Posts Tagged ‘udupi congress’

ಉಡುಪಿ: ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಡಾ.ಮುದ್ದು ಮೋಹನ್ ಅವರನ್ನು ಎಪಿಎಂಸಿ ನಿರ್ದೇಶಕರನ್ನಾಗಿ ಬೆಂಗಳೂರಿಗೆ ವರ್ಗಾಯಿಸಲಾಗಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಎಸ್.ಎಸ್.ಪಟ್ಟಣಶೆಟ್ಟಿ ಅವರನ್ನು ನಿಯುಕ್ತಿ ಗೊಳಿಸಲಾಗಿದೆ.

ಎಸ್.ಎಸ್.ಪಟ್ಟಣಶೆಟ್ಟಿ ಅವರು ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.

ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಡಾ.ಎಂ.ಟಿ.ರೇಜು ಅವರನ್ನು ಕಳೆದ ಕೆಲವೇ ಕೆಲವು ತಿಂಗಳುಗಳ ಹಿಂದೆ ವರ್ಗಾಯಿಸಿ, ಅವರಿಮದ ತೆರವಾದ ಸ್ಥಾನಕ್ಕೆ ಡಾ,ಮುದ್ದು ಮೋಹನ್ ಅವರನ್ನು ನೇಮಕ ಮಾಡಲಾಗಿತ್ತು.

ಇನ್ನು ಕೆಲವೇ ಕೆಲವು ತಿಂಗಳುಗಳಲ್ಲಿ ಡಾ.ಮುದ್ದು ಮೋಹನ್ ಅವರು ನಿವೃತ್ತಿಯಾಗಲಿತ್ತು, ಈ ಹಿನ್ನೆಲೆಯಲ್ಲಿ ನಿವೃತ್ತಿಯಾಗುವ ವರೆಗೆ ಮುದ್ದು ಮೋಹನ್ ಅವರೇ ಜಿಲ್ಲಾಧಿಕಾರಿಯಾಗಿ ಮುಮದುವರಿಯುವರು ಎಂದು ಹೇಳಲಾಗುತ್ತಿತ್ತು.

ಆದರೆ, ಇದೀಗ ಅನಿರೀಕ್ಷಿತ ಬೆಳವಣಿಗೆಯಲ್ಲಿ ಮುದ್ದು ಮೋಹನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ ಮತ್ತು ಎಸ್.ಎಸ್.ಪಟ್ಟಣಶೆಟ್ಟಿ ಅವರನ್ನು ನೂತನ ಜಿಲ್ಲಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಪಟ್ಟಣಶೆಟ್ಟಿ ಅವರು ಇಂದು ಬೆಳಗ್ಗೆ ಅಧಿಕಾರ ಸ್ವೀಕರಿಸಿದ್ದಾರೆ.

ಉಡುಪಿ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಮತ್ತು ಮಾಜಿ ಕೇಂದ್ರ ಮಂತ್ರಿ ಉಡುಪಿಯ ಆಸ್ಕರ್ ಫೆರ್ನಾಂಡಿಸ್ ಸಹಿತ ನಾಲ್ವರ ವಿರುದ್ಧ ಬಿಜೆಪಿ ನಾಯಕ, ಮಾಜಿ ಕೇಂದ್ರ ಮಂತ್ರಿ ಸುಬ್ರಹ್ಮಣ್ಯಂ ಸ್ವಾಮಿಯವರು ಅಂದಾಜು 2000 ಕೋಟಿ ರು. ಮಿಕ್ಕಿದ ಹಗರಣವೊಂದಕ್ಕೆ ಸಂಬಂಧಿಸಿದಂತೆ ದೆಹಲಿಯ ಮೆಟ್ರೋಪೊಲಿಟಿನ್ ನ್ಯಾಯಾಲಯದಲ್ಲಿ ಖಾಸಗಿ ದಾವೆ ದಾಖಲಿಸಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಕೋಶಾಧಿಕಾರಿ ಮೋತಿಲಾಲ್ ವೋರಾ ಹಾಗೂ ಆಸ್ಕರ್ ಫೆರ್ನಾಂಡಿಸ್ ವಿರುದ್ಧ ಸುಬ್ರಹ್ಮಣ್ಯ ಸ್ವಾಮಿ ಬಹುಕೋಟಿ ಹಗರಣದ ಬಗ್ಗೆ ದೂರು ನೀಡಿದ್ದಾರೆ. ಆರೋಪಗಳ ಬಗ್ಗೆ ನ್ಯಾಯಾಧೀಶರಾದ ಗೋಮತಿ ಮನೋಚ ಅವರ ಸಮಸಕ್ಷಮದಲ್ಲಿ ಜೂನ್ 2ರಂದು ಸುಮಾರು ಒಂದು ಗಂಟೆ ಕಾಲ ಸ್ವಾಮಿ ವಾದ ಮಂಡಿಸಿದ್ದಾರೆ.

‘ನ್ಯಾಷನಲ್ ಹೆರಾಲ್ಡ್ ನ್ಯೂಸ್ ಪೇಪರ್ ಪಬ್ಲಿಶಿಂಗ್ ಕಂಪೆನಿ’ಯು ಅಂದಾಜು 2000 ಕೋಟಿ ರು.ಗೂ ಮಿಕ್ಕಿದ ಚರ ಸ್ಥಿರ ಆಸ್ತಿ ಹೊಂದಿದೆ. ಇದನ್ನು ಮೇಲೆ ಹೆಸರಿಸಿದ ನಾಲ್ವರು ಕಾಂಗ್ರೆಸ್ ನಾಯಕರು ತಮ್ಮ ಸ್ವಾಧೀನಪಡಿಸಿಕೊಳ್ಳಲು ಕ್ರಿಮಿನಲ್ ಸಂಚು ಹೂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ನ್ಯಾಯವಾದಿಯೂ ಆದ ಸ್ವಾಮಿ, ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ನಾಲ್ವರಿಗೂ ಸಮನ್ಸ್ ಜ್ಯಾರಿಗೊಳಿಸಬೇಕೆಂದು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡರು.

‘ನ್ಯಾಷನಲ್ ಹೆರಾಲ್ಡ್ ನ್ಯೂಸ್ ಪೇಪರ್ ಪಬ್ಲಿಶಿಂಗ್ ಕಂಪೆನಿ’ ಸುದ್ಧಿ ಮಾಧ್ಯಮಗಳನ್ನು ಪ್ರಕಟಿಸುವ ಗುರಿಯನ್ನು ಹೊಂದಿರುವ ಕಂಪೆನಿಯಾಗಿದ್ದು, ಇದಕ್ಕೆ ಸರಕಾರ ಈ ಹಿಂದೆ ದೆಹಲಿ, ಲಕ್ನೊ, ಭೋಪಾಲ್ ಮುಂತಾದೆಡೆಗಳಲ್ಲಿ ಉಚಿತವಾಗಿ ಭೂಮಿಯನ್ನು ನೀಡಿದೆ. ಇದೀಗ ಈ ಬಹುಕೋಟಿ ಮೊತ್ತದ ಕಂಪೆನಿಯನ್ನು ‘ಯಂಗ್ ಇಂಡಿಯನ್’ ಎಂಬ ಕಂಪೆನಿ ತನ್ನ ಕೈವಶ ಮಾಡಿಕೊಳ್ಳಲು ಮುಂದಾಗಿದೆ ಎಂದು ಸ್ವಾಮಿ ವಿವರ ನೀಡಿದ್ದಾರೆ.

ನ್ಯಾಷನಲ್ ಹೆರಾಲ್ಡ್ ನ್ಯೂಸ್ ಪೇಪರ್ ಪಬ್ಲಿಶಿಂಗ್ ಕಂಪೆನಿಗಿರುವ ಯಾವ ಉದ್ಧೇಶಗಳೂ ಯಂಗ್ ಇಂಡಿಯನ್ ಕಂಪೆನಿಗಿಲ್ಲ. ಅದಲ್ಲದೆ, ನ್ಯಾಷನಲ್ ಹೆರಾಲ್ಡ್ ಕಂಪೆನಿಯು ಸರಕಾರದಿಂದ ಲಾಭಗಳನ್ನು ಪಡೆದುಕೊಂಡಿದೆ. ಇದೀಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ ಹಾಗೂ ಆಸ್ಕರ್ ಫೆರ್ನಾಂಡಿಸ್ ಇವರುಗಳಿರುವ ಯಂಗ್ ಇಂಡಿಯನ್ ಕಂಪೆನಿಯು ನ್ಯಾಷನಲ್ ಹೆರಾಲ್ಡ್ ಕಂಪೆನಿಯನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಲು ಮುಂದಾಗಿರುವುದು ಅಕ್ರಮವೆಂದು ಸ್ವಾಮಿ ಅಪಾದಿಸಿದ್ದಾರೆ.

