Posts Tagged ‘govt of karnataka’

ಉಡುಪಿ: ಇಲ್ಲಿನ ಕಿನ್ನಿಮೂಲ್ಕಿ-ಉದ್ಯಾವರ ರಸ್ತೆಯ ಬಲಾಯಿಪಾದೆಯ ಬಾಡಿಗೆ ಕಟ್ಟಡದಲ್ಲಿದ್ದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯವನ್ನು ಕೊನೆಗೂ ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ಥಳಾಂತರ ಮಾಡಿದೆ.

ಬಲಾಯಿಪಾದೆಯ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಸಿಉತ್ತಿದ್ದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ 13 ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ 32, ಹೀಗೆ ಒಟ್ಟು 45 ಮಂದಿ ವಿದ್ಯಾರ್ಥಿನಿಯರಿದ್ದರು ಮತ್ತು ಇವರಿಗೆ ಕೇವಲ ಒಂದೇ ಒಂದು
ಶೌಚಾಲಯವಿತ್ತು.

ಈ ಗಂಭೀರ ಸಮಸ್ಯೆಯನ್ನು ಸೆಪ್ಟೆಂಬರ್ 22ರೊಳಗೆ ಪರಿಹರಿಸದೇ ಇದ್ದಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಖಮರುಲ್ ಇಸ್ಲಾಂ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಜನಪರ ಕಾರ್ಯಕರ್ತ ಶ್ರೀರಾಮ ದಿವಾಣ ಇಲಾಖಾಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡಿದ್ದರು.

ಶಾಸಕ ಪ್ರಮೋದ್ ಮಧ್ವರಾಜ್, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶೇಷಪ್ಪ ಹಾಗೂ ಗಿರಿಧರ ಗಾಣಿಗ ಇವರುಗಳ ಕಾಳಜಿ ರಹಿತ ಮತ್ತು ಬೇಜವಾಬ್ದಾರಿಯುತ ಆಡಳಿತವೇ ವಿದ್ಯಾರ್ಥಿನಿ ನಿಲಯದ ದುರವಸ್ಥೆಗೆ ಮುಖ್ಯ ಕಾರಣವಾಗಿದೆ. ಪ್ರಸ್ತುತ ಉದ್ಭವಿಸಿರುವ ಗಂಭೀರ ಸಮಸ್ಯೆಗಳು ಮತ್ತು ಶೋಚನೀಯ ಸ್ಥಿತಿಗತಿಗಳ ಬಗ್ಗೆ ಮೌಖಿಕವಾಗಿ ಇಲಾಖಾಧಿಕಾರಿಗಳ ಗಮನ ಸೆಳೆದಿದ್ದ ಶ್ರೀರಾಮ ದಿವಾಣ,
ಸಮಸ್ಯೆ ಪರಿಹರಿಸದೇ ಇದ್ದಲ್ಲಿ ಅಕ್ಟೋಬರ್ 7ರಂದು ಬೆಂಗಳೂರಿನಲ್ಲಿ ಸಚಿವರ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ದಿನ ನಿಗದಿ ಮಾಡಿದ್ದರು.

ಈ ನಡುವೆ, ಅಲ್ಪಸಂಖ್ಯಾತರ ಮೆಟ್ರಿಕ್ ನಮತರದ ವಿದ್ಯಾರ್ಥಿನಿ ನಿಲಯವನ್ನು ಅಧಿಕಾರಿಗಳು ಸ್ಥಳಾಂತರ ಮಾಡಿದ್ದಾರೆ. ಇದಕ್ಕಿಮತ ಮೊದಲು ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೊಟ್ಟಂ ಎಂಬಲ್ಲಿನ ಬಾಡಿಗೆ ಕಟ್ಟಡವೊಮದರಲ್ಲಿ ಹಿಂದುಳಿದ ವರ್ಗಗಳ ಮೆಟ್ರಿಕ್ ನಮತರದ ವಿದ್ಯಾರ್ಥಿನಿ ನಿಲಯ ಕಾರ್ಯ ನಿರ್ವಹಿಸುತ್ತಿತ್ತು. ಇಲ್ಲಿ, 85 ಮಂದಿ ವಿದ್ಯಾರ್ಥಿನಿಯರಿಗೆ ಕೇವಲ ಎರಡು ಶೌಚಾಲಯವಷ್ಟೇ ಇತ್ತು. ಇದೇ ಶೌಚಾಲಯದಲ್ಲಿ ಬಾತ್ ರೂಮ್ ಸಹ ಇದ್ದುದರಿಂದ ವಿದ್ಯಾರ್ಥಿನಿಯರ ದಿನಚರಿ ಶೋಚನೀಯವಾಗಿತ್ತು. ಮಾತ್ರವಲ್ಲ, ಪ್ರತ್ಯೇಕ ಡ್ರೆಸ್ಸಿಂಗ್ ರೂಮ್ ಇರಲಿಲ್ಲ. ಮಲಗಲು, ಬ್ಯಾಗ್ ಇತ್ಯಾದಿಗಳನ್ನು ಇಡಲು ಯಾವುದೇ ವ್ಯವಸ್ತೆ ಇರಲಿಲ್ಲ. ಕನಿಷ್ಟ ಕಲಿಕೆಗೆ ಬೇಕಾದ ಯಾವುದೇ ರೀತಿಯ ವಾತಾವರಣವೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಕೆಲವೊಂದು ಪ್ರಮುಖ ಬೇಡಿಕೆ ಮುಂದಿಟ್ಟು ಶ್ರೀರಾಮ ದಿವಾಣ ಇತರರು ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸಿದ್ದರು. ಸತ್ಯಾಗ್ರಹದ ಎರಡನೇ ದಿನ ಕೆಲವು ಬೇಡಿಕೆಗಳನ್ನು ಈಡೇರಿಸಿದ ಕಾರಣ ಮತ್ತು ಮತ್ತೊಂದೆರಡು ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸುವುದಾಗಿ ಅಧಿಕಾರಿಗಳು ಸ್ಪಷ್ಟ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸತ್ಯಾಗ್ರಹವನ್ನು ಎರಡನೇ ದಿನಕ್ಕೆ ಹಿಂತೆಗೆದುಕೊಳ್ಳಲಾಗಿತ್ತು. ಬಳಿಕ ತೊಟ್ಟಂನಲ್ಲಿ ಬಾಡಿಗೆ ಕಟ್ಟಡದಲ್ಲಿದ್ದ ಹಿಂದುಳಿದ ವರ್ಗಗಳ ಮೆಟ್ರಿಕ್ ನಮತರದ ವಿದ್ಯಾರ್ಥಿನಿ ನಿಲಯವನ್ನೂ ಸ್ಥಳಾಂತರಿಸಲಾಗಿತ್ತು.

ಉಡುಪಿ: ಉಡುಪಿ ಬಲಾಯಿಪಾದೆಯ ಬಾಡಿಗೆ ಕಟ್ಟಡದಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದಲ್ಲಿ 45 ಮಂದಿ ವಿದ್ಯಾರ್ಥಿನಿಯರಿಗೆ ಕೇವಲ ಒಂದೇ ಒಂದು ಶೌಚಾಲಯವಿದ್ದು, ಈ ಗಂಭೀರ ಸಮಸ್ಯೆಯನ್ನು ಸೆಪ್ಟೆಂಬರ್ 22ರೊಳಗೆ ಪರಿಹರಿಸದೇ ಇದ್ದಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಖಮರುಲ್ ಇಸ್ಲಾಂರವರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ಶ್ರೀರಾಮ ದಿವಾಣ ಇಲಾಖಾಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ.

ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದಲ್ಲಿ ಮೊದಲು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 13 ಮಂದಿ ವಿದ್ಯಾರ್ಥಿನಿಯರಿದ್ದರು. ಆಗಲೂ ಒಂದೇ ಒಂದೇ ಶೌಚಾಲಯವಿತ್ತು. ಇರುವ ಒಂದು ಶೌಚಾಲಯ ಸಹ ಬಾತ್ ರೂಮ್ ಜೊತೆಗೆ ಇರುವುದರಿಂದ ವಿದ್ಯಾರ್ಥಿನಿಯರು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದರು. ಇದೀಗ ಇಲಾಖಾಧಿಕಾರಿಗಳು ಬೇರೆ ವಿದ್ಯಾರ್ಥಿನಿ ನಿಲಯಕ್ಕೆ ಸೇರಿದ 32 ಮಂದಿ ವಿದ್ಯಾರ್ಥಿನಿಯರನ್ನು ಇದೇ ವಿದ್ಯಾರ್ಥಿನಿ ನಿಲಯಕ್ಕೆ ಕರೆತಂದು ಸೇಸಿರುವುದರಿಂದಾಗಿ ವಿದ್ಯಾರ್ಥಿನಿಯರ ಸಂಖ್ಯೆ 45ಕ್ಕೇರಿದೆ. ಇದರಿಂದಾಗಿ ವಿದ್ಯಾರ್ಥಿನಿಯರ ಸಮಸ್ಯೆ ಬಿಗಡಾಯಿಸಿದೆ ಎಂದು ಶ್ರೀರಾಮ ದಿವಾಣ ಕಳವಳ ವ್ಯಕ್ತಪಡಿಸಿದ್ದಾರೆ.

ಶಾಸಕ ಪ್ರಮೋದ್ ಮಧ್ವರಾಜ್, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಾಳಜಿ ರಹಿತ ಮತ್ತು ಬೇಜವಾಬ್ದಾರಿಯುತ ಆಡಳಿತವೇ ವಿದ್ಯಾರ್ಥಿನಿ ನಿಲಯದ ದುರವಸ್ಥೆಗೆ ಮುಖ್ಯ ಕಾರಣವಾಗಿದೆ. ಪ್ರಸ್ತುತ ಉದ್ಭವಿಸಿರುವ ಸಮಸ್ಯೆ ಬಗ್ಗೆ ಈಗಾಗಲೇ ಇಲಾಖಾಧಿಕಾರಿಗಳ ಗಮನ ಸೆಳೆಯಲಾಗಿದ್ದು, ಸಮಸ್ಯೆ ಪರಿಹರಿಸದಿದ್ದಲ್ಲಿ ಸಚಿವರ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಶ್ರೀರಾಮ ದಿವಾಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇವರಿಗೆ,
ಸನ್ಮಾನ್ಯ ಪ್ರಧಾನ ಕಾರ್ಯದರ್ಶಿಗಳು,
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.

ವಿಷಯ : ಉಡುಪಿ ಜಿಲ್ಲಾ ಸರಕಾರಿ ಅಸ್ಪತ್ರೆಯ ಡಾ.ಭಸ್ಕರ ಪಾಲನ್ ಅವರು ಕರ್ತವ್ಯಲೋಪ ಎಸಗಿದ ಬಗ್ಗೆ, ಸೂಕ್ತ ಕ್ರಮ ಕೋರಿ.

ಉಲ್ಲೇಖ 1 : ದಿನಾಂಕ 14.01.2014ರಂದು ನೋಂದಣಿ ಅಂಚೆ ಮೂಲಕ ಕಳಿಸಿದ ದೂರು. ಉಲ್ಲೇಖ 2 : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪರವಾಗಿ ಅಧೀನ ಕಾರ್ಯದರ್ಶಿ ಕೆ.ವಿ.ರಾಮಪ್ಪ ಅವರು ಇಲಾಖಾ ಆಯುಕ್ತರಿಗೆ ಬರೆದ ಪತ್ರ ಸಂಖ್ಯೆ : ಆಕುಕ 25 ಎಂಎಸ್ಎ 2014, ದಿನಾಂಕ 01.02.2014.

ಮಾನ್ಯರೇ,

ಉಲ್ಲೇಖ 1ರಂತೆ ನಾವು ಸಲ್ಲಿಸಿದ ದೂರಿಗೆ ಉಲ್ಲೇಖ 2ರಂತೆ ಪ್ರಧಾನ ಕಾರ್ಯದರ್ಶಿಗಳಾದ ತಾವು ಆಯುಕ್ತರಿಗೆ ಪತ್ರ ಬರೆದು ದೂರಿನ ಮೇಲೆ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶಿಸಿರುತ್ತೀರಿ.

ತಮ್ಮ ನಿರ್ದೇಶನದ ಸುದೀರ್ಘ ಏಳು ತಿಂಗಳುಗಳ ಬಳಿಕ ಇಂದು (12.09.2014) ಬೆಳಗ್ಗೆ ಆಯುಕ್ತರ ಕಚೇರಿ ಅಧಿಕೃತರು ಅಸಮರ್ಪಕ ರೀತಿಯಲ್ಲಿ ತನಿಖೆ ಆರಂಭಿಸಿದೆ ಎಂದು ತಿಳಿಸಲು ವಿಷಾಧಿಸುತ್ತೇನೆ.

ಇಂದು (12.09.2014) ಬೆಳಗ್ಗೆ ಗಂಟೆ 9.47ಕ್ಕೆ, ಉಡುಪಿ ನಗರದಿಂದ 11 ಕಿ.ಮೀ ದೂರದ ಮೂಡುಬೆಳ್ಳೆಯಲ್ಲಿರುವ ನನ್ನ ಮನೆಯಲ್ಲಿರುವ ಸಂದರ್ಭದಲ್ಲಿ 0820 2530333 ಸಂಖ್ಯೆಯ ದೂರವಾಣಿಯಿಂದ ಕರೆಯೊಂದು ಬಂತು. ಕರೆ ಮಾಡಿದವರು, ‘ಜಿಲ್ಲಾಸ್ಪತ್ರೆಯಿಂದ ಸರ್ಜನ್ ಮಾತಾಡ್ತಿರೋದು, ನೀವು ಡಾ.ಭಾಸ್ಕರ ಪಾಲನ್ ಮೇಲೆ ನೀಡಿದ ದೂರಿನ ತನಿಖೆಗೆಗಾಗಿ ಆಯುಕ್ತರ ಕಚೇರಿಯಿಂದ ಒಬ್ಬರು ಮಹಿಳಾ ಅಧಿಕಾರಿ ಬಂದಿದ್ದಾರೆ. ಹಾಗಾಗಿ ಸಂತ್ರಸ್ತೆಯನ್ನು ಗಂಟೆ 10.30ಕ್ಕೆ ಸರ್ಜನ್ ಕಚೇರಿಗೆ ಕರೆದುಕೊಂಡು ನೀವು ಬರಬೇಕು’ ಎಂದು ತಿಳಿಸಿದರು.

`ಈಗಲೇ ಬರಬೇಕು ಎಂದು ಹೇಳಿದರೆ ಬರಲು ಕಷ್ಟ, ನಾನೀಗ ಮನೆಯಲ್ಲಿದ್ದೇನೆ. ನನಗೆ ಉದ್ಯೋಗವೂ ಇದೆ. ಸಂತ್ರಸ್ತೆ ವಿದ್ಯಾರ್ಥಿನಿಯಾಗಿದ್ದು, ಆಕೆ ಈಗ
ಕಾಲೇಜಿನಲ್ಲಿರುತ್ತಾಳೆ. ಹಾಗಾಗಿ ಕೂಡಲೇ ಬರುವುದು ಸಾಧ್ಯವಿಲ್ಲ, ತನಿಖೆಗೆ ಬರುವ ವಿಷಯವನ್ನು ಮುಂಚಿತವಾಗಿಯೇ ಲಿಖಿತವಾಗಿ ತಿಳಿಸಿದಲ್ಲಿ ಮಾತ್ರ ತನಿಖೆಗೆ ಹಾಜರಾಗಲು ಸಾಧ್ಯ’ ಎಂದು ನಾನು ಜಿಲ್ಲಾಸ್ಪತ್ರೆಯ ಅಧಿಕೃತರಿಗೆ ಸ್ಪಷ್ಟಪಡಿಸಿದೆ.

