Posts Tagged ‘ips’

http://www.udupibits.in news
ಉಡುಪಿ: ದಕ್ಷ ಪೊಲೀಸ್ ಅಧಿಕಾರಿ ಎಂದು ಹೆಸರುಗಳಿಸಿರುವ ಕಾರ್ಕಳ ಉಪ ವಿಭಾಗದ ಎ.ಎಸ್.ಪಿ. ಅಣ್ಣಾಮಲೈ ಅವರು ಉಪ ವಿಭಾಗದ ಪೊಲೀಸ್ ಅಧಿಕಾರಿಗಳ ಕಚೇರಿ ಕಟ್ಟಡ ಕಟ್ಟುವ ಹೊಣೆಯನ್ನು ತಾಲೂಕಿನ ಕಲ್ಲು ಗಣಿ ಮಾಲೀಕರಿಗೆ ನೀಡಿದ್ದಾರಂತೆ !

ಒಬ್ಬ ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿ ದಾರಿ ತಪ್ಪಿದ್ದಾರೆ ಎನ್ನಲು ಇದಕ್ಕಿಂತ ಬೇರೆ ಉದಾಹರಣೆ ಬೇಕಾಗಿಲ್ಲ. ಪೊಲೀಸ್ ಅಧಿಕಾರ ಕಚೇರಿ ಕಟ್ಟಡವನ್ನು ಕಟ್ಟುವ ಜವಾಬ್ದಾರಿಯನ್ನು ಕಲ್ಲು ಗಣಿ ಮಾಲೀಕರ ಹೆಗಲಿಗೆ ಹಾಕುವ ಮೂಲಕ ಎಎಸ್ಪಿ ಅಣ್ಣಾಮಲೈ ಅವರು ತಮ್ಮ ಶುಭ್ರ ಬಿಳಿ ಬಟ್ಟೆಗೆ ತಮಗೆ ತಾವೇ ಮಸಿ ಬಳಿದುಕೊಂಡಿದ್ದಾರೆ.

ಸರಕಾರಿ ಕಟ್ಟಡವನ್ನು ಸರಕಾರವೇ ನಿರ್ಮಿಸಬೇಕು. ಇದು ಸರಕಾರದ ಜವಾಬ್ದಾರಿಯೂ ಹೌದು, ಕರ್ತವ್ಯವೂ ಆಗಿದೆ. ಸರಕರ ಮಾಡಬೇಕಾದ ಕೆಲಸವನ್ನು ಖಾಸಗಿಯವರಿಂದ, ಅದರಲ್ಲೂ ಕಲ್ಲು ಗಣಿ ಮಾಲೀಕರಿಂದ ಮಾಡಿಸುವುದು ಎಂದರೆ ಪೊಲೀಸರ ಕೈಯ್ಯಲ್ಲಿ ಇರಬೇಕಾದ ದಂಡವನ್ನು ಖಾಸಗಿ ಉದ್ಯಮಿಗಳ ಕೈಗೆ ಕೊಟ್ಟಂತೆಯೇ ಸರಿ.

ಕಲ್ಲು ಗಣಿ ಮಾಲೀಕರ ಮೇಲೆ ಸಾರ್ವಜನಿಕ ವಲಯದಲ್ಲಿ ಅಷ್ಟೇನೂ ಒಳ್ಳೆಯ ಹೆಸರಿಲ್ಲ. ಇವರ ಮೇಲೆ ಜಿಲ್ಲೆಯಾದ್ಯಂತ ವಿವಿಧ ಪೊಲೀಸ್ ಠಾಣೆಗಳಲ್ಲಿ ಅನೇಕ ಮೊಕದ್ದಮೆಗಳೂ ದಾಖಲಾಗಿವೆ. ಅಕ್ರಮ ಸ್ಪೋಟಕ ದಾಸ್ತಾನು, ಅನಧಿಕೃತ ಸ್ಪೋಟಕ ಬಳಕೆ, ಪರವಾನಿಗೆ ರಹಿತ ಕಲ್ಲು ಗಣಿ, ಕಾರ್ಮಿಕರಿಂದ ಕಾನೂನು ಬಾಹಿರವಾಗಿ ಜೀತ ಮಾಡಿಸುವಿಕೆಯೇ ಮೊದಲಾದ ಆರೋಪಗಳೂ ಹೆಚ್ಚಾಗಿ ಕೇಳಿ ಬರುತ್ತಿವಾಗ, ಅಂಥವರಿಂದ ಪೊಲೀಸ್ ಅಧಿಕಾರಿಗಳ ಕಚೇರಿ ಕಟ್ಟಡವನ್ನು ನಿಮರ್ಿಸಲು ಮುಂದಾಗುವುದು ಎಂದರೆ, ಅದು ನಕಾರಾತ್ಮಕ ಬೆಳವಣಿಗೆಯೇ ಆಗುತ್ತದೆ.

ವಾರದ ಹಿಂದೆ ಕಾರ್ಕಳ ತಾಲೂಕಿನ ಕಲ್ಲು ಗಣಿ ಮಾಲೀಕರನ್ನು ತಮ್ಮ ಕಚೇರಿಗೆ ಕರೆಸಿಕೊಂಡ ಎಎಸ್ಪಿ ಅಣ್ಣಾಮಲೈ ಅವರು, ಸಭೆಯಲ್ಲಿ ಚಾ ಮತ್ತು ಬಿಸ್ಕೇಟು ನೀಡಿದ ಬಳಿಕ, ತಮಗೊಂದು ಹೊಸದಾದ ಸುಸಜ್ಜಿತವಾದ ಕಚೇರಿ ಕಟ್ಟಡ ಕಟ್ಟಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮ ಕಲ್ಲು ಗಣಿ ಕಾರ್ಯಾಯುತ್ತಿರಬೇಕಾದರೆ, ಸಮಸ್ಯೆ ಬಂದಾಗಲೆಲ್ಲ ಪೊಲೀಸ್ ಅಧಿಕಾರಿಗಳು ಸ್ವಲ್ಪ ಮಟ್ಟಗಾದರೂ ತಮಗೆ ರಿಯಾಯಿತಿ ತೋರಿಸಬೇಕಾದರೆ, ತಮ್ಮ ಪರವಾಗಿ ನಿಲ್ಲಬೇಕಾದರೆ, ಕೇಸು ಮುಚ್ಚಿ ಹಾಕಬೇಕಾದರೆ, ಪೊಲೀಸ್ ಅಧಿಕಾರಿಗಳ ಎಲ್ಲಾ ರೀತಿಯ ಬೇಕು ಬೇಡಗಳಿಗೂ ತಾವು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿರಬೇಕು ಎನ್ನುವುದನ್ನು ಸರಿಯಾಗಿಯೇ ತಿಳಿದುಕೊಂಡಿರುವ ಕಲ್ಲು ಗಣಿ ಮಾಲೀಕರು, ಎಎಸ್ಪಿ ಅಣ್ಣಾಮಲೈ ಅವರ ಆದೇಶವನ್ನು ಶಿರಸಾವಹಿಸಿ ಸ್ವೀಕರಿಸಿಕೊಂಡರು ಎನ್ನಲಾಗಿದೆ.

ಉಡುಪಿ: ಕೋಟ ಪೊಲೀಸ್ ಠಾಣೆಯಿಂದ ಕೇವಲ ಎರಡೇ ಎರಡು ಫರ್ಲಾಂಗ್ ದೂರದ ಮಣೂರು ಪೇಟೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದ ವೃದ್ಧೆಯನ್ನು ಕೊಲೆಗೈದು ಚಿನ್ನಾಭರಣಗಳನ್ನು ದೋಚಿದ ಪ್ರಕರಣದ ಮೂವರನ್ನು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ.

ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಬಳಿಯ ನಿವಾಸಿ ನಿತಿನ್ ಆಚಾರಿ (24), ಕುಂಭಾಶಿ ನಿವಾಸಿ ಪ್ರವೀಣ್ ಕೆ.ವಿ.ತಿಂಗಳಾಯ (25) ಹಾಗೂ ವಕ್ವಾಡಿ ಗ್ರಾಮದ ಸಂಕೇತ್ ಗುಡಿಗಾರ (17) ಪ್ರಕರಣದ ಆರೋಪಿಗಳು. ಇವರಲ್ಲಿ ನಿತಿನ್ ಕೊಲೆಗೀಡಾದ ವೃದ್ಧೆಯ ಮನೆ ಪರಿಸರದ ನಿವಾಸಿಯೇ ಆಗಿದ್ದು, ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದವನು. ಪ್ರವೀಣ್ ನಿರುದ್ಯೋಗಿಯಾಗಿದ್ದು, ಈ ಹಿಂದೆ ಪೂನಾದಲ್ಲಿದ್ದವನು. ಸಂಕೇತ್ ಐಟಿಐ ಕಲಿತು ಅರ್ಧದಲ್ಲಿ ಬಿಟ್ಟವನಾಗಿದ್ದು, ನಿರುದ್ಯೋಗಿಯಾಗಿದ್ದಾನೆ. ಪ್ರವೀಣ್ ಹಾಗೂ ಸಂಕೇತ್ ಹಳೆಯ ಆರೋಪಿಗಳೂ ಆಗಿದ್ದಾರೆ.

