Posts Tagged ‘soniya gandhi’

ಉಡುಪಿ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಮತ್ತು ಮಾಜಿ ಕೇಂದ್ರ ಮಂತ್ರಿ ಉಡುಪಿಯ ಆಸ್ಕರ್ ಫೆರ್ನಾಂಡಿಸ್ ಸಹಿತ ನಾಲ್ವರ ವಿರುದ್ಧ ಬಿಜೆಪಿ ನಾಯಕ, ಮಾಜಿ ಕೇಂದ್ರ ಮಂತ್ರಿ ಸುಬ್ರಹ್ಮಣ್ಯಂ ಸ್ವಾಮಿಯವರು ಅಂದಾಜು 2000 ಕೋಟಿ ರು. ಮಿಕ್ಕಿದ ಹಗರಣವೊಂದಕ್ಕೆ ಸಂಬಂಧಿಸಿದಂತೆ ದೆಹಲಿಯ ಮೆಟ್ರೋಪೊಲಿಟಿನ್ ನ್ಯಾಯಾಲಯದಲ್ಲಿ ಖಾಸಗಿ ದಾವೆ ದಾಖಲಿಸಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಕೋಶಾಧಿಕಾರಿ ಮೋತಿಲಾಲ್ ವೋರಾ ಹಾಗೂ ಆಸ್ಕರ್ ಫೆರ್ನಾಂಡಿಸ್ ವಿರುದ್ಧ ಸುಬ್ರಹ್ಮಣ್ಯ ಸ್ವಾಮಿ ಬಹುಕೋಟಿ ಹಗರಣದ ಬಗ್ಗೆ ದೂರು ನೀಡಿದ್ದಾರೆ. ಆರೋಪಗಳ ಬಗ್ಗೆ ನ್ಯಾಯಾಧೀಶರಾದ ಗೋಮತಿ ಮನೋಚ ಅವರ ಸಮಸಕ್ಷಮದಲ್ಲಿ ಜೂನ್ 2ರಂದು ಸುಮಾರು ಒಂದು ಗಂಟೆ ಕಾಲ ಸ್ವಾಮಿ ವಾದ ಮಂಡಿಸಿದ್ದಾರೆ.

‘ನ್ಯಾಷನಲ್ ಹೆರಾಲ್ಡ್ ನ್ಯೂಸ್ ಪೇಪರ್ ಪಬ್ಲಿಶಿಂಗ್ ಕಂಪೆನಿ’ಯು ಅಂದಾಜು 2000 ಕೋಟಿ ರು.ಗೂ ಮಿಕ್ಕಿದ ಚರ ಸ್ಥಿರ ಆಸ್ತಿ ಹೊಂದಿದೆ. ಇದನ್ನು ಮೇಲೆ ಹೆಸರಿಸಿದ ನಾಲ್ವರು ಕಾಂಗ್ರೆಸ್ ನಾಯಕರು ತಮ್ಮ ಸ್ವಾಧೀನಪಡಿಸಿಕೊಳ್ಳಲು ಕ್ರಿಮಿನಲ್ ಸಂಚು ಹೂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ನ್ಯಾಯವಾದಿಯೂ ಆದ ಸ್ವಾಮಿ, ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ನಾಲ್ವರಿಗೂ ಸಮನ್ಸ್ ಜ್ಯಾರಿಗೊಳಿಸಬೇಕೆಂದು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡರು.

‘ನ್ಯಾಷನಲ್ ಹೆರಾಲ್ಡ್ ನ್ಯೂಸ್ ಪೇಪರ್ ಪಬ್ಲಿಶಿಂಗ್ ಕಂಪೆನಿ’ ಸುದ್ಧಿ ಮಾಧ್ಯಮಗಳನ್ನು ಪ್ರಕಟಿಸುವ ಗುರಿಯನ್ನು ಹೊಂದಿರುವ ಕಂಪೆನಿಯಾಗಿದ್ದು, ಇದಕ್ಕೆ ಸರಕಾರ ಈ ಹಿಂದೆ ದೆಹಲಿ, ಲಕ್ನೊ, ಭೋಪಾಲ್ ಮುಂತಾದೆಡೆಗಳಲ್ಲಿ ಉಚಿತವಾಗಿ ಭೂಮಿಯನ್ನು ನೀಡಿದೆ. ಇದೀಗ ಈ ಬಹುಕೋಟಿ ಮೊತ್ತದ ಕಂಪೆನಿಯನ್ನು ‘ಯಂಗ್ ಇಂಡಿಯನ್’ ಎಂಬ ಕಂಪೆನಿ ತನ್ನ ಕೈವಶ ಮಾಡಿಕೊಳ್ಳಲು ಮುಂದಾಗಿದೆ ಎಂದು ಸ್ವಾಮಿ ವಿವರ ನೀಡಿದ್ದಾರೆ.

