Posts Tagged ‘rti’

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮ್ಯಾನೇಜರ್ ಶ್ರೀಮತಿ ಲತಿಕಾ ಅವರನ್ನು ಗುರುತರವಾದ ಆರೋಪಗಳ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಅಮಾನತು ಮಾಡಿರುವ ವಿದ್ಯಾಮಾನ ನಡೆದಿದೆ.

ಶ್ರೀ ಕ್ಷೇತ್ರದ ಅರ್ಚಕರಾಗಿದ್ದ ಶ್ರೀಪತಿ ಉಪಾಧ್ಯ ಅವರು ನೀಡಿದ ದೂರಿನ ಹಿನ್ನಲೆಯಲ್ಲಿ ಲತಿಕಾ ಅವರನ್ನು ಇಲಾಖಾಧಿಕಾರಿಗಳು ಅಮಾನತು ಮಡಿ ಆದೇಶ
ಹೊರಡಿಸಿದ್ದಾರೆ.

ದುರ್ವತನೆ, ಕರ್ತವ್ಯಲೋಪ, ಸರ್ವಾಧಿಕಾರಿ ಪ್ರವೃತ್ತಿ ಇತ್ಯಾದಿ ಗಂಭೀರವಾದ ಆರೋಪಗಳನ್ನು ಲತಿಕಾ ಅವರ ಮೇಲೆ ನೀಡಲಾಗಿತ್ತು. ಅರ್ಚಕರು ಮಡಿಯಲ್ಲಿ ಗರ್ಭಗುಡಿ ಪ್ರವೇಶಿಸುವ ಸಂದರ್ಭದಲ್ಲಿ ದುರುದ್ಧೇಶಪೂರ್ವಕವಾಗಿ ಮೈ ಮುಟ್ಟಿ ಮೈಲಿಗೆ ಮಾಡುವ ಮೂಲಕ ಪೂಜಾ ಕಾರ್ಯಕ್ಕೆ ಅಡ್ಡಿಪಡಿಸುವುದಲ್ಲದೆ, ದೂಡಿ ಹಾಕುವ ಕೃತ್ಯವನ್ನು ಎಸರಿಗರುತ್ತಾರೆ ಎಂದು ಲತಿಕಾ ವಿರುದ್ಧ ಅರ್ಷಕರು ದೂರು ನೀಡಿದ್ದರು.

ಕಡಿಯಾಳಿ ದೇವಸ್ಥಾನದ ಮ್ಯಾನೇಜರ್ ಆಗಿದ್ದ ಲತಿಕಾ, ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿ ಹೆಚ್ಚುವರಿ ವೇತನವನ್ನೂ ಸ್ವತಹಾ ಪಡೆದುಕೊಂಡ ಪ್ರಸಂಗವೂ ಈ ನಡುವೆ ನಡೆದಿತ್ತು. ಇದರ ವಿರುದ್ಧವೂ ದೂರು ಬಂದ ಕಾರಣ ಇಲಾಖೆ ತನಿಖೆ ನಡೆಸಿದ್ದು, ಹೆಚ್ಚುವರಿಯಾಗಿ ಪಡೆದುಕೊಂಡ ಮೊತ್ತವಾದ 35,100 ರು.ಗಳನ್ನು ಲತಿಕಾ ಅವರಿಂದ ಮರು ವಶಪಡಿಸಿಕೊಂಡು, ದೇವಳದ ನಿಧಿಗೆ ಜಮೆ ಮಾಡಿ ಪಾಲನಾ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ.

ಧಾರ್ಮಿಕ ದತ್ತಿ ಇಲಾಖಾಧಿಕಾರಿಗಳು ಶ್ರೀಮತಿ ಲತಿಕಾ ಅವರನ್ನು ಅಮಾನತು ಮಾಡುವ ಮೊದಲು ಕಡಿಯಾಳಿ ದೇವಸ್ಥಾನದಿಂದ ಪೆರ್ಡೂರು ದೇವಸ್ಥಾನಕ್ಕೆ ಗುಮಾಸ್ತೆ ಸ್ಥಾನಕ್ಕೆ ವರ್ಗಾವಣೆ ಮಾಡಿದ್ದರು. ಈ ವರ್ಗಾವಣೆ ಆದೇಶಕ್ಕೆ ಲತಿಕಾ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು.

ಲತಿಕಾ ಅವರನ್ನು ತಾತ್ಕಾಲಿಕ ನೆಲೆಯಲ್ಲಿ ಪೆರ್ಡೂರು ದೇವಸ್ಥಾನಕ್ಕೆ ಗುಮಸ್ತೆಯನ್ನಾಗಿ ಕೆಲಸಕ್ಕೆ ಸೇರಿಸಿಕೊಳ್ಳಲಾಗಿತ್ತು. ಬಳಿಕ ಡಾ.ವಿ.ಎಸ್.ಆಚಾರ್ಯರ ಶಿಫಾರಸಿನಂತೆ ಜಿಲ್ಲಾಧಿಕಾರಿ ಕಚೇರಿಗೆ ಡೆಪ್ಯುಟೇಶನ್ ಮೇಲೆ ನಿಯುಕ್ತಿಗೊಳಸಲಾಗಿತ್ತು. ಬಳಿಕ ಜಿಲ್ಲಾಧಿಕಾರಿ ಕಚೇರಿಯಿಂದ ಕಡಿಯಾಳಿ ದೇವಸ್ಥಾನಕ್ಕೆ ಮ್ಯಾನೇಜರ್ ಭಡ್ತಿಗೊಳಿಸಿ ಆಗಿ ನೇಮಿಸಲಾಗಿತ್ತು.

ಉಡುಪಿ: ಮಾಹಿತಿ ಹಕ್ಕು ಕಾಯಿದೆ-2005ರಂತೆ ಅಗತ್ಯ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ ಅರ್ಜಿದಾರನಿಗೆ ಕಾಯಿದೆ ಪ್ರಕಾರ ಮಾಹಿತಿ ನೀಡದೆ ಕಾಯಿದೆಯನ್ನು ಉಲ್ಲಂಘಿಸಿದ ಕರ್ನಾಟಕದ ಸರಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪ್ರಥಮ ಅಪೀಲು ಪ್ರಾಧಿಕಾರಿಯವರಿಗೆ ಕರ್ನಾಟಕ ಮಾಹಿತಿ ಆಯೋಗವು ಸಮನ್ಸ್ ಜ್ಯಾರಿಗೊಳಿಸಿದೆ.

ಧರ್ಮಸ್ಥಳದ ಸೌಜನ್ಯಾಳನ್ನು ಅಪಹರಿಸಿ, ಅತ್ಯಾಚಾರವೆಸಗಿ, ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಇಲಾಖಾಧಿಕಾರಿಗಳು ನಡೆಸಿದ ತನಿಖೆಯ ವರದಿಯನ್ನು ಮತ್ತು ತನಿಖಾ ವರದಿಯನ್ನು ಸಿಐಡಿ ಅಧಿಕಾರಿಗಳು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದರು. ಈ ತನಿಖಾ ವರದಿ ಮತ್ತು ತನಿಖಾ ವರದಿಯೊಂದಿಗೆ ಲಗ್ತೀಕರಿಸಿದ ದಾಖಲಾತಿಗಳ ಯಥಾ ಪ್ರತಿಯನ್ನು ಕೋರಿ ಉಡುಪಿಯ ಶ್ರೀರಾಮ ದಿವಾಣ ಅವರು 2013ರ ನವೆಂಬರ್ 5ರಂದು ಮುಖ್ಯ ಕಾರ್ಯದರ್ಶಿಗಳ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯವರಿಗೆ ಅರ್ಜಿ ಸಲ್ಲಿಸಿದ್ದರು.

ನಿಗದಿತ ಅವಧಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಮಾಹಿತಿ ಮತ್ತು ದಾಖಲೆ ನೀಡದ ಕಾರಣ, ಅರ್ಜಿದಾರರು ಡಿಸೆಂಬರ್ 21ರಂದು ಪ್ರಥಮ ಅಪೀಲು ಪ್ರಾಧಿಕಾರಿಯವರಿಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಸಲ್ಲಿಸಿದರೂ ತನಿಖಾ ವರದಿಯನ್ನು ನೀಡದ ಹಿನ್ನೆಲೆಯಲ್ಲಿ 2014ರ ಫೆಬ್ರವರಿ 3ರಂದು ಮುಖ್ಯ ಕಾರ್ಯದರ್ಶಿಗಳ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪ್ರಥಮ ಅಪೀಲು ಪ್ರಾಧಿಕಾರದ ವಿರುದ್ಧ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಉಡುಪಿ: ಯಾವುದೇ ಪರವಾನಿಗೆ ಪಡೆಯದೆ ವ್ಯಕ್ತಿಯೋಬ್ಬರು ಕಟ್ಟಡ ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಉಡುಪಿ ನಗರಸಭೆಯ ಪೌರಾಯುಕ್ತರಾದ ಶ್ರೀಕಾಂತ್ ರಾವ್ ಅವರು ಕಟ್ಟಡ ಕಾಮಗಾರಿಯನ್ನು ಸ್ಥತಗೊಳಿಸುವಂತೆ ಆದೇಶಿಸಿದ ವಿಲಕ್ಷಣ ವಿದ್ಯಾಮಾನ ಬೆಳಕಿಗೆ ಬಂದಿದೆ.

ಕೇವಲ ಭ್ರಷ್ಟಾಚಾರವೊಂದೇ ಇಂಥ ಅಪರೂಪದ ಪ್ರಸಂಗಕ್ಕೆ ಕಾರಣವಾಗಿದೆ, ಹಣವಿದ್ದವರು ಯಾರು ಬೇಕಾದರೂ ನಗರಸಭೆ ಅಧಿಕೃತರಿಗೆ ಕೇಳಿದಷ್ಟು ಹಣ ಕೊಟ್ಟು ಹೊಟ್ಟೆ ತುಂಬಿಸಿದರೆ ಏನು ಬೇಕಾದರೂ ಮಾಡಿ ಸೈ ಎನ್ನಿಸಬಹುದು ಎಂಬ ಶೋಚನೀಯ ಪರಿಸ್ಥಿತಿ ಇದೀಗ ಸೃಷ್ಟಿಯಾಗಿದೆ. ಇದಕ್ಕೆ ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಳಿಕ ಕಾಮಗಾರಿ ಸ್ಥತಗೊಳಿಸಿದ ಪ್ರಕರಣವೇ ಒಂದು ಉಜ್ವಲ ಸಾಕ್ಷಿ ಎಂದು ಸಾರ್ವಜನಿಕರು ದೂರಿದ್ದಾರೆ.