ನಿತಿನ್ ಆಚಾರಿ ನೀಡಿದ ಮಾಹಿತಿಯಂತೆ ಪ್ರವೀಣ್ ಹಾಗೂ ಸಂಕೇತ್ ಮಣೂರಿನಲ್ಲಿರುವ ಗಿರಿಜಾ ಉರಾಳ (84) ಅವರ ಮನೆಯ ಬಚ್ಚಲು ಕೋಣೆಯ ಮಾಡಿನ ಹಂಚು ತೆಗೆದು ಒಳಗೆ ನುಗ್ಗಿದ್ದಾರೆ. ಗಿರಿಜಾರವರ ಬಾಯಿಗೆ ಕೈ ಅಡ್ಡ ಹಿಡಿದು, ಬಟ್ಟೆ ತುರುಕಿ ಕೊಲೆ ಮಡಿದ್ದಾರೆ. ಬಳಿಕ ಗಿರಿಜಾರವರ ಮೈ ಮೇಲಿದ್ದ ಚಿನ್ನಾಭರಣಗಳನ್ನು ದೋಚಿದ್ದರು. ಪ್ರವೀಣ್ ಹಾಗೂ ಸಂಕೇತ್ ಮನೆಗೆ ನುಗ್ಗಿ ಕೊಲೆಗೈಯ್ಯುವ ಸಮಯದಲ್ಲಿ ನಿತಿನ್ ಹೊರಗಡೆ ಬೈಕ್ ನಲ್ಲಿ ಕಾವಲು ಕಾಯುತ್ತಿದ್ದನೆನ್ನಲಾಗಿದೆ. ಆಗಸ್ಟ್ 20ರಂದು ರಾತ್ರಿ ಗಂಟೆ 9.30ರಿಂದ ಮರುದಿನ ಬೆಳಗ್ಗೆ ಗಂಟೆ 6.45ರ ಮಧ್ಯಾವದಿಯಲ್ಲಿ ಈ ಕೃತ್ಯ ನಡೆದಿದ್ದು, ಆ.21ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಸ್ಥಳೀಯರ ಗಮನಕ್ಕೆ ಬಂದಿತ್ತು.

ಪ್ರಕರಣದ ಪತ್ತೆಗಾಗಿ ಉಡುಪಿ ಡಿವೈಎಸ್ಪಿ ಡಾ.ಪ್ರಭುದೇವ ಬಿ.ಮಾನೆ ನೇರ ಉಸ್ತುವಾರಿಯಲ್ಲಿ, ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ಅರುಣ ನಾಯಕ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ 3 ತನಿಖಾ ತಂಡಗಳನ್ನು ಎಸ್ಪಿ ಡಾ.ಪಿ.ರಾಜೇಂದ್ರ ಪ್ರಸಾದ್ ರಚಿಸಿದ್ದರು. ಡಿಸಿಐಬಿ ಪೊಲೀಸೂ ಆರೋಪಿಗಳ ಪತ್ತೆಯಲ್ಲಿ ತೊಡಗಿಸಿಕೊಂಡಿದ್ದರು.

ಡಿಸಿಐಬಿ ಮತ್ತು ಕೋಟ ಪೊಲೀಸರ ತಂಡ ಮೂವರೂ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಇವರಲ್ಲಿ ನಿತಿನ್ ಹಾಗೂ ಪ್ರವೀಣ್ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅಪ್ರಾಪ್ತ ಪ್ರಾಯದ ಆರೋಪಿ ಸಂಕೇತ್ನ ಬಂಧನ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಾಗಿದೆ.

ಗಿರಿಜಾ ಉರಾಳರನ್ನು ಕೊಲೆಗೈದು, ಅವರ ದೇಹದಿಂದ ದೋಚಿದ 2 ಚಿನ್ನದ ಬಳೆ, ಒಂದು ಜೊತೆ ಬೆಂಡೋಲೆ ಮತ್ತು ಕಿವಿಯ ಮಾಟಿ, ಕೃತ್ಯಕ್ಕೆ ಬಳಸಿದ ಬೈಕ್ ನ್ನು ಪೊಲೀಸರು ಆರೋಪಿಗಳಿಂದ ವಶಪಡಿಸಿಕೊ0ಮಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 1.18 ಲಕ್ಷ ರು. ಎಂದು ಅಂದಾಜಿಸಲಾಗಿದೆ.

ಪೊಲೀಸರಿಗೆ ಬಹುಮಾನ

ಕೇವಲ ಐದು ದಿನಗಳ ಅಂತರದಲ್ಲಿ ಎರಡು ಪ್ರಮುಖ ಪ್ರಕರಣಗಳನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಡಿಸಿಐಬಿ ಹಾಗೂ ಕೋಟ ಸರ್ಕಲ್ ಇನ್ಸ್ ಪೆಕ್ಟರ್ ನೇತೃತ್ವದ ಮೂರು ಪೊಲೀಸ್ ಅಧಿಕಾರಿಗಳ ತಂಡಕ್ಕೆ ಎಸ್ಪಿ ಡಾ.ರಾಜೇಂದ್ರ ಪ್ರಸಾದ್ ಹತ್ತು ಸಾವಿರ ರು. ಬಹುಮಾನ ಘೋಷಿಸಿದ್ದಾರೆ.

ಪೊಲೀಸರ ಕಾರ್ಯಾಚರಣೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಎಸ್ಪಿಯವರು, ಸಾರ್ವಜನಿಕರು ಮಾಹಿತಿದಾರರಾಗಿ ಸಹಕರಿಸಬೇಕು. ಸಾರ್ವಜನಿಕರು ಸಹಕರಿಸಿದ್ದೇ ಆದಲ್ಲಿ, ಅಪರಾಧ ಪ್ರಕರಣಗಳ ನಡೆಯದಂತೆ ಮತ್ತು ನಡೆದರೂ ಶೀಘ್ರವೇ ಆರೋಪಿಗಳನ್ನು ಬಂಧಿಸಲು ಸಾಧ್ಯವೆಂದು ತಿಳಿಸಿದ್ದಾರೆ.

ಉಡುಪಿ: ಗಲಭೆ, ಉತ್ಸವ, ವಿವಿಐಪಿ ಭದ್ರತೆ ಸಹಿತ ವಿವಿಧ ರೀತಿಯ ತುರ್ತು
ಕಾರ್ಯಾಚರಣೆಗಳಿಗಾಗಿ ಆಯ್ದ 30 ಮಂದಿ ಡಿಎಆರ್ ಸಿಬ್ಬಂದಿಗಳಿಗೆ ತರಬೇತಿ ನೀಡಿ ಕಮೋಂಡೋ ಪಡೆಯೊಂದನ್ನು ರಚಿಸಲಾಗುವುದು ಎಂದು ನೂತನ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಉಡುಪಿ ಎಸ್ಪಿಯಾಗಿದ್ದ ಡಾ.ಎಂ.ಬಿ.ಬೋರಲಿಂಗಯ್ಯ ದಾವಣಗೆರೆಗೆ ವರ್ಗಾವಣೆಗೊಂಡು ತೆರಳಿದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ನಿಯುಕ್ತಿಗೊಂಡು ಆಗಸ್ಟ್ 11ರಂದು ಅಧಿಕಾರ ಸ್ವೀಕರಿಸಿದ ರಾಜೇಂದ್ರ ಪ್ರಸಾದ್ ಅವರು ಎಸ್ಪಿ ಕಚೇರಿ ಸಭಾಂಗಣದಲ್ಲಿ ಇಂದು ನಡೆಸಿದ ಮೊದಲ ಮಾಧ್ಯಮಗೋಷ್ಟಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು.

ರೌಡಿ ಶೀಟರ್ ಗಳ ಪಟ್ಟ ಮತ್ತು ಎಂಓಬಿ ಕ್ರಿಮಿನಲ್ ಗಳ ಪಟ್ಟಿಯನ್ನು ಶೀಘ್ರವೇ ಪರಿಷ್ಕರಿಸಲಾಗುವುದು. ವೃದ್ಧರು, ಕಣ್ಣು ಕಾಣದವರು, ನಡೆಯಲಾಗದವರು, ಕ್ರಿಮಿನಲ್ ಚಟುವಟಿಕೆಯಿಂದ ಪೂರ್ಣ ಪ್ರಮಾಣದಲ್ಲಿ ಹೊರಗಡೆ ಬಂದವರಾಗಿದ್ದು, ಮುಖ್ಯ ವಾಹಿನಿಯಲ್ಲಿ ಗೌರವದಿಮದ ಬದುಕುತ್ತಿರುವವರು ಪಟ್ಟಿಯಲ್ಲಿ ಇದ್ದರೆ ಅವರ ಮೇಲೆ ಮೊದಲ ಹಂತದಲ್ಲಿ ನಿಗಾ ಇರಿಸಿ ಬಳಿಕ ರೌಡಿ ಶೀಟರ್ ಪಟ್ಟಿಯಿಂದ ಕೈಬಿಡಲಾಗುವುದು ಮತ್ತು ರೌಡಿ ಚಟುವಟಿಕೆಯಲ್ಲಿ ತೊಡಗಿರುವ ಯುವಕರನ್ನು ಯಾವುದೇ ಮುಲಾಜಿಲ್ಲದೆ ರೌಡಿ ಶೀಟರ್ ಪಟ್ಟಿಗೆ ಸೇರ್ಪಡೆಗೊಳಿಸಿ ಬಳ್ಳಾರಿ ಜೈಲಿಗೆ ಕಳುಹಿಸಿಕೊಡಲಾಗುವುದು ಎಂದು ಎಸ್ಪಿ ರಾಜೇಂದ್ರ ಪ್ರಸಾದ್ ಸ್ಪಷ್ಟಪಡಿಸಿದರು.