ನ್ಯಾಷನಲ್ ಹೆರಾಲ್ಡ್ ನ್ಯೂಸ್ ಪೇಪರ್ ಪಬ್ಲಿಶಿಂಗ್ ಕಂಪೆನಿಗಿರುವ ಯಾವ ಉದ್ಧೇಶಗಳೂ ಯಂಗ್ ಇಂಡಿಯನ್ ಕಂಪೆನಿಗಿಲ್ಲ. ಅದಲ್ಲದೆ, ನ್ಯಾಷನಲ್ ಹೆರಾಲ್ಡ್ ಕಂಪೆನಿಯು ಸರಕಾರದಿಂದ ಲಾಭಗಳನ್ನು ಪಡೆದುಕೊಂಡಿದೆ. ಇದೀಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ ಹಾಗೂ ಆಸ್ಕರ್ ಫೆರ್ನಾಂಡಿಸ್ ಇವರುಗಳಿರುವ ಯಂಗ್ ಇಂಡಿಯನ್ ಕಂಪೆನಿಯು ನ್ಯಾಷನಲ್ ಹೆರಾಲ್ಡ್ ಕಂಪೆನಿಯನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಲು ಮುಂದಾಗಿರುವುದು ಅಕ್ರಮವೆಂದು ಸ್ವಾಮಿ ಅಪಾದಿಸಿದ್ದಾರೆ.

‘ಯಂಗ್ ಇಂಡಿಯನ್’ ಕಂಪೆನಿಯ 76 ಶೇಕಡಾ ಶೇರುಗಳನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ ಹಾಗೂ ಆಸ್ಕರ್ ಫೆರ್ನಾಂಡಿಸ್ ಖರೀದಿಸಿದ್ದಾರೆ. ಆದರೆ ಇವರೆಲ್ಲರೂ ತಮ್ಮ ಸ್ವಂತ ಹಣವನ್ನು ಯಂಗ್ ಇಂಡಿಯನ್ ಕಂಪೆನಿಯ ಶೇರು ಖರೀದಿಗೆ ಉಪಯೋಗಿಸುವ ಬದಲಾಗಿ ಕಾಂಗ್ರೆಸ್ ಪಕ್ಷದ ಫಂಡ್ನಿಂದ 90 ಕೋಟಿ ರು.ಗಳನ್ನು ಇದಕ್ಕೆ ಪಡೆದುಕೊಂಡು ಶೇರುಗಳನ್ನು ಖರೀದಿಸಿದ್ದಾರೆ ಎಂದು ಸ್ವಾಮಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ನ್ಯಾಷನಲ್ ಹೆರಾಲ್ಡ್ ಕಂಪೆನಿ ನೆಹರೂ ಕುಟುಂಬದ ಖಾಸಗಿ ಆಸ್ತಿಯಲ್ಲ. ಈ ಕಂಪೆನಿಗೆ ಸರಕಾರವೂ ಆಸ್ತಿ ಇತ್ಯಾದಿಗಳನ್ನು ನೀಡಿ ಬೆಳೆಸಿದೆ. ಈ ಗೋಲ್ ಮಾಲ್ ಪ್ರಕರಣದಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ನ ಸ್ಯಾಮ್ ಪಿತ್ರೋಡ ಹಾಗೂ ಸುಮನ್ ದುಬೆ ಸಹ ಶಾಮೀಲಾಗಿದ್ದಾರೆಂದು ಸುಬ್ರಹ್ಮಣ್ಯಂ ಸ್ವಾಮಿ ಆರೋಪಿಸಿದ್ದಾರೆ.

ಪ್ರಕರಣದ ಮುಂದಿನ ವಿಚಾರಣೆ ದೆಹಲಿಯ ಮೆಟ್ರೋಪೊಲಿಟಿನ್ ನ್ಯಾಯಾಲಯದಲ್ಲಿ ಜೂನ್ 23ಕ್ಕೆ ನಡೆಯಲಿದೆ.

ಉಡುಪಿ: ಕಾಂಗ್ರೆಸ್ ಪಕ್ಷದ ಮೂವರು ಪ್ರಭಾವೀ ಜನಪ್ರತಿನಿಧಿಗಳು ತಮ್ಮ ತಮ್ಮ ಜಾತಿಯ ಮತ್ತು ತಮ್ಮ ಪ್ರಮುಖ ಹಿಂಬಾಲಕರನ್ನು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿಸಿಕೊಳ್ಳಲು ಭಾರೀ ಲಾಬಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಬಹಿರಂಗಕ್ಕೆ ಬಂದಿದೆ.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಸಹಿತ ವಿವಿಧ ನಿಗಮ, ಮಂಡಳಿ, ಪ್ರಾಧಿಕಾರ, ನಗರ, ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಇರುವ ಹಲವಾರು ಸಮಿತಿಗಳಲ್ಲಿ ಸದಸ್ಯರಾಗಲು ಪಕ್ಷದ ಅನೇಕ ಮಂದಿ ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ನಾಯಕರು ಶಾಸಕರು, ಸಂಸದರು, ಸಚಿವರುಗಳ ಮೂಲಕ ಪ್ರಯತ್ನ ಆರಂಭಿಸಿದ್ದಾರೆ.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಗಿರಿ ಈ ಬಾರಿ ಯಾರಿಗೆ ಲಭಿಸಲಿದೆ ಎಂಬುದು ಪಕ್ಷದೊಳಗೆ ಇದೀಗ ಬಿಸಿಬಿಸಿಯಾಗಿ ನಡೆಯುತ್ತಿರುವ ಹಸಿ ಹಸಿ ಚರ್ಚೆ. ಈ ಸ್ಥಾನಕ್ಕೆ ಮೂವರು ಪ್ರಮುಖರ ಹೆಸರುಗಳು ಈಗ ಕೇಳಿ ಬರುತ್ತಿವೆ. ಈ ಮೂವರ ಪರವಾಗಿ ಜಿಲ್ಲೆಯ ಮೂವರು ಪ್ರಭಾವೀ ಜನಪ್ರತಿನಿಧಿಗಳು ವಕಾಲತ್ತು ವಹಿಸಿರುವುದು ಚರ್ಚೆಗೆ ಇನ್ನೊಂದು ಮುಖ್ಯ ಕಾರಣ.