‘ಯಂಗ್ ಇಂಡಿಯನ್’ ಕಂಪೆನಿಯ 76 ಶೇಕಡಾ ಶೇರುಗಳನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ ಹಾಗೂ ಆಸ್ಕರ್ ಫೆರ್ನಾಂಡಿಸ್ ಖರೀದಿಸಿದ್ದಾರೆ. ಆದರೆ ಇವರೆಲ್ಲರೂ ತಮ್ಮ ಸ್ವಂತ ಹಣವನ್ನು ಯಂಗ್ ಇಂಡಿಯನ್ ಕಂಪೆನಿಯ ಶೇರು ಖರೀದಿಗೆ ಉಪಯೋಗಿಸುವ ಬದಲಾಗಿ ಕಾಂಗ್ರೆಸ್ ಪಕ್ಷದ ಫಂಡ್ನಿಂದ 90 ಕೋಟಿ ರು.ಗಳನ್ನು ಇದಕ್ಕೆ ಪಡೆದುಕೊಂಡು ಶೇರುಗಳನ್ನು ಖರೀದಿಸಿದ್ದಾರೆ ಎಂದು ಸ್ವಾಮಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ನ್ಯಾಷನಲ್ ಹೆರಾಲ್ಡ್ ಕಂಪೆನಿ ನೆಹರೂ ಕುಟುಂಬದ ಖಾಸಗಿ ಆಸ್ತಿಯಲ್ಲ. ಈ ಕಂಪೆನಿಗೆ ಸರಕಾರವೂ ಆಸ್ತಿ ಇತ್ಯಾದಿಗಳನ್ನು ನೀಡಿ ಬೆಳೆಸಿದೆ. ಈ ಗೋಲ್ ಮಾಲ್ ಪ್ರಕರಣದಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ನ ಸ್ಯಾಮ್ ಪಿತ್ರೋಡ ಹಾಗೂ ಸುಮನ್ ದುಬೆ ಸಹ ಶಾಮೀಲಾಗಿದ್ದಾರೆಂದು ಸುಬ್ರಹ್ಮಣ್ಯಂ ಸ್ವಾಮಿ ಆರೋಪಿಸಿದ್ದಾರೆ.

ಪ್ರಕರಣದ ಮುಂದಿನ ವಿಚಾರಣೆ ದೆಹಲಿಯ ಮೆಟ್ರೋಪೊಲಿಟಿನ್ ನ್ಯಾಯಾಲಯದಲ್ಲಿ ಜೂನ್ 23ಕ್ಕೆ ನಡೆಯಲಿದೆ.

ಉಡುಪಿ: ಬಿಜೆಪಿ ಕೊಮೂವಾದಿ ಪಕ್ಷ. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಒಬ್ಬ ಅಪ್ಪಟ ಕೋಮುವಾದಿ. ಕೋಮುವಾದವನ್ನು, ಕೋಮುವಾದಿ ಬಿಜೆಪಿಯನ್ನು ಬೆಳೆಸಿದ, ಬಿಜೆಪಿಯ ಕೋಮುವಾದಿ ರಾಜಕಾರಣಕ್ಕೆ ಸಹಕರಿಸಿದ ಪಕ್ಷ ಕಾಂಗ್ರೆಸ್. ಇದು ವಿನಾಶಕಾರಿ ಪಕ್ಷ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಟೀಕಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಎ.14ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರನ್ನು ಶಾಸಕರನ್ನಾಗಿ, ಸಚಿವರನ್ನಾಗಿ ಮಾಡಿ ಬೆಳೆಸಿದ್ದು ಜನತಾದಳ ಪಕ್ಷ. ಅಂದು ಅವರಿಗೆ ಜನಪರ ಕಾಳಜಿ ಇತ್ತು. ಅಂದಿದ್ದ ಕಾಳಜಿ ಈಗ ಅವರಲ್ಲಿ ಇಲ್ಲವಾಗಿದೆ. ಹೆಗ್ಡೆಯವರಲ್ಲಿ ಈಗ ಘೋಷಣೆಗಳೂ ಇಲ್ಲ, ಯೋಜನೆಗಳೂ ಇಲ್ಲ. ಕಾಂಗ್ರೆಸ್ ಪಕ್ಷದವರೇ ಅವರನ್ನು ಸೋಲಿಸಲಿದ್ದಾರೆ ಎಂದು ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಮಹಿಳಾ ಸಬಲೀಕರಣದ ಬಗ್ಗೆ ಭಾರೀ ಮಾತಾಡುವ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಮಣಿಪಾಲದಲ್ಲಿ ಗ್ಯಾಂಗ್ ರೇಪ್ ಕನಿಷ್ಟ ಸಹಾನೂಭೂತಿಯನ್ನೂ ವ್ಯಕ್ತಪಡಿಸಿರಲಿಲ್ಲ. ಮಲ್ಪೆಯಲ್ಲಿ ತಮ್ಮ ಪಕ್ಷದ ಶಾಸಕರೇ ಮಹಿಳೆಯರನ್ನು ಮುಂದಿಟ್ಟುಕೊಂಡು ರೇವ್ ಪಾರ್ಟಿ, ನಂಗಾನಾಚ್ ನಡೆಸಿದಾಗಲೂ ಮೌನವಾಗಿದ್ದವರು. ಇಂಥವರಿಗೆ ಮಹಿಳೆಯರ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲವೆಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.

ಮಲ್ಪೆ ನಂಗಾನಾಚ್ ಪ್ರಕರಣದಲ್ಲಿ ಮಾಜಿ ಶಾಸಕ ರಘುಪತಿ ಭಟ್ ಹಾಗೂ ಹಾಲಿ ಶಾಸಕ ಪ್ರಮೋದ್ ಮಧ್ವರಾಜ್ ಇಬ್ಬರೂ ಪಾಲುದಾರರು. ಹಾಗಾಗಿಯೇ ಈವರೆಗೂ ರೇವ್ ಪಾರ್ಟಿ ಬಗೆಗಿವ ತನಿಖಾ ವರದಿಯನ್ನು ಸರಕಾರ ಬಹಿರಂಗಪಡಿಸದೆ ಬಚ್ಚಿಟ್ಟಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ಮಹಿಳೆಯರನ್ನು ಕೇವಲ ಮತಕ್ಕಾಗಿ, ಸಮಾವೇಶಗಳಿಗಾಗಿ ಉಪಯೋಗ ಮಾಡುತ್ತಿದೆ ಅಷ್ಟೆ ಎಂದು ಆರೋಪಿಸಿದ ದೇವಿಪ್ರಸಾದ್ ಶೆಟ್ಟಿ, ಶೋಭಾ ಹಾಗೂ ಹೆಗ್ಡೆ ಇಬ್ಬರೂ ನೀರಿನಂತೆ ಹಣ ಕರ್ಚು ಮಾಡುತ್ತಿದ್ದಾರೆ. ಈ ಹಣದ ಮೂಲ ಯಾವುದು ಎಂದು ಇವರು ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದರು.

