Posts Tagged ‘sexual minorities’

ಉಡುಪಿ: ದೇಶಾದ್ಯಂತದ ಎಆರ್ ಟಿ ಕೇಂದ್ರಗಳ ನೌಕರರು ಬೇಡಿಕೆ ಮುಂದಿಟ್ಟು
ಅನಿರ್ಧಿಷ್ಠಾವಧಿ ಮುಷ್ಕರ ನಡೆಸುತ್ತಿರುವುದರಿಂದ ಎಚ್ಐವಿ/ಏಡ್ಸ್ ಬಾಧಿತರು ಸಾವು-ಬದುಕಿನ ನಡುವೆ ಬದುಕು ನಡೆಸುವ ಶೋಚನೀಯ ಪರಿಸ್ಥಿತಿ ಇದೀಗ ಸೃಷ್ಟಿಯಾಗಿದೆ.

ಸರಕಾರಿ ಸೌಲಭ್ಯ ಮತ್ತು ಮೂಲಭೂತ ಸೌಕರ್ಯಗಳನ್ನು ನೀಡುವಂತೆ ಒತ್ತಾಯಿಸಿ ಅಖಿಲ ಭಾರತ ನ್ಯಾಕೋ ನೌಕರರ ಸಂಘದ ಕರೆಯಂತೆ ಭಾರತದಾದ್ಯಂತ ಎಲ್ಲಾ ಎಆರ್ಟಿ ನೌಕರರೂ ಜ.30ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಇದರಿಂದಾಗಿ ಎಆರ್ ಟಿ ಕೇಂದ್ರಗಳು ಸಂಪೂರ್ಣ ಬಂದ್ ಆಗಿದೆ.

ಅಖಿಲ ಭಾರತ ನ್ಯಾಕೋ ನೌಕರರ ಸಂಘ ನೀಡಿದ ಮುಷ್ಕರದ ಕರೆಗೆ ಸ್ಪಂದಿಸಿದ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಗುತ್ತಿಗೆ ನೌಕರರ ಸಂಘವು ರಾಜ್ಯದಾದ್ಯಂತ ಮುಷ್ಕರ ನಡೆಸುತ್ತಿದೆ. ಇದರಿಂದಾಗಿ ರಾಜ್ಯದಲ್ಲಿರುವ ಎಲ್ಲಾ ಎಆರ್ ಟಿ ಕೇಂದ್ರಗಳು ಸಹ ಪೂರ್ಣ ಪ್ರಮಾಣದಲ್ಲಿ ಬಂದ್ ಆಗಿವೆ.

ಜ.30ರಿಂದ ಎಚ್ಐವಿ/ಏಡ್ಸ್ ಬಾಧಿತರಿಗೆ ಚಿಕಿತ್ಸೆ, ಔಷಧ, ಆಪ್ತ ಸಲಹೆ ಯಾವುದೂ ಇಲ್ಲದಂತಾಗಿದೆ. ಮೊದಲೇ ಅತಂತ್ರ ಬದುಕು ಸಾಗಿಸುತ್ತಿರುವ ಎಚ್ಐವಿ/ಏಡ್ಸ್ ಬಾಧಿತರು ಇದೀಗ ಎಆರ್ಟಿ ಕೇಂದ್ರಗಳ ಬಂದ್ನಿಂದಾಗಿ ಸಾವಿನಂಚಿಗೆ ಬಂದು ನಿಂತಂತಾಗಿದೆ ಎಂದು ಎಚ್ಐವಿ/ಏಡ್ಸ್ ಬಾಧಿತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಒಂದು ಬಾರಿ ಎಆರ್ ಟಿ ಕೇಂದ್ರಗಳನ್ನು ಆರಂಭಿಸದ ಮೇಲೆ ಮತ್ತೆ ಎಆರ್ ಟಿ ಕೇಂದ್ರಗಳು ಸೇವೆ ಸಲ್ಲಿಸದಿರುವುದು ಅಕ್ಷಮ್ಯ ಅಪರಾಧ. ರೋಗಿಯನ್ನು ಐಸಿಯುನಲ್ಲಿ ಇರಿಸಿ ಕೊಲೆ ನಡೆಸಿದಂತೆ ಎಂಬುದು ಎಚ್ಐವಿ/ಏಡ್ಸ್ ಬಾಧಿತರಿಬ್ಬರ ಸ್ಪಷ್ಟ ಅಭಿಪ್ರಾಯ. ಕೇಂದ್ರ ಸರಕಾರವಾಗಲೀ, ರಾಜ್ಯ ಸರಕಾರವಾಗಲೀ ಎಚ್ಐವಿ/ಏಡ್ಸ್ ಬಾಧಿತರ ಜೀವನ್ಮರಣದ ಸ್ಥಿತಿಯನ್ನು ಸ್ವಲ್ಪವೂ ಗಮನಿಸುತ್ತಿಲ್ಲ. ಸರಕಾರಕ್ಕೆ ಇವರ ಬಗ್ಗೆ ಯಾವ ಕಾಳಜಿಯೂ ಇಲ್ಲ ಎನ್ನುವುದಕ್ಕೆ ಜ.30ರಿಂದ ಆರಂಭವಾದ ಮುಷ್ಕರ ಇನ್ನೂ ಕೂಡಾ ಮುಕ್ತಾಯಗೊಳ್ಳದಿರುವುದು, ಎಆರ್ ಟಿ ನೌಕರರ ಸಮಸ್ಯೆಗಳ ಕಡೆಗೆ ಸರಕಾರ ಕನಿಷ್ಟ ಗಮನವನ್ನೂ ಕೊಡದಿರುವುದು ಮತ್ತು ಪರ್ಯಾಯ ವ್ಯಸ್ಥೆಯನ್ನು ಕಲ್ಪಿಸದಿರುವುದೇ ಸಾಕ್ಷಿ ಎಂದು ಎಚ್ಐವಿ/ಏಡ್ಸ್ ಬಾಧಿತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಚ್ಐವಿ/ಏಡ್ಸ್ ಬಾಧಿತರಿಗೆ ಸೂಕ್ತ ಚಿಕಿತ್ಸೆ ಲಭಿಸದಿರುವುದು ಮಾನವಹಕ್ಕಿನ ಸ್ಪಷ್ಟ ಉಲ್ಲಂಘನೆಯೇ ಆಗಿದೆ. ಈ ಬಗ್ಗೆ ರಾಷ್ಟ್ರೀಯ ಮತ್ತು ರಾಜ್ಯ ಮಾನವಹಕ್ಕು ಆಯೋಗಗಳು ಸುಮುಟೋ ಆಗಿ ಪ್ರಕರಣ ದಾಖಲಿಸಿ ಸರಕಾರಕ್ಕೆ ನಿರ್ದೇಶನ ನೀಡಲು ಅವಕಾಶವಿದೆ. ಆದರೆ ಮಾನವಹಕ್ಕುಗಳು ಸಹ ಈ ಕಡೆ ಕಿಂಚಿತ್ತೂ ಗಮನ ಕೊಡದಿರುವುದು ಎಚ್ಐವಿ/ಏಡ್ಸ್ ಬಾಧಿತರ ದುರ್ದೈವ.

