Posts Tagged ‘naxal’

ಉಡುಪಿ: ಕೆಲವು ವರ್ಷಗಳ ಹಿಂದೆ ಕಾರ್ಕಳ ತಾಲೂಕಿನ ಸೀತಾನದಿ ಪರಿಸರ ಪ್ರದೇಶದಲ್ಲಿ ನಡೆದ ಶಿಕ್ಷಕ ಮತ್ತು ಬಡ್ಡಿ ವ್ಯಾಪಾರಿ ಭೋಜ ಶೆಟ್ಟಿ ಹಾಗೂ ಇನ್ನೋರ್ವರನ್ನು ಗುಂಡು ಹಾರಿಸಿ ಹತ್ಯಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ ಎಲ್ಲಾ ಶಂಕಿತ ನಕ್ಸಲ್ ಆರೋಪಿಗಳನ್ನೂ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಇಂದು ಆರೋಪಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.

ಚಂದ್ರಶೇಖರ ಗೋರಬಾಳ್ ಯಾನೆ ತಿಪ್ಪೇಶ್, ನಂದ ಕುಮಾರ್, ದೇವೇಂದ್ರಪ್ಪ ಯಾನೆ ವಿಷ್ಣು ಯಾನೆ ದೇವಣ್ಣ ಹಾಗೂ ಆಶಾ ಯಾನೆ ಸುಧಾ ಯಾನೆ ಚಂದ್ರಾ ಯಾನೆ ಇಂದಿರಾ ಯಾನೆ ನಳಿನಿ ಯಾನೆ ಸಿಂಧು ಯಾನೆ ನಂದಿನಿ ಯಾನೆ ಪವಿತ್ರಾ ಆರೋಪಮುಕ್ತರಾದ ಶಂಕಿತ ನಕ್ಸಲರಾಗಿದ್ದಾರೆ.

2008 ರ ಮೇ 15 ರಂದು ಕಾರ್ಕಳ ತಾಲೂಕಿನ ಹೆಬ್ರಿ ಪೋಲೀಸ್ ಠಾಣಾ ವ್ಯಾಪ್ತಿಯ ನಾಡ್ಪಾಲು ಗ್ರಾಮದ ಸೀತಾನದಿ ಬಳಿಯ ಬಾಳುಬ್ಬೆ ನಿವಾಸಿ, ಸ್ಥಳೀಯ ಶಾಲಾ ಶಿಕ್ಷಕ ಮತ್ತು ಬಡ್ಡಿ ವ್ಯಾಪಾರಿ ಭೋಜ ಶೆಟ್ಟಿ ಹಾಗೂ ಇನ್ನೋರ್ವರನ್ನು ಗುಂಡು ಹಾರಿಸಿ ಹತ್ಯೆಗೈದ ಆರೋಪ ದೇವೇಂದ್ರಪ್ಪ, ನಂದ ಕುಮಾರ್, ಚಂದ್ರಶೇಖರ ಗೋರಬಾಳ್ ಹಾಗೂ ಆಶಾ ಇವರ ಮೇಲಿತ್ತು.

2003 ರ ನವೆಂಬರ್ ನಲ್ಲಿ ಈದು ರಾಮಪ್ಪ ಪೂಜಾರಿ ಎಂಬವರ ಮನೆಯಲ್ಲಿ ನಡೆದ ಪೋಲೀಸ್ ಕಾರ್ಯಾಚರಣೆಯಲ್ಲಿ ಪೊಲೀಸರು ನಕ್ಷಲ್ ನಾಯಕಿಯರಾದ ಹಾಜಿಮಾ ಹಾಗೂ ಪಾರ್ವತಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. ಯಶೋದಾ ಅವರನ್ನು ಗುಂಡಿನ ಗಾಯಗಳೊಂದಿಗೆ ಸೆರೆ ಹಿಡಿದಿದ್ದರು. ಈ ಸಂದರ್ಭದಲ್ಲಿ ಓರ್ವ ಯುವಕ ಓದಿ ಪರಾರಿಯಾಗಿದ್ದನು. ಇವರಲ್ಲಿ ಯಶೋದಾ ನ್ಯಾಯಾಲಯ ವಿಚಾರಣೆ ಎದುರಿಸಿ ಇದೀಗ ದೋಷಮುಕ್ತಿಗೊಂದಿದ್ದಾಳೆ. ಅಂದು ಓಡಿ ಪರಾರಿಯಾದ ಯುವಕನನ್ನು ವಿಷ್ಣು ಎಂದು ಗುರುತಿಸಲಾಗಿತ್ತು. ಬಳಿಕ ಪೋಲೀಸ್ ಬಂಧನಕ್ಕೆ ಒಳಗಾದ ದೇವೇಂದ್ರಪ್ಪ ಅವರೇ ವಿಷ್ಣು ಎಂದು ಗುರುತಿಸಲಾಗಿತ್ತು.

ಭೋಜ ಶೆಟ್ಟಿ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪರವಾಗಿ ಉಡುಪಿಯ ಹಿರಿಯ ಮತ್ತು ಪ್ರಸಿದ್ಧ ವಕೀಲರಾದ ಎಂ.ಶಾಂತಾರಾಮ ಶೆಟ್ಟಿ ವಾದಿಸಿದ್ದರು.

ಇಂದು ಖುಲಾಸೆಗೊಂಡವರಲ್ಲಿ ಆಶಾ ಅವರು ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು, ಮುಖ್ಯ ವಾಹಿನಿಯಲ್ಲಿ ಸಹಜ ಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ಮೈಸೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಂದ್ರಶೇಖರ ಗೋರಬಾಳ್ ಅವರ ಮೇಲೆ ಬೇರೆ ಯಾವುದೇ ಪ್ರಕರಣವೂ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇಲ್ಲದೇ ಇರುವುದರಿಂದ ಇನ್ನೋಂದೆರಡು ದಿನಗೋಳಗೆ ನ್ಯಾಯಾಂಗ ಬಂಧನದಿಂದ ಬಿಡುಗಡೆಗೊಳ್ಳಲಿದ್ದಾರೆ. ನಂದ ಕುಮಾರ್ ಹಾಗೂ ದೇವೇಂದ್ರಪ್ಪ ಇವರ ವಿರುದ್ಧ ಇನ್ನೂ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ, ಇವರ ನ್ಯಾಯಾಂಗ ಬಂಧನ ಮುಂದುವರಿಯಲಿದೆ.

ಉಡುಪಿ: ಶೃಂಗೇರಿ ಸಮೀಪದ ಮೆಣಸಿನಹಾಡ್ಯದ ಅತ್ಯಡ್ಕದಲ್ಲಿ ನಕ್ಸಲ್ ನಿಗ್ರಹ ದಳ (ಎಎನ್ಎಫ್)ದ ಪೊಲೀಸರು, ಶಂಕಿತ ನಕ್ಸಲೀಯ ಯುವಕ ಹಾಗೂ ಮಹಿಳೆಯೊಬ್ಬರ ಸಹಿತ ನಾಲ್ವರು ಬಡ ಆದಿವಾಸಿಗಳನ್ನು ನಿರ್ದಾಕ್ಷಿಣ್ಯವಾಗಿ ಗುಂಡಿನ ಸುರಿಮಳೆ ಸುರಿಸಿ ಅತ್ಯಂತ ಅಮಾನುಷವಾಗಿ ಹತ್ಯಾಕಾಂಡ ನಡೆಸಿದ ಘಟನೆಗೆ ಜುಲೈ 10ಕ್ಕೆ ಏಳು ವರ್ಷವಾಗಿದೆ.

ಶಂಕಿತ ನಕ್ಸಲೀಯ ಚೆನ್ನಪ್ಪ ಯಾನೆ ಗೌತಮ್, ಬಡ ಆದಿವಾಸಿ ಕುಟುಂಬದ ದಂಪತಿಗಳಾದ ರಾಮೇ ಗೌಡ್ಲು-ಕಾವೇರಿ, ಪ್ರಜಾತಾಂತ್ರಿಕ ಆದಿವಾಸಿ ಹೋರಾಟಗಾರರಾದ ಪರಮೇಶ್ವರ್ ಹಾಗೂ ಸುಂದರೇಶ್ ಎಂಬವರು 2007ರ ಜುಲೈ 10ರಂದು ನಸುಕಿನ ಸಮಯ ಎಎನ್ಎಫ್ ಸಿಬ್ಬಂದಿಗಳು ನಡೆಸಿದ ಅಮಾನವೀಯ ಕಾಯಾಚರಣೆಗೆ ಬಲಿಯಾದವರು.

