Posts Tagged ‘vinaya kumar sorake mla’

ಉಡುಪಿ: ರಾಜ್ಯದ 19 ಜಿಲ್ಲೆಗಳಲ್ಲಿ 2012-13 ಮತ್ತು 2013-14ನೇ ಸಾಲಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ನಡೆದ ರಾಸಾಯನಿಕ ಮತ್ತು ರಕ್ತ ಶೇಖರಣಾ ಟ್ಯೂಬ್ ಗಳ ಖರೀದಿಯಲ್ಲಿನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಹಾಲಿ ಆರೋಗ್ಯ ಸಚಿವ ಯು.ಟಿ.ಖಾದರ್, ಮಾಜಿ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿಂದಿನ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್, ನಿರ್ದೇಶಕ ಡಾ.ಧನ್ಯ ಕುಮಾರ್, ಆಯುಕ್ತ ವಿ.ಬಿ.ಪಾಟೀಲ್, ವೈದ್ಯಕೀಯ ಸಹ ನಿದೇಶಕ ಡಾ.ಕೆ.ಬಿ. ಈಶ್ವರಪ್ಪ, ರಾಜ್ಯ ಮಟ್ಟದ ಇತರ ಅಧಿಕಾರಿಗಳು, 19 ಜಿಲ್ಲೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಸರ್ಜನ್ ರವರು, ಜಿಲ್ಲಾಸ್ಪತ್ರೆಗಳ ಇತರ ಅಧಿಕಾರಿಗಳು, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಪ್ರಭಾವೀ ಗುತ್ತಿಗೆದಾರರ ಸಹಿತ ಅನೇಕರನ್ನು ವಿಚಾರಣೆಗೆ ಒಳಪಡಿಸಬೇಕಾದ ಅನಿವಾರ್ಯತೆ ಇರುವುದರಿಂದ ಬಹುಕೋಟಿ ರಾಸಾಯನಿಕ ಹಗರಣವನ್ನು ಕೂಡಲೇ ಸಿಬಿಐ ತನಿಖೆಗೆ ಹಸ್ತಾಂತರಿಸಬೇಕು ಎಂಬ ಪ್ರಮುಖ ಬೇಡಿಕೆಯೊಂದಿಗೆ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ, ಮಾನವಹಕ್ಕು ಮತ್ತು ಮಾಹಿತಿಹಕ್ಕು ಕಾರ್ಯಕರ್ತ ಶ್ರೀರಾಮ ದಿವಾಣ ಹಾಗೂ ಅವರ ಬೆಂಬಲಿಗರು ಸೆಪ್ಟೆಂಬರ್ 6ರಂದು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಒಂದು ದಿನದ ಸತ್ಯಾಗ್ರಹ ನಡೆಸಿದರು.