ಹತ್ತು ನಿಮಿಷದ ತರುವಾಯ ಮತ್ತೆ ಜಿಲ್ಲಾಸ್ಪತ್ರೆಯ ಅದೇ ನಂಬರ್ ಗೆ ನಾನು ಕರೆ ಮಾಡಿದೆ. ಆಗ ಮಹಿಳಾ ಉದ್ಯೋಗಿಯೊಬ್ಬರು ಕರೆ ಸ್ವೀಕರಿಸಿದರು. ಹತ್ತು ನಿಮಿಷದ ಹಿಂದೆ ನನಗೆ ಸರ್ಜನ್ರವರು ಕರೆ ಮಾಡಿದ್ದು, ಅವರಲ್ಲಿ ಮಾತಾಡುವುದಕ್ಕೆ ಇದೆ, ದೂರವಾಣಿಯನ್ನು ಅವರಿಗೆ ಕೊಡುವಂತೆ ಕೇಳಿಕೊಂಡೆ. ಆಗ ಆ ಮಹಿಳಾ ಉದ್ಯೋಗಿ, ಸರ್ಜನ್ ಡಾ.ಆನಂದ ನಾಯಕ್ ಅವರು ಇಂದು ರಜೆಯಲ್ಲಿದ್ದಾರೆ. ಅಡಿಗರು ಚಾರ್ಜ್ ಲ್ಲಿದ್ದಾರೆ. ಆದರೆ ಅಡಿಗರು ಹಾಗೂ ಬೆಂಗಳೂರಿನ ಕಮಿಷನರ್ ಕಚೇರಿಯಿಂದ ಬಂದ ಮಹಿಳಾ ಅಧಿಕಾರಿಯವರು ಕೆಳಗಡೆ ಹೋಗಿದ್ದಾರೆ’ ಎಂದು ತಿಳಿಸಿದರು.

ಮೇಲಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾವು ದೂರು ನೀಡಿದ್ದು, 2014ರ ಜನವರಿ 14ರಂದು (ಉಲ್ಲೇಖ 1). ಪ್ರಧಾನ ಕಾರ್ಯದರ್ಶಿಗಳ ಕಚೇರಿಯಿಂದ ಆಯುಕ್ತರಿಗೆ ಪತ್ರ ಬರೆದುದು 2014ರ ಫೆಬ್ರವರಿ ಒಂದರಂದು. ಬಳಿಕ ತನಿಖಾ ಪ್ರಕ್ರಿಯೆ ಆರಂಭಿಸಲು ಇಷ್ಟು ವಿಳಂಬ (ಏಳು ತಿಂಗಳು) ಯಾಕಾಗಿ ಆಯಿತು ? ಎಂಬ ಪ್ರಶ್ನೆಗೆ ನನಗೆ ಸಮಜಾಯಿಷಿಕೆ ನೀಡಬೇಕಾಗಿದೆ. ಮಾತ್ರವಲ್ಲ, ವಿಳಂಬ ಧೋರಣೆ ಪ್ರದರ್ಶಿಸಿದ ಸಂಬಂಧಿಸಿದ ಜವಾಬ್ದಾರಿಯುತ ಅಧಿಕಾರಿಯ ವಿರುದ್ಧ ಸೂಕ್ತ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಮತ್ತು ತನಿಖೆಗೆ ಆದೇಶಿಸಬೇಕು ಎಂದು ನಾನು ಈ ಮೂಲಕ ಕೋರುತ್ತೇನೆ.

ತನಿಖೆ ಎಂದರೆ ಒಂದು ಸ್ಥಳಕ್ಕೆ ಪ್ರವಾಸ ಹೋಗಿ ಬರುವುದಾಗಲೀ, ತೀರ್ಥ ಕ್ಷೇತ್ರಕ್ಕೆ ಯಾತ್ರೆ ಹೋಗಿ ಬರುವುದಾಗಲೀ ಅಲ್ಲ ಮತ್ತು ಹಾಗೆ ಆಗಲೂಬಾರದು. ಪ್ರಕರಣದ ತನಿಖೆ ನಡೆಸುವ ದಿನಾಂಕವನ್ನು ಮೊದಲೇ ನಿಗದಿಪಡಿಸಿ, ಆ ದಿನಾಂಕವನ್ನು ದೂರುದಾರರಿಗೆ ಮುಂಚಿತವಾಗಿಯೇ ಲಿಖಿತವಾಗಿ ತಿಳಿಸುವುದು ಅತೀ ಅಗತ್ಯವಾಗಿದೆ. ಹೀಗೆ ಅಧಿಕೃತವಾಗಿ ದೂರುದಾರರಿಗೆ ತಿಳಿಸಿ, ಸಂಬಂಧಿಸಿದ ಸ್ಥಳಕ್ಕೆ ಬಂದು ತನಿಖಾಧಿಕಾರಿಗಳು ನಿಷ್ಪಕ್ಷಪಾತವಾಗಿ ದೂರುದಾರರಿಂದ ಮತ್ತು ಸಂತ್ರಸ್ತೆಯಿಂದ ಹೇಳಿಕೆಗಳನ್ನು ಪಡೆದುಕೊಂಡರೆ ಅದನ್ನು ಒಂದು ಸಮರ್ಪಕವಾದ ತನಿಖೆ ಎಂದು ಕರೆಯಬಹುದಾಗಿದೆ.

ತನಿಖಾ ಪ್ರಕ್ರಿಯೆಯ ಬಗ್ಗೆ, ಇಂಥ ಕನಿಷ್ಟ ಮಟ್ಟದ ಪ್ರಾಥಮಿಕ ತಿಳುವಳಿಕೆ ಸಹ ಇಲ್ಲದವರು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ಅಧಿಕಾರಿಗಳಾಗಿದ್ದಾರೆ ಎಂದರೆ, ಇದು ಆಶ್ಚರ್ಯ, ಬೇಸರ ಮತ್ತು ಖೇದದ ವಿಷಯವಾಗಿದೆ. ಈ ಹಿಂದೆಯೂ ಇಲಾಖೆಯ ಕೆಲವು ಮಂದಿ ಹಿರಿಯ ಮತ್ತು ಜವಾಬ್ದಾರಿಯುತ ಅಧಿಕಾರಿಗಳು ಇತರ ಕೆಲವು ಗಂಭೀರ ಪ್ರಕರಣಗಳ ತನಿಖೆಯನ್ನು ಸಹ ಅತ್ಯಂತ ಬೇಜಾಬ್ದಾರಿಯುತವಾಗಿ, ಉಡಾಫೆಯಿಂದ ನಡೆಸಿದ್ದು ನನ್ನ ಗಮನದಲ್ಲಿದೆ.

ಆದುದರಿಂದ, ತಾವು ಈ ಕೂಡಲೇ ತನಿಖಾ ಪ್ರಕ್ರಿಯೆ ಬಗ್ಗೆ ಆಯುಕ್ತರ ಕಚೇರಿಯ ಅಧಿಕಾರಿಗಳಿಗೆ ಸೂಕ್ತ ತಿಳುವಳಿಕೆ ನೀಡಬೇಕು ಮತ್ತು ಮೇಲಿನ ಉಲ್ಲೇಖದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನಾದ ನನಗೆ ಮುಂಚಿತವಾಗಿಯೇ ಲಿಖಿತವಾಗಿ ದಿನಾಂಕ ಮತ್ತು ಸಮಯವನ್ನು ತಿಳಿಸಿ ಹೇಳಿಕೆ ಪಡೆದುಕೊಳ್ಳಲು ಉಡುಪಿಗೆ ಆಗಮಿಸಬೇಕಾಗಿ ಈ ಮೂಲಕ ಕೋರುತ್ತಿದ್ದೇನೆ.