ಹೊಯ್ಸಳವನ್ನು ಪರಿಷ್ಕರಣೆಗೊಳಿಸಲಾಗುವುದು. ಪೊಲೀಸ್ ಕಂಟ್ರೋಲ್ ರೂಮ್ ನೊಂದಿಗೆ ನೇರ ಸಂಪರ್ಕ ಇರುವಂತೆ ವ್ಯವಸ್ತೆಗೊಳಿಸಿ ಎಲ್ಲಾ ಅಗತ್ಯ ಸೌಲಭ್ಯಗಳನ್ನೂ ಹೊಂದಿರುವ ವಾಹನವನ್ನಾಗಿ ಮಾರ್ಪಡಿಸಿ ಜಿಲ್ಲೆಯ ಪ್ರಮುಖ ನಗರಗಳಿಗೆ 24 ಗಂಟೆ ಗಸ್ತು ವ್ಯವಸ್ಥೆಗೆ ನಿಯೋಜಿಸಲಾಗುವುದು. ಹೆಣ್ಮಕ್ಕಳು ಕಾಣೆಯಾದಾಗ ಮತ್ತು ವಾಹನ ಕಳವಾದಾಗ ಯಾವುದೇ ವಿಳಂಬಕ್ಕೆ ಅವಕಾಶವಿಲ್ಲದಂತೆ ಎಫ್ಐಆರ್ ದಾಖಲಿಸುವ ನಿಟ್ಟಿನಲ್ಲಿ ಕ್ರಮ
ತೆಗೆದುಕೊಳ್ಳಲಾಗುವುದು ಎಂದು ರಾಜೇಂದ್ರ ಪ್ರಸಾದ್ ಹೇಳಿದರು.

ದೇಶದಲ್ಲಿ 95 ಶೇಕಡಾ ಅಪಘಾತಗಳು ವಾಹನ ಚಾಲಕರ ನಿರ್ಲಕ್ಷ್ಯತನದಿಂದಾಗಿ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಸಂಚಾರ ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು. ಇಲ್ಲಿ ದಂಡ ವಿಧಿಸುವುದೇ ಮುಖ್ಯ ಉದ್ಧೇಶವಾಗಿರುವುದಿಲ್ಲ, ಬದಲಾಗಿ ಅರಿವು ಮೂಡಿಸುವುದು ಮುಖ್ಯ ಉದ್ಧೇಶವಾಗಿರುತ್ತದೆ. ಇದರ ಜೊತೆಗೆ ರಸ್ತೆ ಬಳಕೆದಾರರಿಗಾಗಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ನೂತನ ಎಸ್ಪಿ ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯನ್ನಾಗಿ ಪರಿವರ್ತಿಸುವುದು ತನ್ನ ಆದ್ಯತೆಯಾಗಿದೆ ಎಸ್ಪಿ ತಿಳಿಸಿದರು. ಮಾಧ್ಯಮಗೋಷ್ಟಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.

# ನೀವೊಂದು ಕಾಫಿ ಶಾಪಿಗೆ ಹೊಗ್ತೀರಿ ಕೈನಲ್ಲಿ ಪೋನಿತ್ತು ಎದುರಿಗೆ ಚಂದದ ಹುಡುಗಿಯರಿಬ್ರು ಕುಳಿತಿದ್ದಾರೆ.. ಸುಮ್ಮನೇ ನೀವೊಂದು ಪೋಟೋ ತೆಗೆದ್ರಿ
ಅಂತಿಟ್ಟುಕೊಳ್ಳಿ ಏನಾಗ ಬಹುದು ? ಹುಡುಗಿಯರು ನೋಡಿದರೆ ಕೇಳಿಯಾರು.. ಅಕ್ಕ ಪಕ್ಕದವರು ಧಭಾಯಿಸಿಯಾರು.. ತೆಗೆದ ಪೋಟೋ ಡಿಲೀಟ್ ಮಾಡಿಸಿಯಾರು… ಅಲ್ಲಿಗೂ ಮುಗಿದಿಲ್ಲ ಅಂತಿಟ್ಟುಕೊಳ್ಳಿ ಪೋಲೀಸ್ ಕಂಪ್ಲೇಂಟ್ ಆಗಬಹುದು..

ಆಗ ಪೋಲೀಸ್ ಏನು ಮಾಡಿಯಾರು ? ವಾರ್ನ್ ಮಾಡಿ ಕಳುಹಿಸಬಹುದು.. ಆದ್ರೆ ಮೊನ್ನೆ ನಡೆದದ್ದೇನು ಸ್ವಾಮಿ ? ಒಬ್ಬ ಪ್ರಾಮಾಣಿಕ ಅಧಿಕಾರಿಯ ವಿರುದ್ಧ ನೇರವಾಗಿ ಒಂದು ಷಡ್ಯಂತ್ರವನ್ನು ನಡೆಸಲಾಗಿದೆ.. ಒಬ್ಬ ಸಬ್ ಇನ್ಸಪೆಕ್ಟರ್ ಗೆ ಹಿರಿಯ ಐ.ಪಿ.ಎಸ್. ಅಧಿಕಾರಿಯ ಪರಿಚಯ ಇಲ್ಲವೆಂದಾದರೆ ಇದಕ್ಕೇನು ಹೇಳಬೇಕು ಹೇಳಿ ? ಎ.ಡಿ.ಜಿ.ಪಿ. ರವೀಂದ್ರನಾಥ್ ಪರ ನಾನೂ ಇದ್ದೇನೆ.. ರವಿಂದ್ರನಾಥ್ ಎಂತಹ ಪ್ರಾಮಾಣಿಕ ಎಂಬುದಕ್ಕೆ ಅವರ ಪರ ರಾಜ್ಯಾದ್ಯಂತ ಎದ್ದಿರುವ ಹೋರಾಟವೇ ಸಾಕ್ಷಿ. – ವಸು.

# ರಾಜಕೀಯ ಪಿತೂರಿಯಿಂದಲೋ “No action is the best action in Police department” ಎನ್ನುವ ಪೋಲಿಸ್ ವ್ಯವಸ್ಥೆಯ ದೌರ್ಜನ್ಯಕ್ಕೋ ADGP ಡಾ. ರವೀಂದ್ರನಾಥ್ ಬಲಿಪಶುವಾಗಿದ್ದರೆ I consider it as my duty to fight for justice ಜಾತಿ ಎನ್ನುವ ದರಿದ್ರ ತೆವಲಿಗೆ ಬಲಿಯಾಗಿದ್ದರೆ ನಾನು ಮನುಷ್ಯ ಎಂದುಕೊಳ್ಳಲೇ ಅಸಹ್ಯ ಪಡುತ್ತೇನೆ !

ಗೃಹ ಸಚಿವರ ಮಾತು ಕೇಳಿದ ಮೇಲಂತೂ feeling ದರಿದ್ರ and ಅಸಹಾಯಕ..

– ಅಂಜಲಿ ರಾಮಣ್ಣ.

ಬೆಂಗಳೂರು ಪೊಲೀಸರ ಬಗ್ಗೆ ಅಸಹ್ಯ, ಜಿಗುಪ್ಸೆ ಮೂಡಿಸಿದ ವಿಷಯವಿದು: ಜಗದೀಶ್ ಕೊಪ್ಪ.

# ”ಕೋಟೆ ಕೊಳ್ಳೆ ಹೊಡೆದ ನಂತರ ದಿಡ್ಡಿ ಬಾಗಿಲು ಹಾಕಿದರು” ಎಂಬುದು ನಮ್ಮ ಜನಪದರ ನಡುವೆ ಇರುವ ಒಂದು ಪ್ರಮುಖ ಗಾದೆ. ಕಳೆದ ಎರಡು ದಿನಗಳಿಂದ ಕರ್ನಾಟಕ ಪೋಲಿಸ್ ಇಲಾಖೆಯ ಮಾನ ರಾಷ್ಟ್ರಮಟ್ಟದಲ್ಲಿ ಹರಜಾಗುತ್ತಾ, ಮಣ್ಣು ಪಾಲಾದಾಗ ನಿದ್ರೆಯಲ್ಲಿ ಇದ್ದ ಕರ್ನಾಟಕ ಸರ್ಕಾರ, ಇದೀಗ (29.05.14) ತಾನೆ ಸಂಜೆ ಏಳು ಗಂಟೆಯಲ್ಲಿ ತುರ್ತು ಸಭೆ ನಡೆಸಿ, ಬೆಂಗಳೂರು ಪೋಲಿಸ್ ಕಮೀಷನರ್ ಅವರನ್ನು ಎತ್ತಂಗಡಿ ಮಾಡಿದೆ.

ಇಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಡಾ. ರವೀಂದ್ರನಾಥ್ ದೋಷಿ ಅಥವಾ ನಿರ್ದೋಷಿ ಎನ್ನುವ ಪ್ರಶ್ನೆಗಿಂತ, ಓರ್ವ ನಾಗರೀಕನನ್ನು ನಮ್ಮ ಪೊಲೀಸರು ಹೇಗೆ ಅಮಾನವೀಯವಾಗಿ ನಡೆಸಿಕೊಳ್ಳಬಲ್ಲರು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಒಂದು ಠಾಣೆಯ ಯಕಶ್ಚಿತ ಓರ್ವ ಸಬ್ ಇನ್ಸ್ಪೆಕ್ಟರ್ ಐ.ಪಿ.ಎಸ್. ಅಧಿಕಾರಿಯನ್ನು ಪಿಕ್ ಪಾಕೇಟ್ ಕಳ್ಳನಂತೆ, ಅಥವಾ ದರೋಡೆಕೋರನಂತೆ ಬಟ್ಟೆ ಬಿಚ್ಚಿಸಿ ಲಾಕ್ಅಪ್ ಒಳಗಡೆ ದೂಡುತ್ತಾನೆ ಎಂದರೆ, ಈ ನೆಲದ ನಾಗರೀಕರ ಗತಿಯೇನು? ನಾಗರೀಕ ಹಕ್ಕುಗಳ ಪಾಡೇನು?

ಯಾವುದೇ ಠಾಣೆಯ ಪೊಲೀಸ್ ಅಧಿಕಾರಿ ಗಂಭೀರ ಪ್ರಕರಣಗಳಲ್ಲಿ ದೂರನ್ನು ದಾಖಲಿಸಿಕೊಂಡು ಕೂಡಲೇ ವಿಷಯವನ್ನು ಮೇಲಾಧಿಕಾರಿಗಳಿಗೆ ತರಬೇಕಾದದ್ದು ಆತನ ಕರ್ತವ್ಯ. ಆದರೆ ಇಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರವಿ ಎಂಬಾತನ ಬಗ್ಗೆ ಕೇಂದ್ರ ವಲಯದ ಡಿ.ಸಿ.ಪಿ. ರವಿಕಾಂತೇಗೌಡ ಜಾಣ ಮೌನ ವಹಿಸಿದರೆ, ಕಮೀಷನರ್ ರಾಘವೇಂದ್ರ ಔರಾದ್ಕರ್ ನನಗೆ ವಿಷಯ ಗೊತ್ತಿಲ್ಲ ಎಂದು ಜಾರಿಕೊಳ್ಳತ್ತಾರೆ. ಗುರುತಿನ ಚೀಟಿ ಇದ್ದರೂ ಡಾ. ರವಿಂದ್ರನಾಥ್ ಅವರನ್ನು ಒಳಕ್ಕೆ ತಳ್ಳಿದ ಪೊಲೀಸ್ ಇನ್ಸ್ಪೆಕ್ಟರ್, ನಾಳೆ ಬೆಂಗಳೂರಿನಲ್ಲಿರುವ ಕಮಿಷನರ್ ಹಾಗೂ ನಾಲ್ವರು ಕಾನೂನು ಸುವ್ಯವಸ್ಥೆ ಹೊಣೆ ಹೊತ್ತಿರುವ ಡಿ.ಸಿ.ಪಿ.ಗಳ ಬಟ್ಟೆ ಬಿಚ್ಚಿಸಿ ಠಾಣೆಯ ಲಾಕಪ್ಪಿನಲ್ಲಿ ನಿಲ್ಲಿಸುವುದಿಲ್ಲ ಎಂಬುದಕ್ಕೆ ಗ್ಯಾರಂಟಿ ಏನಿದೆ.? ಇಂತಹ ಘಟನೆಗಳು ನಾಗರೀಕ ಜಗತ್ತಿಗೆ ಕೆಟ್ಟ ಸಂದೇಶವನ್ನು ನೀಡುತ್ತವೆ ಎಂಬುದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಗಮನಿಸಬೇಕಿದೆ.

ರಾಜ್ಯದ ಪ್ರತಿ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿ ಹದ್ದುಮೀರಿ ನಡೆದುಕೊಂಡಾಗ ಕೂಡಲೇ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಲು ಅನುಕೂಲವಾಗುವಂತೆ ಅವರ ಪೋನ್ ನಂಬರ್, ಇ-ಮೈಲ್ ವಿಳಾಸ, ಕಚೇರಿ ವಿಳಾಸ, ತುರ್ತು ಸಂದರ್ಭದಲ್ಲಿ ಸಂಪರ್ಕಿಸಬೇಕಾದ ನಂಬರ್, ಇವುಗಳ ವಿವರ ಇರುವ ನಾಮಫಲಕವನ್ನು ಪ್ರತಿ ಠಾಣೆಯಲ್ಲಿ ಕಡ್ಡಾಯವಾಗಿ ಪ್ರದರ್ಶಿಸುವ ನಿಯಮವನ್ನು ಕರ್ನಾಟಕ ಸರ್ಕಾರ ಜಾರಿಗೆ ತರಬೇಕಿದೆ. ಇತ್ತೀಚೆಗಿನ ದಿನಗಳಲ್ಲಿ ಬೆಂಗಳೂರು ಪೊಲೀಸರ ಬಗ್ಗೆ ಅಸಹ್ಯ, ಜಿಗುಪ್ಸೆ ಮೂಡಿಸಿದ ಸಂಗತಿ ಇದು.

# ಆರೋಪಿಯನ್ನು ಸೈತಾನನಂತೆ ನೋಡುವುದಕ್ಕೂ ಮೊದಲು..: ರಾಘವೇಂದ್ರ ಭಟ್.

ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಯೆಂದು ಪರಿಗಣಿಸಲ್ಪಟ್ಟಿದ್ದ ಗುಲ್ಬರ್ಗದಲ್ಲಿ 1996ರ ಸುಮಾರಿಗೆ ಶಿಶು ಕಾಮದ ಪ್ರಕರಣ ಮೇರೆ ಮೀರಿತ್ತು. ತಾಂಡಾಗಳ ಬಡ ಹೆಣ್ಣು ಮಕ್ಕಳನ್ನು ಅಪಹರಿಸಿ ನೆರೆ ರಾಜ್ಯಗಳಿಗೆ ಸಾಗಾಟ ಮಾಡಿ ಅವರನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಳ್ಳುವ ಅಮಾನವೀಯ ಘಟನೆ ದಿನೇ ದಿನೇ ನಾಡಿನ ಜನರನ್ನು ಅಸಹಾಯಕರಂತೆ ಅಣುಕಿಸುವ ಹಂತ ತಲುಪಿತ್ತು.

ಆಗ ಅಲ್ಲಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಯುವ ಅಧಿಕಾರಿಯನ್ನು ಸರ್ಕಾರ ನಿಯೋಜಿಸಿತ್ತು. ಆತ ವೃತ್ತಿಯಿಂದ ವೈದ್ಯ. ಆಂಧ್ರ ಮೂಲದ ಪರಿಶಿಷ್ಟ ಜಾತಿಗೆ ಸೇರಿದವ. ಬಡವರಿಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದಲೇ ಕಷ್ಟಪಟ್ಟು ಐಪಿಎಸ್ ಪಾಸ್ ಮಾಡಿ ಖಾಕಿ ತೊಟ್ಟಿದ್ದ. ಮೇಲಾಗಿ ಮೃದು ಹೃದಯಿ; ಆದರೆ ಮಾತು ಒರಟು. ದಂಡ ಸಂಹಿತೆಯ ವಿಧಿಗಳನ್ನು ತೀರಾ ಎಕ್ಸ್ ಟ್ರೀಂ ಎನ್ನುವಷ್ಟರ ಮಟ್ಟಿಗೆ ಪಾಲಿಸುವಾತ. ಕೇವಲ ಒಂದೇ ವರ್ಷದ ಅವಧಿಯಲ್ಲಿ ಆತ ಶಿಶು ಕಾಮದ ಜಾಲವನ್ನು ಗುಲ್ಬರ್ಗ ಸುತ್ತಲಿನ ಪ್ರದೇಶದಲ್ಲಿ ತಹಬದಿಗೆ ತಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ. ಆದರೆ ಅದೇ ಅಧಿಕಾರಿ ಈಗ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ. ಅದು ಏತಕ್ಕೆ?

ಬೆಂಗಳೂರಿನ ಕಾಫಿ ಶಾಪ್ ಒಂದರಲ್ಲಿ ಯುವತಿಯೊಬ್ಬರ ಭಾವಚಿತ್ರವನ್ನು ತಮ್ಮ ಮೊಬೈಲ್‌ನಿಂದ ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರೀಕರಿಸಿದರು ಎಂಬ ಕಾರಣಕ್ಕೆ! ಎಸ್ಪಿಯಾಗಿದ್ದಾಗ ಮಕ್ಕಳನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಸುವುದನ್ನು ತಡೆಯಲು ಹಗಲು-ರಾತ್ರಿ ದುಡಿದು ಹೀರೋ ಆದವನೇ ಈಗ ಸ್ತ್ರೀ ಶೋಷಣೆ ಎಸಗಿದ ಖಳನಾಯಕ.