ರಾಸಾಯನಿಕ ಹಗರಣದ ಬಗ್ಗೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅವರಿಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ದಕ್ಷ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಜೆ. ಅವರು ಈ ಮೇಲ್ (madan17@gmail.com) ಮೂಲಕ ತಾರೀಕು 23.03.2013ರಂದು ಮಾಹಿತಿ ನೀಡಿದ್ದರು. ಮಾಹಿತಿ ನೀಡಿದ ಬಳಿಕ ಡಾ.ಶರತ್ ಕುಮಾರ್ ರಾವ್ ಅವರನ್ನು ಆರೋಗ್ಯ ಇಲಾಖೆಯ ಕೆಲವು ಮಂದಿ ನಿರ್ಧಿಷ್ಟ ಅಧಿಕಾರಿಗಳು ಹಾಗೂ ಪ್ರಭಾವೀ ಸ್ಥಾಪಿತ ಹತಾಸಕ್ತಿಯುಳ್ಳ ಖಾಸಗಿ ವ್ಯಕ್ತಿಗಳು ಜೊತೆ ಸೇರಿಕೊಂಡು ಅತ್ಯಂತ ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಿ ನಖಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಯಿಂದ ಸುಳ್ಳು ದೂರು ಕೊಡಿಸಿ, ಈ ಸುಳ್ಳು ದೂರಿನ ಆಧಾರದಲ್ಲಿಯೇ ಸರಿಯಾಗಿ ತನಿಖೆಯನ್ನೂ ನಡೆಸದೆ ತಾರೀಕು 07.09.2013ರಂದು ಅಮಾನತು ಪಡಿಸಿದ್ದಾರೆ. ಅಮಾನತುಪಡಿಸಿ 07.09.2014ಕ್ಕೆ ಒಂದು ವರ್ಷವಾಗುತ್ತಿದೆಯಾದರೂ, ಇನ್ನೂ ಸಹ ಕರ್ತವ್ಯಕ್ಕೆ ಮರು ನೇಮಕಾತಿ ಮಾಡದೆ ವಿವಿಧ ರೀತಿಯಲ್ಲಿ ಮಾನಸಿಕ ಹಿಂಸೆ ನೀಡುತ್ತಾ ಸಹಜ ನ್ಯಾಯವನ್ನು ನಿರಾಕರಿಸುತ್ತಿದೆ. ಆದುದರಿಂದ, ತಕ್ಷಣವೇ ಡಾ.ಶರತ್ ಅವರನ್ನು ಕರ್ತವ್ಯಕ್ಕೆ ಮರು ನೇಮಕಾತಿ ಮಾಡಬೇಕು ಮತ್ತು ಡಾ.ಶರತ್ ವಿರುದ್ಧ ಷಡ್ಯಂತ್ರ ಹೂಡಿದ, ಸಹಜ ನ್ಯಾಯವನ್ನು ನಿರಾಕರಿಸಿದ (ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯೂ ಆಗಿದೆ) ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಪಡಿಸಿ, ಆರೋಗ್ಯ ಇಲಾಖೆ ಹೊರತುಪಡಿಸಿದ ಉನ್ನತ ಮಟ್ಟದ ಅಧಿಕಾರಿಗಳಿಂದ ಅಥವಾ ಉನ್ನತ ಮಟ್ಟದ ತನಿಖಾ ಸಂಸ್ಥೆಗಳಿಂದ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸತ್ಯಾಗ್ರಹದ ಮೂಲಕ ಶ್ರೀರಾಮ ದಿವಾಣ ಹಾಗೂ ಇತರರು ಸರಕಾರವನ್ನು ಒತ್ತಾಯಿಸಿದರು.