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪ್ರಕಾಶ್ ಎಂ.ಕೊಡವೂರು, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾದ್ಯಕ್ಷ ಕೇಶವ ಕೋಟ್ಯಾನ್ ಹಾಗೂ ಹಿರಿಯ ನ್ಯಾಯವಾದಿ ವಿಜಯ್ ಹೆಗ್ಡೆ ಇವರಲ್ಲಿ ಯಾರಾದರೊಬ್ಬರು ಪ್ರಾಧಿಕಾರದ ಅಧ್ಯಕ್ಷರಾಗಬಹುದು ಎಂಬ ಮಾತು ಕೇಳಿ ಬರುತ್ತಿವೆ. ಈ ಮೂವರಲ್ಲಿ ಯಾರಾದರೊಬ್ಬರು ಪ್ರಾಧಿಕಾರದ ಅಧ್ಯಕ್ಷರಾದಲ್ಲಿ ಉಳಿದ ಇಬ್ಬರಿಗೆ ಇತರ ಯಾವುದಾದರೂ ನಿಗಮ-ಮಂಡಳಿಗಳಲ್ಲಿ ಸ್ಥಾನ-ಮಾನ ಸಿಗುವುದು ಖಚಿತ. ಪ್ರಕಾಶ್ ಕೊಡವೂರು ಪರವಾಗಿ ರಾಜ್ಯದ ನಗರಾಭಿವೃದ್ಧಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಮಾರ್ ಸೊರಕೆ, ಕೇಶವ ಕೋಟ್ಯಾನ್ ಪರವಾಗಿ ಶಾಸಕ ಪ್ರಮೋದ್ ಮಧ್ವರಾಜ್ ಹಾಗೂ ವಿಜಯ್ ಹೆಗ್ಡೆ ಪರವಾಗಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಕೆಪಿಸಿಸಿ ಮತ್ತು ಮುಖ್ಯಮಂತ್ರಿಗಳ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಒಂದು ಜಾತ್ಯಾತೀತ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಜಾತ್ಯಾತೀತವಾಗಿ ಆಯ್ಕೆ ಮಾಡುತ್ತದೆ ಎಂದು ಹೇಳಿಕೊಳ್ಳಲಾಗುತ್ತೆ. ಹೀಗೆ ಜಾತ್ಯಾತೀತ ಅಭ್ಯರ್ಥಿಗಳಾಗಿ ಆಯ್ಕೆಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಜನಪ್ರತಿನಿಧಿಗಳಾಗಿ ಆರಿಸಿಬಂದವರು, ಬಳಿಕ ತಮ್ಮ ತಮ್ಮ ಜಾತಿ ಜನರ ಬೇಕು ಬೇಡಗಳಿಗಾಗಿ ತಮ್ಮ
ಶಕ್ತಿ-ಸಾಮಥ್ರ್ಯ ಪ್ರದರ್ಶಿಸುವುದು ಮಾತ್ರ ಪಕ್ಷದೊಳಗೆ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಬಿಲ್ಲವ ಸಮುದಾಯಕ್ಕೆ ಸೇರಿದ ವಿನಯ ಕುಮಾರ್ ಸೊರಕೆಯವರು ಬಿಲ್ಲವ ಸಮುದಾಯಕ್ಕೇ ಸೇರಿದ ಪ್ರಕಾಶ್ ಕೊಡವೂರು ಪರವಾಗಿ, ಮೊಗವೀರ ಸಮುದಾಯಕ್ಕೆ ಸೇರಿದ ಪ್ರಮೋದ್ ಮಧ್ವರಾಜ್ ರವರು ಮೊಗವೀರ ಸಮುದಾಯಕ್ಕೇ ಸೇರಿದ ಕೇಶವ ಕೋಟ್ಯಾನ್ ಪರವಾಗಿ ಹಾಗೂ ಬಂಟ ಸಮುದಾಯಕ್ಕೆ ಸೇರಿದ ಜಯಪ್ರಕಾಶ್ ಹೆಗ್ಡೆಯವರು ಬಂಟ ಸಮುದಾಯಕ್ಕೇ ಸೇರಿದ ವಿಜಯ್ ಹೆಗ್ಡೆ ಪರವಾಗಿ ವಕಾಲತ್ತು ವಹಿಸಿ ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಶಾಸಕರಾಗಿ ಮತ್ತು ಸಚಿವರಾಗಿ ಆಯ್ಕೆಯಾದ ಸೊರಕೆಯವರನ್ನು ಅಭಿನಂದಿಸಿ ಪ್ರಕಾಶ್ ಕೊಡವೂರು ಅವರು ಅಲ್ಲಲ್ಲಿ ಬೃಹತ್ ಫ್ಲೆಕ್ಸ್ ಬ್ಯಾನರ್ ಹಾಕುವ ಮೂಲಕ ಸೊರಕೆಯವರಿಗೆ ಮತ್ತಷ್ಟೂ ಹತ್ತಿರವಾಗಿದ್ದಾರೆ. ವಿಜಯ್ ಹೆಗ್ಡೆಯವರು ಸಂಸದ ಜಯಪ್ರಕಾಸ್ ಹೆಗ್ಡೆಯವರ ಲೋಕಸಭಾ ಚುನಾವಣೆಯ ಚುನಾವಣಾ ಏಜೆಂಟ್ ಆಗಿ ಕರ್ತವ್ಯ ಸಲ್ಲಿಸುವ ಮೂಲಕ ಹೆಗ್ಡೆಯವರಿಗೆ ಇನ್ನಷ್ಟೂ ಆಪ್ತರಾದವರು.