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ನಾಯಕ ಎಚ್.ಡಿ.ದೇವೇಗೌಡರ ಬಗ್ಗೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನೀಡಿದ ಅವಹೇಳನಕಾರಿ ಹೇಳಿಕೆ ಖಂಡನೀಯ. ಇದು ಕನಾಟಕದ ಆರು ಕೋಟಿ ಕನ್ನಡಿಗರಿಗೆ ಮೋದಿ ಮಾಡಿದ ಅವಮಾನ. ದೇವೇಗೌಡರಿಗೆ ಆಶ್ರಮ ಕಟ್ಟುವ ಮೊದಲು ಮೋದಿ ಚುನಾವಣೆ ನಂತರ ತನಗಾಗಿ ಗುಜರಾತ್ನಲ್ಲಿ ಆಶ್ರಮ ಕಟ್ಟಲಿ. ದೇಶದ ಮತದಾರರು ಮೋದಿಯನ್ನು ಆಶ್ರಮಕ್ಕೆ ಕಳಿಸಲು ಈಗಾಗಲೇ ನಿರ್ಧರಿಸಿದ್ದಾರೆ ಎಂದು ಜೆಡಿಎಸ್ ನಾಯಕ ದೇವಿಪ್ರಸಾದ್ ಶೆಟ್ಟಿ ಮಾರ್ಮಿಕವಾಗಿ ನುಡಿದರು.

ಜೆಡಿಎಸ್ ತೊರೆದ ವಸಂತ ಸಾಲ್ಯಾನ್ ಸಿದ್ಧಾಂತವಿಲ್ಲದ ವ್ಯಕ್ತಿ, ಅಧಿಕಾರದಾಹಿ. ಬಾರ್ಕೂರು ಸತೀಶ್ ಪೂಜಾರಿ ನಿಷ್ಕ್ರೀಯ ವ್ಯಕ್ತಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ದ್ರೋಹಬಗೆದು ಹಲ್ಲೆಯ ನಾಟಕವಾಡಿದವರು. ಲೂಯಿಸ್ ಲೋಬೋ 6 ತಿಂಗಳ ಹಿಂದೆಯೇ ಪಕ್ಷ ತೊರೆದವರು. ಪಕ್ಷದ ಮೇಲೆ ಬದ್ಧತೆ ಇಲ್ಲದವರು ಪಕ್ಷ ತೊರೆದು ಹೋಗುವುದಾದರೆ ಅದನ್ನು ಸ್ವಾಗತಿಸುವುದಾಗಿ ಶೆಟ್ಟಿ ಸ್ಪಷ್ಟಪಡಿಸಿದರು.

ಜೆಡಿಎಸ್ ಮುಖಂಡರಾದ ಗುಲಾಂ ಮೊಹಮ್ಮದ್, ಯೋಗೀಶ್ ಶೆಟ್ಟಿ ಕಾಪು, ಚಂದ್ರಕಾಂತ ಪೂಜಾರಿ, ಎಸ್ ಡಿಪಿಐ ಮುಖಂಡರಾದ ಅಬ್ದುಲ್ ರೆಹಮಾನ್ ಹಾಗೂ ಹಸೈನಾರ್ ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಉಡುಪಿ: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಹಣದ ಹೊಳೆಯನ್ನೇ ಹರಿಸುತ್ತಿದೆ. ಅತ್ಯಾಧುನಿಕ ಸಲಕರಣೆಗಳೊಂದಿಗೆ ವ್ಯಾಪಕ ಚುನಾವಣಾ ಪ್ರಚಾರ ಕಾರ್ಯಗಳನ್ನು ನಡೆಸುತ್ತಿದೆ. ಇದಕ್ಕೆಲ್ಲ ಹಣ ಎಲ್ಲಿಂದ ಬಂತು, ಯಾರು ಕೊಟ್ಟರು ಎಂಬ ಬಗ್ಗೆ ಲೆಕ್ಕಕೊಡಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಮಾಜಿ ಕೇಂದ್ರ ಮಂತ್ರಿ ವಿ.ಧನಂಜಯ ಕುಮಾರ್ ಹೇಳಿದ್ದಾರೆ.

ಜೆಡಿಎಸ್ ಉಡುಪಿ ಜಿಲ್ಲಾ ಕಚೇರಿಯಲ್ಲಿ ಎ.11ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.

ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಗೆದ್ದು ಸಂಸದರಾದ ಕೆ.ಜಯಪ್ರಕಾಶ ಹೆಗ್ಡೆಯವರಿಗೆ ಸಂಸತ್ ನಲ್ಲಿ ಒಂದೇ ಒಂದು ಶಬ್ದ ಮಾತಾಡಲೂ ಸಾಧ್ಯವಾಗಿಲ್ಲ. ಬಿಜೆಪಿ ಪ್ರತೀ ಸಲವೂ ಕ್ಷೇತ್ರದ ಅಭ್ಯರ್ಥಿಯನ್ನು ಬದಲಾಯಿಸುತ್ತಾ ಬಂದಿದೆ. ಆ ಪಕ್ಷಕ್ಕೆ ಈ ಕ್ಷೇತ್ರ ಒಂದು ಪ್ರಯೋಗಶಾಲೆಯಂತಾಗಿದೆ ಎಂದು ಧನಂಜಯ ಕುಮಾರ್ ತಿಳಿಸಿದರು.

ವಿದ್ಯತ್ ಗಾಗಿ ಕೇಂದ್ರ ಸರಕಾರ ರಾಜ್ಯದಲ್ಲಿ ಚಿಕ್ಕಾಸನ್ನೂ ಹೂಡಿಲ್ಲ. ವಿದ್ಯುತ್ ರಂಗದಲ್ಲಿನ ವಿಫಲತೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ಕಾರಣ. ಭ್ರಷ್ಟಾಚಾರ, ಬೆಲೆ ಏರಿಕೆ ಇತ್ಯಾದಿ ಗಂಭೀರ ಸಮಸ್ಯೆಗಳ ಪರಿಹಾರಗಳ ಬಗ್ಗೆ ಕಾಂಗ್ರೆಸ್ ಮಾತಾಡುತ್ತಿಲ್ಲ. ಬಿಜೆಪಿ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಲು ಓಟು ಕೊಡಿ ಎಂದು ಕೇಳುತ್ತಿದೆಯೇ ಹೊರತು, ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ಏನು ಸಾಧನೆ ಮಾಡಿದೆ ಎಂದು ಹೇಳುತ್ತಿಲ್ಲ ಎಂದು ಧನಂಜಯ ಕುಮಾರ್ ಗಮನ ಸೆಳೆದರು.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ತಲಾ ಹತ್ತು ಕ್ಷೇತ್ರಗಳು ಸಿಗಲಿವೆ. 8 ಕ್ಷೇತ್ರಗಳು ಜೆಡಿಎಸ್ ಪಾಲಾಗಲಿವೆ. ಕೇಂದ್ರದಲ್ಲಿ ತೃತಿಯ ಶಕ್ತಿಯ ನೇತೃತ್ವದ ಸರಕಾರ ಅಡಳಿತಕ್ಕೆ ಬರಲಿದೆ. ತನ್ನನ್ನು ಚುನಾಯಿಸಿದಲ್ಲಿ ಅಡಿಕೆ ಬೆಳೆಗಾರರ ಸಾಲ ಮನ್ನಾ ಮಾಡಲಿದ್ದೇನೆ. ಗೋರಖ್ ಸಿಂಗ್ ವರದಿಯನ್ನು 60 ದಿನಗಳಲ್ಲಿ ಜಾರಿಗೊಳಿಸಲಿದ್ದೇನೆ. ಜನರ ಕೈಗೆ ಸಿಗುವಂತೆ ಜನರ ನಡುವೆಯೇ ಇರಲಿದ್ದೇನೆ ಎಂದು ಜೆಡಿಎಸ್ ಅಭ್ಯರ್ಥಿ ಧನಂಜಯ ಕುಮಾರ್ ಸ್ಪಷ್ಟಪಡಿಸಿದರು.

