Posts Tagged ‘sivashailam health department govt of karnataka’

ಉಡುಪಿ: ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಅವರ ನಕಲಿ ಸಹಿಯನ್ನು ಹಾಕುವ ಮೂಲಕ ನಕಲಿ ದಾಖಲೆಯೊಂದನ್ನು ಸೃಷ್ಟಿಸಿ, ಸುಳ್ಳು ದೂರು ನೀಡಿ ಸರಕಾರಿ ಸೇವೆಯಿಂದ ಅಮಾನತು ಆಗುವಂತೆ ಮಾಡಿ ಮಾನಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶ್ರೀಮತಿ ವೀಣಾ ಕೆ.ಶೆಟ್ಟಿ ಎಂಬಾಕೆ, ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳೊಂದಿಗೆ ಸಹಕರಿಸದೇ ನುಣುಚಿಕೊಳ್ಳುತ್ತಿರುವುದು ಮತ್ತು ಪೊಲೀಸ್ ಅಧಿಕಾರಿಗಳು ಪ್ರಭಾವಿ ದುಷ್ಟ ಶಕ್ತಿಗಳ ಒತ್ತಡಕ್ಕೆ ಒಳಗಾಗಿ ಪ್ರಕರಣವನ್ನು ಮುಚ್ಚಿಹಾಕಲು ಹುನ್ನಾರ ನಡೆಸುತ್ತಿದ್ದಾರೆ.

ಡಾ.ಶರತ್ ಕುಮಾರ್ ರಾವ್ ಅವರು ಉಡುಪಿಯ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು (ಕಿರಿಯ ವಿಭಾಗ) ಮತ್ತು ಜೆ.ಎಂ.ಎಫ್. ನ್ಯಾಯಾಲಯಕ್ಕೆ ನೀಡಿದ ಖಾಸಗಿ ದೂರಿನಂತೆ, ನ್ಯಾಯಾಧೀಶರ ಆದೇಶದನ್ವಯ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಶ್ರೀಮತಿ ವೀಣಾ ಕೆ.ಶೆಟ್ಟಿ, ಬಸ್ರೂರು ರಾಜೀವ್ ಶೆಟ್ಟಿ ಹಾಗೂ ಡಾ.ರಾಮಚಂದ್ರ ಬಾಯರಿ ವಿರುದ್ಧ 2013ರ ಸೆಪ್ಟೆಂಬರ್ 27ರಂದು ಕಲಂ 120 ಬಿ, 327, 330, 355, 468, 500 ಮತ್ತು 501 ಭಾರತೀಯ ದಂಡ ಸಂಹಿತೆ (ಐಪಿಸಿ) ಪ್ರಕಾರ ಮೊಕದ್ದಮೆ ದಾಖಲಾಗಿತ್ತು.

ಉಡುಪಿ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಬ್ ಇನ್ಸ್ ಪೆಕ್ಟರ್ ರಾಜಗೋಪಾಲ್ ಅವರು ಸರ್ಕಲ್ ಇನ್ಸ್ ಪೆಕ್ಟರ್ ಮಾರುತಿ ನಾಯಕ್ ಅವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದರು. ಮಾರುತಿ ನಾಯಕ್ ತನಿಖೆಗೆ ಮಾರ್ಗದರ್ಶನ ಮಾಡುತ್ತಿದ್ದ ದಿನದ ವರೆಗೂ ಪ್ರಕರಣದ ತನಿಖೆ ಸರಿಯಾದ ದಾರಿಯಲ್ಲಿಯೇ ಸಾಗುತ್ತಿತ್ತು. ಯಾವಾಗ ಮಾರುತಿ ನಾಯಕ್ ವರ್ಗಾವಣೆಗೊಂಡು ಶ್ರೀಕಾಂತ್ ಎಂಬವರು ಉಡುಪಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿಕೊಂಡು, ಪ್ರಕರಣದ ತನಿಖೆಗೆ ಮಾರ್ಗದರ್ಶನ ಮಾಡಲು ಆರಂಭಿಸಿದರೋ, ಇದೀಗ ತನಿಖಾಧಿಕಾರಿ ಸಬ್ ಇನ್ಸ್ ಪೆಕ್ಟರ್ ರಾಜಗೋಪಾಲ್ ಪ್ರಕರಣದ ತನಿಖೆಯನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿ ಪ್ರಕರಣವನ್ನು ಮುಚ್ಚಿಹಾಕುವ ಮೂಲಕ ಡಾ.ಶರತ್ ಕುಮಾರ್ ಅವರಿಗೆ ನ್ಯಾಯ ನಿರಾಕರಿಸುವ ಹುನ್ನಾರ ನಡೆಸುತ್ತಿದ್ದಾರೆ.