ಶಾಸಕ, ಸಂಸದ ಹಾಗೂ ಸಚಿವರು ತಮ್ಮ ತಮ್ಮ ಜಾತಿ ಜನರ ಪರವಾಗಿ ಲಾಬಿ ನಡೆಸುತ್ತಿರುವ ವಿಷಯ ಬೆಳಕಿಗೆ ಬರುತ್ತಿರುವಂತೆಯೇ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿರುವ ಇತರ ಜನಾಂಗಕ್ಕೆ ಸೇರಿದ ಪ್ರಮುಖ ಪದಾಧಿಕಾರಿಗಳು ಈ ಮೂರೂ ಮಂದಿ ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ. ಈ ಆಕ್ರೋಶ ಪ್ರಸ್ತುತ ಪಕ್ಷದೊಳಗಡೆಯೇ ಇದೆಯಾದರೂ ನಿಧಾನವಾಗಿ ಇದು ಬಹಿರಂಗಕ್ಕೆ ಬರುವ ಸಾಧ್ಯತೆಯೂ ಇದೆ.
ಜನಪ್ರತಿನಿಧಿಯಾದವರು, ಪಕ್ಷದಲ್ಲಿ ಪ್ರಾಮಾಣಿಕವಾಗಿ ಮತ್ತು ಸಕ್ರಿಯವಾಗಿರುವವರನ್ನು ಜಾತಿ, ಮತ, ಲಿಂಗ ಬೇಧ ಮಾಡದೆ ಗುರುತಿಸಿ ಅವರಿಗೆ ಸೂಕ್ತ ಸ್ಥಾನ-ಮಾನಗಳನ್ನು ಕಲ್ಪಿಸಿಕೊಡಬೇಕು. ಅದು ಬಿಟ್ಟು ಜಾತಿವಾದಿಗಳಾಗಿ ಮುಂದುವರಿದರೆ ಪಕ್ಷದಲ್ಲಿ ಸಕ್ರಿಯವಾಗಿರುವ ಇತರ ಸಣ್ಣ ಪುಟ್ಟ ಜಾತಿ ಮುಖಂಡರು ಏನು ಮಾಡಬೇಕು ಎಂಬುದು ಕೆಲವರ ಪ್ರಶ್ನೆ.
ಈ ನಡುವೆ ಏಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್ ಹಾಗೂ ಇವರ ಪತ್ನಿ ಬ್ಲೋಸಂ ಫೆರ್ನಾಂಡಿಸ್ ಅವರು ತಮ್ಮ ಪರಮಾಪ್ತರಾದ ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲು ನಿರ್ಧರಿಸಿರುವ ಅಂಶವೂ ಬಯಲಾಗಿದೆ.

ಉಡುಪಿ: ಭಾರತ ದೇಶದಲ್ಲಿ 100 ವರ್ಷ ಇತಿಹಾಸವಿದೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷದ ನಾಯಕರಿಗೆ ಸಾಮೂಹಿಕ ನಾಯಕತ್ವವಿಲ್ಲ, ಸ್ವತಂತ್ರವಾಗಿ ಪಕ್ಷ ಸಂಘಟಿಸುವಂತಿಲ್ಲ, ಪಕ್ಷದಲ್ಲಿ ನಿಷ್ಠಾವಂತರಿಗೆ ಸ್ಥಾನವಿಲ್ಲ. ಹಣ ಮತ್ತು ಲಾಬಿ ನಡೆಸಿದರೆ ಮಾತ್ರ ಸ್ಥಾನ. ತತ್ವ ಸಿದ್ದಾಂತವನ್ನು ಗಾಳಿಗೆ ತೂರಿ, ಅರ್ಜಿಯೇ ಹಾಕದ ಅಭ್ಯರ್ಥಿಗೆ ಶ್ರೀಮತಿ ಸೋನಿಯಾ ಗಾಂಧಿಯವರ ದಿಲ್ಲಿಯಿಂದ ಬಿ.ಫಾರಂ ಬರುವಂತಾಗಿದೆ. ಮುಂದಿನ ಲೋಕಸಭಾ ಚುನಾವಣೆಗೆ ಇಟಲಿಯಿಂದ ಬಿ ಫಾರಂ ತರುವ ಕಾಲ ಸನ್ನಿಹಿತವಾಗಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಲೇವಡಿ ಮಾಡಿದ್ದಾರೆ.
ಅದಮಾರಿನಲ್ಲಿ ನಡೆದ ಕಾರ್ಯಕರ್ತರ ಸಬೆಯಲ್ಲಿ ಅವರು ಮಾತನಾಡುತ್ತಿದ್ದರು.
ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಗೆ ಬೆಲೆಯಿಲ್ಲ, ಅಭಿವೃದ್ದಿಯ ಚಿಂತನೆಯಿಲ್ಲ. ರಿಮೋಟ್ ಕಂಟ್ರೊಲ್ ನಾಯಕತ್ವದಲ್ಲಿ ಏಕಚಕ್ರಾಧಿಪತ್ಯ ದಿಂದ ದೇಶ ದಿವಾಳಿಯಾಗಿದೆ. ಬಿಜೆಪಿ ಪಕ್ಷದಲ್ಲಿ ಸಮರ್ಥ ನಾಯಕರಿಲ್ಲ ಭ್ರಷ್ಟಾಚಾರವೇ ಅವರ ಬಂಡವಾಳ, ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶೆಟ್ಟಿ ವ್ಯಂಗ್ಯವಾಡಿದ್ದಾರೆ.
ಜೆಡಿಎಸ್ ಪಕ್ಷದಲ್ಲಿ ಸಮರ್ಥ ನಾಯಕರಿದ್ದಾರೆ. ಬದಲಾವಣೆಗಾಗಿ ಜನ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಿದ್ಧಾರೆ. ಅಭಿವೃದ್ದಿ, ಜನಪರ ಯೋಜನೆಗಳು, ಅಂಗವಿಕಲರಿಗೆ ಮಾಸಾಶನ, ವೃದಾಪ್ಯ ವೇತನ, ವಿಧವಾ ವೇತನ ದ್ವಿಗುಣಗೊಳಿಸಿರುವುದು, ಶಾಲಾ ಮಕ್ಕಳಿಗೆ ಸೈಕಲ್, ಬಿಸಿಯೂಟ, ಸಂಧ್ಯಾ ಸುರಕ್ಷೆ, ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದರು. ಕರ್ನಾಟಕ ರಾಜ್ಯದಲ್ಲಿ ಬ್ಯಾರಿ ಅಕಾಡೆಮಿ ಸ್ಥಾಪನೆ, ಹಜ್ ಭವನ ನಿರ್ಮಾಣ, ಅಲ್ಪಸಂಖ್ಯಾತರ ಕಲ್ಯಾಣ ಯೋಜನೆ, ದೇಶದ ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿಗೆ ರೈತರ
ಸಾಲಮನ್ನಾಗೊಳಿಸಿರುವ ಕುಮಾರಸ್ವಾಮಿಯವರ ಸಾಧನೆಯೇ ಜೆಡಿಎಸ್ ಗೆ ಶ್ರೀರಕ್ಷೆ ಎಂದು ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಪಕ್ಷದ ನಾಯಕರಾದ ವಾಸುದೇವ ರಾವ್, ಉದಯ ಹೆಗ್ಡೆ, ಯೋಗೀಶ್ ಶೆಟ್ಟಿ ಕಾಪು, ರಾಜೇಶ್ ಕರ್ಕೇರ, ಹರೀಶ್ ನಾಯಕ್, ಕರುಣಾಕರ ಶೆಟ್ಟಿ ಪಾದೂರು, ಆಲಿ ಕಳ್ತೂರು, ಸಚಿನ್ ಶೆಟ್ಟಿ ಮಜೂರು, ಪ್ರಕಾಶ್ ಕೋಟ್ಯನ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಉಡುಪಿ: ಮಂಗಳೂರಿನ ನೆಹರೂ ಮೈದಾನದಲ್ಲಿ ಅ.18 ರಂದು ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ದ.ಕ.ಮತ್ತು ಉಡುಪಿ ಜಿಲ್ಲೆಗಳ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಬೃಹತ್ ಅಧಿವೇಶನದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂದಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ನಾಯಕ ಬಿ.ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ಉಡುಪಿ ಕಾಂಗ್ರೆಸ್ ಭವನದಲ್ಲಿ ಇಂದು ಸಂಜೆ ನಡೆಸಿದ ಮಾದ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. ಅಧಿವೇಶನದಲ್ಲಿ ಎರಡೂ ಜಿಲ್ಲೆಗಳ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರು, ಗ್ರಾ.ಪಂ., ತಾ.ಪಂ., ಜಿ.ಪಂ., ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆಗಳಗಳ ಹಾಲಿ-ಮಾಜಿ ಸದಸ್ಯರು ಭಾಗವಹಿಸಲಿದ್ದಾರೆ. 15 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿರುವ ಈ ಅಧಿವೇಶನ ಬಹಿರಂಗ ಸಭೆಯಲ್ಲವೆಂದೂ ಇದೇ ಸಂದರ್ಭದಲ್ಲಿ ಪೋಜಾರಿ ಸ್ಪಷ್ಟಪಡಿಸಿದರು.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬೆಂಬಲಿಗರು ಬಿಜೆಪಿ ಪಕ್ಷದ ಮೇಲಿನ ಅಸಮಾಧಾನದಿಂದ ಪಕ್ಷ ತೊರೆದು ಹೊರಗೆ ಬಂದಲ್ಲಿ ರಾಜ್ಯದ ಬಿಜೆಪಿ ಸರಕಾರ ಪತನವಾಗಲಿದ್ದು, ಚುನಾವಣೆ ಅನಿವಾರ್ಯವಾಗಲಿರುವ
ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಚುನಾವಣೆಗೆ ಸಿದ್ದಗೊಳಿಸಲು ಅಧಿವೇಶನ
ಹಮ್ಮಿಕೊಳ್ಳಲಾಗಿದೆ. ಅಧಿವೇಶನದ ಬಳಿಕ ಸೋನಿಯಾ ಗಾಂಧಿ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದ ಶತಮಾನೋತ್ಸವ ಸಮಾರಂಭ ಮತ್ತು ಮಂಗಳೂರು ದಸರಾ ಉತ್ಸವ ಉದ್ಘಾಟಿಸಲಿದ್ದಾರೆ ಎಂದು ಪೂಜಾರಿ ಹೇಳಿದರು.