ಇತೀ ತಮ್ಮ ವಿಶ್ವಾಸಿ,

ಶ್ರೀರಾಮ ದಿವಾಣ,
ಮಾನವಹಕ್ಕು ಮತ್ತು ಮಾಹಿತಿಹಕ್ಕು ಕಾರ್ಯಕರ್ತ,
ಉಡುಪಿ.

ಸ್ಥಳ : ಉಡುಪಿ.
ದಿನಾಂಕ : 12.09.2014.

ಯಥಾ ಪ್ರತಿ : ಸನ್ಮಾನ್ಯ ಯು.ಟಿ.ಖಾದರ್, ಗೌರವಾನ್ವಿತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಘನ ಕರ್ನಾಟಕ ಸರಕಾರ.

ಉಡುಪಿ: ಉಡುಪಿ ನಗರದ ಅಜ್ಜರಕಾಡಿನಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಕಚೇರಿ ರೆಡ್ ಕ್ರಾಸ್ ಭವನಕ್ಕೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಿವ ಶೈಲಂ ಸೆಪ್ಟೆಂಬರ್ 6ರಂದು ಭೇಟಿ ನೀಡಿದರು.

ಸಂಸ್ಥೆಯ ಜಿಲ್ಲಾ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಖಜಾಂಜಿ ಟಿ. ಚಂದ್ರಶೇಖರ್, ಕಾರ್ಯದರ್ಶಿ ಜಾರ್ಜ್ ಸ್ಯಾಮುವಲ್, ಫೈನಾನ್ಸ್ ಕಮಿಟಿಯ ಚಯರ್ ಕೆ.ರಾಮಚಂದ್ರ ದೇವಾಡಿಗ, ಆಡಳಿತ ಮಂಡಳಿ ಸದಸ್ಯರಾದ ಡಾ.ಕೆ.ಕೆ.ಕಲ್ಕೂರ, ಡಾ.ರಾಮಚಂದ್ರ ಬಾಯರಿ, ಜಿಲ್ಲಾ ಸರ್ಜನ್ ಡಾ. ಆನಂದ ನಾಯಕ್ ಹಾಗೂ ಉದ್ಯಮಿ ಅಲೆವೂರು ಗಣಪತಿ ಕಿಣಿ ಮೊದಲಾದವರು ಉಪಸ್ಥಿತರಿದ್ದರು.

ಮುಂದಿನ ದಿನಗಳಲ್ಲಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳಿಗೆ ತಮ್ಮಿಂದಾದ ಸಹಕಾರವನ್ನು ನೀಡುವುದಾಗಿ ಈ ಭೇಟಿಯ ಸಂದಭ್ದಲ್ಲಿ ಶಿವಶೈಲಂ ಭರವಸೆ ನೀಡಿದರು ಎಂದು ರೆಡ್ ಕ್ರಾಸ್ ಪ್ರಕಟಣೆ ತಿಳಿಸಿದೆ.

ಸಮ್ಮೇಳನಕ್ಕೆ ಬಂದಿದ್ದರು ಶಿವಶೈಲಂ

ಸೆ.6ರಂದು ಬೆಳಗ್ಗೆ ಉಡುಪಿಯಲ್ಲಿ ನಡೆದ ಮನೋವೈದ್ಯರ ರಾಜ್ಯ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸುವ ಸಲುವಾಗಿ ಉಡುಪಿಗೆ ಆಗಮಿಸಿದ್ದ ಶಿವಶೈಲಂ ಅವರನ್ನು ಸಂಜೆ ರೆಡ್ ಕ್ರಾಸ್ ಅಧಿಕೃತರು ರೆಡ್ ಕ್ರಾಸ್ ಭವನಕ್ಕೆ ಕರೆದೊಯ್ದಿದ್ದಾರೆ.

ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಸಭಾಪತಿಯೂ ಆಗಿದ್ದ ಬಸ್ರೂರು ರಾಜೀವ್ ಶೆಟ್ಟಿಯವರನ್ನು ಕೆಲ ತಿಂಗಳ ಹಿಂದೆ ರಾಜ್ಯ ಸಭಾಪತಿ ಸ್ಥಾನದಿಂದ ರಾಜ್ಯ ಆಡಳಿತ ಮಂಡಳಿಯು ಉಚ್ಛಾಟನೆ ಮಡಿತ್ತು ಮತ್ತು ರಾಜ್ಯ ಆಡಳಿತ ಮಂಡಳಿ ಸದಸ್ಯತ್ವದಿಮದ ಅಮಾನತುಪಡಿಸಿತ್ತು.

ಆರೋಗ್ಯ ಇಲಾಖಾ ಸಂಬಂಧಿ ಸತ್ಯಾಗ್ರಹ ಕಡೆಗಣಿಸಿದರು ಇಲಾಖಾ ಪ್ರ.ಕಾರ್ಯದರ್ಶಿ !

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ರಾಜ್ಯದ 19 ಜಿಲ್ಲೆಗಳಲ್ಲಿ ನಡೆದ ಬಹುಕೋಟಿ ರಾಸಾಯನಿಕ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು, ಹಗರಣದ ಭಾಗಿದಾರರು ಕೆಲವು ಮಂದಿ ಪ್ರಭಾವೀ ಖಾಸಗಿ ವ್ಯಕ್ತಿಗಳೊಂದಿಗೆ ಸೇರಿಕೊಂಡು ಕೊಡಿಸಿದ ಸುಳ್ಳು ದೂರಿನ ಆಧಾರದಲ್ಲಿ ಸರಿಯಾಗಿ ತನಿಖೆಯನ್ನೇ ನಡೆಸದೆ ಇಲಾಖಾಧಿಕಾರಿಗಳು ಅಮಾನತುಪಡಿಸಿ ಕಳೆದೊಂದು ವರ್ಷದಿಂದ ಅಮಾನತಿನಲ್ಲಿರುವ ಉಡುಪಿ ರಕ್ತನಿಧಿಯ ದಕ್ಷ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಅವರ ಅಮಾನತು ಆದೇಶವನ್ನು ಹಿಂತೆಗೆದುಕೊಳ್ಳಬೇಕೆಂಬಿತ್ಯಾದಿಯಾಗಿ ಐದು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ಶ್ರೀರಾಮ ದಿವಾಣ ಹಾಗೂ ಬೆಂಬಲಿಗರು ಸೆ.6ರಂದು ಬೆಳಗ್ಗೆಯಿಂದ ಸಂಜೆ ವರೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆ ಸೌಜನ್ಯಾಕ್ಕೂ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಿವಶೈಲಂ ಭೇಟಿ ನೀಡಿರಲಿಲ್ಲ.

ಉಡುಪಿ: ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಡಾ.ಮುದ್ದು ಮೋಹನ್ ಅವರನ್ನು ಎಪಿಎಂಸಿ ನಿರ್ದೇಶಕರನ್ನಾಗಿ ಬೆಂಗಳೂರಿಗೆ ವರ್ಗಾಯಿಸಲಾಗಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಎಸ್.ಎಸ್.ಪಟ್ಟಣಶೆಟ್ಟಿ ಅವರನ್ನು ನಿಯುಕ್ತಿ ಗೊಳಿಸಲಾಗಿದೆ.

ಎಸ್.ಎಸ್.ಪಟ್ಟಣಶೆಟ್ಟಿ ಅವರು ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.

ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಡಾ.ಎಂ.ಟಿ.ರೇಜು ಅವರನ್ನು ಕಳೆದ ಕೆಲವೇ ಕೆಲವು ತಿಂಗಳುಗಳ ಹಿಂದೆ ವರ್ಗಾಯಿಸಿ, ಅವರಿಮದ ತೆರವಾದ ಸ್ಥಾನಕ್ಕೆ ಡಾ,ಮುದ್ದು ಮೋಹನ್ ಅವರನ್ನು ನೇಮಕ ಮಾಡಲಾಗಿತ್ತು.

