Posts Tagged ‘koraga’

ಉಡುಪಿ: ಪಡುಬಿದ್ರಿ ಗ್ರಾಮದಲ್ಲಿ ಸ್ಥಾಪನೆಗೊಂಡ ಸುಜ್ಲಾನ್ ಕಂಪೆನಿಗಾಗಿ ಭೂಮಿ ಕಳೆದುಕೊಂಡು ನಿರ್ವಸಿತರಾದ ಮೂಲನಿವಾಸಿ ಕಡುಬಡ ಕೊರಗ ಕುಟುಂಬಗಳಿಗೆ ಪುನರ್ವಸತಿ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ), ಡಿವೈಎಫ್ಐ ಮತ್ತು ಕರ್ನಾಟಕ ಜನಪರ ವೇದಿಕೆ ಇವುಗಳ ಜಂಟೀ ಆಶ್ರಯದಲ್ಲಿ ಜುಲೈ 22ರಂದು ಪಡುಬಿದ್ರಿಯಲ್ಲಿ ಹಕ್ಕೊತ್ತಾಯ ಜಾಥಾ ಹಾಗೂ ಹಕ್ಕೊತ್ತಾಯ ಸಭೆ ನಡೆಯಿತು.

ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬೇಡಿ ಆರ್ಆರ್ ಕಾಲನಿಯಿಂದ ಹೊರಟ ಜಾಥಾ, ಪಡುಬಿದ್ರಿ ಗ್ರಾ.ಪಂ.ಕಚೇರಿ ಮುಂಭಾಗದಲ್ಲಿ ಸಮಾಪ್ತಿಗೊಂಡಿತು. ಜಾಥಾದುದ್ದಕ್ಕೂ ಜಾಥಾದಲ್ಲಿ ಪಾಲ್ಗೊಂಡವರು ಸರಕಾರ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಸುಜ್ಲಾನ್ ಕಂಪೆನಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜಾಥಾದ ಬಳಿಕ ಗ್ರಾ.ಪಂ.ಕಚೇರಿ ಎದುರು ಸಭೆ ನಡೆಸಲಾಯಿತು. ದಲಿತ ಚಿಂತಕರಾದ ಲೋಲಾಕ್ಷ, ದಸಂಸ ವಿಭಾಗೀಯ ಸಂಚಾಲಕರಾದ ಶೇಖರ ಹೆಜಮಾಡಿ, ಡಿವೈಎಫ್ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷರಾದ ಶ್ರೀರಾಮ ದಿವಾಣ, ದಲಿತ ಪರ ಹೋರಾಟಗಾರರಾದ ಲಿಂಗಪ್ಪ ನಂತೂರು ಮೊದಲಾದವರು ನಿರ್ವಸಿತ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡುವಂತೆ ಸರಕಾರವನ್ನು ಒತ್ತಾಯಿಸಿದರು. ಸಂತ್ರಸ್ತ ಕುಟುಂಬಗಳ ಪರವಾಗಿ ಎಂಎಸ್ಡಬ್ಲೂ ಪದವೀಧರೆ ಶ್ರೀಮತಿ ಮಾತನಾಡಿದರು.

