ಉಡುಪಿ: ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಗೆ ಸೇರಿದ ಮಂಗಳೂರು ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿರುವ ರಕ್ತನಿಧಿ (ಬ್ಲಡ್ ಬ್ಯಾಂಕ್)ಯ ಸಂಗ್ರಹದಲ್ಲಿದ್ದ
ಸಾರ್ವಜನಿಕರಿಂದ ಸಂಗ್ರಹಿಸಲಾದ 43 ಯುನಿಟ್ ರಕ್ತ ಚರಂಡಿಗೆ ಎಸೆಯಲಾದ ದುರಂತ ವಿದ್ಯಾಮಾನವೊಂದು ನಡೆದಿದೆ.
ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಊರಿನಲ್ಲಿಯೇ, ರಾಜ್ಯ ಸರಕಾರದ ಅಧೀನದಲ್ಲಿರುವ ರೆಡ್ ಕ್ರಾಸ್ ಸೊಸೈಟಿಗೆ ಸೇರಿದ ಬ್ಲಡ್ ಬ್ಯಾಂಕ್ ನ ರಕ್ತ ಚರಂಡಿಗೆಸೆಯಲ್ಪಟ್ಟಿರುವುದು ವಿಪರ್ಯಾಸವೇ ಸರಿ.
43 ಯುನಿಟ್ ರಕ್ತವನ್ನು ಈಗಾಗಲೇ ಚರಂಡಿಗೆ ಹರಿಯಬಿಡಲಾಗಿದ್ದರೆ, 47 ಯುನಿಟ್ ರಕ್ತವನ್ನು ಇನ್ನು ಒಂದೆರಡು ದಿನಗಳಲ್ಲಿ ಚರಂಡಿಗೆ ಹರಿಯಬಿಡಲು ಸಿದ್ದತೆ
ನಡೆಸಲಾಗಿತ್ತು ಎಂದು ಹೇಳಲಾಗಿದೆ.
ಅತ್ಯಮೂಲ್ಯವಾಗಿರುವ ರಕ್ತವನ್ನು ಹೀಗೆ ಚರಂಡಿಗೆ ಸೆಯುವುದು ಅಕ್ಷಮ್ಯ ಅಪರಾಧವಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಸರಕಾರ ಐಪಿಸಿ ಕಲಂ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದು ಅನಿವಾರ್ಯವಾಗಿದೆ. ಈ ಬಗ್ಗೆ ಮಂಗಳೂರಿನವರೇ ಆಗಿರುವ ಸಚಿವ ಖಾದರ್ ಪೊಲೀಸರಿಗೆ ಆದೇಶಿಸುವುದು ಅತೀ ಅಗತ್ಯವಾಗಲಿದೆ. ಇದನ್ನು ಸಚಿವರು ಮಾಡದೇ ಇದ್ದಲ್ಲಿ ಸಚಿವರು ಆರೋಪಿಗಳನ್ನು ರಕ್ಷಿಸದಂತಾಗಲಿದೆ.
ಚರಂಡಿಗೆಸೆಯಲಾದ ರಕ್ತ ರೆಡ್ ಕ್ರಾಸ್ ಸೊಸೈಟಿಗೆ ಸೇರಿದ್ದು, ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಕೂಡಲೇ ರೆಡ್ ಕ್ರಾಸ್ ಸೊಸೈಟಿಯ ಬ್ಲಡ್ ಬ್ಯಾಂಕ್ ಅಧಿಕಾರಿಯನ್ನು ಅಮಾನತುಗೊಳಿಸಬೇಕಾಗುತ್ತದೆ.
ದಕ್ಷ ಮತ್ತು ಪ್ರಾಮಾಣಿಕ ವೈದ್ಯಾಧಿಕಾರಿಗಳನ್ನು ಸುಳ್ಳು ದೂರಿನಡಿಯಲ್ಲಿ ಅಮಾನತು ಮಾಡುವ, ಸರಕಾರಿ ರಕ್ತನಿಧಿಯನ್ನು ನಾಶಗೊಳಿಸಿ, ಖಾಸಗಿ ಬ್ಲಡ್ ಬ್ಯಾಂಕ್ ಗಳನ್ನು ಪೋಷಿಸುವ ರಾಜ್ಯ ಸರಕಾರ ಮತ್ತು ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್, ಆರೋಗ್ಯ ಇಲಾಖೆಯ ಮಾಜಿ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಐಎಎಸ್, ಹಾಲಿ ಪ್ರಧಾನ ಕಾರ್ಯದರ್ಶಿ ಎನ್.ಶಿವಶೈಲಂ ಮೊದಲಾದವರು ನೀತಿಗಳೇ, ಪ್ರಸ್ತುತ ಸಾರ್ವಜನಿಕರಿಂದ ಸಂಗ್ರಹಿಸಲಾದ ಜೀವ ರಕ್ಷಕ ರಕ್ತ ಚರಂಡಿಗೆಸೆಯಲ್ಪಡಲು ಮೂಲ ಕಾರಣವೆನ್ನಲಾಗಿದೆ.