ರಾಸಾಯನಿಕ ಹಗರಣದ ಬಗ್ಗೆ ಡಾ.ಶರತ್ ಕುಮಾರ್ ರಾವ್ ಅವರು ತಾರೀಕು 23.03..2013ರಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅವರಿಗೆ ಮದನ್ ಗೋಪಾಲ್ ಅವರ madan17@gmail.com ಎಂಬ ಈ ಮೇಲ್ ಐಡಿಗೆ ದೂರು ನೀಡಿದ್ದರು. ಈ ದೂರಿನ ಬಗ್ಗೆ ತನಿಖೆ ನಡೆಸುವಂತೆ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅವರು ಇಲಾಖಾ ನಿರ್ದೇಶಕರಾದ ಡಾ.ಧನ್ಯ ಕುಮಾರ್ ಅವರಿಗೆ ಆದೇಶಿಸದಿದ್ದರೂ ಸಹ, ಧನ್ಯ ಕುಮಾರ್ ಅವರು ಪ್ರ. ಕಾರ್ಯದರ್ಶಿ ಮದನ್ ಗೋಪಾಲ್ ಅವರ ಈ ಮೇಲ್ ಐಡಿಯಿಂದ ಅಡ್ಡ ದಾರಿಯ ಮೂಲಕ ದೂರಿನ ಪ್ರತಿಯನ್ನು ಕಳವು (?) ಮಾಡಿದ್ದಾರೆ ಮತ್ತು ಈ ದೂರಿನ ಬಗ್ಗೆ ತನಿಖೆ ನಡೆಸುವಂತೆ ವೈದ್ಯಕೀಯ ಸಹ ನಿರ್ದೇಶಕ ಡಾ.ಕೆ.ಬಿ. ಈಶ್ವರಪ್ಪರಿಗೆ ಸೂಚಿಸಿದ್ದಾರೆ. ಡಾ.ಕೆ.ಬಿ.ಈಶ್ವರಪ್ಪ ಅವರು ಪಕ್ಷಪಾತದಿಂದ ಕೂಡಿದ ತನಿಖೆ ನಡೆಸಿ ಭ್ರಷ್ಟರನ್ನು ರಕ್ಷಿಸಿದ್ದಾರೆ. ಪ್ರಾಮಾಣಿಕ ವೈದ್ಯಾಧಿಕಾರಿ ಡಾ.ಶರತ್ ಅವರನ್ನು ಅಮಾನತುಪಡಿಸಲು ಕಾರಣಕರ್ತರಾಗಿದ್ದಾರೆ. ಆದುದರಿಂದ, ಮದನ್ ಗೋಪಾಲ್ ಅವರ ಈ ಮೇಲ್ ಐಡಿಯಿಂದ ಡಾ.ಶರತ್ ಅವರ ದೂರಿನ ಪ್ರತಿಯನ್ನು ಕಳವು ಮಾಡಿದ (ಹೀಗೆ ಮಾಡುವುದು ಐಟಿ ಕಾಯಿದೆ ಪ್ರಕಾರ ಅಪರಾಧವಾಗಿದೆ) ಡಾ.ಧನ್ಯ ಕುಮಾರ್ ಹಾಗೂ ಬಹುಕೋಟಿ ಹಗರಣವನ್ನು ಮುಚ್ಚಿ ಹಾಕುವ ಮೂಲಕ ಭ್ರಷ್ಟರನ್ನು ರಕ್ಷಿಸಿ, ದಕ್ಷ ವೈದ್ಯಾಧಿಕಾರಿ ಡಾ.ಶರತ್ ಅವರನ್ನು ಶಿಕ್ಷಿಸುವ ಏಕೈಕ ಉದ್ಧೇಶದಿಂದಲೇ ನಕಲಿ ತನಿಖೆ ನಡೆಸಿದ ಡಾ.ಕೆ.ಬಿ.ಈಶ್ವರಪ್ಪ ಇವರನ್ನು ಕೂಡಲೇ ಅಮಾನತುಪಡಿಸಬೇಕು ಮತ್ತು ಇವರುಗಳ ವಿರುದ್ಧ ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕೆಂದು ಶ್ರೀರಾಮ ದಿವಾಣ ಆಗ್ರಹಿಸಿದ್ದಾರೆ.

ಹಗರಣದ ತನಿಖೆ ನಡೆಸಿದ ಆರೋಗ್ಯ ಇಲಾಖಾ ಜಾಗೃತ ಕೋಶದ ಮುಖ್ಯ ಜಾಗೃತಾಧಿಕಾರಿ ಡಾ.ಕೆ.ಎಚ್.ನರಸಿಂಹಮೂರ್ತಿಯವರನ್ನು ಯಾರ ಒತ್ತಡಕ್ಕೆ ಒಳಗಾಗಿ, ಯಾಕಾಗಿ ವರ್ಗಾವಣೆ ಮಾಡಲಾಯಿತು ? ಡಾ.ನರಸಿಂಹಮೂರ್ತಿಯವರು ಸಲ್ಲಿಸಿದ ತನಿಖಾ ವರದಿ ಮೇಲೆ ಇಲಾಖೆ ತೆಗೆದುಕೊಂಡ ಕ್ರಮವೇನು ? ಎಂಬುದನ್ನು ಆರೋಗ್ಯ ಇಲಾಕಖೆ ಹೊರತುಪಡಿಸಿ ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಹಾಗೂ ಡಾ.ನರಸಿಂಹಮೂರ್ತಿಯವರು ನಡೆಸಿದ ತನಿಖಾ ವರದಿಯನ್ನು ಕೂಡಲೇ ಬಹಿರಂಗಪಡಿಸಬೇಕೆಂದು ಸತ್ಯಾಗ್ರಹ ನಿರತರು ಒತ್ತಾಯಿಸಿದರು.