‘ನನ್ನ ನಕಲಿ ಸಹಿ ಹಾಕಿ ಸೃಷ್ಟಿಸಿದ ನಕಲಿ ದಾಖಲೆ ಹಾಜರುಪಡಿಸುವ ಮೂಲಕ ಆರೋಪಿಗಳು ಐಪಿಸಿ ಕಲಂ 468, 355, 330 ಮತ್ತು 327ರಂತೆ ಅಪರಾಧವೆಸಗಿರುತ್ತಾರೆ. ನನ್ನಿಂದ 14 ಲಕ್ಷ ರು. ಸುಲಿಗೆ ಮಾಡುವ ಮೂಲ ಉದ್ಧೇಶದಿಂದ ಐಪಿಸಿ ಕಲಂ 384ರಂತೆ ಅಪರಾಧವೆಗಿದ್ದಾರೆ. ಆದುದರಿಂದ ಈ ವಿಚಾರದಲ್ಲಿ ಕೂಲಂಕುಶ ವಿಚಾರಣೆ ನಡೆಸಿ ನನಗೆ ನ್ಯಾಯ ದೊರಕಿಸಿಕೊಡಬೇಕು. ಇದೇ ನಕಲಿ ಸಹಿ ಮತ್ತು ದಾಖಲೆಯನ್ನು ಮುಂದಿಟ್ಟುಕೊಂಡು ಆರೋಪಿ ವೀಣಾ ಶೆಟ್ಟಿಯವರು ನೀಡಿದ ದೂರಿನಂತೆ ವೈದ್ಯಾಧಿಕಾರಿ ಹುದ್ದೆಯಿಂದ ನನ್ನನ್ನು ಅಮಾನತುಗೊಳಿಸಲಾಗಿದೆ. ಮಾತ್ರವಲ್ಲ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪ ಸಭಾಪತಿ ಹುದ್ದೆಯಿಂದಲೂ ತೆಗೆದುಹಾಕಲಾಗಿದೆ’ ಎಂದು ಡಾ.ಶರತ್ ಕುಮಾರ್ ರಾವ್ ಅವರು ಪೊಲೀಸ್ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದರು.

‘ನನ್ನಿಂದ 14 ಲಕ್ಷ ರು. ಹಣ ಸಾಲ ಪಡೆದ ಬಗ್ಗೆ ಡಾ.ಶರತ್ ರವರು ನನಗೆ ಮಾಡಿಕೊಟ್ಟ ಅಗ್ರಿಮೆಂಟ್ ಮೂಲ ದಾಖಲೆಯನ್ನು ನಾನು ನನ್ನ ವಕೀಲರಾದ ಶಶಿಕಾಂತ ಶೆಟ್ಟಿ ಅವರಲ್ಲಿ ನೀಡಿದ್ದು, ಅದನ್ನು ತನಿಖೆಯ ಬಗ್ಗೆ ಮುಂದಕ್ಕೆ ಹಾಜರುಪಡಿಸುತ್ತೇನೆ’ ಎಂದು ಆರೋಪಿ ವೀಣಾ ಶೆಟ್ಟಿ ತನಿಖಾಧಿಕಾರಿಯವರು ವಿಚಾರಣೆ ನಡೆಸುವ ಸಮಯದಲ್ಲಿ ಹೇಳಿಕೆ ನೀಡಿದ್ದರು.

ನಕಲಿ ಸಹಿ ಹಾಕುವ ಮೂಲಕ ನಕಲಿ ದಾಖಲೆ ಸೃಷ್ಟಿಸಿದ ಪ್ರಕರಣದಲ್ಲಿ ಸಹಿ ಮತ್ತು ಅಗ್ರಿಮೆಂಟ್ ಅಸಲಿಯೋ, ನಕಲಿಯೋ ಎಂಬುದು ದೃಢಪಡಬೇಕಾದರೆ ಮೊತ್ತ ಮೊದಲು ಪೊಲೀಸರಿಗೆ ಮೂಲ ದಾಖಲೆ ಲಭ್ಯವಾಗಬೇಕು. ಅಂದರೆ ಆರೋಪಿ ವೀಣಾ ಶೆಟ್ಟಿ ತನ್ನಲ್ಲಿರುವ ಅಗ್ರಿಮೆಂಟ್ ನ ಮೂಲಮ ಪ್ರತಿಯನ್ನು ತನಿಕೆಗೆ ಸಹಕಾರ ನೀಡುವ ನಿಟ್ಟಿನಲ್ಲಿ ಪೊಲೀಸ್ ತನಿಖಾಧಿಕಾರಿಗಳಿಗೆ ಒಪ್ಪಿಸಬೇಕು. ತನ್ನ ದೂರಿನಲ್ಲಿ ಸತ್ಯವಿದೆ, ತನಗೆ ನಿಜಕ್ಕೂ ಅನ್ಯಾಯವಾಗಿದೆ ಮತ್ತು ತನ್ನದು ಪ್ರಾಮಾಣಿಕ ಹೋರಾಟ ಎಂದಾದರೆ ವೀಣಾ ಶೆಟ್ಟಿಯವರು ಅಗ್ರಿಮೆಂಟ್ನ ಮೂಲ ಪ್ರತಿಯನ್ನು ತನಿಖಾಧಿಕಾರಿಗಳಿಗೆ ನೀಡುವುದು ಅತೀ ಅಗತ್ಯವಾಗಿದೆ. ತನಿಖಾಧಿಕಾರಿಗಳು ಅಗ್ರಿಮೆಂಟ್ನ ಮೂಲ ಪ್ರತಿಯನ್ನು ನ್ಯಾಯಾಲಯದ ಮೂಲಕ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡುವ ಮೂಲಕ ಅಲ್ಲಿಂದ ತಜ್ಞರು ನೀಡುವ ವರದಿಯ ಮೂಲಕ ಮಾತ್ರ ಅಧಿಕಾರತವಾಗಿ ಮತ್ತು ಕಾನೂನು ಬದ್ಧವಾಗಿ ಸಹಿ ಅಸಲಿಯೋ, ನಕಲಿಯೋ ಎನ್ನುವುದು ಸ್ಪಷ್ಟವಾಗಲು ಸಾಧ್ಯ.

