Posts Tagged ‘udupi’

# http://www.udupibits.in news * ಶ್ರೀರಾಮ ದಿವಾಣ.
ಉಡುಪಿ: ನಕಲಿ ಸಹಿಯಿಂದೊಡಗೂಡಿದ ನಕಲಿ ಅಗ್ರಿಮೆಂಟ್ ದಾಖಲೆಯ ಆಧಾರದಲ್ಲಿ ಮಹಿಳೆಯೊಬ್ಬರು ನೀಡಿದ ಸುಳ್ಳು ದೂರಿನಡಿಯಲ್ಲಿ ಪಕ್ಷಪಾತ ಮತ್ತು ಅಸಮರ್ಪಕತೆಯಿಂದ ಕೂಡಿದ ಅವೈಜ್ಞಾನಿಕ ತನಿಖಾ ವರದಿಯಂತೆ ಒಂದು ವರ್ಷ ಎರಡು ತಿಂಗಳ ಹಿಂದೆ ಅನ್ಯಾಯವಾಗಿ ಅಮಾನತುಗೊಂಡ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ಅವರ ಅಮಾನತು ಆದೇಶವನ್ನು ಹಿಂತೆಗೆದುಕೊಂಡಿರುವ ರಾಜ್ಯ ಸರಕಾರ, ತಕ್ಷಣದಿಂದಲೇ ಜ್ಯಾರಿಗೆ ಬರುವಂತೆ ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕು ಆಸ್ಪತ್ರೆಗೆ ವರ್ಗಾಯಿಸಿ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.

ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ನಡೆದ ಬಹುಕೋಟಿ ರಾಸಾಯನಿಕ ಹಗರಣದ ಬಗ್ಗೆ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ಮದನ್ ಗೋಪಾಲ್ ಐಎಎಸ್ ಅವರಿಗೆ ಕಳೆದ ವರ್ಷದ ಮಾರ್ಚ್ ನಲ್ಲಿ ಡಾ.ಶರತ್ ಕುಮಾರ್ ರಾವ್ ಅವರು ದೂರು ನೀಡಿದ್ದೇ, ಬಳಿಕ ಅವರ ಮೇಲೆಯೇ ಮಹಿಳೆಯೊಬ್ಬರು ಸುಳ್ಳು ದೂರು ನೀಡಲು, ಅವರು ಅಮಾನತುಗೊಂಡು ಒಂದು ವರ್ಷ ಎರಡು ತಿಂಗಳ ಕಾಲ ಅಮಾನತಿನಲ್ಲಿರಲು ಮತ್ತು ಇದೀಗ ಗುಲ್ಬರ್ಗ ಜಿಲ್ಲೆಯ ಚಿಂಚೋಳಿಯಲ್ಲಿರುವ ತಾಲೂಕು ಮಟ್ಟದ ಆಸ್ಪತ್ರೆಗೆ ವರ್ಗಾವಣೆಯಾಗಲು ಮುಖ್ಯ ಕಾರಣವೆನ್ನಲಾಗಿದೆ. ಈ ವರ್ಗಾವಣೆಯನ್ನು ಶಿಕ್ಷಾರ್ಹ ವರ್ಗಾವಣೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಡಾ.ಶರತ್ ಅವರನ್ನು ಸರಕಾರ ಚಿಂಚೋಳಿಗೆ ವರ್ಗಾವನೆಗೊಳಿಸಿದೆ ಎನ್ನುವ ವಿಷಯವನ್ನು ಮೊತ್ತ ಮೊದಲು ಬಹಿಂರಂಗಪಡಿಸಿದ್ದು, ಬಹುಕೋಟಿ ರಾಸಾಯನಿಕ ಹಗರಣದಲ್ಲಿ ಶಾಮೀಲಾಗಿರುವ ಜನರೇ ಎನ್ನಲಾಗುತ್ತಿದೆ. ಡಾ.ಶರತ್ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿಯಿಂದ, ರಕ್ತನಿಧಿ ವಿಭಾಗವೇ ಇಲ್ಲದ ಬಹುದೂರದ ಊರಾದ ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕು ಆಸ್ಪತ್ರೆಯ ಸಾಮಾನ್ಯ ವಿಭಾಗಕ್ಕೆ ರಾಜ್ಯ ಸರಕಾರ ಶಿಕ್ಷಾರ್ಹ ಎಂಬಂತೆ ವರ್ಗಾವಣೆಗೊಳಿಸಿದ್ದರಿಂದ ಬಹುಕೋಟಿ ರಾಸಾಯನಿಕ ಹಗರಣದಲ್ಲಿ ಶಾಮೀಲಾಗಿರುವ ವ್ಯಕ್ತಿಗಳು ಹರ್ಷದಿಂದ ವಿಷಯವನ್ನು ಬಹಿರಂಗಪಡಿಸಿದ್ದು ಸಹಜವೇ ಆಗಿತ್ತು.

ಡಾ.ಶರತ್ ಕುಮಾರ್ ರಾವ್ ಅವರು ತಮ್ಮ ಅಮಾನತು ಆದೇಶದ ವಿರುದ್ಧ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ಗೆ ಮೊರೆ ಹೋದ ಹಿನ್ನೆಲೆಯಲ್ಲಿ ಅಮಾನತು ಆದೇಶವನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ, ಕಾನೂನಿನ ತೊಡಕಿದೆ ಎಂದು ಬೇರೆ ಬೇರೆ ಸಂದರ್ಭಗಳಲ್ಲಿ ಪದೇ ಪದೇ ಎಂಬಂತೆ ಆರೋಗ್ಯ ಇಲಾಖೆಯ ಹಾಲಿ ಪ್ರಧಾನ ಕಾರ್ಯದರ್ಶಿ ಎನ್.ಶಿವಶೈಲಂ, ಆರೋಗ್ಯ ಸಚಿವ ಯು.ಟಿ.ಖಾದರ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕ ಪ್ರಮೋದ್ ಮಧ್ವರಾಜ್ ಹೇಳಿಕೊಂಡು ಬಂದಿದ್ದರು. ಈ ವಾದವನ್ನು ಬಹಿರಂಗವಾಗಿಯೂ ಪ್ರಕಟಪಡಿಸಿದ್ದರು.

ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾದ ಡಾ.ಶರತ್ ಕುಮಾರ್ ರಾವ್ ಅವರು ಉಡುಪಿ ಜಿಲ್ಲಾಸ್ಪತ್ರೆ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿಯಾದ ಬಳಿಕ ಉಡುಪಿ ರಕ್ತನಿಧಿಗೆ ರಾಜ್ಯ ಮಟ್ಟದಲ್ಲಿ ಹೆಸರು ಬರುವಂತೆ ಮಾಡಿದ್ದರು. ಕಳೆದ ವರ್ಷ ಅವರು ಅಮಾನತುಗೊಂಡ ಕಾರಣಕ್ಕೆ ಮತ್ತೆ ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗ ಕಳೆಗುಂದಿತ್ತು. ಮಾತ್ರವಲ್ಲಿ ಅಸಂವಿಧಾನಿಕವಾಗಿ ಅವರನ್ನು ಅಮಾನತು ಮಾಡಲಾಗಿದೆಯಲ್ಲದೆ, ಅವರಿಗೆ ನಿಯಮಾವಳಿ ಪ್ರಕಾರ ನೀಡಬೇಕಾದ ಜೀವನಾಂಶವನ್ನೂ ಸರಿಯಾಗಿ ನೀಡದೆ ಮಾನವ ಹಕ್ಕುಗಳನ್ನು ಸರಕಾರ ಸಾರಾ ಸಗಟಾಗಿ ಉಲ್ಲಂಘಿಸುತ್ತಿದೆ. ಆದುದರಿಂದ ಅವರ ಅಮಾನತು ಆದೇಶವನ್ನು ಕೂಡಲೇ ಹಿಂಪಡೆದುಕೊಳ್ಳಬೇಕು ಎಂದು ಜಿಲ್ಲೆಯ ಖ್ಯಾತ ಮನೋ ವೈದ್ಯರಾದ ಡಾ.ಪಿ.ವಿ.ಭಂಡಾರಿಯವರ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿ ಆಗ್ರಹಪಡಿಸಿದಾಗ, ಡಾ.ಶರತ್ ಕೆಎಟಿ ಮೊರೆ ಹೋದ ಕಾರಣ ಅವರ ಅಮಾನತು ಹಿಂಪಡೆದಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಾದಿಸುತ್ತಿದ್ದ ಅಧಿಕಾರಿಗಳು, ಸಚಿವರು ಹಾಗೂ ಶಾಸಕರು, ಈಗ ಪ್ರಕರಣ ಕೆಎಟಿಯಲ್ಲಿರುವಾಗ ಹೇಗೆ ಅವರ ಅಮಾನತು ಆದೇಶವನ್ನು ಹಿಂಪಡೆದುಕೊಂಡರು ಎಂಬ ಪ್ರಶ್ನೆ ಸಹಜವಾಗಿಯೇ ಉಂಟಾಗಿದೆ.

ಡಾ.ಶರತ್ ಕುಮಾರ್ ರಾವ್ ಅವರು ತಾವು ಕೆಎಟಿಯಲ್ಲಿ ದಾಖಲಿಸಿದ ಪ್ರಕರಣವನ್ನು ಇನ್ನೂ ಹಿಂತೆಗೆದುಕೊಂಡಿಲ್ಲ. ಮೊನ್ನೆಯವರೆಗೂ ಇದೇ ಒಂದು ಕಾರಣದಿಂದ ಅವರ ಅಮಾನತು ಹಿಂಪಡೆದುಕೊಳ್ಳಲಾಗುವುದಿಲ್ಲ ಎಂದು ಹೇಳುತ್ತಿದ್ದ ಅಧಿಕಾರಿಗಳೇ, ಇದೀಗ ಅಮಾನತು ಹಿಂತೆಗೆದುಕೊಳ್ಳುವ ಆದೇಶ ಹೊರಡಿಸಿದ್ದಾರೆ.

ಇದನ್ನೆಲ್ಲ ಗಮನಿಸಿದಾಗ ಒಂದೋ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಿವಶೈಲಂ, ಸಚಿವರಾದ ಖಾದರ್, ಸೊರಕೆ ಹಾಗೂ ಶಾಸಕ ಪ್ರಮೋದ್ ಮಧ್ವರಾಜ್ ಇವರೆಲ್ಲರೂ ಜೊತೆಯಾಗಿ ಅತ್ಯಂತ ವ್ಯವಸ್ಥಿತವಾಗಿ ಮತ್ತು ಉದ್ಧೇಶಪೂರ್ವಕವಾಗಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದರು ಅಥವಾ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ತಪ್ಪು ಮಾಹಿತಿ ನೀಡಿದರು ಎನ್ನುವುದು, ಈ ಎರಡರಲ್ಲಿ ಯಾವುದಾದರು ಒಂದಂತೂ ಸ್ಪಷ್ಟ ಎಂಬುದು ಸ್ಪಷ್ಟವಾಗುತ್ತದೆ.

ಎಲ್ಲರೂ ಸೇರಿ ಮತದಾರರಿಗೆ ಹೀಗೊಂದು ವಂಚನೆ ಮತ್ತು ಮೋಸ ಮಾಡಿದರು ಇಲ್ಲವೇ ಅಧಿಕಾರಿಗಳು ಜನಪ್ರತಿನಿಧಿಗಳನ್ನು ಮೂರ್ಖರನ್ನಾಗಿಸಿದರು ಮತ್ತು ಸಂಪೂರ್ಣವಾಗಿ ಕತ್ತಲೆಯಲ್ಲಿರಿಸಿದ್ದರು ಎನ್ನುವುದು ಖಚಿತವಾಗುತ್ತದೆ. ಇವೆರಡರಲ್ಲಿ ಯಾವುದೇ ಒಂದು ಸತ್ಯವಾದರೂ ಈ ರೀತಿಯ ಕುಟಿಲ, ಕುತಂತ್ರ, ಹೊಲಸು, ಅಸಹ್ಯ ರಾಜಕಾರಣ ಮತದಾರರಿಗೆ ಮಾಡಿದ ಮಹಾದ್ರೋಹವಾಗಿದ್ದು, ಇದಕ್ಕಾಗಿ ಇವರುಗಳ ವಿರುದ್ಧ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರು ಸೂಕ್ತ ಕ್ರಮಗಳನ್ನು ಜರುಗಿಸಬೇಕು ಎಂಬುದು ಹೋರಾಟಗಾರರ ಒತ್ತಾಯವಾಗಿದೆ.

ಡಾ.ಶರತ್ ಕುಮಾರ್ ರಾವ್ ಒಬ್ಬರು ಪೆಥೋಲಜಿಸ್ಟ್ ಆಗಿದ್ದು, ಅವರನ್ನು ರಕ್ತನಿಧಿ ವಿಭಾಗವಿಲ್ಲದ ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕು ಆಸ್ಪತ್ರೆಗೆ ವರ್ಗಾವಣೆ ಮಾಡಿರುವುದು ಷಡ್ಯಂತ್ರದ ಒಂದು ಭಾಗವೆನ್ನಲಾಗಿದೆ. ಉಡುಪಿ ಜಿಲ್ಲಸ್ಪತ್ರೆಯ ರಕ್ತನಿಧಿ ವಿಭಾಗವನ್ನು ನಾಶಗೊಳಿಸಿ ಖಾಸಗಿಯವರ ರಕ್ತನಿಧಿ ವಿಭಾಗವನ್ನು ಬಲಿಷ್ಟಗೊಳಿಸುವ ಹುನ್ನಾರದಲ್ಲಿ ಸಕ್ರಿಯವಾಗಿ ಶಾಮೀಲಾಗಿರುವ ಜನಪ್ರತನಿಧಿಗಳು ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ರೂಪಿಸಿದ ಕಾರ್ಯತಂತ್ರದ ಫಲವಾಗಿ ಡಾ.ಶರತ್ ಕುಮಾರ್ ರಾವ್ ಅವರನ್ನು ಚಿಂಚೋಳಿಗೆ ವರ್ಗಾವಣೆಗೊಳಿಸಲಾಗಿದೆ ಎಂಬುದು ದೃಢಪಟ್ಟಿದೆ.

ಬಹುಕೋಟಿ ರಾಸಾಯನಿಕ ಹಗರಣದ ಬಗ್ಗೆ ಡಾ.ಕೆ.ಎಚ್.ನರಸಿಂಹಮೂರ್ತಿ ಅವರು ತನಿಖೆ ನಡೆಸಿ ಸರಕಾರಕ್ಕೆ ಸಲ್ಲಿಸಿದ ತನಿಖಾ ವರದಿಯ ಆಧಾರದಲ್ಲಿ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮಗಳನ್ನೂ ತೆಗೆದುಕೊಳ್ಳದೆ ಅವರನ್ನು ರಕ್ಷಿಸುತ್ತಿರುವ ರಾಜ್ಯ ಸರಕಾರ, ಹಗರಣದ ಬಗ್ಗೆ ಸರಕಾರದ ಗಮನಸೆಳೆದರು ಎನ್ನುವ ಏಕೈಕ ಕಾರಣಕ್ಕೆ ಡಾ.ಶರತ್ ಅವರನ್ನು ಈ ರೀತಿಯಾಗಿ ನಿರಂತವಾಗಿ ವಿಧವಿಧವಾಗಿ ಹಿಂಸಿಸಿ, ಶಿಕ್ಷಿಸುತ್ತಿರುವುದರ ಬಗ್ಗೆ ನಾಗರಿಕ ಸಮೂದಾಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

http://www.udupibits.in news

ಉಡುಪಿ: ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ದಕ್ಷ ಮತ್ತು ಪ್ರಾಮಾಣಿಕ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಅವರು ತನ್ನ ಅಮಾನತು ಆದೇಶದ ವಿರುದ್ಧ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ)ಗೆ ಮೊರೆ ಹೋದ ಕಾರಣ ಅವರ ಅಮಾನತು ಆದೇಶವನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ ಎಂದು ಅಕ್ಟೋಬರ್ 19ರಂದು ಉಡುಪಿಯ ಅಜ್ಜರಕಾಡಿನಲ್ಲಿ ನಡೆದ ಬಹಿರಂಗ ಪ್ರತಿಭಟನಾ ಸಭೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಮೋದ್ ಮಧ್ವರಾಜ್ ನೀಡಿದ ಸ್ಪಷ್ಟನೆಗೆ, ಅದೇ ವೇದಿಕೆಯಲ್ಲಿ ಮಾತನಾಡಿದ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀರಾಮ ದಿವಾಣ ಅವರು ಬಹಿರಂಗವಾಗಿಯೇ ಪ್ರತಿ ಸವಾಲು ಹಾಕಿದ ವಿದ್ಯಾಮಾನ ನಡೆದಿದೆ.

ಡಾ.ಶರತ್ ಕುಮಾರ್ ಇರಬಹುದು, ಬೇರೆ ಯಾರೇ ಇರಬಹುದು. ಅಮಾನತುಗೊಂಡವರು, ತಮ್ಮ ಅಮಾನತು ಆದೇಶದ ವಿರುದ್ಧ ಕೆಎಟಿಯ ಮೊರೆ ಹೋದಲ್ಲಿ ಅಂಥವರ ಅಮಾನತು ಆದೇಶವನ್ನು ಸರಕಾರ ಹಿಂಪಡೆಯಬಾರದು ಎಂಬ ಯಾವ ಕಾನೂನಾಗಲೀ, ನಿಯಮವಾಗಲೀ ಇಲ್ಲವೇ ಇಲ್ಲ. ಶಾಸಕರ ವಾದ ಖಡಾ ಖಂಡಿತವಾಗಿಯೂ ತಪ್ಪು ಮಾಹಿತಿ ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸುವ ಹಾಗೂ ಸಾರ್ವಜನಿಕರಲ್ಲಿ ಗೊಂದಲವನ್ನು ಮೂಡಿಸುವ ಯತ್ನವಾಗಿದ್ದು, ಇದು ವಾಸ್ತವಾಂಶದಿಂದ ನುಣುಚಿಕೊಳ್ಳುವ ತಂತ್ರವಲ್ಲದೆ ಬೇರೇನೂ ಅಲ್ಲ ಎಂದು ಶ್ರೀರಾಮ ದಿವಾಣ ತಿಳಿಸಿದರು.

ಶಾಸಕರಾದವರು ವಿಷಯವನ್ನು ತಜ್ಞರೊಂದಿಗೆ ಸರಿಯಾಗಿ ಸಮಾಲೋಚಿಸಿ ಮನವರಿಕೆ ಮಾಡಿಕೊಳ್ಳದೆ, ಒಟ್ಟಾರೆ ಮಾತನಾಡುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ. ಈ ವಿಷಯದಲ್ಲಿ ಯಾವಾಗ, ಎಲ್ಲಿ ಬೇಕಾದರೂ ತಾನು ಬಹಿರಂಗ ಚರ್ಚೆಗೆ ಸಿದ್ದ ಎಂದು ಪ್ರತಿಭಟನಾ ಸಭೆಯಲ್ಲಿ ಪ್ರಮೋದ್ ಮಧ್ವರಾಜ್ ಭಾಷಣದ ಬಳಿಕ ಮಾತನಾಡಿದ ಶ್ರೀರಾಮ ದಿವಾಣ ಹೇಳಿದರು.

ಕಳೆದೊಂದು ವರ್ಷದಿಂದ ಡಾ.ಶರತ್ ಕುಮಾರ್ ಅಮಾನತು ಮತ್ತು ಬಹುಕೋಟಿ ರಾಸಾಯನಿಕ ಹಗರಣಕ್ಕೆ ಸಂಬಂಧಿಸಿದಂತೆ ತಾನು ಮೂರು ಬಾರಿ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದ್ದೇನೆ. ಮಂಗಳೂರಿನ ಹಿರಿಯ ನ್ಯಾಯವಾದಿ ಪುರುಷೋತ್ತಮ ಶೆಟ್ಟಿ, ಉಡುಪಿಯ ಖ್ಯಾತ ಮನೋವೈದ್ಯರಾದ ಡಾ.ಪಿ.ವಿ.ಭಂಡಾರಿ ಸಹಿತ ಇನ್ನೂ ಕೆಲವರು ಸಹ ಮುಖ್ಯಮಂತ್ರಿಗಳಿಗೆ ಮನವಿಗಳನ್ನು ನೀಡಿದ್ದಾರೆ. ಆದರೆ ಇದುವರೆಗೂ ಯಾರೊಬ್ಬರ ಯಾವೊಂದು ದೂರಿಗೂ ಮುಖ್ಯಮಂತ್ರಿಗಳ ಕಚೇರಿ ಅಧಿಕಾರಿಗಳು ಕನಿಷ್ಟ ಸ್ಪಂದನೆಯನ್ನೂ ವ್ಯಕ್ತಪಡಿಸಲಿಲ್ಲ. ಆದರೆ ಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ನೀಡಿದ ದೂರಿಗೆ ಮುಖ್ಯಮಂತ್ರಿಗಳ ಕಚೇರಿ ಅಧಿಕಾರಿಗಳು ಸ್ಪಂದಿಸಿ ಪತ್ರ ಬರೆಯುತ್ತಿರುವುದು ನಡೆಯುತ್ತಿದೆ. ಬಹುಕೋಟಿ ರಾಸಾಯನಿಕ ಹಗರಣದಲ್ಲಿ ಭಾಗಿಯಾಗಿರುವ ಉಡುಪಿ ಜಿಲ್ಲಾಸ್ಪತ್ರೆಯ ಅಧಿಕಾರಿಯೊಬ್ಬರ ಹತ್ತಿರದ ಸಂಬಂಧಿಯೊಬ್ಬರು ಮುಖ್ಯಮಂತ್ರಿ ಕಚೇರಿಯಲ್ಲಿ ಆಯಕಟ್ಟಿನ ಹುದ್ಧೆಯಲ್ಲಿರುವುದೇ ಇದಕ್ಕೆ ಕಾರಣ ಎಂಬುದು ಇದೀಗ ಗಮನಕ್ಕೆ ಬಂದಿದೆ ಎಂದು ಶ್ರೀರಾಮ ದಿವಾಣ ಸಭೆಯಲ್ಲಿ ಬಹಿರಂಗಪಡಿಸಿದರು.

