೆದೊಯ್ದು ಮಾಡಿದ್ದೇನು ಎಂಬ ಪ್ರಶ್ನೆಗಳಿಗೂ ಉತ್ತರವಿಲ್ಲ. ಕೇವಲ ಅನುಮಾನಾಸ್ಪದ ವರ್ತನೆಗಾಗಿ ಹಿಡಿದು ಥಳಿಸಿದ್ದೂ ಅಲ್ಲದೆ ಬಳಿಕ ಅಕ್ರಮವಾಗಿ ಬಂಧನದಲ್ಲಿಡಲು ಕಾನೂನಿನಲ್ಲಿ ಅವಕಾಶವಿದೆಯೇ ? ಹೀಗೆ ಅಕ್ರಮ ಬಂಧನದಲ್ಲಿರಿಸಿ ಸೋತೋಷ್ ರಾವ್ ಅವರನ್ನು ಬೆದರಿಸಲಾಯಿತೇ, ಯಾವುದಾದರು ಅಪರಾಧ ಕೃತ್ಯವನ್ನು ಒಪ್ಪುವಂತೆ ಸಂತೋಷ್ ಅವರನ್ನು ಬಲವಂತಪಡಿಸಲಾಯಿತೇ, ಅಕ್ರಮ
ಬಂದನದಲ್ಲಿದ್ದ ಸಮಯದಲ್ಲಿ ಅತ್ಯಂತ ವ್ಯವಸ್ಥಿತವಾಗಿ, ಪೂರ್ವ ನಿಯೋಜಿತವಾಗಿ ಸಂತೊಷ್ ರಾವ್ ಅವರ ದೇಹದ ನಿರ್ಧಿಷ್ಟ ಅಂಗಗಳ ಮೇಲೆ ತರಚಿದ, ಗೀರಿದ ಗಾಯಗಳನ್ನು ಮಾಡಲಾಯಿತೇ ಎಂಬಿತ್ಯಾದಿ ಪ್ರಶ್ನೆಗಳೂ ಇಲ್ಲಿ ಉದ್ಭವಿಸುತ್ತದೆ.

ಸಂತೋಷ್ ರಾವ್ ಮಾನಸಿಕ ಅಸ್ವಸ್ಥ ಎಂದೂ ಪೋಲಸರೇ ಹೇಳಿಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಏಕಾಏಕಿ ಸಂತೋಷ್ ರಾವ್ ಅವರನ್ನು ‘ಆರೋಪಿ’ ಎಂದೂ ಪೊಲೀಸರು
ದಾಖಲಿಸಿಕೊಳ್ಳುತ್ತಾರೆ. ‘ಆತನನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಯೋಗ್ಯ ರೀತಿಯಲ್ಲಿ ವಿಚಾರಿಸಿದಾಗ ಆರೋಪಿಯು ಸಮರ್ಪಕವಾದ ಮಾಹಿತಿ ಹಾಗೂ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಲಿಲ್ಲ’ ಎಂದು ಹೇಳಿಕೊಂಡಿರುವ ಪೊಲೀಸರು, ಸೌಜನ್ಯಾಳನ್ನು ಬಲವಂತವಾಗಿ ಅಪಹರಿಸಿ, ಅತ್ಯಾಚಾರವೆಸಗಿ, ಕೊಲೆಗೈದವನು ಸಂತೋಷನೇ ಎಂಬುದನ್ನು ತೀರ್ಮಾನಿಸಿ ಆತನಿಗೆ ‘ಆರೋಪಿ’ ಎಂಬ ಹಣೆಪಟ್ಟಿ ಕಟ್ಟಿಬಿಡುತ್ತಾರೆ. ಇಂಥಹದೊಂದು ಮಹಾನ್ ಸಾಧನೆಯನ್ನು ಬೆಳ್ತಂಗಡಿ ಪಿ.ಎಸ್.ಐ. ಯಾರಿಗಾಗಿ, ಯಾಕಾಗಿ, ಹೇಗೆ ಮಾಡಿದರು ಎಂಬ ಪ್ರಶ್ನೆಗಳಿಗೆ ಉತ್ತರ ಲಭಿಸಬೇಕಾಗಿದೆ.