ಕಳೆದ ಎರಡು ದಿನಗಳಿಂದ ಈ ಕಾರಣಕ್ಕಾಗಿ ಮಾಧ್ಯಮದ ಗಮನ ಸೆಳೆದಿರುವ ಕೆಎಸ್‌ಆರ್‌ಪಿ ಎಡಿಜಿಪಿ ಡಾ.ಪಿ.ರವೀಂದ್ರನಾಥ್ ಅವರ ವೃತ್ತಾಂತವಿದು. ರವೀಂದ್ರನಾಥ್ ಮಹಿಳೆಯ ಫೋಟೋ ತೆಗೆದಿದ್ದಾರೆಯೇ? ಅಥವಾ ಅವರ ವೃತ್ತಿ ಬದುಕನ್ನು ಮುಗಿಸುವುದಕ್ಕೆ ರೂಪಿಸಿದೇ ಸಂಚೇ ಇದು? ಎಂಬುದನ್ನು ಚರ್ಚಿಸುವುದಾಗಲೀ, ಅಥವಾ ಅವರ ಹಳೆ ಟ್ರ್ಯಾಕ್ ರೆಕಾರ್ಡ್ ಆಧಾರದ ಮೇಲೆ ಕ್ಲಿನ್ ಚಿಟ್ ನೀಡುವ ಪ್ರಯತ್ನವಾಗಲಿ ಇದಲ್ಲ. ಆದರೆ ಇಲಾಖೆಯಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ರವೀಂದ್ರನಾಥ್ ಹೀಗೆ ಮಾಡಿದರು ಎಂಬುದು ಮಾತ್ರ ಸದ್ಯಕ್ಕಂತೂ ಜೀರ್ಣಿಸಿಕೊಳ್ಳುವುದಕ್ಕೆ ಆಗದ ಸಂಗತಿ.

ಸಾಮಾನ್ಯವಾಗಿ ಸ್ತ್ರೀ ಕೇಂದ್ರಿತ ಅಪರಾಧ ಪ್ರಕರಣಗಳಲ್ಲಿ ಸಮಾಜ ನಂಬುವುದು ಮಹಿಳೆ ನೀಡುವ ಹೇಳಿಕೆಯನ್ನೇ. ಭಾರತದಂಥ ದೇಶದಲ್ಲಿ ಅದು ಒಪ್ಪಿತವೇ. ಏಕೆಂದರೆ ಇಲ್ಲಿ ಸ್ತ್ರೀಯರ ಮೇಲಿನ ದೌರ್ಜನ್ಯ ತೀವ್ರ. ಹೆಚ್ಚಿನ ಸಂದರ್ಭದಲ್ಲಿ ಶೋಷಣೆಗೊಳಗಾದ ಮಹಿಳೆಯೂ ಅದನ್ನು ಬಹಿರಂಗಪಡಿಸಲು ಮುಂದಾಗುವುದಿಲ್ಲ. ಎಲ್ಲೋ ಒಂದೆರಡು ಪ್ರಕರಣಗಳಲ್ಲಿ ಧೈರ್ಯ ತೋರಬಹುದು. ನ್ಯಾಯ ಸಿಗಬಹುದು. ಉಳಿದಂತೆ ದಾಖಲಾಗುವ ಸ್ತ್ರೀ ಕೇಂದ್ರೀತ ಅಪರಾಧಗಳು ಪುರುಷ ಶೋಷಣೆಗೆ, ದ್ವೇಷ ತೀರಿಸಿಕೊಳ್ಳುವುದಕ್ಕೆ ಬಳಕೆಯಾಗುವುದು ಹೆಚ್ಚು ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ ) ದಾಖಲೆಗಳು ಹೇಳುತ್ತವೆ. ಆದರೆ ಈ ಪ್ರಕರಣ ಅದಕ್ಕೆ ತೀರಾ ವಿರುದ್ಧ. ಇಲ್ಲಿ ನೊಂದ ಮಹಿಳೆಗೆ ಅಪರಾಧಿ ಯಾರು ಎಂಬುದು ಗೊತ್ತಿಲ್ಲ. ನಿಮ್ಮ ಭಾವಚಿತ್ರವನ್ನು ಈತ ತೆಗೆಯುತ್ತಿದ್ದಾನೆ ಎಂದು ಮೂರನೆಯ ವ್ಯಕ್ತಿ ಹೇಳಿದ ನಂತರವೇ ಜಾಗೃತರಾದವರು. ಇದರ ಜತೆಗೆ ಅಪರಾಧಿ ಸ್ಥಾನದಲ್ಲಿ ನಿಂತ ವ್ಯಕ್ತಿಯೂ ಅಷ್ಟೇ ಜವಾಬ್ದಾರಿಯುತ. ಮೇಲಾಗಿ ಕಾನೂನು ಪರಿಪಾಲಕ. ಮಾತ್ರವಲ್ಲ ಪ್ರಕರಣ ದಾಖಲಾದ ನಂತರ ತನಿಖೆಗೆ ಸಹಕರಿಸುವುದಕ್ಕಾಗಿ ವೃತ್ತಿಗೆ ರಾಜೀನಾಮೆ ಕೊಟ್ಟು, ನನ್ನನ್ನು ಬಂಧಿಸಿ ವಿಚಾರಣೆ ಮಾಡಿ ಎಂದು ಮಾತೃ ಇಲಾಖೆಗೆ ಸವಾಲು ಹಾಕುತ್ತಿದ್ದಾರೆ. ಸಂಚಿನ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಎರಡೇ ದಿನದಲ್ಲಿ ಈ ಪ್ರಕರಣ ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಗೋಜಲುಗಳನ್ನು ಸೃಷ್ಟಿಸಿದೆ.

‘ತನಿಖೆಯಿಂದ ಸತ್ಯ ಬಹಿರಂಗವಾಗುತ್ತದೆ. ಕಾನೂನು ತನ್ನದೇ ಕ್ರಮ ತೆಗೆದುಕೊಳ್ಳುತ್ತದೆ’ ಎಂದು ದಂಡ ಪ್ರಕ್ರಿಯೆ ಅನ್ವಯ ಪೊಲೀಸರು ತನಿಖೆ ಮಾಡುವಾಗ ನೀಡುವ ಸಾಮಾನ್ಯ ಹೇಳಿಕೆ. ಅದೇ ರೀತಿ ಅಪರಾಧ ವರದಿಗಾರಿಕೆಯಲ್ಲಿ ‘ಆಫ್ ದಿ ರೆಕಾರ್ಡ್‌’ ಮಾಹಿತಿ ಕಲೆ ಹಾಕುವುದು ವರದಿಗಾರನ ಪ್ರವೃತ್ತಿ. ಇವೆರಡೂ ಮಾರ್ಗದಲ್ಲಿ ಸಂಚರಿಸಿದಾಗಲೂ ಈ ಪ್ರಕರಣದಲ್ಲಿ ಲಭಿಸುತ್ತಿರುವುದು ‘ಪ್ರತಿಕೂಲ’ ಸತ್ಯಗಳೇ.

ಈ ದೇಶದ ಕಾನೂನು ಪ್ರಕಾರ ತನಿಖೆಯ ಅಂತಿಮ ಉದ್ದೇಶ ಸತ್ಯವನ್ನು ಬಹಿರಂಗಪಡಿಸುವುದು. ಆದರೆ ಸತ್ಯ ಮಾತ್ರ ಯಾವಾಗಲೂ ಕಾನೂನಿನ ಅಡಿಯಲ್ಲಿ ಅಡಗಿರುತ್ತದೆ. ಪೊಲೀಸ್ ಪರಿಭಾಷೆಯಲ್ಲಿ ಒಂದು ಪ್ರಕರಣದಲ್ಲಿ ಮೇಲ್ನೋಟದ ಸತ್ಯ (ಪ್ರೈಮಾಫೆಸಿ) ಮತ್ತು ನ್ಯಾಯಾಲಯದಲ್ಲಿ ಸಾಬೀತಾಗುವ ಸತ್ಯ ಬೇರೆ. ಆದರೆ ರವೀಂದ್ರನಾಥ್ ಪ್ರಕರಣದಲ್ಲಿ ಮೇಲ್ನೋಟಕ್ಕೆ ಕಾಣುವ ಸತ್ಯ ಹಾಗೂ ಅದಕ್ಕೆ ವಿಧಿಸಲ್ಪಡುವ ಶಿಕ್ಷೆಗಾಗಿ ನಿಗದಿ ಪಡಿಸುವ ಕಾನೂನು ವಿಧಿಗಳು ತೀರಾ ವಿರುದ್ಧ. ಜತೆಗೆ ಆರೋಪಿ ಸ್ಥಾನದಲ್ಲಿ ನಿಂತಿರುವ ವ್ಯಕ್ತಿಯ ಟ್ರ್ಯಾಕ್ ರೆಕಾರ್ಡ್ ಕೂಡಾ!