ಡಾ.ಶರತ್ ಅಮಾನತು ಹಾಗೂ ರಾಸಾಯನಿಕ ಹಗರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ತಾನು ಖುದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಎಲ್ಲಾ ವಿಚಾರಗಳನ್ನೂ ಅವರ ಗಮನಕ್ಕೆ ತಂದು, ಮನವಿಯನ್ನೂ ಸಲ್ಲಿಸಿದ್ದೇನೆ ಎಂದು ಶ್ರೀರಾಮ ದಿವಾಣ ತಿಳಿಸಿದರು.

‘ಇದು, ಜಿಲ್ಲಾಸ್ಪತ್ರೆಯ ರಕ್ತನಿಧಿ ಉಳಿಸುವ ಹೋರಾಟವೂ ಹೌದು’

ಪ್ರಸ್ತುತ ನಡೆಯುತ್ತಿರುವ ಹೋರಾಟ ಕೇವಲ ಡಾ.ಶರತ್ ಪರವಾಗಿ ನಡೆಯುತ್ತಿರುವ ಹೋರಾಟವಷ್ಟೇ ಅಲ್ಲ. ಇದು ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗವನ್ನು ಉಳಿಸುವ ಹೋರಾಟವೂ ಆಗಿದೆ. ಕಾರಣ, ಡಾ.ಶರತ್ ಅವರ ವಿರುದ್ಧ ಷಡ್ಯಂತ್ರ ಹೂಡಿರುವ ಪ್ರಕರಣದ ಹಿಂದೆ ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗವನ್ನು ನಾಶಪಡಿಸುವ ಹುನ್ನಾರವೂ ಇದೆ. ರಕ್ತದಂಧೆ ನಡೆಸುತ್ತಿರುವ ಖಾಸಗಿ ಉದ್ಯಮಿಗಳ ಹುನ್ನಾರವೂ ಇದರ ಹಿಂದೆ ಇದೆ ಎಂದು ಶ್ರೀರಾಮ ದಿವಾಣ ಗಂಭೀರ ಆರೋಪವನ್ನೂ ಪ್ರತಿಭಟನಾ ಸಭೆಯಲ್ಲಿ ಮಾಡಿದರು.

‘ವೀಣಾ ಶೆಟ್ಟಿಗೆ ನ್ಯಾಯ ಸಿಗಬೇಕಾದರೆ, ಅಫಿದವಿತ್ ನ ಮೂಲ ಪ್ರತಿ ಹಾಜರುಪಡಿಸಬೇಕು’

ನಮ್ಮದು ಡಾ.ಶರತ್ ಅವರಿಗೆ ನ್ಯಾಯ ಕೇಳುವುದು ಮಾತ್ರವಲ್ಲ, ಡಾ.ಶರತ್ ವಿರುದ್ಧ ದೂರು ನೀಡಿದ ವೀಣಾ ಶೆಟ್ಟಿ ಅವರಿಗೆ ನ್ಯಾಯ ಕೇಳುವ ಹೋರಾಟವೂ ಹೌದು. ವೀಣಾ ಶೆಟ್ಟಿ ಅವರಿಗೆ ನ್ಯಾಯ ಲಭಿಸಬೇಕಾದರೆ, ಯಾವ ಅಫಿದವಿತ್ ನ ಜೆರಾಕ್ಸ್ ಪ್ರತಿಯನ್ನು ನೀಡಿ ವೀಣಾ ಶೆಟ್ಟಿಯವರು ಡಾ.ಶರತ್ ವಿರುದ್ಧ ದೂರು ನೀಡಿದ್ದಾರೋ, ಆ ಅಫಿದವಿತ್ ನ ಮೂಲ ಪ್ರತಿಯನ್ನು ದೂರು ನೀಡಿದ ವೀಣಾ ಶೆಟ್ಟಿ ಅಥವಾ ವೀಣಾ ಶೆಟ್ಟಿಯವರ ಮೂಲಕ ದೂರು ಕೊಡಿಸಿದ ವ್ಯಕ್ತಿಗಳು ಇನ್ನಾದರೂ ಪ್ರಕರದ ತನಿಖೆ ನಡೆಸುತ್ತಿರುವ ಉಡುಪಿ ನಗರ ಪೊಲೀಸ್ ಠಾಣೆಯ ಕ್ರೈಂ ಸಬ್ ಇನ್ಸ್ ಪೆಕ್ಟರ್ ರಾಜ್ ಗೋಪಾಲ್ ಅವರಿಗೆ ತಂದೊಪ್ಪಿಸಬೇಕು. ಪೊಲೀಸರ ತನಿಖೆಗೆ ವೀಣಾ ಶೆಟ್ಟಿ, ಇಲ್ಲವೇ ವೀಣಾ ಶೆಟ್ಟಿಯವರ ಹಿಂದಿರುವ ವ್ಯಕ್ತಿಗಳು ಸಹಕರಿಸಿದರೆ ಮಾತ್ರ ವೀಣಾ ಶೆಟ್ಟಿಯವರಿಗೆ ನ್ಯಾಯ ಲಭಿಸಲು ಸಾಧ್ಯ. ವೀಣಾ ಶೆಟ್ಟಿಯವರು ಆರೋಗ್ಯ ಇಲಾಖಾಧಿಕಾರಿಗಳಿಗೆ ನೀಡಿದ ಅಫಿದವಿತ್ ಅಸಲಿ ಎಂದಾದರೆ, ಅಮಾನತಿನಲ್ಲಿರುವ ಡಾ.ಶರತ್ ಕರ್ತವ್ಯದಿಂದ ವಜಾ (ಡಿಸ್ ಮಿಸ್) ಆಗಲಿದ್ದಾರೆ . ಮಾತ್ರವಲ್ಲ, ಜೈಲು ಶಿಕ್ಷೆಗೂ ಒಳಗಾಗುವುದು ಖಂಡಿತಾ ಎಂದು ಶ್ರೀರಾಮ ದಿವಾಣ ಮಾರ್ಮೀಕವಾಗಿ ಹೇಳಿದರು.

ಪ್ರಕರಣ ಕೆಎಟಿಯಲ್ಲಿರುವಾಗ ರಕ್ತನಿಧಿಗೆ ಬೇರೊಬ್ಬರನ್ನು ನೇಮಕ ಮಾಡಲು ಅವಕಾಶವಿದೆಯೇ ?: ಶಾಸಕರಿಗೆ ಶ್ರೀರಾಮ ದಿವಾಣ ಪ್ರಶ್ನೆ

ಅಮಾನತು ಆದೇಶದ ವಿರುದ್ಧ ಕೆಎಟಿ ಮೊರೆ ಹೋದ ಕಾರಣ, ಡಾ.ಶರತ್ ಕುಮಾರ್ ರಾವ್ ಅವರ ಅಮಾನತು ಆದೇಶವನ್ನು ಹಿಂಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಶಾಸಕ ಪ್ರಮೋದ್ ಮಧ್ವರಾಜ್ ಅವರ ಹೇಳಿಕೆಗೆ ಪ್ರತಿಯಾಗಿ ಅ.20ರಂದು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀರಾಮ ದಿವಾನ ಅವರು, ಹಾಗಾದರೆ ಪ್ರಕರಣ ಕೆಎಟಿಯಲ್ಲಿರುವಾಗ, ಸರಕಾರ ರಕ್ತನಿಧಿ ವಿಭಾಗಕ್ಕೆ ಬೇರೊಬ್ಬ ಅಧಿಕಾರಿಯನ್ನು ನೇಮಕಾತಿ ಮಾಡಿದ್ದು ಹೇಗೆ ಮತ್ತು ಹೀಗೆ ನೇಮಕಾತಿ ಮಾಡಲು ಕಾನೂನಿನಲ್ಲಿ ಅವಕಾಶ ಇದೆಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಡಾ.ಶರತ್ ಕುಮಾರ್ ರಾವ್ ಅವರು ಮೊರೆ ಹೋದ ಕಾರಣದಿಂದಲೇ ಅವರ ಅಮಾನತು ಆದೇಶ ಹಿಂಪಡೆಯಲು ಸಾಧ್ಯವಾಗಲಿಲ್ಲ ಎಂಬುದನ್ನು ಪ್ರತಿಭಟನಾ ಸಭೆಯಲ್ಲಿ ಶಾಸಕ ಪ್ರಮೋದ್ ಮಧ್ವರಾಜ್ ಅವರು ಬಹಿರಂಗವಾಗಿಯೇ ಘೋಷಿಸಿರುವುದರಿಂದ, ಅವರು ಈ ವಿಷಯವನ್ನು ಲಿಖಿತವಾಗಿ ತಿಳಿಸುವ ಸ್ಪಷ್ಟಪಡಿಸಬೇಕು. ಪ್ರತಿಭಟನಾ ಸಭೆಯಲ್ಲಿ ಡಾ.ಪಿ.ವಿ.ಭಂಡಾರಿಯವರ ನೇತೃತ್ವದಲ್ಲಿ ಹಲವಾರು ಮಂದಿ ಪ್ರಮುಖರ ಸಹಿ ಇರುವ ನಾಗರಿಕರು ಸಲ್ಲಿಸಿರುವ ಮನವಿಗೆ ಪ್ರತಿಯಾಗಿ ಈ ಬಗ್ಗೆ ಶಾಸಕರು ಲಿಖಿತವಾಗಿ ಹಿಂಬರಹ ನೀಡಲಿ ಎಂದು ಶ್ರೀರಾಮ ದಿವಾಣ ಅವರು ಪತ್ರಿಕಾ ಪ್ರಕಟಣೆಯಲ್ಲಿ ಸವಾಲು ಹಾಕಿದ್ದಾರೆ.

http://www.udupibits.in news

ಉಡುಪಿ: ಮಹಾಭಾರತ ಯುದ್ಧದಲ್ಲಿ ಬೃಹನ್ನಳೆಯನ್ನು ಮುಂದಿಟ್ಟುಕೊಂಡು ಯುದ್ಧ ಮಾಡಿದಂತೆ, ದಕ್ಷ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಅವರ ವಿರುದ್ಧ ಸ್ತ್ರೀ ಒಬ್ಬಾಕೆಯನ್ನು ಮುಂದಿರಿಸಿಕೊಂಡು ಸರಕಾರಿ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ ಎಂದು ಫಾದರ್ ವಿಲಿಯಂ ಮಾರ್ಟಿಸ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ಪ್ರಾಮಾಣಿಕ ವೈದ್ಯಾಧಿಕಾರಿ ಡಾ.ಶರತ್ ಕುಮರ್ ಅವರನ್ನು ಅಸಂವಿದಾನಿಕವಾಗಿ ಅಮಾನತು ಮಾಡಿದ್ದೂ ಅಲ್ಲದೆ, ಕಳೆದ ಒಂದು ವರ್ಷ ಒಂದು ತಿಂಗಳಿಂದಲೂ ತನಿಖೆಯನ್ನೂ ನಡೆಸದೆ, ಜೀವಾನಾಂಶವನ್ನೂ ಸರಿಯಾಗಿ ನೀಡದೆ ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಸರಕಾರದ ಕ್ರಮವನ್ನು ಖಂಡಿಸಿ ಇಂದು (19.10.2014) ಬೆಳಗ್ಗೆ ಉಡುಪಿ ನಗರದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಡಾ.ಶರತ್ ಅವರಿಗೆ ಅನ್ಯಾಯವಾಗಿದೆ ಎನ್ನುವುದನ್ನು ಲಭ್ಯವಿರುವ ದಾಖಲೆಗಳೇ ಸ್ಪಷ್ಟಪಡಿಸುತ್ತದೆ. ಹೀಗೆ ಮಾಡುವುದು ಮಾನವ ಹಕ್ಕುಗಳ ಉಲ್ಲಂಘನೆಯೂ ಹೌದು. ಸರಕಾರಿ ಅಧಿಕಾರಿಗಳು ಜನಪ್ರತಿನಿಧಿಗಳನ್ನು ದಾರಿ ತಪ್ಪಿಸುವ ಪ್ರಕ್ರಿಯೆಯೂ ಈ ಪ್ರಕರಣದಲ್ಲಿ ನಡೆದಿದೆ. ಇನ್ನಾದರೂ ಡಾ.ಶರತ್ ಅವರಿಗೆ ಸರಕಾರ ನ್ಯಾಯ ಒದಗಿಸಿಕೊಡಬೇಕು ಎಂದು ಫಾ.ವಿಲಿಯಂ ಮಾರ್ಟಿಸ್ ಒತ್ತಾಯಿಸಿದರು.

ಉಡುಪಿ ತಾಲೂಕು ಪಂಚಾಯತ್ ಸದಸ್ಯ ಸತ್ಯಾನಂದ ನಾಯಕ್, ಉಡುಪಿ ಜಿಲ್ಲಾ ನಾಗರಿಕ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಎಸ್.ಎಸ್.ತೋನ್ಸೆ, ಹಿರಿಯ ಸಮಾಜ ಸೇವಕರಾದ ಹೂವಯ್ಯ ಸೇರ್ವೇಗಾರ್ ಉಪ್ಪೂರು, ಮಾಹಿತಿ ಹಕ್ಕು ಹೋರಾಟಗಾರರಾದ ಕೆ.ಎಸ್.ಉಪಾಧ್ಯ, ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಆರ್.ಕಾಮತ್, ಹಿರಿಯ ಸಾಹಿತಿ ಮುರಳೀಧರ ಉಪಾಧ್ಯ ಹಿರಿಯಡಕ, ನಗರ ಸಭಾ ಸದಸ್ಯ ಮಹೇಶ್ ಠಾಕೂರ್, ಲಕ್ಷ್ಮೀನಾರಾಯಣ ಉಪಾಧ್ಯ, ವಾಸುದೇವ ಕಾಮತ್ ಕುಂದಾಪುರ, ರಕ್ತದಾನಿ ದಿವಾಕರ ಖಾರ್ವಿ, ಉಪನ್ಯಾಸಕ ಮಂಜಪ್ಪ ಗೋಣಿ, ಸಮಾಜ ಸೇವಕರಾದ ರಾಘವೇಮದ್ರ ಪ್ರಭು ಕರ್ವಾಲು, ರೊನಾಲ್ಡ್ ಕ್ಯಾಸ್ತಲಿನೋ ಶಂಕರಪುರ, ಶೇಖರ ಶೆಟ್ಟಿ ಹೆಬ್ರಿ, ಪ್ರಭಾತ್ ಕಲ್ಕೂರ, ನಾಗರಾಜ್, ಚಂದ್ರಶೇಖರ ಶೆಟ್ಟಿ ವಂಡ್ಸೆ, ಡಾ.ದೀಪಕ್ ಮಲ್ಯ, ಡಾ.ಕಿರಣ್ ಆಚಾರ್ಯ ಸಹಿತ ಅನೇಕ ಮಂದಿ ಪ್ರಮುಖರು ಪ್ರತಿಭಟನಾ ಸಭೆಯಲ್ಲಿ
ಭಾಗವಹಿಸಿದ್ದರು. ಚಿತ್ರ : ಶ್ರೀರಾಮ ದಿವಾಣ.

http://www.udupibits.in news

ಉಡುಪಿ: ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ದಕ್ಷ ಮತ್ತು ಪ್ರಾಮಾಣಿಕ ವೈದ್ಯಾಧಿಕಾರಿಯಾಗಿದ್ದು ಕಳೆದ ಒಂದು ವರ್ಷ ಒಂದು ತಿಂಗಳ ಹಿಂದೆ ರಾಜ್ಯ ಸರಕಾರದಿಂದ ಅಸಂವಿಧಾನಿಕವಾಗಿ ಅಮಾನತುಗೊಳಿಸಲ್ಪಟ್ಟ ಡಾ.ಶರತ್ ಕುಮಾರ್ ರಾವ್ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿ, ಅವರನ್ನು ಕೂಡಲೇ ಉಡುಪಿ ರಕ್ತನಿಧಿಗೆ ನಿಯುಕ್ತಿಗೊಳಿಸಬೇಕು ಎಂದು ಆಗ್ರಹಿಸಿ ಇಂದು (19.10.2014) ಪೂರ್ವಾಹ್ನ ನಾಗರಿಕರು ಉಡುಪಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಉಡುಪಿ ಸರ್ವಿಸ್ ಬಸ್ ನಿಲ್ದಾಣ ಪರಿಸರದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಜಮಾಯಿಸಿದ ನೂರಾರು ಮಂದಿ ಪ್ರಮುಖರು ಮೊದಲಿಗೆ ಸಭೆ ನಡೆಸಿದರು. ಸಭೆಯನ್ನುದ್ಧೇಶಿಸಿ ಫಾದರ್ ವಿಲಿಯಂ ಮಾರ್ಟಿಸ್, ವಾಲ್ಟರ್ ಸಿರಿಲ್ ಪಿಂಟೋ ಹಾಗೂ ಡಾ.ಪಿ.ವಿ.ಭಂಡಾರಿ ಮಾತನಾಡಿದರು.

ಬಳಿಕ ಕವಿ ಮುದ್ಧಣ ಮಾರ್ಗ, ಕೋರ್ಟ್ ರಸ್ತೆ, ಹಳೆ ತಾಲೂಕು ಕಚೇರಿ ಬಳಿಯ ಶಾಸಕರ ಕಚೇರಿ ಎದುರುಗಡೆಯಾಗಿ ಅಜ್ಜರಕಾಡಿನಲ್ಲಿರುವ ಹುತಾತ್ಮ ಸೈನಿಕರ ಯುದ್ಧ ಸ್ಮಾರಕದ ಮುಂದೆ ಪ್ರತಿಭಟನಾ ಸಭೆ ನಡೆಸಿದರು.

ಇಲ್ಲಿ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ ಶೇರಿಗಾರ್, ಹಿರಿಯ ನ್ಯಾಯವಾದಿ ಕೆ.ಕೆ.ಭಂಡಾರ್ಕರ್, ಶಾಸಕ ಪ್ರಮೋದ್ ಮಧ್ವರಾಜ್, ನ್ಯಾಯವಾದಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಮತ್ತು ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾದ್ಯಕ್ಷರಾದ ಜನನಿ ದಿವಾಕರ ಶೆಟ್ಟಿ, ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀರಾಮ ದಿವಾಣ, ಎಚ್.ಐ.ವಿ. ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪರ ಹೋರಾಟಗಾರ ಸಂಜೀವ ವಂಡ್ಸೆ ಮೊದಲಾದವರು ನ್ಯಾಯ ಪರವಾಗಿ ಮಾತನಾಡಿದರು.

ಪ್ರತಿಭಟನಾ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಶಾಸಕ ಪ್ರಮೋದ್ ಮಧ್ವರಾಜ್ ಅವರಿಗೆ ಸ್ಥಳದಲ್ಲಿಯೇ ಮನವಿ ನೀಡಲಾಯಿತು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಐವರ ನಿಯೋಗ ಜಿಲ್ಲಾಸ್ಪತ್ರೆಗೆ ತೆರಳಿ, ಜಿಲ್ಲಾಸ್ಪತ್ರೆಯ ಮೂಲಕ ರಾಜ್ಯ ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿ ಎನ್.ಶಿವಶೈಲಂ ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆ ಮನವಿ ಸಲ್ಲಿಸಿದರು. ಚಿತ್ರಗಳು : ಶ್ರೀರಾಮ ದಿವಾಣ.

http://www.udupibits.in news

ಉಡುಪಿ: ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತಿನಿಧಿ ವಿಭಾಗದಲ್ಲಿ ಕಳೆದ 12 ವರ್ಷಗಳಿಮದ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದ ದಕ್ಷ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಜೆ. ಅವರನ್ನು ಅಸಂವಿಧಾನಿಕವಾಗಿ ಅಮಾನತು ಮಾಡಿದ್ದೂ ಅಲ್ಲದೆ, ಅಮಾನತುಗೊಳಿಸಿ ಒಂದು ವರ್ಷ ಕಳೆದರೂ, ಇಲಾಖಾ ತನಿಖೆಯನ್ನೂ ನಡೆಸದೆ, ಅಮಾನತು ಆದೇಶವನ್ನೂ ಹಂತೆಗೆದುಕೊಳ್ಳದೆ, ಜೀವನಾಂಶವನ್ನೂ ಸರಿಯಾಗಿ ನೀಡದೆ ಅವರ ಮಾನವಹಕ್ಕುಗಳನ್ನು ಕಸಿದುಕೋಲ್ಳುತ್ತಿರುವ ರಾಜ್ಯ ಸರಕಾರದ ಕ್ರಮದ ವಿರುದ್ಧ ಅಕ್ಟೋಬರ್ 19ರಂದು ಬೆಳಗ್ಗೆ 11 ಗಂಟೆಗೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಮತ್ತು ಬಳಿಕ ಅಜ್ಜರಕಾಡಿನಲ್ಲಿ ಅನಿರ್ಧಿಷ್ಠಾವಧಿ ಸತ್ಯಾಗ್ರಹ ಶಿಬಿರ ನಡೆಸಲು ಡಾ.ಶರತ್ ಹಿತೈಷಿಗಳ ಸಭೆ ನಿರ್ಧರಿಸಿದೆ.