ಉಡುಪಿಯಲ್ಲಿರುವ ಎಆರ್ ಟಿ ಕೇಂದ್ರದಲ್ಲಿ ದಿನವೊಂದಕ್ಕೆ ಅಂದಾಜು ನೂರು ಮಂದಿ ಎಚ್ಐವಿ/ಏಡ್ಸ್ ಬಾಧಿತರು ಚಿಕಿತ್ಸೆ, ಔಷಧ ಇತ್ಯಾದಿಗಳಿಗಾಗಿ ಬರುತ್ತಿದ್ದರು. ಇವರಿಗೆಲ್ಲ ಕಳೆದ ಕಳೆದ್ ನಾಲ್ಕು ದಿನಗಳಿಂದ ಕನಿಷ್ಟ ಚಿಕಿತ್ಸೆಯೇಯೂ ಇಲ್ಲದಂತಾಗಿದೆ. ಈ ಮುಷ್ಕರ ಹೀಗೆ ಇನ್ನೂ ಕೆಲವೇ ಕೆಲವು ದಿನ ಮುಂದುವರಿದರೂ ಏಚ್ಐವಿ/ಏಡ್ಸ್ ಬಾಧಿತರು ಜೀವನ ಅಯೋಮಯವಾಗಲಿದೆ ಎನ್ನಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳ ಆರೋಗ್ಯ ಸಚಿವರು ಕೂಡಲೇ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಬೇಕು. ಮುಚ್ಚಲ್ಪಟ್ಟಿರುವ ಎಆರ್ ಟಿ ಕೇಂದ್ರಗಳನ್ನು ತಕ್ಷಣವೇ ತೆರೆಯಲು ಬೇಕಾದ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು, ಎಆರ್ ಟಿ ನೌಕರರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಕರ್ನಾಟಕ ಜನಪರ ವೇದಿಕೆ ಒತ್ತಾಯಿಸಿದೆ.

ಎಚ್ಐವಿ/ಏಡ್ಸ್ ಬಾಧಿತರ ಜೀವದ ಜತೆಗೆ ಚೆಲ್ಲಾಟವಾಡುವುದನ್ನು ಮುಂದುವರಿಸುವುದಾದರ ಬದಲಾಗಿ ಕೇಂದ್ರ ಆರೋಗ್ಯ ಸಚಿವ ಗುಲಾಂ ನಬೀ ಅಜಾದ್ ಹಾಗೂ ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ಕೂಡಲೇ ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡುವುದು ಸೂಕ್ತ ಎಂದು ಕರ್ನಾಟಕ ಜನಪರ ವೇದಿಕೆ ತಿಳಿಸಿದೆ.