ಮಹಿಳೆ ನೀಡಿರುವ ದೂರಿನ ಆಧಾರದ ಮೇಲೆ ರವೀಂದ್ರನಾಥ್ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 354ರ ಅನ್ವಯ ಪ್ರಕರಣ ದಾಖಲಿಸಿದ್ದಾರೆ. (ಔಟರೇಜಿಂಗ್ ದಿ ಮಾಡೆಸ್ಟಿ ಆಫ್ ಎ ವುಮೆನ್) ಅಂದರೆ ಇದು ದೈಹಿಕ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣ. ಸರಳವಾಗಿ ಹೇಳಬೇಕೆಂದರೆ ಅಸಭ್ಯತನ. ಆಗ ಆರೋಪಿ ಸ್ಥಾನದಲ್ಲಿರುವ ವ್ಯಕ್ತಿ ಆರೋಪ ಮಾಡಿದವಳ ಮೈ ಮುಟ್ಟಿ ಅಸಭ್ಯತನ ಪ್ರದರ್ಶಿಸಬೇಕು. ಆದರೆ ದೂರು ನೀಡಿದ ಮಹಿಳೆ ತನ್ನ ಮೈ ಮುಟ್ಟಿದ್ದಾರೆ ಎಂದು ರವೀಂದ್ರನಾಥ್ ವಿರುದ್ಧ ಆರೋಪಿಸಿಲ್ಲ. ತೆಗೆದಿರುವುದು ಆಕ್ಷೇಪಾರ್ಹ ಭಾವಚಿತ್ರ. ಒಂದೋ ಇದಕ್ಕೆ ಮಾಹಿತಿ ತಂತ್ರಜ್ಞಾನ ಕಾಯಿದೆ ಅನ್ವಯ ಪ್ರಕರಣ ದಾಖಲಿಸಬೇಕು. ಇಲ್ಲವಾದರೆ ಸಾರ್ವಜನಿಕ ಕ್ಷೇತ್ರದಲ್ಲಿ ಅಸಭ್ಯವಾಗಿ ವರ್ತಿಸಿದ ವಿಧಿಯನ್ನು ಅನ್ವಯಿಸಬೇಕು. ಆದರೆ ಇದ್ಯಾವುದು ಆಗಿಲ್ಲ. ನೇರವಾಗಿ ಸೆಕ್ಷನ್ 354 ಹಾಕಲಾಗಿದೆ. ಇದಕ್ಕೆ ಕಾರಣ ಪ್ರೈಮಾಫೆಸಿ. ಏಕೆಂದರೆ ಪೊಲೀಸರು ವಶಪಡಿಸಿಕೊಂಡಿರುವ ರವೀಂದ್ರನಾಥ್ ಅವರ ಮೊಬೈಲ್‌ನಲ್ಲಿ ಮಹಿಳೆಯ ಎರಡು ಭಾವಚಿತ್ರವಿದೆ. ಅಲ್ಲಿಗೆ ರವೀಂದ್ರನಾಥ್ ವಿರುದ್ಧದ ಆರೋಪದಲ್ಲಿ ಮೇಲ್ನೋಟದ ಸತ್ಯಾಂಶವಿದೆ. ಆದರೆ ಈ ಮೇಲ್ನೋಟದ ಸತ್ಯವನ್ನು ಒಪ್ಪಿಕೊಳ್ಳುವುದಕ್ಕೆ ಘಟನೆ ನಂತರ ರವೀಂದ್ರನಾಥ್ ತೋರಿಸುತ್ತಿರುವ ವರ್ತನೆ (ಕಂಡಕ್ಟ್ ) ಮತ್ತು ಅವರ ಪೂರ್ವ ಚಾರಿತ್ರ್ಯ ಅಡ್ಡಿಯುಂಟು ಮಾಡುತ್ತಿದೆ. ಈ ಘಟನೆಯ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದಂತೆ, ರವೀಂದ್ರನಾಥ್ ತಮ್ಮ ವೃತ್ತಿಗೆ ರಾಜೀನಾಮೆ ನೀಡಲು ನಿರ್ಧರಿಸಿದರು. ತಾನು ಆರೋಪಿ ಸ್ಥಾನದಲ್ಲಿದ್ದೇನೆ ಎಂಬ ಕಾರಣಕ್ಕೆ ಇಲಾಖೆ ವಾಹನವನ್ನು ಬಳಸದೇ ಆಟೋದಲ್ಲಿ ಘಟನಾ ಸ್ಥಳಕ್ಕೆ ತೆರಳಿದರು. ನಂತರ ಅಲ್ಲಿಂದ ಹಿಂದಿನ ದಿನ ತಮ್ಮನ್ನು ಪೊಲೀಸರು ಕರೆದೊಯ್ದ ಠಾಣೆಗೆ ಬಂದು ನನ್ನನ್ನು ಬಂಧಿಸಿ ತನಿಖೆ ನಡೆಸಿ. ಬಂಧನ ಶಿಕ್ಷೆಯಲ್ಲ. ತನಿಖೆಯ ಒಂದು ಭಾಗ ಎಂದರು. ನನಗೆ ನ್ಯಾಯ ಸಿಗದಿದ್ದರೂ ಚಿಂತೆಯಿಲ್ಲ. ನೊಂದ ಮಹಿಳೆಗೆ ನ್ಯಾಯ ಸಿಗಲಿ. ಈ ಪ್ರಕರಣವನ್ನು ನ್ಯಾಯಾಲಯದ ಗಮನಕ್ಕೆ ತನ್ನಿ ಎಂದು ಮಾಧ್ಯಮದ ಎದುರೇ ಗೋಳಾಡಿದರು. ತನಿಖೆಗೆ ತನ್ನ ಹುದ್ದೆ ಅಡ್ಡಿಯಾಗಬಾರದೆಂಬ ಕಾರಣಕ್ಕೆ ಮಧ್ಯಾಹ್ನದ ಹೊತ್ತಿಗೆ ವೃತ್ತಿಗೆ ರಾಜೀನಾಮೆ ನೀಡಿ ಇನ್ನೊಬ್ಬ ಅಧಿಕಾರಿಯ ವಿರುದ್ಧ ಸಂಚಿನ ಆರೋಪ ಮಾಡಿದರು.

ಈ ಹಂತದಲ್ಲಿ ಮೊದಲು ಉಲ್ಲೇಖಿಸಿದ ‘ಆಫ್ ದಿ ರೆಕಾರ್ಡ್‌’ ಮಾಹಿತಿಯ ಎಳೆ ಮುಖ್ಯವಾಗುತ್ತದೆ. ಈ ಘಟನೆ ನಡೆದಿರುವುದು ಸೋಮವಾರ ಬೆಳಗ್ಗೆ 10.45ಕ್ಕೆ. ಕನ್ನಿಂಗ್ ಹ್ಯಾಂ ರಸ್ತೆಯ ಆಸ್ಪತ್ರೆಯಲ್ಲಿ ವೈದ್ಯ ಪರೀಕ್ಷೆಗೆ ಬಂದಿದ್ದ ರವೀಂದ್ರನಾಥ್ ಸಮೀಪದ ಕಾಫಿ ಶಾಪ್‌ಗೆ ಹೋಗಿದ್ದಾರೆ. ಈ ಹಿಂದೆ ಎಂಎಸ್‌ಐಎಲ್‌ನಲ್ಲಿ ಕರ್ತವ್ಯ
ನಿರ್ವಹಿಸುತ್ತಿದ್ದಾಗ ರವೀಂದ್ರನಾಥ್ ಇದೇ ಕಾಫಿ ಶಾಪ್‌ಗೆ ಆಗಾಗ ಹೋಗುತ್ತಿದ್ದರು. ಘಟನೆ ನಡೆದ ದಿನ ರವೀಂದ್ರನಾಥ್ ಎದುರಿಗೆ ಇಬ್ಬರು ಮಹಿಳೆಯರಿದ್ದರು. ಆಗ ರವೀಂದ್ರನಾಥ್ ಅವರ ಫೋಟೋ ತೆಗೆದಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಅವರು ಇಲ್ಲ ಎಂದಿದ್ದಾರೆ. ಆಗ ಶ್ರೀಧರ್ ಎನ್ನುವ ವ್ಯಕ್ತಿ ಮಧ್ಯಪ್ರವೇಶಿ ಆರೋಪಿಯ ಮೊಬೈಲ್ ಹಾಗೂ ಪರ್ಸ್ ಕಿತ್ತುಕೊಂಡಿದ್ದಾರೆ. ನಂತರ ಗಲಾಟೆ ನಡೆದು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಅಲ್ಲಿನ ಸಬ್‌ಇನ್‌ಸ್ಪೆಕ್ಟರ್ ರವೀಂದ್ರನಾಥ್ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ್ದಾರೆ. ನಾನು ಐಪಿಎಸ್ ಅಧಿಕಾರಿ ಎಂದು ಗುರುತಿನ ಪತ್ರ ತೋರಿಸಿದರೂ ಲಾಕಪ್‌ನಲ್ಲಿ ಕೂರಿಸಲಾಗಿದೆ. ಆಮೇಲೆ ಸತ್ಯ ಗೊತ್ತಾದ ನಂತರ ಪರಸ್ಪರ ಒಡಂಬಡಿಕೆ ನಡೆದಿದೆ. ಆದರೆ ರವೀಂದ್ರನಾಥ್ ವಿರುದ್ಧ ರಾತ್ರಿ ಹೊತ್ತಿಗೆ ಪ್ರಕರಣ ದಾಖಲಾಗಿದೆ. ಒಡಂಬಡಿಕೆ ಸಂದರ್ಭದಲ್ಲಿ ರವೀಂದ್ರನಾಥ್ ಎಡಿಜಿಪಿ ದರ್ಜೆ ಅಧಿಕಾರಿ ಎಂಬುದು ಬಹಿರಂಗವಾಗಿದೆ. ಆದರೆ ದೂರಿನಲ್ಲಿ ಅಪರಿಚಿತ ವ್ಯಕ್ತಿ ಎಂದಿದೆ. ಮೇಲಾಗಿ ದೂರು ಕೊಟ್ಟವರು ಮಾಜಿ ಪತ್ರಕರ್ತೆ. ಮರುದಿನ ಪತ್ರಿಕೆಯೊಂದರಲ್ಲಿ ಪ್ರಕಟವಾದ ಅವರ ದೂರು ಪ್ರತಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಯಿಂದ ತೊಂದರೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ. ಹಾಗಾದರೆ ದೂರಿನಲ್ಲಿ ಏಕೆ ಅಪರಿಚತ ವ್ಯಕ್ತಿ ಎಂದು ನಮೂದಿಸಿದರು? ಮೈ ಮುಟ್ಟಿಲ್ಲ ಎಂದಿರುವಾಗ ಪೊಲೀಸರು 354 ಹಾಗೂ 506 ಸೆಕ್ಷನ್ ಏಕೆ ಹಾಕಿದರು? ಈ ಪ್ರಕರಣದಲ್ಲಿ ಮಹಿಳೆಗೆ ಸಹಾಯ ಮಾಡಿದ ಶ್ರೀಧರ್ ಎಂಬ ವ್ಯಕ್ತಿ ನಂತರ ಏಕೆ ನಿಗೂಢವಾಗಿ ಮರೆಯಾದರು ಎಂಬ ಪ್ರಶ್ನೆ ಸಹಜ.