ಈ ನಿಟ್ಟಿನಲ್ಲಿ ಆರೋಪಿ ವೀಣಾ ಶೆಟ್ಟಿಯವರ ಹೇಳಿಕೆಯಂತೆ ತನಿಖಾಧಿಕಾರಿಗಳು ಆರೋಪಿಯ ವಕೀಲರು ಎನ್ನಲಾದ ಶಶಿಕಾಂತ್ ಶೆಟ್ಟಿಯವರಲ್ಲಿ ಅಗ್ರಿಮೆಂಟ್ ನ ಮೂಲ ಪ್ರತಿಯನ್ನು ಹಾಜರುಪಡಿಸುವಂತೆ ಲಿಖಿತವಾಗಿಯೇ ಸೂಚಿಸಿದ್ದಾರೆ. ಇದಕ್ಕುತ್ತರಿಸಿದ ಶಶಿಕಾಂತ ಶೆಟ್ಟಿಯವರು, ‘ನನಗೆ ಶ್ರೀಮತಿ ವೀಣಾ ಶೆಟ್ಟಿಯವರು ಯಾವುದೇ ಅಗ್ರಿಮೆಂಟ್ ನೀಡಿರುವುದಿಲ್ಲ’ ಎಂದು ಲಿಖಿತವಾಗಿಯೇ ಸ್ಪಷ್ಟಪಡಿಸಿ ಉತ್ತರ ನೀಡಿದ್ದಾರೆ. ಈ ಮೂಲಕ ವೀಣಾ ಶೆಟ್ಟಿ ಪೊಲೀಸ್ ತನಿಖಾಧಿಕಾರಿಯವರ ಮುಂದೆ ಸುಳ್ಳು ಹೇಳಿಕೆ ನೀಡಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.

ಅಗ್ರಿಮೆಂಟ್ ನ ಮೂಲ ಪ್ರತಿಯನ್ನು ವಕೀಲರಾದ ಶಶಿಕಾಂತ ಶೆಟ್ಟಿಯವರಲ್ಲಿ ನೀಡಿದ್ದೇನೆ ಎಂದು ವೀಣಾ ಶೆಟ್ಟಿ ಹೇಳಿಕೆ ಕೊಡುತ್ತಾರೆ. ಶಶಿಕಾಂತ ಅಗ್ರಿಮೆಂಟ್ ನ ಮೂಲ ಪ್ರತಿಯನ್ನು ವೀಣಾ ಶೆಟ್ಟಿ ನನ್ನಲ್ಲಿ ಕೊಟ್ಟಿಲ್ಲ ಎಂದು ಶಶಿಕಾಂತ್ ಶೆಟ್ಟಿ ಉತ್ತರ ಕೊಡುತ್ತಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ತನಿಖಾಧಿಕಾರಿಯವರು ಮತ್ತೆ ಈ ಬಗ್ಗೆ ಸ್ಪಷ್ಟನೆ ಕೋರಿ ವೀಣಾ ಶೆಟ್ಟಿಯವರಿಗೆ ನೋಟೀಸ್ ಜ್ಯಾರಿ ಮಾಡುತ್ತಾರೆ. ಈ ನೋಟೀಸ್ ಗೆ ಉತ್ತರವಾಗಿ ‘ನಾನು ಈಗಾಗಲೇ ಉತ್ತರಿಸಿದ್ದೇನೆ, ಈ ಬಗ್ಗೆ ನ್ಯಾಯಾಲಯದಲ್ಲಿ ವ್ಯವಹರಿಸುತ್ತೇನೆ’ ಎಂದು ಉತ್ತರ ಕೊಡುವ ಮೂಲಕ ವೀಣಾ ಶೆಟ್ಟಿ ವಾಸ್ತವದಿಂದ ನುಣುಚಿಕೊಳ್ಳುತ್ತಾರೆ, ಸತ್ಯದಿಂದ ತಪ್ಪಿಸಿಕೊಳ್ಳುತ್ತಾರೆ.