ಪ್ರಶಸ್ತಿ ನಿರಾಕರಿಸಿದ ಪೂಜಾರಿ ಚಿತ್ರದುರ್ಗ ಮುರುಘಾಮಠವು ಪ್ರತಿವರ್ಷ ಕೊಡಮಾಡುವ ಪ್ರತಿಷ್ಟಿತ ಪ್ರಶಸ್ತಿಗೆ ಈ ಬಾರಿ ತನ್ನನ್ನು ಆಯ್ಕೆ ಮಾಡಿದ ಬಗ್ಗೆ ಬಗ್ಗೆ ಮತ್ತು ಈ ಬಗ್ಗೆ ಮಾತನಾಡಲು ಮಠದಿಂದ ಕರೆ ಬಂತು. ಮಠದ ಸ್ವಾಮೀಜಿಗಳ ಬಗ್ಗೆ ಮತ್ತು ಪ್ರಶಸ್ತಿ ಬಗ್ಗೆ ತನಗೆ ಗೌರವ ಇದೆ. ಕಳೆದ ವರ್ಷ ಇದೇ ಪ್ರಶಸ್ತಿಯನ್ನು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಗೆ
ನೀಡಲಾಗಿತ್ತು. ಆದರೆ, ತಾನು ಈ ಹಿಂದೆಯೂ, ಇನ್ನು ಮುಂದೆಯೂ ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸಬಾರದು ಎಂಬ ನಿಲುವು ಹೊಂದಿರುವುದರಿಂದ ಪ್ರಶಸ್ತಿಯನ್ನು ಗೌರವದಿಂದಲೇ ನಿರಾಕರಿಸಿದೆ ಎಂದು ಪತ್ರಕಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಜನಾರ್ದನ ಪೂಜಾರಿ ಬಹಿರಂಗಪಡಿಸಿದರು.
ಮಾದ್ಯಮಗೋಷ್ಟಿಯಲ್ಲಿ ಸಂಸದ ಜಯಪ್ರಕಾಶ್ ಹೆಗ್ಡೆ, ಪಕ್ಷದ ನಾಯಕರಾದ ಎಂ.ಎ.ಗಫೂರ್, ವಸಂತ ಸಾಲ್ಯಾನ್, ಪ್ರಮೋದ್ ಮದ್ವರಾಜ್, ಕೃಷ್ಣಮೂರ್ತಿ ಆಚಾರ್ಯ, ಅಶೋಕ್ ಕುಮಾರ್ ಕೊಡವೂರು, ನರಸಿಂಹಮೂರ್ತಿ, ಕೇಶವ ಕೋಟ್ಯಾನ್, ಜನಾರ್ದನ ತೋನ್ಸೆ, ಗಂಗಾಧರ ಸುವರ್ಣ, ಎಂ.ಪಿ.ಮೊಯಿದಿನಬ್ಬ, ಶಶಿಧರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ: ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಭ್ರಷ್ಟಾಚಾರದ ಹಗರಣಗಳಲ್ಲಿ ಮುಳುಗಿದೆ ಎಂದು ಆರೋಪಿಸಿ, ಪ್ರಧಾನಿ ಡಾ.ಮನಮೋಹನ್ ಸಿಂಘ್ ರಾಜೀನಾಮೆಗೆ ಒತ್ತಾಯಿಸಿ ಇಂದು ಬೆಳಗ್ಗೆ ಎಬಿವಿಪಿ ನಾಯಕರು, ಕಾರ್ಯಕರ್ತರು ಹಾಗೂ ಬಿಜೆಪಿ ಯುವಮೋರ್ಛಾ ನಾಯಕರು ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸುವಂತೆ ಮಾಡಿ ಬಂದ್ ನಡೆಸಿದರು.
ಬಳಿಕ ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿ ಒಟ್ಟು ಸೇರಿದ ಎಬಿವಿಪಿ ನಾಯಕರು ಹಾಗೂ ಕಾರ್ಯಕರ್ತರು ಕವಿ ಮುದ್ದಣ ಮಾರ್ಗ, ಕೋರ್ಟ್ ರಸ್ತೆಯಾಗಿ ತಾಲೂಕು ಕಚೇರಿವರೆಗೆ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಜನಜಾಗೃತಿ ಜಾಥಾ ನಡೆಸಿದರು. ತಹಶಿಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಬೇಡಿಕೆಗಳ ಮನವಿ ಪತ್ರ ಕಳುಹಿಸಿಕೊಟ್ಟರು. ಬಿಜೆಪಿ ಯುವಮೋರ್ಛಾ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಹಾಗೂ ಎಬಿವಿಪಿ ಜಿಲ್ಲಾ ಪ್ರಮುಖ್ ರಾಜ ಶಂಕರ್ ಜಾಥಾದ ನೇತೃತ್ವ ವಹಿಸಿದ್ದರು.