ಇನ್ನು ಕೆಲವೇ ಕೆಲವು ತಿಂಗಳುಗಳಲ್ಲಿ ಡಾ.ಮುದ್ದು ಮೋಹನ್ ಅವರು ನಿವೃತ್ತಿಯಾಗಲಿತ್ತು, ಈ ಹಿನ್ನೆಲೆಯಲ್ಲಿ ನಿವೃತ್ತಿಯಾಗುವ ವರೆಗೆ ಮುದ್ದು ಮೋಹನ್ ಅವರೇ ಜಿಲ್ಲಾಧಿಕಾರಿಯಾಗಿ ಮುಮದುವರಿಯುವರು ಎಂದು ಹೇಳಲಾಗುತ್ತಿತ್ತು.

ಆದರೆ, ಇದೀಗ ಅನಿರೀಕ್ಷಿತ ಬೆಳವಣಿಗೆಯಲ್ಲಿ ಮುದ್ದು ಮೋಹನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ ಮತ್ತು ಎಸ್.ಎಸ್.ಪಟ್ಟಣಶೆಟ್ಟಿ ಅವರನ್ನು ನೂತನ ಜಿಲ್ಲಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಪಟ್ಟಣಶೆಟ್ಟಿ ಅವರು ಇಂದು ಬೆಳಗ್ಗೆ ಅಧಿಕಾರ ಸ್ವೀಕರಿಸಿದ್ದಾರೆ.

ಉಡುಪಿ: ರಾಜ್ಯದ 19 ಜಿಲ್ಲೆಗಳಲ್ಲಿ ನಡೆದ ಬಹುಕೋಟಿ ರಾಸಾಯನಿಕ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಮತ್ತು ಇತರ ಕೆಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು 06.09.2014 ಶನಿವಾರದಂದು ಬೆಳಗ್ಗೆ ಗಂಟೆ 10ರಿಂದ ಸಂಜೆ 5 ಗಂಟೆ ವರೆಗೆ ಮಣಿಪಾಲ ಎಂಡ್ ಪಾಯಿಂಟ್ ರಸ್ತೆಯಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಒಂದು ದಿನದ ಸತ್ಯಾಗ್ರಹವನ್ನು ನಡೆಸಲಿರುವುದಾಗಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಶ್ರೀರಾಮ ದಿವಾಣ ತಿಳಿಸಿದ್ದಾರೆ.

ಹಾಲಿ ಕಾಂಗ್ರೆಸ್ ಸರಕಾರದಲ್ಲಿ ಆರೋಗ್ಯ ಸಚಿವರಾಗಿರುವ ಯು.ಟಿ.ಖಾದರ್, ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಆರೋಗ್ಯ ಸಚಿವರಾಗಿದ್ದ ಅರವಿಂದ ಲಿಂಬಾವಳಿ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಮೋದ್ ಮಧ್ವರಾಜ್, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮದನ್ ಗೋಪಾಲ್, ಆಯುಕ್ತರಾಗಿದ್ದ ವಿ.ಬಿ.ಪಾಟೀಲ್, ನಿರ್ದೇಶಕರಾದ ಡಾ.ಧನ್ಯ ಕುಮಾರ್, ವೈದ್ಯಕೀಯ ಸಹ ನಿರ್ದೇಶಕರಾದ ಡಾ.ಕೆ.ಬಿ.ಈಶ್ವರಪ್ಪ ಸಹಿತ ರಾಜ್ಯ ಮಟ್ಟದ ಇತರ ಉನ್ನತ ಅಧಿಕಾರಿಗಳು, 19 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳು, ಜಿಲ್ಲಾ ಸರ್ಜನ್ ಗಳ ಸಹಿತ ಅನೇಕ ಮಂದಿ ಅಧಿಕಾರಿಗಳ ಪಾತ್ರವನ್ನು ಈ ಬಹುಕೋಟಿ ಹಗರಣದಲ್ಲಿ ತನಿಖೆಗೆ ಒಳಪಡಿಸುವ ಅಗತ್ಯ ಇರುವುದರಿಂದ ಸಿಬಿಐ ತನಿಖೆ ಅನಿವಾರ್ಯವಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರೂ ಆದ ಶ್ರೀರಾಮ ದಿವಾಣ ತಿಳಿಸಿದ್ದಾರೆ.

ರಾಜ್ಯ ಮಟ್ಟದ ಬಹುಕೋಟಿ ಹಗರಣದ ಬಗ್ಗೆ ಮೊತ್ತ ಮೊದಲು ಅಧಿಕಾರಿಗಳ (ಸರಕಾರದ) ಗಮನಕ್ಕೆ ತಂದ ಉಡುಪಿ ಜಿಲ್ಲಾ ಸರಕಾರಿ ಅಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿಯಾದ ಡಾ.ಶರತ್ ಕುಮಾರ್ ರಾವ್ ಅವರನ್ನು ಸುಳ್ಳು ದೂರಿನ ಆಧಾರದಲ್ಲಿ ಸರಿಯಾಗಿ ತನಿಖೆ ನಡೆಸದೆಯೇ ಅಮಾನತು ಮಾಡಿದ್ದು, ಅಮಾನತುಗೊಳಿಸಿ ವರ್ಷವಾಗುತ್ತಾ ಬಂದರೂ ಮತ್ತೆ ನೇಮಕ ಮಾಡದಿರುವುದು, ಕೆಲವೊಂದು ನಿರ್ಧಿಷ್ಟ ಸರಕಾರಿ ಅಧಿಕಾರಿಗಳು ಹಾಗೂ ನಿರ್ಧಿಷ್ಟ ಖಾಸಗಿ ವ್ಯಕ್ತಿಗಳು ನಿರಂತರವಾಗಿ ಅವರಿಗೆ ಮತ್ತು ಬಹುಕೋಟಿ ಹಗರಣದ ಬಗ್ಗೆ ಸಾಕ್ಷ್ಯ ನುಡಿದವರಿಗೆ ಕಿರುಕುಳ ನೀಡುತ್ತಿರುವುದು ಇತ್ಯಾದಿ ನಡೆಯುತ್ತಿದೆ ಎಂದು ಮಾನ ವಹಕ್ಕು ಕಾರ್ಯಕರ್ತರೂ ಆಗಿರುವ ಶ್ರೀರಾಮ ದಿವಾಣ ಆರೋಪಿಸಿದ್ದಾರೆ.

ಈ ಎಲ್ಲಾ ವಿಷಯಗಳಲ್ಲಿ ನೊಂದವರಿಗೆ ಸಲ್ಲಬೇಕಾದ ಸಹಜ ನ್ಯಾಯವನ್ನು ಅತ್ಯಂತ ವ್ಯವಸ್ಥಿತವಾಗಿ ನಿರಾಕರಿಸಲಾಗುತ್ತಿದೆ. ತಪ್ಪೆಸಗಿದವರಿಗೆ ಶಿಕ್ಷೆ ನೀಡುವುದು ಬಿಟ್ಟು ರಕ್ಷಣೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಮೊದಲ ಹಂತವಾಗಿ ಸೆ.6ರಂದು ಸತ್ಯಾಗ್ರಹ ನಡೆಸುತ್ತಿದ್ದು, ನ್ಯಾಯ ಲಭಿಸದಿದ್ದಲ್ಲಿ ಹೋರಾಟವನ್ನು ಹಂತ ಹಂತವಾಗಿ ರಾಜ್ಯ ಮಟ್ಟಕ್ಕೆ ವಿಸ್ತರಿಸಲಾಗುವುದು. ನ್ಯಾಯಪರರು, ಭ್ರಷ್ಟಚಾರ ವಿರೋಧಿಗಳು ಸತ್ಯಾಗ್ರಹದಲ್ಲಿ ಭಾಗಿಯಾಗುವ ಮೂಲಕ ಸಹಕರಿಸಬೇಕು ಎಂದು ಶ್ರೀರಾಮ ದಿವಾಣ
ವಿನಂತಿಸಿಕೊಂಡಿದ್ದಾರೆ.

