Posts Tagged ‘health officer’s karnataka’

ಉಡುಪಿ: ರಾಜ್ಯದ 19 ಜಿಲ್ಲೆಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ನಡೆದ ಬಹುಕೋಟಿ ರಾಸಾಯನಿಕ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂಬ ಒತ್ತಾಯ ಮತ್ತು ವರ್ಷದ ಹಿಂದೆ ಅಮಾನತುಗೊಂಡಿರುವ ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗದ ದಕ್ಷ ವೈದ್ಯಾಧಿಕಾರಿ ಡಾ.ಶರತ್ ಕುಮರ್ ರಾವ್ ಅವರಿಗೆ ರಾಜ್ಯ ಸರಕಾರ ಸಹಜ ನ್ಯಾಯವನ್ನು ನಿರಾಕರಿಸುತ್ತಿರುವುದನ್ನು ಪ್ರತಿಭಟಿಸಿ ಸೆಪ್ಟೆಂಬರ್ 1 ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ ಗಂಟೆ 5ರ ವರೆಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸತ್ಯಾಗ್ರಹ ನಡೆಸಲಿರುವುದಾಗಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಶ್ರೀರಾಮ ದಿವಾಣ ತಿಳಿಸಿದ್ದಾರೆ.

ಹಾಲಿ ಆರೋಗ್ಯ ಸಚಿವ ಯು.ಟಿ.ಖಾದರ್, ಮಾಜಿ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮದನ್ ಗೋಪಾಲ್, ನಿರ್ದೇಶಕ ಡಾ.ಧನ್ಯ ಕುಮಾರ್, ಆಯುಕ್ತ ವಿ.ಬಿ.ಪಾಟೀಲ್, ವೈದ್ಯಕೀಯ ಸಹ ನಿರ್ದೇಶಕ ಡಾ.ಕೆ.ಬಿ.ಈಶ್ವರಪ್ಪ ಸಹಿತ ಇಲಾಖೆಯ ಇತರ ಅಧಿಕಾರಿಗಳು, 19 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಸರ್ಜನ್ ಗಳು, ಇತರ ಅಧಿಕಾರಿಗಳು, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಗುತ್ತಿಗೆದಾರರ ಸಹಿತ ಅನೇಕ ಪ್ರಭಾವಿಗಳ ಪಾತ್ರದ ಬಗ್ಗೆ ಈ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವುದು ಅತೀ ಅಗತ್ಯವಾಗಿರುವುದರಿಂದ ರಾಸಾಯನಿಕ ಹಗರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸುವುದು ಅನಿವಾರ್ಯವೆಂದು ಮಾಹಿತಿಹಕ್ಕು ಕಾರ್ಯಕರ್ತರೂ ಆದ ಶ್ರೀರಾಮ ದಿವಾಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಸಾಯನಿಕ ಹಗರಣದ ಬಗ್ಗೆ ಮೊದಲ ಬಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ಪ್ರಾಮಾಣಿಕ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಅವರನ್ನು ಕೆಲವು ಮಂದಿ ನಿರ್ಧಿಷ್ಟ ಸರಕಾರಿ ಅಧಿಕಾರಿಗಳು ಹಾಗೂ ಸ್ಥಾಪಿತ ಹಿತಾಸಕ್ತ ಖಾಸಗಿ ಪ್ರಭಾವೀ ವ್ಯಕ್ತಿಗಳು ಷಡ್ಯಂತ್ರ ರೂಪಿಸಿ ಸುಳ್ಳು ದೂರು ಕೊಡಿಸಿ, ಇದರ ಆಧಾರದಲ್ಲಿ ಸರಿಯಾಗಿ ತನಿಖೆ ನಡೆಸದೆ ಅಮಾನತು ಮಾಡುವಂತೆ ಮಾಡಿದರು. ಅಮಾನತುಗೊಳಿಸಿ ಸೆಪ್ಟೆಂಬರ್ 7ಕ್ಕೆ ಒಂದು ವರ್ಷವಾದರೂ ಇನ್ನೂ ಸಹ ಅಮಾನತು ಹಿಂತೆಗೆದುಕೊಳ್ಳದೆ ಸರಕಾರಿ ಅಧಿಕಾರಿಯೊಬ್ಬರಿಗೆ ಸಲ್ಲಬೇಕಾದ ಸಹಜ ನ್ಯಾಯನ್ನೂ ಸಲ್ಲದಂತೆ ಮಾಡಲಾಗಿದೆ. ಸರಕಾರದ ಈ ಕ್ರಮ ಅತ್ಯಂತ ಖಂಡನೀಯ ಎಂದು ಮಾನವಹಕ್ಕುಗಳ ಕಾರ್ಯಕರ್ತರಾದ ಶ್ರೀರಾಮ ದಿವಾಣ ತಿಳಿಸಿದ್ದಾರೆ.