ಭಾರತ ಅಭ್ಯುದಯ ಪ್ರತಿಷ್ಠಾನದ ಅಧ್ಯಕ್ಷರಾದ ಉಮಾನಾಥ ಪಡುಬಿದ್ರಿ, ದಸಂಸ ಮುಖಂಡರಾದ ಹರೀಶ್ ಕಂಚಿನಡ್ಕ, ಕೇಶವ ಸಿ.ಸಾಲ್ಯಾನ್, ಡಿವೈಎಫ್ಐ ಮುಖಂಡರಾದ ವರಪ್ರಸಾದ್ ಬಜಾಲ್, ವಿಠಲ ಮಲೆಕುಡಿಯ, ಜನಪರ ವೇದಿಕೆ ಮುಖಂಡರಾದ ಮೊಹಮ್ಮದ್ ಹಂದಟ್ಟು, ಹೇಮಂತ್ ಕುಂದರ್, ಶೇಖರ ಶೆಟ್ಟಿ, ಪ್ರಕಾಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಹಕ್ಕೊತ್ತಾಯ ಸಭೆಯ ಬಳಿಕ ಗ್ರಾ.ಪಂ.ಅಧ್ಯಕ್ಷರಾದ ವಿಜಯ ಸನಿಲ್ ಹಾಗೂ ಪಿಡಿಓ ಮಮತಾ ಶೆಟ್ಟಿ ಇವರ ಮೂಲಕ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಸುಜ್ಲಾನ್ ಕಂಪೆನಿಯು ಇದುವರೆಗೆ ನಡೆಸಿದ ಎಲ್ಲಾ ವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕು, ಸುಜ್ಲಾನ್ ವಶದಲ್ಲಿರುವ ಹೆಚ್ಚುವರಿ ಭೂಮಿಯನ್ನು ಸರಕಾರ ವಶಪಡಿಸಿಕೊಂಡು ನಿರ್ವಸಿತರಿಗೆ ಹಾಗೂ ಭೂರಹಿತರಿಗೆ ಹಂಚಬೇಕು, ಪಡುಬಿದ್ರಿ ಗ್ರಾಮದ ಸರ್ವೆ ನಂಬ್ರ 69/1 ರಲ್ಲಿರುವ ಭೂಮಿ ಪ್ರಸ್ತುತ ಕೆಐಡಿಬಿ ಸ್ವಾಧೀನದಲ್ಲಿದ್ದು, ಇದನ್ನು ಯಾವುದೇ ಕಾರಣಕ್ಕೂ ಸುಜ್ಲಾನ್ ಗೆ ನೀಡಬಾರದು, ಬದಲಾಗಿ ಇದನ್ನೂ ಸಹ ನಿರ್ವಸಿತರಿಗೆ ಹಾಗೂ ಭೂರಹಿತರಿಗೆ ವಿತರಿಸಬೇಕು, ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರನ್ನು ಸಂಪುಟದಿಂದ ಕೈಬಿಡಬೇಕು, ನಿರ್ವಸಿತ ಕೊರಗ ಕುಟುಂಬದಲ್ಲಿ ಮೂವರು ಪದವೀಧರ ವಿದ್ಯಾರ್ಥಿನಿಯರಿದ್ದು, ಇವರಿಗೆ ಸೂಕ್ತ ಉದ್ಯೋಗ ನೀಡಬೇಕು ಎಂಬ ಬೇಡಿಕೆಗಳನ್ನು ಸರಕಾರದ ಮುಂದೆ ಇರಿಸಲಾಗಿದೆ.

ಉಡುಪಿ: ಊಳಿಗಮಾನ್ಯ ಪದ್ಧತಿಯಡಿಯಡಿಯಲ್ಲಿ ಇಂದಿಗೂ ಕೊರಗ ಸಮುದಾಯ ಅನಾಗರಿಕ ಅಮಾನವೀಯತೆಗೆ ಒಳಗಾಗಿದ್ದಾರೆ. ಜಾತಿ ಪದ್ಧತಿಯಿಂದಾಗಿ ಅಸ್ಪೃಶ್ಯರಿಗೂ ಅಸ್ಪೃಶ್ಯರಾಗಿರುವ ಕೊರಗರಿಗೆ ಮಾನವಹಕ್ಕು ಸಹ ನಿರಾಕರಿಸಲಾಗುತ್ತಿದೆ. ಕೊರಗರನ್ನು ಮಾನವಹಕ್ಕು ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಅಸ್ಪೃಶ್ಯತೆ ಆಚರಿಸುವವರು ಅಸ್ಪೃಶ್ಯತೆ ಆಚರಿಸುವುದು ತಮ್ಮ ಹಕ್ಕು ಎಂದು ತಿಳಿದುಕೊಂಡಂತಿದೆ ಎಂದು ಮಂಗಳೂರು ವಿವಿಯ ಉಪನ್ಯಾಸಕ ದಿನಕರ ಕೆಂಜೂರು ಸಮಾಜ ವ್ಯವಸ್ಥೆಗೆ ನೇರವಾಗಿಯೇ ಕನ್ನಡಿ ಹಿಡಿದರು.
