Posts Tagged ‘u.t.khader mla’

ಉಡುಪಿ: ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಗೆ ಸೇರಿದ ಮಂಗಳೂರು ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿರುವ ರಕ್ತನಿಧಿ (ಬ್ಲಡ್ ಬ್ಯಾಂಕ್)ಯ ಸಂಗ್ರಹದಲ್ಲಿದ್ದ
ಸಾರ್ವಜನಿಕರಿಂದ ಸಂಗ್ರಹಿಸಲಾದ 43 ಯುನಿಟ್ ರಕ್ತ ಚರಂಡಿಗೆ ಎಸೆಯಲಾದ ದುರಂತ ವಿದ್ಯಾಮಾನವೊಂದು ನಡೆದಿದೆ.

ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಊರಿನಲ್ಲಿಯೇ, ರಾಜ್ಯ ಸರಕಾರದ ಅಧೀನದಲ್ಲಿರುವ ರೆಡ್ ಕ್ರಾಸ್ ಸೊಸೈಟಿಗೆ ಸೇರಿದ ಬ್ಲಡ್ ಬ್ಯಾಂಕ್ ನ ರಕ್ತ ಚರಂಡಿಗೆಸೆಯಲ್ಪಟ್ಟಿರುವುದು ವಿಪರ್ಯಾಸವೇ ಸರಿ.

43 ಯುನಿಟ್ ರಕ್ತವನ್ನು ಈಗಾಗಲೇ ಚರಂಡಿಗೆ ಹರಿಯಬಿಡಲಾಗಿದ್ದರೆ, 47 ಯುನಿಟ್ ರಕ್ತವನ್ನು ಇನ್ನು ಒಂದೆರಡು ದಿನಗಳಲ್ಲಿ ಚರಂಡಿಗೆ ಹರಿಯಬಿಡಲು ಸಿದ್ದತೆ
ನಡೆಸಲಾಗಿತ್ತು ಎಂದು ಹೇಳಲಾಗಿದೆ.

ಅತ್ಯಮೂಲ್ಯವಾಗಿರುವ ರಕ್ತವನ್ನು ಹೀಗೆ ಚರಂಡಿಗೆ ಸೆಯುವುದು ಅಕ್ಷಮ್ಯ ಅಪರಾಧವಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಸರಕಾರ ಐಪಿಸಿ ಕಲಂ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದು ಅನಿವಾರ್ಯವಾಗಿದೆ. ಈ ಬಗ್ಗೆ ಮಂಗಳೂರಿನವರೇ ಆಗಿರುವ ಸಚಿವ ಖಾದರ್ ಪೊಲೀಸರಿಗೆ ಆದೇಶಿಸುವುದು ಅತೀ ಅಗತ್ಯವಾಗಲಿದೆ. ಇದನ್ನು ಸಚಿವರು ಮಾಡದೇ ಇದ್ದಲ್ಲಿ ಸಚಿವರು ಆರೋಪಿಗಳನ್ನು ರಕ್ಷಿಸದಂತಾಗಲಿದೆ.

ಚರಂಡಿಗೆಸೆಯಲಾದ ರಕ್ತ ರೆಡ್ ಕ್ರಾಸ್ ಸೊಸೈಟಿಗೆ ಸೇರಿದ್ದು, ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಕೂಡಲೇ ರೆಡ್ ಕ್ರಾಸ್ ಸೊಸೈಟಿಯ ಬ್ಲಡ್ ಬ್ಯಾಂಕ್ ಅಧಿಕಾರಿಯನ್ನು ಅಮಾನತುಗೊಳಿಸಬೇಕಾಗುತ್ತದೆ.