ಉಡುಪಿ ಜಿಲ್ಲಾ ಸರಕಾರಿ ಅಸ್ಪತ್ರೆಗೆ ಸಂಬಂಧಿಸಿದಂತೆ ಮಾತ್ರ, ಬಹುಕೋಟಿ ರಾಸಾಯನಿಕ ಹಗರಣದ ಬಗ್ಗೆ ಕರ್ನಾಟಕ ಜನಪರ ವೇದಿಕೆಯು ನೀಡಿದ ಪತ್ರಿಕಾ ಹೇಳಿಕೆಯ ಆಧಾರದಲ್ಲಿ ಸುಮೊಟೊ ಆಗಿ ಕರ್ನಾಟಕ ಲೋಕಾಯುಕ್ತ ಇಲಾಖೆ ತನಿಖೆ ಕೈಗೆತ್ತಿಕೊಂಡಿದ್ದು, ಈ ಪ್ರಕರಣದಲ್ಲಿ ಸಾಕ್ಷ್ಯ ನುಡಿದ ಮಹಿಳಾ ಸಾಕ್ಷಿದಾರರಿಗೆ ಅಧಿಕಾರಿಗಳು ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಮೋದ್ ಮದ್ವರಾಜ್ ನಿರಂತರವಾಗಿ ಕಿರುಕುಳ ಕೊಡುತ್ತಿದ್ದು, ಈ ಬಗ್ಗೆ ಸಂತ್ರಸ್ತ ಮಹಿಳೆ ಉಡುಪಿ ಜಿಲ್ಲಾಧಿಕಾರಿಯವರಿಗೆ ಮೂರು ಬಾರಿ ಪ್ರತ್ಯೇಕವಾಗಿ ಲಿಖಿತ ದೂರು ಸಲ್ಲಿಸಿದರೂ ಜಿಲ್ಲಾಧಿಕಾರಿಗಳಾದ ಡಾ.ಎಂ.ಟಿ.ರೇಜು ಹಾಗೂ ಡಾ.ಮುದ್ದುಮೋಹನ್ ಅವರು ತನಿಖೆಯನ್ನೇ ನಡೆಸದೆ ಗಂಭೀರ ಕರ್ತವ್ಯ ಲೋಪವೆಸಗಿದ್ದಾರೆ. ಇದೊಂದು ಗಂಭೀರ ಮಹಿಳಾ ದೌರ್ಜನ್ಯದ ಪ್ರಕರಣ, ಮಾತ್ರವಲ್ಲ ಮಹಿಳಾ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯ ಪ್ರಕರಣವೂ ಆಗಿರುತ್ತದೆ. ಆದುದರಿಂದ ತಡಮಾಡದೆ ಈ ಸಂಬಂಧ ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಬಂಧಿಸಬೇಕು ಎಂದು ಸತ್ಯಾಗ್ರಹ ನಿರತರು ಒತ್ತಾಯಿಸಿದರು.

ಸತ್ಯಾಗ್ರಹ ಸ್ಥಳಕ್ಕೆ ಸಂಜೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆಯವರು ಮನವಿ ಸ್ವೀಕರಿಸಿ ಮಾತನಾಡುತ್ತಾ, ಯಾರೊಂದಿಗೂ ವಿಚಾರ ವಿಮರ್ಶೆ ನಡೆಸದೆ ಅವಸರದಲ್ಲಿ ಡಾ.ಶರತ್ ಕುಮಾರ್ ರಾವ್ ಅವರನ್ನು ಅಮಾನತುಪಡಿಸುವ ಪ್ರಕ್ರಿಯೆಯಲ್ಲಿ ಅಚಾತುರ್ಯ ನಡೆದಿದ್ದು ನಿಜವೆಂದು ಒಪ್ಪಿಕೊಂಡರಲ್ಲದೆ, ಮನವಿಯನ್ನು ತಲುಪಿಸಬೇಕಾದವರಿಗೆ ತಲುಪಿಸುವುದಾಗಿ ತಿಳಿಸಿದರು.