ಶಿರ್ವದ ಸಂತ ಮೇರಿ ಮಹಾವಿದ್ಯಾಲಯದಲ್ಲಿ ‘ಮಾನವಹಕ್ಕುಗಳ ದೃಷ್ಟಿಯಲ್ಲಿ ಭಾರತದಲ್ಲಿ ಪ್ರಜಾಪ್ರಭುತ್ವದ ಅವಕಾಶಗಳ ಕ್ರೋಢೀಕರಣ’ ಎಂಬ ವಿಷಯದ ಮೇಲೆ ಎರಡು ದಿನಗಳ ಕಾಲ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿ ಅವರು ಮಾತನಾಡುತ್ತಿದ್ದರು.
ಕೊರಗ ಮಹಿಳೆಯರಲ್ಲಿ ಅಭದ್ರತೆ ಮನೆ ಮಾಡಿದೆ. ಕೊರಗ ಯುವತಿಯರೂ ಅತ್ಯಾಚಾರಕ್ಕೆ ಒಳಗಾದರೂ ನ್ಯಾಯ ಸಿಗುತ್ತಿಲ್ಲ. ಕಿನ್ನಿಗೋಳಿ ಬಳಿ ಇತ್ತೀಚೆಗೆ ಮೇಲ್ವರ್ಗದವರು ಕೊರಗರನ್ನು ಪ್ರಚೋದಿಸಿ ಶೌಚದ ಗುಂಡಿಯಿಂದ ಮಲ ತೆಗೆಯಲು ಬಳಸಿಕೊಂಡಿದ್ದಾರೆ. ಆಗ ಶೌಚದ ಗುಂಡಿಗೆ ಬಿದ್ದು ಕೊರಗರೊಬ್ಬರು ಮೃತಪಟ್ಟಿದ್ದಾನೆ. ಬಳಿಕ ನೀರಿನ ಗುಂಡಿಗೆ ಬಿದ್ದು ಮೃತಪಟ್ಟಿದ್ದಾರೆಂದು ಹೇಳಿ ಪ್ರಕರಣ ಮುಚ್ಚಿಹಾಕಲಾಗಿದೆ. ಕೊಲ್ಲೂರಿನ ಶಾಲೆಯೊಂದಕ್ಕೆ ತನ್ನ ಮಗನನ್ನು ಕಂಡು ಮಾತಾಡಲು ಬಂದ ಕೊರಗ ಸಮುದಾಯದ ವ್ಯಕ್ತಿಗೆ ಕುಡಿದು ಬಂದಿದ್ದಾರೆ ಎಂದು ಶಿಕ್ಷಕರೊಬ್ಬರು ಮಗನ ಹಾಗೂ ಇತರ ವಿದ್ಯಾರ್ಥಿಗಳ ಸಮಕ್ಷಮವೇ ಹಲ್ಲೆ ನಡೆಸಿದ್ದಾರೆ. ನಿಷೇಧಿತ ಅಜಲು ವಿರೋಧಿಸಿದವರನ್ನು ಬಹಿಷ್ಕರಿಸಬೇಕೆಂದು ಕೆಲವೆಡೆ ಬ್ಯಾನರ್ ಅಳವಡಿಸಲಾಗಿದೆ. ಶಾಲೆಗಳಲ್ಲಿ ಕೊರಗರ ಮಕ್ಕಳನ್ನು ಕೊಳಕು ಮಕ್ಕಳೆಂದು ಹೀಯಾಳಿಸಲಾಗುತ್ತಿದೆ ಎಂದು ದಿನಕರ ಕೆಂಜೂರು ಹೇಳಿದರು.