ಜೆಡಿಎಸ್ ನಾಯಕರಾದ ದೇವಿಪ್ರಸಾದ್ ಶೆಟ್ಟಿ, ಗುಲಾಂ ಮೊಹಮ್ಮದ್, ಕೀರ್ತಿರಾಜ್ ಕಡೆಕಾರ್, ದಿಲೇಶ್ ಶೆಟ್ಟಿ ಬೆಳ್ಳಂಪಳ್ಳಿ, ಪ್ರದೀಪ್ ಜಿ. ನಾಯ್ಕ್ ಮೊದಲಾದವರು ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಉಡುಪಿ: ಆದಿ ಉಡುಪಿಯ ರಾಷ್ಟ್ರೀಯ ಹೆದ್ದಾರಿ-66ರಿಂದ ತೀರ್ಥಹಳ್ಳಿಯ 169ಎ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವಂತೆ ಹೊಸದಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಮಾಡಲು ಕೇಂದ್ರದ ಕಾಂಗ್ರೆಸ್ ಸರಕಾರ ನಿರ್ಧರಿಸಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಬಿಜೆಪಿ ವಿರೋಧಿಸುವುದಿಲ್ಲ. ಆದರೆ, ಈ ಹೆದ್ದಾರಿ ಉಡುಪಿ ನಗರದೊಳಗೆ ಹಾದುಹೋಗುವುದಕ್ಕೆ ಬಿಜೆಪಿಯ ಸ್ಪಷ್ಟ ವಿರೋಧವಿದೆ. ಈ ನಿರ್ಧಾರವನ್ನು ಸರಕಾರ ವಾರದೊಳಗೆ ಹಿಂಪಡೆಯದೇ ಇದ್ದಲ್ಲಿ ಸಂತ್ರಸ್ತರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಪಾದಯಾತ್ರೆ ಸಹಿತ ಬೃಹತ್ ಹೋರಾಟ ಹಮ್ಮಿಕೊಳ್ಳಲಿರುವುದಾಗಿ ಮಾಜಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮಾರ್ಚ್ 4ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸರಕಾರ ಘೋಷಣೆ ಮಾಡಲಾದ ಹೆದ್ದಾರಿಯು ಉಡುಪಿ ನಗರದ ಹೃದಭಾಗಗಳಾದ ಉಡುಪಿ ನಗರ, ಕಡಿಯಾಳಿ, ಮಣಿಪಾಲ, ಪರ್ಕಳ ಮಾರ್ಗವಾಗಿ ಹಾದುಹೋಗಲಿದೆ. ಇದರಿಂದಾಗಿ ಈ ಮೇಲಿನ ನಗರಗಳು ನಾಶವಾಗಲಿವೆ. ಇದೊಂದು ಅವೈಜ್ಞಾನಿಕ ಯೋಜನೆ ಎಂದು ಹೇಳಿದರು.

ಬಿಜೆಪಿ ಆಡಳಿತ ಕಾಲದಲ್ಲಿಯೇ ಉಡುಪಿ, ಆದಿ ಉಡುಪಿಯಿಂದ ಮಣಿಪಾಲ ವರೆಗಿನ ರಸ್ತೆಯನ್ನು 40 ಫೀಟ್ ಅಗಲೀಕರಣಗೊಳಿಸಿ ಸುಸಜ್ಜಿತಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಮಣಿಪಾಲದಿಂದ ಪರ್ಕಳ ವರೆಗಿನ ರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಭೂಸ್ವಾಧೀನಕ್ಕಾಗಿ ಹಿಂದಿನ ಬಿಜೆಪಿ ಆಡಳಿತದ ನಗರಸಭೆಯು 3 ಕೋಟಿ ರು.ಗಳ ಅನುದಾನವನ್ನು ಎಸಿ ಅಕೌಂಟ್ ಗೆ ಬಿಡುಗಡೆಗೊಳಿಸಿದೆ. ಹೀಗಿರುವಾಗ ಇದೇ ರಸ್ತೆಯನ್ನು ಮತ್ತೆ ಎನ್ಎಚ್ ಮಾಡಹೊರಟರೆ ರಸ್ತೆಯ ಎರಡೂ ಕಡೆಗಳಲ್ಲಿ 40 ಮೀಟರ್ ಭೂಸ್ವಾಧೀನಪಡಿಸಿಕೊಳ್ಳಬೇಕಾಗಿ ಬರಲಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡಗಳು ನೆಲಸಮಗೊಳ್ಳಬೇಕಾಗಿ ಬರಲಿದೆ. ಇದರಿಂದಾಗಿ ಕೊಟ್ಯಂತರ ರು. ನಷ್ಟ ಸಂಭವಿಸಲಿದೆ. ಉಡುಪಿ ನಗರದ ಅಭಿವೃದ್ಧಿ ಸ್ಥಗಿತಗೊಳ್ಳಲಿದೆ ಎಂದು ಭಟ್ ಆತಂಕ ವ್ಯಕ್ತಪಡಿಸಿದರು.

ನೂತನ ಎನ್ಎಚ್ ಉಡುಪಿ ನಗರ ಪ್ರದೇಶದಲ್ಲಿ ಹಾದುಹೋದರೆ, ಆದಿ ಉಡುಪಿಯಿಂದ ಪರ್ಕಳ ವರೆಗಿನ ರಸ್ತೆಯ ಇಕ್ಕಲೆಗಳಲ್ಲಿ ಇರುವ 3 ಸಾವಿರಕ್ಕೂ ಅಧಿಕ ಕಟ್ಟಡಗಳು, 600ಕ್ಕೂ ಹೆಚ್ಚು ಮನೆಗಳು ಧಾರಾಶಾಹಿಯಾಗಲಿವೆ. 22 ಸಾವಿರಕ್ಕೂ ಹೆಚ್ಚು ಮಂದಿ ಮನೆ ಮಠ ಕಳೆದುಕೊಂಡು ಅತಂತ್ರರಾಗಲಿದ್ದಾರೆ. ಆಗುಂಬೆ ಘಾಟಿಯನ್ನು ಅಭಿವೃದ್ಧಿಪಡಿಸುವುದು ಸ್ವಾಗತಾರ್ಹ. ಆದರೆ ಆಗುಂಬೆ ಘಟಿಯನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಉಡುಪಿ ನಗರವನ್ನು ನಾಶಪಡಿಸುವುದು ಮೂರ್ಖತನ ಎಂದು ರಘುಪತಿ ಭಟ್ ಭಾರೀ ಅಸಮಾಧಾನ
ವ್ಯಕ್ತಪಡಿಸಿದರು.

ಜಿಲ್ಲೆಯವರೇ ಅದ ಆಸ್ಕರ್ ಫೆರ್ನಾಂಡಿಸ್ ಅವರು ಕೇಂದ್ರದಲ್ಲಿ ಹೆದ್ದಾರಿ ಮಂತ್ರಿಯಾದಾಗ ಜಿಲ್ಲೆಯಲ್ಲಿ ಹಾದು ಹೋಗುವ ಹೆದ್ದಾರಿ ಅಭಿವೃದ್ಧಿ ಬಗ್ಗೆ ಬಹಳ ನಿರೀಕ್ಷೆ ಇತ್ತು. ಆದಿ ಉಡುಪಿ ಮತ್ತು ಬ್ರಹ್ಮಾವರದಲ್ಲಿ ಫ್ಲೈ ಓವರ್ ಬೇಕು ಎಂದು ಜನ ಕೇಳಿದರೆ ಅದನ್ನು ಕೊಡಲು ಸಚಿವ ಆಸ್ಕರ್ ಅವರಿಗೆ ಸಾಧ್ಯವಾಗಿಲ್ಲ. ಉದ್ಯಾವರದಿಂದ ಬ್ರಹ್ಮಾವರದವರೆಗಿನ ಹೆದ್ದಾರಿ ಕಾಮಗಾರಿಯನ್ನೂ ಪೂರ್ಣಗೊಳಿಸಲಾಗಿಲ್ಲ. ಬ್ರಹ್ಮಾವರದ ಅಭಿವೃದ್ಧಿಯನ್ನು ಈಗಾಗಲೇ ಕೊಲೆ ಮಾಡಲಾಗಿದೆ. ಇದೀಗ ಉಡುಪಿ ನಗರದೊಳಗೆ ಹೆದ್ದಾರಿ ಹಾದುಹೋಗುವಂತೆ ಮಾಡುವ ಮೂಲಕ ಉಡುಪಿ ನಗರದ ಜನತೆಗೆ ದ್ರೋಹವೆಸಗುತ್ತಿದ್ದಾರೆ. ಆಸ್ಕರ್ ಮಂತ್ರಿಯಾದುದು ವರವಾಗುವ ಬದಲು ಶಾಪವಾಗಿ ಪರಿಣಮಿಸಿದೆ ಎಂದು ಮಾಜಿ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿ ನಗರದ ಜನತೆಗೆ ತೊಂದರೆಯನ್ನುಂಟುಮಾಡುವ ಹೆದ್ದಾರಿಯನ್ನು ಘೋಷಣೆ
ಮಾಡಿರುವುದಕ್ಕಾಗಿ ಶಾಸಕ ಪ್ರಮೋದ್ ಮಧ್ವರಾಜ್ ಹಾಗೂ ಸಂಸದ ಜಯಪ್ರಕಾಶ್ ಹೆಗ್ಡೆ ಈಗಾಗಲೇ ಸರಕಾರವನ್ನು ಅಭಿನಂದಿಸಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಇವರು ನಗರವನ್ನು, ನಗರದ ಜನತೆಯನ್ನೂ ನಾಶಪಡಿಸುವಂಥ ಹೆದ್ದಾರಿ ಯೋಜನೆ ಬಗ್ಗೆ ಇನ್ನಾದರೂ ತಮ್ಮನಿಲುವೇನು ಎನ್ನುವುದನ್ನು ಸ್ಪಷ್ಟಪಡಿಸಬೇಕು. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಉಡುಪಿ ನಗರದ ಜನತೆ ತಕ್ಕ ಪಾಠ ಕಲಿಸಲಿದ್ದಾರೆಂದು ರಘುಪತಿ ಭಟ್ ಮುನ್ನೆಚ್ಚರಿಕೆ ನೀಡಿದರು.