ದಕ್ಷ ಮತ್ತು ಪ್ರಾಮಾಣಿಕ ವೈದ್ಯಾಧಿಕಾರಿಗಳನ್ನು ಸುಳ್ಳು ದೂರಿನಡಿಯಲ್ಲಿ ಅಮಾನತು ಮಾಡುವ, ಸರಕಾರಿ ರಕ್ತನಿಧಿಯನ್ನು ನಾಶಗೊಳಿಸಿ, ಖಾಸಗಿ ಬ್ಲಡ್ ಬ್ಯಾಂಕ್ ಗಳನ್ನು ಪೋಷಿಸುವ ರಾಜ್ಯ ಸರಕಾರ ಮತ್ತು ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್, ಆರೋಗ್ಯ ಇಲಾಖೆಯ ಮಾಜಿ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಐಎಎಸ್, ಹಾಲಿ ಪ್ರಧಾನ ಕಾರ್ಯದರ್ಶಿ ಎನ್.ಶಿವಶೈಲಂ ಮೊದಲಾದವರು ನೀತಿಗಳೇ, ಪ್ರಸ್ತುತ ಸಾರ್ವಜನಿಕರಿಂದ ಸಂಗ್ರಹಿಸಲಾದ ಜೀವ ರಕ್ಷಕ ರಕ್ತ ಚರಂಡಿಗೆಸೆಯಲ್ಪಡಲು ಮೂಲ ಕಾರಣವೆನ್ನಲಾಗಿದೆ.

# 16ನೇ ಸಾರ್ವತ್ರಿಕ ಲೋಕಸಭಾ ಚುನಾವಣೆಯನ್ನು ಮುಕ್ತ, ಪಾರದರ್ಶಕ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ನಡೆಸಬೇಕು ಎಂಬುದು ಭಾರತ ಚುನಾವಣಾ ಆಯೋಗದ ಆಶಯ ಮತ್ತು ಉದ್ಧೇಶ. ರಾಜ್ಯ ಚುನಾವಣಾ ಆಯೋಗಗಳೂ ಈ ನಿಟ್ಟಿನಲ್ಲಿ ಕಾಯೋನ್ಮುಖವಾಗಿವೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳಾಗಿ ಕರ್ತವ್ಯ
ನಿರ್ವಹಿಸುತ್ತಿದ್ದಾರೆ. ತಹಶಿಲ್ದಾರರ ಸಹಿತ ಜಿಲ್ಲಾಡಳಿತದ ಅನೇಕ ಮಂದಿ ಅಧಿಕಾರಿಗಳು ಹಾಗೂ ನೌಕರರು, ಚುನಾವಣಾ ಸಂಬಂಧಿ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಸುಗಮ ಚುನಾವಣೆಗಾಗಿ ಆಯೋಗ ಮಾದರಿ ಚುನಾವಣಾ ನೀತಿ ಸಂಹಿತೆಯನ್ನೂ ಜ್ಯಾರಿಗೆ ತಂದಿದೆ.

ಅಧಿಕಾರಶಾಹಿ ವ್ಯವಸ್ಥೆಯೇ ಮಹಾಭ್ರಷ್ಟವಾಗಿದೆ ಎನ್ನುವುದು ಹೊಸ ವಿಷಯವೇನೂ ಅಲ್ಲ. ಇಂಥ ಅವ್ಯವಸ್ಥೆಯ ಪರಮಭ್ರಷ್ಟ ಅಧಿಕಾರಿಗಳೇ ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ, ಸ್ಥಳೀಯ ಮಟ್ಟದಲ್ಲಿ ಚುನಾವಣಾಧಿಕಾರಿಗಳಾಗಿ, ವಿವಿಧ ತಂಡಗಳಲ್ಲಿ
ಕಾರ್ಯನಿರ್ವಹಿಸುತ್ತಿರುವುದರಿಂದ, ಇವರಿಂದ ನಿಷ್ಪಕ್ಷಪಾತ, ದಕ್ಷತೆಯ ಕರ್ತವ್ಯ ನಿರ್ವಹಣೆಯನ್ನು ನಿರೀಕ್ಷಿಸುವುದು ಮತ್ತು ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ಎಂದು ಹೇಳುವುದು ಒಂದು ಭ್ರಮೆಯಲ್ಲದೆ ವಾಸ್ತವವಾಗಿರಲು ಸಾಧ್ಯವೇ ಇಲ್ಲ. ಈ ಮಾತಿಗೆ ಅಪವಾದಗಳಿರಬಹುದು.

