Posts Tagged ‘inc’

ಉಡುಪಿ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಮತ್ತು ಮಾಜಿ ಕೇಂದ್ರ ಮಂತ್ರಿ ಉಡುಪಿಯ ಆಸ್ಕರ್ ಫೆರ್ನಾಂಡಿಸ್ ಸಹಿತ ನಾಲ್ವರ ವಿರುದ್ಧ ಬಿಜೆಪಿ ನಾಯಕ, ಮಾಜಿ ಕೇಂದ್ರ ಮಂತ್ರಿ ಸುಬ್ರಹ್ಮಣ್ಯಂ ಸ್ವಾಮಿಯವರು ಅಂದಾಜು 2000 ಕೋಟಿ ರು. ಮಿಕ್ಕಿದ ಹಗರಣವೊಂದಕ್ಕೆ ಸಂಬಂಧಿಸಿದಂತೆ ದೆಹಲಿಯ ಮೆಟ್ರೋಪೊಲಿಟಿನ್ ನ್ಯಾಯಾಲಯದಲ್ಲಿ ಖಾಸಗಿ ದಾವೆ ದಾಖಲಿಸಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಕೋಶಾಧಿಕಾರಿ ಮೋತಿಲಾಲ್ ವೋರಾ ಹಾಗೂ ಆಸ್ಕರ್ ಫೆರ್ನಾಂಡಿಸ್ ವಿರುದ್ಧ ಸುಬ್ರಹ್ಮಣ್ಯ ಸ್ವಾಮಿ ಬಹುಕೋಟಿ ಹಗರಣದ ಬಗ್ಗೆ ದೂರು ನೀಡಿದ್ದಾರೆ. ಆರೋಪಗಳ ಬಗ್ಗೆ ನ್ಯಾಯಾಧೀಶರಾದ ಗೋಮತಿ ಮನೋಚ ಅವರ ಸಮಸಕ್ಷಮದಲ್ಲಿ ಜೂನ್ 2ರಂದು ಸುಮಾರು ಒಂದು ಗಂಟೆ ಕಾಲ ಸ್ವಾಮಿ ವಾದ ಮಂಡಿಸಿದ್ದಾರೆ.

‘ನ್ಯಾಷನಲ್ ಹೆರಾಲ್ಡ್ ನ್ಯೂಸ್ ಪೇಪರ್ ಪಬ್ಲಿಶಿಂಗ್ ಕಂಪೆನಿ’ಯು ಅಂದಾಜು 2000 ಕೋಟಿ ರು.ಗೂ ಮಿಕ್ಕಿದ ಚರ ಸ್ಥಿರ ಆಸ್ತಿ ಹೊಂದಿದೆ. ಇದನ್ನು ಮೇಲೆ ಹೆಸರಿಸಿದ ನಾಲ್ವರು ಕಾಂಗ್ರೆಸ್ ನಾಯಕರು ತಮ್ಮ ಸ್ವಾಧೀನಪಡಿಸಿಕೊಳ್ಳಲು ಕ್ರಿಮಿನಲ್ ಸಂಚು ಹೂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ನ್ಯಾಯವಾದಿಯೂ ಆದ ಸ್ವಾಮಿ, ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ನಾಲ್ವರಿಗೂ ಸಮನ್ಸ್ ಜ್ಯಾರಿಗೊಳಿಸಬೇಕೆಂದು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡರು.

‘ನ್ಯಾಷನಲ್ ಹೆರಾಲ್ಡ್ ನ್ಯೂಸ್ ಪೇಪರ್ ಪಬ್ಲಿಶಿಂಗ್ ಕಂಪೆನಿ’ ಸುದ್ಧಿ ಮಾಧ್ಯಮಗಳನ್ನು ಪ್ರಕಟಿಸುವ ಗುರಿಯನ್ನು ಹೊಂದಿರುವ ಕಂಪೆನಿಯಾಗಿದ್ದು, ಇದಕ್ಕೆ ಸರಕಾರ ಈ ಹಿಂದೆ ದೆಹಲಿ, ಲಕ್ನೊ, ಭೋಪಾಲ್ ಮುಂತಾದೆಡೆಗಳಲ್ಲಿ ಉಚಿತವಾಗಿ ಭೂಮಿಯನ್ನು ನೀಡಿದೆ. ಇದೀಗ ಈ ಬಹುಕೋಟಿ ಮೊತ್ತದ ಕಂಪೆನಿಯನ್ನು ‘ಯಂಗ್ ಇಂಡಿಯನ್’ ಎಂಬ ಕಂಪೆನಿ ತನ್ನ ಕೈವಶ ಮಾಡಿಕೊಳ್ಳಲು ಮುಂದಾಗಿದೆ ಎಂದು ಸ್ವಾಮಿ ವಿವರ ನೀಡಿದ್ದಾರೆ.