ನ್ಯಾಯಾಲಯಕ್ಕೆ ಸಲ್ಲಿಸಿದ ನಿವೇದನೆಯಲ್ಲಿ ವೃತ್ತ ನಿರೀಕ್ಷಕರಾದ ಭಾಸ್ಕರ ರೈ ಅವರು, ‘ಆರೋಪಿತ ನಡವಳಿಕೆಗಳಿಂದ ಬೆಳ್ತಂಗಡಿ ಪೊಲೀಸ್ ಠಾಣಾ ಅಪರಾಧ ಕ್ರಮಸಂಖ್ಯೆ 234/2012 ಕಲಂ 392, 302 ಐಪಿಸಿ ಪ್ರಕರಣದಲ್ಲಿಯೂ ಕೃತ್ಯ ನಡೆಸಿರುವ ಖಚಿತ ಸಾಧ್ಯತೆಗಳಿದೆ’ ಎಂದು ದಾಖಲಿಸಿದ್ದಾರೆ. ಇದು ಬಹಳ ಗಂಭೀರವಾದ ವಿಷಯ.

ಧರ್ಮಸ್ಥಳದಲ್ಲಿ ಸೌಜನ್ಯಾ ಅತ್ಯಾಚಾರ-ಕೊಲೆ ನಡೆಯುವುದಕ್ಕಿಂತ ಕೆಲ ಸಮಯ ಮೊದಲು ಜೋಡಿ ಕೊಲೆ ಕೃತ್ಯವೊಂದು ನಡೆದಿತ್ತು. ಈ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಲೂ ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಮಾನಸಿಕ ಅಸ್ವಸ್ಥನಾದ ಸಂತೋಷ್ ರಾವ್ ಅವರನ್ನು ಮಲ್ಲಿಕ್ ಜೈನ್ ಹಾಗೂ ಇತರರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿ ಈತನೇ ಸೌಜನ್ಯಾ ಅತ್ಯಾಚಾರ-ಕೊಲೆ ಆರೋಪಿ ಎಂದು ಮಾಡಿದಾಗ, ಜೋಡಿ ಕೊಲೆ ಪ್ರಕರಣದ ಆರೋಪವನ್ನೂ ಸಂತೋಷ್ ರಾವ್ ಅವರ ತಲೆಗೆ ಕಟ್ಟಲು ಪೊಲೀಸರು ಸಿದ್ದತೆ ನಡೆಸಿದರೇ ಎಂಬುದು ಇಲ್ಲಿ ಮೂಡುವ ಪ್ರಶ್ನೆ. – ಶ್ರೀರಾಮ ದಿವಾಣ. (ಮುಂದಿನ ವಾರಕ್ಕೆ ಮುಂದುವರಿಯುತ್ತದೆ).