ನಕ್ಸಲ್ ಕಾರ್ಯಕರ್ತರು ತಾವು ಸಕ್ರಿಯವಾಗಿರುವ ಪ್ರದೇಶಗಳಲ್ಲಿನ ಬಡವರ ಮನೆಗಳಲ್ಲಿ ರಾತ್ರಿ ಹೊತ್ತು ಉಳಕೊಳ್ಳುವುದು, ಊಟ-ತಿಂಡಿ ಕೇಳಿ ತಿನ್ನುವುದು ಅಥವಾ ತಾವು ತಂಗಿರುವ ಸ್ಥಳಗಳಿಗೆ ಒಯ್ಯುವುದು ಇತ್ಯಾದಿಗಳೆಲ್ಲವೂ ಸಾಮಾನ್ಯ. ಉಳಿದವರ ದುರದೃಷ್ಟವೋ ಏನೋ, 2007ರ ಜುಲೈ 9ರಂದು ರಾತ್ರಿ ನಕ್ಸಲ್ ಕಾರ್ಯಕರ್ತರಾದ ಚೆನ್ನಪ್ಪ ಯಾನೆ ಗೌತಮ್ ಮೆಣಸಿನಹಾಡ್ಯದ ಅತ್ಯಡ್ಕ ಎಂಬಲ್ಲಿರುವ ರಾಮೇಗೌಡ್ಲು-ಕಾವೇರಿ ದಂಪತಿಗಳ ಮನೆಯಲ್ಲಿ ಉಳಕೊಂಡಿದ್ದರು. ಹೀಗೆ ನಕ್ಸಲ್ ಗೌತಮ್ ಉಳಕೊಂಡ ಮನೆ ಯಲ್ಲಿ ಇದ್ದವರು ಎಂಬ ಕಾರಣಕ್ಕೆ ಉಳಿದ ನಾಲ್ವರು ಅಮಾಯಕರು ಎಎನ್ಎಫ್ ಸಿಬ್ಬಂದಿಗಳ ಗುಂಡಿನ ದಾಳಿಗೆ ತುತ್ತಾಗಿಬೇಕಾಗಿ ಬಂದಿತ್ತು.

ಹತ್ಯೆಗೀಡಾದ ಪರಮೇಶ್ವರ್ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಒಕ್ಕೂಟದ ಕಾರ್ಯದರ್ಶಿಯಾಗಿದ್ದರು. ಧಾರಾವಾಹಿಯಲ್ಲೂ ನಟಿಸಿದ್ದು, ಸಾರ್ವಜನಿಕವಾಗಿ ಪಾರದರ್ಶಕ ಜೀವನ ನಡೆಸಿದವರಾಗಿದ್ದರು. ಪರಮೇಶ್ವರ್ ಜೊತೆಗೆ ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದ ಸುಂದರೇಶ್, ತೋಟಕ್ಕೆ ಔಷಧ ಬಿಡುವ ಕೆಲಸಕ್ಕಾಗಿ ರಾಮೇಗೌಡ್ಲು ಮನೆಗೆ ಬಂದವರಾಗಿದ್ದರು.

ಹಿಂದಿನ ದಿನ ರಾತ್ರಿ ನಕ್ಸಲ್ ಗೌತಮ್ ರಾಮೇಗೌಡ್ಲು ಮನೆಗೆ ಬಂದು ಉಳಕೊಂಡಿರುವ ಬಗ್ಗೆ ಎಎನ್ಎಫ್ಗೆ ಖಚಿತ ಮಾಹಿತಿ ಇತ್ತು. ಜುಲೈ 10ರಂದು ನಸುಕಿನ 5ರ ಸುಮಾರಿಗೆ ಎಎನ್ಎಫ್ ಸಿಬ್ಬಂದಿಗಳು ಮನೆಯನ್ನು ಸುತ್ತುವರಿದಿದ್ದಾರೆ. ಕೆಲವು ಮಂದಿ ಸಿಬ್ಬಂದಿಗಳು ಮನೆಯಂಗಳಕ್ಕೆ ಕಾಲಿರಿಸಿದ್ದಾರೆ. ಅಂಗಳಕ್ಕೆ ಕಾಲಿರಿಸಿದ ಸಿಬ್ಬಂದಿ ಮೊದಲಿಗೆ ಅಂಗಳದಲ್ಲಿ ನಿಂತುಕೊಂಡಿದ್ದ ಪರಮೇಶ್ವರ್ ಜೊತೆ ಮಾತಿಗಿಳಿದಿದ್ದಾರೆ. ಬಳಿಕ ಮನೆಯ ಹಿಂಬದಿಗೆ ಹೋಗಿ ಅಲ್ಲಿ ಹಲ್ಲುಜ್ಜುತ್ತಿದ್ದ ಗೌತಮ್ ಅವರನ್ನು ಗುಂಡಿಟ್ಟು ಕೊಂದಿದ್ದಾರೆ. ನಂತರ ಕ್ರಮವಾಗಿ ಮುಖಾಮುಖಿ ಮಾತಾಡುತ್ತಲೇ ಬಹಳ ಹತ್ತಿರದಿಂದಲೇ ಪರಮೇಶ್ವರ್, ಸುಂದರೇಶ್, ರಾಮೇಗೌಡ್ಲು ಹಾಗೂ ಕಾವೇರಿ ಇವರನ್ನು ಗುಂಡಿಟ್ಟು ಹತ್ಯೆಗೈದಿದ್ದಾರೆ. ಈ ನಡುವೆ ರಾಮೇಗೌಡ್ಲು-ಕಾವೇರಿ ದಂಪತಿಗಳ ಪುತ್ರ ಪ್ರಶಾಂತ್ ಭಯದಿಂದ ಓಡಿಹೋಗಿ ತಪ್ಪಿಸಿಕೊಂಡು ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ.

ಮನೆಯಲ್ಲಿದ್ದ ಐವರನ್ನು ಗುಂಡಿಟ್ಟು ಕೊಂದ ಬಳಿಕವೂ ಎಎನ್ಎಫ್ ಪೊಲೀಸರು ಎನ್ಕೌಂಟರ್ ಚಿತ್ರಣ ಸೃಷ್ಟಿಸಲು ಮಧ್ಯಾಹ್ನದವರೆಗೂ ಇಡೀ ಮನೆಗೇನೇ ಗುಂಡಿನ ಸುರಿಮಳೆ ಸುರಿಸಿ ಧ್ವಂಸಗೊಳಿಸುವ ಪ್ರಕ್ರಿಯೆ ನಡೆಸಿದ್ದಾರೆ. ಈ ಮಧ್ಯೆ ಊರವರು ನೂರಾರು ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿ ಎಎನ್ಎಫ್ ಕೃತ್ಯಕ್ಕೆ ಭಾರೀ ಪ್ರತಿಭಟನೆ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.

ಮೆಣಸಿನಹಾಡ್ಯದ ಅತ್ಯಡ್ಕದಲ್ಲಿ ನಡೆದ ಈ ಹತ್ಯಾಕಾಂಡದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಮಾನವಹಕ್ಕು, ಜನಪರ ಹೋರಾಟಗಾರರು ಹಾಗೂ ಸಂಘಟನೆಗಳು ಅಂದಿನ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದರೂ, ಸರಕಾರ ಮಾತ್ರ ಯಾವುದೇ ರೀತಿಯ ತನಿಖೆಯನ್ನೂ ನಡೆಸದೆ ಘಟನೆಯನ್ನು ನಿರ್ಲಕ್ಷಿಸಿತ್ತು. ವರದಿ: ಶ್ರೀರಾಮ ದಿವಾಣ.

# ನಮ್ಮ ನಾಡಿನ ಬಹುತೇಕ ಸಮಸ್ಯೆಗಳು ಮತ್ತು ಗೊಂದಲಗಳಿಗೆ ಸಂಕುಚಿತ ದೃಷ್ಠಿಕೋನ, ಧ್ವೇಷ ಮನೋಭಾವ, ಸಂವಿಧಾನ ಮತ್ತು ಕಾನೂನಿನ ಮೇಲಿನ ತಿಳುವಳಿಕೆಯ ಕೊರತೆ ಇತ್ಯಾದಿಗಳೇ ಮೂಲ ಕಾರಣ. ಹತ್ತಾರು ಮತ-ಪಂಥಗಳು, ನೂರಾರು ಪಕ್ಷಗಳು, ಸಾವಿರಾರು ಜಾತಿಗಳು, ಲಕ್ಷಾಂತರ ಗುಂಪುಗಳು, ಅನೇಕಾನೇಕ ವಿಚಾರಧಾರೆಗಳು ಇಲ್ಲಿವೆ. ಸಮಸ್ಯೆ ಇರುವುದು ಇವುಗಳ ಅಸ್ತಿತ್ವದಲ್ಲಿ ಅಲ್ಲ. ಇವುಗಳನ್ನು ಉಳಿಸಲು ಮತ್ತು ಬೆಳೆಸಲು ಇವುಗಳ
ನಾಯಕರೆನ್ನಿಸಿಕೊಂಡವರು ತುಳಿಯುತ್ತಿರುವ ಹಾದಿಯಲ್ಲಿಯೇ ಸಮಸ್ಯೆ
ಸೃಷ್ಟಿಯಾಗುತ್ತಿರುವುದು. ಮುಗ್ದ, ಅಮಾಯಕ ಕಾರ್ಯಕರ್ತರು ತಮ್ಮ ನಾಯಕರ ಮಾತೇ ಅಂತಿಮವೆಂದು ತಿಳಿದುಕೊಂಡು, ಯಾವುದನ್ನೂ ಪ್ರಶ್ನಿಸದೆ ತಮ್ಮದು ಅಧರ್ಮದ ವಿರುದ್ಧದ ಧರ್ಮಯುದ್ಧವೆಂದು ತಿಳಿದುಕೊಂಡು ಅಜ್ಞಾನಾಂಧಕಾರದಲ್ಲೇ ಬಲಿಪಶುಗಳಾಗುವುದು, ಅಪರಾಧಿಗಳಾಗುವುದು. ಇವರನ್ನು ಬಳಿಕ ಇವರಿವರ ಸಂಘಟನೆಗಳು ವೀರ ಯೋಧನೆಂದೂ, ಹುತಾತ್ಮನೆಂದೂ ಬಿಂಬಿಸುವುದೇ ಸಮಸ್ಯೆಯ ಆಳವನ್ನು ಹೆಚ್ಚಿಸುವುದು.