ಖ್ಯಾತ ಮನೋವೈದ್ಯರಾದ ಡಾ.ಪಿ.ವಿ.ಭಂಡಾರಿಯವರ ನೇತೃತ್ವದಲ್ಲಿ ಅಕ್ಟೋಬರ್ 15ರಂದು ಸಂಜೆ ನಗರದ ಖಾಸಗಿ ಹೋಟೇಲ್ ಸಭಾಂಗಣದಲ್ಲಿ ನಡೆದ ಡಾ.ಭಂಡಾರಿ ಬೆಂಬಲಿಗರ ಮತ್ತು ಡಾ.ಶರತ್ ಕುಮಾರ್ ರಾವ್ ಅಭಿಮಾನಿಗಳ ಸಭೆಯಲ್ಲಿ ಡಾ.ಶರತ್ ಅಮಾನತು ಪ್ರರಕಣದ ಬಗ್ಗೆ ಚರ್ಚಿಸಿ, ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಕೆಲವು ಹತ್ವದ ತೀರ್ಮಾನಗಳನ್ನು
ತೆಗೆದುಕೊಳ್ಳಲಾಯಿತು.

ಆರೋಗ್ಯ ಸಚಿವ ಯು.ಟಿ.ಖಾದರ್ (ಮೊಬೈಲ್ ನಂ. 9448383919) ಹಾಗೂ ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿ ಎನ್. ಶಿವಶೈಲಂ (ಮೊಬೈಲ್ ನಂ. 9448990310) ಅವರಿಗೆ ಡಾ.ಶರತ್ ಪರವಾಗಿ ಎಸ್.ಎಂ.ಎಸ್.ಅಭಿಯಾನ ಪ್ರಾರಂಭಿಸಲು ನಿರ್ಧರಿಸಲಾಯಿತು. ನಗರದ ಸಿಟಿ ಬಸ್ ನಿಲ್ದಾಣದ ಬಳಿಯ ಸದಾನಂದ ಟವರ್ಸ್ ಲ್ಲಿರುವ ಮಾನಸ ಕ್ಲಿನಿಕ್ ನ್ನು ಹೋರಾಟಕ್ಕೆ ಪೂರಕವಾಗಿ ಸಭೆ ಇತ್ಯಾದಿ ನಡೆಸಲು ಹೋರಾಟಗಾರರ ಕಚೇರಿಯನ್ನಾಗಿ ಪರಿವರ್ತಿಸುವುದಾಗಿಯೂ ಡಾ.ಭಂಡಾರಿ ಘೋಷಿಸಿದರು. ಆಸ್ಪತ್ರೆಗಳ ಪ್ರಯೋಗಾಲಯ ಹಗರಣದ ಬಗ್ಗೆ ಹಳ್ಳಿ
ಹಳ್ಳಿಗಳಲ್ಲಿ ಪ್ರಾಜೆಕ್ಟ್ ಹಾಕಿ ಸಾವ್ಝನಿಕರಿಗೆ ಮಾಹಿತಿ ನೀಡುವ ಮೂಲಕ ಜನಜಾಗೃತಿ ರೂಪಿಸಲು ತಾನು ಸಿರ್ದಧನಿರುವುದಾಗಿಯೂ ಡಾ.ಪಿ.ವಿ.ಭಂಡಾರಿ ಪ್ರಕಟಿಸಿದರು.

ಅಕ್ಟೋಬರ್ 11ರಂದು ಬೆಳಗ್ಗೆ 11 ಗಂಟೆಗೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಸೇರಿ, ಇಲ್ಲಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವುದು, ಬಳಿಕ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಅಥವಾ ಅಜ್ಜರಕಾಡು ಗಾಂಧಿ ಪಾರ್ಕ್ ಮುಂಭಾಗದಲ್ಲಿ ಅನಿರ್ಧಿಷ್ಠಾವಧಿ ಸತ್ಯಾಗ್ರಹ ಶಿಬಿರ ನಡೆಸುವುದು. ಈ ಶಿಬಿರದಲ್ಲಿ ಡಾ.ಪಿ.ವಿ.ಭಂಡಾರಿಯವರು ಪ್ರತಿಭಟನಾರ್ಥವಾಗಿ ಉಚಿತವಾಗಿ ಚಿಕಿತ್ಸೆ ಮತ್ತು ಔಷಧಗಳನ್ನು ನೀಡುವ ಮೂಲಕ ಸತ್ಯಾಗ್ರಹ ಕ್ಲಿನಿಕ್ನ್ನೂ ಆರಂಭಸುವುದು ಎಂದು ನಿರ್ಣಯ ತೆಗೆದುಕೊಳ್ಳಲಾಯಿತು.

ಅಮಾನತು ಎಂದರೆ ಶಿಕ್ಷೆಯಲ್ಲ ಎಂದು ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿ ಎನ್.ಶಿವಶೈಲಂ ಹೇಳುತ್ತಾರೆ. ಆದರೆ, ಮಾನ-ಮರ್ಯಾದೆ ಇರುವವರಿಗೆ ಅಮಾನತು ಕೂಡಾ ಶಿಕ್ಷೆಯೇ ಆಗುತ್ತದೆ. ಡಾ.ಶರತ್ ಕುಮಾರ್ ರಾವ್ ವಿರುದ್ಧ ನಡೆಯುತ್ತಿರುವುದು ಸರಕಾರಿ ಪ್ರಾಯೋಜಿತ ಹಿಂಸೆಯಾಗಿದೆ. ತನಗೆ ಯಾರ ಮೇಲೆಯೂ ವಯುಕ್ತಿಕ ಧ್ವೇಷವಿಲ್ಲ. ಆದರೆ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಈ ವ್ಯವಸ್ಥೆಯ ಬಗ್ಗೆ ಸಿಟ್ಟಿದೆ ಎಂದು ಡಾ.ಪಿ.ವಿ.ಭಂಡಾರಿ ಹೇಳಿದರು.

ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಬೇಕು, ಆರೋಗ್ಯ ಸಚಿವರು ಜಿಲ್ಲೆಗೆ ಬಂದಾಗಲೆಲ್ಲ ಮುತ್ತಿಗೆ ಹಾಕಬೇಕು, ಡಾ.ಶರತ್ ಅವರನ್ನು ಬೆಂಬಲಿಸಿ ರಕ್ತದಾನ ಶಿಬಿರ ಹಮ್ಮಬೇಕು, ಆರೋಗ್ಯ ಸಚಿವರಿಗೆ ಪ್ರತಿಯೊಬ್ಬರು ತಮ್ಮ ತಮ್ಮ ದೇಹದಿಂದ ರಕ್ತ ತೆಗೆದು ಬಾಟಲಿಯಲ್ಲಿ ಕಳುಹಿಸಿಕೊಡಬೇಕು, ಡಾ.ಶರತ್ ಅವರ ಅಮಾನತು ನಾಗರಿಕ ಸಮಾಜಕ್ಕೆ ಮಾಡಿದ ಅಪಮಾನ, ಶಾಸಕ ಪ್ರಮೋದ್ ಮಧ್ವರಾ, ಸಚಿವ ವಿನಯ ಕುಮಾರ್ ಸೊರಕೆ ಕಚೇರಿಗಳ ಮುಂದೆ ಬೃಹತ್ ಪ್ರತಿಭಟನೆ ಆಯೋಜಿಸಬೇಕು ಎಂಬಿತ್ಯಾದಿ ಅಭಿಪ್ರಾಯಗಳನ್ನು ಸಭೆಯಲ್ಲಿ ಭಾಗವಹಿಸಿದ ಪ್ರಮುಖರು ಮಂಡಿಸಿದರು.

ಫಾದರ್ ವಿಲಿಯಂ ಮಾರ್ಟಿಸ್, ಕೆ.ಎಂ.ಉಡುಪ, ಮನೋಹರ ಭಂಡಾರ್ಕರ್, ಜಯಕರ ಶೆಟ್ಟಿ ಇಂದ್ರಾಳಿ, ಕಾಪು ಲೀಲಾಧರ ಶೆಟ್ಟಿ, ಭಾಸ್ಕರ ರೈ ಬ್ರಹ್ಮಾವರ, ಸುರೇಂದ್ರ ನಾಯಕ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಜನನಿ ದಿವಾಕರ ಶೆಟ್ಟಿ, ಗೀತಾ ಶೇಟ್, ವಿಶು ಶೆಟ್ಟಿ ಅಂಬಲಪಾಡಿ, ವಾಲ್ಟರ್ ವಿಲಿಯಂ ಪಿಂಟೊ, ಪುರುಷೋತ್ತಮ ಸಾಲಿಯಾನ್, ಟಿ.ಅಂಗಾರ, ರಾಘವೇಂದ್ರ ಪ್ರಭು ಕರ್ವಾಲು, ನಾಗಭೂಷಣ ಶೇಟ್, ಸಂಜೀವ ವಂಡ್ಸೆ ಮೊದಲಾದವರ ಸಹಿತ ಇನ್ನೂರಕ್ಕೂ ಅಧಿಕ ಮಂದಿ ಪೂರ್ವಭಾವೀ ಸಭೆಯಲ್ಲಿ ಪಾಲ್ಗೊಂಡಿದ್ದರು.

http://www.udupibits.in news

ತನಿಖಾ ವರದಿ : ಶ್ರೀರಾಮ ದಿವಾಣ.
ಉಡುಪಿ: ಸರಕಾರ, ಸಾರ್ವಜನಿಕ ಸೇವೆಗೆ ಉಪಯೋಗಿಸಲೆಂದು ಲಯನ್ಸ್ ಕ್ಲಬ್ ಗೆ ಕೊಡುಗೆಯಾಗಿ ನೀಡಿದ ಅಂಬ್ಯುಲೆನ್ಸ್ ನ್ನು ಬಸ್ರೂರು ರಾಜೀವ್ ಶೆಟ್ಟಿ ಎಂಬವರು ತನ್ನ ಸ್ವಂತ ಹೆಸರಿಗೆ ಬದಲಾಯಿಸಿಕೊಂಡು ಸುಧೀರ್ಘ ಎಂಟು ವರ್ಷಗಳ ಕಾಲ ಅಕ್ರಮವಾಗಿ ಮನೆ ಕೆಲಸಕ್ಕೆ ದುರ್ಬಳಕೆ ಮಾಡಿಕೊಂಡು ಅಂತಿಮವಾಗಿ ಗುಜರಿಗೆ ಹಾಕುವ ಪರಿಸ್ಥಿತಿ ತಲುಪಿದಾಗ ಇಂಡಿಯನ್ ರೆಸ್ ಕ್ರಾಸ್ ಸೊಸೈಟಿಗೆ ಹಸ್ತಾಂತರಿಸಿ ಕೈತೊಳೆದುಕೊಳ್ಳುವ ಮೂಲಕ ಹಾಡಹಗಲೇ ಸರಕಾರ, ಲಯನ್ಸ್ ಕ್ಲಬ್ ಮತ್ತು ರೆಡ್ ಕ್ರಾಸ್ ಸೊಸೈಟಿಯನ್ನು ವಂಚಿಸಿದ ಪ್ರಕರಣವೊಂದು ದಾಖಲಾತಿಗಳ ಸಹಿತ ಇದೀಗ ಬಹಿರಂಗಕ್ಕೆ ಬಂದಿದೆ.

ಕಾಗ್ರೆಸ್ ಪಕ್ಷದ ನಾಯಕರಾದ ಆಸ್ಕರ್ ಫೆರ್ನಾಂಡಿಸ್ ಅವರು, ತಮ್ಮ ರಾಜ್ಯ ಸಭಾ ಸದಸ್ಯತ್ವದ ಪ್ರದೇಶಾಭಿವೃದ್ಧಿ ನಿಧಿಯಿಂದ 2000-2001ನೇ ಸಾಲಿನಲ್ಲಿ ಉಡುಪಿ ಲಯನ್ಸ್ ಕ್ಲಬ್ ಗೆಂದು ಅಂಬ್ಯುಲೆನ್ಸ್ ಒಂದನ್ನು ಕೊಡುಗೆಯಾಗಿ ನೀಡುತ್ತಾರೆ. 25.08.2000 ರಲ್ಲಿ ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷರ ಹೆಸರಿನಲ್ಲಿ ಇದು ನೋಂದಣಿಯಾಗುತ್ತದೆ.

ಮೊದಲ ಮೂರು ವರ್ಷಗಳ ಕಾಲ ಈ ಅಂಬ್ಯುಲೆನ್ಸ್ ಸದುದ್ಧೇಶಕ್ಕೆ ಬಳಕೆಯಾಗಿದೆಯೋ, ದುರ್ಬಳಕೆಯಾಗಿದೆಯೋ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ. ಆದರೆ, ಬಳಿಕದ ಸುಧೀರ್ಘ ಎಂಟು ವರ್ಷಗಳ ಕಾಲ ಈ ಸರಕಾರಿ ಅಂಬ್ಯುಲೆನ್ಸ್ ಕೆಲಸ ಮಾಡಿದ್ದು, ಬಸ್ರೂರು ರಾಜೀವ್ ಶೆಟ್ಟಿಯವರ ಸ್ವಂತದ ಸ್ವಾರ್ಥ ಉದ್ಧೇಶಗಳಿಗಾಗಿ ಮಾತ್ರ ಎಂಬುದು ಯಾವ ಅನುಮಾನಕ್ಕೂ ಎಡೆಯಿಲ್ಲದಂತೆ ಸ್ಪಷ್ಟವಾಗುತ್ತದೆ.

ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷರ ಹೆಸರಿನಲ್ಲಿದ್ದ ಸರಕಾರಿ ಅಂಬ್ಯುಲೆನ್ಸ್ ನ್ನು, 2003ರ ಫೆಬ್ರವರಿ 9ರಂದು ಬಸ್ರೂರು ರಾಜೀವ್ ಶೆಟ್ಟಿ ತನ್ನ ಹೆಸರಿಗೆ
ಮಾಡಿಸಿಕೊಳ್ಳುತ್ತಾರೆ. ‘ಮಿಸ್ಟರ್ ಎಂ.ಜೆ.ಎಫ್. ಲಯನ್, ಬಸ್ರೂರು ರಾಜೀವ್ ಶೆಟ್ಟಿ, ಸನ್ ಆಫ್ ಶಿವರಾಮ ಶೆಟ್ಟಿ, 11-2-70 ಇ, ಪದ್ಮಜ, ಉಡುಪಿ’ ಎಂಬ ಹೆಸರಿಗೆ
ಅಂಬ್ಯುಲೆನ್ಸ್ ವರ್ಗಾವಣೆಯಾಗುತ್ತದೆ. ಆಶ್ಚರ್ಯವೆಂದರೆ, ಈ ವಿಳಾಸ ಬಸ್ರೂರು ರಾಜೀವ್ ಶೆಟ್ಟಿಯವರ ಮನೆಯ ವಿಳಾಸವಾಗಿರುವುದು.

ಆಸ್ಕರ್ ಫೆರ್ನಾಂಡಿಸ್ ಅವರು ಸರಕಾರದಿಂದ ಲಭ್ಯವಾಗುವ ಪ್ರದೇಶಾಭಿವೃದ್ಧಿ ನಿಧಿಯಿಂದ ಸಾರ್ವಜನಿಕರ ಉಪಯೋಗಕ್ಕೆಂದು 2000 ರಲ್ಲಿ ಲಯನ್ಸ್ ಕ್ಲಬ್ ಗೆ ಕೊಡಮಾಡಿದ ನೀಡಿದ ಅಂಬ್ಯುಲೆನ್ಸ್, 2003ರಿಂದ 2011ರ ವರೆಗೆ, ಎಂಟು ವರ್ಷಗಳ ಕಾಲ ಉಡುಪಿ ಮತ್ತು ಕುಂದಾಪುರ ತಾಲೂಕಿನಾದ್ಯಂತ ಅಕ್ರಮವಾಗಿ ಬಳಕೆಯಾಗಿದೆ. ತೋಟಕ್ಕೆ ಗೊಬ್ಬರ ಹಾಕುವುದರ ಸಹಿತ ವಿವಿಧ ರೀತಿಯ ಖಾಸಗಿ ಕೆಲಸಗಳಿಗೆ ನಿರಂತರವಾಗಿ ದುರ್ಬಳಕೆಯಾದ ಕಾರಣ, ಅಂಬ್ಯುಲೆನ್ಸ್ ಗುಜರಿಗೆ ಹಾಕುವ ಹಂತ ತಲುಪಿದೆ.

ಅಂತಿಮ ಹಂತದಲ್ಲಿ ಬಸ್ರೂರು ರಾಜೀವ್ ಶೆಟ್ಟಿಯವರ ತಲೆಗೆ ಹೊಳೆದ ಮಹಾನ್ ಐಡಿಯಾವೇ, ಅಂಬ್ಯುಲೆನ್ಸ್ ನ್ನು ಗುಜರಿಗೆ ಹಾಕುವ ಬದಲು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಉಡುಪಿ ಜಿಲ್ಲಾ ಶಾಖೆಗೆ ಹಸ್ತಾಂತರಿಸಿ ಬಿಡುವುದು ! 2011ರ ಮಾರ್ಚ್ 9ರಂದು ಅಂಬ್ಯುಲೆನ್ಸ್ ಬಸ್ರೂರು ರಾಜೀವ್ ಶೆಟ್ಟಿ ಹೆಸರಿನಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಉಡುಪಿ ಜಿಲ್ಲಾ ಶಾಕೆಯ ಕಾರ್ಯದರ್ಶಿ ಹೆಸರಿಗೆ ಬದಲಾಗಿ ಬಿಡುತ್ತದೆ.

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಹೆಸರಿಗೆ ಅಂಬ್ಯುಲೆನ್ಸ್ ನೋಂದಣಿಯಾದ ನಂತರ, ರೆಡ್ ಕ್ರಾಸ್ ಮೂಲಕ, ರೆಡ್ ಕ್ರಾಸ್ ಖಜಾನೆಯಿಂದ ಅಂಬ್ಯುಲೆನ್ಸ್ ದುರಸ್ತಿಗೆ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಇದಕ್ಕಾಗಿ ಬರೋಬ್ಬರಿ ಒಂದು ಲಕ್ಷ ರು.ಗಳಿಗೂ ಅಧಿಕ ಹಣವನ್ನು ರೆಡ್ ಕ್ರಾಸ್ ಸೊಸೈಟಿ ಕರ್ಚು ಮಾಡುತ್ತದೆ.

ಅಕ್ರಮ ಅನುಮೋದಿಸದ ಡಾ.ಶರತ್..

2011ರಲ್ಲಿ ಬಸ್ರೂರು ರಾಜೀವ್ ಶೆಟ್ಟಿ ಉಡುಪಿ ರೆಡ್ ಕ್ರಾಸ್ ಸೊಸೈಟಿಯ ಸಭಾಪತಿಯಾಗಿದ್ದರೆ, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿಯಾದ ಡಾ.ಶರತ್ ಕುಮಾರ್ ರಾವ್ ಅವರು ಉಪ ಸಭಾಪತಿಯಾಗಿದ್ದರು. ಪ್ರಾಮಾಣಿಕರೂ, ದಕ್ಷರು ಆದ ಉಪ ಸಭಾಪತಿ ಡಾ.ಶರತ್ ಕುಮಾರ್ ರಾವ್ ಅವರು, ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿಯವರ ಅಂಬ್ಯುಲೆನ್ಸ್ ಅಕ್ರಮಕ್ಕೆ ಸಹಮತ ವ್ಯಕ್ತಪಡಿಸಿದೆ, ಇರ್ಣವನ್ನು ಅನುಮೋದಿಸದೆ, ವಿರೋಧ ವ್ಯಕ್ತಪಡಿಸುತ್ತಾರೆ. ಈ ಬಗ್ಗೆ ರೆಡ್ ಕ್ರಾಸ್ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಹಾಗೂ ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ಅವರಿಗೆ ಲಿಖಿತವಾಗಿ ಆಕ್ಷೇಪ ದಾಖಲಿಸಿ, ಸೂಕ್ತ ಕ್ರಮಕ್ಕೆ ಮನವಿ ಮಾಡುತ್ತಾರೆ ಡಾ.ಶರತ್.

ಪರಿಣಾಮ ಮಾತ್ರ ಶೂನ್ಯ, ಧ್ವೇಷ ಸಾಧನೆ !

2011ರ ಮೇ 12ರಂದು ಡಾ.ಶರತ್ ಅವರು ನೀಡಿದ ದೂರಿನ ಮೇಲೆ ಈವರೆಗೂ ಜಿಲ್ಲಾಧಿಕಾರಿಗಳೂ, ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾಧ್ಯಕ್ಷರೂ ಆದ ಜಿಲ್ಲಾಧಿಕಾರಿಗಳು ತನಿಖೆ ನಡೆಸಿಲ್ಲ. ಆದರೆ..

ಅಂಬ್ಯುಲೆನ್ಸ್ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ, ಡಾ.ಶರತ್ ಕುಮಾರ್ ರಾವ್ ಅವರು ಅನುಮೋದನೆ ನೀಡದೆ ಲಿಖಿತವಾಗಿಯೇ ಆಕ್ಷೇಪ ದಾಖಲಿಸಿದ ಪರಿಣಾಮವಾಗಿ ಬಸ್ರೂರು ರಾಜೀವ್ ಶೆಟ್ಟಿಯವರು ತೀವ್ರ ಮುಜುಗರ ಅನುಭವಿಸಿದರು. ಡಾ.ಶರತ್ ವಿರುದ್ಧ ಭಾರೀ ಆಕ್ರೋಶ, ಸಿಟ್ಟು, ಧ್ವೇಷ ಪ್ರದರ್ಶಿಸತೊಡಗಿದರು.