ಬಹುಕೋಟಿ ರಾಸಾಯನಿಕ ಹಗರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಜನಪರ ವೇದಿಕೆ ನೀಡಿದ ಪತ್ರಿಕಾ ಹೇಳಿಕೆಯ ಆಧಾರದಲ್ಲಿ ಕರ್ನಾಟಕ ಲೋಕಾಯುಕ್ತವು ಉಡುಪಿ ಜಿಲ್ಲಾಸ್ಪತ್ರೆಗೆ ಸೀಮಿತವಾಗಿ ಸುಮೊಟೋ ಆಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾಸ್ಪತ್ರೆಯ ಡಾ.ಆನಂದ ನಾಯಕ್, ಮೋಹನದಾಸ ಕಿಣಿ ಹಾಗೂ ಕುಮಾರಸ್ವಾಮಿ ಎಂಬವರನ್ನು ಅಮಾನತುಗೊಳಿಸುವಂತೆ ಲೋಕಾಯುಕ್ತ ಅಧಿಕಾರಿಗಳು ಸರಕಾರಕ್ಕೆ ಪತ್ರ ಬರೆದಿದೆ. ಸರಕಾರ ಮೋಹನದಾಸ ಕಿಣಿ ಹಾಗೂ ಕುಮಾರಸ್ವಾಮೀ ಅವರನ್ನು ಮಾತ್ರ ಅಮಾನತುಗೊಳಿಸಿ ಕೈತೊಳೆದುಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನುಡಿದ ಮಹಿಳಾ ಸರಕಾರಿ ಉದ್ಯೋಗಿಯೊಬ್ಬರಿಗೆ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಹಾಗೂ ಕೆಲವು ಮಂದಿ ಅಧಿಕಾರಿಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಜಿಲ್ಲಾಧಿಕಾರಿಗಳಿಗೆ ಮೂರು ಬಾರಿ ಲಿಖಿತ ದೂರು ನೀಡಿದರೂ ಜಿಲ್ಲಾಧಿಕಾರಿಗಳು ಒತ್ತಡಕ್ಕೆ ಒಳಗಾಗಿ ದೂರಿನ ಬಗ್ಗೆ ತನಿಖೆ ನಡೆಸದೆ ನೊಂದ ಮಹಿಳೆಗೆ ಅನ್ಯಾಯವೆಸಗಿದ್ದಾರೆ. ಮಾತ್ರವಲ್ಲ ಗಂಭೀರ ಕರ್ತವ್ಯಲೋಪವೆಸಗಿದ್ದಾರೆ ಎಂದು ಶ್ರೀರಾಮ ದಿವಾಣ ಆರೋಪಿಸಿದ್ದಾರೆ.

ಈ ಎಲ್ಲಾ ವಿಷಯಗಳನ್ನು ಮುಂದಿಟ್ಟುಕೊಂಡು ಬೇಡಿಕೆ ಮುಂದಿಟ್ಟು ಸತ್ಯಾಗ್ರಹ ನಡೆಸುತ್ತಿದ್ದು, ಸತ್ಯಾಗ್ರಹದಿಂದ ನ್ಯಾಯ ಲಭಿಸದೇ ಇದ್ದಲ್ಲಿ ಮುಮದಿನ ದಿನಗಳಲ್ಲಿ ಹೋರಾಟವನ್ನು ರಾಜ್ಯದ ಮತ್ತು ದೇಶದ ರಾಜಧಾನಿಗೂ ವಸ್ತರಿಸಲಾಗುವುದು ಎಂದು ಶ್ರೀರಾಮ ದಿವಾಣ ಪತ್ರಿಕಾ ಹೇಳಿಕೆ ಮೂಲಕ ಮುನ್ನೆಚ್ಚರಿಕೆ ನೀಡಿದ್ದಾರೆ.