ದೌರ್ಜನ್ಯಕ್ಕೊಳಗಾದವರು ಮುಸ್ಲೀಮರಾದರೆ ಮಾತ್ರ ಮುಸ್ಲೀಮರು ಬೀದಿಗಿಳಿಯುವುದು, ಅನ್ಯಾಯಕ್ಕೊಳಗಾದವರು ಕ್ರೈಸ್ತರಾದರೆ ಮಾತ್ರ ಕ್ರೈಸ್ತರು ಬೀದಿಗಿಳಿಯುವುದು, ನೊಂದವರು ಸಂಘ ಪರಿವಾರಕ್ಕೆ ಸೇರಿದ ಹಿಂದೂಗಳಾದರೆ ಅಥವಾ ದೌರ್ಜನ್ಯ ನಡೆಸಿದವರು ಮುಸ್ಲೀಮರೋ, ಕ್ರೈಸ್ತರೋ ಆದರೆ ಮಾತ್ರ ಹಿಂದುತ್ವದ ರಕ್ಷಣೆಯ ಹೆಸರಲ್ಲಿ ಸಂಘ ಪರಿವಾರ
ಬೀದಿಗಿಳಿಯುವುದು ನಡೆಯುತ್ತಿದೆ. ಬಿಲ್ಲವರಿಗೆ ಅನ್ಯಾಯವಾದರೆ ಬಿಲ್ಲವರು, ಬಂಟರಿಗೆ ಅನ್ಯಾಯವಾದರೆ ಬಂಟರು, ಮೊಗವೀರರಿಗೆ ಅನ್ಯಾಯವಾದರೆ ಮೋಗವೀರರು, ಬ್ರಾಹ್ಮಣರಿಗೆ ಅನ್ಯಾಯವಾದರೆ ಬ್ರಾಹ್ಮಣರು, ಅಲ್ಪಸಂಖ್ಯಾತರಿಗೆ ಅನ್ಯಾಯವಾದರೆ ಅಥವಾ ಸಂಘ ಪರಿವಾರಕ್ಕೆ ಸೇರಿದವರಿಂದ ಮಾತ್ರ ಯಾರಿಗಾದರು ಅನ್ಯಾಯವಾದರೆ, ಆಗ ಮಾತ್ರ ಕೋಮುವಾದ ವಿರೋಧಿ ಪ್ರಗತಿಪರರು ಬೀದಿಗಿಳಿಯುವುದನ್ನು ನಾವಿಲ್ಲಿ ನೋಡಬಹುದು.

ಇದೇ ಜನರು, ಸಂಘಟನೆಗಳು ತಮ್ಮವರಿಂದಲೇ ಯಾರಿಗಾದರು ಅನ್ಯಾಯವಾದಾಗ ತಮ್ಮವರ ವಿರುದ್ಧ ಬೀದಿಗಿಳಿದು ಖಂಡಿಸಿದ ಉದಾಹರಣೆ ಇಲ್ಲವೆನ್ನಬಹುದು. ಇವುಗಳೆಲ್ಲದಲ್ಲರ ನಡುವೆ ಉರಿಯುವ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವ ಭ್ರಷ್ಟ ಮತ್ತು ದುಷ್ಟ ರಾಜಕೀಯ ಪಕ್ಷಗಳ ರಾಜಕಾರಣಿಗಳು, ಜನಪ್ರತಿನಿಧಿಗಳು ಹಾಗೂ ಗಾಳಿ ಬೀಸಿದ ಕಡೆಗೆ, ಲಾಭವಿದ್ದ ವಾಲುವ ಬೇಜವಾಬ್ದಾರಿ ಸರಕಾರಿ ಅಧಿಕಾರಿಗಳು, ನೌಕರರು. ಇವರೆಲ್ಲರಿಂದಾಗಿ ನಾಡು ನರಕದ ಕಡೆಗೆ ಹೆಜ್ಜೆ ಹಾಕುವಂತಾಗಿದೆ.

ಶೃಂಗೇರಿ ಸಮೀಪದ ತನಿಕೋಡು ಚೆಕ್ ಪೋಸ್ಟ್ ನಲ್ಲಿ 19.04.2014ರಂದು ಕೊಲೆಯಾದವನು ನಮ್ಮ ನಿಮ್ಮಂತೆಯೇ ಇರುವ ಒಬ್ಬ ಮನುಷ್ಯ. ಒಬ್ಬ ಮನುಷ್ಯನನ್ನು ಕೊಲ್ಲಲು ಇನ್ನೊಬ್ಬ ಮನುಷ್ಯನಿಗೆ ಅಧಿಕಾರವಿಲ್ಲ. ಈ ಮಾತು, ಕಾನೂನು ತನಿಕೋಡು ಪ್ರಕರಣಕ್ಕೆ ಮಾತ್ರ ಸೀಮಿತವೂ ಅಲ್ಲ. ಕೊಲೆ ಮಾಡಿದವನು ಆರೋಪಿ, ಅಷ್ಟೆ. ಕೊಲೆಯಾದವನ ಮತ್ತು ಕೊಲೆ ಮಾಡಿದವನ ಜಾತಿ, ಮತ, ಪಕ್ಷ, ಹುದ್ದೆಗಳನ್ನು ಇಲ್ಲಿ ನೋಡುವಂತೆಯೇ ಇಲ್ಲ, ನೋಡಲೇಬಾರದು.

ತನಿಕೋಡಿನಲ್ಲಿ ಕೊಲೆಯಾದವನು ಹೆಸರೇ ಸೂಚಿಸುವಂತೆ ಮುಸ್ಲೀಮ್. ಯಾವ್ಯಾವುದೋ ಕಾರಣಗಳನ್ನೇ ನೆಪ ಮಾಡಿಕೊಂಡು ಮುಸ್ಲೀಮರನ್ನೇ ಗುರಿ ಇರಿಸಿಕೊಂಡು ಸಂಘ ಪರಿವಾರದ ಕಾರ್ಯಕರ್ತರು ಮುಸ್ಲೀಮರ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಇಲ್ಲಿ ಹೊಸದೇನೂ ಅಲ್ಲ. ಸಹಜವಾಗಿಯೇ ತಮ್ಮವರ ರಕ್ಷಣೆಗಾಗಿ, ಸಂಘ ಪರಿವಾರವನ್ನು ವಿರೋಧಿಸಲಿಕ್ಕಾಗಿಯೇ ಮುಸ್ಲೀಮರು ಸಂಘಟಿತರಾಗಿದ್ದಾರೆ. ಸಂಘಟಿತರಾದ ಬಳಿಕ ಸುಮ್ಮನಿರಲು ಸಾಧ್ಯವೇ ? ಹಾಗಾಗಿಯೇ ಬೇಡಿಕೆ ಮುಂದಿಟ್ಟು ಪ್ರತಿಭಟನೆಗಳು ಆರಂಭಗೊಂಡಿವೆ.

ಕೊಲೆಯಾದವನು ಮುಸ್ಲೀಮ್, ಮೇಲಿಂದ ಆತ ದನಕಳ್ಳ. ಕೊಲೆ ಮಾಡಿದವನು ನವೀನ್. ಒಬ್ಬ ಹಿಂದೂ. ಅದರಲ್ಲೂ ಸಂಘ ಪರಿವಾರದ ಹಿತೈಷಿ. ಸಂಘ ಪರಿವಾರಕ್ಕೆ ಇದಕ್ಕಿಂಥ ಬೇರೇನೂ ಬೇಕಾಗಿಲ್ಲ. ಇಷ್ಟೇ ಸಾಕಿತ್ತು. ಮುಸ್ಲೀಮ್ ಧ್ವೇಷವನ್ನೇ ಉಸಿರಾಡುವ ಇವರ ಪ್ರಕಾರ ಇಂದು ದನಕಳ್ಳನನ್ನು ಕೊಲ್ಲಬಹುದು. ಈ ವಾದ ಇದೇ ರೀತಿ ಮುಂದುವರಿಯಬಿಟ್ಟರೆ, ನಾಳೆ ಹಿಂದೂ ಯುವತಿಯೊಂದಿಗೆ ಬಸ್ ನಿಲ್ದಾಣದಲ್ಲಿ ಮಾತನಾಡುತ್ತಾ ನಿಂತದ್ದಕ್ಕೂ ಆತ ಮುಸ್ಲೀಮನಾದರೆ ಕೊಲ್ಲಬಹುದೆಂಬ ಪರಿಸ್ಥಿತಿ ಸೃಷ್ಟಿಮಾಡಿಬಿಡುತ್ತದೆ. ಇವರ ಪ್ರಕಾರ, ಮುಸ್ಲೀಮರು ದೇಶದ್ರೋಹಿಗಳು, ಹಾಗಾಗಿ ಮುಸ್ಲೀಮರ ಪರ ಹೋರಾಟಕ್ಕಿಳಿದವರು ಮುಸ್ಲೀಮರಿಗೆ ಹುಟ್ಟಿದವರು. ಹಾಗಾಗಿ ಇವರೂ ಸಹ ದೇಶದ್ರೋಹಿಗಳೇ. ಹಾಗಾಗಿ ಇವರನ್ನು ಕೂಡಾ ಕೊಲ್ಲಬಹುದೆಂಬ ಕಾಲವನ್ನೂ, ಪರಿಸ್ಥಿತಿಯನ್ನೂ ಇವರು ಸೃಷ್ಟಿಮಾಡಿಬಿಡುತ್ತಾರೆ. ಇದೆಲ್ಲಾ ಸಂಘ ಪರಿವಾರದ ಎಡವುವಿಕೆಯಲ್ಲದೆ ಮತ್ತೇನೂ ಅಲ್ಲ.