ಈ ಧ್ವೇಷ ಸಾಧನೆಯ ಮುಂದುವರಿದ ಭಾಗವಾಗಿಯೇ, ಬಳಿಕ ಡಾ.ಶರತ್ ಕುಮಾರ್ ರಾವ್ ವಿರುದ್ಧ ರೆಡ್ ಕ್ರಾಸ್ ಸೊಸೈಟಿ, ಪೊಲೀಸ್ ಠಾಣೆ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಹಾಗೂ ಆರೋಗ್ಯ ಇಲಾಖೆಯ ಜಾಗೃತಕೋಶದಲ್ಲಿ ಮಹಿಳೆಯೊಬ್ಬರ ಮೂಲಕ ಸುಳ್ಳು ದೂರು ಸಲ್ಲಿಕೆಯ ಪ್ರಹಸನ ಆರಂಭವಾಯಿತು.

ಡಾ.ಶರತ್ ಕುಮಾರ್ ರಾವ್ ವಿರುದ್ಧ, ಮಹಿಳೆಯೊಬ್ಬಾಕೆ ಎಲ್ಲೆಲ್ಲಾ ದೂರು ನೀಡಿದ್ದಾರೋ, ಅಲ್ಲೆಲ್ಲಾ ದೂರು ಕೊಟ್ಟ ಕೆಲವೇ ದಿನಗಳ ಅಂತರದಲ್ಲಿ ದೂರಿನ ಬಗ್ಗೆ ತನಿಖೆಯಾಗುತ್ತದೆ. ಇಂತಹ ತನಿಖೆಗಳೆಲ್ಲವೂ ಪೂರ್ವಾಗ್ರಹದಿಂದಲೂ, ಪಕ್ಷಪಾತದಿಂದಲೂ, ಏಕಪಕ್ಷೀಯವಾಗಿಯೂ ನಡೆಯುತ್ತಿದ್ದವು. ಪರಿಣಾಮವಾಗಿ, ತನಿಖಾ ವರದಿಗಳೆಲ್ಲವೂ ಡಾ.ಶರತ್ ವಿರುದ್ಧವೇ ಸೃಷ್ಟಿಯಾಗುತ್ತಿದ್ದವು. ರೆಡ್ ಕ್ರಾಸ್ ಸೊಸೈಟಿಯಲ್ಲಿ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿಯವರು ತನಿಖೆಯನ್ನೇ ನಡೆಸದೆ ಡಾ.ಶರತ್ ಕುಮಾರ್ ರಾವ್ ಅವರನ್ನು ಏಕಪಕ್ಷೀಯವಾಗಿ ಉಪ ಸಭಾಪತಿ ಸ್ಥಾನದಿಂದ ಮತ್ತು ಆಡಳಿತ ಮಂಡಳಿ ಸದಸ್ಯತ್ವದಿಂದ ಉಚ್ಛಾಟಿಸುತ್ತಾರೆ.

ಡಾ.ಶರತ್ ಕುಮಾರ್ ಅವರನ್ನು ರೆಡ್ ಕ್ರಾಸ್ ಸೊಸೈಟಿಯಿಂದ ಉಚ್ಛಾಟಿಸುವ ಬಸ್ರೂರು ರಾಜೀವ್ ಶೆಟ್ಟಿ, ಡಾ.ಶರತ್ ಉಚ್ಛಾಟನೆಯಿಂದ ಕಾಲಿ ಬೀಳುವ ಸ್ಥಾನಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ರಾಮಚಂದ್ರ ಬಾಯಿರಿ ಅವರನ್ನು ನೇಮಕ ಮಾಡುತ್ತಾರೆ.

ಬಸ್ರೂರು ರಾಜೀವ್ ಶೆಟ್ಟಿಯವರು ರೆಡ್ ಕ್ರಾಸ್ ಸೊಸೈಟಿಯಲ್ಲಿ ತನಗೊಂದು ಸ್ಥಾನ ಕಲ್ಪಿಸಿಕೊಟ್ಟದ್ದಕ್ಕೆ ಪ್ರತಿಯಾಗಿ ಕೃತಜ್ಞತೆ ಸಲ್ಲಿಸುವ ಪ್ರಕ್ರಿಯೆಯ ಭಾಗವಾಗಿ, ಶ್ರೀಮತಿ ವೀಣಾ ಶೆಟ್ಟಿ ಡಾ.ಶರತ್ ವಿರುದ್ಧ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅವರಿಗೆ ನೀಡಿದ ದೂರಿಗೆ ಸಂಬಂಧಿಸಿದಂತೆ ಪ್ರಧಾನ ಕಾರ್ಯದರ್ಶಿಯವರಿಂದ ಪೂರ್ವ ನಿರ್ಧರಿತ ಸಂಚಿನ ಭಾಗವಾಗಿ ತನಿಖಾಧಿಕಾರಿಯಾಗಿ ನಿಯುಕ್ತಗೊಳ್ಳುವ ಡಿಎಚ್ಓ ಡಾ.ರಾಮಚಂದ್ರ ಬಾಯಿರಿಯವರು ಡಾ.ಶರತ್ ಕುಮಾರ್ ವಿರುದ್ಧ ಪ್ರಧಾನ ಕಾರ್ಯದರ್ಶಿಯವರಿಗೆ ವರದಿ ಸಲ್ಲಿಸುತ್ತಾರೆ.

ಆರೋಗ್ಯ ಇಲಾಖೆಯ ಭ್ರಷ್ಟರಿಗೂ, ಬಸ್ರೂರು ರಾಜೀವ್ ಶೆಟ್ಟಿಯವರಿಗೂ ಅದೆಂಥದ್ದೋ ಸಂಬಂಧ ? ಪ್ರಧಾನ ಕಾರ್ಯದರ್ಶಿಯಾಗಿದ್ದ ಮದನ್ ಗೋಪಾಲ್, ನಿರ್ದೇಶಕರಾದ ಡಾ.ಧನ್ಯ ಕುಮಾರ್, ಉಪ ನಿರ್ದೇಶಕರಾದ ಡಾ.ಕೆ.ಬಿ.ಈಸ್ವರಪ್ಪ, ಡಿಎಚ್ಓ ಡಾ.ರಾಮಚಂದ್ರ ಬಾಯಿರಿ, ಜಿಲ್ಲಾ ಸರ್ಜನ್ ಡಾ.ಆನಂದ ನಾಯ್ಕ್, ಬಸ್ರೂರು ರಾಜೀವ್ ಶೆಟ್ಟಿ ಸಹಿತ ಇನ್ನೂ ಕೆಲವರು ಷಡ್ಯಂತ್ರದಲ್ಲಿ ಒಂದಾಗುತ್ತಾರೆ. ತೆರೆಮರೆಯಲ್ಲಿ ಭಾಗಿಯಾಗುತ್ತಾರೆ. ದಕ್ಷರೂ, ಪ್ರಾಮಾಣಿಕರೂ ಆದ ಡಾ.ಶರತ್ ಕುಮಾರ್ ರಾವ್ ಅವರನ್ನು ಜೀವಂತವಾಗಿ ಮುಗಿಸುವ ಕೆಲಸ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತದೆ. ಈ ಪ್ರಕ್ರಿಯೆ ಈಗಲೂ ಮುಂದುವರಿದಿದೆ.

ಮದನ್ ಗೋಪಾಲ್ ಆರೋಗ್ಯ ಇಲಾಖೆಯಿಂದ ವರ್ಗಾವಣೆಗೊಂಡು ಸರಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾದ ಬಳಿಕ, ಮದನ್ ಗೋಪಾಲ್ ಅವರಿಂದ ತೆರವಾದ ಪ್ರಧಾನ ಕಾರ್ಯದಶರ್ಿ ಸ್ಥಾನ ವಹಿಸಿಕೊಂಡ ಶಿವಶೈಲಂ ಎಂಬವರು ಸಹ ಇತ್ತೀಚೆಗೆ ಉಡುಪಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದವರು, ಬಸ್ರೂರು ಜೊತೆಗೆ ರೆಡ್ ಕ್ರಾಸ್ ಸೊಸೈಟಿಗೆ ಭೇಟಿ ನೀಡಿ ಗುಂಪು ಫೋಟೋಗಡೆ ಫೋಸ್ ಕೊಡುತ್ತಾರೆ. ಜೊತೆಯಾಗಿ ಉಪಹಾರ ಸೇವಿಸಿ ಧನ್ಯತೆ ಅನುಭವಿಸುತ್ತಾರೆ !

http://www.udupibits.in news

ಬೆಂಗಳೂರು : ಕರ್ನಾಟಕ ರಾಜ್ಯದ 19 ಜಿಲ್ಲೆಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ನಡೆದ ಬಹುಕೋಟಿ ಭ್ರಷ್ಟಾಚಾರ ಹಗರಣವಾದ, ‘ರಾಸಾಯನಿಕ ಮತ್ತು ರಕ್ತ ಶೇಖರಣಾ ಟ್ಯೂಬ್ ಗಳ ಖರೀದಿ 2012-13’ ಬಗ್ಗೆ ಆರೋಗ್ಯ ಇಲಾಖೆಯ ಜಾಗೃತಕೋಶದ ಮುಖ್ಯ ಜಾಗೃತಾಧಿಕಾರಿಯಾಗಿದ್ದ ಡಾ.ಕೆ.ಎಚ್.ನರಸಿಂಹಮೂರ್ತಿ ಅವರು ದಿನಾಂಕ 25.03.2013ರಂದು ತನಿಖೆ ಆರಂಭಿಸಿ, 17.05.2013ರಂದು ಸರಕಾರಕ್ಕೆ ತನಿಖಾ ವರದಿಯನ್ನು ಸಲ್ಲಿಸಿದ್ದಾರೆ. ಹಗರಣದ ಆರೋಪಿಗಳನ್ನು ರಕ್ಷಿಸುವ ಸಲುವಾಗಿ ಸರಕಾರ ಈ ತನಿಖಾ ವರದಿಯನ್ನು ಬಹಿರಂಗಪಡಿಸದೆ ಮತ್ತು ಪಾಲನೆ ಮಾಡದೆ ಮುಚ್ಚಿಟ್ಟಿದೆ. ಆದುದರಿಂದ, ಇನ್ನಾದರೂ ಈ ತನಿಖಾ ವರದಿಯ ಆಧಾರದಲ್ಲಿ ಸರಕಾರ ಹಗರಣದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು 2009ರಿಂದಲೇ ನಡೆದುಕೊಂಡು ಬಂದಿರುವ ಈ ಬಹುಕೋಟಿ ಹಗರಣದಲ್ಲಿ ಸರಕಾರದ ಉನ್ನತ ಅಧಿಕಾರಿಗಳು ಹಾಗೂ ಹಾಲಿ ಮತ್ತು ಮಾಜಿ ಸಚಿವರುಗಳು, ಜನಪ್ರತಿನಿಧಿಗಳು ಶಾಮೀಲಾಗಿರುವ ಹಿನ್ನೆಲೆಯಲ್ಲಿ, ಈ ಬಹುಕೋಟಿ ಭ್ರಷ್ಟಾಚಾರ ಹಗರಣವನ್ನು ಸಿಬಿಐ ತನಿಖೆ ಒಪ್ಪಿಸಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀರಾಮ ದಿವಾಣ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ಮಧ್ಯಾಹ್ನ ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಹಗರಣದ ಸತ್ಯಾಸತ್ಯತೆಯನ್ನು ಸ್ಪಷ್ಟವಾಗಿ ಬಹಿರಂಗಪಡಿಸುವ ಅನೇಕ ಅಮೂಲ್ಯ ದಾಖಲಾಇಗಳನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಶ್ರೀರಾಮ ದಿವಾಣ ಅವರು ಪತ್ರಿಕಾಗೋಷ್ಟಿಯಲ್ಲಿ ಬಿಡುಗಡೆಗೊಳಿಸಿದ ಹೇಳಿಕೆಯ ಪೂರ್ಣಪಾಠ ಹೀಗಿದೆ :

ಈ ಬಹುಕೋಟಿ ಭ್ರಷ್ಟಾಚಾರ ಪ್ರಕರಣದ ಬಗ್ಗೆ ದಿನಾಂಕ 23.03.2013ರಂದು ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿಯವರಿಗೆ ಮೊತ್ತ ಮೊದಲು ಪತ್ರ ಬರೆದು ಗಮನ ಸೆಳೆದ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ಪ್ರಾಮಾಣಿಕ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಜೆ. ಅವರ ವಿರುದ್ಧ, ನಕಲಿ ದಾಖಲೆಯೊಂದನ್ನು ಮುಂದಿರಿಸಿಕೊಂಡು ಮಹಿಳೆಯೊಬ್ಬರಿಂದ ಸುಳ್ಳು ದೂರು ಕೊಡಿಸಿದ್ದಾರೆ. ಬಳಿಕ ಹಗರಣದ ಆರೋಪಿಗಳೇ ಸೇರಿಕೊಂಡು ಅಸಮರ್ಪಕ, ಪಕ್ಷಪಾತದಿಂದ ಕೂಡಿದ ತನಿಖೆ ಎಂಬ ನಾಟಕ ನಡೆಸಿ, ಅನ್ಯಾಯವಾಗಿ ಡಾ.ಶರತ್ ಕುಮಾರ್ ರಾವ್ ಅವರನ್ನು ಅಮಾನತಿಗೆ ಒಳಪಡಿಸಿದ್ದಾರೆ.

ಮಾತ್ರವಲ್ಲ, ಅಮಾನತು ಆಗಿ ಒಂದು ವರ್ಷ ಕಳೆದರೂ, ಡಾ.ಶರತ್ ಕುಮಾರ್ ರಾವ್ ಅವರ ಅಮಾನತನ್ನು ಹಿಂತೆಗೆದುಕೊಳ್ಳದೆ, ಇಲಾಖಾ ವಿಚಾರಣೆಯನ್ನೂ ಆರಂಭಿಸದೆ, ಕರ್ನಾಟಕ ನಾಗರಿಕ ಸೇವಾ ಅಧಿನಿಯಮದ ನಿಯಮ 98ರಂತೆ ಜೀವನಾಂಶವನ್ನೂ ಸರಿಯಾಗಿ ನೀಡದೆ, ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಆದುದರಿಂದ, ಇನ್ನಾದರೂ ಡಾ.ಶರತ್ ಕುಮಾರ್ ರಾವ್ ಅವರ ಅಮಾನತನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು. ಅವರಿಗಾದ ಮತ್ತು ಆಗುತ್ತಿರುವ ನಿರಂತರ ಅನ್ಯಾಯದ ಬಗ್ಗೆ ಹಾಗೂ ಅವರಿಗೆ ಸಹಜವಾದ ನ್ಯಾಯವನ್ನು ನಿರಾಕರಿಸುತ್ತಿರುವ ಬಗ್ಗೆ ಪ್ರತ್ಯೇಕವಾಗಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.

ಕರ್ನಾಟಕ ರಾಜ್ಯದ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಶರತ್ ಕುಮಾರ್ ರಾವ್ ಜೆ. ಇವರು ಒಬ್ಬ ದಕ್ಷ ಮತ್ತು ಪ್ರಾಮಾಣಿಕ ವೈದ್ಯಾಧಿಕಾರಿಯಾಗಿರುತ್ತಾರೆ. ಸರಕಾರಿ ಆಸ್ಪತ್ರೆ ಮತ್ತು ಬಡವರ ಮೇಲೆ ಇವರಿಗಿರುವ ಅಪಾರವಾದ ಕಳಕಳಿ ಮತ್ತು ಕಾಳಜಿಯ ಪರಿಣಾಮವಾಗಿ, ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗಕ್ಕೆ ರಾಜ್ಯದಲ್ಲಿಯೇ ವಿಶೇಷವಾದ ಸ್ಥಾನ ಲಭಿಸಿದೆ. ದಿನಾಂಕ 07.09.2013ರಿಂದ ಇಂದಿನವರೆಗೂ ಇವರು ಅನ್ಯಾಯವಾಗಿ ಅಮಾನತಿನಲ್ಲಿದ್ದಾರೆ.

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯದಲ್ಲಿದ್ದ ಡಾ.ಶರತ್ ಕುಮಾರ್ ರಾವ್ ಅವರು, ದಿನಾಂಕ 05.03.2013ರಂದು ಅಂದಿನ ಉಡುಪಿ ಜಿಲ್ಲಾಧಿಕಾರಿಗಳಾಗಿದ್ದ ಡಾ.ಎಂ.ಟಿ.ರೇಜು ಐಎಎಸ್ ಅವರನ್ನು ಖುದ್ದಾಗಿ ಭೇಟಿ ಮಾಡಿ, ರಾಜ್ಯದ 19 ಜಿಲ್ಲೆಗಳಲ್ಲಿನ ಸರಕಾರಿ ಆಸ್ಪತ್ರೆಗಳಲ್ಲಿ ರಾಸಾಯನಿಕ ಮತ್ತು ರಕ್ತ ಶೇಖರಣಾ ಟ್ಯೂಬ್ಗಳ ಖರೀದಿ ಪ್ರಕ್ರಿಯೆಯಲ್ಲಿ 2012-13ರಲ್ಲಿ ನಡೆದ ಭಾರೀ ಅವ್ಯವಹಾರದ ಬಗ್ಗೆ ಮೌಖಿಕವಾಗಿ ಮತ್ತು ಈ ಮೇಲ್ ಮೂಲಕ ವಿವರವಾದ ಮಾಹಿತಿ ನೀಡಿದ್ದಾರೆ.

ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ಅವರು ಈ ಬೃಹತ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕನಿಷ್ಟ ಸ್ಪಂದನೆಯನ್ನೂ ನೀಡದ ಕಾರಣ, ಡಾ.ಶರತ್ ಕುಮಾರ್ ರಾವ್ ಅವರು ಅನಿವಾರ್ಯವಾಗಿ ದಿನಾಂಕ 23.03.2013ರಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಐಎಎಸ್ ಅವರಿಗೆ (ಇವರು ಪ್ರಸ್ತುತ ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುತ್ತಾರೆ), ಅವರ ಈ ಮೇಲ್ ಐಡಿ madan17@gmail.com ಈ ಮೇಲ್ ಮೂಲಕ ನಾಲ್ಕು ಪುಟಗಳಲ್ಲಿ

ವಿಷಯವನ್ನು ತಿಳಿಸುವ ಮೂಲಕ ಹಗರಣದ ಬಗ್ಗೆ ಗಮನ ಸೆಳೆದಿದ್ದರು. ಮದನ್ ಗೋಪಾಲ್ ಐಎಎಸ್ ಅವರು ಈ ವಿಷಯವನ್ನು ಇಲಾಖಾ ಆಯುಕ್ತ ವಿ.ಬಿ.ಪಾಟೀಲ್ (ಇವರು ಇದೀಗ ವರ್ಗಾವಣೆ ಆಗಿರುತ್ತಾರೆ) ಅವರಿಗೆ ತಿಳಿಸಿದ್ದಾರೆ. ಆಯುಕ್ತರು ದಿನಾಂಕ 25.03.2013 ರಂದು ರಾಸಾಯನಿಕ ಖರೀದಿಯಲ್ಲಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಜಾಗೃತಕೋಶದ ಮುಖ್ಯ ಜಾಗೃತಾಧಿಕಾರಿ ಡಾ.ಕೆ.ಎಚ್.ನರಸಿಂಹಮೂರ್ತಿ ಅವರಿಗೆ ಆದೇಶಿಸಿದ್ದಾರೆ. ಡಾ.ನರಸಿಂಹ ಮೂರ್ತಿ ಅವರು ದಿನಾಂಕ 29.03.2013ರಂದು ಡಾ.ಶರತ್ ಕುಮಾರ್ ರಾವ್ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು, ರಾಸಾಯನಿಕ ಖರೀದಿಯಲ್ಲಿನ ಅವ್ಯವಹಾರದ ಬಗ್ಗೆ ಖುದ್ದಾಗಿ ಮಾಹಿತಿ ಪಡೆದುಕೊಳ್ಳುವ ಮೂಲಕ ತನಿಖೆ ಆರಂಭಿಸಿದ್ದಾರೆ. ದಿನಾಂಕ 05.04.2013ರಿಂದ ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡತೊಡಗಿದ್ದಾರೆ. ‘ರಾಸಾಯನಿಕ ಮತ್ತು ರಕ್ತ ಶೇಖರಣಾ ಟ್ಯೂಬ್ ಗಳ ಖರೀದಿ 2012-13’ರ ಬಗೆಗಿನ ತನಿಖಾ ವರದಿಯನ್ನು ದಿನಾಂಕ 17.05.2013ರಂದು ತಮ್ಮ ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.

ಜಾಗೃತಕೋಶದ ಮುಖ್ಯ ಜಾಗೃತಾಧಿಕಾರಿ ಡಾ.ಕೆ.ಎಚ್.ನರಸಿಂಹಮೂರ್ತಿ ಅವರು ಸರಕಾರಕ್ಕೆ ಸಲ್ಲಿಸಿದ ತನಿಖಾ ವರದಿಯ ಪ್ರತಿಯನ್ನು ಮಾಹಿತಿ ಹಕ್ಕು ಕಾಯ್ದೆ 2005ರಂತೆ ಕೋರಿದಾಗ, ಅದನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಯವರು, ಅರ್ಜಿದಾರರಿಗೆ ಕೊಡಲು ನಿರಾಕರಿಸಿದ್ದಾರೆ. ನಿರಾಕರಣೆಗೆ ನೀಡಿದ ಕಾರಣ : `ತನಿಖಾ ಕ್ರಮಕ್ಕೆ ಅಥವಾ ಅಪರಾಧಿಗಳ ದಸ್ಥಗಿರಿಗೆ ಅಥವಾ ಪ್ರಾಸಿಕ್ಯೂಷನ್ ಕಾರ್ಯಕ್ಕೆ ಅಡಚಣೆಯನ್ನುಂಟು ಮಾಡುವಂಥ ಮಾಹಿತಿ’.