ನೂತನ ಹೆದ್ದಾರಿ ಯೋಜನೆಯನ್ನು ಉಡುಪಿ ಎನ್ಎಚ್ನಿಂದ ಆರಂಭಿಸುವ ಬದಲಾಗಿ ಹಿರಿಯಡ್ಕದಿಂದ ಅಥವಾ ಬ್ರಹ್ಮಾವರದಿಂದ ಹೆಬ್ರಿ ಮಾರ್ಗವಾಗಿ ಇಲ್ಲವೇ ಕೋಟೇಶ್ವರದಿಂದ ಹಾಲಾಡಿ- ಸೋಮೇಶ್ವರ ಮಾರ್ಗವಾಗಿ ಮಾಡಲೂ ಅವಕಾಶವಿದೆ. ಇದನ್ನು ಪರಿಶೀಲಿಸಬಹುದೆಂದೂ ಮಾಜಿ ಶಾಸಕರೂ, ಬಿಜೆಪಿ ಮುಖಂಡರೂ ಆದ ಕೆ.ರಘುಪತಿ ಭಟ್ ಅಭಿಪ್ರಾಯಪಟ್ಟರು.

ಜಿ.ಪಂ.ಅಧ್ಯಕ್ಷ ಉಪೇಂದ್ರ ನಾಯಕ್, ಪಕ್ಷದ ನಾಯಕರುಗಳಾದ ಯಶಪಾಲ್ ಸುವರ್ಣ, ರಾಘವೇಂದ್ರ ಕಿಣಿ, ಕಿರಣ್ ಕುಮಾರ್ ಹಾಗೂ ದಿನಕರ ಶೆಟ್ಟಿ ಹೆರ್ಗ ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಉಡುಪಿ: ಇನ್ನಾ ಗ್ರಾಮ ಪಂಚಾಯತ್ನ ಪಂಪ್ ಆಪರೇಟರ್ ಬಗ್ಗೆ ಕಾರ್ಕಳ ತಾಲೂಕು ಪಂಚಾಯತ್ನ ಕಾರ್ಯ ನಿರ್ವಹಣಾಧಿಕಾರಿ ತೆಗೆದುಕೊಂಡ ಕ್ರಮದ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಪರ-ವಿರೋಧ ಚರ್ಚೆ ಕಾವೇರಿದ ಪ್ರಸಂಗ ಫೆ.25ರಂದು ಉಡುಪಿ ಜಿಲ್ಲಾ ಪಂಚಾಯತ್ನ 15ನೇ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಇನ್ನಾ ಗ್ರಾ.ಪಂ.ನಲ್ಲಿ ಪಂಪ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಹಿಂದಿನ ಆಡಳಿತದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಅವರು ಸರಿಯಾಗಿಯೇ ನೀರು ಬಿಡುತ್ತಿದ್ದರು. ಹೊಸ ಅಧ್ಯಕ್ಷರು ಆಡಳಿತಕ್ಕೆ ಬಂದ ಬಳಿಕ, ಅಧ್ಯಕ್ಷರ ಪುತ್ರ ‘ನೀರು ಸರಿಯಾಗಿ ಬಿಡುತ್ತಿಲ್ಲ’ ಎಂದು ಆರೋಪಿಸಿ ದಬಾಯಿಸಿದ ಘಟನೆ ನಡೆದಿದೆ. ಗ್ರಾ.ಪಂ.ಆಡಳಿತ ನಡೆಸುವವರು ಪ್ರಶ್ನಿಸಬೇಕಾದ್ದನ್ನು ಆಡಳಿತಕ್ಕೆ ಸಂಬಂಧಪಡದವರು ವಿಚಾರಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ನಡುವೆ ಗ್ರಾ.ಪಂ.ನಲ್ಲಿ ಯಾರೂ ಇಲ್ಲದಿರುವಾಗ, ಯಾರಿಗೂ ಮಾಹಿತಿ ನೀಡದೆ ಗ್ರಾ.ಪಂ.ಗೆ ಬಂದ ಕಾರ್ಕಳ ತಾಲೂಕು ಪಂಚಾಯತ್ನ ಕಾರ್ಯನಿರ್ವಹಣಾಧಿಕಾರಿ (ಇಓ) ಅವರು ಸಂದರ್ಶಕರ ಪುಸ್ತಕದಲ್ಲಿ ‘ಪಂಪ್ ಆಪರೇಟರ್ ರಾಜೀನಾಮೆ ನೀಡಿದ್ದಾರೆ, ನೀರು ಬಿಡಲು ಬೇರೆ ವ್ಯವಸ್ಥೆ ಮಾಡುವುದು’ ಎಂದು ದಾಖಲಿಸುವ ಮೂಲಕ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಪಂಪ್ ಆಪರೇಟರ್ ರಾಜೀನಾಮೆ ನೀಡದಿದ್ದರೂ, ರಾಜೀನಾಮೆ ನೀಡಿದ್ದಾರೆಂದು ಇಓ ಸುಳ್ಳು ಬರೆದಿದ್ದಾರೆ ಎಂದು ಜಿ.ಪಂ.ನ ಬಿಜೆಪಿನ ಸದಸ್ಯೆ ಮಮತಾ ಅಧಿಕಾರಿ ಮೊದಲಿಗೆ ವಿಷಯ ಪ್ರಸ್ತಾಪಿಸಿದರು.

ಜಿ.ಪಂ.ಸಿಎಸ್ ಅವರ ಆದೇಶದಂತೆ ತಾನು ಗ್ರಾ.ಪಂ.ಗೆ ಭೆಟಿ ನೀಡಿರುವುದಾಗಿ ಇಓ ಹೇಳಿಕೊಂಡಿದ್ದಾರೆ. ಇದು ನಿಜವಾದಲ್ಲಿ ಅವರು ಆದೇಶವನ್ನು ತೋರಿಸಬೇಕು.
ಸರ್ವಾನುಮತದಿಂದ ಪಂಪ್ ಆಪರೇಟರ್ ನ್ನು ನಿಯುಕ್ತಿ ಮಾಡಿರುವಾಗ, ಇದೀಗ ಏಕಪಕ್ಷೀಯವಾಗಿ ಅವರನ್ನು ತೆಗೆದು ಬೇರೆಯವರನ್ನು ನಿಯುಕ್ತಿ ಮಾಡುವುದು ಎಷ್ಟು ಸರಿ ? ಎಲ್ಲರನ್ನೂ ಕರೆಸಿ ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬರುವುದರ ಬದಲು ಈ ರೀತಿಯ ಕ್ರಮ ಸಮರ್ಥನೀಯವೇ ಎಂದು ಖಾರವಾಗಿಯೇ ಮಮತಾ ಪ್ರಶ್ನಿಸಿದರು.