ಕಟ್ಟಡ ಕಾಮಗಾರಿಗೆ ಯಾವುದೇ ಪರವಾನಿಗೆ ಇಲ್ಲ ಎಂಬುದನ್ನು ಆದೇಶದಲ್ಲಿ ಪೌರಾಯುಕ್ತರು ಸ್ಪಷ್ಟಪಡಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸುವಂತೆ ಅವರು ಆದೇಶಿಸಿದ್ದಾರೆ. ವಿಚಿತ್ರವೆಂದರೆ, ಇಷ್ಟೆಲ್ಲಾ ಇದ್ದ ಮೇಲೂ, ಸೂಕ್ತ ದಾಖಲೆಗಳನ್ನು ಸಲ್ಲಿಸಿ ಕಟ್ಟಡಕ್ಕೆ ಪರವಾನಿಗೆ ಪಡೆದುಕೊಳ್ಳಬಹುದು ಎಂದು ಸೂಚಿಸುವ ಮೂಲಕ ಪೌರಾಯುಕ್ತ ಶ್ರೀಕಾಂತ ರಾವ್ ಅವರು, ನಗರಸಭೆ ಅಕ್ರಮಿಗಳ ಪರವಾಗಿದೆ ಎನ್ನುವುದನ್ನು ಖಚಿತಪಡಿಸಿದ್ದಾರೆ.

ಉಡುಪಿ ನಗರದ 76 ಬಡಗುಬೆಟ್ಟು ಗ್ರಾಮದ ಪಡುಬೈಲೂರು ಎಂಬಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಶ್ರೀ ಇಷ್ಟ ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನದ ಬಿಂಬ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಮಾರ್ಚ್ 9 ಮತ್ತು 10ರಂದು ಎರಡು ದಿನಗಳ ಕಾಲ ನಡೆದಿತ್ತು. ಎಂ.ಪಿ.ಗುರುರಾಜ ಉಪಾಧ್ಯಾಯ ಇವರು ಗೌರವಾಧ್ಯಕ್ಷರು, ಬಿ.ಕೃಷ್ಣಮೂರ್ತಿ ಐತಾಳ್ ಧರ್ಮದರ್ಶಿಗಳೆಂದು ಮತ್ತು ಬಿ.ಗಿರೀಶ್ ಐತಾಳ್, ನಾಗರಾಜ್ ಐತಾಳ್ ಇವರನ್ನು ಮಕ್ಕಳು ಎಂದೂ ಆಮಂತ್ರಣ ಪತ್ರದಲ್ಲಿ ಮುದ್ರಿಸಲಾಗಿತ್ತು.

ಸರ್ವೆ ನಂಬ್ರ 135/20ರ 4 ಸೆಂಟ್ಸ್ ಮತ್ತು 135/19ರ 4.50 ಸೆಂಟ್ಸ್ ಸ್ಥಳದ ಹಿಂಭಾಗದಲ್ಲಿ ಈ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿತ್ತು. ರತ್ನಾ ರಾವ್ ಎಂಬವರು, ದೇವಸ್ಥಾನ ಕಟ್ಟಲು ಸಂಬಂಧಿಸಿದವರಿಗೆ ಪರವಾನಿಗೆ ಇದೆಯೇ ಎಂದು ಮಾಹಿತಿ ಹಕ್ಕು ಕಾಯಿದೆ ಪ್ರಕಾರ ನಗರಸಭೆಯನ್ನು ಕೋರಿದಾಗ; ‘ಪರವಾನಿಗೆ ಕೋರಿ ಇದುವರೆಗೂ ಯಾವುದೇ ಅರ್ಜಿ ಬಂದಿಲ್ಲ’ ಎಂಬ ಉತ್ತರವನ್ನು ಮಾರ್ಚ್ 29ರಂದು ನಗರಸಭೆ ಅಧಿಕಾರಿಗಳು ನೀಡಿದ್ದರು.

ಪರವಾನಿಗೆ ಪಡೆದುಕೊಳ್ಳದೆ ದೇವಸ್ಥಾನ ನಿರ್ಮಿಸಿದ ವಿಷಯ ನಗರಸಭೆ ಅಧಿಕೃತರಿಗೆ ತಿಳಿದಿದ್ದರೂ, ಜಾಣ ಮೌನ ವಹಿಸಿದ್ದರು. ನಡುವೆ ಅಕ್ರಮ ಕಟ್ಟಡಕ್ಕೆ ಕೆಲವರು ಆಕ್ಷೇಪ ದಾಖಲಿಸಿದ ಕಾರಣ, ಪ್ರಕರಣವನ್ನು ವಿಳಂಬಗೊಳಿಸುವ ಹುನ್ನಾರದ ಭಾಗವಾಗಿ ಕಡತವನ್ನು ಕಂದಾಯ ಇಲಾಖೆಗೆ ಕಳುಹಿಸುವ ಮೂಲಕ ನಗರಸಭೆ ಅಧಿಕಾರಿಗಳು ಜಾಣ ನಡೆ ಅನುಸರಿಸಿದ್ದರು. ಇದೀಗ ಇದೇ ಕಟ್ಟಡ ಅನಧಿಕೃತ ಎಂದು ಸ್ಪಷ್ಟಪಡಿಸಿರುವ ಪೌರಾಯುಕ್ತ ಶ್ರೀಕಾಂತ ರಾವ್ ಅವರು, ಸೂಕ್ತ ದಾಖಲೆಗಳನ್ನು ಹಾಜರುಪಡಿಸಿ, ಪರವಾನಿಗೆ ಪಡೆದುಕೊಂಡು ನಿರ್ಮಾಣ ಕಾಮಗಾರಿ ಮುಂದುವರಿಸುವಂತೆ ಸೂಚನೆ ನೀಡಿದ್ದಾರೆ. ಉಡುಪಿ ನಗರಸಭೆಯ ಈ ರೀತಿಯ ಕ್ರಮ ಅಕ್ರಮಕ್ಕೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಉಡುಪಿ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಮತ್ತು ಮಾಜಿ ಕೇಂದ್ರ ಮಂತ್ರಿ ಉಡುಪಿಯ ಆಸ್ಕರ್ ಫೆರ್ನಾಂಡಿಸ್ ಸಹಿತ ನಾಲ್ವರ ವಿರುದ್ಧ ಬಿಜೆಪಿ ನಾಯಕ, ಮಾಜಿ ಕೇಂದ್ರ ಮಂತ್ರಿ ಸುಬ್ರಹ್ಮಣ್ಯಂ ಸ್ವಾಮಿಯವರು ಅಂದಾಜು 2000 ಕೋಟಿ ರು. ಮಿಕ್ಕಿದ ಹಗರಣವೊಂದಕ್ಕೆ ಸಂಬಂಧಿಸಿದಂತೆ ದೆಹಲಿಯ ಮೆಟ್ರೋಪೊಲಿಟಿನ್ ನ್ಯಾಯಾಲಯದಲ್ಲಿ ಖಾಸಗಿ ದಾವೆ ದಾಖಲಿಸಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಕೋಶಾಧಿಕಾರಿ ಮೋತಿಲಾಲ್ ವೋರಾ ಹಾಗೂ ಆಸ್ಕರ್ ಫೆರ್ನಾಂಡಿಸ್ ವಿರುದ್ಧ ಸುಬ್ರಹ್ಮಣ್ಯ ಸ್ವಾಮಿ ಬಹುಕೋಟಿ ಹಗರಣದ ಬಗ್ಗೆ ದೂರು ನೀಡಿದ್ದಾರೆ. ಆರೋಪಗಳ ಬಗ್ಗೆ ನ್ಯಾಯಾಧೀಶರಾದ ಗೋಮತಿ ಮನೋಚ ಅವರ ಸಮಸಕ್ಷಮದಲ್ಲಿ ಜೂನ್ 2ರಂದು ಸುಮಾರು ಒಂದು ಗಂಟೆ ಕಾಲ ಸ್ವಾಮಿ ವಾದ ಮಂಡಿಸಿದ್ದಾರೆ.

‘ನ್ಯಾಷನಲ್ ಹೆರಾಲ್ಡ್ ನ್ಯೂಸ್ ಪೇಪರ್ ಪಬ್ಲಿಶಿಂಗ್ ಕಂಪೆನಿ’ಯು ಅಂದಾಜು 2000 ಕೋಟಿ ರು.ಗೂ ಮಿಕ್ಕಿದ ಚರ ಸ್ಥಿರ ಆಸ್ತಿ ಹೊಂದಿದೆ. ಇದನ್ನು ಮೇಲೆ ಹೆಸರಿಸಿದ ನಾಲ್ವರು ಕಾಂಗ್ರೆಸ್ ನಾಯಕರು ತಮ್ಮ ಸ್ವಾಧೀನಪಡಿಸಿಕೊಳ್ಳಲು ಕ್ರಿಮಿನಲ್ ಸಂಚು ಹೂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ನ್ಯಾಯವಾದಿಯೂ ಆದ ಸ್ವಾಮಿ, ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ನಾಲ್ವರಿಗೂ ಸಮನ್ಸ್ ಜ್ಯಾರಿಗೊಳಿಸಬೇಕೆಂದು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡರು.

‘ನ್ಯಾಷನಲ್ ಹೆರಾಲ್ಡ್ ನ್ಯೂಸ್ ಪೇಪರ್ ಪಬ್ಲಿಶಿಂಗ್ ಕಂಪೆನಿ’ ಸುದ್ಧಿ ಮಾಧ್ಯಮಗಳನ್ನು ಪ್ರಕಟಿಸುವ ಗುರಿಯನ್ನು ಹೊಂದಿರುವ ಕಂಪೆನಿಯಾಗಿದ್ದು, ಇದಕ್ಕೆ ಸರಕಾರ ಈ ಹಿಂದೆ ದೆಹಲಿ, ಲಕ್ನೊ, ಭೋಪಾಲ್ ಮುಂತಾದೆಡೆಗಳಲ್ಲಿ ಉಚಿತವಾಗಿ ಭೂಮಿಯನ್ನು ನೀಡಿದೆ. ಇದೀಗ ಈ ಬಹುಕೋಟಿ ಮೊತ್ತದ ಕಂಪೆನಿಯನ್ನು ‘ಯಂಗ್ ಇಂಡಿಯನ್’ ಎಂಬ ಕಂಪೆನಿ ತನ್ನ ಕೈವಶ ಮಾಡಿಕೊಳ್ಳಲು ಮುಂದಾಗಿದೆ ಎಂದು ಸ್ವಾಮಿ ವಿವರ ನೀಡಿದ್ದಾರೆ.