ಇದೇ ಹಿನ್ನೆಲೆಯಲ್ಲಿ ಸಂಘ ಪರಿವಾರ, ಕಬೀರನನ್ನು ಕೊಲೆ ಮಾಡಿದ ನವೀನ್ ಗೆ ಲಕ್ಷ ರು. ಬಹುಮಾನ ಘೋಷಿಸಿದೆ. ಆತನ ಮೇಲೆ ದಾಖಲಿಸಿದ ಕೊಲೆ ಕೇಸನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ. ಕಬೀರ್ ಕುಟುಂಬಕ್ಕೆ ಘೋಷಿಸಿದ ನಷ್ಟ ಪರಿಹಾರದ ಬಗ್ಗೆ
ಆಕ್ಷೇಪವೆತ್ತಿದೆ.

ಕೊಲೆ ನಡೆದ ದಿನದಂದೇ, ಕೊಲೆ ಆರೋಪಿಯ ಮೇಲೆ ಪೊಲೀಸರು ಕೊಲೆ ಕೇಸು ದಾಖಲಿಸಿ ಜೈಲಿಗೆ ಹಾಕುವ ಮೂಲಕ ಕಾನೂನು ಪಾಲನೆ ಮಾಡಬೇಕಾಗಿತ್ತು. ಪೊಲೀಸರು ಕಾನೂನು ಪಾಲನೆ ಮಾಡದೆ ಕರ್ತವ್ಯಲೋಪವೆಸಗಿದರು. ಸರಕಾರ ಅಥವಾ ಸರಕಾರದ ಇಲಾಖೆಗಳು ಯಾವ ಕೆಲಸಗಳನ್ನು ಸಮರ್ಥವಾಗಿ, ದಕ್ಷತೆಯಿಂದ, ನಿಷ್ಪಕ್ಷಪಾತವಾಗಿ ಮಾಡಬೇಕೋ ಅವುಗಳನ್ನು ಮಾಡದೇ ಹೋದಾಗ ಮೂರನೇ ಶಕ್ತಿಗಳು ಅಲ್ಲಿ ಮೂಗು ತೂರಿಸುತ್ತವೆ. ಇಂಥ ಬೆಳವಣಿಗೆಗಳಿಂದಾಗಿಯೇ ಸಂವಿಧಾನಕ್ಕೆ ಸವಾಲಾಗುವ ರೀತಿಯಲ್ಲಿಯೇ ಈ ಮೂರನೇ ಶಕ್ತಿಗಳು ಬೆಳೆದುಬಿಡುತ್ತವೆ. ಸರಕಾರ ದುರ್ಬಲಗೊಳ್ಳುತ್ತವೆ.

ಕೊಲೆ ಮಾಡಿದ್ದು ಓರ್ವ ಎಎನ್ಎಫ್ ಪೊಲೀಸ್ ಪೇದೆ. ಅಂದರೆ, ರಾಜ್ಯ ಸರಕಾರವನ್ನು ಪ್ರತಿನಿಧಿಸುವ ಇಲಾಖೆಯೊಂದರ ಸಿಬ್ಬಂದಿ. ಕೊಲೆಯನ್ನು ಖಂಡಿಸುವ ಮುಸ್ಲೀಮ್ ಸಹಿತ ಯಾವುದೇ ಇತರ ಸಂಘಟನೆಗಳು ವಿರೋಧಿಸಬೇಕಾದ್ದು ಎಎನ್ಎಫ್ ಕಾರ್ಯಾಚರಣೆಯ ಶೈಲಿಯನ್ನು ಮತ್ತು ರಾಜ್ಯದ ಕಾಂಗ್ರೆಸ್ ಸರಕಾರವನ್ನು. ಆದರೆ ಕೊಲೆಯನ್ನು ಖಂಡಿಸುವ ಸಂಘಟನೆಗಳು, ವ್ಯಕ್ತಿಗಳು ಇಲ್ಲಿ ಟಾರ್ಗೆಟ್ ಮಾಡಿದ್ದು ಸಂಘ ಪರಿವಾರವನ್ನು.

ತನಿಕೋಡು ಕೊಲೆ ಪ್ರಕರಣದದಲ್ಲಿ ಮೊತ್ತ ಮೊದಲಿಗೆ ಎಡವಿದ್ದು ಪೊಲೀಸ್ ಅಧಿಕಾರಿಗಳು. ಕಬೀರ್ ಕೊಲೆ ಆರೋಪಿ ಎಎನ್ಎಫ್ ಪೊಲೀಸ್ ಪೇದೆ ನವೀನ್ ನಾಯ್ಕ್ ನನ್ನು ಕೊಲೆ ನಡೆದ ಅದೇ ದಿನದಂದು ಪೊಲೀಸ್ ಅಧಿಕಾರಿಗಳು ಕೊಲೆ ಕೇಸು ದಾಖಲಿಸಿ ಜೈಲಿಗೆ ಹಾಕಿಬಿಡಬೇಕಾಗಿತ್ತು. ಹಾಗೇನೇ ಆತನನ್ನು ಕರ್ತವ್ಯಯದಿಂದ ಅಮಾನತುಮಾಡಿ, ಇಲಾಖಾ ತನಿಖೆಗೆ
ಆದೇಶಿಸಬೇಕಾಗಿತ್ತು. ಇಲ್ಲಿ ಪೊಲೀಸರು ಹೀಗೆ ಮಾಡದೆ ಎಡವಿದರು.

ಮುಸ್ಲೀಮ್ ಸಂಘಟನೆಗಳು ಸರಕಾರವನ್ನು ಖಂಡಿಸುವುದರ ಬದಲಾಗಿ, ಸಂಘ ಪರಿವಾರವನ್ನು ಟಾರ್ಗೆಟ್ ಮಾಡಿ ಎಡವಿತು. ನಮ್ಮ ಜನಪ್ರತಿನಿಧಿಗಳಿಗೆ ನಿಷ್ಪಕ್ಷಪಾತ ಧೋರಣೆಯೇ ಇಲ್ಲವೆಂಬುದು ಎಲ್ಲರಿಗೂ ಅದ್ಯಾವಾಗಲೋ ಸಾಬೀತಾಗಿ ಹೋದ ವಿಷಯ. ಆದರ್ಶ ಮತ್ತು ಮಾದರಿ ಜನಪ್ರತಿನಿಧಿಗಳಾಗಿರುತ್ತಿದ್ದರೆ ಇಲ್ಲೂ ಸಹ ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ. ನಿರೀಕ್ಷೆಯಂತೆಯೇ ಶಾಸಕರು, ಮಂತ್ರಿಗಳು ಅವಸರವಸರವಾಗಿ ಕೊಲೆಯಾಗಿ ಹೋದವನಿಗೆ 5, 10, 20 ಲಕ್ಷ ರು. ನಷ್ಟ ಪರಿಹಾರ ಕೊಡಬೇಕೆಂದು ಸರಕಾರವನ್ನು ಮಾಧ್ಯಮಗಳ ಮೂಲಕ ಮನವಿ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸಿದರು.

ಶಾಸಕ ಮೊಯೊದೀನ್ ಬಾವಾರಂತೂ ಒಂದು ಹೆಜ್ಜೆ ಮುಂದೆ ಹೋಗಿ ಕಬೀರ್ ಜತೆಗಿದ್ದವರನ್ನು ಜತೆಯಲ್ಲಿ ಕುಳ್ಳಿರಿಸಿಕೊಂಡು ಪತ್ರಿಕಾಗೋಷ್ಟಿ ಮಾಡಿ ಅವರ ಪರವಾಗಿ ವಾದಿಸತೊಡಗಿದರು. ರಾಜ್ಯದಲ್ಲೊಂದು ಸರಕಾರವಿದೆ. ಆ ಸರಕಾರಕ್ಕೆ ಕರ್ತವ್ಯ ನಿರ್ವಹಿಸಲು ಇಲಾಖೆಗಳಿವೆ. ಶಾಸಕರು ಇದನ್ನೆಲ್ಲ ಗಮನಿಸಬೇಕಾಗಿತ್ತು. ಇಡೀ ಪ್ರಕರಣವನ್ನು ಕಾನೂನು ರೀತಿಯಲ್ಲಿ ನಿಷ್ಪಕ್ಷಪಾತವಾಗಿ ನಿರ್ವಹಿಸಲು ಇಲಾಖೆಯ ಅಧಿಕಾರಿಗಳಿಗೆ ಬಿಟ್ಟುಬಿಡಬೇಕಾಗಿತ್ತು. ಶಾಸಕ ಬಾವಾ ಕೂಡಾ ಇಲ್ಲಿ ನ್ಯಾಯಯುತವಾಗಿ ನಡೆದುಕೊಳ್ಳದೆ ಎಡವಿದರು.