ಖ್ಯಾತ ಮನೋವೈದ್ಯರಾದ ಡಾ.ಪಿ.ವಿ.ಭಂಡಾರಿ, ಗಣ್ಯರಾದ ನಾಗಭೂಷಣ ಶೇಟ್, ಪದ್ಮಾಸಿನಿ, ರೊನಾಲ್ಡ್ ಕ್ಯಾಸ್ತಲಿನೊ, ರೋಶನ್ ಮೆಂಡೋನ್ಸಾ, ರಾಜೇಶ್ ಪೂಜಾರಿ, ದೇಜಪ್ಪ ಹಿರಿಯಡ್ಕ, ರಸೂಲ್ ಕಟಪಾಡಿ, ಪ್ರಕಾಶ್ ಪೂಜಾರಿ, ಸುರೇಶ್ ಹಿರಿಯಡ್ಕ, ಕೆ.ಎನ್.ಪ್ರಭು, ಶೇಖರ ಶೆಟ್ಟಿ, ಸತೀಶ್ ನಾಯ್ಕ , ಪ್ರಭಾಕರ್, ಸುದರ್ಶನ್, ದೀಪಾ ಬೆಳ್ಳೆ, ಸುಜಾತಾ, ಶಾಲಿನಿ, ಅಂಬಿಕಾ, ಶ್ರೀದೇವಿ, ಸಂಜೀವ ಪೂಜಾರಿ ಮೊದಲದವರು ಸತ್ಯಾಗ್ರಹಕ್ಕೆ ಬೆಂಬಲ
ವ್ಯಕ್ತಪಡಿಸಿ ಭಾಗವಹಿಸಿದರು.

300 ಕ್ಕೂ ಅಧಿಕ ಪುಟಗಳ ದಾಖಲಾತಿಗಳ ಸಹಿತ ಹತ್ತು ಪುಟಗಳ ಮನವಿ ಪತ್ರವನ್ನು ಮುಖ್ಯಮಂತ್ರಿಗಳು, ರಾಜ್ಯಪಾಲರು, ವಿಧಾನಸಭೆಯ ಸಭಾಪತಿಗಳು, ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ, ಪ್ರಧಾನಮಂತ್ರಿಗಳು, ಕೇಂದ್ರದ ಆರೋಗ್ಯ ಮಂತ್ರಿಗಳು, ರಾಷ್ಟ್ರಪತಿಗಳು, ಉಪ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಶ್ರೀರಾಮ ದಿವಾಣ ತಿಳಿಸಿದ್ದಾರೆ.

ಉಡುಪಿ: ಪಡುಬಿದ್ರಿ ಗ್ರಾಮದಲ್ಲಿ ಸ್ಥಾಪನೆಗೊಂಡ ಸುಜ್ಲಾನ್ ಕಂಪೆನಿಗಾಗಿ ಭೂಮಿ ಕಳೆದುಕೊಂಡು ನಿರ್ವಸಿತರಾದ ಮೂಲನಿವಾಸಿ ಕಡುಬಡ ಕೊರಗ ಕುಟುಂಬಗಳಿಗೆ ಪುನರ್ವಸತಿ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ), ಡಿವೈಎಫ್ಐ ಮತ್ತು ಕರ್ನಾಟಕ ಜನಪರ ವೇದಿಕೆ ಇವುಗಳ ಜಂಟೀ ಆಶ್ರಯದಲ್ಲಿ ಜುಲೈ 22ರಂದು ಪಡುಬಿದ್ರಿಯಲ್ಲಿ ಹಕ್ಕೊತ್ತಾಯ ಜಾಥಾ ಹಾಗೂ ಹಕ್ಕೊತ್ತಾಯ ಸಭೆ ನಡೆಯಿತು.

ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬೇಡಿ ಆರ್ಆರ್ ಕಾಲನಿಯಿಂದ ಹೊರಟ ಜಾಥಾ, ಪಡುಬಿದ್ರಿ ಗ್ರಾ.ಪಂ.ಕಚೇರಿ ಮುಂಭಾಗದಲ್ಲಿ ಸಮಾಪ್ತಿಗೊಂಡಿತು. ಜಾಥಾದುದ್ದಕ್ಕೂ ಜಾಥಾದಲ್ಲಿ ಪಾಲ್ಗೊಂಡವರು ಸರಕಾರ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಸುಜ್ಲಾನ್ ಕಂಪೆನಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜಾಥಾದ ಬಳಿಕ ಗ್ರಾ.ಪಂ.ಕಚೇರಿ ಎದುರು ಸಭೆ ನಡೆಸಲಾಯಿತು. ದಲಿತ ಚಿಂತಕರಾದ ಲೋಲಾಕ್ಷ, ದಸಂಸ ವಿಭಾಗೀಯ ಸಂಚಾಲಕರಾದ ಶೇಖರ ಹೆಜಮಾಡಿ, ಡಿವೈಎಫ್ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷರಾದ ಶ್ರೀರಾಮ ದಿವಾಣ, ದಲಿತ ಪರ ಹೋರಾಟಗಾರರಾದ ಲಿಂಗಪ್ಪ ನಂತೂರು ಮೊದಲಾದವರು ನಿರ್ವಸಿತ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡುವಂತೆ ಸರಕಾರವನ್ನು ಒತ್ತಾಯಿಸಿದರು. ಸಂತ್ರಸ್ತ ಕುಟುಂಬಗಳ ಪರವಾಗಿ ಎಂಎಸ್ಡಬ್ಲೂ ಪದವೀಧರೆ ಶ್ರೀಮತಿ ಮಾತನಾಡಿದರು.