ನ್ಯಾಷನಲ್ ಹೆರಾಲ್ಡ್ ನ್ಯೂಸ್ ಪೇಪರ್ ಪಬ್ಲಿಶಿಂಗ್ ಕಂಪೆನಿಗಿರುವ ಯಾವ ಉದ್ಧೇಶಗಳೂ ಯಂಗ್ ಇಂಡಿಯನ್ ಕಂಪೆನಿಗಿಲ್ಲ. ಅದಲ್ಲದೆ, ನ್ಯಾಷನಲ್ ಹೆರಾಲ್ಡ್ ಕಂಪೆನಿಯು ಸರಕಾರದಿಂದ ಲಾಭಗಳನ್ನು ಪಡೆದುಕೊಂಡಿದೆ. ಇದೀಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ ಹಾಗೂ ಆಸ್ಕರ್ ಫೆರ್ನಾಂಡಿಸ್ ಇವರುಗಳಿರುವ ಯಂಗ್ ಇಂಡಿಯನ್ ಕಂಪೆನಿಯು ನ್ಯಾಷನಲ್ ಹೆರಾಲ್ಡ್ ಕಂಪೆನಿಯನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಲು ಮುಂದಾಗಿರುವುದು ಅಕ್ರಮವೆಂದು ಸ್ವಾಮಿ ಅಪಾದಿಸಿದ್ದಾರೆ.

‘ಯಂಗ್ ಇಂಡಿಯನ್’ ಕಂಪೆನಿಯ 76 ಶೇಕಡಾ ಶೇರುಗಳನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ ಹಾಗೂ ಆಸ್ಕರ್ ಫೆರ್ನಾಂಡಿಸ್ ಖರೀದಿಸಿದ್ದಾರೆ. ಆದರೆ ಇವರೆಲ್ಲರೂ ತಮ್ಮ ಸ್ವಂತ ಹಣವನ್ನು ಯಂಗ್ ಇಂಡಿಯನ್ ಕಂಪೆನಿಯ ಶೇರು ಖರೀದಿಗೆ ಉಪಯೋಗಿಸುವ ಬದಲಾಗಿ ಕಾಂಗ್ರೆಸ್ ಪಕ್ಷದ ಫಂಡ್ನಿಂದ 90 ಕೋಟಿ ರು.ಗಳನ್ನು ಇದಕ್ಕೆ ಪಡೆದುಕೊಂಡು ಶೇರುಗಳನ್ನು ಖರೀದಿಸಿದ್ದಾರೆ ಎಂದು ಸ್ವಾಮಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ನ್ಯಾಷನಲ್ ಹೆರಾಲ್ಡ್ ಕಂಪೆನಿ ನೆಹರೂ ಕುಟುಂಬದ ಖಾಸಗಿ ಆಸ್ತಿಯಲ್ಲ. ಈ ಕಂಪೆನಿಗೆ ಸರಕಾರವೂ ಆಸ್ತಿ ಇತ್ಯಾದಿಗಳನ್ನು ನೀಡಿ ಬೆಳೆಸಿದೆ. ಈ ಗೋಲ್ ಮಾಲ್ ಪ್ರಕರಣದಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ನ ಸ್ಯಾಮ್ ಪಿತ್ರೋಡ ಹಾಗೂ ಸುಮನ್ ದುಬೆ ಸಹ ಶಾಮೀಲಾಗಿದ್ದಾರೆಂದು ಸುಬ್ರಹ್ಮಣ್ಯಂ ಸ್ವಾಮಿ ಆರೋಪಿಸಿದ್ದಾರೆ.

ಪ್ರಕರಣದ ಮುಂದಿನ ವಿಚಾರಣೆ ದೆಹಲಿಯ ಮೆಟ್ರೋಪೊಲಿಟಿನ್ ನ್ಯಾಯಾಲಯದಲ್ಲಿ ಜೂನ್ 23ಕ್ಕೆ ನಡೆಯಲಿದೆ.

ಉಡುಪಿ: ಮಾಹಿತಿ ಹಕ್ಕು ಕಾಯಿದೆ-2005ರಂತೆ ನಿಗದಿತ ಅವಧಿಯೊಳಗೆ ಅರ್ಜಿದಾರರಿಗೆ ಕೋರಿದ ಮಾಹಿತಿ ಮತ್ತು ದಾಖಲೆಗಳನ್ನು ನೀಡಿದೆ ಕಾಯಿದೆಯನ್ನು ಉಲ್ಲಂಘಿಸಿದ ಉಡುಪಿಯ ಬಳಕೆದಾರರ ವೇದಿಕೆ ಮತ್ತು ಜಿಲ್ಲಾ ಮಾಹಿತಿ ಕೇಂದ್ರದ ಸಂಚಾಲಕರಾದ ಕೆ.ದಾಮೋದರ ಐತಾಳ್ ಅವರಿಗೆ ಮೇಲ್ಮನವಿ ಪ್ರಾಧಿಕಾರಿಯಾಗಿರುವ ಉಡುಪಿ ಜಿಲ್ಲಾಧಿಕಾರಿ ಡಾ.ಮುದ್ದುಮೋಹನ್ ಅವರು ಮುಂದಿನ ಒಂದು ತಿಂಗಳೊಳಗೆ ಅರ್ಜಿದಾರರು ಕೋರಿದ ಮಾಹಿತಿ ಮತ್ತು ದಾಖಲೆಗಳನ್ನು ಉಚಿತವಾಗಿ ಮತ್ತು ನೋಂದಾಯಿತ ಅಂಚೆಯಲ್ಲಿ ಒದಗಿಸುವಂತೆ ಆದೇಶ ನೀಡಿದ್ದಾರೆ.

ಉಡುಪಿ ಲಕ್ಷ್ಮೀಂದ್ರನಗರ ನಿವಾಸಿ, ಮಾಹಿತಿ ಹಕ್ಕು ಕಾರ್ಯಕರ್ತರಾದ ಕೆ.ಎಸ್.ಉಪಾಧ್ಯ ಅವರು ಜನವರಿ 4ರಂದು ಬಳಕೆದಾರರ ವೇದಿಕೆ ಮತ್ತು ಗ್ರಾಹಕರ ಮಾಹಿತಿ ಕೇಂದ್ರದ ಸಾರ್ವಜನಿಕ ಮಾಹಿತಿ ಅಧಿಕಾರಿಯೂ, ಸಂಚಾಲಕರೂ ಆದ ಕಡಿಯಾಳಿ ದಾಮೋದರ ಐತಾಳ್ ಅವರಿಗೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿ, ಸಂಸ್ಥೆಯ ಎರಡು ವರ್ಷಗಳ ಅಯವ್ಯಯ ಪಟ್ಟಿ ಮತ್ತು ಹತ್ತು ಸಾವಿರಕ್ಕೆ ಮೇಲ್ಪಟ್ಟ ವೋಚರ್ ಗಳ ಯಥಾ ಪ್ರತಿಗಳನ್ನು ನೀಡುವಂತೆ ಕೋರಿದ್ದರು.

ಅರ್ಜಿ ಸಲ್ಲಿಸಿ ತಿಂಗಳು ಕಳೆದರೂ ದಾಮೋದರ ಐತಾಳ್ ಅವರು ಅರ್ಜಿದಾರರಿಗೆ ಮಾಹಿತಿ ನೀಡದ ಕಾರಣ, ಫೆಬ್ರವರಿ 7ರಂದು ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆದ ಮೊದಲ ದಿನದಂದು, ದಾಮೋದರ ಐತಾಳರು ಎರಡು ವಾರಗಳ ಕಾಲಾವಕಾಶ ಕೇಲಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಗಿತ್ತು. ಎರಡನೇ ವಿಚಾರಣೆಯ ದಿನದಂದು ಜಿಲ್ಲಾಧಿಕಾರಿಗಳು ಚುನಾವಣಾ ಒತ್ತಡದಲ್ಲಿದ್ದುದರಿಂದ ವಿಚರಣೆಯನ್ನು ಮತ್ತೆ ಮುಂದೂಡಿ, ಮೇ.26ಕ್ಕೆ ನಿಗದಿಪಡಿಸಿದ್ದರು.

ಮೇ.26ರಂದು ಪ್ರಕರಣದ ವಿಚಾರಣೆ ನಡೆಸಿದ ಮೇಲ್ಮನವಿ ಪ್ರಾಧಿಕಾರಿಯೂ ಅದ ಜಿಲ್ಲಾಧಿಕಾರಿ ಮುದ್ದುಮೋಹನ್ ಅವರು, ಸಂಸ್ಥೆ ಅರ್ಜಿದಾರರಿಗೆ ಅವರು ಕೋರಿದ ಮಾಹಿತಿಗಳನ್ನು ನೀಡದೆ ತಪ್ಪೆಸಗಿದೆ ಎಂದು ಸ್ಪಷ್ಟಪಡಿಸಿ, ತಿಂಗಳೊಳಗೆ ಮಾಹಿತಿಗಳನ್ನು ಉಚಿತವಾಗಿ ನೋಂದಾಯಿತ ಅಂಚೆಯಲ್ಲಿ ಅರ್ಜಿದಾರರಿಗೆ ಕಳುಹಿಸಿಕೊಡುವಂತೆ ಆದೇಶಿಸಿದರು.

ಉಡುಪಿ: ಕೋರಿದ ಮಾಹಿತಿಗಳನ್ನು ನೀಡದೆ ಮಾಹಿತಿ ಹಕ್ಕು ಕಾಯಿದೆ-2005ನ್ನು ಉಲ್ಲಂಘನೆ ಮಾಡಿದ ಉಡುಪಿ ನಗರಸಭೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ಕಚೇರಿ ವ್ಯವಸ್ಥಾಪಕರು ಹಾಗೂ ಪ್ರಥಮ ಮೇಲ್ಮನವಿಪ್ರಾಧಿಕಾರಿಯೂ ಆಗಿರುವ ಪೌರಾಯುಕ್ತರ ವಿರುದ್ಧ ಗುಂಡಿಬೈಲು ನಿವಾಸಿ ಗೀತಾ ರಾವ್ ಎಂಬವರು ಕರ್ನಾಟಕ ಮಾಹಿತಿ ಆಯೋಗಕ್ಕೆ ಅಪೀಲು ಮಾಡಿದ್ದಾರೆ.