ಎಲ್ಲರೂ ಎಡವಲು ನಮ್ಮನ್ನಾಳಿದ ಸರಕಾರಗಳೇ ಮೂಲ ಕಾರಣ. ಎಎನ್ಎಫ್ ಹಾಗೂ ಪೊಲೀಸರು ಹೀಗೆ ಕೊಲೆ ಮಾಡಿದ್ದು ಇದು ಮೊದಲಿನದೇನೂ ಅಲ್ಲ. ಈ ಹಿಂದೆಯೂ ಇಂಥ ಕೊಲೆಗಳನ್ನು ಮಾಡಿದೆ. ಹಿಂದೆ ಕೊಲೆಯಾದವರಲ್ಲಿ ಮಹಿಳೆಯರೆಂದು ನೋಡದೆ ಹಲವು ಮಂದಿ ನಕ್ಸಲರು.
ನಕ್ಸಲರಲ್ಲದವರನ್ನೂ ಕೊಂದು ಹಾಕಿತು. ಇಲ್ಲೆಲ್ಲೂ ಕೊಂದವರ ಮೇಲೆ ಕೊಲೆ ಕೇಸು ದಾಖಲಿಸುವ ಪ್ರಾಥಮಿಕ ಕರ್ತವ್ಯವನ್ನೂ ನೆರವೇರಿಸಲಿಲ್ಲ. ಸರಕಾರ ಇಲ್ಲೆಲ್ಲಾ ಪಕ್ಷಪತವೆಸಗಿತು, ಕಾನೂನನ್ನು ನಿರ್ಜೀವಗೊಳಿಸಿತು. ನಕ್ಸಲರನ್ನು
ಕೊಲ್ಲಬಹುದೆಂದಾಯಿತು. ಸರಿ, ಅದನ್ನೇ ಸ್ವಲ್ಪ ಮುಂದುವರಿದು ಎಎನ್ಎಫ್ ನವರು ಕಬೀರ್ ನನ್ನು ಕೊಂದು ಹಾಕಿದೆ.

ಕಬೀರ್ ನಕ್ಸಲ್ ಅಲ್ಲ. ಆದರೆ ನವೀನ್ ನಾಯ್ಕ್ ಗೆ ಕಬೀರ್ ಓರ್ವ ದನ ಕಳ್ಳ ಮುಸ್ಲೀಮನಾಗಿ ಕಂಡಿರಬಹುದು. ದನಕಳ್ಳ ಮುಸ್ಲೀಮನನ್ನು ಕೊಂದರೆ ತಪ್ಪಿಲ್ಲವೆಂದು ಅನಿಸಿರಬಹುದು. ಹೇಗೂ ತಾನು ಎಎನ್ಎಫ್ ಸಿಬ್ಬಂದಿ. ನಕ್ಸಲರನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ತಾವೇನು ಬೇಕಾದರೂ ಮಾಡಬಹುದು ಎಂಬುದು ಇವರ ತಲೆಯಲ್ಲಿದ್ದರೆ ಅದಕ್ಕೆ ಸರಕಾರವೇ ಕಾರಣ ಹೊರತು ಬೇರೆ ಯಾವುದೂ ಕಾರಣವಾಗಿರಲು ಸಾದ್ಯವಿಲ್ಲ. ವೀರಪ್ಪನ್ ಕಾರ್ಯಾಚರಣೆಯ ಸಮಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವೂ ನಡೆದ ಬಗ್ಗೆ ದೂರುಗಳಿವೆ ತಾನೇ ? ಗುಜರಾತ್
ಹತ್ಯಾಕಾಂಡದಲ್ಲೂ ಮುಸ್ಲೀಮ್ ಮಹಿಳೆಯರ ಮೇಲೆ ಅತ್ಯಾಚಾರಗಳನ್ನು ನಡೆಸಲಾಗಿತ್ತು. ಕಾಶ್ಮೀರ ಕಣಿವೆ ಸಹಿತ ಈಶಾನ್ಯ ರಾಜ್ಯಗಳಲ್ಲೂ ನಡೆಯುವುದು ಇದುವೇ. ಅದಕ್ಕಾಗಿಯೇ ಅಲ್ಲಿ ಇರೋಮ್ ಶರ್ಮಿಳಾ ದಶಕಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಸರಕಾರವೊಂದು ಸಮರ್ಥ ಸರಕಾರವಾಗಿ ಆಡಳಿತ ನಡೆಸದೇ ಇದ್ದಾಗ ಇಂಥದ್ದೆಲ್ಲ ಸಹಜವಾಗಿ, ನಿರಂತರವಾಗಿ ನಡೆಯುತ್ತದೆ. ಕಬೀರನನ್ನು ಕೊಂದ ನವೀನ್ ಮೇಲೆ ಕೊಲೆ ಕೇಸು ದಾಖಲಿಸಿದ ಸರಕಾರ ಇನ್ನಾದರೂ ನಕ್ಸಲರನ್ನು, ನಕ್ಸಲರ ಹೆಸರಲ್ಲಿ ಅಮಾಯಕರನ್ನು ಕೊಂದವರ ಮೇಲೆ ಕೇಸು ದಾಖಲಿಸಿ, ಆರೋಪಿಗಳನ್ನು ಬಂಧಿಸುತ್ತಾ ? ಹೌದೆಂದಾರೆ, ಸರಿ. ಇಲ್ಲವಾದರೆ ಇದು ಸಹ ಒಂದು ಪಕ್ಷಪಾತದ ಕ್ರಮವಷ್ಟೇ ಆಗಿಬಿಡುತ್ತದೆ. ಪ್ರಭುತ್ವದ, ಸರಕಾರದ, ವ್ಯವಸ್ಥೆಯ ಪ್ರತಿನಿಧಿಯಾದ ಇಲಾಖಾ ಸಿಬ್ಬಂದಿಗಳು ನಡೆಸಿದ ಕೊಲೆಗಳನ್ನು ಕೊಲೆಗಳೆಂದು ಪರಿಗಣಿಸದೆ ಕೊಲೆ ಆರೋಪಿಗಳನ್ನು ರಕ್ಷಿಸಿದ ಸರಕಾರ ಹೀಗೆ ಎಡವಲು ಆರಂಭಿಸಿದ್ದು, ಎಡವುತ್ತಲೇ ಹೋಯಿತು. ಈಗ ಕಬೀರ್ ಪ್ರಕರಣದಲ್ಲಿ ಮಾತ್ರ ಸರಕಾರ ಇನ್ನೊಂದು ರೀತಿಯಲ್ಲಿ ವರ್ತಿಸಿದೆ. ಕೊಲೆ ಕೇಸು ಕಬೀರ್ ಪ್ರಕರಣಕ್ಕೆ ಮಾತ್ರ ಸೀಮಿತವಾದರೆ ಸಾಲದು. ಎಲ್ಲಾ ಕೊಲೆ ಕೇಸುಗಳಲ್ಲೂ ಇದೇ ನ್ಯಾಯ ಪಾಲನೆಯಾಗಬೇಕು. ಇಲ್ಲದೇ ಹೋದರೆ ಇಲ್ಲೂ ಕೂಡಾ ಸರಕಾರ ಎಡವಿತು ಎಂದೇ ಹೇಳಬೇಕಾಗುತ್ತದೆ. – ಶ್ರೀರಾಮ ದಿವಾಣ. (ಮುಂದುವರಿಯುವುದು)

# ಈ ದೇಶದಲ್ಲಿ ಮಂತ್ರಿಗಳು, ಜನಪ್ರತಿನಿಧಿಗಳು, ರಾಜಕಾರಣಿಗಳು, ಸರಕಾರಿ
ಅಧಿಕಾರಿಗಳು, ಶ್ರೀಮಂತರು, ದೊಡ್ಡ ದೊಡ್ಡ ಸ್ಥಾನ ಮಾನ ಹೊಂದಿರುವ ಉದ್ಯಮಿಗಳು ಏನು ಬೇಕಾದರೂ ಮಾಡಬಹುದು. ಅಕ್ಷಮ್ಯ ಅಪರಾಧವೆಸಗಿಯೂ ದಕ್ಕಿಸಿಕೊಳ್ಳಬಹುದು. ಇದು ನಮ್ಮ ದೇಶದ ದುರಂತ.

ಇವರಲ್ಲಿ ಒಬ್ಬರು ಮತ್ತೊಬ್ಬರನ್ನು ರಕ್ಷಿಸುತ್ತಾರೆ. ಕಾರಣ ಇವರೆಲ್ಲರೊಂದೇ. ಇವರ ನಡುವೆ ಒಂದಲ್ಲ ಒಂದು ಕೊಡುಕೊಳ್ಳುವಿಕೆ ಇದ್ದೇ ಇರುತ್ತದೆ. ಭ್ರಷ್ಟಾಚಾರದಲ್ಲಿ ಇವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪಾಲುದಾರರೇ. ಹಾಗಾಗಿಯೇ ಇಲ್ಲಿ ಎಲ್ಲರೂ ಸಮಾನರಲ್ಲ. ಕೆಲವರು ಅಸಾಮಾನ್ಯರು. ಹಲವರು ಅತೀ ಸಾಮಾನ್ಯರು. ಈ ಕಾರಣಕ್ಕಾಗಿಯೇ ಈ ವ್ಯವಸ್ಥೆ ಎಂಬ ಅವ್ಯವಸ್ಥೆಯ ದೇಶದಲ್ಲಿ ಕಾನೂನುಗಳು ಸಮಾನ ರೀತಿಯಲ್ಲಿ ಜಾರಿಯಾಗುವುದೇ ಇಲ್ಲ.

