Posts Tagged ‘g.shankar contractors’

http://www.udupibits.in news
ಉಡುಪಿ: ಗುತ್ತಿಗೆದಾರ, ಉದ್ಯಮಿ ಜಿ.ಶಂಕರ್ ಸಹಿತ ರಾಜ್ಯ ಮಟ್ಟದ ಪ್ರಮುಖ ಗುತ್ತಿಗೆದಾರರ ಮನೆಗಳು, ಕಚೇರಿಗಳು, ಗುತ್ತಿಗೆದಾರ ಸಂಸ್ಥೆಗಳ ಕಚೇರಿಗಳಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇತ್ತೀಚೆಗೆ ನಡೆಸಿದ ಭಾರೀ ದಾಳಿಯಲ್ಲಿ, ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಒಟ್ಟು 200 ಕೋಟಿ ರು. ನಗದು ಹಣ, 30 ಕೆ.ಜಿ. ಚಿನ್ನಾಭರಣಗಳು ಮತ್ತು ಹಲವಾರು ನಕಲಿ ಬಿಲ್ ಗಳು ಪತ್ತೆಯಾಗಿವೆ.

ಆದಾಯ ತೆರಿಗೆ ಇಲಾಖೆಯ 500 ಮಂದಿ ಅಧಿಕಾರಿಗಳು ಅಕ್ಟೋಬರ್ 9ರಂದು ಬೆಂಗಳೂರು, ರಾಯಚೂರು, ಬಿಜಾಪುರ, ಗುಲ್ಬರ್ಗ, ಉಡುಪಿ ಸಹಿತ ರಾಜ್ಯದಾದ್ಯಂತದ 50 ಮನೆ ಮತ್ತು ಕಚೇರಿಗಳಿಗೆ ಏಕ ಕಾಲಕ್ಕೆ ದಾಳಿ ನಡೆಸಿದರು. ಆದಾಯ ತೆರಿಗೆ ಇಲಾಖೆ ಇತ್ತೀಚೆಗಿನ ಅವಧಿಯಲ್ಲಿ ಸಂಘಟಿಸಿದ ಅತೀ ದೊಡ್ಡ ದಾಳಿ ಕಾರ್ಯಾಚರಣೆ ಇದು ಎನ್ನಲಾಗಿದೆ.

ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್, ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್ ಮತ್ತು ಕಾವೇರಿ ನೀರಾವರಿ ನಿಗಮ ಲಿಮಿಟೆಡ್ ಇವುಗಳ ರಾಜ್ಯ ಮಟ್ಟದ ಗುತ್ತಿಗೆದಾರರ ಮನೆ ಮತ್ತು ಕಚೇರಿಗಳಿಗೂ ದಾಳಿ ನಡೆದಿದೆ. ಇವುಗಳು ವಾರ್ಷಿಕವಾಗಿ 4 ಸಾವಿರ ಕೋಟಿ ರು.ಗಳ ಟೆಂಡರು ಪ್ರಕ್ರಿಯೆ ನಡೆಸುತ್ತಿದೆ ಎನ್ನಲಾಗಿದೆ. ಈ ಮೂರೂ ನಿಗಮಗಳ ಅಧ್ಯಕ್ಷರು ಮುಖ್ಯಮಂತ್ರಿಗಳಾಗಿದ್ದಾರೆ.

ರಾಜ್ಯ ಮಟ್ಟದ ನೀರಾವರಿ ಗುತ್ತಿಗೆದಾರರು, ಹೆದ್ದಾರಿ ಗುತ್ತಿಗೆದಾರರು ಹಾಗೂ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ
ಗುರಿಯಾಗಿದ್ದಾರೆ. ಇವರಲ್ಲಿ ಕೆಲವು ಮಂದಿ ಗುತ್ತಿಗೆದಾರರು ಕೌಟುಂಬಿಕ ಉದ್ಯಮಗಳನ್ನು ನಡೆಸುತ್ತಿರುವುದು ದಾಳಿಯ ಸಮಯದಲ್ಲಿ ಕಂಡುಬಂದಿದೆ.