ಜನವರಿಯಲ್ಲಿ ವಾರದ ಕಾಲ ನೀರು ಬಿಟ್ಟಿರಲಿಲ್ಲ. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಮತ್ತು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಎಸ್) ಯವರು ಸೂಚಿಸಿದ ಕಾರಣ ತಾನು ಗ್ರಾ.ಪಂ.ಗೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡದ್ದು ನಿಜ ಎಂದು ಇಓ
ಸ್ಪಷ್ಟಪಡಿಸಿದರು. ಸ್ಪಷ್ಟನೆ ಅಪೂರ್ಣವಾಗಿದ್ದುದರಿಂದ ಮಮತಾ ಮತ್ತೆ ಇಓ ಅವರನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಸದಸ್ಯರಾದ ಮಂಜುನಾಥ ಪೂಜಾರಿ, ಅನಂತ ಮೊವಾಡಿ ಮೊದಲಾದವರು, ಮಮತಾ ಅಧಿಕಾರಿಯವರು ಈ ವಿಷಯದಲ್ಲಿ ರಾಜಕೀಯ ಮಡುತ್ತಿದ್ದಾರೆ. ಇದರಲ್ಲಿ ರಾಜಕೀಯ ಬಿಟ್ಟರೆ ಬೇರೇನೂ ಇಲ್ಲ. ಪಂಪ್ ಆಪರೇಟರ್ ಆಗಿ ಕೆಲಸ
ಮಾಡುತ್ತಿರುವವರಿಗೆ ಈಗಾಗಲೇ 70 ವರ್ಷ ದಾಟಿದೆ. ಅವರಿಗೆ ನೀರು ಬಿಡಲು ಆಗುತ್ತಿಲ್ಲ. ಪಂಪ್ ಆಪರೇಟರ್ ಎಂದು ಆ ವೃದ್ಧರ ಹೆಸರಿದ್ದರೂ, ನೀರು ಬಿಡುವ ಕೆಲಸವನ್ನು ಅವರು ಮಾಡುತ್ತಿಲ್ಲ. ಇತರರು ನೀರು ಬಿಡುವುದಾಗಿದೆ. ಅವರು ರಾಜೀನಾಮೆ ನೀಡಿದ್ದಾರೆ. ನೀರು ಸರಬರಾಜು ಮೂಲಭೂತ ಸೌಲಭ್ಯದ ವಿಷಯವಾದುದರಿಂದ ಇಓ ಗ್ರಾ.ಪಂ.ಗೆ ಭೆಟಿ ನೀಡಿ ಮುಂದಿನ ಕ್ರಮಕ್ಕೆ ಬೇಕಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಕಾರ್ಕಳ ಇಓ ಅವರ ಕ್ರಮವನ್ನು ಸಮರ್ಥಿಸಿದರು.

ವಾದ-ಪ್ರತಿವಾದಗಳಿಂದಾಗಿ ಸ್ವಲ್ಪ ಹೊತ್ತು ಚರ್ಚೆ ಕಾವೇರಿತು. ಮಮತಾ ಅವರು ತಮ್ಮ ಆಸನದಿಂದ ಎದ್ದು ಅಧ್ಯಕ್ಷರ ಮುಂಭಾಗಕ್ಕೆ ಹೋಗಿ ತನ್ನ ಆರೋಪವನ್ನು ಸಮರ್ಥಿಸಿದ ವಿದ್ಯಾಮಾನವೂ ನಡೆಯಿತು. ಈ ಸಮಯದಲ್ಲಿ ಮಮತಾ ರಾಜಕೀಯ ಮಾಡುತ್ತಿದ್ದಾರೆ ಎಂದು ಮಂಜುನಾಥ ಪೂಜಾರಿ ಆರೋಪಿಸಿದರೆ, ರಾಜಕೀಯ ಮಾಡಲು ಜನಪ್ರತಿನಿಧಿಗಳಿರುವಾಗ, ಇಓ ಯಾಕೆ ರಾಜಕಾರಣಿಗಳ ಏಜೆಂಟರಂತೆ ಕೆಲಸ ಮಾಡುವುದು ಎಂದು ಪ್ರಶ್ನಿಸಿದರು.

ಕಾರ್ಕಳ ಇಓ ಅವರಿಗೆ ಸ್ವಂತ ವಿವೇಚನೆ ಬಳಸಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅವರಿವರು ಹೇಳಿದಂತೆ ಮಾಡುತ್ತಿದ್ದಾರೆ ಎಂದು ಜಿ.ಪಂ.ಅದ್ಯಕ್ಷ ಉಪೇಂದ್ರ ನಾಯಕ್ ಹೇಳಿಕೊಂಡರು. ಪಂಪ್ ಆಪರೇಟರ್ ಗೆ 70 ವರ್ಷ ಎಂಬ ಕಾರಣಕ್ಕೆ ಅವರನ್ನು ಕೆಲಸದಿಮದ ತೆಗೆದು ಹಾಕುವುದಾದರೆ, ಈ ಕ್ರಮ ಜಿಲ್ಲೆಯ ವಿವಿಧೆಡೆಗಳಿಗೆ ಅನ್ವಯವಾಗಬೇಕು. ಇತರ ಕೆಲವು ಗ್ರಾ.ಪಂಗಳಲ್ಲೂ ಇಂಥದ್ದೇ ಸ್ಥಿತಿ ಇದೆ. ಎಲ್ಲೆಡೆ ಈ ಕ್ರಮ ಕೈಗೊಳ್ಳುವುದಾದರೆ ಪರವಾಗಿಲ್ಲ. ಅದು ಸಾಧ್ಯವೇ ಎಂದು ಸ್ಥಾಯೀ ಸಮಿತಿ ಅಧ್ಯಕ್ಷರೊಬ್ಬರು ಅಧ್ಯಕ್ಷರಿಗೆ ಸವಾಲೆಸೆದುದು ನಡೆಯಿತು.

ಇನ್ನಾ ಗ್ರಾ.ಪಂ.ನಲ್ಲಿನ ಪಂಪ್ ಆಪರೇಟರ್ ವಿವಾದದ ಬಗ್ಗೆ ಸಮಗ್ರ ವರದಿ ಕೊಡುವಂತೆ ಇಓ ಅವರಿಗೆ ಸೂಚಿಸಿದ್ದೇನೆ. ಅವರು ಇನ್ನೂ ವರದಿ ನೀಡಿಲ್ಲ. ಆ ವರದಿಯನ್ನು ಕೂಡಲೇ ಕೊಡಬೇಕು ಎಂದು ಸಬೆಯಲ್ಲೇ ಖಡಕ್ ಆಗಿ ಸೂಚಿಸಿದ ಸಿಎಸ್ ಶ್ರೀಮತಿ ಕನಗವಲ್ಲಿ ಅವರು, ಶೀಘ್ರವೇ ತಾನು ಸಹ ಗ್ರಾ.ಪಂ.ಗೆ ಭೀಟಿ ನೀಡಿ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುವೆ ಎಂದು ಸ್ಪಷ್ಟಪಡಿಸಿದರು.