ಪೊಲೀಸ್ ಪರಿಭಾಷೆಯಲ್ಲೇ ಹೇಳುವುದಾದರೆ ಕಾನೂನು ಅದರದ್ದೇ ಕ್ರಮ ತೆಗೆದುಕೊಳ್ಳುತ್ತದೆ. ಸತ್ಯ ಬಹಿರಂಗವಾಗುತ್ತದೆ. ಆದರೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿ ಒಡಂಬಡಿಕೆಯಾದ ನಂತರ ರಾತ್ರಿ ದೂರು ದಾಖಲಾಗುವವರೆಗೆ ಏನೇನಾಯ್ತು ಎಂಬುದೂ ಬಹಿರಂಗವಾಗಬೇಕಲ್ಲವೇ? ರವೀಂದ್ರನಾಥ್ ಆರೋಪಿಸುವ ಸಂಚು ಇಲ್ಲಿಂದಲೇ ಆರಂಭವಾಗಿರಬಹುದಲ್ಲವೇ? ಈ ಎಲ್ಲ ಅನುಮಾನಗಳು ಸಹಜ. ಏಕೆಂದರೆ ಐಪಿಎಸ್ ವೃತ್ತಿ ಮಾತ್ಸರ್ಯಕ್ಕೆ ಘಟಾನುಘಟಿ ಅಧಿಕಾರಿಗಳೇ ಬಲಿಯಾಗಿದ್ದಾರೆ. ಅದೇನೆ ಇರಲಿ. ಈ ಪ್ರಕರಣದಲ್ಲೂ ಲಾ ವಿಲ್ ಟೇಕ್ ಇಟ್ಸ್ ಓನ್ ಕೋರ್ಸ್. ಅಲ್ಲಿಯವರೆಗೆ ಕಾಯೋಣ. – ರಾಘವೇಂದ್ರ ಭಟ್.

ಉಡುಪಿ: ಕೊಡವೂರು ಗ್ರಾಮದ ಮೂಡಬೆಟ್ಟು ಸಮೀಪದ ಕಂಗಣಬೆಟ್ಟು ಶ್ರೀ ನಾಹಬ್ರಹ್ಮಸಿರಿ ಮತ್ತು ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದಲ್ಲಿ ದೈವಸ್ಥಾನ ಸಮಿತಿಯ ಪ್ರಮುಖ ಮೂವರು ಭಾರೀ ಅವ್ಯವಹಾರ ನಡೆಸಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಭಕ್ತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಅಣ್ಣಪ್ಪ ಪಂಜುರ್ಲಿ ಭಕ್ತರ ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿ ಡಾ.ಎ.ಟಿ.ರೇಜು ಅವರನ್ನು ಭೇಟಿಯಾಗಿ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ. 800 ವರ್ಷಗಳ ಇತಿಹಾಸ ಇರುವ ದೈವಸ್ಥಾನದಲ್ಲಿ 2011 ರ ವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. 2011 ರ ಫೆಬ್ರವರಿಯಲ್ಲಿ ನಡೆದ ಬ್ರಹ್ಮಕಲಶದ ಸಂದರ್ಭದಲ್ಲಿ ಹೊಸದಾಗಿ ಸಮಿತಿಯೊಂದನ್ನು ಅಸ್ತಿತ್ವಕ್ಕೆ ತರಲಾಯಿತು. ಈ ಸಮಿತಿಯಲ್ಲಿ ಅಧ್ಯಕ್ಷರಾಗಿ ಡಾ.ಹರಿಪ್ರಸಾದ್ ಐತಾಳ್, ಕಾರ್ಯದರ್ಶಿಯಾಗಿ ದಿವಾಕರ ಶೆಟ್ಟಿ ತೋಟದಮನೆ ಹಾಗೂ ಕೋಶಾಧಿಕಾರಿಯಾಗಿ ಶ್ರೀಶ ಕೊಡವೂರು ಇವರುಗಳಿದ್ದು, ಈ ಸಮಿತಿಯ ನೇತೃತ್ವದಲ್ಲಿ ನಡೆದ ಹಗರಣಗಳಿಂದಾಗಿ ಭಕ್ತರ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಲಾರಂಭಿಸಿತು ಎಂದು ಮನವಿಯಲ್ಲಿ ದೂರಲಾಗಿದೆ.
ದೈವಕ್ಕೆ ಚಿನ್ನದ ಕವಚ ಹೊದಿಸುವುದಾಗಿ ಹೇಳಿ ಸಮಿತಿ ಭಕ್ತರಿಂದ 12 ಲಕ್ಷ ರು.ಗೂ ಮಿಕ್ಕಿ ಹಣ ಸಂಗ್ರಹಿಸಿದೆ. ಬಳಿಕ ಸ್ವರ್ಣ ಜ್ಯುವೆಲ್ಲರ್ಸ್ ನಿಂದ 2,27,361 ರು. ವೆಚ್ಚದಲ್ಲಿ ಚಿನ್ನದ ಕವಚವನ್ನು ಮಾಡಿಸಿ ಸಮರ್ಪಿಸುವ ಮೂಲಕ ವಂಚಿಸಲಾಗಿದೆ. ದೊಡ್ಡ ಮೊತ್ತದ ಹಣ ಧಾನ ಮಡಿದವರ ಹೆಸರುಗಳನ್ನು ಶಿಲೆಯಲ್ಲಿ ಬರೆಸಿ ದೈವಸ್ಥಾನದಲ್ಲಿ ತೂಗುಹಾಕಲಾಗಿದೆ. ಆದರೆ 500, 1000, 5000 ರು. ಇತ್ಯಾದಿಗಳನ್ನು ನೀಡಿದವರ ಲೆಕ್ಕ ಇಲ್ಲ, ಭಕ್ತರಿಗೆ ಕೊಟ್ಟಿಲ್ಲ. ಸಣ್ಣ ಮೊತ್ತದ ಹಣ ನೀಡಿದವರ ಸಂಖ್ಯೆಯೇ ಅಧಿಕ ಎಂದು ಒಕ್ಕೂಟ ಮನವಿಯಲ್ಲಿ ವಿವರಿಸಿದೆ.
2013 ರ ಫೆಬ್ರವರಿ 23 ರಂದು ದೈವಸ್ಥಾನದಲ್ಲಿ ವರ್ಷಾವಧಿ ಕೋಲ ನಡೆಯಿತು. ಈ ಸಮಯದಲ್ಲಿ ಶಿರೂರು ಮಠಾಧೀಶರಾದ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ಹರಕೆ ರೂಪದಲ್ಲಿ ವಿಜೃಂಭಣೆಯ ಮೆರವಣಿಗೆಯೊಂದಿಗೆ ಪಂಜುರ್ಲಿ ದೈವಕ್ಕೆ ಚಿನ್ನದ ಖಡ್ಗವನ್ನು ಸಮರ್ಪಿಸಿದರು. ಇದಾದ ಕೇವಲ ನಾಲ್ಕೇ ದಿನಗಳಲ್ಲಿ ಈ ಖಡ್ಗ ಚಿನ್ನದ್ದಲ್ಲವೆಂದು ಬಹಿರಂಗವಾಯಿತು. ಸತ್ಯ ಬಹಿರಂಗಕ್ಕೆ ಬಂದ ಬೆನ್ನಿಗೆ ಖಡ್ಗ ಕಾಣೆಯಾಯಿತು. ಸ್ವಾಮೀಜಿಗಳೇ ಇದನ್ನು
ದೈವಸ್ಥಾನದಿಂದ ಖಡ್ಗವನ್ನು ವಾಪಾಸು ಕೊಂಡೊಯ್ದರು. ಈ ಬಗ್ಗೆ ಜುಲೈ 4 ರಂದು ಮಲ್ಪೆ ಪೊಲೀಸ್ ಠಾಣೆಗೆ ಒಕ್ಕೂಟದ ವತಿಯಿಂದ ಮೂಡಬೆಟ್ಟು ಸಮೀಪದ ಕಂಬಳಕಟ್ಟ ನಿವಾಸಿ ಕೆ.ಜಗದೀಶ್ ಶೆಟ್ಟಿ ಎಂಬವರು ದೂರು ನೀಡಿದ್ದು, ಪೊಲೀಸರು ಮೊಕದ್ದಮೆ ದಾಖಲಿಸದೆ, ಕೇವಲ ರಶೀದಿ ನೀಡಿದ್ದಾರೆ ಎಂದು ಒಕ್ಕೂಟ ಮನವಿಯಲ್ಲಿ ಆರೋಪಿಸಿದೆ.
ಸಮಿತಿ ಕಾರ್ಯದರ್ಶಿ ದಿವಾಕರ ಶೆಟ್ಟಿ ಒಬ್ಬರು ಲ್ಯಾಂಡ್ ಮಾಫೀಯಾ ಆಗಿದ್ದು, ಇವರ ವಯುಕ್ತಿಕ ವ್ಯವಹಾರಗಳಿಗಾಗಿ ದೈವಸ್ಥಾನದ ಭಕ್ತರ ಹಣದಲ್ಲಿ ಕಚೇರಿ ಕಟ್ಟಡವನ್ನು ನಿರ್ಮಿಸಲಾಗಿದೆ. ಕಚೇರಿಗಾಗಿ ದುಬಾರಿ ಬೆಲೆಯ ಆಸನಗಳನ್ನು ಖರೀದಿಸಲಾಗಿದೆ. ಸಮಿತಿಯ ತಾಳಕ್ಕೆ ತಕ್ಕಂತೆ ಕುಣಿದ ಮತ್ತು ಕುಣಿಯುವ ಮೂಲಕ ಭಕ್ತರ ನಂಬಿಕೆಗೆ ಹಾಗೂ ದೈವಸ್ಥಾನಕ್ಕೆ ಕಳಂಕ ತಂದ ದೈವ ನರ್ತಕನಿಗೆ ಸಮಿತಿಯು ಭಕ್ತರ ಹಣದಲ್ಲಿ ಚಿನ್ನದ ಕಡಗ ನೀಡಿದೆ ಎಂದೂ ಒಕ್ಕೂಟ ಅಪಾದಿಸಿದೆ.
ದೈವಸ್ಥಾನದ ಚಿನ್ನಾಭರಣಗಳನ್ನು ಪರಿಶೀಲನೆ ಮಾಡಿಸಬೇಕು ಮತ್ತು ಅವ್ಯವಹಾರದ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿರುವ ಅಣ್ಣಪ್ಪ ಪಂಜುರ್ಲಿ ಭಕ್ತರ ಒಕ್ಕೂಟ, ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯ ಯಥಾ ಪ್ರತಿಗಳನ್ನು ರಾಜ್ಯದ ಗೃಹ ಸಚಿವರು, ಉಡುಪಿಯ ಶಾಸಕರು, ತಹಶಿಲ್ದಾರರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಿದೆ.