ಭಾರತ ಅಭ್ಯುದಯ ಪ್ರತಿಷ್ಠಾನದ ಅಧ್ಯಕ್ಷರಾದ ಉಮಾನಾಥ ಪಡುಬಿದ್ರಿ, ದಸಂಸ ಮುಖಂಡರಾದ ಹರೀಶ್ ಕಂಚಿನಡ್ಕ, ಕೇಶವ ಸಿ.ಸಾಲ್ಯಾನ್, ಡಿವೈಎಫ್ಐ ಮುಖಂಡರಾದ ವರಪ್ರಸಾದ್ ಬಜಾಲ್, ವಿಠಲ ಮಲೆಕುಡಿಯ, ಜನಪರ ವೇದಿಕೆ ಮುಖಂಡರಾದ ಮೊಹಮ್ಮದ್ ಹಂದಟ್ಟು, ಹೇಮಂತ್ ಕುಂದರ್, ಶೇಖರ ಶೆಟ್ಟಿ, ಪ್ರಕಾಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಹಕ್ಕೊತ್ತಾಯ ಸಭೆಯ ಬಳಿಕ ಗ್ರಾ.ಪಂ.ಅಧ್ಯಕ್ಷರಾದ ವಿಜಯ ಸನಿಲ್ ಹಾಗೂ ಪಿಡಿಓ ಮಮತಾ ಶೆಟ್ಟಿ ಇವರ ಮೂಲಕ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಸುಜ್ಲಾನ್ ಕಂಪೆನಿಯು ಇದುವರೆಗೆ ನಡೆಸಿದ ಎಲ್ಲಾ ವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕು, ಸುಜ್ಲಾನ್ ವಶದಲ್ಲಿರುವ ಹೆಚ್ಚುವರಿ ಭೂಮಿಯನ್ನು ಸರಕಾರ ವಶಪಡಿಸಿಕೊಂಡು ನಿರ್ವಸಿತರಿಗೆ ಹಾಗೂ ಭೂರಹಿತರಿಗೆ ಹಂಚಬೇಕು, ಪಡುಬಿದ್ರಿ ಗ್ರಾಮದ ಸರ್ವೆ ನಂಬ್ರ 69/1 ರಲ್ಲಿರುವ ಭೂಮಿ ಪ್ರಸ್ತುತ ಕೆಐಡಿಬಿ ಸ್ವಾಧೀನದಲ್ಲಿದ್ದು, ಇದನ್ನು ಯಾವುದೇ ಕಾರಣಕ್ಕೂ ಸುಜ್ಲಾನ್ ಗೆ ನೀಡಬಾರದು, ಬದಲಾಗಿ ಇದನ್ನೂ ಸಹ ನಿರ್ವಸಿತರಿಗೆ ಹಾಗೂ ಭೂರಹಿತರಿಗೆ ವಿತರಿಸಬೇಕು, ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರನ್ನು ಸಂಪುಟದಿಂದ ಕೈಬಿಡಬೇಕು, ನಿರ್ವಸಿತ ಕೊರಗ ಕುಟುಂಬದಲ್ಲಿ ಮೂವರು ಪದವೀಧರ ವಿದ್ಯಾರ್ಥಿನಿಯರಿದ್ದು, ಇವರಿಗೆ ಸೂಕ್ತ ಉದ್ಯೋಗ ನೀಡಬೇಕು ಎಂಬ ಬೇಡಿಕೆಗಳನ್ನು ಸರಕಾರದ ಮುಂದೆ ಇರಿಸಲಾಗಿದೆ.