ಯುಪಿಸಿಎಲ್, ಎಸಿಸಿ ಪ್ರಸ್ತಾಪ:

ಯುಪಿಸಿಎಲ್ನಿಂದಾಗಿ ಎಲ್ಲೂರು ಮತ್ತು ಪಡುಬಿದ್ರಿ ಗ್ರಾ.ಪಂ.ವ್ಯಾಪ್ತಿಯ ಪರಿಸರ ಹಾಗೂ ಈ ಎರಡೂ ಕ್ಷೇತ್ರಗಳ ಜನರಿಗೆ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರಿದೆ. 1992ರಲ್ಲಿ ಎನ್ ಟಿಪಿಸಿಗಾಗಿ ಭೂಸ್ವಾಧೀನ ಮಾಡಲಾದ ಭೂಮಿಯಲ್ಲಿ ಇದೀಗ ಎಸಿಸಿ ಸಿಮೆಂಟ್ ಕಾರ್ಖಾನೆ ಸ್ಥಾಪಿಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಇದೆ. ಇಲ್ಲಿ ಎಷ್ಟು ಎಕ್ರೆ ಭೂಮಿ ಸ್ವಾಧಿನವಾಗಿದೆ, ಗೋಮಾಳ ಭೂಮಿ ಎಷ್ಟಿದೆ ಇತ್ಯಾದಿ ಯಾವುದೇ ಮಾಹಿತಿ ಇಲ್ಲ. ಜಿಲ್ಲೆಯಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಆದರೆ ಇಲ್ಲಿ ತಯಾರಾಗುವ ವಿದ್ಯುತ್ ಹೊರ ಜಿಲ್ಲೆಗೆ ಸರಬರಾಜಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ವಿದ್ಯುತ್ ಕಡಿತ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟೂ ಹೆಚ್ಚುವ ಸಾದ್ಯತೆ ಇದೆ. ವಿದ್ಯುತ್ ಕಡಿತದಿಂದಾಗಿ ಪರೀಕ್ಷೆ ಸಿದ್ಧತೆಯಲ್ಲಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಅರುಣ್ ಶೆಟ್ಟಿ ಗಮನ ಸೆಳೆದರು. ಗೀತಾಂಜಲಿ ಸುವರ್ಣ ಅರುಣ್ ಶೆಟ್ಟಿಯವರ ಅಳಲಿಗೆ ಪೂರಕವಾಗಿ ಸಭೆಯಲ್ಲಿ ಧ್ವನಿ ಎತ್ತಿದರು.

ಬಿಪಿಎಲ್ ಕಾರ್ಡ್ ಸಂತೆಯಲ್ಲಿ ಮಾರಾಟ !

500 ರು. ನೀಡಿದವರಿಗೆ ಬಿಪಿಎಲ್ ಪಡಿತರ ಚೀಟಿಗಳನ್ನು ವಿತರಿಸಲಾಗುತ್ತಿದೆ. ಇದು ಇದೇ ರೀತಿ ಮುಂದುವರಿದರೆ ಬಡವರು ಬಿಪಿಎಲ್ ಕಾರ್ಡ್ ನಿಂದ ವಂಚಿತರಾಗಲಿದ್ದಾರೆ ಎಂದು ಸದಸ್ಯರೊಬ್ಬರು ಸಭೆಯಲ್ಲಿ ಬಹಿರಂಗಪಡಿಸಿದರು. ಬಿಪಿಎಲ್ ಕಾರ್ಡ್ ಸಂತೆಯಲ್ಲಿ ಮಾರಾಟವಾಗುವಂಥ ಸ್ಥಿತಿ ಸೃಷ್ಟಿಯಾಗಿದೆ ಎಂದು ಇನ್ನೊಬ್ಬ ಸದಸ್ಯರು ಆತಂಕ
ವ್ಯಕ್ತಪಡಿಸಿದರು. 6 ತಿಂಗಳ ಹಿಂದೆಯೇ ಅರ್ಜಿ ಸಲ್ಲಿಸಿ, ಫೋಟೋ ತೆಗೆಸಿಕೊಂಡವರಿಗೆ ಇನ್ನೂ ಸಹ ಬಿಪಿಎಲ್ ಕಾರ್ಡ್ ವಿತರಿಸಲಾಗಿಲ್ಲ. ನಿಜವಾದ ಬಡವರಿಗೆ ವಿತರಿಸಬೇಕಾದ ಬಿಪಿಎಲ್ ಕಾರ್ಡ್ ಗಳನ್ನು ಇನ್ನು ಕೂಡಾ ಮುದ್ರಣ ಮಾಡಲಾಗಿಲ್ಲ. ಆದರೆ ಒಂದು ತಿಂಗಳ ಹಿಂದೆಯಷ್ಟೇ ಅರ್ಜಿ ಸಲ್ಲಿಸಿ ಫೋಟೋ ತೆಗೆಸಿಕೊಂಡು 500, 2000 ರು. ಕೊಟ್ಟವರಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ ಎಂದು ಮತ್ತೊಬ್ಬರು ಸದಸ್ಯರು ಪಕ್ಷ ಬೇಧ ಮರೆತು ಸಭೆಯಲ್ಲಿ ಹಾಲಿ ಬಿಪಿಎಲ್ ಅವ್ಯವಸ್ಥೆ ಮೇಲೆ ಬೆಳಕು ಚೆಲ್ಲಿದರು.

ಎಂಡೋಸಲ್ಫಾನ್ ಪಟ್ಟಿ ಅಪೂರ್ಣ

ತ್ರಾಸಿಯಲ್ಲಿ 147 ಎಕ್ರೆ ಭೂಮಿಯಲ್ಲಿ ಗೇರುಬೀಜ ತಫು ಇದೆ. ಇಲ್ಲಿ ಏರಿಯಲ್ ಸ್ಪ್ರೆ ಸಹ ಮಾಡಲಾಗಿದೆ. ಆದರೆ ಎಂಡೋಸಲ್ಪಾನ್ ಪಟ್ಟಿಯಲ್ಲಿ ಮಾತ್ರ ತ್ರಾಸಿ ಇಲ್ಲ ಎಂದು ಅನಂತ ಮೊವಾಡಿ ಹೇಲಿದರೆ, ಯಡ್ತಾಡಿಯದೂ ಇದೇ ಕಥೆ ಎಂದು ಮಂಜುನಾಥ ಪೂಜಾರಿ ತಿಳಿಸಿದರು. ಇಡೀ ಜಿಲ್ಲೆಯನ್ನು ಎಂಡೋಸಲ್ಪಾನ್ ಬಾಧಿತವೆಂದು ಗುರುತಿಸಬೇಕು ಎಂದು ಈ ಸಂದರ್ಭ ದಲ್ಲಿ ಬಹುತೇಕ ಸದಸ್ಯರು ಒಕ್ಕೋರಲಿನ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲೆಯ 45 ಗ್ರಾಮಗಳು ಈ ಪಟ್ಟಿಯಲ್ಲಿದೆ. ಇಲ್ಲೆಲ್ಲಾ ಕ್ಯಾಂಪ್ ಮಾಡಲಾಗುತ್ತಿದೆ. ಗೇರು ನಿಗಮ ಗಿಡಗಳನ್ನು ನೆಟ್ಟಿದೆ. ಅರಣ್ಯ ಇಲಾಖೆ ಬೆಳೆಸಿದೆ. ಆರೋಗ್ಯ ಇಲಾಕೆ ಇದೀಗ ಪುನರ್ವಸತಿ ವ್ಯವಸ್ಥೆ ನಡೆಸುತ್ತಿದೆ. ನಿಗಮ ನೀಡಿದ ಪಟ್ಟಿಯಂತೆ ಆರೋಗ್ಯ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ಡಿಎಚ್ಓ ಡಾ.ರಾಮಚಂದ್ರ ಬಾಯಿರಿ ಸ್ಪಷ್ಟಪಡಿಸಿದರು.

ಜಿಲ್ಲೆಯ ಕ್ರೈಸ್ತ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಾದ ಮೌಂಟ್ ರೊಸಾರಿಯೋ ಮತ್ತು ಕ್ರೈಸ್ಟ್ ಸಂಸ್ಥೆಗಳು ಶಿಕ್ಷಣ ಹಕ್ಕು ಕಾಯಿದೆಯಿಂದ ವಿನಾಯಿತಿ ಕೋರಿ ಹೈಕೋರ್ಟ್ ಮೊರೆ ಹೋಗಿದೆ. ಕೋರ್ಟ್ ಕಾಯಿದೆಯಂತೆ ಮಕ್ಕಳನ್ನು ಸೇರ್ಪಡೆಗೊಳಿಸಬೇಕೆಂಬ ಇಲಾಖಾ ಸೂಚನೆಗೆ ತಡೆಯಾಜ್ಞೆ ನೀಡಿದೆ ಎಂದು ಡಿಡಿಪಿಐ ಅವರು ತಿಳಿಸಿದರು.