ರಾಸಾಯನಿಕ ಮತ್ತು ರಕ್ತ ಶೇಖರಣಾ ಟ್ಯೂಬ್ ಗಳ ಖರೀದಿಯಲ್ಲಿನ ಅವ್ಯವಹಾರದ ಬಗ್ಗೆ, ಉಡುಪಿ ಜಿಲ್ಲಾಧಿಕಾರಿಗಳಾದ ಡಾ.ಎಂ.ಟಿ.ರೇಜು ಐಎಎಸ್ ಹಾಗೂ ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮದನ್ ಗೋಪಾಲ್ ಐಎಎಸ್ ಇವರುಗಳಿಗೆ, ಡಾ.ಶರತ್ ಕುಮಾರ್ ರಾವ್ ಅವರು ದೂರು ನೀಡಿದ ಬಳಿಕ, ಆಯುಕ್ತರಾದ ಶ್ರೀ ವಿ.ಬಿ.ಪಾಟೀಲ್ ಅವರು ಜಾಗೃತಾಧಿಕಾರಿ ಡಾ.ಕೆ.ಎಚ್.ನರಸಿಂಹಮೂರ್ತಿ ಅವರಿಗೆ ತನಿಖೆಗೆ ಆದೇಶಿಸಿ, ಅವರು ತನಿಖೆ ಆರಂಭಿಸಿದ ನಂತರ, ಅಂದರೆ ದಿನಾಂಕ 12.04.2013ರಂದು ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ಜಾಗೃತಾಧಿಕಾರಿಯವರಿಗೆ ಡಾ.ಶರತ್ ಕುಮಾರ್ ರಾವ್ ಅವರ ವಿರುದ್ಧ ಉಡುಪಿಯ ಶ್ರೀಮತಿ ವೀಣಾ ಶೆಟ್ಟಿ ಎಂಬವರು ಸುಳ್ಳು ದೂರು ನೀಡುತ್ತಾರೆ.

ಇದೇ, ಉಡುಪಿಯ ಶ್ರೀಮತಿ ವೀಣಾ ಶೆಟ್ಟಿಯವರು, ದಿನಾಂಕ 05.04.2013ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಶಾಖೆಯ ಸಭಾಪತಿಯವರಾದ ಬಸ್ರೂರು ರಾಜೀವ್ ಶೆಟ್ಟಿ ಅವರಿಗೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪ ಸಭಾಪತಿಯಾಗಿದ್ದ ಡಾ.ಶರತ್ ಕುಮಾರ್ ರಾವ್ ಇವರ ವಿರುದ್ಧ ಅದೇ ಸುಳ್ಳು ದೂರನ್ನು ಸಲ್ಲಿಸುತ್ತಾರೆ. ಈ ಸುಳ್ಳು ದೂರಿನ ಮೇಲೆ ಕನಿಷ್ಟ ತನಿಖೆಯನ್ನೂ ನಡೆಸದೆ, ಚುನಾವಣಾ ನೀತಿ ಸಂಹಿತೆ ಜ್ಯಾರಿಯಲ್ಲಿದ್ದ ಸಮಯದಲ್ಲಿ, ಅಂದರೆ ದಿನಾಂಕ 22.04.2013ರಂದು, ತುತರ್ಾಗಿ ಸಂಸ್ಥೆಯ ವಾರ್ಷಿಕ ಮಹಾಸಭೆಯನ್ನು ಕರೆದು, ಸಭೆಯಲ್ಲಿ ಏಕಪಕ್ಷೀಯವಾಗಿ ಸಂಸ್ಥೆಯ ಉಪ ಸಭಾಪತಿ ಸ್ಥಾನದಿಂದ ಮತ್ತು ಆಡಳಿತ ಮಂಡಳಿ ಸದಸ್ಯ ಸ್ಥಾನದಿಂದ ಡಾ.ಶರತ್ ಕುಮಾರ್ ರಾವ್ ಅವರನ್ನು ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಅವರು ಉಚ್ಛಾಟಿಸುತ್ತಾರೆ. ಮಾತ್ರವಲ್ಲ, ಡಾ.ಶರತ್ ಕುಮಾರ್ ರಾವ್ ಅವರ ಬದಲಿಗೆ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿರುವ ಡಾ.ರಾಮಚಂದ್ರ ಬಾಯರಿ ಅವರನ್ನು ಆಡಳಿತ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತದೆ. ಜಿಲ್ಲಾಧಿಕಾರಿಗಳು ಈ ಸಂಸ್ಥೆಯ ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ತನಗೆ ನೈಸರ್ಗಿಕ ನ್ಯಾಯವನ್ನು ನಿರಾಕರಿಸಲಾದ ಬಗ್ಗೆ ಡಾ.ಶರತ್ ಕುಮಾರ್ ರಾವ್ ಅವರು ಜಿಲ್ಲಾಧಿಕಾರಿಗಳಿಗೆ ತಿಳಿಸುತ್ತಾರೆಯಾದರೂ, ಯಾವುದೇ ಪ್ರಯೋಜನವೂ ಆಗುವುದಿಲ್ಲ.

ಶ್ರೀಮತಿ ವೀಣಾ ಶೆಟ್ಟಿ ಅವರು, ಡಾ.ಶರತ್ ಕುಮಾರ್ ರಾವ್ ಅವರ ವಿರುದ್ಧ ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅವರಿಗೆ ನೀಡಿದ ಸುಳ್ಳು ದೂರಿನ ಆಧಾರದ ಮೇಲೆ ಮತ್ತು ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ಯೋಜನಾ ನಿರ್ದೇಶಕರಾದ ಮನೋಜ್ ಕುಮಾರ್ ತ್ರಿಪಾಠಿ ಐಎಫ್ಎಸ್ ಇವರ ಸೂಚನೆಯ ಮೇರೆಗೆ, ಪ್ರಧಾನ ಕಾರ್ಯದರ್ಶಿಗಳು ದಿನಾಂಕ 28.04.2013ರಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಚಂದ್ರ ಬಾಯರಿ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಿ ತನಿಖೆಗೆ ಆದೇಶ ಹೊರಡಿಸುತ್ತಾರೆ. ಶ್ರೀಮತಿ ವೀಣಾ ಶೆಟ್ಟಿ ಅವರ ದೂರಿನ ಹಿನ್ನೆಲೆಯಲ್ಲಿ ಕನಿಷ್ಟ ತನಿಖೆಯನ್ನೂ ನಡೆಸದೆ ರೆಡ್ ಕ್ರಾಸ್ ಸಂಸ್ಥೆಯ ಉಪ ಸಭಾಪತಿ ಮತ್ತು ಆಡಳಿತ ಮಂಡಳಿ ಸದಸ್ಯತ್ವದಿಂದ ತನ್ನನ್ನು (ಡಾ.ಶರತ್ ಕುಮಾರ್ ರಾವ್) ಉಚ್ಛಾಟನೆ ಮಾಡಿರುವುದು ಮತ್ತು ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ತನ್ನ ಬದಲಾಗಿ ಡಾ.ರಾಮಚಂದ್ರ ಬಾಯರಿಯವರನ್ನು ನೇಮಕ ಮಾಡಿರುವುದು ನಡೆದಿರುವ ಹಿನ್ನೆಲೆಯಲ್ಲಿ, ಇದೀಗ ಮತ್ತೆ ವೀಣಾ ಶೆಟ್ಟಿಯವರ ದೂರಿನ ಮೇಲೆ, ಡಾ.ರಾಮಚಂದ್ರ ಬಾಯರಿ ಅವರನ್ನೇ ತನಿಖಾಧಿಕಾರಿಯನ್ನಾಗಿ ನೇಮಕ ಮಾಡಿದಲ್ಲಿ, ತನಿಖೆ ನಿಷ್ಪಕ್ಷಪಾತವಾಗಿ ನಡೆಯಲು ಸಾಧ್ಯವಿಲ್ಲ ಹಾಗೂ ಈ ಕಾರಣಕ್ಕೆ ತನಿಖಾಧಿಕಾರಿಯನ್ನು ಬದಲಾವಣೆ ಮಾಡಬೇಕು ಎಂದು ಗಜೆಟೆಡ್ ಅಧಿಕಾರಿಯೂ ಆಗಿರುವ ಡಾ.ಶರತ್ ಕುಮಾರ್ ರಾವ್ ಅವರು, ದಿನಾಂಕ 02.05.2013ರಂದು ಪ್ರಧಾನ ಕಾರ್ಯದರ್ಶಿಯವರಲ್ಲಿ ಲಿಖಿತವಾಗಿ ಕೋರುತ್ತಾರೆ. ಆದರೆ, ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅವರು ಡಾ.ಶರತ್ ಕುಮಾರ್ ರಾವ್ ಅವರ ಈ ಕೋರಿಕೆಯನ್ನು ಮಾನ್ಯ ಮಾಡದೆ ಕಡೆಗಣಿಸುತ್ತಾರೆ.ಡಾ.ರಾಮಚಂದ್ರ ಬಾಯರಿ ಅವರು ದಿನಾಂಕ 04.05.2013ರಿಂದಲೇ ತನಿಖೆ ಮುಂದುವರಿಸುತ್ತಾರೆ.

ದಿನಾಂಕ 28.06.2013ರಂದು ಡಾ.ಶರತ್ ಕುಮಾರ್ ರಾವ್ ಅವರು, ತನ್ನ ಮೇಲೆ ವೀಣಾ ಶೆಟ್ಟಿಯವರು ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ, ದಾಖಲಾತಿಗಳ ಸಹಿತ 100 ಕ್ಕೂ ಅಧಿಕ ಪುಟಗಳ ವಿವರವಾದ ವಿವರಣೆಯನ್ನು ದೂರಿನ ಮೇಲಿನ ತನಿಖಾಧಿಕಾರಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಅಧಿಕಾರಿಯವರಾದ ಡಾ.ರಾಮಚಂದ್ರ ಬಾಯರಿ ಅವರಿಗೆ ನೀಡಿರುತ್ತಾರೆ. ಆದರೆ ಡಾ.ರಾಮಚಂದ್ರ ಬಾಯರಿ ಅವರು, ಡಾ.ಶರತ್ ಕುಮಾರ್ ರಾವ್ ಅವರು ನೀಡಿದ ದಾಖಲಾತಿಗಳನ್ನು ತನಿಖಾ ಪ್ರಕ್ರಿಯೆಯಲ್ಲಿ ಪರಿಗಣಿಸದೆ, ಉಪೇಕ್ಷಿಸಿ ತನಿಖಾ ವರದಿಯೊಂದಿಗೆ ಲಗ್ತೀಕರಿಸದೆ, ಕೇವಲ 7 ಪುಟಗಳ ವಿವರಣೆಯನ್ನು ಮಾತ್ರ ತನಿಖಾ ವರದಿಯೊಂದಿಗೆ ಲಗ್ತೀಕರಿಸಿ, ಉಳಿದವುಗಳನ್ನು ಪರಿಗಣೆಗೆ ತೆಗೆದುಕೊಳ್ಳದೆ ಡಾ.ಶರತ್ ಕುಮಾರ್ ರಾವ್ ಅವರ ವಿರುದ್ಧ ವರದಿ ಸಲ್ಲಿಸುತ್ತಾರೆ. ಈ ತನಿಖಾ ವರದಿಯ ಆಧಾರದಲ್ಲಿ, ನಕಲಿ ದಾಖಲೆಗಳ ಜೆರಾಕ್ಸ್ ಪ್ರತಿಯ ಆಧಾರದಲ್ಲಿ ಗಜೆಟೆಡ್ ಅಧಿಕಾರಿಯೂ ಆಗಿರುವ ಡಾ.ಶರತ್ ಕುಮಾರ್ ರಾವ್ ಅವರನ್ನು ರಾಜ್ಯ ಸರಕಾರ ಅಮಾನತು ಮಾಡುತ್ತದೆ. (ಅಮಾನತು ಆದೇಶ ಸಂಖ್ಯೆ : ಆಕುಕ 166 ಎಂಎಸ್ಎ 2013, ದಿನಾಂಕ 07.09.2013). ನಕಲಿ ದಾಖಲೆಗಳ ಜೆರಾಕ್ಸ್ ಪ್ರತಿಯ ಆಧಾರದಲ್ಲಿ ಮಾಡಲಾಗುತ್ತಿರುವ ಅಮಾನತು ಆದೇಶಕ್ಕೆ ಆರೋಗ್ಯ ಸಚಿವರಾದ ಯು.ಟಿ.ಖಾದರ್ ಅವರು ಒಪ್ಪಿಗೆ ಸೂಚಿಸಿ ಸಹಿ ಹಾಕುತ್ತಾರೆ.

ಡಾ.ಶರತ್ ಕುಮಾರ್ ರಾವ್ ಅವರು ದಿನಾಂಕ 23.03.2013ರಂದು ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅವರ ಈ ಮೇಲ್ ಐಡಿಗೆ ಈ ಮೇಲ್ ಮೂಲಕ ಕಳುಹಿಸಿದ ದೂರಿನ ಆಧಾರದಲ್ಲಿ, ಪ್ರಧಾನ ಕಾರ್ಯದರ್ಶಿಯವರ ಸೂಚನೆ ಮತ್ತು ಆಯುಕ್ತರಾದ ವಿ.ಬಿ.ಪಾಟೀಲ್ (ಪ್ರಸ್ತುತ ಇವರು ಆರೋಗ್ಯ ಇಲಾಖೆಯಿಂದ ವರ್ಗಾವಣೆಗೊಂಡಿದ್ದಾರೆ) ಅವರ ದಿನಾಂಕ 25.03.2013ರ ಆದೇಶದಂತೆ ಜಾಗೃತಕೋಶದ ಮುಖ್ಯ ಜಾಗೃತಾಧಿಕಾರಿ ಡಾ.ಕೆ.ಎಚ್.ನರಸಿಂಹಮೂರ್ತಿ ಅವರು ತಕ್ಷಣದಿಂದಲೇ ರಾಸಾಯನಿಕ ಹಗರಣದ ತನಿಖೆಯನ್ನು ಆರಂಭಿಸಿರುತ್ತಾರೆ.

ಜಾಗೃತಕೋಶದ ಮುಖ್ಯ ಜಾಗೃತಾಧಿಕಾರಿ ಡಾ.ಕೆ.ಎಚ್.ನರಸಿಂಹಮೂರ್ತಿ ಅವರು ಅಧಿಕೃತವಾಗಿ ರಾಸಾಯನಿಕ ಹಗರಣದ ತನಿಖೆ ಆರಂಭಿಸಿದ ಬಳಿಕ, ಡಾ.ಶರತ್ ಕುಮಾರ್ ರಾವ್ ಅವರು ಮದನ್ ಗೋಪಾಲ್ ಅವರ ಈ ಮೇಲ್ ಐಡಿ madan17@gmail.com ಕಳುಹಿಸಿದ ದೂರಿನ ಪ್ರಿಂಟ್ ಔಟ್ ನ ಪ್ರತಿಯನ್ನು (ನಾಲ್ಕು ಪುಟಗಳ ದೂರಿನ ಪ್ರತಿಯಲ್ಲಿ ಎರಡು ಪುಟಗಳನ್ನು ಮಾತ್ರ ) ಅನಧಿಕೃತವಾಗಿ, ಅಡ್ಡದಾರಿಯಲ್ಲಿ ಇಲಾಖಾ ನಿರ್ದೇಶಕರಾದ ಡಾ.ಧನ್ಯ ಕುಮಾರ್ (ಇವರು ಪ್ರಸ್ತುತ ನಿವೃತ್ತರು) ಅವರು ಪಡೆದುಕೊಳ್ಳುತ್ತಾರೆ.

ಈ ಪತ್ರದ ಪ್ರತಿಯ ಮೇಲೆ ನಿರ್ದೇಶಕರಾದ ಡಾ.ಧನ್ಯ ಕುಮಾರ್ ಅವರು ದಿನಾಂಕ 05.04.2013ರಂದು ಬರೆದ ಟಿಪ್ಪಣಿಯ ಆಧಾರದ ಮೇಲೆ ವೈದ್ಯಕೀಯ ಉಪ ನಿರ್ದೇಶಕರಾದ ಡಾ.ಕೆ.ಬಿ.ಈಶ್ವರಪ್ಪ ಅವರು ಪ್ರತ್ಯೇಕವಾಗಿ ರಾಸಾಯನಿಕ ಅವ್ಯವಹಾರದ ತನಿಖೆಯನ್ನು ಕೈಗೆತ್ತಿಕೊಳ್ಳುತ್ತಾರೆ.

ಇವರು ಉಡುಪಿ ಜಿಲ್ಲಾಸ್ಪತ್ರೆಗೆ ಮಾತ್ರ ಭೇಟಿ ನೀಡಿ ಅಸಮರ್ಪಕ ಮತ್ತು ನಾಟಕೀಯ ರೀತಿಯಲ್ಲಿ, ಪಕ್ಷಪಾತ ಮತ್ತು ಪೂರ್ವಾಗ್ರಹದಿಂದ ಕೂಡಿದ ಏಕಪಕ್ಷೀಯ ತನಿಖೆ ನಡೆಸಿ ಬಹುಕೋಟಿ ಮೊತ್ತದ ಭ್ರಷ್ಟಚಾರ ಹಗರಣ ನಡೆದೇ ಇಲ್ಲ ಎನ್ನುವಂತೆ ಮುಚ್ಚಿ ಹಾಕುತ್ತಾರೆ.

ಈ ತನಿಖಾ ವರದಿಯನ್ನು ಪ್ರಧಾನ ಕಾರ್ಯದರ್ಶಿಗಳು ಮಾನ್ಯ ಮಾಡುತ್ತಾರೆ. ರಾಸಾಯನಿಕ ಹಗರಣದ ಬಗ್ಗೆ ಮುಂದೆ ಯಾವುದೇ ರೀತಿಯ ಕ್ರಮ ಕೈ ತೆಗೆದುಕೊಳ್ಳುವ ಅಗತ್ಯ ಇರುವುದಿಲ್ಲ ಎಂದು ಆಯುಕ್ತರಿಗೆ ಸೂಚಿಸುತ್ತಾರೆ. ಈ ಮೂಲಕ ಸರಕಾರದ ಖಜಾನೆಗೆ ಕೋಟ್ಯಂತರ ರುಪಾಯಿಗಳ ನಷ್ಟವನ್ನು ಉಂಟುಮಾಡಿದ ಭ್ರಷ್ಟರನ್ನು ರಕ್ಷಿಸುತ್ತಾರೆ. ಭ್ರಷ್ಟರನ್ನು ರಕ್ಷಿಸುವುದು ಸಹ ಭ್ರಷ್ಟಚಾರವೇ ಆಗುತ್ತದೆ. ಅಪರಾಧಿಗಳನ್ನು ರಕ್ಷಣೆ ಮಾಡಲು ಅಪರಾಧಿಗಳೇ ಪೂರ್ವನಿಯೋಜಿತವಾಗಿ ಸಂಚು ರೂಪಿಸಿ ನಾಟಕೀಯ ತನಿಖೆ ನಡೆಸಿದಂತಾಗಿದೆ ಈ ತನಿಖೆ.

ಮಾಹಿತಿ ಹಕ್ಕು ಕಾಯಿದೆ 2005ರ ಪ್ರಕಾರ ಪಡೆದುಕೊಂಡ ಮಾಹಿತಿಯ ಪ್ರಕಾರ, ಪ್ರಧಾನ ಕಾರ್ಯದರ್ಶಿಗಳ ಕಚೇರಿಯು ಡಾ.ಶರತ್ ಕುಮಾರ್ ರಾವ್ ಅವರ ದೂರಿನ ಪ್ರತಿಯನ್ನು ಇಲಾಖಾ ನಿರ್ದೇಶಕರಿಗಾಗಲೀ, ವೈದ್ಯಕೀಯ ಉಪ ನಿರ್ದೇಶಕರಿಗಾಗಲೀ ನೀಡಿಲ್ಲ ಎಂಬುದು ಸ್ಪಷ್ಟ. ಡಾ.ಶರತ್ ಕುಮಾರ್ ರಾವ್ ಅವರು ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಹೊರತುಪಡಿಸಿ, ರಾಜ್ಯ ಮಟ್ಟದ ಇತರ ಯಾವ ಅಧಿಕಾರಿಗಳಿಗೂ ಈ ಬಗ್ಗೆ ಪತ್ರ ಬರೆದಿಲ್ಲ ಎಂಬುದು ದಾಖಲೆಗಳ ಆಧಾರದಲ್ಲಿ ಸ್ಪಷ್ಟವಾಗುತ್ತದೆ. ಆದುದರಿಂದ, ಡಾ.ಶರತ್ ಕುಮಾರ್ ರಾವ್ ಅವರು ಪ್ರಧಾನ ಕಾರ್ಯದರ್ಶಿಯವರ ಈ ಮೇಲ್ ಐಡಿಗೆ ಕಳುಹಿಸಿದ ದೂರಿನ ಪ್ರತಿಯನ್ನು ನಿರ್ದೇಶಕರಾದ ವಿ.ಬಿ.ಪಾಟೀಲ್ ಅವರು ಮದನ್ ಗೋಪಾಲ್ ಅವರ ಈ ಮೇಲ್ ಐಡಿಯಿಂದ ಕಳವು ಮಾಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಪತ್ರದ ಪ್ರತಿಯನ್ನು ಕಳವು ಮಾಡಿದ ಕಾರಣದಿಂದಲೇ, ಡಾ.ಕೆ.ಬಿ.ಈಶ್ವರಪ್ಪನವರು ನಕಲಿ ತನಿಖಾ ವರದಿಯನ್ನು ನಿರ್ದೇಶಕರಿಗೆ ಸಲ್ಲಿಸುವ ತಮ್ಮ ಪತ್ರದ (ಪತ್ರದ ದಿನಾಂಕ: 05.06.2013) ಉಲ್ಲೇಖ 1ರಲ್ಲಿ ‘ದಿನಾಂಕ ಇಲ್ಲ’ ಎಂದು ಬರೆಯುತ್ತಾರೆ. (‘ಡಾ.ಶರತ್ ಕುಮಾರ್.ಜೆ ಅವರ ದೂರಿನ ಅರ್ಜಿ (ದಿನಾಂಕ ಇಲ್ಲ)’.