ಪ್ರಕರಣದ ತನಿಖೆಗೆ ಅಗ್ರಿಮೆಂಟ್ನ ಮೂಲ ಪ್ರತಿ ಅತೀ ಅಗತ್ಯವಾಗಿ ಬೇಕಾಗಿರುವುದರಿಂದ ಮತ್ತು ಪೋರ್ಜರಿ ಪ್ರಕರಣದ ಆರೋಪಿ ವೀಣಾ ಶೆಟ್ಟಿ ತನಿಖೆಗೆ ಸಹಕರಿಸುತ್ತಿಲ್ಲ ಎಂಬುದು ಸ್ಪಷ್ಟವಾದ ಬಳಿಕ ತನಿಖಾಧಿಕಾರಿಯವರು ಮೂಲ ದಾಖಲೆ ಪತ್ರವನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ವೀಣಾ ಶೆಟ್ಟಿ ಹಾಗೂ ಈಕೆಯ ಅಣ್ಣ ಎಂ.ಬಾಲಗಂಗಾಧರ ಶೆಟ್ಟಿಯವರ ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿರುವ ಮನೆಗಳಲ್ಲಿ ಮೂಲ ದಾಖಲೆ ಪತ್ರಗಳನ್ನು ಹುಡುಕಾಡುವ ನಿಟ್ಟಿನಲ್ಲಿ ಸರ್ಚ್ ವಾರೆಂಟ್ ಹೊರಡಿಸುವಂತೆ ಕೋರಿ ನ್ಯಾಯಾಲಯಕ್ಕೆ ನಿವೇದನೆ ಸಲ್ಲಿಸುತ್ತಾರೆ. ನ್ಯಾಯಾಧೀಶರು ಸರ್ಚ್ ವಾರೆಂಟ್ ನೀಡಿ ಆದೇಶ ಹೊರಡಿಸುತ್ತಾರೆ.

ಸರ್ಚ್ ವಾರೆಂಟ್ ಪ್ರಕಾರ ತನಿಖಾಧಿಕಾರಿ ರಾಜಗೋಪಾಲ್ ಹಾಗೂ ಪೊಲೀಸ್ ಸಿಬ್ಬಂದಿಗಳು ವೀಣಾ ಶೆಟ್ಟಿ ಹಾಗೂ ಎಂ.ಬಾಲಗಂಗಾಧರ ಶೆಟ್ಟಿ ಮನೆಯಲ್ಲಿ ಹುಡುಕಾಡುತ್ತಾರೆ. ಆದರೆ ಅಗ್ರಿಮೆಂಟ್ನ ಮೂಲ ದಾಖಲೆ ಪತ್ರ ಮಾತ್ರ ಪತ್ತೆಯಾಗುವುದೇ ಇಲ್ಲ.

ತನಿಖೆಯ ಮುಂದುವರಿದ ಭಾಗವಾಗಿ ತನಿಖಾಧಿಕಾರಿಗಳು ಪ್ರಕರಣದ ಎರಡನೇ ಆರೋಪಿ ಡಾ.ರಾಮಚಂದ್ರ ಬಾಯರಿ (ಇವರು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು) ಅವರಿಗೆ ಅಗ್ರಿಮೆಂಟ್ ನ ಮೂಲ ದಾಖಲೆಯನ್ನು ಹಾಜರುಪಡಿಸುವಂತೆ ಸೂಚಿಸಿ ನೊಟೀಸ್ ಮಾಡುತ್ತಾರೆ. ಈ ನೋಟೀಸ್ ಗೆ ಆರೋಪಿ ಡಾ.ರಾಮಚಂದ್ರ ಬಾಯರಿ ಉತ್ತರಿಸುತ್ತಾರೆ: ‘ನನ್ನಲ್ಲಿ ಅಗ್ರಿಮೆಂಟ್ ನ ಮೂಲ ಪ್ರತಿ ಇಲ್ಲ. ಜೆರಾಕ್ಸ್ ಪ್ರತಿಯನ್ನು ನೋಡಿ ನಾನು ಇಲಾಖಾಧಿಕಾರಿಗಳಿಗೆ ಡಾ.ಶರತ್ ಕುಮಾರ್ ರಾವ್ ವಿರುದ್ಧ ವರದಿ ನೀಡಿದ್ದಾಗಿದೆ’ ಎಂದು.

ಇಲ್ಲಿ ಸಹಜವಾಗಿ ಉದ್ಭವವಾಗುವ ಪ್ರಶ್ನೆ. ಡಾ.ಶರತ್ ಕುಮಾರ್ ರಾವ್ ಅವರು ಒಬ್ಬರು ಗಜೆಟೆಡ್ ಅಧಿಕಾರಿ. ಒಬ್ಬರು ಗಜೆಟೆಡ್ ಅಧಿಕಾರಿಯ ವಿರುದ್ಧ ಖಾಸಗಿ ವ್ಯಕ್ತಿಯೊಬ್ಬರು ದಾಖಲೆಯೊಂದರ ಜೆರಾಕ್ಸ್ ಪ್ರತಿ ಇರಿಸಿ ದೂರು ಸಲ್ಲಿಸಿದಾಗ, ದಾಖಲೆಯ ಸಾಚಾತನನ್ನು ಪರಿಶೀಲನೆ ನಡೆಸದೆ ಜವಾಬ್ದಾರಿಯುತ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಗಜೆಟೆಡ್ ಅಧಿಕಾರಿಯಾದ ಡಾ.ಶರತ್ ಕುಮಾರ್ ರಾವ್ ವಿರುದ್ಧ ತನ್ನ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದು, ಮೇಲಾಧಿಕಾರಿಗಳು (ಮದನ್ ಗೋಪಾಲ್, ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ) ಡಾ.ಶರತ್ ಅವರನ್ನು ಅಮಾನತು ಮಾಡುವುದು, ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಡಾ.ಶರತ್ ಅವರನ್ನು ಅಮಾನತು ಮಾಡುವ ಕಡತಕ್ಕೆ ತನ್ನ ಒಪ್ಪಿಗೆ ಸೂಚಿಸುವುದು ! ಇದೆಲ್ಲ ಏನು ? ಯಾವ ಸೀಮೆಯ ನ್ಯಾಯ ?