ಮಾರ್ಚ್ 5ರಂದು ಬೆಳಗ್ಗೆ ಭಾರತದ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿತು. ಯಾವುದೇ ದಿನ ಚುನಾವಣೆ ಘೋಷಣೆ ಆಗಲಿದೆ ಎಂಬುದು ಅಧಿಕಾರಿ-ನೌಕರರಿಗೆ, ರಾಜಕೀಯ ಪಕ್ಷ-ರಾಜಕಾರಣಿ-ಕಾರ್ಯಕರ್ತರಿಗೆ ಸಹ ಚೆನ್ನಾಗಿಯೇ ಗೊತ್ತಿತ್ತು. ಪತ್ರಕರ್ತರ ಸಹಿತ ಬಹುತೇಕ ಎಲ್ಲಾ ವಿಭಾಗಗಳ ಜನವರ್ಗದವರಿಗೂ ತಿಳಿದೇ ಇತ್ತು. ಎಲ್ಲರೂ ಚುನಾವಣಾ ವೇಳಾಪಟ್ಟಿ ಯಾವಾಗ ಪ್ರಕಟವಾಗುತ್ತದೆ ಎಂದು ಕಾಯುತ್ತಿದ್ದರು. ಅಧಿಕಾರಿಗಳು ಹಾಗೂ ರಾಜಕಾರಣಿಗಳು ಕೆಲವು ತಿಂಗಳುಗಳ ಹಿಂದಿನಿಂದಲೇ ಚುನಾವಣೆಗೆ ಬೇಕಾದ ಪೂರ್ವ ತಯಾರಿಗಳನ್ನು ಮಾಡಿಕೊಂಡೇ ಬರುತ್ತಿದ್ದರು.

ಮಾರ್ಚ್ 6ರಂದು ಉಡುಪಿ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ
ಡಾ.ಮುದ್ದುಮೋಹನ್ ಅವರು ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ಕರೆದು ಚುನಾವಣಾ ನೀತಿ ಸಂಹಿತೆಗೆ ಸಂಬಂಧಿಸಿದಂತೆ ತಾವು ಕೈಗೊಂಡ ಕ್ರಮದ ಬಗ್ಗೆ, ಪರಿಶೀಲನೆಗೆ ವಿವಿಧ ತಂಡಗಳನ್ನು ರಚಿಸಿದ ಮತ್ತು ವಿವಿಧ ವಿಭಾಗಗಳಿಗೆ ವೀಕ್ಷಕರನ್ನು ನೇಮಕ ಮಾಡಲಾದ ಕುರಿತು ಬಡಾಯಿಕೊಚ್ಚಿಕೊಂಡಿದ್ದರು. ಆದರೆ ವಾಸ್ತವದಲ್ಲಿ ಇದಾವುದನ್ನೂ ಜಿಲ್ಲಾ
ಚುನಾವಣಾಧಿಕಾರಿಗಳು ಕಟ್ಟುನಿಟ್ಟಾಗಿ ಮಾಡಿರಲೇ ಇಲ್ಲ.