ಪ್ರಧಾನ ಕಾರ್ಯದರ್ಶಿಗಳ ಸೂಚನೆ ಮತ್ತು ಆಯುಕ್ತರ ಆದೇಶದಂತೆ, ರಾಸಾಯನಿಕ ಹಗರಣದ ತನಿಖೆ ಕೈಗೆತ್ತಿಕೊಂಡಿದ್ದ ಡಾ.ಕೆ.ಎಚ್.ನರಸಿಂಹಮೂರ್ತಿ ಅವರು, ದಿನಾಂಕ 16.05.2013ರಂದು ಉಡುಪಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ರಕ್ತ ಶೇಕರಣಾ ಟ್ಯೂಬ್ ಗಳ ಬಗ್ಗೆ ಜಿಲ್ಲಾ ಸರ್ಜನ್ ಡಾ.ಆನಂದ ನಾಯ್ಕ್ ಅವರನ್ನು ಕೂಲಂಕಷ ವಿಚಾರಣೆ ನಡೆಸಿದ್ದಾರೆ. ಇದಾದ ನಾಲ್ಕೇ ದಿನಗಳಲ್ಲಿ ಶ್ರೀಮತಿ ವೀಣಾ ಶೆಟ್ಟಿ ಅವರು ಡಾ.ಶರತ್ ಕುಮಾರ್ ರಾವ್ ಅವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ದಿನಾಂಕ 20.05.2013ರಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡುತ್ತಾರೆ. ಈ ಬಗ್ಗೆ ತನಿಖೆ ನಡೆಸಿದ ಜಿಲ್ಲಾ ಪೊಲೀಸ್ ಉಪ ಅಧೀಕ್ಷಕರು ವೀಣಾ ಶೆಟ್ಟಿಯವರ ದೂರು ಅರ್ಜಿಯಲ್ಲಿ ನಮೂದಿಸಿದ ವಿಷಯಗಳು ಸುಳ್ಳು ಎಂದು ಹಿಂಬರಹ ನೀಡಿರುತ್ತಾರೆ.

ಶ್ರೀಮತಿ ವೀಣಾ ಶೆಟ್ಟಿ ಅವರು ಡಾ.ಶರತ್ ಕುಮಾರ್ ರಾವ್ ವಿರುದ್ಧ ಜಾಗೃತಕೋಶಕ್ಕೆ ನೀಡಿದ ದೂರಿನ ಮೇಲೆ, ಮುಖ್ಯ ಜಾಗೃತಾಧಿಕಾರಿ ಡಾ.ಕೆ.ಎಚ್.ನರಸಿಂಹಮೂರ್ತಿ ಅವರು, ದಿನಾಂಕ 20.06.2013, ದಿನಾಂಕ 23.07.2013, ದಿನಾಂಕ 07.08.2013 ಮತ್ತು ದಿನಾಂಕ 03.09.2013ರಂದು ಶ್ರೀಮತಿ ವೀಣಾ ಶೆಟ್ಟಿ ಅವರಿಗೆ ತನಿಖೆಗೆ ಹಾಜರಾಗಲು ಕರೆದು ನೋಟೀಸ್ ಮಾಡಿದ್ದಾರೆ. ಆದರೆ ಈ ನಿಗದಿತ ನಾಲ್ಕೂ ದಿನಾಂಕಗಳಂದೂ, ಶ್ರೀಮತಿ ವೀಣಾ ಶೆಟ್ಟಿ ಅವರು ತನಿಖಾಧಿಕಾರಿ ಮುಂದೆ ಹಾಜರಾಗದೆ ಉದ್ಧೇಶಪೂರ್ವಕ ತಪ್ಪಿಸಿಕೊಂಡಿರುತ್ತಾರೆ. ಕೊನೆಯ ಎರಡು ನೋಟೀಸಿನಲ್ಲಿ ‘ಹಾಜರಾಗಿ ಸಾಕ್ಷಿ ನುಡಿಯಲು ಅಂತಿಮವಾಗಿ ಸೂಚಿಸಿದೆ. ತಪ್ಪಿದ್ದಲ್ಲಿ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂಬುದಾಗಿಯೂ ತನಿಖಾಧಿಕಾರಿಯವರು ದೂರುದಾರರಾದ ಶ್ರೀಮತಿ ವೀಣಾ ಶೆಟ್ಟಿಯವರಿಗೆ ಸ್ಪಷ್ಟವಾಗಿ ತಿಳಿಸಿರುತ್ತಾರೆ. ಆದರೂ ಶ್ರೀಮತಿ ವೀಣಾ ಶೆಟ್ಟಿ ಅವರು ತನಿಖಾ ಸಮಯ ಹಾಜರಾಗದೆ ತಪ್ಪಿಸಿಕೊಂಡಿರುವುದು ಉದ್ಧೇಶಪೂರ್ವಕವೇ ಆಗಿದೆ.

ಡಾ.ಶರತ್ ಕುಮಾರ್ ರಾವ್ ಅವರ ವಿರುದ್ಧ ಶ್ರೀಮತಿ ವೀಣಾ ಶೆಟ್ಟಿ ಅವರು ನೀಡಿದ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಡಾ.ಕೆ.ಎಚ್.ನರಸಿಂಹಮೂರ್ತಿ ಅವರು ತಮ್ಮ ಮೇಲಾಧಿಕಾರಿಗಳಿಗೆ ಅಂತಿಮ ತನಿಖಾ ವರದಿ ಸಲ್ಲಿಸುವ ಕೆಲವೇ ದಿನಗಳ ಮುಂಚಿತವಾಗಿ ಡಾ.ಕೆ.ಎಚ್. ನರಸಿಂಹಮೂರ್ತಿ ಅವರನ್ನು ಸರಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸುತ್ತದೆ.

ಡಾ.ಶರತ್ ಕುಮಾರ್ ರಾವ್ ಅವರನ್ನು ಶಿಕ್ಷಿಸುವ ಮತ್ತು ಶ್ರೀಮತಿ ವೀಣಾ ಶೆಟ್ಟಿ ಹಾಗೂ ಬಹುಕೋಟಿ ರಾಸಾಯನಿಕ ಹಗರಣದಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ರಕ್ಷಿಸುವ ದುರುದ್ಧೇಶದಿಂದ ಕರ್ನಾಟಕ ಸರಕಾರವು ಡಾ.ನರಸಿಂಹಮೂರ್ತಿ ಅವರನ್ನು ವರ್ಗಾವಣೆ ಮಾಡಿದೆ. ಈ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದಂತೆ, ಡಾ.ನರಸಿಂಹಮೂರ್ತಿಯವರ ವರ್ಗಾವಣೆ ಆದೇಶದ ಪ್ರತಿ, ವರ್ಗಾವಣೆಗೆ ಸಂಬಂಧಟಪಟ್ಟಂತೆ ನಡೆದ ಲಿಖಿತ ಪತ್ರ ವ್ಯವಹಾರಗಳ/ ಟಿಪ್ಪಣಿ ಇತ್ಯಾದಿಗಳ ಬಗ್ಗೆ ಮಾಹಿತಿ ಮತ್ತು ಯಥಾ ಪ್ರತಿಗಳನ್ನು ಕೋರಿದಾಗ, ವರ್ಗಾವಣೆ ಆದೇಶದ ಪ್ರತಿಯನ್ನು ಮಾತ್ರ ನೀಡಿ, ಉಳಿದಂತೆ ಯಾವುದೇ ಮಾಹಿತಿ/ಯಥಾ ಪ್ರತಿಗಳನ್ನೂ ನೀಡದೆ ಸತ್ಯವನ್ನು ಮುಚ್ಚಿಡಲಾಯಿತು. ಮೇಲ್ಮನವಿ ಹಾಕಿದ ಬಳಿಕ ನಡೆದ ಮೇಲ್ಮನವಿಯ ವಿಚಾರಣೆಯ ಸಮಯದಲ್ಲಿಯೂ, ನನ್ನ ಲಿಖಿತ ಪತ್ರವನ್ನು ಗಣನೆಗೇ ತೆಗೆದುಕೊಳ್ಳದೆ ಮೇಲ್ಮನವಿಯನ್ನು ವಜಾಗೊಳಿಸಲಾಯಿತು.

ಡಾ.ಶರತ್ ಕುಮಾರ್ ರಾವ್ ಅವರ ವಿರುದ್ಧ, ಶ್ರೀಮತಿ ವೀಣಾ ಶೆಟ್ಟಿ ಅವರು ನೀಡಿದ ಸುಳ್ಳು ದೂರಿನ ಮೇಲೆ, ಮುಖ್ಯ ಜಾಗೃತಾಧಿಕಾರಿಯವರ ತನಿಖೆ ಪೂರ್ಣಗೊಂಡು ಆ ಬಗ್ಗೆ ವರದಿ ಸಲ್ಲಿಸುವ ಹಂತದಲ್ಲಿಯೇ, ಡಾ.ರಾಮಚಂದ್ರ ಬಾಯರಿ ಅವರ ವಿಚಾರಣಾ ವರದಿ ಮತ್ತು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಯೋಜನಾ ನಿರ್ದೇಶಕರಾದ ಮನೋಜ್ ಕುಮಾರ್ ತ್ರಿಪಾಠಿ ಐಎಫ್ಎಸ್ (ಇವರು ಈಗ ವರ್ಗಾವಣೆಗೊಂಡಿದ್ದಾರೆ) ಅವರ ಅಭಿಪ್ರಾಯ/ವರದಿಯ ಆಧಾರದಲ್ಲಿ, ದಿನಾಂಕ 07.09.2013ರಂದು ಸರಕಾರ ಡಾ.ಶರತ್ ಕುಮಾರ್ ರಾವ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸುತ್ತದೆ.

ಈ ಅಮಾನತು ಆದೇಶದ ಪ್ರತಿಯು, ಅಮಾನತು ಆದೇಶ ಹೊರಡಿಸಿದ ದಿನದಂದೇ ಸೋರಿಕೆಯಾಗಿ ಶ್ರೀಮತಿ ವೀಣಾ ಶೆಟ್ಟಿ ಅವರಿಗೆ ಲಭಿಸುತ್ತದೆ. ಅವರು ಇದನ್ನು ಮಾಧ್ಯಮಗಳಿಗೆ ವಿತರಿಸುತ್ತಾರೆ. ಆ ಮೂಲಕ ಡಾ.ಶರತ್ ಕುಮಾರ್ ರಾವ್ ಅವರ ಮಾನಹಾನಿ ಮಾಡುವ ಯತ್ನವೂ ಅತ್ಯಂತ ವ್ಯವಸ್ಥಿತವಾಗಿ ನಡೆದು ಬಿಡುತ್ತದೆ. ಅಮಾನತು ಆದೇಶವನ್ನು ಶ್ರೀಮತಿ ವೀಣಾ ಶೆಟ್ಟಿ ಅವರು ಮಾಧ್ಯಮಗಳಿಗೆ ವಿತರಿಸುವಾಗ, ಅದರ ಜೊತೆಗೆ ಒಂದು ಅಗ್ರಿಮೆಂಟ್ ನ್ನು ವಿತರಿಸಿದ್ದು, ಇದರ ಆಧಾರದಲ್ಲಿಯೇ ಅಮಾನತು ಆಗಿರುವುದಾಗಿ ತಿಳಿಸುತ್ತಾರೆ. ಆದರೆ ಈ ಅಗ್ರಿಮೆಂಟ್ ನಕಲಿ ದಾಖಲೆ ಮತ್ತು ಜೆರಾಕ್ಸ್ ಪ್ರತಿಯಾಗಿದೆ. (ನಕಲಿ ಅಗ್ರಿಮೆಂಟ್ ನ ಜೆರಾಕ್ಸ್ ಪ್ರತಿ ಮತ್ತು ನಕಲಿ ಅಗ್ರಿಮೆಂಟ್ ನಲ್ಲಿರುವ ಸಹಿಗೂ ಡಾ.ಶರತ್ ಕುಮಾರ್ ರಾವ್ ಅವರ ಸಹಿಗೂ ತಾಳೆ ಆಗುವುದಿಲ್ಲ ಎಂದು ಮಂಗಳೂರು ರೋಶನಿ ನಿಲಯದ ವಿಧಿ ವಿಜ್ಞಾನ ತಜ್ಞರಾದ ಪ್ರೊ.ಡಾ.ಬಿ.ಅಶೋಕ್ ಅವರು ನೀಡಿದ ವರದಿ ನೀಡಿರುತ್ತಾರೆ.

ಮಾತ್ರವಲ್ಲ, ಇದನ್ನು ಶ್ರೀಮತಿ ವೀಣಾ ಶೆಟ್ಟಿ ಅವರು ಇಲಾಖಾಧಿಕಾರಿಗಳಿಗೆ ದೂರು ನೀಡುವಾಗ ನೀಡದೆ, ಡಾ.ರಾಮಚಂದ್ರ ಬಾಯರಿಯವರು ತನಿಖಾ ವರದಿ ಸಲ್ಲಿಸುವ ಅಂತಿಮ ಹಂತದಲ್ಲಿ ಹೊಸದಾಗಿ ಸೇರ್ಪಡೆಗಳಿಸಿದ್ದಾಗಿರುತ್ತದೆ ಎಂಬುದು, ಈ ಇಡೀ ಪ್ರಕರಣದಲ್ಲಿ ಡಾ.ಶರತ್ ಕುಮಾರ್ ರಾವ್ ವಿರುದ್ಧ ವ್ಯವಸ್ಥಿತವಾದ ಒಂದು ಷಡ್ಯಂತ್ರ ನಡೆದಿದೆ ಎನ್ನುವುದನ್ನು ತೋರಿಸಿಕೊಡುತ್ತದೆ.

ಶ್ರೀಮತಿ ವೀಣಾ ಶೆಟ್ಟಿ ಅವರು ತನಿಖಾಧಿಕಾರಿ ಡಾ.ರಾಮಚಂದ್ರ ಬಾಯರಿ ಅವರಿಗೆ ಯಾವ ದಾಖಲೆಯನ್ನು ನೀಡಿದ್ದರೋ, ಆ ದಾಖಲೆಯ ಆಧಾರದಲ್ಲಿ ಸರಕಾರ ಡಾ.ಶರತ್ ಕುಮಾರ್ ರಾವ್ ಅವರನ್ನು ಅಮಾನತು ಮಾಡಿತ್ತು. ಆ ದಾಖಲೆ ನಕಲಿಯಾಗಿತ್ತು ಮತ್ತು ಕೇವಲ ಒಂದು ಜೆರಾಕ್ಸ್ ಪ್ರತಿಯಷ್ಟೇ ಆಗಿತ್ತು. ಇದರ ವಿರುದ್ಧ ಡಾ.ಶರತ್ ಕುಮಾರ್ ರಾವ್ ಅವರು ಉಡುಪಿಯ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಶ್ರೀಮತಿ ವೀಣಾ ಶೆಟ್ಟಿ, ಬಸ್ರೂರು ರಾಜೀವ್ ಶೆಟ್ಟಿ ಹಾಗೂ ಡಾ.ರಾಮಚಂದ್ರ ಬಾಯರಿ ವಿರುದ್ಧ ಖಾಸಗಿ ಪಿರ್ಯಾದಿ ಸಲ್ಲಿಸುತ್ತಾರೆ. ಘನ ನ್ಯಾಯಾಲಯದ ಆದೇಶದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮ ಸಂಖ್ಯೆ 0409/2013ರ ಪ್ರಕಾರ ಕಲಂ 120 ಬಿ, 327, 330, 355, 468, 500 ಮತ್ತು 501 ಕಲಂಗಳ ಪ್ರಕಾರ ಮೊಕದ್ದಮೆ ದಾಖಲಾಗುತ್ತದೆ. ತನಿಖೆ ಆರಂಭಗೊಳ್ಳುತ್ತದೆ.

ಶ್ರೀಮತಿ ವೀಣಾ ಶೆಟ್ಟಿ ಅವರು ನೀಡಿದ ಯಾವ ಜೆರಾಕ್ಸ್ ದಾಖಲೆಯ ಆಧಾರದಲ್ಲಿ ಡಾ.ಶರತ್ ಕುಮಾರ್ ರಾವ್ ಅವರನ್ನು ಅಮಾನತು ಮಾಡಲಾಗಿತ್ತೋ, ಆ ದಾಖಲೆ, ಡಾ.ಶರತ್ ಕುಮಾರ್ ರಾವ್ ಅವರು ದಾಖಲಿಸಿದ ಖಾಸಗಿ ಪಿರ್ಯಾದಿಯ ಮೇಲಿನ ಪೊಲೀಸ್ ತನಿಖೆಗೆ ಅತೀ ಅಗತ್ಯವಾಗಿದೆ. ಪೋರ್ಜರಿ ದಾಖಲೆ ಎಂದು ಡಾ.ಶರತ್ ಕುಮಾರ್ ಅವರು ಹೇಳುತ್ತಿರುವ ದಾಖಲೆಯ ಮೂಲ ಪ್ರತಿಯನ್ನು ಹಾರುಪಡಿಸುವಂತೆ ಉಡುಪಿ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಬ್ ಇನ್ಸ್ ಪೆಕ್ಟರ್ ಮತ್ತು ಪ್ರಕರಣದ ತನಿಖಾಧಿಕಾರಿ ರಾಜಗೋಪಾಲ್ ಅವರು ಶ್ರೀಮತಿ ವೀಣಾ ಶೆಟ್ಟಿ ಅವರಿಗೆ ನೋಟೀಸ್ ಮಾಡಿ ವಿಚಾರಣೆಗೆ ಕರೆಯುತ್ತಾರೆ. ವಿಚಾರಣೆಯ ಸಮಯದಲ್ಲಿ, ‘ದಾಖಲೆಯ ಮೂಲ ಪ್ರತಿ ತನ್ನಲ್ಲಿ ಇಲ್ಲ. ಅದು, ವಕೀಲರಾದ ಶಶಿಕಾಂತ ಶೆಟ್ಟಿ ಅವರಲ್ಲಿ ಇದೆ’ ಎಂದು ಹೇಳಿಕೆ ನೀಡುತ್ತಾರೆ. ಬಳಿಕ ತನಿಖಾಧಿಕಾರಿಗಳು, ದಾಖಲೆಯ ಮೂಲ ಪ್ರತಿಯನ್ನು ಹಾಜರುಪಡಿಸುವಂತೆ ಸೂಚಿಸಿ ವಕೀಲರಾದ ಶಶಿಕಾಂತ ಶೆಟ್ಟಿ ಅವರಿಗೆ ನೋಟೀಸ್ ಮಾಡುತ್ತಾರೆ. ವಕೀಲ ಶಶಿಕಾಂತ ಶೆಟ್ಟಿ ಅವರು, ಶ್ರೀಮತಿ ವೀಣಾ ಶೆಟ್ಟಿ ತನ್ನಲ್ಲಿ ಅಂಥ ಯಾವುದೇ ದಾಖಲೆಯನ್ನೂ ನೀಡಿಲ್ಲ, ಹಾಗಾಗಿ ತನ್ನಲ್ಲಿ ಅಂಥ ದಾಖಲೆ ಇಲ್ಲ’ ಎಂದು ಉತ್ತರ ನೀಡುತ್ತಾರೆ.

ನಂತರ ತನಿಖಾಧಿಕಾರಿಗಳು, ಮೂಲ ದಾಖಲೆಯನ್ನು ಪತ್ತೆ ಮಾಡುವ ಸಲುವಾಗಿ, ಘನ ನ್ಯಾಯಾಲಯದ ಮೂಲಕ, ಶ್ರೀಮತಿ ವೀಣಾ ಶೆಟ್ಟಿ ಹಾಗೂ ಇವರ ಸಹೋದರ ಎಂ.ಬಾಲಗಂಗಾಧರ ಶೆಟ್ಟಿ ಎಂಬವರ ಮನೆಗಳಲ್ಲಿ ತಪಾಸಣೆ ಮಾಡುವ ನಿಟ್ಟಿನಲ್ಲಿ ಸರ್ಚ್ ವಾರೆಂಟ್ ಕೋರುತ್ತಾರೆ. ಸರ್ಚ್ ವಾರೆಂಟ್ ಪಡೆದು ತಪಾಸಣೆ ನಡೆಸುತ್ತಾರೆ. ಆದರೂ ಆ ದಾಖಲೆಗಳ ಮೂಲ ಪ್ರತಿ ಪತ್ತೆಯಾಗುವುದಿಲ್ಲ. ಇದೀಗ ಪೊಲೀಸ್ ತನಿಖಾಧಿಕಾರಿಗಳು, ನಕಲಿ ದಾಖಲೆಯ ಮೂಲ ಪ್ರತಿ ಲಭ್ಯವಾಗದ ಕಾರಣ ನೀಡಿ, ಪ್ರಕರಣಕ್ಕೆ ‘ಬಿ’ ವರದಿ ಸಲ್ಲಿಸಲು ಮುಂದಾಗಿದ್ದು, ಆ ಮೂಲಕ ಡಾ.ಶರತ್ ಕುಮಾರ್ ರಾವ್ ಅವರಿಗೆ ನ್ಯಾಯ ನಿರಾಕರಿಸಲಾಗುತ್ತಿದೆ.