ಉಡುಪಿ: ವರ್ಷದ ಹಿಂದೆ ನಡೆದ ಧರ್ಮಸ್ಥಳದ ಸೌಜನ್ಯಾಳ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಶಂಕಿತ ಆರೋಪಿಗಳನ್ನು ರಕ್ಷಿಸುವ ಕೆಲಸ ಪ್ರಭಾವಿಗಳಿಂದ ನಡೆದಿದೆ. ಹಾಗಾಗಿ ಮೊನ್ನೆವರೆಗೂ ಶಂಕಿತರನ್ನು ತನಿಖಾಧಿಕಾರಿಗಳು ವಿಚಾರಣೆಗೆ ಒಳಪಡಿಸಿಲ್ಲ. ಇದೀಗ ಪ್ರತಿಭಟನೆಗಳು ಹೆಚ್ಚಿದಾಗ ಶಂಕಿತರ ವಿಚಾರಣೆಯ ನಾಟಕ ನಡೆಸಲಾಗಿದೆ. ಇಂಥ ಸಿಐಡಿ ಇಲಾಖೆಯಿಂದ ಪ್ರಕರಣದ ನಿಷ್ಪಕ್ಷಪಾತ ತನಿಖೆ ಅಸಾಧ್ಯ. ಆದುದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಸೌಜನ್ಯಾ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಆಗ್ರಹಿಸಿ ಪಕ್ಷದ ರಾಜ್ಯ ಸಮಿತಿ ನೀಡಿದ ಕರೆಯಂತೆ ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಅ.23 ರಂದು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಗಡಿಯಾರ ಗೋಪುರದ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಪ್ರದರ್ಶನದಲ್ಲಿ ಅವರು ಮಾತನಾಡುತ್ತಿದ್ದರು.
ಧರ್ಮಸ್ಥಳ ಮತ್ತು ಆಸುಪಾಸಿನಲ್ಲಿ ಕಳೆದ 11 ವರ್ಷಗಳಲ್ಲಿ ಸುಮಾರು 450 ಕೊಲೆ ಮತ್ತು ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಸೌಜನ್ಯಾ ಕೊಲೆಯಾಗುವ 20 ದಿನ ಮೊದಲು ಜೋಡಿ ಕೊಲೆಯೂ ನಡೆದಿದ್ದು, ಈ ಪ್ರಕರಣದಲ್ಲೂ ಆರೋಪಿಗಳನ್ನು ಬಂಧಿಸಲಾಗಿಲ್ಲ. ಇದು ರಾಜ್ಯ ಗೃಹ ಇಲಾಖೆಯ ವೈಫಲ್ಯವೂ ಹೌದು. ಸೌಜನ್ಯಾ ಪ್ರಕರಣದಲ್ಲಿ ಅಪರಾಧಿಗಳು ಎಷ್ಟೇ ದೊಡ್ಡ ಪ್ರಭಾವಶಾಲಿಗಳಿರಲಿ ಅವರ ಬಂಧನವಾಗದಿದ್ದಲ್ಲಿ ಇಂಥ ಕೃತ್ಯಗಳು ಮುಂದುವರಿಯುವ ಅಪಾಯವಿದೆ. ಪರಿಣಾಮ ಅರಾಜಕತೆಯೂ ಉಂಟಾಗುವ ಸಾಧ್ಯತೆ ಇದೆ ಎಂದು ಬಾಲಕೃಷ್ಣ ಶೆಟ್ಟಿ ಆತಂಕ ವ್ಯಕ್ತಪಡಿಸಿದರು.
ಸೌಜನ್ಯಾ ಪ್ರಕರಣದ ಬಗ್ಗೆ ಮಾತನಾಡಿದಾಗ ಧರ್ಮಸ್ಥಳ ಕ್ಷೇತ್ರಕ್ಕೆ ಮಾಡುವ ಅಪಮಾನ, ವೀರೇಂದ್ರ ಹೆಗ್ಗಡೆಯವರಿಗೆ ಮಡುವ ಅವಹೇಳನ ಇತ್ಯಾದಿಯಾಗಿ ಹೇಳುವುದು, ಪ್ರತಿಭಟನೆ ನಡೆಸುವುದು ಇಡೀ ಪ್ರಕರಣದ ಹಾದಿ ತಪ್ಪಿಸುವ ಯತ್ನವಲ್ಲದೆ ಮತ್ತೇನೂ ಅಲ್ಲವೆಂದು ಆರೋಪಿಸಿದ ಶೆಟ್ಟಿ, ಪ್ರಕರಣವನ್ನು ಇನ್ನಾದರೂ ಸಿಬಿಐಗೆ ಒಪ್ಪಿಸದೇ ಇದ್ದಲ್ಲಿ ಹೋರಾಟವನ್ನು ರಾಜ್ಯದಾದ್ಯಂತ ತೀವ್ರಗೊಳಿಸಲಾಗುವುದು ಎಂದು ಮುನ್ನೆಚ್ಚರಿಕೆ ನೀಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐಎಂ ಕುಂದಾಪುರ ತಾಲೂಕು ಸಮಿತಿ ಸದಸ್ಯ ಸುರೇಶ್ ಕಲಗಾರ್ ಅವರು, ಕಾನೂನಿಗಿಂತ ದೊಡ್ಡವರು ಸಮಾಜದಲ್ಲಿದ್ದಾರೆ ಎಂಬುದು ಸೌಜನ್ಯಾ ಪ್ರಕರಣದಲ್ಲಿ ಬಹಿರಂಗಕ್ಕೆ ಬಂತು. ಇದೀಗ ಈ ದೊಡ್ಡವರು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸುತ್ತಿದ್ದಾರೆಂದು ಅಪಾದಿಸಿದರಲ್ಲದೆ, ಸೌಜನ್ಯಾ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಒತ್ತಾಯಿಸಿದರು.
ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಓಟು ಗಳಿಸುವ ಉದ್ಧೇಶದಿಂದ ರಾಜಕಾರಣಿಗಳು ಸೌಜನ್ಯಾ ಪರವಾಗಿ ಪ್ರಾಮಾಣಿಕವಾಗಿ ಧ್ವನಿ ಎತ್ತುತ್ತಿಲ್ಲ. ಬದಲಾಗಿ ಆರೋಪಿಗಳ ಪರವಾಗಿರುವವರಂತೆ ನಡೆದುಕೊಳ್ಳುತ್ತಿದ್ದಾರೆ. ರಾಜಕಾರಣಿಗಳು ಹಾಗೂ ಸ್ವಾಮೀಜಿಗಳು ಸೌಜನ್ಯಾ ಕೊಲೆಯಾಗಿ ವರ್ಷ ಕಳೆದ ಬಳಿಕ ಇದೀಗ ಸೌಜನ್ಯಾ ಮನೆಗೆ ಹೋಗಿ ಸಾಂತ್ವನ ಹೇಳುವ ಬದಲು, ಕಿತ್ತಳೆ ಹಣ್ಣು ಕೊಡುವ ಬದಲು ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಮೇಲೆ ಒತ್ತಡ ಹಾಕಲಿ ಎಂದು ಸುರೇಶ್ ಅವರು ಬಹಿರಂಗ ಸವಾಲು ಹಾಕಿದರು. ಪ್ರತಿಭಟನೆಯ ಬಳಿಕ ಈ ಸಂಬಂಧದ ಮನವಿಯನ್ನು ಫ್ಯಾಕ್ಸ್ ಮೂಲಕ ಮುಖ್ಯಮಂತ್ರಿ ಕಚೇರಿಗೆ ರವಾನಿಸಲಾಯಿತು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ.ಶಂಕರ್, ಮುಖಂಡರಾದ ದೋಗು ಸುವರ್ಣ, ಎಚ್.ನರಸಿಂಹ, ಶಸಿಧರ ಗೊಲ್ಲ, ಉಮೇಶ್ ಕುಂದರ್, ಗೋಡ್ವಿನ್, ವಿದ್ಯಾರಾಜ್ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಉಡುಪಿ: ಧರ್ಮಸ್ಥಳ ಕ್ಷೇತ್ರ ಮತ್ತು ಡಾ| ವೀರೇಂದ್ರ ಹೆಗ್ಗಡೆಯವರ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡಬಾರದು ಎಂದು ಪೇಜಾವರ ಸ್ವಾಮಿಗಳು, ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಸಚಿವ ಜನಾರ್ದನ ಪೂಜಾರಿ, ಪ್ರತಾಪಸಿಂಹ ನಾಯಕ್ ಮತ್ತಿತರರು ಏಕರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಟೀಲು, ಕೊಲ್ಲೂರು, ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಅವ್ಯವಹಾರಗಳು, ಆರೋಪ-ಪ್ರತ್ಯಾರೋಪಗಳು ಪತ್ರಿಕೆಗಳಲ್ಲಿ ಬರುತ್ತದೆಂದ ಮಾತ್ರಕ್ಕೆ ಆ ಕ್ಷೇತ್ರದ ಮೇಲೆ ಅವಹೇಳನ-ಆರೋಪ ಎಂದು ಹೇಳಬಹುದೇ. ಅಂತೆಯೇ ಧರ್ಮಸ್ಥಳ ದೇವಸ್ಥಾನದ ಧರ್ಮಾಧಿಕಾರಿಗಳೂ ಹಲವು ಶಿಕ್ಷಣ ಮತ್ತಿತರ ಸಂಸ್ಥೆಗಳ ಮುಖ್ಯಸ್ಥರೂ ಆದ ಡಾ| ವೀರೇಂದ್ರ ಹೆಗ್ಗಡೆಯವರ ಮೇಲೆ ಆರೋಪ ಬಂದಾಗ ಅದಕ್ಕೆ ಅವರು ಸ್ಪಷ್ಠೀಕರಣ ನೀಡಬೇಕೇ ಹೊರತು ತಾನು ಪ್ರಶ್ನಾತೀತ, ತಾನು ಮಾಡುತ್ತಿರುವುದೆಲ್ಲಾ ಸರಿ ಎಂಬ ಭಾವನೆ ಹೊಂದಬಾರದು ಎಂದು ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಸೋಮನಾಥ ನಾಯಕ್
ತಿಳಿಸಿದ್ದಾರೆ.