ಬಲೆಗೆ ಬಿದ್ದ ಗುತ್ತಿಗೆದಾರರಲ್ಲಿ ಡಿ.ವೈ.ಉಪ್ಪಾರ ಹಾಗೂ ಡಾ.ಜಿ.ಶಂಕರ್ ಪ್ರಮುಖರಾಗಿದ್ದಾರೆ. ಉಪ್ಪಾರ ಅವರು ವಾರ್ಷಿಕ 4 ಸಾವಿರ ಕೋಟಿ ರು.ಗಳಿಗೂ ಅಧಿಕ ಮೊತ್ತದ ಗುತ್ತಿಗೆ ವ್ಯವಹಾರ ನಡೆಸುತ್ತಿದ್ದರೆ, ಜಿ.ಶಂಕರ್ ಸಹಿತ ಉಳಿದವರು ವಾರ್ಷಿಕವಾಗಿ 300ರಿಂದ 600 ಕೋಟಿ ರು.ಗಳಿಗೂ ಅಧಿಕ ಮೊತ್ತದ ಗುತ್ತಿಗೆ ವ್ಯವಹಾರ ನಡೆಸುತ್ತಿದ್ದರೆನ್ನಲಾಗಿದೆ. ಇವರುಗಳ ಅಧೀನದಲ್ಲಿ ಇನ್ನೂ ಕೆಲವು ಮಂದಿ ಗುತ್ತಿಗೆದಾರರು ಇದ್ದಾರೆನ್ನಲಾಗದೆ.

ಅಮೃತ ಕನ್ಸ್ಟ್ರಕ್ಷನ್ ಪ್ರೈವೆಟ್ ಲಿಮಿಟೆಡ್, ಎಸ್.ಎನ್.ಸಿ.ಪವರ್ ಕಾರ್ಪೋರೇಷನ್ ಪ್ರೈವೆಟ್ ಲಿಮಿಟೆಡ್, ರಘು ಇನ್ಫ್ರಾ ಸ್ಟ್ರಕ್ಚರ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗಳು ಸಹ ಆದಾಯ ತೆರಿಗೆ ಇಲಾಖಾಧಿಕಾರಿಗಳ ದಾಳಿಗೆ ತುತ್ತಾಗಿದೆ. ದಾಳಿಗೆ ಗುರಿಯಾದ ಗುತ್ತಿಗೆದಾರರಲ್ಲಿ ಓರ್ವರಿಗೆ ಸ್ವಂತ ಹೆಲಿಕಾಫ್ಟರ್ ಇದ್ದು, ಇದನ್ನು ಮುಂದಿನ ಸೂಚನೆ ಕೊಡುವ ವರೆಗೆ ಉಪಯೋಗಿಸದಂತೆ ಅಧಿಕಾರಿಗಳು ಗುತ್ತಿಎಗದಾರನಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಕೆಲವು ಮಂದಿ ಗುತ್ತಿಗೆದಾರರು ನಕಲಿ ಬಿಲ್ ಮಾಡಿ ಹಣ ನಗದೀಕರಿಸುತ್ತಿರುವುದು ಕೂಡಾ ದಾಳಿ ವೇಳೆಯಲ್ಲಿ ಪತ್ತೆಯಾಗಿದೆ. ದಾಳಿಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ ಎಂದು ಆದಾಯ ತೆರಿಗೆ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.

ಚಿತ್ರ : ಜಿ.ಶಂಕರ್ ನೇತೃತ್ವದಲ್ಲಿ 27.09.2014ರಂದು ಉಡುಪಿ ಜಿಲ್ಲೆಯಲ್ಲಿ ನಡೆದ ಎರಡು ನಿರ್ಧಿಷ್ಟ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಆಗಮಿಸಿದಾಗ, ಮುಖ್ಯಮಂತ್ರಿಗಳ ಜೊತೆಗೆ ಜಿ.ಶಂಕರ್.