ತನಿಖೆಗೆ ಸಹಕರಿಸದೆ ಅಸಹಕಾರ ವ್ಯಕ್ತಪಡಿಸುತ್ತಿರುವ ಮತ್ತು ಸುಳ್ಳು ಹೇಳಿಕೆ ನೀಡಿದ ಆರೋಪಿ ಶ್ರೀಮತಿ ವೀಣಾ ಶೆಟ್ಟಿಯ ಮೇಲೆ ಸ್ವತಹಾ ಪೊಲೀಸರೇ ಇನ್ನೆರಡು ಐಪಿಸಿ ಕಲಂಗಳಡಿಯಲ್ಲಿ ಮೊಕದ್ದಮೆ ದಾಖಲಿಸುವುದು ಬಿಟ್ಟು, ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಹಾಗೂ ಸಚಿವ ಯು.ಟಿ.ಖಾದರ್ ಅವರಿಗೆ ನೋಟೀಸ್ ಮಾಡಿ ಅಗ್ರಿಮೆಂಟ್ನ ಮೂಲ ದಾಖಲೆಯನ್ನು ಹಾಜರುಪಡಿಸುವಂತೆ ಸೂಚಿಸಿ ನೋಟೀಸ್ ಮಾಡುವುದು ಬಿಟ್ಟು, ತನಿಖೆ ಮುಂದುವರಿಸಲು ಮೂಲ ದಾಖಲೆ ಲಭಿಸುತ್ತಿಲ್ಲ ಎಂದು ಕೈಚೆಲ್ಲಿಕೊಂಡು ಇಡೀ ಪ್ರಕರಣಕ್ಕೆ ಸಂಬಂಧಪಟ್ಟಂತೆನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸುವ ಮೂಲಕ ನಿರಂತರವಾಗಿ ಅನ್ಯಾಯಕ್ಕೊಳಗಾದ, ದೌರ್ಜನ್ಯಕ್ಕೆ ಗುರಿಯಾದ ನೊಂದ, ಸಂತ್ರಸ್ತ, ಶೋಷಿತ ವ್ಯಕ್ತಿಯಾದ ಡಾ.ಶರತ್ ಕುಮಾರ್ ರಾವ್ ಅವರಿಗೆ ಸಹಜ ನ್ಯಾಯವನ್ನು ನಿರಾಕರಿಸುವುದು ಎಷ್ಟು ಸರಿ ? ಮುಖ್ಯಮಂತ್ರಿ ಸಿದ್ಧರಾಮಯ್ಯ, ಮುಖ್ಯ ಕಾರ್ಯದರ್ಶಿಗಳೆಲ್ಲ ಏನು ಮಾಡುತ್ತಿದ್ದಾರೆ ? ಯಾಕಾಗಿ, ಯಾರಿಗಾಗಿ ನ್ಯಾಯವನ್ನು ಕೊಲೆ ಮಾಡುತ್ತಿದ್ದಾರೆ ?

ಉಡುಪಿ: ‘ಬಹುಕೋಟಿ ರಾಸಾಯನಿಕ ಹಗರಣಕ್ಕೂ, ತನಗೂ ಯಾವುದೇ ಸಂಬಂಧವಿಲ್ಲ, ಆದರೆ ನಾನು ಡಾ.ಶರತ್ ಕುಮಾರ್ ರಾವ್ ವಿರುದ್ಧ ನೀಡಿದ ದೂರಿನೊಂದಿಗೆ ಬಹುಕೋಟಿ ರಾಸಾಯನಿಕ ಹಗರಣವನ್ನು ತಳಕು ಹಾಕಲಾಗುತ್ತಿದೆ’ ಎಂದು ಉಡುಪಿಯ ಎಚ್.ಐ.ವಿ.ಸೋಂಕಿತ ವ್ಯಕ್ತಿಗಳ ಒಕ್ಕೂಟವಾಗಿರುವ ‘ಜೀವನ ಸಂಘರ್ಷ’ ಎಂಬ ಸರಕಾರೇತರ ಸ್ವಯಂಸೇವಾ ಸಂಸ್ಥೆಯ ಶ್ರೀಮತಿ ವೀಣಾ ಶೆಟ್ಟಿ ತಿಳಿಸಿದ್ದಾರೆ.