ಕಾಂಗ್ರೆಸ್ ಮುಖಂಡ ಮಂಜುನಾಥ ಉದ್ಯಾವರ ಇನ್ನಿಲ್ ಲ

Posted: ಆಗಷ್ಟ್ 29, 2012 in Uncategorized
ಟ್ಯಾಗ್ ಗಳು:, , , , , , , , , , , , , , , , , , , , , , , , , , , , , , , , , , , , , , , , , , , , , , , , , , , , , , ,

ಉಡುಪಿ: ಏಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್ ಅವರ ಆಪ್ತ ಕಾರ್ಯದರ್ಶಿ ಮತ್ತು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಉದ್ಯಾವರ (56) ಇಂದು ಮುಂಜಾನೆ ಗಂಟೆ 4.45 ಕ್ಕೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದೊಂದು ವರ್ಷದಿಂದ ಅನಾರೋಗ್ಯಕ್ಕೀಡಾಗಿದ್ದ ಮಂಜುನಾಥ್ ಅವರು, ಯಾವುದೇ ವೈದ್ಯಕೀಯ ಚಿಕಿತ್ಸೆಗೂ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ರಾಧಾ, ಮಗಳು ಕು.ಸರ್ವಮಂಗಳಾ, ಖ್ಯಾತ ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಸಹಿತ ನಾಲ್ವರು ಸಹೋದರರು ಹಾಗೂ ಮೂವರು ಸಹೋದರಿಯರು ಮತ್ತು ಅಪಾರ ಬಂದು ಬಳಗವನ್ನು ಬಿಟ್ಟಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ಆ.30 ರಂದು ಗಂಟೆ 11.30 ಕ್ಕೆ ಉದ್ಯಾವರ ಸಾರ್ವಜನಿಕ ಹಿಂದೂ ರುದ್ರಭೂಮಿ ಮುಕ್ತಧಾಮದಲ್ಲಿ ನಡೆಯಲಿದೆ. ಬೆಳಗ್ಗೆ ಗಂಟೆ ಹತ್ತರಿಂದ ಮರತದೇಹವನ್ನು ಸ್ಥಳೀಯ ಶಾಲಾ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ಇದೇ ಸಮಯದಲ್ಲಿ ಶ್ರದ್ಧಾಂಜಲಿ ಸಭೆಯೂ ನಡೆಯಲಿದೆ ಎಂದು ಕಾಂಗ್ರೆಸ್ ಪಕ್ಷದ ಪ್ರಕಟಣೆ ತಿಳಿಸಿದೆ. ಉದ್ಯಾವರ ಫ್ರೆಂಡ್ಸ್ ಸರ್ಕಲ್ ನ ಗೌರವ ಅಧ್ಯಕ್ಷರು, ಉದ್ಯಾವರ ಸಾರ್ವಜನಿಕ ಹಿಂದೂ ರುದ್ರಭೂಮಿ ಸಾರ್ವಜನಿಕ ಪ್ರತಿಷ್ಠಾನದ ಅಧ್ಯಕ್ಷರು, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ಕೇದಾರ ಬ್ರಹ್ಮಲಿಂಗೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಗುಡ್ಡೆಯಂಗಡಿ ಬಬ್ಬುಸ್ವಾಮಿ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷರು, ಪಿತ್ರೋಡಿ ಮಹಾಕಾಳಿ ಶನೀಶ್ವರ ದೇವಾಲಯ ಅಭಿವೃದ್ದಿ ಸಮಿತಿ ಗೌರವ ಅಧ್ಯಕ್ಷರು ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ಹೊಂದಿ ಜನಾನುರಾಗಿಯಾಗಿದ್ದವರು ಮಂಜುನಾಥ ಉದ್ಯಾವರ.
ಇವರ ನಿಧನಕ್ಕೆ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ, ಮಾಜಿ ಕೇಂದ್ರ ಸಚಿವರಾದ ಆಸ್ಕರ್ ಫೆರ್ನಾಂಡಿಸ್, ಬಿ.ಜನಾರ್ದನ ಪೂಜಾರಿ, ರಾಜ್ಯ ವಿಧಾನಸಭೆಯ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಅಭಯಚಂದ್ರ ಜೈನ್, ಏಐಸಿಸಿ ಕಾರ್ಯದರ್ಶಿ ವಿನಯಕುಮಾರ್ ಸೊರಕೆ, ಸಂಸದ ಜಯಪ್ರಕಾಶ್ ಹೆಗ್ಡೆ, ಶಾಸಕ ಗೋಪಾಲ ಭಂಡಾರಿ, ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಚಿವ ವಸಂತ ಸಾಲ್ಯಾನ್, ಪ್ರಮೋದ್ ಮಧ್ವರಾಜ್, ಅಶೋಕ್ ಕುಮಾರ್ ಕೊಡವೂರು, ಬಿ.ನರಸಿಂಹ ಮೂರ್ತಿ, ಎಂ.ಎ.ಗಫೂರ್, ದಿನೇಶ್ ಪುತ್ರನ್ ಸಹಿತ ಹಲವರು ತೀವ್ರ ಸಂತಾಪ
ವ್ಯಕ್ತಪಡಿಸಿದ್ದಾರೆ.