ಭ್ರಷ್ಟ ಅಧಿಕಾರಶಾಹಿ ವ್ಯವಸ್ಥೆಯ ಬಹುತೇಕ ಅಧಿಕಾರಿಗಳೂ ಯಾವತ್ತೂ ಆಡಳಿತ ಪಕ್ಷದ ಪರವಾಗಿಯೇ ಇರುತ್ತಾರೆ. ಆಡಳಿತ ಪಕ್ಷದ ಮತ್ತು ಮುಂದೆ ಅಧಿಕಾರಕ್ಕೆ ಬರುವ ಸಾಧ್ಯತೆ ಇರುವ ಪಕ್ಷದ ಮತ್ತು ರಾಜಕಾರಣಿಗಳ ಪರವಾಗಿಯೇ ಇರುತ್ತಾರೆ. ರಾಜಕಾರಣಿಗಳ
ಬೇಕು-ಬೇಡಗಳನ್ನು ಮುಂಚಿತವಾಗಿಯೇ ಅರಿತಿರುವ ಇಲ್ಲವೇ ಅವರ ಅಣತಿ, ಮಾರ್ಗದರ್ಶನದಂತೆಯೇ ನಡೆದುಕೊಳ್ಳುವ ಜಾಯಮಾನ ಉಳ್ಳವರೇ ಇಂಥ ಚುನಾವಣೆಯನ್ನು ನಡೆಸಿಕೊಂಡು ಬರುತ್ತಾರೆ ಎಂಬುದು ಕಹಿಯಾದರೂ ಒಪ್ಪಿಕೊಲ್ಳಲೇಬೇಕಾದ ಸತ್ಯವೇ ಆಗಿದೆ.

ಈ ಪರಮ ಭ್ರಷ್ಟ ಅಧಿಕಾರಶಾಹಿಗಳು ಕಡತಗಳಲ್ಲಿ ಮಾತ್ರ ಬಹಳ ಕಟ್ಟುನಿಟ್ಟಾಗಿಯೇ ಇರುತ್ತಾರೆ. ಈ ಕಾಗದದ ಹುಲಿಯನ್ನೇ ಪತ್ರಿಕಾಗೋಷ್ಟಿಗಳ ಮೂಲಕ ಮತ್ತು ಸಭೆ-ಸಮಾರಂಭಗಳ ಭಾಷಣಗಳಲ್ಲಿ ಉದ್ಘರಿಸುವ ಮೂಲಕ ತಾವು ಬಹಳ ದಕ್ಷರೆಂದು ಸಾಬೀತುಪಡಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ, ವಾಸ್ತವದಲ್ಲಿ ಮತದಾರರಿಗೆ ಹಣ-ಹೆಂಡ ಹಂಚಲು, ಆಶ್ವಾಸನೆ-ಭರವಸೆ ನೀಡಲು, ಅಮಿಷಗಳನ್ನು ಒಡ್ಡಲು ಪರೋಕ್ಷವಾಗಿ ಅವಕಾಶ
ಮಾಡಿಕೊಟ್ಟಿರುತ್ತಾರೆ. ಇದೆಲ್ಲಾ ಬಹಿರಂಗಕ್ಕೆ ಬರುವುದೇ ಇಲ್ಲ. ಒಂದು ಪಕ್ಷ ಅಲ್ಪ ಸ್ವಲ್ಪ ಮಾಹಿತಿ ಸಿಕ್ಕಿದರೂ, ಅದಕೆಕ ಸರಿಯಾದ ಸಾಕ್ಷ್ಯಾಧಾರ ಇರುವುದಿಲ್ಲ. ಆಗ ಏನೂ ಮಾಡಲೂ ಆಗುವುದಿಲ್ಲ. ಇವುಗಳನ್ನೆಲ್ಲ ನಾಗರಿಕ ಜಗತ್ತಿಗೆ ಗೊತ್ತು ಪಡಿಸಬೇಕಾದ ಮಾಧ್ಯಮಗಳು ಕೂಡಾ ಈ ಸಂದರ್ಭದಲ್ಲಿ ಜಾಹೀರಾತಿನ ಹಿಂದೆಯೋ, ಅನಧಿಕೃತವೂ, ಅಕ್ರಮವೂ ಆಗಿರುವ ಸುದ್ದಿ ಪ್ರಕಟಿಸಲು ಬೇಕಾದ ಕಾಸು ಗಿಟ್ಟಿಸಿಕೊಳ್ಳಲು ಓಡಾಡುತ್ತಿರುತ್ತಾರೆ. ಇನ್ನು ಕೆಲವು ಮಾಧ್ಯಮ ಮಂದಿ ಗುಟ್ಟಾಗಿ ಯಾವುದಾದರೊಂದು ಪಕ್ಷದ ಅಥವಾ ಅಭ್ಯರ್ಥಿಯ ಮುಖವಾಣಿಯಾಗಿಯೇ ಕೆಲಸ ಮಾಡುವಲ್ಲಿ ನಿರತರಾಗಿರುತ್ತಾರೆ. ಇವರಿಗೆಲ್ಲ ಚುನಾವಣಾ ನೀತಿ ಸಂಹಿತೆಯ ಬಗ್ಗೆ ಗಮನಿಸಲು ಸಮಯವೇ ಇರುವುದಿಲ್ಲ.