ಗುರುವಾಯನಕೆರೆಯಲ್ಲಿ ಅ.21 ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.

ವೀರೇಂದ್ರ ಹೆಗ್ಗಡೆಯವರನ್ನು ಬೆಂಬಲಿಸಿ ಹೇಳಿಕೆ ನೀಡುತ್ತಿರುವವರು, ಹೆಗ್ಗಡೆ ಅವರನ್ನು ವಿಪರೀತ ಹೊಗಳುತ್ತಾರೆಯೇ ಹೊರತು ಅವರ ಅವ್ಯವಹಾರಗಳನ್ನು, ಕಾನೂನು ಉಲ್ಲಂಘನೆಗಳನ್ನು ನೋಡುವ ಮನಸ್ಥಿತಿಯಲ್ಲಿಲ್ಲ. ಆಧಾರವಿರುವ ಕೆಲವು ಸಂಗತಿಗಳ ಬಗ್ಗೆ ಹೆಗ್ಗಡೆ ಬೆಂಬಲಿಗರಿಗೆ ನಾವು ಬಹಿರಂಗವಾಗಿ ಕೇಳುತ್ತಿದ್ದೇವೆಯೇ ಹೊರತು, ಈ ಪ್ರಶ್ನೆಗಳು ಹೆಗ್ಗಡೆಯವರ ತೇಜೋವಧೆಗಾಗಲೀ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ಉಂಟು ಮಾಡುವುದಕ್ಕಾಗಲಿ ಅಲ್ಲ. ಕ್ಷೇತ್ರದ ಬಗ್ಗೆ ನಾವು ಅಪಾರ ಗೌರವ ಭಕ್ತಿ ಹೊಂದಿದ್ದೇವೆ ಎಂದು ನಾಯಕ್ ಸ್ಪಷ್ಟಪಡಿಸಿದರು.

ಭೂಸುಧಾರಣಾ ಕಾಯ್ದೆಯ ಉಲ್ಲಂಘನೆ: ಭೂಸುಧಾರಣಾ ಕಾಯ್ದೆ ಪ್ರಕಾರ ಹೆಗ್ಗಡೆಯವರು ಸುಮಾರು 1300ಎಕ್ರೆ ಕೃಷಿ ಭೂಮಿಯನ್ನು ಸರಕಾರಕ್ಕೆ ಬಿಟ್ಟುಕೊಡದೆ ತಾನೇ ಅನುಭವಿಸುತ್ತಿರುವ ದಾಖಲೆಗಳನ್ನು ನಾವು ನೀಡಿದ್ದೇವೆ. ಇದೊಂದು ದೊಡ್ಡ ಭೂ ಹಗರಣವಾಗಿದೆ. ಈ ಕುರಿತು ಉನ್ನತಮಟ್ಟದ ತನಿಖೆ ಮಾಡಿಸಿ, ತನಿಖಾವರದಿಯನ್ನು ಬಹಿರಂಗಪಡಿಸಬೇಕೆಂದು ಸೋಮನಾಥ ನಾಯಕ್ ಸರಕಾರವನ್ನು ಒತ್ತಾಯಿಸಿದರು.

ಡಿ.ಸಿ. ಮನ್ನಾ ಭೂಮಿ: ಉಜಿರೆಯಲ್ಲಿ 44 ಎಕ್ರೆ ಡಿ.ಸಿ.ಮನ್ನಾ ಭೂಮಿಯನ್ನು ಹೆಗ್ಗಡೆಯವರ ಶಿಕ್ಷಣ ಸಂಸ್ಥೆಗಳಿಗೆ ಕೊಡುವಾಗ ಅಷ್ಟೇ ಭೂಮಿಯನ್ನು ದಲಿತರಿಗೆ ಮೀಸಲಿಡಬೇಕಿತ್ತು. ದಲಿತರಿಗೆ ಅವರ ಭೂಮಿಯಿಂದ ವಂಚಿತರಾಗಿಸುವುದು ಸರಿಯೇ ಎಂದು ನಾಯಕ್ ಪ್ರಶ್ನಿಸಿದ್ದಾರೆ.