ನ್ಯಾಷನಲ್ ಹೆರಾಲ್ಡ್ ನ್ಯೂಸ್ ಪೇಪರ್ ಪಬ್ಲಿಶಿಂಗ್ ಕಂಪೆನಿಗಿರುವ ಯಾವ ಉದ್ಧೇಶಗಳೂ ಯಂಗ್ ಇಂಡಿಯನ್ ಕಂಪೆನಿಗಿಲ್ಲ. ಅದಲ್ಲದೆ, ನ್ಯಾಷನಲ್ ಹೆರಾಲ್ಡ್ ಕಂಪೆನಿಯು ಸರಕಾರದಿಂದ ಲಾಭಗಳನ್ನು ಪಡೆದುಕೊಂಡಿದೆ. ಇದೀಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ ಹಾಗೂ ಆಸ್ಕರ್ ಫೆರ್ನಾಂಡಿಸ್ ಇವರುಗಳಿರುವ ಯಂಗ್ ಇಂಡಿಯನ್ ಕಂಪೆನಿಯು ನ್ಯಾಷನಲ್ ಹೆರಾಲ್ಡ್ ಕಂಪೆನಿಯನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಲು ಮುಂದಾಗಿರುವುದು ಅಕ್ರಮವೆಂದು ಸ್ವಾಮಿ ಅಪಾದಿಸಿದ್ದಾರೆ.

‘ಯಂಗ್ ಇಂಡಿಯನ್’ ಕಂಪೆನಿಯ 76 ಶೇಕಡಾ ಶೇರುಗಳನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ ಹಾಗೂ ಆಸ್ಕರ್ ಫೆರ್ನಾಂಡಿಸ್ ಖರೀದಿಸಿದ್ದಾರೆ. ಆದರೆ ಇವರೆಲ್ಲರೂ ತಮ್ಮ ಸ್ವಂತ ಹಣವನ್ನು ಯಂಗ್ ಇಂಡಿಯನ್ ಕಂಪೆನಿಯ ಶೇರು ಖರೀದಿಗೆ ಉಪಯೋಗಿಸುವ ಬದಲಾಗಿ ಕಾಂಗ್ರೆಸ್ ಪಕ್ಷದ ಫಂಡ್ನಿಂದ 90 ಕೋಟಿ ರು.ಗಳನ್ನು ಇದಕ್ಕೆ ಪಡೆದುಕೊಂಡು ಶೇರುಗಳನ್ನು ಖರೀದಿಸಿದ್ದಾರೆ ಎಂದು ಸ್ವಾಮಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ನ್ಯಾಷನಲ್ ಹೆರಾಲ್ಡ್ ಕಂಪೆನಿ ನೆಹರೂ ಕುಟುಂಬದ ಖಾಸಗಿ ಆಸ್ತಿಯಲ್ಲ. ಈ ಕಂಪೆನಿಗೆ ಸರಕಾರವೂ ಆಸ್ತಿ ಇತ್ಯಾದಿಗಳನ್ನು ನೀಡಿ ಬೆಳೆಸಿದೆ. ಈ ಗೋಲ್ ಮಾಲ್ ಪ್ರಕರಣದಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ನ ಸ್ಯಾಮ್ ಪಿತ್ರೋಡ ಹಾಗೂ ಸುಮನ್ ದುಬೆ ಸಹ ಶಾಮೀಲಾಗಿದ್ದಾರೆಂದು ಸುಬ್ರಹ್ಮಣ್ಯಂ ಸ್ವಾಮಿ ಆರೋಪಿಸಿದ್ದಾರೆ.

ಪ್ರಕರಣದ ಮುಂದಿನ ವಿಚಾರಣೆ ದೆಹಲಿಯ ಮೆಟ್ರೋಪೊಲಿಟಿನ್ ನ್ಯಾಯಾಲಯದಲ್ಲಿ ಜೂನ್ 23ಕ್ಕೆ ನಡೆಯಲಿದೆ.