ಉಡುಪಿ: ತಮ್ಮ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ ಯಾವನೇ ಒಬ್ಬ ಅಭ್ಯರ್ಥಿಗೂ ಮತ ಹಾಕುವುದು ಮತದಾರನಿಗೆ ಇಷ್ಟ ಇಲ್ಲ ಎಂದಾದಲ್ಲಿ ಸೆಕ್ಷನ್ 49 (ಓ) ಪ್ರಕಾರ ಮತ ನಿರಾಕರಿಸಲು ಮತದಾರನಿಗೆ ಚುನಾವಣಾ ಆಯೋಗದ ಕಾನೂನಿನಲ್ಲಿ ಅವಕಾಶವಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಸಭಾಂಗಣದಲ್ಲಿ ಮೇ 3 ರಂದು ನಡೆಸಿದ
ಮಾಧ್ಯಮಗೋಷ್ಟಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಿಗೆ ಉತ್ತರಿಸುತ್ತಾ ಅವರು ಈ ಬಗ್ಗೆ ಮಾಹಿತಿ ನೀಡಿದರು.
ಮತದಾರ ಮತ ನಿರಾಕರಿಸುವ ಹಕ್ಕನ್ನು ಬಳಸಬೇಕಾದರೆ, ಮತದಾರ ಮತಗಟ್ಟೆಗೆ ಬರಬೇಕು, ಮತಗಟ್ಟೆಯ ದಾಖಲಾತಿಯಲ್ಲಿ ತನ್ನ ಹೆಸರನ್ನು ದಾಖಲಿಸಬೇಕು, ಕೈ ಉಗುರಿಗೆ ಶಾಯಿಯನ್ನೂ ಹಾಕಿಸಬೇಕು, ಇಷ್ಟಾದ ಬಳಿಕ ಮತಯಂತ್ರದ ಬಳಿಗೆ ಹೋಗದೆ, ಮತಗಟ್ಟೆ ಅಧಿಕಾರಿಯಲ್ಲಿ ಅಭ್ಯರ್ಥಿಗಳನ್ನು ತಿರಸ್ಕರಿಸಿ ಮತದಾನ ನಿರಾಕರಿಸುತ್ತಿರುವುದಾಗಿ ತಿಳಿಸಬೇಕು. ಆಗ ಮತಗಟ್ಟೆ ಅಧಿಕಾರಿ 17 (ಎ) ಫಾರಮ್ ನಲ್ಲಿ ಮತ ನಿರಾಕರಿಸುತ್ತಿರುವ ಮತದಾರನ ಹೆಸರು ದಾಖಲಿಸುತ್ತಾರೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಚುನಾವಣಾ ನೀತಿ ಸಂಹಿತೆ ಜ್ಯಾರಿಯಾದ ಬಳಿಕ ಇದುವರೆಗೆ ಅಬಕಾರಿ ಇಲಾಖೆ 83
ಪ್ರಕರಣಗಳನ್ನು ದಾಖಲಿಸಿದೆ. 24 ಮಂದಿಯನ್ನು ಈ ಸಂಬಂಧ ಬಂಧಿಸಲಾಗಿದೆ. 1,01,26,000 ಕೋಟಿ ರು. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಖಲಾದ ಒಟ್ಟು 83 ಪ್ರಕರಣಗಳಲ್ಲಿ 15 ಪ್ರಕರಣಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ್ದು ಎಂದು ಡಾ.ಎಂ.ಟಿ.ರೇಜು ವಿವರ ನೀಡಿದರು.
ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಬೋರಲಿಂಗಯ್ಯ ಎಂ.ಬಿ. ಅವರು ಮಾತನಾಡುತ್ತಾ, ಶಾಂತಿಯುತ ಚುನಾವಣೆಗಾಗಿ ಇದುವರೆಗೆ ಸುಮರು 200 ಮಂದಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ನ್ಯಾಯ ಸಮ್ಮತ ಚುನಾವಣೆಗಾಗಿ 114 ಮಂದಿ ಪೊಲೀಸ್ ಅಧಿಕಾರಿಗಳು, 796 ಮಂದಿ ಪೊಲೀಸ್ ಸಿಬ್ಬಂದಿಗಳು, 25 ಗೃಹ ರಕ್ಷಕ ದಳದ ಸಿಬ್ಬಂದಿಗಳು, ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆಯ 4 ತುಕಡಿಗಳು, 15 ಕೇಂದ್ರೀಯ ಅರೆಸೇನಾ ಪಡೆ (3 ಬಿಎಸ್ಎಫ್ ಮತ್ತು 3 ಸಿಐಎಸ್ಎಫ್, 2 ಸಿಆರ್ ಪಿಎಫ್, 2 ಎಸ್ಎಸ್ಬಿ, 5 ಅರ್ ಪಿಎಫ್), ಸಹಿತ ಒಟ್ಟು 2580 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 18, ಕುಂದಾಪುರ ಕ್ಷೇತ್ರದಲ್ಲಿ 8 ಮತ್ತು ಕಾರ್ಕಳದಲ್ಲಿ 26 ನಕ್ಸಲ್ ಬಾಧಿತ ಮತಗಟ್ಟೆಗಳಿವೆ. ಉಡುಪಿಯಲ್ಲಿ 28, ಕಾಪುವಿನಲ್ಲಿ 14, ಬೈಂದೂರಿನಲ್ಲಿ 26 ಮತ್ತು ಕುಂದಾಪುರದಲ್ಲಿ 31 ಅತೀ ಸೂಕ್ಷ್ಮ ಮತಗಟ್ಟೆಗಳಿವೆ. ಬೈಂದೂರಿನಲ್ಲಿ 86, ಕುಂದಾಪುರದಲ್ಲಿ 102, ಉಡುಪಿಯಲ್ಲಿ 112, ಕಾಪುವಿನಲ್ಲಿ 78 ಮತ್ತು ಕಾರ್ಕಳದಲ್ಲಿ 137 ಸೂಕ್ಷ್ಮ ಮತಗಟ್ಟೆಗಳಿವೆ. ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1038 ಮತಗಟ್ಟೆಗಳಿವೆ. ನಕ್ಸಲರಿಂದ ಇದುವರೆಗೆ ಚುನಾವಣೆಗೆ ಬೆದರಿಕೆ ಬಂದಿಲ್ಲ. ಆದರೆ, ನಕ್ಸಲ್ ಬಾಧಿತ ಮತಗಟ್ಟೆಗಳಿರುವ ಪ್ರದೇಶಗಳಲ್ಲಿ ವಿಶೇಷ ಭದ್ರತೆ ಒದಗಿಸಲಾಗಿದೆ ಎಂದು ಎಸ್ಪಿ ಬೋರಲಿಂಗಯ್ಯ ಹೇಳಿದರು.
ಅಪರ ಜಿಲ್ಲಾಧಿಕಾರಿ ಕುಮಾರ್ ಹಾಗೂ ವಾರ್ತಾಧಿಕಾರಿ ಜುಂಜಣ್ಣ ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.