ಕಾನೂನಿಗೆ ಜಾತಿ, ಮತ, ಶ್ರೀಮಂತ, ಬಡವ, ಗಂಡು, ಹೆಣ್ಣು ಇತ್ಯಾದಿ ಯಾವ ತಾರತಮ್ಯವೂ ಇಲ್ಲ. ಇದೇ ಕಾರಣಕ್ಕೆ ಕಾನೂನು ಸರ್ವರಿಗೂ ಸಮಾನ ಎಂದು ಹೇಳುವುದು. ಇದು ಕಡತಗಳಲ್ಲಿ ಮಾತ್ರ. ಭಾಷನ, ಲೇಖನಗಳಿಗೆ ಮಾತ್ರ ಸೀಮಿತ. ವಾಸ್ತವವಾಗಿ ಹೀಗೆ ಇಲ್ಲವೇ ಇಲ್ಲ. ಇದಕ್ಕೆ ಕಾರಣ, ಕಾನೂನುಗಳನ್ನು ಜಾರಿಗೊಳಿಸುವ ಅಧಿಕಾರಿಗಳು ಹಾಗೂ ಅಧಿಕಾರಿಗಳನ್ನು ನಿಯಂತ್ರಣದಲ್ಲಿ ಇರಿಸಿಕೊಂಡಿರುವ ಜನಪ್ರತಿನಿಧಿಗಳು ಮತ್ತು ಮಂತ್ರಿಗಳು. ಕೆಲವೇ ಕೆಲವು ಸಂದರ್ಭಗಳಲ್ಲಿ, ಅನಿವಾರ್ಯತೆಯ ಪರಿಸ್ಥಿತಿ ಸೃಷ್ಟಿಯಾದಾಗ ಮಾತ್ರ ಕಾನೂನು ದೊಡ್ಡವರ ಮೇಲೆಯೂ ಜಾರಿಯಾಗುತ್ತದೆಯೇ ಹೊರತು, ಬೇರೆ ಯಾವುದೇ ಸಂದರ್ಭಗಳಲ್ಲೂ ಕಾನೂನು ಸಮಾನ ರೀತಿಯಲ್ಲಿ ಜಾರಿಯಾಗುವುದೇ ಇಲ್ಲ.

ಬಹುತೇಕ ಸಂದರ್ಭಗಳಲ್ಲೂ ಕಾನೂನು ಜಾರಿಯಾಗುವುದು ಬಡವರ ಮೇಲೆಯೇ. ಅವಿದ್ಯಾವಂತರು, ಅಕ್ಷರ ವಂಚಿತರು, ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಹಿಂದುಳಿಸಲ್ಪಟ್ಟ ಜನರ ಮೇಲೆ ಮಾತ್ರ ಅಧಿಕಾರಿಗಳು ಕಾನೂನು ಕಾಯಿದೆಗಳನ್ನು ಕಠೋರವಾಗಿ ಜಾರಿಗೊಳಿಸುತ್ತಾರೆ. ಅಪರಾಧಿ ಸ್ಥಾನದಲ್ಲಿ ಶ್ರೀಮಂತರಿದ್ದಾಗ, ಪ್ರಭಾವೀ ವ್ಯಕ್ತಿಗಳಿದ್ದಾಗ ಕಾನೂನುಗಳು ಮೃದುವಾಗುತ್ತವೆ. ಇಂಥ ಸಮಯದಲ್ಲಿ ಜನಪ್ರತಿನಿಧಿಗಳು, ಮಂತ್ರಿಗಳು ಜಾಣ ಮೌನ ವಹಿಸಿರುತ್ತಾರೆ.

ಇತ್ತೀಚೆಗೆ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಡ ವ್ಯಕ್ತಿಯೋರ್ವನ ಮನೆಗೆ ದಾಳಿ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಆತ ಪ್ರೀತಿಯಿಂದ ಸಾಕುತ್ತಿದ್ದ ಕಾಡುಬೆಕ್ಕು ಸಹಿತ ಮೂನರ್ಾಲ್ಕು ಪ್ರಾಣಿಗಳನ್ನು ಸ್ವಾಧಿನಪಡಿಸಿಕೊಂಡು ಆತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆಯಂತೆ ಕಠಿಣ ಕಲಂಗಳಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡರು. ಈ ಪ್ರಕರಣದ ಆರೋಪಿಗೆ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಬಗ್ಗೆ ನಿಜಕ್ಕೂ ಅರಿವಿರಲಿಲ್ಲ. ಈ ಬಗ್ಗೆ ತಿಳುವಳಿಕೆ ಕೊಟ್ಟು ಬಿಟ್ಟು ಬಿಡುತ್ತಿದ್ದರೆ, ಈತ ಮುಂದಿನ ದಿನಗಳಲ್ಲಿ ಮತ್ತೆ ವನ್ಯ ಜೀವಿಗಳನ್ನು ಸಾಕುವ ಕೆಲಸ ಮಾಡುತ್ತಿರಲಿಲ್ಲ.

ಆದರೆ, ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ನಿರಂತರವಾಗಿ, ಪದೇ ಪದೇ ಉಡುಪಿ ಅಷ್ಠ ಮಠಗಳಲ್ಲಿ ಒಂದಾದ ಶಿರೂರು ಮಠದ ಲಕ್ಷ್ಮೀವರ ಸ್ವಾಮೀಜಿ ಕಡಲಾಮೆ, ನವಿಲು, ಜಿಂಕೆಯೇ ಮೊದಲಾದ ಅನೇಕ ವನ್ಯಜೀವಿಗಳನ್ನು ಮಠದೊಳಗಡೆ ಗೂಡುಗಳಲ್ಲಿ ಕೂಡಿಟ್ಟು, ಹಗ್ಗ ಕಟ್ಟಿ ಸಾಕುತ್ತಿದ್ದುದು ಇದೆ. ಒಂದೆರಡು ಸಂದರ್ಭಗಳಲ್ಲಿ ಕೆಲವು ವನ್ಯಜೀವಿಗಳು ಇಲ್ಲಿ ಸತ್ತು ಹೋದುದೂ ಇದೆ. ಇದರ ವಿರುದ್ಧ ದೂರು ಕೊಟ್ಟರೂ ಒಂದೇ ಒಂದು ಪ್ರಕರಣದಲ್ಲೂ ಅರಣ್ಯ ಇಲಾಖಾಧಿಕಾರಿಗಳು ಸ್ವಾಮೀಜಿ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ
ಕೈಗೊಂಡದ್ದಿಲ್ಲ.

ಪ್ರತಿ ದಿನ ಒಂದಲ್ಲ ಒಂದು ಹಲ್ಲೆ ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ
ದಾಖಲಾಗುತ್ತಿರುತ್ತವೆ. ಕೌಂಟರ್ ಕೇಸ್ ಗಳೂ ದಾಖಲಾಗುತ್ತವೆ. ಇಲ್ಲಿ ಆರೋಪಿಗಳು ಪ್ರಭಾವಿಗಳಾದ ಪಕ್ಷದಲ್ಲಿ ಪೆಟ್ಟು ತಿಂದವರ ವಿರುದ್ಧವೇ ಕೌಂಟರ್ ಕೇಸ್ ಗಳು ದಾಖಲಾಗುತ್ತವೆ. ಹೀಗೆ ಕೌಂಟರ್ ಕೇಸ್ಗಳನ್ನು ದಾಖಲಿಸುವಂತೆ ಪ್ರಭಾವಿ ವ್ಯಕ್ತಿಗಳಿಗೆ ಸೂಚಿಸುವುದು ಮತ್ತು ಮಾರ್ಗದರ್ಶನ ಮಾಡುವವರೂ ಇದೇ ಪೊಲೀಸರೇ ಹೊರತು ಬೇರೆ ಯಾರೂ ಅಲ್ಲ. ಅದೇ ಪೊಲೀಸರು ಅಮಾಯಕರ ವಿರುದ್ಧ ಹಲ್ಲೆ, ದೌರ್ಜನ್ಯ ನಡೆಸುವ ಅದೆಷ್ಟೋ ಪ್ರಕರಣಗಳು ನಡೆಯುತ್ತಲಿರುತ್ತವೆ. ಆದರೆ, ಇಲ್ಲಿ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗಳು ಪೊಲೀಸರ ವಿರುದ್ಧ ದೂರು ನೀಡಿದರೂ ಇಂಥ ದೂರುಗಳನ್ನು ಪೊಲೀಸರು ದಾಖಲಿಸಿಕೊಳ್ಳುವುದೇ ಇಲ್ಲ.

ನಕ್ಸಲರನ್ನು ಪೊಲೀಸರು ಎನ್ ಕೌಂಟರ್ ಹೆಸರಲ್ಲಿ ಕೊಲೆ ಮಾಡಿಬಿಡುತ್ತಾರೆ. ಬಳಿಕ ಪೊಲೀಸರೇ ಒಂದು ದೂರು ಬರೆದುಕೊಂಡು ಕೊಲೆಯಾದ ನಕ್ಸಲರ ವಿರುದ್ಧವೇ ಪೊಲೀಸರ ಕೊಲೆ ಯತ್ನ ಎಂಬ ಕೇಸು ದಾಖಲಿಸಿಬಿಡುತ್ತಾರೆ. ಆದರೆ, ಅಪ್ಪಿ ತಪ್ಪಿಯೂ ಕೊಲೆ ಮಾಡಿದ ಪೊಲೀಸರ ವಿರುದ್ಧ ಒಂದೇ ಒಂದು ಕೇಸೂ ದಾಖಲಾಗುವುದಿಲ್ಲ. ಈದು, ದೇವರಬಾಳು ಇತ್ಯಾದಿ ಅನೇಕ ಎನ್ ಕೌಂಟರ್ ಪ್ರಕರಣಗಳು ಇದಕ್ಕೆ ಉದಾಹರಣೆಗಳು.