ಗೀತಾ ರಾವ್ ಅವರು 2013ರ ನವೆಂಬರ್ 12ರಂದು ನಗರಸಭೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಬಡಗುಬೆಟ್ಟು ಕೃಷ್ಣಮೂರ್ತಿ ಐತಾಳ್ ಇವರಿಗೆ ಸೇರಿದ ಸರ್ವೆ ನಂಬ್ರ 135/9ರ 4 ಸೆಂಟ್ಸ್ ಸ್ಥಳದಲ್ಲಿ ಕಟ್ಟಿದ ಕಟ್ಟಡಕ್ಕೆ ಪುರಸಭಾ ಕಾಯ್ದೆ 1964ರ ನಿಯಮ ಕಲಂ 107ರಂತೆ ನೀಡಿದ ಕ್ರಮ ಸಂಖ್ಯೆ 8ರ ಕಡತಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ನೀಡಿದ ಅರ್ಜಿ, ಕಚೇರಿ ಟಿಪ್ಪಣಿ, ಬರೆದ ಪತ್ರಗಳು, ಬಂದ ಉತ್ತರಗಳು, ಸ್ಥಳ ತನಿಖಾ ವರದಿ ಮತ್ತು ಸಿಬ್ಬಂದಿಗಳು, ಅಭಿಯಂತರರು, ಅಧಿಕಾರಿಗಳ ಹೆಸರು, ವಿಳಾಸ, ಹುದ್ದೆ ಹಾಗೂ ನಗರಸಭೆ ಆಡಳಿತ ಮಾಡಿದ ಆದೇಶದ ಪ್ರತಿಗಳನ್ನು ಅರ್ಜಿಯಲ್ಲಿ ಕೋರಲಾಗಿತ್ತು.

ಅರ್ಜಿ ಸಲ್ಲಿಸಿ ತಿಂಗಳು ಕಳೆದರೂ ಮಾಹಿತಿ ಕೊಡದ ಕಾರಣ, ಕಾಯಿದೆಯಂತೆ ಗೀತಾ ರಾವ್ ಅವರು ಡಿಸೆಂಬರ್ 21ರಂದು ಪೌರಾಯುಕ್ತರಿಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಸಲ್ಲಿಸಿದ ಬೆನ್ನಿಗೆ, ಅಂದರೆ, ಡಿ.23ರಂದು ಸಾರ್ವಜನಿಕ ಮಾಹಿತಿ ಅಧಿಕಾರಿ ಗೀತಾ ರಾವ್ ಅವರಿಗೆ ಕೆಲವೊಂದು ಮಾಹಿತಿಗಳನ್ನು ನೀಡಿದರು. ಆದರೆ, ಹೀಗೆ ನಿಡಿದ ಮಾಹಿತಿಗಳು ಗೀತಾ ರಾವ್ ಅವರು ಕೇಳಿದ ಮಾಹಿತಿಗಳಾಗಿರದೆ ಬೇರೆಯದೇ ಆದ ಮಾಹಿತಿಗಳಾಗಿದ್ದವು.

ಕೇಳಿದ ಮಾಹಿತಿಯನ್ನು ನೀಡದೆ ಕೇಳದ ಮಾಹಿತಿಯನ್ನು ನೀಡಿದ ಬಗ್ಗೆಯೂ ಗೀತಾ ರಾವ್ ಅವರು 2014ರ ಜನವರಿ 10ರಂದು ಪೌರಾಯುಕ್ತರಿಗೆ ಪತ್ರ ಬರೆದು ತಿಳಿಸಿದ್ದರು. ಆದರೂ ಪ್ರಥಮ ಮೇಲ್ಮನವಿ ಸಲ್ಲಿಸಿ ತಿಂಗಳು ಕಳೆದರೂ ನಗರಸಭೆಯ ಕಚೇರಿ ವ್ಯವಸ್ಥಾಪಕರು ಹಾಗೂ ಪೌರಾಯುಕ್ತರು ಕೋರಿದ ಮಾಹಿತಿಗಳನ್ನು ನೀಡದ ಹಿನ್ನೆಲೆಯಲ್ಲಿ ಇದೀಗ ಗೀತಾ ರಾವ್ ಮಾಹಿತಿ ಆಯೋಗಕ್ಕೆ ಎರಡನೇ ಅಪೀಲ್ ಸಲ್ಲಿಸಿದ್ದಾರೆ.

# 16ನೇ ಲೋಕಸಭೆಗೆ ಕರ್ನಾಟಕದಲ್ಲಿಂದು ಮತದಾನ ನಡೆಯುತ್ತಿದೆ. ಇಂದು ಮಾತ್ರ, ಈ ಮತಗಟ್ಟೆಗೆ ಮಾತ್ರವೇ ಜಾತಿ, ಮತ, ವರ್ಗ, ವರ್ಣ ಬೇಧವಿಲ್ಲದೆ ಮತದಾರನಿಗೆ ಒಳ ಪ್ರವೇಶಿಸಿ ಮತದಾನ ಮಾಡಲು ಮುಕ್ತ ಅವಕಾಶ ಕಲ್ಪಿಸಿಕೊಡಲಾಗಿದೆ. ಮತದಾನ ಮಾಡಲು ಮತಗಟ್ಟೆಗೆ ಆಗಮಿಸುವ ಮತದಾರನಿಗೆ ಅತೀವ ಗೌರವ. ಮತದಾನ ಮಾಡಿ ಮರಳಿದ ಮರುಕ್ಷಣದಿಂದ ಮತದಾರ ಪ್ರಭು ಇಲ್ಲಿ ಕಾಲಕಸ.

ಗೆದ್ದ ಅಭ್ಯರ್ಥಿ ಸಂಸತ್ ಕಲಾಪದಲ್ಲಿ ಭಾಗವಹಿಸಿದ್ದಾನಾ, ಇಲ್ಲವಾ ?, ಯಾಕೆ ಭಾಗವಹಿಸಿಲ್ಲ, ಭಾಗವಹಿಸಿದ ದಿನದಂದು ಯಾವ ವಿಷಯದ ಮೇಲೆ ಹೇಗೆ, ಏನು ಮಾತನಾಡಿದ್ದಾನೆ, ಯಾವ ಪ್ರಶ್ನೆ ಕೇಳಿದ್ದಾನೆ ? ಸಂಸತ್ ನಲ್ಲಿ ಪ್ರಶ್ನೆ ಕೇಳಲು, ಕೇಳದೇ ಇರಲು ಯಾವ ಉದ್ಯಮಿಯಿಂದ, ಯಾವ ಕಾರ್ಪೋರೇಟ್ ಕಂಪೆನಿಯಿಂದ ಕೋಟಿಗಳ ಲೆಕ್ಕದಲ್ಲೋ, ಲಕ್ಷಗಳ ಲೆಕ್ಕದಲ್ಲೋ ಎಷ್ಟು ಹಣ ಪಡೆದಿದ್ದಾನೆ, ಯಾವ ಅಮಿಷಗಳಿಗೆ ಒಳಗಾಗಿದ್ದಾನೆ ? ಇಂಥ ಯಾವೊಂದು ವಿಚಾರಗಳೂ ಮಹಾನ್ ಮತದಾರನಿಗೆ ಗೊತ್ತಾಗುವುದಿಲ್ಲ. ಸಂಸತ್ ಜನಪ್ರತಿನಿಧಿ ಇದನ್ನೆಲ್ಲ ಹೇಳುವುದೂ ಇಲ್ಲ. ಮತದಾರ ಪ್ರಭು ಇದನ್ನೆಲ್ಲ ಕೇಳುವುದೂ ಇಲ್ಲ. ಕೇಳಬೇಕೆಂದು ಮತದಾರನಿಗೆ ಗೊತ್ತೂ ಇಲ್ಲ. ಗೊತ್ತಿದ್ದರೂ ಅದ್ಯಾವುದೋ ಒಂದು ಅವ್ಯಕ್ತ ಕಾರಣಕ್ಕೆ ಆತ ಅದನ್ನು ಕೇಳುವುದೂ ಇಲ್ಲ.

ಅಭಿವೃದ್ಧಿಯ ಹೆಸರಲ್ಲಿ ರಸ್ತೆಗೋ, ಚರಂಡಿಗೋ, ಸೇತುವೆಗೋ, ಕಟ್ಟಡಕ್ಕೋ ಬಿಡುಗಡೆಯಾದ ಹಣದ ಪಟ್ಟಿಯನ್ನು ಮುಂದಿನ ಚುನಾವಣೆಯಲ್ಲಿ ಜನಪ್ರತಿನಿಧಿ ಬಿಡುಗಡೆ ಮಾಡುತ್ತಾನೆ. ಆದರೆ, ಇದರಲ್ಲಿ ತಾನು ಹೊಡೆದ ಕಮಿಷನ್ ಹಣ ಎಷ್ಟು ಎಂಬುದನ್ನು ಮಾತ್ರ ಆತ ಯಾವ ಕಾರಣಕ್ಕೂ ಈತ ಬಾಯಿಬಿಡಲಾರ. ಬಿಡುಗಡೆಯಾದ ಹಣದಲ್ಲಿ ಎಷ್ಟು ಲಕ್ಷದ, ಎಷ್ಟು ಕೋಟಿಯ ಕಾಮಗಾರಿ ನಡೆದಿದೆ, ಎಷ್ಟು ಹಣ ಗುತ್ತಿಗೆದಾರ, ಸರಕಾರಿ ಅಧಿಕಾರಿ ಹಾಗೂ
ರಾಜಕಾರಣಿಗಳು ಗುಳುಂ ಮಾಡಿದರು ಎಂಬುದೂ ಬಯಲಾಗುವುದೇ ಇಲ್ಲ.

ಜನಪ್ರತಿನಿಧಿಯಾಗಿ ಶಿಲಾನ್ಯಾಸ, ಶಂಕುಸ್ಥಾಪನೆ, ಉದ್ಘಾಟನೆ ಮಾಡಿದ್ದು ಬಹಿರಂಗ ಮಾಡಲಾಗುತ್ತದೆ. ಆದರೆ, ಮನೆಯಲ್ಲಿರುವಾಗ, ಕಚೇರಿಯಲ್ಲಿರುವಾಗ, ಅಥವಾ ಇತರ ಸ್ಥಳಗಳಲ್ಲಿ ಈ ಜನಪ್ರತಿನಿಧಿ ಯಾವಾಗ್ಯಾವಾಗ, ಯಾರನ್ನೆಲ್ಲ ಭೇಟಿಯಾಗಿದ್ದಾನೆ, ಅಲ್ಲಿ ರಹಸ್ಯವಾಗಿ ನಡೆದ ಮಾತುಕತೆ ಏನು, ಯಾರ ಕೊಲೆಗೆ ಸ್ಕೆಚ್ ಹಾಕಲಾಯಿತು, ಯಾರಿಗೆ ಯಾರ ಮೂಲಕ ಹೇಗೆ ಬೆದರಿಕೆ ಹಾಕಿಸಲಾಯಿತು, ಯಾರನ್ನು ಯಾಕಾಗಿ ವರ್ಗಾವಣೆ ಮಾಡಿಸಲಾಯಿತು, ಯಾರಿಗೆ, ಯಾರ ಮೂಲಕ ದ್ರೋಹ ಬಗೆಯಲಾಯಿತು ಒಂದೂ ಕೂಡಾ ಯಾವುದೇ ಕಾರಕ್ಕೂ ಬೆಳಕಿಗೆ ಬರುವುದೇ ಇಲ್ಲ. ಇಂಥದ್ದೆಲ್ಲಾ ಬೆಳಕಿಗೆ ಬರಲು ಇಲ್ಲಿ ಈ ಪ್ರಜಾಪ್ರಭುತ್ವದಲ್ಲಿ ವ್ಯವಸ್ಥೆಯೇ ಇಲ್ಲ. ಹೀಗಾಗಿಯೇ, ಜನಪ್ರತಿನಿಧಿಯೊಬ್ಬನ ಅತೀ ಹೆಚ್ಚು ಕರ್ಮಕಾಂಡಗಳು ನಡೆಯುವುದು ಇಲ್ಲಿ ಗುಪ್ತವಾಗಿಯೇ. ಹೀಗೆ ಗುಪ್ತವಾಗಿ ಮಾಡಿದ ತನ್ನ ಸಾಧನೆಗಳನ್ನು ಇಲ್ಲಿನ ಜನಪ್ರತಿನಿಧಿ ಹೇಳಿಕೊಳ್ಳಲಾರ. ಮತದಾರನಿಗದು ತಿಳಿಯುವುದೇ ಇಲ್ಲ.