ಮಾರ್ಚ್ 8ರಂದು ಶಂಕರಪುರದ ವಿಶ್ವಾಸದ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಯು.ಟಿ.ಖಾದರ್ ಹಾಗೂ ಸಂಸದ ಮತ್ತು ಆಡಳಿತ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಆಶ್ವಾಸನೆ, ಭರವಸೆಗಳನ್ನು ನೀಡಿದರು. ಸಚಿವ ವಿನಯ ಕುಮಾರ್ ಸೊರಕೆ ಅಮಿಷ ಒಡ್ಡುವ ಮೂಲಕ ನೀತಿ ಸಂಹಿತೆಯನ್ನು ಬಹಿರಂಗವಾಗಿಯೇ ಉಲ್ಲಂಘಿಸಿದರು. ಆಶ್ವಾಸನೆ, ಭರವಸೆ, ಅಮಿಷಗಳನ್ನು ಕೇಳಿಸಿಕೊಂಡ ಅದೇ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿ
ವಹಿಸಿಕೊಂಡಿದ್ದವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅದೇ ದಿನ ವಿಷಯವನ್ನು ಹಾಕುವ ಮೂಲಕ ಸತ್ಯವನ್ನು ಅನಾವರಣಗೊಳಿಸಿದರು. ವಿಚಾರ ಮರುದಿನದ ಪ್ರಜಾವಾಣಿ ಮತ್ತು ಜಯಕಿರಣದಲ್ಲೂ ವರದಿಯಾಯಿತು. ಆದರೆ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಎಲ್ಲವನ್ನೂ
ಕೇಳಿಸಿಕೊಂಡ, ಚಿತ್ರೀಕರಿಸಿಕೊಂಡ ಇತರ ಅಕ್ಷರ ಮತ್ತು ದೃಶ್ಯ ಮಾದ್ಯಮಗಳ ಪತ್ರಕರ್ತರು ವಿಷಯವನ್ನು ಮರೆಮಾಚುವ ಮೂಲಕ ಆಡಳಿತ ಪಕ್ಷದ ರಾಜಕಾರಣಿಗಳನ್ನು ರಕ್ಷಿಸುವ ಮಹತ್ತರ ಕೆಲಸವನ್ನು ಮಾಡಿ ಕೃತಾರ್ಥರಾದರು !