# 16ನೇ ಸಾರ್ವತ್ರಿಕ ಲೋಕಸಭಾ ಚುನಾವಣೆಯನ್ನು ಮುಕ್ತ, ಪಾರದರ್ಶಕ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ನಡೆಸಬೇಕು ಎಂಬುದು ಭಾರತ ಚುನಾವಣಾ ಆಯೋಗದ ಆಶಯ ಮತ್ತು ಉದ್ಧೇಶ. ರಾಜ್ಯ ಚುನಾವಣಾ ಆಯೋಗಗಳೂ ಈ ನಿಟ್ಟಿನಲ್ಲಿ ಕಾಯೋನ್ಮುಖವಾಗಿವೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳಾಗಿ ಕರ್ತವ್ಯ
ನಿರ್ವಹಿಸುತ್ತಿದ್ದಾರೆ. ತಹಶಿಲ್ದಾರರ ಸಹಿತ ಜಿಲ್ಲಾಡಳಿತದ ಅನೇಕ ಮಂದಿ ಅಧಿಕಾರಿಗಳು ಹಾಗೂ ನೌಕರರು, ಚುನಾವಣಾ ಸಂಬಂಧಿ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಸುಗಮ ಚುನಾವಣೆಗಾಗಿ ಆಯೋಗ ಮಾದರಿ ಚುನಾವಣಾ ನೀತಿ ಸಂಹಿತೆಯನ್ನೂ ಜ್ಯಾರಿಗೆ ತಂದಿದೆ.

ಅಧಿಕಾರಶಾಹಿ ವ್ಯವಸ್ಥೆಯೇ ಮಹಾಭ್ರಷ್ಟವಾಗಿದೆ ಎನ್ನುವುದು ಹೊಸ ವಿಷಯವೇನೂ ಅಲ್ಲ. ಇಂಥ ಅವ್ಯವಸ್ಥೆಯ ಪರಮಭ್ರಷ್ಟ ಅಧಿಕಾರಿಗಳೇ ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ, ಸ್ಥಳೀಯ ಮಟ್ಟದಲ್ಲಿ ಚುನಾವಣಾಧಿಕಾರಿಗಳಾಗಿ, ವಿವಿಧ ತಂಡಗಳಲ್ಲಿ
ಕಾರ್ಯನಿರ್ವಹಿಸುತ್ತಿರುವುದರಿಂದ, ಇವರಿಂದ ನಿಷ್ಪಕ್ಷಪಾತ, ದಕ್ಷತೆಯ ಕರ್ತವ್ಯ ನಿರ್ವಹಣೆಯನ್ನು ನಿರೀಕ್ಷಿಸುವುದು ಮತ್ತು ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ಎಂದು ಹೇಳುವುದು ಒಂದು ಭ್ರಮೆಯಲ್ಲದೆ ವಾಸ್ತವವಾಗಿರಲು ಸಾಧ್ಯವೇ ಇಲ್ಲ. ಈ ಮಾತಿಗೆ ಅಪವಾದಗಳಿರಬಹುದು.

ಮಾರ್ಚ್ 5ರಂದು ಬೆಳಗ್ಗೆ ಭಾರತದ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿತು. ಯಾವುದೇ ದಿನ ಚುನಾವಣೆ ಘೋಷಣೆ ಆಗಲಿದೆ ಎಂಬುದು ಅಧಿಕಾರಿ-ನೌಕರರಿಗೆ, ರಾಜಕೀಯ ಪಕ್ಷ-ರಾಜಕಾರಣಿ-ಕಾರ್ಯಕರ್ತರಿಗೆ ಸಹ ಚೆನ್ನಾಗಿಯೇ ಗೊತ್ತಿತ್ತು. ಪತ್ರಕರ್ತರ ಸಹಿತ ಬಹುತೇಕ ಎಲ್ಲಾ ವಿಭಾಗಗಳ ಜನವರ್ಗದವರಿಗೂ ತಿಳಿದೇ ಇತ್ತು. ಎಲ್ಲರೂ ಚುನಾವಣಾ ವೇಳಾಪಟ್ಟಿ ಯಾವಾಗ ಪ್ರಕಟವಾಗುತ್ತದೆ ಎಂದು ಕಾಯುತ್ತಿದ್ದರು. ಅಧಿಕಾರಿಗಳು ಹಾಗೂ ರಾಜಕಾರಣಿಗಳು ಕೆಲವು ತಿಂಗಳುಗಳ ಹಿಂದಿನಿಂದಲೇ ಚುನಾವಣೆಗೆ ಬೇಕಾದ ಪೂರ್ವ ತಯಾರಿಗಳನ್ನು ಮಾಡಿಕೊಂಡೇ ಬರುತ್ತಿದ್ದರು.