ಶಿಲಾನ್ಯಾಸ, ಶಂಕುಸ್ಥಾಪನೆ, ಉದ್ಘಾಟನೆ ಇತ್ಯಾದಿಗಳು ಮಾತ್ರ ಇಲ್ಲಿ ಬಹಿರಂಗ, ನಾಲ್ಕು ಕೋಣೆಗಳೊಳಗೆ ಕುಳಿತು ಹೆಣೆದ ಮೋಸ, ವಂಚನೆ, ದ್ರೋಹ, ಅನ್ಯಾಯಗಳು ಎಲ್ಲವೂ ರಹಸಗಳೇ. ಇವುಗಳನ್ನೆಲ್ಲಾ ಮಾಹಿತಿ ಹಕ್ಕು ಕಾಯಿದೆ ಪ್ರಕಾರ ಅರ್ಜಿ ಹಾಕಿ ಜಗಜ್ಜಾಹೀರುಪಡಿಸಲು ಸಾಧ್ಯವೇ ಇಲ್ಲ. ಇದು ಜನಪ್ರತಿನಿಧಿಗಳಿಗೆ ಬಹಳ ಚೆನ್ನಾಗಿಯೇ ಗೊತ್ತಿರುತ್ತದೆ. ಅದಕ್ಕಾಗಿಯೇ, ನಮ್ಮ ಜನಪ್ರತಿನಿಧಿಗಳು ಆಫ್ ದಿ ರೆಕಾರ್ಡ್ ಮಾಡುವ ಕೆಲಸಗಳೇ ಹೆಚ್ಚು.

ಭಾರತವೆಂಬ ಪ್ರಜಾಪ್ರಭುತ್ವ ದೇಶದಲ್ಲಿ ಬಹುತೇಕ ಪ್ರಮುಖ ರಾಜಕೀಯ ಪಕ್ಷಗಳ ಚುನಾವಣಾ ಅಭ್ಯರ್ಥಿಗಳಿಗೂ ಬಹಳ ಚೆನ್ನಾಗಿಯೇ ಗೊತ್ತು, ನಮ್ಮ ಮತದಾರ ಪ್ರಜ್ಞಾವಂತ ಮತದಾರರಲ್ಲ ಎಂದು. ನಮ್ಮ ಮತದಾರ ಬುದ್ಧಿವಂತನೆಂಬುದು ರಾಜಕೀಯ ಪಕ್ಷಗಳಿಗೆ, ರಾಜಕಾರಣಿಗಳಿಗೆ ಚೆನ್ನಾಗಿಯೇ ಗೊತ್ತು. ಅದಕ್ಕಾಗಿಯೇ ರಾಜಕಾರಣಿಗಳು ಮತದಾರನಿಗೆ ಹಂಚುತ್ತಾರೆ ಹಣ, ಹೆಂಡ, ಸೀರೆ, ಸಿಮೆಂಟು, ಟಿವಿ ಇತ್ಯಾದಿ ಇತ್ಯಾದಿ..

ಯಾವುದನ್ನೂ ಹಂಚದಿದ್ದರೂ, ಮತದಾರನನ್ನು ನಿರ್ಲಕ್ಷಿಸಿದರೂ ಪರವಾಗಿಲ್ಲ, ಆತ ಮತದಾನದ ದಿನದಂದು ಮತಗಟ್ಟೆಗೆ ಬಂದು ಮತದಾನ ಮಾಡಿಯೇ ಮಾಡುತ್ತಾನೆ. ಯಾಕೆಂದರೆ, ಅದೊಂದೇ ದಿನ ಇರುವುದು ಮತದಾರನಿಗೆ, ತನ್ನ ಅಸ್ತಿತ್ವವನ್ನು ರುಜುವಾತುಪಡಿಸಲು. ತನಗೆ ತಾನೇ ಹೆಮ್ಮೆಪಟ್ಟುಕೊಳ್ಳಲು. ಮತದಾನ ಮಾಡುವುದು ಆದ್ಯ ಕರ್ತವ್ಯವೆಂದು ಹೇಗೂ ಸರಕಾರವೇ ಸರಕಾರಿ ಕರ್ಚಿನಲ್ಲಿ ಮಾಡಿರುತ್ತವೆ ತಾನೇ ಪ್ರಚಾರ.

ಹೋಗಲಿ, ಒಂದಷ್ಟು ಮಂದಿ ಮತದಾನ ಮಾಡದಿದ್ದರೂ ತಲೆ ಹೋಗುವುದೇನೂ ಇಲ್ಲ. ಚಲಾವಣೆಯಾದ ಮತದಲ್ಲೇ ಅದೆಷ್ಟೇ ಶೇಕಡಾವಾದರೂ ಇರಲಿ, ಚಲಾವಣೆಯಾದ ಮತಗಳಲ್ಲೇ ಸೋಲು ಗೆಲುವು ನಿರ್ಧರಿಸಲ್ಪಡುತ್ತದೆ. ಹಾಗಾಗಿ ಮತದಾರ ಮತಗಟ್ಟೆಗೆ ಬರದಿದ್ದರೂ ಅಭ್ಯರ್ಥಿಗೇನೂ ಚಿಂತೆ ಇಲ್ಲ. ಮತದಾನ ಮಾಡಲಿ, ಮಾಡದೇ ಉಳಿಯಲಿ ಇಬ್ಬರೂ ಚಿಂತಿಸುವುದು ಮಾತ್ರ ಅನಿವಾರ್ಯ. ಯಾಕೆಂದರೆ, ಗೆದ್ದ ಬಳಿಕ ಅಭ್ಯರ್ಥಿ ಚಿಂತಿಸುವುದು ಕಾಪೋರೇಟ್ ಸಂಸ್ಥೆಗಳನ್ನು, ಕೋಟ್ಯಧಿಪತಿ ಉದ್ಯಮಿಗಳನ್ನು ಉದ್ಧರಿಸುವುದು ಹೇಗೆ ಎಂದು. ಅವರಿಗದರ ಚಿಂತೆ. ಭಾರತದ ಬಡವರಿಗೆ ಅವ್ಯವಸ್ಥೆಗಳೆಂಬ ವ್ಯವಸ್ಥೆಯಲ್ಲಿ ಬದುಕುವುದು ಹೇಗೆ ಎಂಬುದೇ ದೊಡ್ಡ ಚಿಂತೆ. ಈ ಚಿಂತೆಯಲ್ಲೇ ದೇಶದ ಬೆನ್ನೆಲುಬು ಎನ್ನಿಸಿದ ರೈತರು ಆತ್ಮಹತ್ಯೆಗೆ ಶರಣಾಗುತ್ತಾರೆ.

ಜನಾಂಗ ಧ್ವೇಷಿಗಳು, ದೇಶವನ್ನೇ ಮಾರಾಟ ಮಾಡಿದ ಮಹಾ ಭ್ರಷ್ಟಚಾರಿಗಳು ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ದೇಶದಲ್ಲಿ ಮಾತ್ರ ಹೀರೋಗಳಾಗಲು ಸಾಧ್ಯ, ನಾಯಕರಾಗಲು ಸಾಧ್ಯ. ಸಂವಿಧಾನ ವಿರೋಧಿ ಆಶಯಗಳಿರುವ, ಸಂವಿಧಾನ ವಿರೋಧವಾಗಿ, ಅದೂ ಬಹಿರಂಗವಾಗಿಯೇ ನಡೆದುಕೊಳ್ಳುವ ರಾಜಕೀಯ ಪಕ್ಷಗಳನ್ನು ಸಹ ಇಲ್ಲಿ ಸ್ಥಾಪಿಸಬಹುದು, ಬಹಿರಂಗವಾಗಿಯೇ ಸಂವಿಧಾನದ ಆಶಯಕ್ಕೆ ವಿರುದ್ಧವಾಗುವ ಕೆಲಸ ಕಾರ್ಯಗಳನ್ನು ಮಾಡುತ್ತಾ ಉಳಿದುಕೊಳ್ಳಲು, ಬೆಳೆಸಿಕೊಳ್ಳಲು ಸಾಧ್ಯ. ಕಾರಣ, ಎಲ್ಲರಿಗೂ ಆಡಳಿತ ಬೇಕು. ಆಡಳಿತದ ಮೂಲಕ ತಮ್ಮ ಸ್ವಾರ್ಥ ಸಾಧಿಸಬೇಕು. ಚುನಾವಣೆಯೇ ಪ್ರಜಾಪ್ರಭುತ್ವ ಸಾರ ಸರ್ವಸ್ವ. ಈ ಸಾರ ಸರ್ವಸ್ವವನ್ನೇ ತಮಗೆ ಬೇಕಾದಾಗ ಬೇಕಾದಂತೆ ದುರ್ಬಳಕೆ ಮಾಡಿಕೊಳ್ಳುವ ರಾಜಕೀಯ ಪಕ್ಷಗಳೇ ಇಲ್ಲಿ ಪ್ರಭಾವಶಾಲಿಗಳು. ಮತದಾರ ಪ್ರಭುವಿಗೂ ಈ ಭ್ರಷ್ಟ, ದುಷ್ಟ ರಾಜಕೀಯ ಪಕ್ಷಗಳೇ ಅಭಿಮಾನ-ಹೆಮ್ಮೆ !