ವಂಡ್ಸೆ ಮತ್ತು ಕೆಮ್ಮಣ್ಣು ಸರಕಾರಿ ಆಸ್ಪತ್ರೆಗಳಲ್ಲಿ ಕಳೆದ ಹಲವು ಸಮಯಗಳಿಂದ ವೈದ್ಯರಿಲ್ಲದಿರುವುದು ಹಾಗೂ ಬೈಂದೂರು ಸರಕಾರಿ ಅಸ್ಪತ್ರೆಯ ಡಿ ದರ್ಜೆ ನೌಕರರಿಗೆ ಕಳೆದ ಎಂಟು ತಿಂಗಳುಗಳಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೇತನ
ನೀಡಿದಿರುವುದು, ಮರವಂತೆ ಪಿಡಿಓ ಅವರನ್ನು ಡೆಪ್ಯುಟೇಶನ್ ಮೇಲೆ ಬೇರೆ ಇಲಾಖಾ ಕೆಲಸಕ್ಕೆ ನಿಯುಕ್ತಿ ಮಾಡಿರುವುದರಿಂದ ಮರವಂತೆ ಗ್ರಾ.ಪಂ.ನ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗಿರುವುದು ಇತ್ಯಾದಿ ಗಂಭೀರ ವಿಷಯಗಳೂ ಸಭೆಯಲ್ಲಿ ಗಮನ ಸೆಳೆದವು.

ಉಪಾಧ್ಯಕ್ಷೆ ಮಮತಾ ಆರ್.ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಉದಯ
ಎಸ್.ಕೋಟ್ಯಾನ್, ಗಣಪತಿ ಟಿ.ಶ್ರೀಯಾನ್, ಕಟಪಾಡಿ ಶಂಕರ ಪೂಜಾರಿ, ಮಲ್ಲಿಕಾ ಪೂಜಾರಿ, ಉಡುಪಿ ತಾ.ಪಂ.ಅಧ್ಯಕ್ಷೆ ಗೌರಿ ಪೂಜಾರಿ, ಉಪ ಕಾರ್ಯದರ್ಶಿ ಪ್ರಾಣೇಶ್ ರಾವ್ ಮೊದಲಾದವರು ಉಪಸ್ಥಿತರಿದ್ದು, ಚರ್ಚೆಯಲ್ಲಿ ಪಾಲ್ಗೊಂಡರು.

ಉಡುಪಿ: ಕರಾವಳಿ ಕರ್ನಾಟಕದ ಪ್ರತಿಷ್ಟಿತ ಸಹಕಾರಿ ಸಂಸ್ಥೆಯಾದ ಮಹಾಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ ಸೆ.8 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿದವರು ವಿಜಯಿಗಳಾಗಿದ್ದು, ಕಾಂಗ್ರೆಸ್ ಮುಖಭಂಗ ಅನುಭವಿಸಿದೆ.
ದ.ಕ.ಜಿಲ್ಲಾ ಮೀನುಗಾರಿಕಾ ಫೆಡರೇಶನಿನ ಅಧ್ಯಕ್ಷರೂ, ಉಡುಪಿ ನಗರಸಭಾ ಸದಸ್ಯರೂ ಆದ ಯಶಪಾಲ್ ಸುವರ್ಣ ನೇತೃತ್ವದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅತ್ಯುತ್ಸಾಹದಿಂದ ಚುನಾವಣಾ ಕಣಕ್ಕೆ ಧುಮುಕಿದ್ದರು. ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಬಿಜೆಪಿಗೆ ಸಡ್ಡು ಹೊಡೆದಿದ್ದರು.
ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಪಕ್ಕ ಇರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಮತದಾನದಲ್ಲಿ ಮಂಗಳೂರು, ಉಡುಪಿ ಮತ್ತು ಕುಂದಾಪುರದಿಂದ ಆಗಮಿಸಿದ ಸಾವಿರಕ್ಕೂ ಅಧಿಕ ಮಂದಿ ಮತ ಚಲಾಯಿಸಿದರು. ಮತದಾನ ಮುಕ್ತಾಯಗೊಂಡ ಬೆನ್ನಿಗೆ ಮತ ಎಣಿಕೆ ನಡೆದು ಮುಸ್ಸಂಜೆಯ ವೇಳೆಗೆ ಫಲಿತಾಂಶವನ್ನು ಘೋಷಿಸಲಾಯಿತು.
ಫಲಿತಾಂಶ ಪ್ರಕಟವಾಗುವ ಮೊದಲೇ ಲೀಡ್ ಬಹಿರಂಗಗೊಳ್ಳುತ್ತಲೇ ಬಿಜೆಪಿ ಕಾರ್ಯಕರ್ತರು ಕಾಲೇಜು ಆವರಣದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ, ಘೋಷಣೆ ಕೂಗಿದರು. ಯಾವುದೇ ಅಹಿತಕಾರಿ ಘಟನೆಗಳು ನಡೆಯದಂತೆ ಕಾಲೇಜು ಪರಿಸರದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ವಾಸುದೇವ ಸಾಲ್ಯಾನ್, ವಿಜಯ ಕುಂದರ್, ವೆಂಕಟರಮಣ ಕಿದಿಯೂರು, ಶಶಿಕಾಂತ ಬಿ.ಕೋಟ್ಯಾನ್, ಹೇಮನಾಥ ಪುತ್ರನ್ (ಉಡುಪಿ), ಆನಂದ
ಎನ್.ಪುತ್ರನ್, ದಿನೇಶ್ ಕರ್ಕೇರ, ಪಿ.ಮಾಧವ ಸುವರ್ಣ, ಲಕ್ಷ್ಮಣ ಬೆಂಗ್ರೆ, ಶೋಭೇಂದ್ರ ಸಸಿಹಿತ್ಲು (ಮಂಗಳೂರು), ಕೃಷ್ಣ ಕಾಂಚನ್, ಚಂದ್ರಶೇಖರ ಖಾರ್ವಿ, ಎಚ್.ರಾಮ ನಾಯ್ಕ್, ಕೆ.ಸಂಜೀವ ಶ್ರೀಯಾನ್, ಬಿ.ಹಿರಿಯಣ್ಣ (ಕುಂದಾಪುರ), ಬೇಬಿ ಎಲ್.ಸಾಲ್ಯಾನ್, ವನಜಾ ಎಚ್.ಕಿದಿಯೂರು (ಮಹಿಳೆ) ಹಾಗೂ ಕೆ.ಸುಬ್ರಾಯ (ಎಸ್ ಸಿ/ಎಸ್ ಟಿ) ವಿಜಯಿಯಾದವರು. ಸಹಕಾರ ಸಂಘಗಳ ಚುನಾವಣಾ ಆಯೋಗದ ನೀತಿ ಸಂಹಿತೆಗೆ ವಿರುದ್ಧವಾಗಿ ಬಿಜೆಪಿ ಬೆಂಬಲಿತರು ಮೊದಲೇ ಸಿದ್ದಪಡಿಸಿಟ್ಟುಕೊಂಡಿದ್ದ ಚುನಾವಣಾ ಗುರುತು ಪತ್ರಗಳಿಗೆ ಮತದಾನದ ದಿನವಾದ ಸೆ.8 ರಂದು ಅನಧಿಕೃತವಾಗಿ ಫೋಟೋ ಅಂಟಿಸಿ, ಸ್ಥಳದಲ್ಲಿಯೇ ಸೀಲ್ ಹಾಕಿ ವಿತರಿಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ. ಶಾಸಕ ಪ್ರಮೋದ್ ಮಧ್ವರಾಜ್ ಸಹಿತ ಕಾಂಗ್ರೆಸ್ ನ ನಗರಸಭಾ ಸದಸ್ಯರಾಗಲೀ, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳಾಗಲೀ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗಾಗಿ ಗಂಭೀರವಾಗಿ ಗಮನಹರಿಸದೇ ಇರುವುದೂ ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಯಶಪಾಲ್ ಸುವರ್ಣ ನೇತೃತ್ವದಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಸಕ್ರಿಯವಾಗಿ ಚುನಾವಣೆಯನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡು ಸಕ್ರಿಯವಾಗಿ ಶ್ರಮಿಸಿದ್ದು ಬಿಜೆಪಿ ಬೆಂಬಲಿತರ ಪ್ರಚಂಡ ಗೆಲುವಿಗೆ ಮುಖ್ಯ ಕಾರಣವಾಯಿತೆನ್ನಲಾಗಿದೆ.