ಉಡುಪಿ: ರಾಜ್ಯದಲ್ಲಿ ಬಿಜೆಪಿ ಆಡಳಿತ ಅಸ್ತಿತ್ವಕ್ಕೆ ಬಂದ ಬಳಿಕ 2008 ರಿಂದ ಇಂದಿನವರೆಗೂ ಸರಕಾರ ನಿರಂತರವಾಗಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಗುಂಪುಗಾರಿಕೆ, ಅನೈತಿಕ ಹಗರಣ, ಕಚ್ಚಾಟ ಇತ್ಯಾದಿಗಳಿಂದ ನಲುಗಿಹೋಗಿದ್ದು, ಇದರಿಂದಾಗಿ ರಾಜ್ಯದಲ್ಲಿ ಸರಕಾರವೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇವುಗಳ ವಿರುದ್ಧ ಯುವ ಕಾಂಗ್ರೆಸ್ ರಾಜ್ಯದಾದ್ಯಂತ ‘ಯುವ ಧ್ವನಿ’ ಎಂಬ ಅಭಿಯಾನವನ್ನು ಆರಂಭಿಸಿದೆ ಎಂದು ಯುವ ಕಾಂಗ್ರೆಸ್ ನ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಪಿ. ಅಮೃತ್ ಶೆಣೈ ಅವರು ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಇಂದು ಬೆಳಗ್ಗೆ ನಡೆಸಿದ ಮಾದ್ಯಮಗೋಷ್ಟಿಯಲ್ಲಿ ಅವರು ಯುವ ಧ್ವನಿ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು. ಆಪರೇಷನ್ ಕಮಲದಂಥ ನೀಚ ಸಂಸ್ಕೃತಿಯ ಮೂಲಕ ಆಡಳಿತಕ್ಕೆ ಬಂದ ಬಿಜೆಪಿ ಸರಕಾರವು ಆಡಳಿತಕ್ಕೆ ಬಂದ ಬೆನ್ನಿಗೆ ರೈತರಿಗೆ ಗುಂಡು ಹಾರಿಸಿ ಹತ್ಯೆ ನಡೆಸಿತು, ಗಣಿ ಹಗರಣ ನಡೆಸಿತು, ಡಿನೋಟಿಫಿಕೇಶನ್ ಹಗರಣ ನಡೆಸಿತು, ಕೆಲವು ಮಂತ್ರಿಗಳು ಜೈಲಿಗೂ ಹೋಗಿ ಬಂದರು, ರೆಸಾರ್ಟ್ ರಾಜಕೀಯವನ್ನೂ ನಡೆಸಿತು, ಹೀಗೆ ರಾಜ್ಯದ 6 ಕೋಟಿ ಜನರನ್ನೂ ವಂಚಿಸಿತು ಎಂದು ಅಮೃತ್ ಶೆಣೈ ಟೀಕಿಸಿದರು.
ಇವುಗಳೆದರ ವಿರುದ್ಧ ಜನಜಾಗೃತಿ ಮೂಡಿಸುವ ಸಲುವಾಗಿ ಆ.24 ರಿಂದ ಮುಂದಿನ ಒಂದು ತಿಂಗಳ ಕಾಲ ರಾಜ್ಯದಾದ್ಯಂತ ಜನ ಜಾಗೃತಿ ಸಭೆ, ಭಿತ್ತಿ ಪತ್ರ ಕರಪತ್ರ ಚಳುವಳಿ, ಜನಮತ ಸಂಗ್ರಹವೇ ಮೊದಲಾದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ವಿವರ ನೀಡಿದರು.
ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರಕಾರ ಮುಂದುವರಿಯಬಾರದು ಎಂಬುದನ್ನು ರಾಜ್ಯದ ಯುವ ಜನರು http://www.yuvadhwani.com ಗೆ ಭೀಟಿ ನೀಡುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸಬಹುದು, 56767 ನಂ ಗೆ YUVA NO ಎಂಬ ಎಸ್ಎಂಎಸ್ ಕಳುಹಿಸುವ ಮೂಲಕವೂ ಈ ಅಭಿಯಾನದಲ್ಲಿ ಭಾಗವಹಿಸಬಹುದು, 080 67006531 ದೂರವಾಣಿ ಸಂಖ್ಯೆಗೆ missed caii ಮಾಡುವ ಮೂಲಕವೂ ತಮ್ಮ ಅಭಿಪ್ರಾಯಗಳನ್ನು ದಾಖಲಿಸಬಹುದು ಎಂದು ಅಮೃತ್ ಶೆಣೈ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು. ಯುವ – ಯುವತಿಯರು ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಸಕ್ರಿಯವಾಗಿ ಭಾಗವಹಿಸವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಅವರು ವಿನಂತಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಯುವ ಕಾಂಗ್ರೆಸ್ ನಾಯಕರು ಭಿತ್ತಿಪತ್ರವನ್ನು ಪ್ರದರ್ಶಿಸಿದರು. ಯುವ ಕಾಂಗ್ರೆಸ್ ನ ಲೋಕಸಭಾ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಬೀಬ್ ಅಲಿ, ಉಡುಪಿ ವಿಧಾನ ಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಯತೀಶ್ ಕರ್ಕೇರ, ಪ್ರಧಾನ ಕಾರ್ಯದರ್ಶಿ ಯಾಸೀನ್ ಮಲ್ಪೆ, ಸಂಘಟನಾ ಕಾರ್ಯದರ್ಶಿ ನಾಗೇಶ್ ಸುವರ್ಣ, ಪ್ರಶಾಂತ್ ಹಾಗೂ ಕಾಪು ವಿಧಾನ ಸಭಾ ಕ್ಷೇತ್ರ ಸಮಿತಿಯ ಮುಖಂಡ ಸುನಿಲ್ ಬಂಗೇರ ಉಪಸ್ಥಿತರಿದ್ದರು.
ಚಿತ್ರಗಳು-ವರದಿ: ಶ್ರೀರಾಮ ದಿವಾಣ.