ಭ್ರಷ್ಟ ಅಧಿಕಾರಿಗಳು, ದುಷ್ಟ ರಾಜಕಾರಣಿಗಳು..!

Posted: ಆಗಷ್ಟ್ 21, 2014 in Uncategorized
ಟ್ಯಾಗ್ ಗಳು:, , , , , , , , , , , , , , , , , , , , , , , , , , , , , , , , , , , , , , , , , , , , , , , , , ,

# ಭ್ರಷ್ಟ, ದುಷ್ಟ, ಸ್ವಾರ್ಥಿ, ಕುತಂತ್ರಿ, ಜಾತಿವಾದಿ, ನಿಷ್ಕಾಳಜಿಯ ಮಂತ್ರಿಗಳು/ ಜನಪ್ರತಿನಿಧಿಗಳು/ ರಾಜಕಾರಣಿಗಳು ಹಾಗೂ ಸರಕಾರಿ ಅಧಿಕಾರಿಗಳು/ ನೌಕರರ ಬೇಜವಾಬ್ದಾರಿ, ಹೊಣೆಗೇಡಿ, ಅದಕ್ಷ ಆಡಳಿತ ವ್ಯವಸ್ಥೆಯಿಂದಾಗಿಯೇ ಬಡವರ, ನೊಂದವರ, ಶೋಷಿತರ ಮತ್ತು ನಾಡಿನ ಬಹುತೇಕ ಯಾವುದೇ ಸಮಸ್ಯೆಗಳೂ ಪರಿಹಾರ ಕಾಣದೆ ಎಲ್ಲವೂ ನೆನೆಗುದಿಯಲ್ಲಿರಲು ಮುಖ್ಯ ಕಾರಣವಾಗಿದೆ. ಹಣ ಮತ್ತು ಮತ ಬ್ಯಾಂಕ್ ರಾಜಕಾರಣವೇ ಇವರ ಬಂಡವಾಳ.
ಎಲ್ಲಿಂದೆಲ್ಲ, ಯಾವುದರಿಂದೆಲ್ಲ ದೊಡ್ಡ ಮೊತ್ತದ ಆರ್ಥಿಕ ಲಾಭ ಇದೆಯೋ ಅಲ್ಲಿಗೆಲ್ಲ ಇಂಥವರು ಗಮನ ಕೊಡುತ್ತಾರೆ, ಭೇಟಿ ಕೊಡುತ್ತಾರೆ. ಎಲ್ಲೆಲ್ಲಿಂದೆಲ್ಲಾ ಯಾವುದೇ ಲಾಭವಿಲ್ಲವೋ ಅದರ ಕಡೆಗೆ ದಿವ್ಯ ನಿರ್ಲಕ್ಷ್ಯ. ಅಂತಿಮವಾಗಿ ಅನಿವಾರ್ಯವಾದರೆ ಭೇಟಿಯ, ಕಾಳಜಿಯ ನಾಟಕವಾಡುತ್ತಾರೆ. ಇಂಥ ನಾಟಕ ಪ್ರದರ್ಶನದಲ್ಲೂ ಪ್ರಚಾರ ಪಡೆದುಕೊಂಡು ಅಲ್ಲೂ ಲಾಭ ಮಾಡಿಕೊಳ್ಳುವ ಅಯೋಗ್ಯರು ನಮ್ಮನ್ನಾಳುವವರು.

ಯಾವುದೇ ಪ್ರಕರಣ, ವಿಷಯ, ಬೆಳವಣಿಗೆಗಳಿರಲಿ. ಅವುಗಳ ಹಾದಿ ತಪ್ಪಿಸುವುದು, ಅವುಗಳನ್ನು ತಮಗೆ ಬೇಕಾದಂತೆ ದುರ್ಬಳಕೆ ಮಾಡಿಕೊಳ್ಳುವುದು, ತಿರುಚುವುದು ಇವರೇ. ಬೆಂಕಿಯಲ್ಲಿ ಚಳಿ ಕಾಯಿಸಿಕೊಂಡಂತೆ. ಸತ್ಯದ ತಲೆ ಮೇಲೆಯೇ ಮೊಳೆ ಹೊಡೆಯುವುದರಲ್ಲಿ ಇವರದು ಎತ್ತಿದ ಕೈ. ಸುಳ್ಳನ್ನು ಸತ್ಯವೆಂದು ಬಿಂಬಿಸುವ ಕಲೆಯೂ ಇವರಿಗೆ ಕರಗತ.

ಆಗಸ್ಟ್ 18ರಂದು ಹೀಗೆಯೇ ಆಯಿತು. ಉಡುಪಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆಯಲ್ಲಿ ಉಡುಪಿ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ ಸಭೆ) ನಡೆಯಿತು. ಸಭೆಯಲ್ಲಿ ಭಾಗವಹಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಾರ್ಡನ್ ಗಿರಿಧರ ಗಾಣಿಗ ಎಂಬವರು ತಮ್ಮ ಇಲಾಖೆಯ ಸರದಿ ಬಂದಾಗ ಎದ್ದು ನಿಂತವರೆ, ಬಿಸಿಎಂ ಹಾಸ್ಟೆಲ್ ಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಪ್ರಕಟವಾದ ಪತ್ರಿಕಾ ಹೇಳಿಕೆಯೊಂದರ ಮೇಲೆ ಹರಿಹಾಯ್ದಿದ್ದರು.

ವಾರ್ಡನ್ ಗಿರಿಧರ್ ಗಾಣಿಗರು ಬಿಸಿಎಂ ಹಾಸ್ಟೆಲ್ ಗಳ ಕುಂದು ಕೊರತೆ ಬಗ್ಗೆ, ಸಮಸ್ಯೆಗಳ ಕುರಿತು, ಸರಕಾರ ಏನು ಮಾಡುತ್ತಿದೆ, ಸರಕಾರದಿಂದ ಏನೆಲ್ಲಾ ಬರುತ್ತಿದೆ, ಯಾವುದೆಲ್ಲಾ ಬರುತ್ತಿದೆ, ಎಷ್ಟು ಬರುತ್ತಿದೆ, ಇದರಲ್ಲಿ ಯಾವ ಬದಲವಣೆ, ಹೆಚ್ಚಳವನ್ನು ಸರಕಾರ ಮಾಡಬೇಕಾಗಿದೆ, ನಾವೇನು ಮಾಡುತ್ತಿದ್ದೇವೆ, ಹಾಸ್ಟೆಲ್ ವ್ಯವಸ್ಥೆ ಸುಧಾರಿಸಬೇಕಾದರೆ ಮುಂದಿನ ದಿನಗಳಲ್ಲಿ ಸರಕಾರವೇನು ಮಾಡಬೇಕು, ಶಾಸಕರಿಂದ ತಮ್ಮ ಇಲಾಖೆ ಏನನ್ನು ಬಯಸುತ್ತದೆ ಇತ್ಯಾದಿ ವಿಚಾರಗಳನ್ನು ಸಭೆಯ ಮುಂದಿಡಬೇಕಾಗಿತ್ತು. ಇದು ಅಗತ್ಯವೂ, ಅನಿವಾರ್ಯವೂ ಆಗಿದೆ. ವಾರ್ಡನ್ ಹೀಗೆ ಮಾಡಿದರಾ ಎಂದು ಕೇಳಿದರೆ ಅವರು ಹಾಗೆ ಮಾಡಲೇ ಇಲ್ಲ ಎಂಬುದಾಗಿದೆ ಉತ್ತರ.