ಉಡುಪಿ ತಾಲೂಕಿನ ಕೋಟೆ ಗ್ರಾಮ ಪಂಚಾಯಿತಿಯಲ್ಲಿ ರಾತ್ರಿಯಾದರೂ ರಾಷ್ಟ್ರಧ್ವಜ ಕೆಳಗಿಳಿಸಿಲ್ಲ ಎಂಬ ಕಾರಣಕ್ಕೆ ಮಧ್ಯರಾತ್ರಿ ಗ್ರಾ.ಪಂ.ಕಚೇರಿಗೆ ಬಂದ ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಗ್ರಾ.ಪಂ.ಅಧ್ಯಕ್ಷ ಜತ್ತನ್ನ ಎಂಬವರನ್ನು ಸ್ಥಳಕ್ಕೆ ಕರೆಸಿಕೊಂಡು ನಿಂದಿಸಿ, ಹೊಡೆದ ಘಟನೆ ನಡೆದಿತ್ತು. ಬಳಿಕ ಇದೊಂದು ದೊಡ್ಡ ಸುದ್ದಿಯೂ ಆಗಿಬಿಟ್ಟಿತು. ಗ್ರಾ.ಪಂ.ಕಾರ್ಯದರ್ಶಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯವರು, ಯಾಕೆ ನಿಮ್ಮ ಮೇಲೆ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಬಾರದು ಎಂದು ಕೇಳಿ ನೋಟೀಸ್ ನೀಡಿದ್ದೂ ನಡೆಯಿತು. ಈ ನೋಟೀಸ್ ಗೆ ತಿಂಗಳುಗಳೇ ಕಳೆಯಿತು. ನಂತರ ಯಾವ ಕ್ರಮವನ್ನೂ ಕೈಗೊಳ್ಳದೆ ಹಾಗೆಯೇ ಮರೆತು ಬಿಡಲಾಯಿತು. ಕಾರಣ, ಇಲ್ಲಿ ಇಬ್ಬರೂ ಅಧಿಕಾರಿಗಳೇ. ಒಬ್ಬರು ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿ, ಇನ್ನೊಬ್ಬರು ತಾಲೂಕು ಮಟ್ಟದ ಅಧಿಕಾರಿ. ಅಂತಿಮವಾಗಿ ಒಬ್ಬರನ್ನು ಮತ್ತೊಬ್ಬರು ರಕ್ಷಿಸಲೇ ಬೇಕಲ್ಲ ? ಇದು ಸರಕಾರಿ ಅಧಿಕರಿಗಳ ನಡುವಿನ ಅಲಿಖಿತ ನಿಯಮ.

ಕೋಟೆ ಗ್ರಾ.ಪಂ.ನಲ್ಲಿ ರಾಷ್ಟ್ರಧ್ವಜ ರಾತ್ರಿ ಸಹ ಹಾರಾಡುತ್ತಲೇ ಇರಲು ಅಧ್ಯಕ್ಷರು ಕಾರಣರಾಗಿರಲಿಲ್ಲ. ಗ್ರಾ.ಪಂ.ಅಧಿಕಾರಿಗಳೇ ಇದಕ್ಕೆ ಜವಾಬ್ದಾರರಾಗಿದ್ದರು. ಆದರೂ ಸರ್ಕಲ್ ಇನ್ಸ್ ಪೆಕ್ಟರ್ ನೋಡಲು ಸಾಮಾನ್ಯರಂತಿದ್ದ ಕಾರಣಕ್ಕೋ ಏನೋ,
ಗ್ರಾ.ಪಂ.ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿ ದರ್ಪ ಪ್ರದರ್ಶಿಸಿದರು.

ಅದೇ ಪೊಲೀಸರು, ಮೂಡುಬೆಳ್ಳೆ-ಪಡುಬೆಳ್ಳೆ ರಸ್ತೆಯಲ್ಲಿ ನೌಕಾದಳದ ನಿವೃತ್ತ ಕೊಮೊಡೋರ್ ಜೆರೋಮ್ ಕಸ್ತಲಿನೋ ಎಂಬವರು ಕಳೆದ ಹಲವಾರು ತಿಂಗಳುಗಳಿಂದ ಹಗಲು-ರಾತ್ರಿ ರಾಷ್ಟ್ರಧ್ವಜ ಹಾರಾಡಿಸುತ್ತಾ, ರಾಷ್ಟ್ರಧ್ವಜಕ್ಕೆ ನಿರಂತರವಾಗಿ ಅಪಮಾನವೆಗುತ್ತಿದ್ದರೂ, ಇದರ ವಿರುದ್ಧ ದೂರು ನೀಡಿದರೂ, ವಾರ ಕಳೆದರೂ ರಾಷ್ಟ್ರಧ್ವಜ ಇಳಿಸುವ ಕೆಲಸವನ್ನಾಗಲೀ, ತಪ್ಪಿತಸ್ಥ ನಿವೃತ್ತ ಅಧಿಕಾರಿಯ ಮೇಲೆ ಕನಿಷ್ಟ ಕಾನೂನು ಕ್ರಮಗಳನ್ನೂ ತೆಗೆದುಕೊಳ್ಳುವ ಕರ್ತವ್ಯವನ್ನಾಗಲೀ ಮಾಡಲೇ ಇಲ್ಲ.

ದೇಶದ ಗೌರವ, ಘನತೆ, ಸ್ವಾಭಿಮಾನ, ಹೆಮ್ಮೆಯ ದ್ಯೋತಕವಾದ ರಾಷ್ಟ್ರಧ್ವಜವನ್ನು ಬೆಳಗ್ಗೆ ಸೂರ್ಯೋದಯವಾಗುವಾಗ ಏರಿಸಿದರೆ, ಸಂಜೆ ಸೂರ್ಯಾಸ್ಥಮಾನವಾಗುವ ಸಮಯದಲ್ಲಿ ಕೆಳಗಿಳಿಸಲೇ ಬೇಕು. ಇದು ಲಾಂಛನ ಮತ್ತು ಅಭಿದಾನ (ಅಸಮರ್ಪಕ ಬಳಕೆಯ ತಡೆ) ಕಾಯಿದೆ-1950 ಮತ್ತು ರಾಷ್ಟ್ರ ಘನತೆಯೆಡೆಗಿನ ಅಪಮಾನ ತಡೆ ಕಾಯಿದೆ-1971 ಇವುಗಳಿಗೆ ಅನುಗುಣವಾಗಿ ಜಾರಿಗೊಳಿಸಲಾದ ಭಾರತದ ಧ್ವಜ ಸಂಹಿತೆ-2002ರಲ್ಲಿ ಸ್ಪಷ್ಟ ಇದೆ.

ಇಷ್ಟಿದ್ದರೂ, ಮೂಡುಬೆಳ್ಳೆ ರಾಷ್ಟ್ರಧ್ವಜ ಅಪಮಾನ ಪ್ರಕರಣದ ವಿರುದ್ಧ ಶಿರ್ವ ಪಿಎಸ್ಐ, ಕಾಪು ಸರ್ಕಲ್ ಇನ್ಸ್ ಪೆಕ್ಟರ್, ಕಾರ್ಕಳ ಎಎಸ್ಪಿ, ಉಡುಪಿ ಹೆಚ್ಚುವರಿ ಎಸ್ಪಿ, ಎಸ್ಪಿ, ಐಜಿಪಿ, ತಹಶಿಲ್ದಾರ್, ಅಪರ ಡಿಸಿ, ಡಿಸಿ, ರಾಜ್ಯ ಮುಖ್ಯ ಕಾರ್ಯದರ್ಶಿಗಳು ಹಾಗೂ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದರೂ, ವಾರ ಕಳೆದರೂ ರಾಷ್ಟ್ರಧ್ವಜಕ್ಕೆ ಅಪಮಾನವೆಸಗಿದ ತಪ್ಪಿತಸ್ಥರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ನಮ್ಮ ಸರಕಾರಿ ಅಧಿಕಾರಿಗಳು ಮನಸ್ಸು ಮಾಡಿಲ್ಲವೆಂದರೆ…

ತಪ್ಪು ಕಾನೂನಿನದ್ದಲ್ಲ. ತಪ್ಪು ಕಾನೂನನ್ನು ಜಾರಿಗೊಳಿಸುವ ಮಹಾಭ್ರಷ್ಟ, ಮಹಾದುಷ್ಟ, ರಣಹೇಡಿ ಸರಕಾರಿ ಅಧಿಕಾರಿಗಳದ್ದು. ಎಲ್ಲವನ್ನೂ ನೋಡಿಕೊಂಡು ಸುಮ್ಮನಿರುವ
ಜನಪ್ರತಿನಿಧಿಗಳದ್ದು. ಶಿಕ್ಷಿಸಬೇಕಾದ್ದು, ಕರ್ತವ್ಯ ಮರೆತ ಅಧಿಕಾರಿಗಳನ್ನು. ಕಾನೂನಿಗೆ ಅಗೌರವ ತೋರಿಸುವ, ಕಾನೂನನ್ನು ನಿರ್ಜೀವಗೊಳಿಸುವ ಸರಕಾರಿ ಅಧಿಕಾರಿಗಳನ್ನು. – ಶ್ರೀರಾಮ ದಿವಾಣ.