ಸೋನಿಯಾ-ರಾಹುಲ ಗಾಂಧಿಯೇ ಇರಲಿ, ನರೇಂದ್ರ ಮೋದಿಯೇ ಆಗಲಿ ಗದ್ದುಗೆ ಏರಿದವರಿಗೆ ಅವರದೇ ಆದ ಅಜೆಂಡಾಗಳಿವೆ. ಇವರನ್ನು ಬೆಂಬಲಿಸುತ್ತಿರುವವರಿಗೂ, ಆ ಅಜೆಂಡಾಗಳಲ್ಲಿ ಬಹಿರಂಗದ್ದೂ ಇರಬಹುದು, ರಹಸ್ಯವಾದುದೂ ಇರಬಹುದು. ಬಹಿರಂಗವಾಗಿರುವುದು ಬಹಿರಂಗಕ್ಕೆ ಬರಬಹುದು. ರಹಸ್ಯವಾಗಿರುವುದರಲ್ಲಿ ಕೆಲವೊಂದು ಬಹಿರಂಗವಾಗಬಹುದು. ಕೆಲವೊಂದು ಗುಪ್ತವಾಗಿಯೇ ಉಳಿದುಬಿಡಬಹುದು. ಗುಪ್ತವಾಗಿರುವುದು ಬಹಿರಂಗಕ್ಕೆ ಬರುವಾಗ ಕಾಲ ಮಿಂಚಿರುತ್ತದೆ. ಆಗ ಬಡ ಭಾರತ ಸೋತಿರುತ್ತದೆ. – ಶ್ರೀರಾಮ ದಿವಾಣ.

ಉಡುಪಿ: ಭಾರತೀಯ ಜನತಾ ಪಾರ್ಟಿಯ ಕರ್ನಾಟಕ ರಾಜ್ಯ ಸಮಿತಿಯು ಪ್ರಕಟಿಸಿದ ಮೂರು ವಿಧದ ಪ್ರತ್ಯೇಕ ಚುನಾವಣಾ ಪ್ರಚಾರ ಕರಪತ್ರಗಳ ವಿರುದ್ಧ ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ಶ್ರೀರಾಮ ದಿವಾಣ ನೀಡಿದ ದೂರಿನ ಆಧಾರದಲ್ಲಿ ಜಿಲ್ಲಾ ಮಟ್ಟದ ಮಾಧ್ಯಮ ದೃಢಪತ್ರ ಹಾಗೂ ಪರಿಶೀಲನಾ ಸಮಿತಿ (ಎಂಸಿಎಂಸಿ)ಯು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಯವರಿಗೆ ವಿವರಣೆ ನೀಡುವಂತೆ ಕೋರಿ ನೋಟೀಸ್
ಜಾರಿಗೊಳಿಸಿದೆ.

ಯಾವುದೇ ಮಾಹಿತಿ ಇಲ್ಲದ ಮತ್ತು ಅಪೂರ್ಣ ಮಾಹಿತಿಗಳಿರುವ ಮೂರು ವಿಧದ ಚುನಾವಣಾ ಪ್ರಚಾರ ಕರಪತ್ರಗಳನ್ನು ಬಿಜೆಪಿ ಮತದಾರರಿಗೆ ವಿತರಿಸುತ್ತಿದ್ದು, ಇವುಗಳ ವಿರುದ್ಧ ಶ್ರೀರಾಮ ದಿವಾಣ ಅವರು, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು, ಉಡುಪಿ ಜಿಲ್ಲಾ
ಚುನಾವಣಾಧಿಕಾರಿಗಳು, ಸಾಮಾನ್ಯ ಚುನಾವಣಾ ವೀಕ್ಷಕರು ಹಾಗೂ ಚುನಾವಣಾ ವೆಚ್ಚ ವೀಕ್ಷಕರಿಗೆ ಎ.2ರಂದು ದೂರು ನೀಡಿದ್ದರು.

‘ಭಾರತೀಯ ಜನತಾ ಪಾರ್ಟಿ – ಕರ್ನಾಟಕ, ಸಂಪದ್ಭರಿತ-ಸುರಕ್ಷಿತ-ಸಧೃಢ ಭಾರತಕ್ಕಾಗಿ, ನರೇಂದ್ರ ಮೋದಿ, ಭಾರತ ಗೆಲ್ಲಿಸಿ’ ಎಂಬ ಶಿರ್ಷಿಕೆ ಮತ್ತು ನರೇಂದ್ರ ಮೋದಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಇವರುಗಳ ಭಾವಚಿತ್ರ ಇರುವ ಆರು ಪುಟಗಳ ಪ್ರಚಾರ ಕರಪತ್ರದಲ್ಲಿ ಮುದ್ರಿಸಿದವರ, ಮುದ್ರಣ ಸಂಸ್ಥೆಯ ಮತ್ತು ಮುದ್ರಿತ ಪ್ರತಿಗಳ ಸಹಿತ ಯಾವುದೇ ಮಾಹಿತಿಗಳನ್ನೂ ಮುದ್ರಿಸಲಾಗಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

‘ಜನಜಾಗರಣ ಅಭಿಯಾನ, ಕಾಂಗ್ರೆಸ್ ತೊಲಗಿಸಿ ದೇಶ ಉಳಿಸಿ’ ಎಂಬ ಶಿರ್ಷಿಕೆ ಇರುವ ನಾಲ್ಕು ಪುಟಗಳ ಪ್ರಚಾರ ಕರಪತ್ರವನ್ನು ಭಾರತೀಯ ಜನತಾ ಪಾರ್ಟಿ ಕರ್ನಾಟಕ ಮುದ್ರಿಸಿದೆ ಎಂದು ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ. ‘ಮುದ್ರಣ: ರಾಷ್ಟ್ರೋತ್ಥಾನ ಮುದ್ರಣಾಲಯ’ ಎಂದು ಮುದ್ರಿಸಲಾಗಿದೆ. ಆದರೆ ಮುದ್ರಿತ ಪ್ರತಿಗಳ ವಿವರ ಇಲ್ಲ. ಆದುದರಿಂದ ಈ ಬಗ್ಗೆ ಪರಿಶೀಲನೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಂದು ದೂರಿನಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು.

‘ಈ ಬಾರಿ ಮೋದಿ ಸರ್ಕಾರ’ ಎಂಬ ಶಿರ್ಷಿಕೆ ಇರುವ ಮತ್ತು ನರೇಂದ್ರ ಮೋದಿ ಭಾವಚಿತ್ರ ಇರುವ ಎರಡು ಪುಟಗಳ ಕರಪತ್ರವನ್ನು ಬಿಜೆಪಿ ಕರ್ನಾಟಕ ಮುದ್ರಿಸಿದೆ. ಮುದ್ರಿತ ಪ್ರತಿಗಳು ಒಂದು ಲಕ್ಷ ಎಂದು ಮುದ್ರಿಸಲಾಗಿದೆ. ಮುದ್ರಣಗೊಂಡಿರುವುದು ‘ಸ್ಪ್ಯಾನ್ ಪ್ರಿಂಟ್’ ಎಂದು ಇದೆ. ಆದರೆ, ಯಾವ ಊರಿನ ಉಲ್ಲೇಖವಿಲ್ಲ. ಈ ಕರಪತ್ರವನ್ನು ರಾಜ್ಯ ಮಟ್ಟದಲ್ಲಿ ವಿತರಿಸಲು ಮುದ್ರಿಸಿದಂತೆ ಇದ್ದು, ಮುದ್ರಿತ ಪ್ರತಿಗಳು ಒಂದು ಲಕ್ಷ ಎಂದು ಹೇಳಲಾಗಿದೆಯಾದರೂ, ಮುದ್ರಿತ ಪ್ರತಿಗಳ ಸಂಖ್ಯೆ ಹಲವು ಲಕ್ಷಗಳು ಇರುವ ಸಾಧ್ಯತೆ ಇದೆ. ಆದುದರಿಂದ ಈ ಬಗ್ಗೆ ಸರಿಯಾದ ರೀತಿಯಲ್ಲಿ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಬಿಜೆಪಿ ಪ್ರಕಟಿಸಿದ ಪ್ರಚಾರ ಕರಪತ್ರಗಳು ಚುನಾವಣಾ ನೀತಿ ಸಂಹಿತೆಯ
ಉಲ್ಲಂಘನೆಯಾಗಿರುವುದರಿಂದ, ಇವುಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಶ್ರೀರಾಮ ದಿವಾಣ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದರು.

# ‘ಮಾಹಿತಿ ಹಕ್ಕು ಅಧಿನಿಯಮ ಜಾರಿಯಾದುದು 2005ರಲ್ಲಿ. 2007ರಿಂದ ನಾನು ಈ ಕಾಯ್ದೆಯನ್ನು ಉಪಯೋಗಿಸಿಕೊಂಡು ಬಂದಿದ್ದೇನೆ. 2012ರವರೆಗೂ ನಾನು ಕೇಳಿದ ಬಹುತೇಕ ಮಾಹಿತಿಗಳನ್ನು ಮತ್ತು ದಾಖಲೆಗಳನ್ನು ಸಂಬಂಧಿಸಿದ ಸರಕಾರಿ ಕಚೇರಿಗಳ ಮತ್ತು ಅನುದಾನಿತ ಸಂಸ್ಥೆಗಳ ಅಧಿಕಾರಿಗಳು ನೀಡುತ್ತಾ ಬಂದಿದ್ದಾರೆ. ಮೂರ್ನಾಲ್ಕು ಸಂದರ್ಭಗಳಲ್ಲಿ ಸಂಬಂಧಪಟ್ಟ ಸಂಸ್ಥೆಗಳು ಮಾಹಿತಿ ಮತ್ತು ದಾಖಲೆ ಕೊಡುವಲ್ಲಿ ಅತೀ ಬುದ್ದಿವಂತಿಕೆಯನ್ನು ಪ್ರದರ್ಶಿಸಿದ್ದರು. ನನಗೂ ಸಂಬಂಧಿಸಿದ ಪ್ರಕರಣಗಳಲ್ಲಿ ಆಸಕ್ತಿ ಕಡಿಮೆ ಇದ್ದ ಕಾರಣ ಆ ಪ್ರಕರಣಗಳನ್ನು ಮುಂದುವರಿಸದೆ ಕೈಬಿಟ್ಟಿದ್ದೆ.