ಸೆಪ್ಟೆಂಬರ್ 10ರಂದು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ವೀಣಾ ಶೆಟ್ಟಿ, ‘ಬಹುಕೋಟಿ ಹಗರಣಕ್ಕೂ, ತನಗೂ ಯಾವುದೇ ಸಂಬಂಧವಿಲ್ಲ. ಬಹುಕೋಟಿ ಹಗರಣದ ವಿಷಯ ಕೇವಲ ಒಂದೆರಡು ದಿನಗಳ ಹಿಂದೆಯಷ್ಟೇ ನನ್ನ ಗಮನಕ್ಕೆ ಬಂತು. ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಬಹುಕೋಟಿ ಹಗರಣಕ್ಕೂ, ತನ್ನ ದೂರಿಗೂ ಸಂಬಂಧ ಕಲ್ಪಿಸಿ ವರದಿ ಬಂದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಲು ಈ ಪತ್ರಿಕಾಗೋಷ್ಟಿ ಕರೆದಿದ್ದೇನೆ ಎಂದು ಹೇಳಿಕೊಂಡರು. ಹೀಗೆ ಹೇಳುತ್ತಲೇ ಬಹುಕೋಟಿ ರಾಸಾಯನಿಕ ಹಗರಣಕ್ಕೆ ಸಂಬಂಧಿಸಿದಂತೆ ಡಾ.ಕೆ.ಬಿ.ಈಶ್ವರಪ್ಪ ಅವರು ಬರೆದು ಸಿದ್ದಪಡಿಸಿದ, ಕೆಲವರ ಹೇಳಿಕೆಗಳಿರುವ 104 ಪುಟಗಳಿರುವ ಕಡತವನ್ನು ಮಾಧ್ಯಮದವರಿಗೆ ವಿತರಿಸಿದರು.

ಡಾ.ಶರತ್ ಕುಮಾರ್ ತನಗೆ ಕಳೆದ ಐದಾರು ವರ್ಷಗಳಿಂದ ಬೇರೆ ಬೇರೆ ರೀತಿಯಲ್ಲಿ ಕಿರುಕುಳ, ಹಿಂಸೆ ನೀಡಿದ್ದಾರೆ. ಅವರ ಸ್ವಹಿತಾಸಕ್ತಿಗಾಗಿ ನನ್ನನ್ನು ಉಪಯೋಗಿಸಿದ್ದಾರೆ. ನನ್ನಿಂದ ಹಣವನ್ನೂ ಪಡೆದುಕೊಮಡರು. ನಾನವರಿಗೆ ತಿರುಗಿಬಿದ್ದೆ. 2012ರ ಅಕ್ಟೋಬರ್ ನಲ್ಲಿ ಅವರಿಗೆ ಈ ಬಗ್ಗೆ ಖಾಸಗಿಯಾಗಿ ಪತ್ರ ಬರೆದೆ. ಆ ಪತ್ರವನ್ನು ಜಿಲ್ಲಾಧಿಕಾರಿಗಳಿಗೂ ಕಳುಹಿಸಿಕೊಟ್ಟೆ. ನನಗವರು ಬೆದರಿಕೆಯನ್ನೂ ಹಾಕಿದರು. ಬೆದರಿಕೆ ಹಾಕಿದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ಬಳಿಕ ಆರೋಗ್ಯ ಇಲಾಖಾಧಿಕಾರಿಗಳಿಗೆ ದೂರು ನಿಡಿದೆ. ಅವರು ತನಿಖೆ ನಡೆಸಿ, ಡಾ.ಶರತ್ ಅವರನ್ನು ಅಮಾನತು ಮಾಡಿದ್ದಾರೆ ಎಂದು ವೀಣಾ ಶೆಟ್ಟಿ ಹೇಳಿಕೊಂಡರು.

ಪತ್ರಿಕಾಗೊಷ್ಟಿಯ ಕೊನೆಗೆ ‘ವಿಜಯವಾಣಿ’ ದಿನ ಪತ್ರಿಕೆಯ ವರದಿಗಾರರಾದ ಶ್ರೀಪತಿ ಹೆಗಡೆ ಹಕ್ಲಾಡಿಯವರು, ‘ನಿಮಗೂ, ರೆಡ್ ಕ್ರಾಸ್ ಸಂಸ್ಥೆಗೂ ಏನು ಸಂಬಂಧ ?, ಜಿಲ್ಲಾಸ್ಪತ್ರೆಯ ಎ.ಆರ್.ಟಿ.ಕೇಂದ್ರದಲ್ಲಿ ನೌಕರರು ಮುಷ್ಕರ ನಡೆಸಿದ ಸಂದರ್ಭದಲ್ಲಿ ನೀವು ಔಷಧ ವಿತರಿಸುತ್ತಿದ್ದಿರಿ. ನಿಮಗೂ, ಜಿಲ್ಲಾಸ್ಪತ್ರೆಗೂ ಏನು ಸಂಬಂಧ ? ಎ.ಆರ್.ಟಿ.ನೌಕರರು ಮುಷ್ಕರ ನಿರತರಾಗಿದ್ದಾಗ ಔಷಧ ವಿತರಿಸುವ ಅಧಿಕಾರ ನಿಮಗಿದೆಯೇ ? ಎಂದು ಪ್ರಸ್ನಿಸಿದರು.