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದ ಬಗ್ಗೆ ಅದೇ ದಿನ ಉಡುಪಿ ಜಿಲ್ಲಾ
ಚುನಾವಣಾಧಿಕಾರಿಗಳ ಕಚೇರಿಯಲ್ಲಿರುವ ಕಂಟ್ರೋಲ್ ರೂಮ್ ಅಧಿಕೃತರಿಗೆ ದೂರು ನೀಡಲಾಯಿತು. ಎರಡು ದಿನ ಬಿಟ್ಟು ಮಾರ್ಚ್ 10 ಮತ್ತು ಮಾರ್ಚ್ 12ರಂದು ಮತ್ತೆ ಕಂಟ್ರೋಲ್ ರೂಮ್ ಅಧಿಕೃತರನ್ನು ಸಂಪರ್ಕಿಸಿ ದೂರಿನ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ಬೇಕು ಎಂದು ಕೇಳಿದರೆ, ಅಲ್ಲಿದ್ದವರಲ್ಲಿ ದೂರು ನೀಡಲಾದ ಬಗ್ಗೆಯೇ ಕನಿಷ್ಟ ಮಾಹಿತಿಯೂ ಇರಲಿಲ್ಲ. ನಾಳೆ ಕಾಲ್ ಮಾಡಿ, ತಿಳಿದುಕೊಂಡು ಹೇಳುತ್ತೇವೆ ಎಂಬ ಸಿದ್ಧ ಉತ್ತರ. ಮೂರನೇ ದಿನ ಮರಳಿ ವಿಚಾರಿಸಿದಾಗ, ‘ದೂರಿನ ವಿಷಯವನ್ನು ಆರ್ ಐ ಹಾಗೂ ತಹಶಿಲ್ದಾರರಿಗೆ ತಿಳಿಸಿದ್ದೇವೆ’ ಎಂಬ ನೀರಸವಾದ ಉತ್ತರವಷ್ಟೇ ಸಿಕ್ಕಿತು.

ಸಚಿವರುಗಳು ಹಾಗೂ ಸಂಸದರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಬಗ್ಗೆ ಪ್ರಜಾವಾಣಿ ಮತ್ತು ಜಯಕಿರಣದಲ್ಲಿ ವರದಿಯಾಗಿತ್ತು. ಚುನಾವಣಾ ಸಂಬಂಧಿ ಪತ್ರಿಕಾ ವರದಿಗಳ ಮೇಲೆಯೇ ಕಣ್ಣಿಡಲು ಜಿಲ್ಲಾ ಮಟ್ಟದಲ್ಲಿ ಒಂದು ಸಮಿತಿ ಇದೆ ಎಂದು
ಘೋಷಿಸಲಾಗಿದೆಯಾದರೂ, ಇವರಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದ ಬಗ್ಗೆ ವರದಿ ಪ್ರಕಟವಾದ ಪ್ರಜಾವಾಣಿ ಮತ್ತು ಜಯಕಿರಣ ಲಭ್ಯವಿರಲಿಲ್ಲ. ರಾಜಕಾರಣಿಗಳು ಪಾಲ್ಗೊಳ್ಳುವ ಕಾರ್ಯಕ್ರಮಗಳನ್ನು ವಿಡಿಯೋ ಚಿತ್ರೀಕರಣ ಮಾಡುವುದಕ್ಕಾಗಿಯೇ ಒಂದು ತಂಡವಿದೆಯಾದರೂ, ಇವರು ಸಹ ಶಂಕರಪುರ ಸಹಿತ ಆಡಳಿತ ಪಕ್ಷದ ರಾಜಕಾರಣಿಗಳು ಭಾಗವಹಿಸಿದ ಕಾರ್ಯಕ್ರಮಗಳ ಕಡೆಗೆ ಗಮನವನ್ನೇ ಕೊಟ್ಟಿರಲಿಲ್ಲ. ಸಂಬಂಧಿಸಿದ ಅಧಿಕಾರಿಗಳು ದೂರು ಕೊಟ್ಟವರಲ್ಲಿಯೇ ವಿಡಿಯೋ ಸಿಡಿ ಕೊಡಿ ಎಂದು ಕೇಳುವ ಶೋಚನೀಯ ಪರಿಸ್ಥಿತಿ.