ಉಡುಪಿ: ರಾಜ್ಯದಲ್ಲಿ ಒಟ್ಟು 30 ಮಂದಿ ನಕ್ಸಲರಷ್ಟೇ ಇದ್ದಾರೆ. ಈ ನಕ್ಸಲರು ಮುಖ್ಯವಾಹಿನಿಗೆ ಬಂದು ಶರಣಾಗಿದ್ದೇ ಆದಲ್ಲಿ ಇವರ ಬೇಡಿಕೆಗಳನ್ನು ಈಡೇರಿಸಲಾಗುವುದು ಮತ್ತು ಶರಣಾಗತರಾದವರಿಗೆ ಸೂಕ್ತ ಸೌಲಭ್ಯಗಳನ್ನು ನೀಡಲಾಗುವುದು. ಕೆಲವೊಮದು ಸಡಿಲತೆಗಳೊಂದಿಗೆ 8 ಸಾವಿರ ಮಂದಿ ಯುವಕರು ಪೊಲೀಸ್ ಇಲಾಖೆಗೆ
ಸೇರ್ಪಡೆಗೊಳ್ಳುವವರಿದ್ದು, ಇವರೊಂದಿಗೆ ಶರಣಾಗತರಾದ ನಕ್ಸಲರನ್ನೂ ಸೇರಿಸಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ರಾಜ್ಯ ಗೃಹ ಸಚಿವರಾದ ಬಳಿಕ ಮೊದಲ ಬಾರಿಗೆ ಜೂನ್ 18 ರಂದು ಉಡುಪಿಗೆ ಆಗಮಿಸಿದ ಕೆ.ಜೆ.ಜಾರ್ಜ್ ಅವರು, ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ನಡೆದ ‘ನಕ್ಸಲ್ ಬಾಧಿತ ಪ್ರದೇಶಗಳ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ’ಯ ಬಳಿಕ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.
ರಾಜ್ಯದ ನಕ್ಸಲರೆಲ್ಲರೂ ಶರಣಾಗತರಾದ್ದೇ ಆದಲ್ಲಿ ಈಗ ಇರುವ ‘ಆಂಟಿ ನಕ್ಸಲ್ ಫೋರ್ಸ್’ ನ್ನು ‘ಆಂಟಿ ಟೆರರಿಸ್ಟ್ ಫೋರ್ಸ್’ ಆಗಿ ಬದಲಾಯಿಸಲಾಗುವುದು ಎಂದು ಪ್ರಕಟಿಸಿದ ಗೃಹ ಸಚಿವರು, ರಾಜ್ಯವನ್ನು ನಕ್ಸಲ್ ಪೀಡಿತ ರಾಜ್ಯವೆಂದು ಘೋಷಿಸಲಾಗಿದೆ. ರಾಜ್ಯದ ಏಳು ಜಿಲ್ಲೆಗಳಲ್ಲಿ ನಕ್ಸಲ್ ಚಟುವಟಿಕೆ ಕಂಡುಬಂದಿದ್ದು, ಈ ಜಿಲ್ಲೆಗಳಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ನಕ್ಸಲರನ್ನು ಮಾತುಕತೆಗೆ ಬರಬೇಕು. ಒಬ್ಬ ನಕ್ಸಲೀಯ ಎ.ಕೆ.-47 ನೊಂದಿಗೆ
ಶರಗಾತನಾದಲ್ಲಿ ಆತನಿಗೆ ನೀಡುವ ಸಹಾಯಧನದ ಮೊತ್ತವನ್ನು 15 ಸಾವಿರದಿಂದ 30 ಸಾವಿರ ರು. ಗೆ ಏರಿಸಲಾಗುವುದು ಎಂದು ತಿಳಿಸಿದ ಸಚಿವರು, ಕೆಲವೆಡೆ ಪೊಲೀಸರ ಕೊರತೆ ಇದೆ. ಪೊಲೀಸ್ ಸಿಬ್ಬಂದಿಗಳಿಗೆ ವಸತಿ ಸಮಸ್ಯೆಯೂ ಇದೆ. ಇವುಗಳನ್ನೆಲ್ಲ ಶೀಘ್ರವೇ ಪರಿಹರಿಸಲಾಗುವುದು ಎಂದು ಹೇಳಿದರು.
ಬೆಳಗ್ಗೆ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವ ಜಾರ್ಜ್ ಅವರು, ಇನ್ನಷ್ಟು ಮಹಿಳಾ ಪೊಲೀಸ್ ಠಾಣೆಗಳನ್ನು ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾರೇ ಆಗಲಿ ಪೊಲೀಸ್ ಠಾಣೆಗೆ ಬಂದು ನೀಡುವ ದೂರುಗಳನ್ನು ಪೊಲೀಸರು ದಾಖಲಿಸಬೇಕು. ತಪ್ಪಿದಲ್ಲಿ ಪೊಲೀಸರ ವಿರುದ್ದವೂ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿ ವಿ.ಉಮೇಶ್, ರಾಜ್ಯ ಪೊಲೀಸ್ ಮಹಾನಿದೇಶಕರಾದ ಪಚಾವೊ, ಎಡಿಜಿಪಿ ಅಲೋಕ್ ಮೋಹನ್, ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯಕುಮಾರ್ ಸೊರಕೆ ಹಾಗೂ ಶಾಸಕ ಪ್ರಮೋದ್ ಮಧ್ವರಾಜ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಉಡುಪಿ: ದಲಿತ ಚಳುವಳಿ ಕರ್ನಾಟಕದಲ್ಲಿ ಸಾಂಸ್ಕೃತಿಕ ಚಳುವಳಿಯಾಗಿ ಉಳಿದಿದೆಯೇ ಹೊರತು ಇದುವರೆಗೂ ರಾಜಕೀಯ ಚಳುವಳಿಯಾಗಿ ಬೆಳೆದಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಬೇಕು ಎಂದು ಹಿರಿಯ ಮಾನವ ಹಕ್ಕುಗಳ ಹೋರಾಟಗಾರ ಮೈಸೂರಿನ ಡಾ.ವಿ.ಲಕ್ಷ್ಮಿ ನಾರಾಯಣ್ ಅವರು ಹೇಳಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆಯ ಅಂಗವಾಗಿ ಎ.14 ರಂದು ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಜಾತಿ ಮುಕ್ತ ಸಂಬಂಧ ವೇದಿಕೆ ಜಂಟಿಯಾಗಿ ಆಯೋಜಿಸಿದ ಆನಂದ ಪಟವದರ್ಧನ್ ನಿರ್ದೇಶನದ ‘ಜೈ ಭೀಮ್ ಕಾಮ್ರೇಡ್’ ಚಲನಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು
ಮಾತನಾಡುತ್ತಿದ್ದರು.
ಆನಂದ ಪಟವರ್ಧನ್ ಅವರ ಚಲನಚಿತ್ರಗಳು ಸ್ವಾತಂತ್ರ್ಯೋತ್ತರ ಆಧುನಿಕ ಭಾರತದ
ಚಿತ್ರಣವನ್ನು ಸಮರ್ಥವಾಗಿ ಬಿಚ್ಚಿಡುತ್ತದೆ. ಇದರಿಂದಾಗಿ ಅವರು ಈ ರಂಗದಲ್ಲಿ ಕಹಿಯನ್ನೇ ಅನುಭವಿಸಿದ್ದಾರೆ. ಬಲಪಂಥೀಯರಿಂದ ಉಗ್ರ ಪ್ರತಿಭಟನೆಯನ್ನೇ ಅವರು ಎದುರಿಸಬೇಕಾಗಿ ಬಂದಿದೆ. ಹೋರಾಟಗಾರರಿಗೆ ಹಿಂಸಾವಾದಿಗಳು, ನಕ್ಸಲರು ಎಂದು ಹಣೆಪಟ್ಟಿ ಹಚ್ಚುವುದನ್ನು ಚಿತ್ರದಲ್ಲಿ ಪಟವರ್ಧನ್ ಪ್ರಶ್ನಿಸುತ್ತಾರೆ ಎಂದು ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಚಿಂತಕ ಜಿ.ರಾಜಶೇಖರ್ ಅಭಿಪ್ರಾಯಪಟ್ಟರು.
ಪ್ರೊ.ಹಯವದನ ಮೂಡುಸಗ್ರಿ, ಜಯನ್ ಮಲ್ಪೆ, ಗೋಪಾಲ ಬಿ.ಶೆಟ್ಟಿ, ಸುಂದರ ಸಾರುಕೈ, ಕೆ.ಫಣಿರಾಜ್, ಡಾ.ರತಿ ರಾವ್, ಸುಮಾ ಜೋಸ್ ಮೊದಲಾದವರು ಸಂವಾದದಲ್ಲಿ ಭಾಗವಹಿಸಿದ್ದರು.

ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಯಾತ್ರಾ ಸ್ಥಳವಾದ ಕುಕ್ಕೆ
ಸುಬ್ರಹ್ಮಣ್ಯ ಸಮೀಪದ ಬಾಗಿನಮಲೆ ಮೀಸಲು ಅರಣ್ಯ ಪ್ರದೇಶದಲ್ಲಿ ಎಎನ್ ಎಫ್ ತಂಡ ನಡೆಸಿದ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಯುವಕನೋರ್ವ ಹತನಾಗಿದ್ದು, ಹತನಾದ ವ್ಯಕ್ತಿಯನ್ನು ಪೋಲೀಸರು ನಕ್ಷಲ್ ಕಾರ್ಯಕರ್ತನೆಂದು ತಿಳಿಸಿದ್ದಾರೆ.
ಎಎನ್ಎಫ್ ಪೋಲೀಸರ ಗುಂಡಿಗೆ ಬಲಿಯಾದ ಯುವಕನನ್ನು ತಮಿಳುನಾಡು ಮೂಲದ ಕುಪ್ಪುಸ್ವಾಮಿ ಅಥವಾ ಗಿರೀಶ್ ಇರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಶಂಕೆ ವ್ಯಕ್ತಪಡಿಸಿಲಾಗಿದೆ.