ಇದಕ್ಕೆ ಉತ್ತರಿಸಿದ ವೀಣಾ ಶೆಟ್ಟಿ, ‘ನಾನು ರೆಡ್ ಕ್ರಾಸ್ ಸಂಸ್ಥೆಯ ಸದಸ್ಯೆ, ರೆಡ್ ಕ್ರಾಸ್ ಸಂಸ್ಥೆಯ ಎಚ್.ಐ.ವಿ./ಏಡ್ಸ್ ಉಪ ಸಮಿತಿಯ ಚಯರ್ ಮ್ಯಾನ್’ ಎಂದು ತಿಳಿಸಿದರು. ಎ.ಆರ್.ಟಿ.ನೌಕರರು ಮುಷ್ಕರ ನಡೆಸುತ್ತಿದ್ದಾಗ ಔಷಧ ವಿತರಿಸುವ ಅಧಿಕಾರ ನನಗಿಲ್ಲ’ ಎಂದು ಹೇಳಿದರು.

‘ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ಬಹುಕೋಟಿ ರಾಸಾಯನಿಕ ಹಗರಣಕ್ಕೂ ನಿಮಗೂ ಸಂಬಂಧವಿದೆ ಎಂದು ಬರೆಯಲಾಗಿದೆ ಎಂದು ನಿಮಗೆ ಹೇಳಿದ್ಯಾರು ? ಆ ವರದಿಯಲ್ಲಿ ಹಾಗೇನೂ ಇಲ್ಲವಲ್ಲ. ನಿಮಗೆ ಮಾತ್ರವಲ್ಲ, ‘ರಾಸಾಯನಿಕ ಹಗರಣದೊಂದಿಗೆ ಸಂಬಂಧವಿಲ್ಲದ ದೂರು’ ಎಂಬುದಾಗಿಯೇ ವರದಿಯಲ್ಲಿ ಬರೆಯಲಾಗಿದೆ’ ಎಂದು ತಿಳಿಸಿದ `ದ ಹಿಂದೂ’ ದಿನ ಪತ್ರಿಕೆಯ ವರದಿಗರರಾದ ಗಣೇಶ ಪ್ರಭು ಅವರು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಎರಡು ಪ್ಯಾರಾಗಳನ್ನು ಓದಿ ಹೇಳಿದರು. ಆಗ ವೀಣಾ ಶೆಟ್ಟಿಯವರು ನಿರುತ್ತರರಾದರು.

‘ಜಯಕಿರಣ’ ದಿನ ಪತ್ರಿಕೆ ಮತ್ತು ‘www.udupibits.in’ ಇವುಗಳ ವರದಿಗಾರ ಶ್ರೀರಾಮ ದಿವಾಣ ಅವರು ವೀಣಾ ಶೆಟ್ಟಿಯವರನ್ನು ಉದ್ಧೇಶಿಸಿ, ಬಹುಕೋಟಿ ರಾಸಾಯನಿಕ ಹಗರಣಕ್ಕೂ, ನನಗೂ ಸಂಬಂಧವಿಲ್ಲ ಎನ್ನುತ್ತೀರಿ, ಹಾಗೆ ಹೇಳುತ್ತಲೇ ಬಹುಕೋಟಿ ಹಗರಣದ ಬಗ್ಗೆ ವೈದ್ಯಕೀಯ ಸಹ ನಿರ್ದೇಶಕರಾದ ಡಾ.ಕೆ.ಬಿ.ಈಶ್ವರಪ್ಪನವರು ಸಿದ್ದಪಡಿಸಿದ ತನಿಖಾ ವರದಿಯನ್ನು ಹಾಜರುಪಡಿಸಿದ್ದೀರಿ. ಹಗರಣದ ಬಗ್ಗೆ ಡಾ.ಈಶ್ವರಪ್ಪರು ಸಲ್ಲಿಸಿದ ತನಿಖಾ ವರದಿಯನ್ನು ಹಾಜರುಪಡಿಸಿದ ನೀವು, ಇದೇ ಹಗರಣದ ಜಾಗೃತದಳದ ಮುಖ್ಯ ಜಾಗೃತಾಧಿಕಾರಿ ಡಾ.ಕೆ.ಎಚ್.ನರಸಿಂಹಮೂರ್ತಿಯವರು ತನಿಖೆ ನಡೆಸಿ ಸಿದ್ದಪಡಿಸಿ ಸಲ್ಲಿಸಿದ ತನಿಖಾ ವರದಿಯನ್ನು ಯಾಕೆ ಇಲ್ಲಿ ಹಾಜರುಪಡಿಸುತ್ತಿಲ್ಲ ? ಡಾ.ಈಶ್ವರಪ್ಪರವರು ಸರಕಾರಕ್ಕೆ ಸಲ್ಲಿಸಿದ ತನಿಖಾ ವರದಿ ನಿಮಗೆ ಎಲ್ಲಿ ಸಿಕ್ಕಿತು ? ಹೇಗೆ ಸಿಕ್ಕಿತು ? ಎಂದು ಪ್ರಶ್ನಿಸಿದರು.