ಲೀಸ್ ಗೆ ಭೂಮಿ: ಉಜಿರೆ ಹೈಸ್ಕೂಲ್ ಮತ್ತು ಕ್ರೀಡಾಂಗಣದ 41 ಎಕ್ರೆ ಭೂಮಿ 1970ರಿಂದ 30 ವರ್ಷಕ್ಕೆ ಎಕ್ರೆಗೆ ವಾರ್ಷಿಕ ರೂ.420 ಗೇಣಿಗೆ ಎಸ್.ಡಿ.ಎಂ ಎಜುಕೇಶನ್ ಟ್ರಸ್ಟ್ ಗೆ ನೀಡಲಾಗಿತ್ತು. 2000ರಿಂದ 2030ರ ತನಕ ರೂ.9500 ದಂತೆ ಎಸ್ಡಿಎಂ ಎಜುಕೇಶನ್ ಸೊಸಾಟಿಗೆ ಗೇಣಿಗೆ ನೀಡುವ ಪೂರ್ವಾನ್ವಯ ಆದೇಶವನ್ನು 2012ರಲ್ಲಿ ಜಿಲ್ಲಾಧಿಕಾರಿಗಳು ನೀಡಿದ್ದಾರೆ. ಎಕ್ರೆಗೆ 5ರಿಂದ 7 ಕೋಟಿ ಬೆಲೆ ಬಾಳುವ ಈ ಭೂಮಿಯ ಗೇಣಿ ಎಕ್ರೆಗೆ ರಿಯಾಯ್ತಿ ದರದಲ್ಲಾದರು ರೂ.20ರಿಂದ 30 ಲಕ್ಷ ಇರಬೇಕು. ಇದರಿಂದ ರಾಜ್ಯದ
ಬೊಕ್ಕಸಕ್ಕಾದ ನಷ್ಟವೆಷ್ಟು? ಈ ಟ್ರಸ್ಟ್ಗೆ ನೀಡಿದ ಭೂಮಿಯನ್ನು ಸೊಸೈಟಿಗೆ ನೇರವಾಗಿ ಕೊಡಲು ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಸೋಮನಾಥ ನಾಯಕ್ ಪ್ರಶ್ನಿಸಿದ್ದಾರೆ.

ಉಜಿರೆಯಲ್ಲಿ ಅಕ್ರಮವಾಗಿ ಸ್ವಾಧೀನದಲ್ಲಿರುವ ಭೂಮಿ: ಉಜಿರೆ ಬಸ್ನಿಲ್ದಾಣದ ಬಳಿ ಇರುವ 9.78 ಎಕ್ರೆ ಭೂಮಿ ದಿ| ಅನಂತರಾಜ ಹೆಗ್ಡೆಯವರಿಗೆ ಭೂಮಸೂದೆಯಲ್ಲಿ ಮಂಜೂರಾಗಿದೆ. ಈ ಭೂಮಿ ಧರ್ಮಸ್ಥಳ ಕ್ಷೇತ್ರಕ್ಕೆ ಸೇರಿದ್ದೆಂದು ಫಲಕ ಹಾಕಿಲಾಗಿದೆ. ಈಗಿನ ಮಾರುಕಟ್ಟೆ ದರದಲ್ಲಿ ಇದರ ಬೆಲೆ 50 ರಿಂದ 70 ಕೋಟಿ. ಈ ಭೂಮಿಯ ಮೇಲೆ ಊಹಾತ್ಮಕ ಹಕ್ಕನ್ನು ತಮ್ಮ ಸಂಬಂಧಿಕರ ಹೆಸರಲ್ಲಿ ರಿಜಿಸ್ತ್ರಿ ಮಾಡಿರುವ ವಿಚಿತ್ರವಾಗಿದೆ. ಸತ್ಯ ಸಂಗತಿಯ ದಾಖಲೆಗಳೆಲ್ಲವೂ ನಮ್ಮ ಬಳಿ ಇದೆ. ಈ ಕುಟುಂಬದವರಿಗೆ ಹೆಗ್ಗಡೆಯವರು ನ್ಯಾಯ ಕೊಡಿಸಲು ಸಿದ್ಧರಿದ್ದಾರೆಯೇ ಎಂದು ಸೋಮನಾಥ ನಾಯಕ್ ಹೆಗ್ಗಡೆಯವರಿಗೆ ಸವಾಲು ಹಾಕಿದ್ದಾರೆ.