ಈ ಮಧ್ಯೆ, ಬಹುಕೋಟಿ ರಾಸಾಯನಿಕ ಹಗರಣದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯ ಆಧಾರದಲ್ಲಿ ಕರ್ನಾಟಕ ಲೋಕಾಯುಕ್ತದ ಉಡುಪಿ ಜಿಲ್ಲಾ ಪೊಲೀಸ್ ವಿಭಾಗದ ಅಧಿಕಾರಿಗಳು, ಉಡುಪಿ ಜಿಲ್ಲಾಸ್ಪತ್ರೆಗೆ ಸೀಮಿತವಾಗಿ ಸುಮೊಟೋ ಆಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸುತ್ತಾರೆ. (ಪ್ರಕರಣ ಸಂಖ್ಯೆ 02/2014, ಕಲಂ 7, 8, 13 (1) (ಸಿ) ಭ್ರಷ್ಟಚಾರ ನಿಯಂತ್ರಣ ಕಾಯಿದೆ 1988).

ಈ ನಡುವೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಆನಂದ ನಾಯ್ಕ್, ಮೋಹನದಾಸ ಕಿಣಿ ಹಾಗೂ ಕುಮಾರಸ್ವಾಮಿ ಇವರನ್ನು ಅಮಾನತು ಮಾಡುವಂತೆ ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆಯುತ್ತಾರೆ. ಆರೋಪಿಗಳನ್ನು ರಕ್ಷಿಸುವ ಸಲುವಾಗಿಯೇ ಪ್ರಧಾನ ಕಾರ್ಯದರ್ಶಿಗಳು ಜಿಲ್ಲಾ ಸರ್ಜನ್ ಡಾ.ಆನಂದ ನಾಯ್ಕ್ ಅವರನ್ನು ಇದುವರೆಗೂ ಅಮಾನತು ಮಾಡಿರುವುದಿಲ್ಲ. ಇತರ ಇಬ್ಬರು ಆರೋಪಿಗಳಾದ ಮೋಹನದಾಸ ಕಿಣಿ (ಕಚೇರಿ ಅಧೀಕ್ಷಕ) ಹಾಗೂ ಕುಮಾರ ಸ್ವಾಮಿ (ಸಹಾಯಕ ಆಡಳಿತಾಧಿಕಾರಿ) ಇವರಿಗೆ ಅನುಕೂಲ ಮಾಡಿಕೊಡುವ ಉದ್ಧೇಶದಿಂದಲೇ ಈ ಇಬ್ಬರನ್ನು ಅಮಾನತು ಮಾಡುವಂತೆ ಇಲಾಖೆಯ ಪ್ರಭಾರ ಆಯುಕ್ತರಿಗೆ ಸೂಚಿಸುತ್ತಾರೆ. ಪ್ರಭಾರ ಆಯುಕ್ತರು ಮೋಹನದಾಸ ಕಿಣಿ ಹಾಗೂ ಕುಮಾರ ಸ್ವಾಮಿ ಇವರನ್ನು ಅಮಾನತು ಮಾಡುತ್ತಾರೆ. ಸರಕಾರ ಅಮಾನತು ಮಾಡಿದರೂ, ಇವರಿಬ್ಬರೂ ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯದಲ್ಲಿ ಮುಂದುವರಿದಿದ್ದರು. ಬಳಿಕ, ಪೂರ್ವ ನಿಯೋಜಿತ ಹುನ್ನಾರದಂತೆ, ಪ್ರಭಾರ ಆಯುಕ್ತರಿಗೆ ಅಮಾನತು ಮಾಡುವ ಅಧಿಕಾರ ಇಲ್ಲ ಎಂಬ ನಿಯಮದ ಆಧಾರದ ಮೇಲೆ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಗೆ ಹೋಗಿ ಅಮಾನತು ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ತರಲು ಯಶಸ್ವಿಯಾಗಿದ್ದಾರೆ.

ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸ್ ತನಿಖೆಗೆ ಪೂರಕವಾಗಿ ಹೇಳಿಕೆ ನೀಡಿದ ಮಹಿಳಾ ಸರಕಾರಿ ಉದ್ಯೋಗಸ್ಥೆಯೊಬ್ಬರಿಗೆ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಆನಂದ ನಾಯ್ಕ್, ಕಚೇರಿ ಅಧೀಕ್ಷಕರಾದ ಮೋಹನದಾಸ್ ಕಿಣಿ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಮೋದ್ ಮಧ್ವರಾಜ್ ಅವರು ನಿರಂತರವಾಗಿ ಕಿರುಕುಳ ನೀಡುತ್ತಿರುವ ಘಟನೆಗಳೂ ನಡೆಯುತ್ತಿವೆ. ಕಿರುಕುಳ ನೀಡಿದ ಬಗ್ಗೆ ಸಂತ್ರಸ್ತೆ ಉಡುಪಿ ಜಿಲ್ಲಾಧಿಕಾರಿಗಳಾಗಿದ್ದ ಡಾ.ಎಂ.ಟಿ.ರೇಜು ಐಎಎಸ್ ಅವರಿಗೆ ಎರಡು ಬಾರಿ ಮತ್ತು ಡಾ.ಮುದ್ದುಮೋಹನ್ ಐಎಎಸ್ ಅವರಿಗೆ ಒಂದು ಬಾರಿ, ಹೀಗೆ ಒಟ್ಟು ಮೂರು ಬಾರಿ ಪ್ರತ್ಯೇಕವಾಗಿ ಲಿಖಿತವಾಗಿಯೇ ದೂರು ನೀಡಿದರೂ, ಜಿಲ್ಲಾಧಿಕಾರಿಗಳು ಮಹಿಳಾ ಸರಕಾರಿ ನೌಕರಳೊಬ್ಬರ ದೂರಿನ ಮೇಲೆ ಇದುವರೆಗೂ ಕನಿಷ್ಟ ತನಿಖೆಯನ್ನೂ ನಡೆಸಲು ಕ್ರಮ ಜರುಗಿಸಲು ಮುಂದಾಗದಿರುವುದು ವಿಪರ್ಯಾಸವೇ ಸರಿ. ಇದೊಂದು ಮಹಿಳಾ ದೌರ್ಜನ್ಯದ ಪ್ರಕರಣವಾಗಿದ್ದು, ಸಂತ್ರಸ್ತೆಯ ದೂರಿನ ಮೇಲೆ ಕ್ರಮ ತೆಗೆದುಕೊಳ್ಳದಿರುವುದು ಮಹಿಳಾ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯೂ ಆಗಿದೆ.

ಈ ನಡುವೆ, ಅಮಾನತು ಆದೇಶದ ವಿರುದ್ಧ ಡಾ.ಶರತ್ ಕುಮಾರ್ ರಾವ್ ಅವರು ದಿನಾಂಕ 16.09.2014ರಂದು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ)ಯ ಮೊರೆ ಹೋಗುತ್ತಾರೆ. ಪ್ರಕರಣ ದಾಖಲಾಗಿ ಈಗಾಗಲೇ ಒಂದು ವರ್ಷವೇ ಕಳೆದಿದೆಯಾದರೂ, ಇಲ್ಲೂ ಸಹ ಇದುವರೆಗೂ ಇವರ ಪ್ರಕರಣ ವಿಚಾರಣೆಗೆ ಬಂದಿಲ್ಲ ಎಂದು ತಿಳಿಸಲು ವಿಷಾಧವಾಗುತ್ತದೆ.

ಡಾ.ಶರತ್ ಕುಮಾರ್ ರಾವ್ ಅವರನ್ನು ವೈದ್ಯಾಧಿಕಾರಿ ಸೇವೆಯಿಂದ ಅಮಾನತುಗೊಳಿಸಿ, ದಿನಾಂಕ 07.09.2014ಕ್ಕೆ ಒಂದು ವರ್ಷ ಪೂರ್ಣಗೊಂಡಿದೆ. ಆದರೆ, ಇನ್ನೂ ಸಹ ಸರಕಾರ ಅಮಾನತು ಹಿಂತೆಗೆದುಕೊಂಡಿಲ್ಲ. ಇಲಾಖಾ ವಿಚಾರಣೆಯನ್ನೂ ಆರಂಭಿಸಿಲ್ಲ. ಬಹಳ ಬೇಸರದ ವಿಷಯವೆಂದರೆ, ಅಮಾನತು ಅವಧಿಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 98ರಂತೆ, ನೀಡಬೇಕಾದ ಜೀವನಾಂಶವನ್ನೂ ಸರಕಾರ ಡಾ.ಶರತ್ ಕುಮಾರ್ ರಾವ್ ಅವರಿಗೆ ಸರಿಯಾಗಿ ನೀಡದೆ ಅಮಾನವೀಯತೆಯನ್ನು ಪ್ರದರ್ಶಿಸುತ್ತಿದೆ.

ಈ ಎಲ್ಲಾ ವಿಷಯಗಳ ಬಗ್ಗೆ ನಾವು ಈಗಾಗಲೇ ಹಲವು ಬಾರಿ ಕರ್ನಾಟಕ ಸರಕಾರದ ಸನ್ಮಾನ್ಯ ಮುಖ್ಯಮಂತ್ರಿಗಳು, ಸರಕಾರದ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಇತರ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ, ಇದುವರೆಗೂ ಯಾರೊಬ್ಬರೂ ಸ್ಪಂದಿಸಿಲ್ಲ ಎಂದು ತಿಳಿಸಲು ವಿಷಾಧವಿದೆ.

ಮೇಲಿನ ಈ ಎಲ್ಲಾ ವಿಚಾರಗಳನ್ನು ಗಮನಿಸಿದಾಗ, ಕರ್ನಾಟಕ ಸರಕಾರವು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ 2009ರಿಂದ ನಡೆಯುತ್ತಿರುವ, ಬಹುಕೋಟಿ ಭ್ರಷ್ಟಾಚಾರ ಪ್ರಕರಣವಾದ ರಾಸಾಯನಿಕ ಖರೀದಿ ಮತ್ತು ರಕ್ತ ಶೇಖರಣಾ ಟ್ಯೂಬ್ ಗಳ ಖರೀದಿ ಹಗರಣವನ್ನು ಮುಚ್ಚಿ ಹಾಕಲು ಯತ್ನಿಸಿರುವುದು ಕಂಡುಬರುತ್ತದೆ. ಬಹುಕೋಟಿ ಭ್ರಷ್ಟಾಚಾರದ ಬಗ್ಗೆ ಇಲಾಖಾಧಿಕಾರಿಗೆ (ಸರಕಾರಕ್ಕೆ) ಪತ್ರ ಬರೆದ ಡಾ.ಶರತ್ ಕುಮಾರ್ ರಾವ್ ಅವರನ್ನು ಶಿಕ್ಷಿಸಲು (ಭ್ರಷ್ಟಾಚಾರ ಪ್ರಕರಣದ ಬಗ್ಗೆ ದೂರು ನೀಡಿದ ಸರಕಾರಿ ನೌಕರರನ್ನು ಮತ್ತೊಂದು ದೂರಿನ ಆಧಾರದಲ್ಲಿ ಶಿಕ್ಷಿಸಬಾರದೆಂಬ ಕಾನೂನು ಇದೆ) ಸುಳ್ಳು ದೂರು ಮತ್ತು ನಕಲಿ ದಾಖಲೆ ಸೃಷ್ಟಿಸಿರುವುದು, ನಿರಂತರವಾಗಿ ಮತ್ತು ವಿವಿಧ ರೀತಿಯಲ್ಲಿ ಮಾನಸಿಕ ಹಿಂಸೆ ನೀಡುತ್ತಿರುವುದು, ಹಗರಣದ ಆರೋಪಕ್ಕೆ ಪೂರಕವಾಗಿ ಲೋಕಾಯುಕ್ತಕ್ಕೆ ಹೇಳಿಕೆ ನೀಡಿದ ಮಹಿಳಾ ಸರಕಾರಿ ಉದ್ಯೋಗಸ್ಥೆಗೆ ಕಿರುಕುಳ ಕೊಡುತ್ತಿರುವುದು ನಡೆಯುತ್ತಿರುವುದು ಸ್ಪಷ್ಟವಾಗುತ್ತದೆ. ಮೇಲಿನ ಈ ಎಲ್ಲಾ ವಿಷಯಗಳ ಬಗ್ಗೆ ತಾವು ಈ ಕೂಡಲೇ ಮಧ್ಯಪ್ರವೇಶ ಮಾಡಿ ನ್ಯಾಯವನ್ನು ಎತ್ತಿ ಹಿಡಿಯಬೇಕೆಂದೂ, ಸರಕಾರದ ಖಜಾನೆಗಾದ ನಷ್ಟವನ್ನು ಆರೋಪಿಗಳಿಂದ ವಸೂಲಿ ಮಾಡಿಸಬೇಕೆಂದೂ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂಬುದಾಗಿಯೂ ನಾವು ಈ ಮೂಲಕ ಅತ್ಯಂತ ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇವೆ.

– ಶ್ರೀರಾಮ ದಿವಾಣ, ಮಾಹಿತಿ ಹಕ್ಕು ಮತ್ತು ಮಾನವ ಹಕ್ಕು ಕಾರ್ಯಕರ್ತ, ಉಡುಪಿ.

ಉಡುಪಿ: ಅಕ್ಟೋಬರ್ 19ರ ಒಳಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಅವರ ಅಮಾನತು ಆದೇಶವನ್ನು ಹಿಂಪಡೆದುಕೊಂಡು, ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗಕ್ಕೆ ನಿಯುಕ್ತಿ ಮಾಡದೇ ಹೋದಲ್ಲಿ ಜಿಲ್ಲಾಸ್ಪತ್ರೆಯ ಮುಂಭಾಗದಲ್ಲಿ ‘ಸತ್ಯಾಗ್ರಹ ಕ್ಲಿನಿಕ್’ ಸ್ಥಾಪಿಸಿ, ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಆರಂಭಿಸುತ್ತೇನೆ. ಜಿಲ್ಲಾಸ್ಪತ್ರೆಯ ಅಧಿಕೃತರು ಹಾಗೂ ಸರಕಾರ ಮಾಡಿದ ದೋಷವನ್ನು ತಾನು ಈ ರೀತಿಯಲ್ಲಿ ಪರಿಹಾರ ಮಾಡಿಕೊಳ್ಳಲು
ನಿರ್ಧರಿಸಿದ್ದೇನೆ. ಸತ್ಯಾಗ್ರಹ ಕ್ಲಿನಿಕ್ ನ ಉದ್ಘಾಟನಾ ಸಮಾರಂಭಕ್ಕೆ ಆರೋಗ್ಯ ಸಚಿವ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಶಾಸಕ ಪ್ರಮೋದ್ ಮಧ್ವರಾಜ್ ಅವರನ್ನು ಆಮಂತ್ರಿಸುತ್ತೇನೆ..

ಹೀಗೆಂದು ಖಡಾಖಂಡಿತ ಮಾತುಗಳಲ್ಲಿ ಘೊಷಿಸಿದವರು ಖ್ಯಾತ ಮನೋವೈದ್ಯರಾದ ಡಾ.ಪಿ.ವಿ. ಭಂಡಾರಿಯವರು. ನಕಲಿ ಅಫಿಡವಿಟ್ ಮುಂದಿಟ್ಟುಕೊಂಡು ಮಹಿಳೆಯೊಬ್ಬರು ನೀಡಿದ ಸುಳ್ಳು ದೂರಿನ ಆಧಾರದಲ್ಲಿ ನ್ಯಾಯಯುತವಾಗಿ ತನಿಖೆ ನಡೆಸದೆ ಅಪ್ರಜಾತಾಂತ್ರಿಕವಾಗಿ ಅಮಾನತು ಶಿಕ್ಷೆಗೆ ಒಳಗಾದ ಡಾ.ಶರತ್ ಕುಮಾರ್ ರಾವ್ ಅವರನ್ನು ಅಮಾನತು ಮಾಡಿ ಒಂದು ವರ್ಷ ಒಂದು ತಿಂಗಳಾದ ಹಿನ್ನೆಲೆಯಲ್ಲಿ, ಈ ಅಮಾನತು ಕ್ರಮವನ್ನು ಖಂಡಿಸಿ, ಇಂದು ಬೆಳಗ್ಗೆ ಜಿಲ್ಲಾಸ್ಪತ್ರೆಯ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು
ಮಾತನಾಡುತ್ತಿದ್ದರು.

ಸತ್ಯಾಗ್ರಹ ಕ್ಲಿನಿಕ್ ಆರಂಭಿಸಿ ಮತ್ತೆ 15 ದಿನಗಳಾದರೂ ಡಾ.ಶರತ್ ಕುಮಾರ್ ರಾವ್ ಅವರ ಅಮಾನತು ಆದೇಶ ಹಿಂಪಡೆಯದಿದ್ದಲ್ಲಿ, ಡಾ.ಶರತ್ ಬೆಳಕಿಗೆ ತಂದ ರಾಸಾಯನಿಕ ಹಗರಣ ಮತ್ತು ಅಮಾನತು ಪ್ರಕಿಯೆಯ ಸಮಗ್ರ ಚಿತ್ರಣ ಮತ್ತು ಇದರ ಹಿಂದೆ ಯಾರ್ಯಾರು ಇದ್ದಾರೆ, ಯಾರು ಏನು ಮಾಡಿದ್ದಾರೆ ಎಂಬಿತ್ಯಾದಿಯಾಗಿ ಸವಿವರ ಮಾಹಿತಿಗಳಿರುವ ‘ಮಿಸ್ಸಿಂಗ್ ಅಫಿಡವಿಟ್’ ಎಂಬ ಪುಸ್ತಕವನ್ನು ಪ್ರಕಟಿಸಿ ಬಿಡುಗಡೆ ಮಾಡಲಾಗುವುದು. ಈ ಪುಸ್ತಕದ ಮೇಲೆ ಬೇಕಾದರೆ ಕೇಸು ದಾಖಲಿಸಬಹುದು. ಪುಸ್ತಕವನ್ನು ಡಾ.ಶರತ್ ಅವರಿಂದಲೇ ಬಿಡುಗಡೆಗೊಳಿಸಲಾಗುವುದು ಎಂದೂ ಡಾ.ಪಿ.ವಿ.ಭಂಡಾರಿ ಸ್ಪಷ್ಟಪಡಿಸಿದರು.

ಇಂದಿನ ಪ್ರತಿಭಟನೆ ಮತ್ತು ಮೌನ ಮೆರವಣಿಗೆ ಹೋರಾಟದ ಮೊದಲ ಹಂತ, ಸತ್ಯಾಗ್ರಹ ಕ್ಲಿನಿಕ್ ಎರಡನೇ ಹಂತ, ಪುಸ್ತಕ ಬಿಡುಗಡೆ ಮೂರನೇ ಹಂತ. ನಾಲ್ಕನೇ ಹಂತವಾಗಿ ತಾನು ಈ
ಪ್ರಕರಣದಲ್ಲಿ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗುವುದಾಗಿ ಡಾ.ಭಂಡಾರಿ ಘೋಷಿಸಿದರು.

ಡಾ.ಶರತ್ ಕುಮಾರ್ ವಿದ್ಯಾರ್ಥಿ ದೆಸೆಯಿಂದಲೇ ತನ್ನ ಸಹಪಾಠಿ. ಆತ ಎಂತವನೆಂದು ತನಗೆ ಚೆನ್ನಾಗಿಯೇ ತಿಳಿದಿದೆ. ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾದ ಡಾ.ಶರತ್ ಕುಮಾರ್ ರಾವ್, ಮಹಿಳೆಯ ಕೈನಿಂದ ಹಣ ಸಾಲ ಪಡೆದಿದ್ದಾನೆಂಬುದು ಅಪ್ಪಟ ಸುಲ್ಳು. ಡಾ.ಶರತ್ ಭ್ರಷ್ಟ ಅಲ್ಲ ಎಂಬುದನ್ನು ತಾನು ಯಾವಾಗ ಎಲ್ಲಿ ಬೇಕಾದರೂ ಹೇಳಬಲ್ಲೆ. ಇಂಥ ಪ್ರಾಮಾಣಿಕರಿಗೆ ಹೀಗೆ ಶಿಕ್ಷೆ ನೀಡುವುದು, ಭ್ರಷ್ಟರಿಗೆ ರಕ್ಷಣೆ ನೀಡಲಾಗುತ್ತಿದ್ದು, ಇದು ದುರಂತ ಎಂದು ಡಾ.ಪಿ.ವಿ.ಭಂಡಾರಿ ಖೇದ ವ್ಯಕ್ತಪಡಿಸಿದರು.

ಕಾನೂನಿನ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಡಾ.ರತ್ ಅವರನ್ನು ಅಮಾನತು ಮಾಡುವ ಪ್ರಕ್ರಿಯೆಯಲ್ಲಿ, ಅಮಾನತು ಮಾಡಿದ ಬಳಿಕ ಪಾಲನೆ ಮಾಡಬೇಕಾದ ನಿಯಮಗಳಲ್ಲಿ ಸರಕಾರ ಯಾವುದನ್ನೂ ಪಾಲನೆ ಮಾಡುತಿಲ್ಲ, ಮಾಡಿಲ್ಲ. ಜೀವನಾಂಶವನ್ನೂ ಸರಿಯಾಗಿ ನೀಡುತ್ತಿಲ್ಲ. ಇಲಾಖಾ ವಿಚಾರಣೆಯನ್ನೂ ಆರಂಭಿಸುತ್ತಿಲ್ಲ. ಇಲಾಖಾ ವಿಚಾರಣೆಗೆ ನಿಯುಕ್ತಿಯಾದ ವಿಚಾರಣಾಧಿಕಾರಿ ಈ ಪ್ರಕರಣವನ್ನು ವಿಚಾರಣೆ ನಡೆಸಲು ತನ್ನಿಂದ ಸಾಧ್ಯವಿಲ್ಲ ಎಂದು ಪ್ರಕರಣದಿಂದ ಹಿಂದೆ ಸರಿದಿದ್ದಾರೆ. ಇದೆಲ್ಲ ಏನು, ಇದರ ಹಿಂದಿರುವ ಕಾಣದ ಕೈಗಳು ಯಾವುದು ಎಂದು ಡಾ.ಭಂಡಾರಿ ಖಾರವಾಗಿ ಪ್ರಶ್ನಿಸಿದರು.