‘ಬಹುಕೋಟಿ ರಾಸಾಯನಿಕ ಹಗರಣದ ಬಗ್ಗೆ ಡಾ.ನರಸಿಂಹಮೂರ್ತಿಯವರು ತನಿಖೆ ನಡೆಸಿ ವರದಿ ಸಲ್ಲಿಸಿದ ವಿಷಯ ನನಗೆ ಗೊತ್ತಿಲ್ಲ. ಡಾ.ಈಶ್ವರಪ್ಪನವರು ಸಲ್ಲಿಸಿದ ತನಿಖಾ ವರದಿಯನ್ನು ನಾನು ಮಾಹಿತಿ ಹಕ್ಕಿನಿಂದ ಪಡೆದುಕೊಂಡಿದ್ದೇನೆ’ ಎಂದು ವೀಣಾ ಶೆಟ್ಟಿ ಸ್ಪಷ್ಟಪಡಿಸಿದರು.

ಮಾಹಿತಿ ಹಕ್ಕಿನಿಂದ ಪಡೆದುಕೊಂಡದ್ದು ಎನ್ನುವುದಕ್ಕೆ ಬೇಕಾದ ಯಾವುದೇ ಕುರುಹುಗಳು ಕಡತದಲ್ಲಿಲ್ಲ. ಬಹುಕೋಟಿ ರಾಸಾಯನಿಕ ಹಗರಣದ ಬಗ್ಗೆ ನಿಮಗೆ ಕೇವಲ ಒಂದೆರಡು ದಿನಗಳ ಹಿಂದೆಯಷ್ಟೇ ತಿಳಿಯಿತು ಎನ್ನುತ್ತೀರಿ ? ಆದರೆಮಾಹಿತಿ ಹಕ್ಕಿನಲ್ಲಿ ಕಡತ ಪಡೆದುಕೊಲ್ಲಲಲು ಕನಿಷ್ಟ ಒಂದು ತಿಂಗಳಾದರೂ ಬೇಕಾಗುತ್ತದೆಯಲ್ಲ ? ಎಂದು ಶ್ರೀರಾಮ ದಿವಾಣರು ವೀಣಾ ಶೆಟ್ಟಿಯವರನ್ನು ಮರು ಪ್ರಶ್ನೆ ಮಾಡಿದರು.

ಆಗ ವೀಣಾ ಶೆಟ್ಟಿಯವರು, ‘ಹೌದು, ಒಂದು ತಿಂಗಳ ಹಿಂದೆಯೇ ಪಡೆದುಕೊಂಡಿದ್ದೇನೆ’ ಎಂದು ಒಪ್ಪಿಕೊಂಡರು. ‘ಹಾಗಾದರೆ, ಮೊದಲು ಹೇಳಿಕೊಂಡಂತೆ ಒಂದೆರಡು ದಿನಗಳ ಹಿಂದೆಯಲ್ಲ, ಅದಕ್ಕಿಂತಲೂ ಮೊದಲೇ ನಿಮಗೆ ರಾಸಾಯನಿಕ ಹಗರಣದ ಬಗ್ಗೆ ತಿಳಿದಿದೆ ಎಂದು ಆಯಿತಲ್ಲ ?’ ಎಂದು ಶ್ರೀರಾಮ ದಿವಾಣರು ಹೇಳಿದಾಗ, ವೀಣಾ ತಬ್ಬಿಬ್ಬಾದರು. ಮಾತ್ರವಲ್ಲ, ‘ಡಾ.ಈಶ್ವರಪ್ಪರವರು ಹಗರಣದ ಬಗ್ಗೆ ಸರಕಾರಕ್ಕೆ ಸಲ್ಲಿಸಿದ ತನಿಖಾ ವರದಿಯನ್ನು ಬೇರೆಯವರು ನನಗೆ ಕೊಟ್ಟರು’ ಎಂಬುದನ್ನು ಒಪ್ಪಿಕೊಂಡರು. ಆದರೆ ಹಾಗೆ ಕೊಟ್ಟವರು ಯಾರು ಎಂಬುದನ್ನು ಮಾತ್ರ ವೀಣಾ ಶೆಟ್ಟಿ ಬಹಿರಂಗಪಡಿಸಲಿಲ್ಲ.

ಪತ್ರಿಕಾಗೋಷ್ಟಿಯಲ್ಲಿ ಶ್ರೀಮತಿ ವೀಣಾ ಶೆಟ್ಟಿಯವರು, ಡಾ.ಶರತ್ ಕುಮಾರ್ ಅವರ ಪಿತ್ರಾರ್ಜಿತ ಆಸ್ತಿಗಳ ಬಗೆಗಿನ ಮಾಹಿತಿಗಳೂ ಇರುವ ಆಸ್ತಿ ವಿವರಗಳನ್ನು
ಬಹಿರಂಗಪಡಿಸಿದರು. ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸುವಂತೆ ಪತ್ರಕರ್ತರೊಬ್ಬರು ಸಲಹೆ ನೀಡಿದರು.

ಪತ್ರಿಕಾಗೋಷ್ಟಿಯಲ್ಲಿ ವೀಣಾ ಶೆಟ್ಟಿ ಹೊರತುಪಡಿಸಿ `ಜೀವನ ಸಂಘರ್ಷ’ ಸಂಸ್ಥೆಯ ಇತರ ಯಾವೊಬ್ಬರೂ ಉಪಸ್ಥಿತರಿರಲಿಲ್ಲ. ವರದಿ: ಶ್ರೀರಾಮ ದಿವಾಣ.