ಪಾರದರ್ಶಕತೆ : ತಾವು ಅತ್ಯಂತ ಪಾರದರ್ಶಕ ಎಂದು ಹೇಳಿದ್ದಾರೆಯೇ ಹೊರತು ಧರ್ಮಸ್ಥಳ ದೇವಸ್ಥಾನದ ವಾರ್ಷಿಕ ಆದಾಯ ಎಷ್ಟು ? ಅಲ್ಲಿರುವ ಅಂಗಡಿಗಳಿಂದ ಬರುವ ಬಾಡಿಗೆ ಎಷ್ಟು ? ವಸತಿಗೃಹಗಳಿಂದ ಬರುವ ಆದಾಯ ಎಷ್ಟು ? ಪ್ರತಿ ದಿನ ಮನಿ ಆರ್ಡರ್ ಎಷ್ಟು ಬರ್ತದೆ ? ರೂ.200 ವಿಶೇಷ ದರ್ಶನದ ಆದಾಯ ಎಷ್ಟು? ಹರಕೆ ಮಂಡೆಯ ಆದಾಯ ಎಷ್ಟು ? ಇದೆಲ್ಲಾ ತಿಳಿಸುವುದರೊಂದಿಗೆ ದೇವಸ್ಥಾನದ ಆಡಿಟೆಡ್ ಬ್ಯಾಲೆನ್ಸ್ ಶೀಟ್ ನ್ನು ಯಾಕೆ ಜಾಹಿರಾತು ರೂಪದಲ್ಲಿ ಪ್ರಕಟಿಸುತ್ತಿಲ್ಲ ಎಂದೂ ನಾಯಕ್ ಪ್ರಶ್ನಿಸುವ ಮೂಲಕ ವೀರೇಂದ್ರ ಹೆಗ್ಗಡೆಯವರ ಪಾರದರ್ಶಕತೆಯನ್ನು ನಾಯಕ್ ಬೆತ್ತಲು ಮಾಡಿದರು.

18% ಬಡ್ಡಿ ವ್ಯವಹಾರ: ಸ್ವ ಸಹಾಯ ಸಂಘಗಳಿಗೆ 18% ಬಡ್ಡಿ ವಿಧಿಸುತ್ತಿರುವುದಾಗಿ ಹೇಳಿದ್ದಾರೆ. ಇವರು ನಬಾರ್ಡ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಸುಮಾರು 8% ಬಡ್ಡಿಗೆ ಸಾಲ ಪಡೆದು 18% ಬಡ್ಡಿಗೆ ಸಾಲ ಕೊಡುವುದು ಸೇವೆ ಹೇಗಾಗುತ್ತದೆ ? ಬ್ಯಾಂಕ್ ಗಳಿಂದ ನೇರವಾಗಿ ಸಾಲ ಪಡೆದರೆ 12ರಿಂದ 14% ಬಡ್ಡಿ ವಿಧಿಸಲಾಗುತ್ತದೆ. ಶಾಲೆಗಳಿಗೆ ಪೀಠೋಪಕರಣಗಳಿಗೆ 2% ಕೊಡುವುದಾಗಿ, 2% ಆಡಳಿತಾತ್ಮಕ ಕರ್ಚು ಎಂದು ವೀರೇಂದ್ರ ಹೆಗ್ಡೆಯವರು ಹೇಳಿದ್ದಾರೆ. ಬಾಕಿ ಲಾಭ ಯಾರಿಗೆ ? ಇವರಿಗೆ ಲಾಭ ಮಾಡುವ ಅಗತ್ಯವಾದರೂ ಏನಿದೆ ಎಂದು ನಾಯಕ್ ಪ್ರಶ್ನಿಸಿದ್ದಾರೆ.

ಮಾಹಿತಿ ಹಕ್ಕಿನ ಪ್ರಕಾರ ಪಡೆದ/ಪಡೆಯುತ್ತಿರುವ ಭೂ ಅಕ್ರಮ ಮತ್ತು ಇತರ ಅಕ್ರಮಗಳ ಮಾಹಿತಿಯನ್ನು ನಾವು ಹಂತ ಹಂತವಾಗಿ ಬಿಡುಗಡೆ ಮಾಡಲಿದೇವೆ ಎಂದು ಸೋಮನಾಥ ನಾಯಕ್ ಹೇಳಿದರು.

ಕೆ. ರಮಾನಂದ ಸಾಲ್ಯಾನ್, ವಿದ್ಯಾ ನಾಯಕ್, ಜಯಪ್ರಕಾಶ್ ಭಟ್ ಸಿ. ಹೆಚ್., ರತ್ನಾ ಹೊಸಳಿಕೆ, ಕೆ. ಸೋಮ ಹಾಗೂ ನಾರಾಯಣ ಕಿಲಂಗೋಡಿ ಮಾಧ್ಯಮಗೋಷ್ಟಿಯಲ್ಲಿ
ಉಪಸ್ಥಿತರಿದ್ದರು.