ಇದೀಗ 2014ರ ಫೆಬ್ರವರಿಯಲ್ಲಿ ಒಟ್ಟು ಐದು ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಮಾಹಿತಿ ಆಯೋಗದ ಮೆಟ್ಟಿಲು ಹತ್ತುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಐದೂ ಪ್ರಕರಣಗಳು ಗಂಭೀರವಾದ ಪ್ರಕರಣಗಳೇ. ಅತೀ ಸಾಮಾನ್ಯ, ಸಾಮಾನ್ಯ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಅರ್ಜಿದಾರರಿಗೆ ಕೋರಿದ ಮಾಹಿತಿಗಳನ್ನು ಸಮಸ್ಯೆಯನ್ನು ಉಂಟುಮಾಡದೆ ಕೊಡುವ
ಅಧಿಕಾರಿಗಳು, ಗಂಭೀರವಾದ ಪ್ರಕರಣಗಳಾದಾಗ ಮಾತ್ರ ಅರ್ಜಿದಾರರು ಕೋರಿದ
ಮಾಹಿತಿಗಳನ್ನಾಗಲೀ, ದಾಖಲೆಗಳನ್ನಾಗಲೀ ತೊಂದರೆ ಕೊಡದೆ ನೀಡಲು ಮುಂದಾಗುವ ಮನಸ್ಸೇ ಮಾಡುವುದಿಲ್ಲ. ಕೆಲವೊಮ್ಮೆ ಕೋರಿದ ಮಾಹಿತಿಗಳನ್ನಾಗಲೀ, ದಾಖಲೆಗಳನ್ನಾಗಲೀ ಕೊಡುವುದೇ ಇಲ್ಲ. ಕಾರಣ, ಅಮೂಲ್ಯ ಮಾಹಿತಿ ಇಲ್ಲವೇ ದಾಖಲೆಗಳನ್ನು ನೀಡಿದಲ್ಲಿ ಅದರ ಮುಂದಿನ ಪರಿಣಾಮವನ್ನು ತಾವೇ ಅನುಭವಿಸಬೇಕಾದೀತು ಎಂಬ ಭಯ, ಮುಂಜಾಗ್ರತೆ.

ಇಲ್ಲಿ ಒಂದು ವಿಷಯ ಸ್ಪಷ್ಟ. ಯಾವ ಮಾಹಿತಿ ಅಥವಾ ದಾಖಲೆಗಳನ್ನು ನೀಡಿದಲ್ಲಿ, ವಯುಕ್ತಿಕವಾಗಿ ತಮಗೆ ಅಥವಾ ತಮ್ಮ ಹಿರಿಯ ಹಿರಿಯ ಅಧಿಕಾರಿಗಳಿಗೆ ಇಲ್ಲವೇ
ಜನಪ್ರತಿನಿಧಿಗಳ ಕುತ್ತಿಗೆಗೆ ಬರಬಹುದು ಎಂಬ ಆತಂಕವಿರುತ್ತದೆಯೋ, ಅಂಥ ಮಾಹಿತಿ ಅಥವಾ ದಾಖಲೆಗಳನ್ನು ಸರಕಾರಿ ಅಧಿಕಾರಿಗಳು ಅರ್ಜಿದಾರರಿಗೆ ನೀಡವುದೇ ಇಲ್ಲ. ಮಾಹಿತಿ ಹಕ್ಕು ಕಾಯ್ದೆ ಜಾರಿಯಾಗಿ ಎಂಟೂವರೆ ವರ್ಷ ಕಳೆದರೂ, ಇನ್ನೂ ಸಹ ನಮ್ಮ ರಾಜ್ಯದ, ದೇಶದ ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಗಮನಾರ್ಹ ಎನ್ನಬಹುದಾದ
ಪಾರದರ್ಶಕತೆಯಾಗಲೀ, ಹೊಣೆಗಾರಿಕೆಯಾಗಲೀ ಮೂಡಿಲ್ಲ, ಬಂದಿಲ್ಲ, ಸೃಷ್ಟಿಯಾಗಿಲ್ಲ ಎಂದರೆ ನಮ್ಮ ದೇಶಕ್ಕೆ ಇನ್ನೆಷ್ಟು ಕಾಯ್ದೆ ಬಂದರೇನು ಪ್ರಯೋಜನ ?

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಾಗೃತಕೋಶದ ಮುಖ್ಯ ಜಾಗೃತಾಧಿಕಾರಿಯಾಗಿದ್ದ ಡಾ.ಕೆ.ಎಚ್.ನರಸಿಂಹಮೂರ್ತಿ ಕೆ.ಎ.ಎಸ್.(ಆಯ್ಕೆ ಶ್ರೇಣಿ) ಅಧಿಕಾರಿಯವರನ್ನು 2013ರ ಅಗೋಸ್ತು 26ರಂದು ಚಾಮರಾಜನಗರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿತ್ತು.

ಆರೋಗ್ಯ ಇಲಾಖೆಯಲ್ಲಿ ನಡೆದ ಮತ್ತು ನಡೆಯುತ್ತಲೇ ಇರುವ ಬಹುಕೋಟಿ ಹಗರಣವೊಂದರ ಬಗ್ಗೆ ಮುಖ್ಯ ಜಾಗೃತಾಧಿಕಾರಿಯಾಗಿದ್ದ ಡಾ.ನರಸಿಂಹಮೂರ್ತಿಯವರು ತನಿಖೆ ನಡೆಸುತ್ತಿರುವ ಹಂತದಲ್ಲಿ, ತನಿಖೆಯ ಮಧ್ಯೆ ವರ್ಗಾವಣೆ ಮಾಡಿದ್ದು ಸಂಶಯಕ್ಕೆ ಕಾರಣವಾಗಿತ್ತು. ಸಂಶಯ ನಿವಾರಣೆಗಾಗಿ, ವರ್ಗಾವಣೆಯ ಹಿಂದಿನ ದುರುದ್ಧೇಶವನ್ನು ಪತ್ತೆಹಚ್ಚುವ ಸಲುವಾಗಿ 2013ರ ಸೆಪ್ಟೆಂಬರ್ 7ರಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಮಾಹಿತಿ ಹಕ್ಕು
ಅರ್ಜಿಯೊಂದನ್ನು ಸಲ್ಲಿಸಿದ್ದೆ. ಈ ಅರ್ಜಿಯಲ್ಲಿ, ವರ್ಗಾವಣೆ ಆದೇಶದ ಯಥಾಪ್ರತಿ, ವರ್ಗಾವಣೆಗೆ ಕಾರಣ, ವರ್ಗಾವಣೆ ಸಂಬಂಧ ಇಲಾಖೆ ನಡೆಸಿದ ಲಿಖಿತ ಮತ್ತು ಮೌಖಿಕ ವ್ಯವಹಾರಗಳ ಬಗ್ಗೆ ಮಾಹಿತಿ ಹಾಗೂ ಇತರ ಟಿಪ್ಪಣಿಗಳನ್ನು ನೀಡುವಂತೆ ಅರ್ಜಿಯಲ್ಲಿ ಕೋರಿದ್ದೆ.

ನಾನು ಯಾವ ಮಾಹಿತಿ ಮತ್ತು ದಾಖಲೆಗಳನ್ನು ಕೋರಿದ್ದೆನೋ, ಆ ಎಲ್ಲಾ ದಾಖಲೆಗಳೂ ಪ್ರಧಾನ ಕಾರ್ಯದರ್ಶಿಗಳ ಕಚೇರಿಯಲ್ಲೇ ಲಭ್ಯವಿರುವಂಥವು. ಇದೇ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯೇ ನೇರವಾಗಿ ನಾನು ಕೇಳಿದ ಮಾಹಿತಿಗಳನ್ನು ಕಳುಹಿಸಿಕೊಡಬಹುದಿತ್ತು. ಆದರೆ, ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ಇಲಾಖೆಯ ಅಧೀನ ಕಾರ್ಯದರ್ಶಿ ಬಿ.ಎಸ್.ನಾಗರಾಜ್ ಎಂಬವರು ಮಾತ್ರ ಹಾಗೆ ಮಾಡದೆ, ಮಾಹಿತಿ ಕೋರಿ ಕಳುಹಿಸಿದ ಅರ್ಜಿಯನ್ನು ಕಲಂ 6(3)ರಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿದೇಶನಾಲಯದ ಆಯುಕ್ತರಿಗೆ ವರ್ಗಾಯಿಸಿದರು. ನಮಗೇನಂತೆ, ಕೋರಿದ ದಾಖಲೆಗಳು ಸಿಕ್ಕರಾಯಿತಷ್ಟೆ, ಎಂದು ಸುಮ್ಮನಾದೆ.

ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಆಯುಕ್ತರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿದ್ದ ಆಡಳಿತಾಧಿಕಾರಿ (ಸಾಮಾನ್ಯ)ಯವರು ಡಾ.ನರಸಿಂಹಮೂರ್ತಿಯವರನ್ನು ವರ್ಗಾವಣೆ ಮಾಡಿದ ಆದೇಶದ ಯಥಾಪ್ರತಿಯನ್ನು ಕಳುಹಿಸಿಕೊಟ್ಟರು. ಆದರೆ, ನಾನು ಕೋರಿದ ಇತರ ಯಾವುದೇ ದಾಖಲೆಗಳನ್ನಾಗಲೀ, ಮಾಹಿತಿಗಳನ್ನಾಗಲೀ ಕಳುಹಿಸಿಕೊಡದೆ ಅಪೂರ್ಣ ಮಾಹಿತಿಯನ್ನು ನೀಡಿ ಮಾಹಿತಿಹಕ್ಕು ಕಾಯ್ದೆಯನ್ನು ಉಲ್ಲಂಘಿಸಿದರು.

ವರ್ಗಾವಣೆ ಆದೇಶದ ಪ್ರತಿಯಲ್ಲಿ, ‘ನರಸಿಂಹಮೂರ್ತಿ ಇವರನ್ನು ಸಾರ್ವಜನಿಕ
ಹಿತದೃಷ್ಠಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ’ ಎಂದು
ಸ್ಪಷ್ಟವಾಗಿದೆ. ಆದರೆ, ಸಾರ್ವಜನಿಕ ಹಿತದೃಷ್ಠಿ ಯಾವುದು, ಏನು ಎಂಬುದರ ಬಗ್ಗೆ ಯಾವುದೇ ರೀತಿಯ ಮಾಹಿತಿಯೂ ಅದರಲ್ಲಿಲ್ಲ. ಈ ಸಾರ್ವಜನಿಕ ಹಿತದೃಷ್ಠಿ ಏನು ಎನ್ನುವುದು ಸಾರ್ವಜನಿಕರಿಗೆ ಗೊತ್ತಾಗಬೇಕಲ್ಲ ? ಸಾರ್ವಜನಿಕ ಹಿತದೃಷ್ಠಿಯನ್ನೇಕೆ ಇವರು ಗುಟ್ಟು ಮಾಡಬೇಕು ? ಒಬ್ಬನೇ ಒಬ್ಬ ಜನಪ್ರತಿನಿಧಿಯ ಅಥವಾ ಉನ್ನತ ಅಧಿಕಾರಿಯ ಲಿಖಿತ ಇಲ್ಲವೇ ಮೌಖಿಕ ಸೂಚನೆ, ಆದೇಶ ಇಲ್ಲದೆ ಬಹುಕೋಟಿ ಹಗರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಯನ್ನು ವರ್ಗಾವಣೆ ಮಡಲು ಸಾಧ್ಯವೇ ? ಖಂಡಿತಾ ಇಲ್ಲ.