1981 ರ ಜನಗಣತಿ ಪ್ರಕಾರ ಕೊರಗ ಸಮುದಾಯದ ಜನಸಂಖ್ಯೆ 25 ಸಾವಿರ. ಅದೀಗ 15 ಸಾವಿರಕ್ಕೆ ಕುಸಿದಿದೆ. 50 ರ ಪ್ರಾಯದಲ್ಲಿಯೇ ಮುದುಕಾಗುತ್ತಿದ್ದಾರೆ. ಜೊತೆಗೆ ಕ್ಷಯವೇ ಮುಂತಾದ ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ದಿನಕರ್ ತೀವ್ರ ಆತಂಕ ವ್ಯಕ್ತಪಡಿಸಿದರು.
ಡಾ.ಕೃಷ್ಣ ಹೊಂಬಾಳ್, ಡಾ.ಪಾರ್ವತಿ ಅಪ್ಪಯ್ಯ, ದೇವರಾಜ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಉಡುಪಿ: ಕೊರಗರ ಭೂಮಿ ಹಬ್ಬ – 2012 ಇತ್ತೀಚೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಲ್ಲೆಗದಲ್ಲಿ ಸಂಭ್ರಮದಿಂದ ನಡೆಯಿತು.
ಮುಖ್ಯ ರಸ್ತೆಯಲ್ಲಿ 4 ಕಿ.ಮೀ ಜಾಥಾ ನಡೆಸಿದ ಕೊರಗರು, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸಭಾ ಕಾರ್ಯಕ್ರಮವೂ ಜರುಗಿತು. ಕೊರಗ ಅಭಿವೃದ್ದಿ ಸಂಗಗಳ ಒಕ್ಕೂಟದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷರಾದ ಗೋಕುಲದಾಸ್ ಮಂಗಳೂರು, ಗೌರಿ ಕೆಂಜೂರು, ಸುಶೀಲಾ ನಾಡಾ, ಬಾಲರಾಜ್ ಮೊದಲಾದವರು ಭಾಗವಹಿಸಿದ್ದರು. ಚಿತ್ರಗಳು: ದಿನೇಶ್ ಕೆಂಜೂರು.

ಉಡುಪಿ: ಕೊರಗರ ಭೂಮಿ ಹಬ್ಬ – 2012 ಇತ್ತೀಚೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಲ್ಲೆಗದಲ್ಲಿ ಸಂಭ್ರಮದಿಂದ ನಡೆಯಿತು. ಮುಖ್ಯ ರಸ್ತೆಯಲ್ಲಿ 4 ಕಿ.ಮೀ ಜಾಥಾ ನಡೆಸಿದ ಕೊರಗರು, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸಭಾ ಕಾರ್ಯಕ್ರಮವೂ ಜರುಗಿತು.
ಕೊರಗ ಅಭಿವೃದ್ದಿ ಸಂಗಗಳ ಒಕ್ಕೂಟದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷರಾದ ಗೋಕುಲದಾಸ್ ಮಂಗಳೂರು, ಗೌರಿ ಕೆಂಜೂರು, ಸುಶೀಲಾ ನಾಡಾ, ಬಾಲರಾಜ್ ಮೊದಲಾದವರು ಭಾಗವಹಿಸಿದ್ದರು. ಚಿತ್ರಗಳು: ದಿನೇಶ್ ಕೆಂಜೂರು.