ಚುನಾವಣೆಯನ್ನು ನ್ಯಾಯ ಸಮ್ಮತ, ಮುಕ್ತ, ಪಾರದರ್ಶಕವಾಗಿ ನಡೆಸಬೇಕೆಂಬ ಉದ್ಧೇಶದಿಂದ ಕಾರ್ಯವೆಸಗಬೇಕಾದ ಅಧಿಕಾರಿಗಳ ವರ್ಗವೇ ಆಡಳಿತ ಪಕ್ಷದ ಪರವಾಗಿ ಕರ್ತವ್ಯ
ನಿರ್ವಹಿಸುತ್ತಾರೆ, ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ
ಪಾಲಿಸುತ್ತಿಲ್ಲ, ಎಲ್ಲವೂ ಕಡತಗಳಿಗೆ ಮಾತ್ರ ಸೀಮಿತ ಎಂದಾದರೆ, ಇದನ್ನು ನ್ಯಾಯಸಮ್ಮತ ಚುನಾವಣೆ ಎಂದು ಒಪ್ಪಿಕೊಳ್ಳಲು ಸಾಧ್ಯವೇ ? ಆಡಳಿತ ಪಕ್ಷವೇ ತಮಗೆ ಬೇಕಾದ
ಅಧಿಕಾರಿಗಳನ್ನು ತಮಗೆ ಬೇಕಾದ ನಿರ್ಧಿಷ್ಟ ಸ್ಥಳಗಳಲ್ಲಿ ನಿಯುಕ್ತಿ ಮಾಡಿಕೊಳ್ಳುತ್ತವೆ ಎನ್ನುವುದು ಇದಕ್ಕೆ. ಈ ಹಿನ್ನೆಲೆಯಲ್ಲಿ, ಉಡುಪಿಗೆ ಹೊಸದಾಗಿ ಬಂದು ಅಧಿಕರ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಮುದ್ದುಮೋಹನ್ ಅವರನ್ನು ಆಡಳಿತ ಪಕ್ಷವು ತಮ್ಮ ಪರವಾಗಿ ಕೆಲಸ ಮಾಡುವುದಕ್ಕಾಗಿಯೇ ನೇಮಕ ಮಾಡಿಕೊಂಡಿದೆ ಎಂದು ಸಂಶಯಿಸುವಂತಾಗಿದೆ.

ವ್ಯವಸ್ಥೆಯ ಕಾವಲು ನಾಯಿಗಳಂತೆ ಕಾರ್ಯನಿರ್ವಹಿಸಬೇಕಾದ ಮಾಧ್ಯಮ ಮಂದಿ, ಪತ್ರಕರ್ತರ ಸಂಘದ ಪ್ರಮುಖ ಪದಾಧಿಕಾರಿಗಳು ಆಡಳಿತ ಪಕ್ಷದ ಅಭ್ಯರ್ಥಿಯ ಮುಖವಾಣಿಯಾಗಿಬಿಡುತ್ತಾರೆ. ಚುನಾವಣೆ ಹತ್ತಿರ ಬಂದಾಗ, ಚುನಾವಣಾ ನೀತಿ ಸಂಹಿತೆ ಜಾರಿಯಾಗಿಲ್ಲ ಎಂದು ಹೇಳಿಕೊಂಡು ನೀತಿ ಸಂಹಿತೆ ಜಾರಿಯಾಗುವ ಕೇವಲ ನಾಲ್ಕು ದಿನ ಮೊದಲು ಆಡಳಿತ ಪಕ್ಷದ ಸಂಭಾವ್ಯ ಅಭ್ಯರ್ಥಿಯಿಂದ ಪ್ರಜಾಪ್ರಭುತ್ವದ ಪಾಠ ಮಾಡಿಸಿಕೊಳ್ಳುತ್ತಾರೆ. ಪ್ರಜಾಪ್ರಭುತ್ವ ಎಂದರೆ ಇದುವಾ ? ಹೀಗೆನಾ ? – ಶ್ರೀರಾಮ ದಿವಾಣ.