ಮತ್ತೆ, ಕಾಯ್ದೆಯಂತೆ ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಮೇಲ್ಮನವಿ ಪ್ರಾಧಿಕಾರಿಯಾಗಿರುವ ಮುಖ್ಯ ಅಡಳಿತಾಧಿಕಾರಿ ಡಾ.ಕೆ.ಎನ್.ಅನುರಾಧಾ ಇವರಿಗೆ ಡಿಸೆಂಬರ್ 28ರಂದು ಮೇಲ್ಮನವಿ ಸಲ್ಲಿಸಿದೆ. ಡಾ.ಅನುರಾಧಾ ಇವರು ಮೇಲ್ಮನವಿಯನ್ನು ಇತ್ಯರ್ಥಪಡಿಸಲು 2014ರ ಜನವರಿ 18ಕ್ಕೆ ದಿನ ನಿಗದಿ ಮಾಡುತ್ತಾರೆ. ಮೇಲ್ಮನವಿ ಸಲ್ಲಿಸಿದ ನನ್ನನ್ನು ತಮ್ಮ ಬೆಂಗಳೂರಿನಲ್ಲಿರುವ ಕಚೇರಿಗೆ ಖುದ್ದಾಗಿ ಹಾಜರಾಗುವಂತೆ ಸೂಚಿಸುತ್ತಾರೆ.

ಮಾಹಿತಿ ಕೋರಿ ಸಲ್ಲಿಸಿದ ಮೂಲ ಅರ್ಜಿಯಲ್ಲಿಯೇ ನಾನು ಕೋರಿದ ಮಾಹಿತಿ ಮತ್ತು ದಾಖಲೆಗಳು ಯಾವುದು ಎಂಬುದು ಸ್ಪಷ್ಟವಾಗಿಯೇ ಇತ್ತು. ನಾನು ಕೇಳಿದ ದಾಖಲೆಗಳಲ್ಲಿ ಒಂದು ದಾಖಲೆಯನ್ನು ಮಾತ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡಿದ್ದು, ಉಳಿದ ದಾಖಲೆ ಮತ್ತು ಮಾಹಿತಿಗಳನ್ನು ನೀಡದೆ ಕಾಯ್ದೆಯನ್ನು ಉಲ್ಲಂಘಿಸಿದ್ದೂ ಸ್ಪಷ್ಟವಾಗಿಯೇ ಇತ್ತು. ಹೀಗಿದ್ದೂ ಉಡುಪಿಯಲ್ಲಿರುವ ಅರ್ಜಿದಾರನನ್ನು ಬೆಂಗಳೂರಿಗೆ ಕರೆಸಿಕೊಳ್ಳುವ ಅಗತ್ಯ ಖಂಡಿತಾ ಇರಲಿಲ್ಲ. ಆದರೆ, ಆಡಳಿತಶಾಹಿಗೆ ಇದೆಲ್ಲ ಹೇಗೆ ಅರ್ಥವಾಗಬೇಕು ಹೇಳಿ. ಆದರೂ, ಅರ್ಜಿದಾರನಾದ ನಾನು ಮೇಲ್ಮನವಿಯನ್ನು ಇತ್ಯರ್ಥಪಡಿಸುವ ದಿನದಂದು ಹಾಜರಾಗಲು ಸಾಧ್ಯವಾಗದ ಬಗ್ಗೆ ಸ್ಪಷ್ಟಪಡಿಸಿ, ಮತ್ತೊಮ್ಮೆ ನಾನು ಮಾಹಿತಿ ಹಕ್ಕು ಅರ್ಜಿಯಲ್ಲಿ ಕೋರಿದ್ದೇನು, ಸಾರ್ವಜನಿಕ ಮಾಹಿತಿ ಅಧಿಕಾರಿ ಕೊಟ್ಟದ್ದೇನು, ಕೊಡದೇ ಇದ್ದುದೇನು ಎಂಬ ಬಗ್ಗೆ ಎರಡು ಪುಟಗಳ ಪತ್ರದಲ್ಲಿ ಸವಿವರವಾಗಿ ವಿವರ ನೀಡಿ ನೋಂದಾಯಿತ ಅಂಚೆಯಲ್ಲಿ ಆ ಪತ್ರವನ್ನು ಮೇಲ್ಮನವಿ ಪ್ರಾಧಿಕಾರಿಯಾದ ಡಾ.ಅನುರಾಧಾರಿಗೆ ಕಳುಹಿಸಿಕೊಟ್ಟಿದ್ದೆ.

ಆಡಳಿತಶಾಹಿ ವರ್ಗಕ್ಕೆ ಜನಸಾಮಾನ್ಯರ ಮೇಲೆ, ಮಾಹಿತಿಹಕ್ಕು ಕಾರ್ಯಕರ್ತರ ಮೇಲೆ ಎಷ್ಟೊಂದು ನಿರ್ಲಕ್ಷ್ಯ, ಅಸಡ್ಡೆ ಎಂದರೆ, ಡಾ.ಅನುರಾಧಾ ಅವರು ನನ್ನ ಪತ್ರವನ್ನು ಕನಿಷ್ಟ ಪರಿಗಣನೆಗೂ ತೆಗೆದುಕೊಳ್ಳದೆ, ‘ಅರ್ಜಿದಾರರು ಗೈರು ಹಾಜರಿದ್ದರು, ಅವರ ಗೈರು ಹಾಜರಿಯಲ್ಲಿ ಮೇಲ್ಮನವಿಯನ್ನು ವಜಾಗೊಳಿಸಲಾಯಿತು’ ಎಂದು ‘ಉಕ್ತ ಲೇಖನ ನೀಡಿ, ಕರಡು ಸರಿಪಡಿಸಿ ಸಹಿ ಮಾಡಿ, ಪ್ರಕರಣವನ್ನು ಮುಕ್ತಾಯಗೊಳಿಸಿಬಿಟ್ಟರು’.

ಮೂಲ ಮಾಹಿತಿ ಹಕ್ಕು ಅರ್ಜಿ, ಮೇಲ್ಮನವಿ ಮತ್ತು ಮೇಲ್ಮನವಿ ಇತ್ಯರ್ಥ ಪಡಿಸುವ ದಿನ ಖುದ್ದು ಹಾಜರು ಇರಲು ಸಾಧ್ಯವಾಗದ ಬಗ್ಗೆ ಬರೆದ ಪತ್ರ ಈ ಮೂರನ್ನೂ ಪರಿಶೀಲಿಸಿ ಮಾಹಿತಿಹಕ್ಕು ಅರ್ಜಿಯಲ್ಲಿ ಕೋರಲಾದ, ಆದರೆ ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡದ ದಾಖಲೆಗಳನ್ನು ಮತ್ತು ಮಾಹಿತಿಗಳನ್ನು ಅರ್ಜಿದಾರನಿಗೆ ಕಳುಹಿಸಿಕೊಡುವಂಥ ದಕ್ಷತೆ, ನಿಷ್ಠೆ, ಪ್ರಾಮಾಣಿಕತೆ ಮೇಲ್ಮನವಿ ಪ್ರಾಧಿಕಾರಿಯಾದ ಮುಖ್ಯ ಆಡಳಿತಾಧಿಕಾರಿ ಡಾ.ಅನುರಾಧಾ ಅವರಲ್ಲಿ ಇರಬೇಕಾಗಿತ್ತು. ನಮ್ಮ ಇಡೀ ಆಡಳಿತಶಾಹಿ ವ್ಯವಸ್ಥೆಯೇ ಅವ್ಯವಸ್ಥೆಯ ಕೊಂಪೆಯಲ್ಲಿರುವಾಗ, ದುಡ್ಡು ಹೊಡೆಯುವುದಷ್ಠೆ ಇವರ ಮುಖ್ಯ
ಕಾಯಕವಾಗಿರುವಾಗ, ಇಂಥ ಭ್ರಷ್ಟ, ದುಷ್ಟ ಮತ್ತು ದುರಹಂಕಾರಿ ಸರಕಾರಿ ಅಧಿಕಾರಿಗಳಿಂದ ಪಾರದರ್ಶಕತೆಯ, ಮುಕ್ತತೆಯ, ಹೊಣೆಗಾರಿಕೆಯ ಸೇವೆಯನ್ನು ನಿರೀಕ್ಷಿಸಲು ಸಾಧ್ಯವೇ ? – ಶ್ರೀರಾಮ ದಿವಾಣ.

ಉಡುಪಿ: ಮಾಹಿತಿ ಹಕ್ಕು ಅಧಿನಿಯಮ-2005ರ ಪ್ರಕಾರ ಅಗತ್ಯ ದಾಖಲೆಗಳನ್ನು ಕೋರಿದ ಅರ್ಜಿದಾರರಿಗೆ ದಾಖಲೆಗಳನ್ನು ನೀಡದೆ ಅಧಿನಿಯಮವನ್ನು ಉಲ್ಲಂಘಿಸಿದ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗಳ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯ ವಿರುದ್ಧ ಅರ್ಜಿದಾರರು ಕರ್ನಾಟಕ ಮಾಹಿತಿ ಆಯೋಗಕ್ಕೆ ಅಪೀಲ್ ಸಲ್ಲಿಸಿದ್ದಾರೆ.

2012ರಲ್ಲಿ ಧರ್ಮಸ್ಥಳದಲ್ಲಿ ನಡೆದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಅಪ್ರಾಪ್ತ ಪ್ರಾಯದ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಸಿಐಡಿ ಇಲಾಖಾಧಿಕಾರಿಗಳು ನಡೆಸಿದ ತನಿಖಾ ವರದಿಯ ದೃಢೀಕೃತ ಯಥಾಪ್ರತಿ ಹಾಗೂ ತನಿಖಾ ವರದಿಯೊಂದಿಗೆ ಲಗ್ತೀಕರಿಸಿದ ದೃಢೀಕೃತ ದಾಖಲೆಗಳ ಪ್ರತಿಗಳನ್ನು ಕೋರಿ ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ಶ್ರೀರಾಮ ದಿವಾಣ ಅವರು 2013ರ ನವೆಂಬರ್ 5ರಂದು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ಹಕ್ಕು ಅಧಿನಿಯಮದಂತೆ ಅರ್ಜಿ
ಸಲ್ಲಿಸಿದ್ದರು.

ಅರ್ಜಿ ಸಲ್ಲಿಸಿ 30 ದಿನ ಕಳೆದರೂ ಕೋರಿದ ದಾಖಲೆಗಳು ಲಭಿಸದ ಕಾರಣ, ಡಿಸೆಂಬರ್ 21ರಂದು ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಸಲ್ಲಿಸಿ 30 ದಿನ ಕಳೆದರೂ ಕೋರಿದ ದಾಖಲೆಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಅರ್ಜಿದಾರರು 2014ರ ಫೆಬ್ರವರಿ 3ರಂದು ಮಾಹಿತಿ ಆಯೋಗಕ್ಕೆ ಅಪೀಲ್ ಸಲ್ಲಿಸಿದ್ದಾರೆ.