ಉಡುಪಿ: ಕಾರ್ಕಳ ತಾಲೂಕಿನ ಇನ್ನಾ ಗ್ರಾಮದಲ್ಲಿರುವ ಧೂಮಾವತಿ ದೈವಸ್ಥಾನದ ನೇಮೋತ್ಸವದಲ್ಲಿ ಕೊರಗ ಸಮುದಾಯದ ಘನತೆಗೆ ಕುಂದನ್ನುಂಟುಮಾಡುವ ಮತ್ತು ಸಮುದಾಯದ ಅಸ್ತಿತ್ವವನ್ನೇ ಬುಡಮೇಲು ಮಾಡುವ ನಿಷೇಧಿತ ಅಜಲು ಪದ್ದತಿಯನ್ನು ಆಚರಿಸಿದ್ದನ್ನು ಖಂಡಿಸಿ, ಸಂಬಂಧಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಜ.19 ರಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಯಿತು.
ನೇಮೋತ್ಸವ ನಡೆಯುವ ಮೊದಲೇ ಇನ್ನಾ ಗ್ರಾಮ ಪಂಚಾಯತ್ ನಲ್ಲಿ ತಹಶೀಲ್ದಾರ್ ರವರ ಅಧ್ಯಕ್ಷತೆಯಲ್ಲಿ, ಗ್ರಾ.ಪಂ.ಜನಪ್ರತಿನಿಧಿಗಳ ಸಮಕ್ಷಮ ಅಜಲು ಆಚರಿಸಬಾರದು ಎಂಬ ಬಗ್ಗೆ ಸಭೆ ನಡೆದಿತ್ತು. ಆದರೂ ಜ. 16,17 ಮತ್ತು 18 ರಂದು ಬಾಕಿಮಾರು ಗದ್ದೆಯಲ್ಲಿ ಕೊರಗರನ್ನು ಚಾಕರಿಗೆ ಉಪಯೋಗಿಸುವ ಮೂಲಕ ನಿಷೇಧಿತ ಅಜಲು ಆಚರಣೆಯನ್ನು ನಡೆಸಲಾಗಿದೆ ಎಂದು ಒಕ್ಕೂಟದ ನಾಯಕರು ತಿಳಿಸಿದ್ದಾರೆ.
ಅಜಲು ಆಚರಿಸಲಾಗುತ್ತಿರುವ ಬಗ್ಗೆ ತಹಶಿಲ್ದಾರರವರಿಗೆ ಕೊರಗ ಅಭಿವೃದ್ಧಿ ಸಂಘದ ಬೆಳ್ಮಣ್ಣು ಘಟಕವು ದೂರು ನೀಡಿದೆ. ದೂರು ನೀಡಿದ ಕೂಡಲೇ ತಹಶಿಲ್ದಾರ ಅವರು ಪಡುಬಿದ್ರಿ ಪೋಲೀಸ್ ಠಾಣೆಗೆ ಅಜಲು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಆದರೆ ಪಡುಬಿದ್ರಿ ಪೋಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅವರು ಅಜಲು ಆಚರಿಸುತ್ತಿದ್ದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಒಕ್ಕೂಟದ ಮುಖಂಡರು ಆರೋಪಿಸಿದ್ದಾರೆ.
ನಿಷೇಧಿತ ಅಜಲು ಆಚರಣೆಯನ್ನು ತಡೆಯದ ಪಡುಬಿದ್ರಿ ಪಿಎಸ್ಐ ಹಾಗೂ ಇನ್ನಾ ಗ್ರಾ.ಪಂ. ಪಿಡಿಓ ಇವರನ್ನು ಕೂಡಲೇ ಕರ್ತವ್ಯದಿಂದ ಅಮಾನತು ಮಾಡಬೇಕು ಎಂದು ಒಕ್ಕೂಟ ಒತ್ತಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಅಜಲು ಪದ್ಧತಿ ನಿಷೇಧ ಕಾಯಿದೆಯನ್ನು ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಜ್ಯಾರಿಗೊಳಿಸಬೇಕು ಎಂದು ಒಕ್ಕೂಟ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಆಗ್ರಹಿಸಿದೆ.
ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷೆ ಸುಶೀಲಾ ಕೊರಗ ನಾಡಾ, ಕಾರ್ಯದರ್ಶಿ ಸಂಜೀವ ಕೊಡಿಕಲ್, ಮಾಜಿ ರಾಜ್ಯಧ್ಯಕ್ಷರುಗಳಾದ ಪಿ.ಗೋಕುಲ್ ದಾಸ್, ಗೌರಿ ಕೆಂಜೂರು, ಜಿಲ್ಲಾಧ್ಯಕ್ಷ ಹರೀಶ್ ಕೊರಗ ಮಣಿಪಾಲ್, ಕಾರ್ಕಳ ತಾಲೂಕು ಸಮಿತಿ ಅಧ್ಯಕ್ಷೆ ಶಾರದ, ಶಶಿಕಲಾ ಸಚ್ಚರಿಪೇಟೆ, ಲೇಖಕ ಬಾಬು ಕೊರಗ ಪಾಂಗಾಳ, ಸಮಗ್ರ ಗ್ರಾಮೀಣ ಆಶ್ರಮದ ಕಾರ್ಯಕರ್ತ ಅಶೋಕ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ: ಕೊಕ್ಕರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುದಿ ಗ್ರಾಮದ ಬ್ರಹ್ಮ ಬೈದರ್ಕಳ ಗರಡಿಯ ಕಂಬಳದಲ್ಲಿ ಡಿ.13 ರಂದು ನಿಷೇಧಿತ ಅಜಲು ಪದ್ಧತಿಯನ್ನು ಆಚರಿಸಲಾಗಿದೆ. ನಿಷೇಧಿತ ಪದ್ದತಿಯನ್ನು ಆಚರಿಸಿದ ಗರಡಿಯ ಆಡಳಿತ ಮಂಡಳಿ, ಅಜಲು ಆಚರಣೆಗೆ ಅವಕಾಶ ಮಾಡಿಕೊಟ್ಟ ತಹಶೀಲ್ದಾರ್ ಹಾಗೂ ಬ್ರಹ್ಮಾವರ ಪೋಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅವರ ವಿರುದ್ಧ ಕಾಯ್ದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಡಿ. 14 ರಂದು ಕೊರಗ ಅಭವೃದ್ಧಿ ಸಂಘಗಳ ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿ, ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ಅವರಿಗೆ ಮನವಿ ಸಲ್ಲೀಸಿದರು.
ಸಬ್ ಇನ್ಸ್ ಪೆಕ್ಟರ್ ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ ಕೊರಗರು, ಮೊದಲಿಗೆ ಗರಡಿಯ ಆಡಳಿತ ಮಂಡಳಿಯವರು ಅಜಲು ಆಚಿರಿಸುವುದಿಲ್ಲವೆಂದು ತಹಶೀಲ್ದಾರ್ ಹಾಗೂ ಸಬ್ ಇನ್ಸ್ ಪೆಕ್ಟರ್ ಅವರ ಸಮಕ್ಷಮದಲ್ಲಿ ಲಿಖಿತವಾಗಿ ಬರೆದುಕೊಟ್ಟಿದ್ದಾರೆ. ಆದರೂ ಕಾಯ್ದೆಯನ್ನು ಉಲ್ಲಂಘಿಸಿ ಗರಡಿಯವರು ಕಂಬಳದಲ್ಲಿ ಅಜಲು ಪದ್ಧತಿಯನ್ನು ಆಚರಿಸಿದ್ದಾರೆ. ಆ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದು ಕೊರಗ ಸಮುದಾಯದ ಪ್ರಮುಖರು ಒತ್ತಾಯಿಸಿದ್ದಾರೆ.
ಗೌರಿ ಕೆಂಜೂರು, ದಿನಕರ ಕೆಂಜೂರು, ದಿನೇಶ್ ಕೆಂಜೂರು, ಹರೀಶ್ ಮಣಿಪಾಲ್ ಮೊದಲಾದವರು ಪ್ರತಿಭಟನಾ ಧರಣಿಯ ನೇತೃತ್ವವನ್ನು ವಹಿಸಿದ್ದರು.