ಉಡುಪಿಯ ಬಿಸಿಎಂ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಸ್ವಂತ ಕಟ್ಟಡವಿಲ್ಲ. ಕಳೆದ ಐದು ವರ್ಷಗಳಿಂದ ಅಲ್ಲಿ ಇಲ್ಲಿ ಬಾಡಿಗೆ ಕಟ್ಟಡದಲ್ಲಿ ಹಾಸ್ಟೆಲ್ ಕಾರ್ಯ
ನಿರ್ವಹಿಸುತ್ತಿದೆ. ಲೋಕೋಪಯೋಗಿ ಇಲಾಖೆ ನಿಗದಿಪಡಿಸಿದ ದರದಲ್ಲಿ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳಿರುವ ಉತ್ತಮ ಬಾಡಿಗೆ ಕಟ್ಟಡಗಳನ್ನು ಪಡೆದುಕೊಳ್ಳಲು
ಸಾಧ್ಯವಾಗುತ್ತಿಲ್ಲ. ಪ್ರಸ್ತುತ ತೊಟ್ಟಂ ಎಂಬಲ್ಲಿ ಹಾಸ್ಟೆಲ್ ಇದ್ದು, ಇಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದ ಕಾರಣ ಪ್ರತಿದಿನವೂ ವಿದ್ಯಾರ್ಥಿನಿಯರು ಬಹಳಷ್ಟು ಸಂಕಟಗಳನ್ನು ಅನುಭವಿಸುತ್ತಿದ್ದಾರೆ. 125 ಮಂದಿಗೆ ಈ ಹಾಸ್ಟೆಲ್ ನಲ್ಲಿ ಪ್ರವೇಶಕ್ಕೆ ಅವಕಾಶವಿದೆ. ಆದರೆ ಈಗ ಇರುವ ವಿದ್ಯಾರ್ಥಿನಿಯರ ಸಂಖ್ಯೆ ಕೇವಲ 82. ಎಷ್ಟು ಸಂಖ್ಯೆಯ ವಿದ್ಯಾರ್ಥಿನಿಯರಿಗೆ ಪ್ರವೇಶಕ್ಕೆ ಅವಕಾಶವಿದೆಯೋ, ಅಷ್ಟು ಸಂಖ್ಯೆಯ
ವಿದ್ಯಾರ್ಥಿನಿಯರು ಹಾಸ್ಟೆಲ್ ನಲ್ಲಿ ಇಲ್ಲವಾದರೂ, ಇರುವ ವಿದ್ಯಾರ್ಥಿನಿಯರಿಗೂ ಈ ಹಾಸ್ಟೆಲ್ ನಲ್ಲಿ ಶೌಚಾಲಯಗಳಿಲ್ಲ. ಬಾತ್ ರೂಮ್ ಗಳು ಇಲ್ಲ. ಡ್ರೆಸ್ಸಿಂಗ್ ರೂಮ್ ಇಲ್ಲ. ಬಟ್ಟೆ ಬರೆಗಳ ಬ್ಯಾಗ್ ಮತ್ತು ಕಾಲೇಜು ಪುಸ್ತಕಗಳ ಬ್ಯಾಗ್ ಇಡಲು
ಸ್ಥಳಾವಕಾಶವಿಲ್ಲ. ನೆಲದಲ್ಲೇ ಮಲಗಬೇಕಾದ ದುರವಸ್ಥೆ ಇದೆ. ಈ ಸತ್ಯವನ್ನು, ವಾಸ್ತವಾಂಶಗಳನ್ನು ಗಿರಿಧರ್ ಗಾಣಿಗ ಸಹಿತ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಗೆ ಸೇರಿದ ಯಾವನೇ ಅಧಿಕಾರಿ ಇದುವರೆಗೆ ತಾಲೂಕು ಮಟ್ಟದ್ದಿರಬಹುದು, ಜಿಲ್ಲಾ ಮಟ್ಟದ್ದಿರಬಹುದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳಿದ್ದಿಲ್ಲ, ಹೇಳುವುದೂ ಇಲ್ಲ. ಯಾಕೆಂದು ಅರ್ಥವಾಗುವುದಿಲ್ಲ.

ಬಿಸಿಎಂ ವಿದ್ಯಾರ್ಥಿನಿಯರ ಹಾಸ್ಟೇಲಿಗೊಂದು ಸ್ವಂತ ಕಟ್ಟಡ ಬೇಕು. ಸ್ವಂತ ಕಟ್ಟಡ ಬೇಕಾದರೆ ಸ್ವಂತ ಜಾಗ ಬೇಕು. ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಲ್ಲಿ ಮಾತುಕತೆ ನಡೆಸಿ ಸೂಕ್ತ ಆದೇಶ ಮಾಡುವ ಮೂಲಕ ಆ ಜಾಗವನ್ನು ಆದಷ್ಟು ಬೇಗ ನಮ್ಮ ಇಲಾಖೆಗೆ ಒದಗಿಸಿ ಕೊಡಬೇಕು. ಲೋಕೋಪಯೋಗಿ ಇಲಾಖೆ ನಿಗದಿಪಡಿಸಿದ ದರ ಕಡಿಮೆ ಇರುವುದರಿಂದ ಈ ದರದಲ್ಲಿ ಉತ್ತಮ ಬಾಡಿಗೆ ಕಟ್ಟಡ ಇಲಾಖೆಗೆ ಸಿಗುತ್ತಿಲ್ಲ. ಆದುದರಿಂದ ಸರಕಾರದ ಮಟ್ಟದಲ್ಲಿ ಮಾತಾಡಿ ಲೋಕೋಪಯೋಗಿ ನಿಗದಿಪಡಿಸಿದ ದರವನ್ನು ಏರಿಸಬೇಕು. ತೊಟ್ಟಂನಲ್ಲಿರುವ ವಿದ್ಯಾರ್ಥಿನಿ ನಿಲಯದಲ್ಲಿ 82 ವಿದ್ಯಾರ್ಥಿನಿಯರಿಗೆ ಇರುವುದು ಕೇವಲ ಎರಡೇ ಎರಡು ಶೌಚಾಲಯ ಮತ್ತು ಎರಡೇ ಎರಡು ಬಾತ್ ರೂಮುಗಳು ಮಾತ್ರ. ಡ್ರೆಸ್ಸಿಂಗ್ ರೂಮ್ ಇಲ್ಲವೇ ಇಲ್ಲ. ಮಲಗಲು, ಬ್ಯಾಗ್ ಗಳನ್ನು ಇಡಲು ಸ್ಥಳವಿಲ್ಲ. ಓದುವ ವಾತಾವರಣವೇ ಇಲ್ಲ ಎಂಬ ಸತ್ಯವನ್ನು ವಾರ್ಡನ್ ಗಿರಿಧರ್ ಗಾಣಿಗ ಹೇಳುವುದಿಲ್ಲ. ವಾಸ್ತವಾಂಶಗಳನ್ನು ಶಾಸಕರಿರುವ ಅಥವಾ ಸಚಿವರಿರುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳದೇ ಇದ್ದರೆ ಅಭಿವೃದ್ಧಿಯಾಗಲು ಸಾಧ್ಯವೇ ? ಕನಿಷ್ಟ ಮಟ್ಟದ ಸುಧಾರಣೆಯನ್ನಾದರೂ ಸಾಧಿಸಲು ಸಾಧ್ಯವೇ ? ಇಲ್ಲವೇ ಇಲ್ಲ. ಆದರೆ ಇದನ್ನೆಲ್ಲಾ ಇವರುಗಳು ಯಾಕಾಗಿ ಮನವರಿಕೆ ಮಾಡಿಕೊಳ್ಳುವುದಿಲ್ಲ ಎನ್ನುವುದೂ ತಿಳಿಯುವುದಿಲ್ಲ.

ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸುವಂಥ ಶಾಸಕರಿಗೂ, ಸಚಿವರಿಗೂ ಇದ್ಯಾವುದೂ ಬೇಕಾಗಿಲ್ಲ. ಇಂಥವುಗಳ ಬಗ್ಗೆ ನೈಜ ಕಾಳಜಿ ಇರುತ್ತಿದ್ದರೆ, ವಿಷಯ ಪತ್ರಿಕೆಗಳಲ್ಲಿ ಪ್ರಕಟವಾದ ಬಳಿಕವಾದರೂ ಸ್ಥಳಕ್ಕೆ ಭೇಟಿ ಕೊಡಬಹುದಿತ್ತು. ಸ್ಥಳಕ್ಕೆ ಭೇಟಿ ಕೊಡುವುದು ಬಿಡಿ, ಸತ್ಯವನ್ನು ಅರಿತುಕೊಳ್ಳಬೇಕೆಂಬ ಕನಿಷ್ಟ ಪ್ರಾಮಾಣಿಕ ಕಾಳಜಿಯೂ ಸಹ ಇವರಲ್ಲಿ ಇಲ್ಲವಾಗಿದೆ. ಇವರಿಗೆ ಅಭಿವೃದ್ಧಿ, ಪ್ರಗತಿ ಎಂದರೆ ರಸ್ತೆ ಕಾಂಕ್ರಿಟೀಕರಣ, ಡಾಮರೀಕರಣ, ಸೇತುವೆ, ದೊಡ್ಡ ದೊಡ್ಡ ಕಟ್ಟಡಗಳು ಇತ್ಯಾದಿಗಳು ಮಾತ್ರ. ಇಲ್ಲಿ ದೊಡ್ಡ ಮೊತ್ತದ ಹಣ ಸರಕಾರದಿಂದ ಬಿಡುಗಡೆಗೊಳ್ಳುತ್ತವೆ. ಇದರಲ್ಲಿ ಅಷ್ಟೇ ದೊಡ್ಡ ಮೊತ್ತದ ಕಮಿಷನ್ ಹಣವೂ ಜೇಬಿಗಿಳಿಸಲಾಗುತ್ತದೆ. ಇದಕ್ಕೇ ಇರಬೇಕು ಜನಪ್ರತಿನಿಧಿಗಳು ಹಾಗೂ ಸರಕಾರಿ ಅಧಿಕಾರಿಗಳು, ನೌಕರರು ಇದಕ್ಕೆ ಕೊಡುವಷ್ಟು ಕಾಳಜಿ ಮತ್ತು ಆಸಕ್ತಿಯನ್ನು ಇತರ ವಿಷಯಗಳ ಕಡೆಗೆ ಕೊಡದಿರುವುದು.

ಇಂಥ ವಿಷಯಗಳು ಒಂದೆರಡಲ್ಲ. ಅದೆಷ್ಟೋ ಇದೆ. ಗ್ರಾಮ ಪಂಚಾಯಿತಿಗೋ, ತಾಲೂಕು ಪಂಚಾಯಿತಿಗೋ, ಜಿಲ್ಲಾ ಪಂಚಾಯಿತಿಗೋ ಪಕ್ಷದ ಹೆಸರಿನಲ್ಲಿ ಸದಸ್ಯರಾಗಿಬಿಡುತ್ತಾರೆ. ಸದಸ್ಯರಾದ ಬಳಿಕ ಸಾಮಾನ್ಯ ಸಭೆಗಳಲ್ಲಿ ಬೆಂಚು ಬಿಸಿ ಮಾಡುವುದು ಬಿಟ್ಟರೆ ಬೇರೆ ಮಾಡುವುದೇನೂ ಇಲ್ಲ (ಎಲ್ಲರೂ ಅಲ್ಲ). ಸಭೆಯಿಂದ ನಿರ್ಗಮಿಸುವ ಮೊದಲು ಗೌರವ ಧನದ ಕವರ್ ಪಡೆದುಕೊಳ್ಳಲು ಮಾತ್ರ ಇವರು ಮರೆಯುವುದಿಲ್ಲ. ಉಳಿದ ಸಮಯಗಳಲ್ಲಿ ವರ್ಗಾವಣೆ ರಾಜಕೀಯದಲ್ಲಿ, ತಮ್ಮ ಕ್ಷೇತ್ರಗಳಲ್ಲಿ ಗುಂಪುಗಾರಿಕೆ ನಡೆಸುವುದರಲ್ಲಿ, ಸೇಡಿನ ರಾಜಕಾರಣ ನಡೆಸುವುದರಲ್ಲಿ ಸಕ್ರಿಯವಾಗಿರುತ್ತಾರೆ.

ಜನಪ್ರತಿನಿಧಿಗಳಾಗಿರುವ ಕಾರಣಕ್ಕೆ, ಸರಕಾರದ ಕಾರ್ಯಕ್ರಮ ಎಂಬ ಕಾರಣಕ್ಕೆ ಇವರಿಗೆ ಮಾಧ್ಯಮ ಪ್ರಚಾರ ಸಿಕ್ಕೇ ಸಿಗುತ್ತವೆ, ಸರಕಾರ ಮತ್ತು ಇವರು ವಯುಕ್ತಿಕವಾಗಿಯೋ, ಸಂಸ್ಥೆಗಳ ಹೆಸರಿನಲ್ಲಿ ಬಹಳಷ್ಟು ಜಾಹೀರಾತುಗಳನ್ನೂ ಮಾಧ್ಯಮಗಳಿಗೆ
ಕೊಡಮಾಡುತ್ತಾರಾದ್ದರಿಂದ ಮಾಧ್ಯಮಗಳೂ ಇವರಿಗೆ ಸಾಕಷ್ಟು ಪ್ರಚಾರವನ್ನು ಕೊಡುತ್ತವೆ, ವಿರುದ್ಧವಂತೂ ಬರೆಯುವುದಿಲ್ಲ. ಬರೆದರೂ ಅದು ಬರುವುದು ಸಣ್ಣದಾಗಿ ಒಂದು ಮೂಲೆಯಲ್ಲಿ, ಯಾರೂ ನೋಡದ ಜಾಗದಲ್ಲಿಯೇ.

ಚುನಾವಣೆ ಸಮೀಪಿಸುವಾಗ ಜನ ಮರುಳು ಯೋಜನೆಗಳ ಜ್ಯಾರಿ, ಮತದಾರರನ್ನು ಮಂಗ ಮಾಡುವ ಭಾಷಣ, ಹಾದಿ ಬೀದಿಯಲ್ಲಿ ಫ್ಲೆಕ್ಸ್ ಬ್ಯಾನರ್, ಕೌಟೌಟ್ ಗಳು. ಕಾಮಗಾರಿಗಳಿಗೆ ಸರಕಾರ ಬಿಡುಗಡೆ ಮಾಡಿದ ಹಣವನ್ನು ತಮ್ಮಪ್ಪನ ತಿಜೋರಿಯಿಂದಲೇ ಕೊಟ್ಟಿದ್ದು ಎಂಬಂತೆ ಅಲ್ಲಿಗೆ ಅಷ್ಟು ಕೋಟಿ ಕೊಟ್ಟೆ, ಇಲ್ಲಿಗೆ, ಇದಕ್ಕೆ ಇಷ್ಟು ಕೋಟಿ ಕೊಟ್ಟೆ ಎಂಬ ಪ್ರಚಾರ ಬೇರೆ. ಥೂ..

ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡುವುದೇ ತಮ್ಮ ಗುರಿ ಎಂದು ಚುನಾವಣೆಗೆ ಮೊದಲು ಬೋಂಗು ಬಿಟ್ಟು ಭಾರೀ ಸುಭಗರಾಗುವ ಇವರು, ಆಯ್ಕೆಯಾದ ಬಳಿಕ ನಡೆಸಿದ್ದು, ನಡೆಸುವುದು ಭ್ರಷ್ಟಾಚಾರವನ್ನೇ. ಭ್ರಷ್ಟರನ್ನು ರಕ್ಷಿಸುವುದೇ ದಿನಚರಿಯಾಗುತ್ತದೆ. ಇಂಥ ಗೋಮುಖವ್ಯಾಘ್ರರಿಂದಾಗಿಯೇ ನಮ್ಮ ದೇಶ ಇನ್ನೂ ಸಹ ಸುಧಾರಿಸಿಲ್ಲ. – ಶ್ರೀರಾಮ ದಿವಾಣ.