ಡಾ.ಶರತ್ ಅಮಾನತು ಆದ ಲಾಗಾಯ್ತಿನಿಂದ ಜಿಲ್ಲಾಧಿಕಾರಿಗಳು, ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಸಚಿವರು, ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳು ಸಹಿತ ಅನೇಕರಿಗೆ ಹಲವಾರು ಬಾರಿ ಪತ್ರ ಬರೆದಿದ್ದೇನೆ. ಆದರೆ ಯಾರೊಬ್ಬರದೂ ಕನಿಷ್ಟ ಸ್ಪಂದನೆಯೂ ಇಲ್ಲ. ಇದೀಗ ಅಂತಿಮವಾಗಿ ಬೀದಿಗಿಳಿದು ಹೋರಾಟ ಆರಂಭಿಸಿದ್ದೇನೆ ಎಂದು ಡಾ.ಪಿ.ವಿ.ಭಂಡಾರಿ ತಿಳಿಸಿದರು.

ತನ್ನ ಕರೆಗೆ ಓಗೊಟ್ಟು ತನ್ನ ನಿರೀಕ್ಷೆಗೂ ಮೀರಿ ಪ್ರತಿಭಟನೆಯಲ್ಲಿ ಭಾಗವಹಿಸಲು ಪ್ರಮುಖರನೇಕರು ಆಗಮಿಸಿರುವುದರಿಂದ ಹೋರಟ ಮುಂದುವರಿಸಲು ತನಗೆ ಸ್ಪೂತರ್ಿ ಸಿಕ್ಕಿದೆ. ಈ ಹೋರಾಟವನ್ನು ನ್ಯಾಯ ಸಿಗುವವರೆಗೆ, ಉಸಿರು ಇರುವ ವರೆಗೆ ಮೂಮದುವರಿಸುವುದಾಗಿಯೂ ಡಾ.ಭಂಡಾರಿ ಹೇಳಿದರು.

ಡಾ.ಶಾಲಿನಿ ಶರ್ಮ, ಡಾ.ದೀಪಕ್ ಮಲ್ಯ, ಡಾ.ವೀಣಾ, ಶ್ರೀಧರ ಕಿನ್ನಿಮೂಲ್ಕಿ, ವೇದಾವತಿ, ಚಿದಾನಂದ ಮಲ್ಯ, ಚಂದ್ರಶೇಖರ ಹೆಗ್ಡೆ, ಶಿವರಾಜ್, ಭಾಸ್ಕರ ರೈ, ಜೈ ಕೃಷ್ಣ ಬ್ರಹ್ಮಾವರ, ಬಾಲಕೃಷ್ಣ, ಸರಳಾ ಕಾಂಚನ್, ನಾಗೇಶ್, ರಾಜು ಪೂಜಾರಿ, ಜೀವನ್ ಲೂವಿಸ್, ನಾಗರಾಜ ಮೂರ್ತಿ, ಸುಚಿತ್ರಾ, ಪವಿತ್ರಾ, ಶ್ರೀಮತಿ ಪದ್ಮಾ, ಲೋಹಿತ್, ಪ್ರವೀಣ್, ಶ್ರೀಧರ ಗಾಣಿಗ, ಪ್ರಶಾಂತ್, ದಿನೇಶ್ ಪೂಜಾರಿ ಮೊದಲಾದ ನೂರಾರು ಮಂದಿ ಪ್ರತಿಭಟನಾ ಮೌನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಉಡುಪಿ: ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ಪ್ರಾಮಾಣಿಕ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಅವರನ್ನು ಅನ್ಯಾಯವಾಗಿ ಅಮಾನತುಗೊಳಿಸಿ ಒಂದು ವರ್ಷ ಕಳೆದರೂ ಅಮಾನತು ಆದೇಶವನ್ನು ಹಿಂತೆಗೆದುಕೊಳ್ಳದೆ ಅಮಾನವೀಯತೆ ಪ್ರದರ್ಶಿಸುತ್ತಿರುವ ಸರಕಾರದ ಕ್ರಮವನ್ನು ಖಂಡಿಸಿ, ಅಮಾನತು ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಖ್ಯಾತ ಮನೋವೈದ್ಯರಾದ ಡಾ.ಪಿ.ವಿ.ಭಂಡಾರಿಯವರ ನೇತೃತ್ವದಲ್ಲಿ ನೂರಾರು ಮಂದಿ ಇಂದು ಉಡುಪಿ ಜಿಲ್ಲಾಸ್ಪತ್ರೆಯಿಂದ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೌನ ಪ್ರತಿಭಟನೆ ನಡೆಸಿದರು.

ಬೆಳಗ್ಗೆ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನಾಕಾರರನ್ನು ಉದ್ಧೇಶಿಸಿ ಮಾತನಾಡಿದ ಡಾ.ಭಂಡಾರಿ, ಮುಂದಿನ 15 ದಿನಗಳೊಳಗೆ ಡಾ.ಶರತ್ ಕುಮಾರ್ ರಾವ್ ಅವರ ಅಮಾನತು ಆದೇಶವನ್ನು ಹಿಂತೆಗೆದುಕೊಳ್ಳದೇ ಇದ್ದಲ್ಲಿ, ಜಿಲ್ಲಾಸ್ಪತ್ರೆ ಮುಂದೆ ಸತ್ಯಾಗ್ರಹ ಕ್ಲಿನಿಕ್ ಆರಂಭಿಸಿ, ಬಡವರಿಗೆ ಉಚಿತವಾಗಿ ಚಿಕಿತ್ಸೆ ಒದಗಿಸುವ ಮೂಲಕ ಹೋರಾಟವನ್ನು ಮುಂದುವರಿಸುವುದಾಗಿ ಘೋಷಿಸಿದರು.

ಸತ್ಯಾಗ್ರಹ ಕ್ಲಿನಿಕ್ ಆರಂಭಿಸಿದ ಬಳಿಕವೂ ಮುಂದಿನ 15 ದಿನಗಳೊಳಗೆ ಅಮಾನತು ಆದೇಶವನ್ನು ಹಿಂತೆಗೆದುಕೊ:ಳ್ಳದೇ ಇದ್ದಲ್ಲಿ ಇಡೀ ಹಗರಣದ ಹಿನ್ನೆಲೆ, ಇದರ ಹಿಂದಿರುವ ಕೈಗಳ ಸಹಿತ ಸಮಗ್ರ ಮಾಹಿತಿ ಇರುವ ಪುಸ್ತಕವನ್ನು ಬಿಡುಗಡೆಗೊಳಿಸುವುದಾಗಿಯೂ, ನಂತರ ಕಾನೂನು ಹೋರಾಟ ನಡೆಸುವುದಾಗಿ ಡಾ.ಭಂಡಾರಿ ಪ್ರಕಟಿಸಿದರು.

ಪ್ರತಿಭಟನಾ ಸಭೆಯ ಬಳಿಕ ಪ್ರತಿಭಟನಾಕಾರರು ಬಾಯಿಗೆ ಬಿಳಿ ಬಟ್ಟೆ ಮತ್ತು ತೋಳಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು, ಘೋಷಣೆಗಳಿರುವ ಪ್ಲೆ ಕಾರ್ಡ್ ಹಿಡಿದುಕೊಂಡು ಎಂಡ್ ಪಾಯಿಂಟ್ ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೌನ ಮೆರವಣಿಗೆ ನಡೆಸಿದರು.

ಐಎಂಎ ಅಧ್ಯಕ್ಷರಾದ ಡಾ.ಅಶೋಕ್ ಕುಮಾರ್ ಓಕುಡೆ, ಡಾ.ಅರವಿಂದ ನಾಯಕ್ ಅಮ್ಮುಂಜೆ, ಡಾ.ವಿರೂಪಾಕ್ಷ ದೇವರಮನಿ, ಡಾ.ಛಾಯಾಲತಾ, ಡಾ.ಗೌರಿ, ಡಾ.ಗಿರಿಜಾ, ಡಾ.ಶುಭ ಗೀತಾ, ಡಾ.ವಾಸುದೇವ, ಡಾ.ಸುನೀತಾ ಶೆಟ್ಟಿ, ಕೆ.ಎಂ.ಉಡುಪ, ಸಿ.ಎಸ್.ನಂಬಿಯಾರ್, ವೆರೋನಿಕಾ ಕರ್ನೇಲಿಯೋ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಪ್ರಸನ್ನ ಶೆಟ್ಟಿ ಹೆಬ್ರಿ, ಪದ್ಮಾಸಿನಿ, ಉದಯ ಕುಮಾರ್ ಶೆಟ್ಟಿ ಇನ್ನಾ, ಚಂದ್ರಿಕಾ ಶೆಟ್ಟಿ, ನಾಗಭೂಷಣ ಶೇಟ್, ಸ್ವಪ್ನಾ ಶರತ್, ರಮೇಶ್ ಕಾಂಚನ್, ವಿಶು ಶೆಟ್ಟಿ ಅಂಬಲಪಾಡಿ, ದಿವಾಕರ ಕುಂದರ್, ವಾಸುದೇವ ಕಾಮತ್ ಕುಂದಾಪುರ, ರವಿರಾಜ್ ಎಚ್.ಪಿ., ಮಹೇಶ್ ಉಡುಪ, ರೋಹಿತ್ ಶೆಟ್ಟಿ ಬೈಲೂರು, ಚಂದ್ರಶೇಖರ ಶೆಟ್ಟಿ, ಸೌಜನ್ಯಾ ಶೆಟ್ಟಿ, ಕಿರಣ್, ರೊನಾಲ್ಡ್ ಕ್ಯಾಸ್ತಲಿನೋ, ಶ್ರೀರಾಮ ದಿವಾಣ ಸಹಿತ ಅನೇಕ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವರದಿ : ಶ್ರೀರಾಮ ದಿವಾಣ.
ಉಡುಪಿ: ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೇಷಪ್ಪ ಹಾಗೂ ಉಡುಪಿ ತಾಲೂಕು ವಿಸ್ತರಣಾಧಿಕಾರಿ ಗಾಣಿಗ ಮೊದಲಾದವರು ಹಾಸ್ಟೆಲ್ ಹೆಸರಿನಲ್ಲಿ ಭಾರೀ ಬಾಡಿಗೆ ದಂಧೆ ನಡೆಸುತ್ತಿದ್ದು, ಅಧಿಕಾರಿಗಳ ಈ ಬಾಡಿಗೆ ದಂಧೆಯಿಂದಾಗಿ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುವಂಥ ಶೋಚನೀಯ ಪರಿಸ್ಥಿತಿ ಸೃಷ್ಟಿಯಾಗಿದೆ.

ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ, ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ, ಶ್ರೀಮತಿ ಇಂದಿರಾ ಗಾಂಧಿ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಮಹಿಳಾ ನರ್ಸಿಂಗ್ ವಿದ್ಯಾರ್ಥಿ ನಿಲಯ ಸಹಿತ ಒಟ್ಟು 13 ವಿದ್ಯಾರ್ಥಿ ನಿಲಯಗಳಿಗೆ ಮತ್ತು 3 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಉಡುಪಿ ಜಿಲ್ಲೆಯಲ್ಲಿ ಸ್ವಂತ ಕಟ್ಟಡವಿಲ್ಲದೆ ಖಾಸಗಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿವೆ.

25 ವಿದ್ಯಾರ್ಥಿ ನಿಲಯಗಳು ಮತ್ತು 2 ವಸತಿ ಶಾಲೆಗಳು ಮಾತ್ರ ಸ್ವಂತ ಕಟ್ಟಡದಲ್ಲಿದೆ. ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಳಿದ ಅಷ್ಟೂ ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ಶಾಲೆಗಳು ಒಂದಲ್ಲ ಒಂದು ಗಂಭೀರ ಕೊರತೆಯಿಂದ ನಲುಗುತ್ತಿದೆ. ವಿದ್ಯಾರ್ಥಿ ನಿಲಯಗಳ ಪೈಕಿ 2 ವಿದ್ಯಾರ್ಥಿ ನಿಲಯಗಳು ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆಯಾದರೂ, ಇವುಗಳಿಗೆ ಇಲಾಖೆ ಬಾಡಿಗೆ ಪಾವತಿಸುತ್ತಿಲ್ಲ. ಉಚಿತವಾಗಿ ಲಭ್ಯವಾಗಿರುವುದೇ ಇದಕ್ಕೆ ಕಾರಣವೆನ್ನಲಾಗುತ್ತಿದೆ.

ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ಶಾಲೆಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಇಲಾಖಾಧಿಕಾರಿಗಳಿಗೆ ಬಹುದೊಡ್ಡ ವರದಾನವಾಗಿ ಪರಿಣಮಿಸಿದೆ. ಒಂದೊಂದು ಹಾಸ್ಟೆಲ್ ಕಟ್ಟಡಕ್ಕೂ 25ರಿಂದ 50 ಸಾವಿರ ರು. ವರೆಗೂ ಇಲಾಖೆ ಬಾಡಿಗೆ ನಿಗದಿ ಮಾಡಿದೆ. ದೊಡ್ಡ ಮೊತ್ತದ ಬಾಡಿಗೆ ದರವನ್ನು ಕೇವಲ ಕಡತಗಳಿಗಾಗಿ ಇಲಾಖಾಧಿಕಾರಿಗಳು ನಿಗದಿಪಡಿಸುತ್ತಾರೆ. ಬಾಡಿಗೆ ದರ ನಿಗದಿಪಡಿಸಿದ ಬಳಿಕ ಬಾಡಿಗೆ ದರವನ್ನು ಬಾಡಿಗೆ ಕಟ್ಟಡದ ಮಾಲೀಕರಿಗೆ ಪಾವತಿಸದೆ ಕಡಿಮೆ ಮೊತ್ತ ಪಾವತಿಸಿ, ಉಳಿದ ಮೊತ್ತವನ್ನು ತಮ್ಮ ಸ್ವಂತಕ್ಕಾಗಿ ತಮ್ಮಲ್ಲೇ ಉಳಿಸಿಕೊಳ್ಳುತ್ತಾರೆ.

ಅಂದರೆ, ಇದೊಂದು ಕಮಿಷನ್ ದಂಧೆಯಾಗಿ ಹೋಗಿದೆ ಎನ್ನಲಾಗುತ್ತಿದೆ. ಇಲ್ಲಿ ಬಾಡಿಗೆ ಕಟ್ಟಡದ ಮಾಲೀಕರೂ ಸಹ ಇಲಾಖಾಧಿಕಾರಿಗಳ ಜೊತೆ ಮೊದಲೇ ಹೊಂದಾಣಿಕೆ ಮಾಡಿಕೊಂಡಿರುತ್ತಾರೆ. ಅವರಿಗೂ ಇದೊಂದು ಸಹಜವಾದ ವ್ಯವಹಾರವೇ ಆಗಿರುವುದೇ
ಇಲಾಖಾಧಿಕಾರಿಗಳ ಇಂಥ ಬಾಡಿಗೆ ದಂಧೆ ಯಾವುದೇ ಅಡೆತಡೆಯೂ ಇಲ್ಲದೆ ಮುಂದುವರಿದುಕೊಂಡು ಬರಲು ಕಾರಣವೆನ್ನಲಾಗಿದೆ.

ಇಲ್ಲಿ ಇನ್ನೊಂದು ಒಳ ವ್ಯವಹಾರ ಮತ್ತು ರಾಜಕೀಯವೂ ಇದೆ. ಅದು ಕೊಡು ಕೊಳುವಿಕೆ. ಇಲಾಖಾಧಿಕಾರಿಗಳು ಇತರ ಇಲಾಖೆಗಳ ಅಧಿಕಾರಿಗೊಂದಿಗೆ ಮತ್ತು ರಾಜಕಾರಣಿಗಳೊಂದಿಗೆ ನಡೆಸುವ ವ್ಯವಹಾರವಿದು. ಇದರಿಂದ ಇಬ್ಬರಿಗೂ ಪ್ರತ್ಯಕ್ಷ ಮತ್ತು ಪರೋಕ್ಷವಾದ ಕೆಲವೊಂದು ಲಾಭಗಳಿವೆ.

ಉದಾಹರಣೆಗೆ ಹೇಳುವುದಾದರೆ, ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ ಮತ್ತು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಮಹಿಳಾ ನರ್ಸಿಂಗ್ ವಿದ್ಯಾರ್ಥಿ ನಿಲಯಗಳಿರುವುದು ಉಡುಪಿ ನಗರದ ಬಲಾಯಿಪಾದೆಯಲ್ಲಿರುವ ಬಾಡಿಗೆ ಕಟ್ಟಡದಲ್ಲಿ. ಈ ಬಾಡಿಗೆ ಕಟ್ಟಡ ಸರಕಾರಿ ಅಧಿಕಾರಿಯೊಬ್ಬರಿಗೆ ಸೇರಿದ್ದು.

ಇತ್ತೀಚೆಗಿನವರೆಗೂ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ ಇದ್ದುದು ಉಡುಪಿ ವಿದಾನಸಭಾ ಕ್ಷೇತ್ರ ವ್ಯಾಪ್ತಿಯ ತೊಟ್ಟಂ ಎಂಬಲ್ಲಿನ ಬಾಡಿಗೆ ಕಟ್ಟಡದಲ್ಲಿ. ಈ ಬಾಡಿಗೆ ಕಟ್ಟಡವನ್ನು ಉದ್ಘಾಟಿಸಿದವರು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಮೋದ್ ಮಧ್ವರಾಜ್ ಅವರು. ಅಂದರೆ ಈ ಕಟ್ಟಡದ ಮಾಲೀಕರು ಪ್ರಮೋದ್ ಮಧ್ವರಾಜ್ ಅವರಿಗೆ ಬೇಕಾದವರು.

ಬಾಡಿಗೆ ಕಟ್ಟದ ಮಾಲೀಕರಿಗೂ, ರಾಜಕಾರಣಿಗಳಿಗೂ, ಸರಕಾರಿ ಅಧಿಕಾರಿಗಳಿಗೂ ನಡುವೆ ಕೊಡು ಕೊಳ್ಳುವಿಕೆ ಇರುವುದರ ಪರಿಣಾಮವೇ, ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದಿದ್ದರೂ ಹಾಸ್ಟೆಲ್ಗಳನ್ನು ಇಂಥ ನಿರ್ಧಿಷ್ಟ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಗಿರುತ್ತದೆ. ಈ ಒಳ ಒಪ್ಪಂದದಿಂದಾಗಿ ಇವುಗಳ ಫಲಾನುಭವಿಗಳಿಗೆ ಪರಸ್ಪರ ಲಾಭ ಮಾಡಿಕೊಳ್ಳುತ್ತಾರೆ.

3 ವರ್ಷದಿಂದ ಶೇಷಪ್ಪರೇ ಪ್ರಭಾರ..!

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯಾದ ಶೇಷಪ್ಪನವರೇ, ಕಳೆದ ಮೂರು ವರ್ಷಗಳಿಂದ ಜಿಲ್ಲಾ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಭಾರ ಅಧಿಕಾರಿಯಾಗಿದ್ದಾರೆ. ಶೇಷಪ್ಪನವರು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಮಾರ್ ಸೊರಕೆಯವರ ಜಾತಿಗೆ ಸೇರಿದವರಾದ ಕಾರಣ ಹಾಗೂ ಸೊರಕೆಯವರ ಖಾಸಗಿ ಆಪ್ತ ಸಹಾಯಕನಂತೆ ನಡೆದುಕೊಳ್ಳುತ್ತಿರುವುದರಿಂದಲೇ ಶೇಷಪ್ಪ ಅವರು ಎರಡೂ ಇಲಾಖೆಗಳ ಅಧಿಕಾರಿಯಾಗು ಮುಮದುವರಿಯಲು ಕಾರಣವೆನ್ನಲಾಗಿದೆ.

ಎರಡು ಇಲಾಖೆಗಳೂ ಸಾಮಾನ್ಯ ಇಲಾಖೆಗಳೇನೂ ಅಲ್ಲ. ಅನೇಕ ಬಹುದೊಡ್ಡ ಜವಾಬ್ದಾರಿಗಳಿರುವ ಎರಡೂ ಇಲಾಖೆಗಳನ್ನು ಒಬ್ಬರೇ ವ್ಯಕ್ತಿ ನಿರ್ವಹಿಸುವುದು ಕಷ್ಟಸಾಧ್ಯವಾಗಿದೆಯಾದರೂ, ಕಳೆದ ಮೂರು ವರ್ಷಗಳಿಂದಲೂ ಒಬ್ಬರೇ ವ್ಯಕ್ತಿಯನ್ನು ಎರಡೂ ಇಲಾಖೆಗಳ ಅಧಿಕಾರಿಯನ್ನಾಗಿ ಮುಂದುವರಿಸಿರುವುದು ಜಾತಿ, ಹಣ ಮತ್ತು ರಾಜಕೀಯ ಲಾಬಿಯಲ್ಲದೇ ಬೇರೇನೂ ಅಲ್ಲ.

ಇವರೆಲ್ಲ ಏನೂ ಬೇಕಾದರೂ ಮಾಡಿಕೊಳ್ಳಲಿ, ಆದರೆ ಇವರ ಸ್ವಹಿತಾಸಕ್ತಿಯ ಕಾರ್ಯಕ್ಕಾಗಿ ವಿದ್ಯಾರ್ಥಿ – ವಿದ್ಯಾರ್ಥಿನಿಯರ ದಿನಚರಿಯನ್ನು ಯಾಕಾಗಿ ಇವರು ನರಕವನ್ನಾಗಿ ಮಾಡಬೇಕು ?