ಮಾರ್ಚ್ 6ರಂದು ಉಡುಪಿ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ
ಡಾ.ಮುದ್ದುಮೋಹನ್ ಅವರು ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ಕರೆದು ಚುನಾವಣಾ ನೀತಿ ಸಂಹಿತೆಗೆ ಸಂಬಂಧಿಸಿದಂತೆ ತಾವು ಕೈಗೊಂಡ ಕ್ರಮದ ಬಗ್ಗೆ, ಪರಿಶೀಲನೆಗೆ ವಿವಿಧ ತಂಡಗಳನ್ನು ರಚಿಸಿದ ಮತ್ತು ವಿವಿಧ ವಿಭಾಗಗಳಿಗೆ ವೀಕ್ಷಕರನ್ನು ನೇಮಕ ಮಾಡಲಾದ ಕುರಿತು ಬಡಾಯಿಕೊಚ್ಚಿಕೊಂಡಿದ್ದರು. ಆದರೆ ವಾಸ್ತವದಲ್ಲಿ ಇದಾವುದನ್ನೂ ಜಿಲ್ಲಾ
ಚುನಾವಣಾಧಿಕಾರಿಗಳು ಕಟ್ಟುನಿಟ್ಟಾಗಿ ಮಾಡಿರಲೇ ಇಲ್ಲ.

ಭ್ರಷ್ಟ ಅಧಿಕಾರಶಾಹಿ ವ್ಯವಸ್ಥೆಯ ಬಹುತೇಕ ಅಧಿಕಾರಿಗಳೂ ಯಾವತ್ತೂ ಆಡಳಿತ ಪಕ್ಷದ ಪರವಾಗಿಯೇ ಇರುತ್ತಾರೆ. ಆಡಳಿತ ಪಕ್ಷದ ಮತ್ತು ಮುಂದೆ ಅಧಿಕಾರಕ್ಕೆ ಬರುವ ಸಾಧ್ಯತೆ ಇರುವ ಪಕ್ಷದ ಮತ್ತು ರಾಜಕಾರಣಿಗಳ ಪರವಾಗಿಯೇ ಇರುತ್ತಾರೆ. ರಾಜಕಾರಣಿಗಳ
ಬೇಕು-ಬೇಡಗಳನ್ನು ಮುಂಚಿತವಾಗಿಯೇ ಅರಿತಿರುವ ಇಲ್ಲವೇ ಅವರ ಅಣತಿ, ಮಾರ್ಗದರ್ಶನದಂತೆಯೇ ನಡೆದುಕೊಳ್ಳುವ ಜಾಯಮಾನ ಉಳ್ಳವರೇ ಇಂಥ ಚುನಾವಣೆಯನ್ನು ನಡೆಸಿಕೊಂಡು ಬರುತ್ತಾರೆ ಎಂಬುದು ಕಹಿಯಾದರೂ ಒಪ್ಪಿಕೊಲ್ಳಲೇಬೇಕಾದ ಸತ್ಯವೇ ಆಗಿದೆ.

ಈ ಪರಮ ಭ್ರಷ್ಟ ಅಧಿಕಾರಶಾಹಿಗಳು ಕಡತಗಳಲ್ಲಿ ಮಾತ್ರ ಬಹಳ ಕಟ್ಟುನಿಟ್ಟಾಗಿಯೇ ಇರುತ್ತಾರೆ. ಈ ಕಾಗದದ ಹುಲಿಯನ್ನೇ ಪತ್ರಿಕಾಗೋಷ್ಟಿಗಳ ಮೂಲಕ ಮತ್ತು ಸಭೆ-ಸಮಾರಂಭಗಳ ಭಾಷಣಗಳಲ್ಲಿ ಉದ್ಘರಿಸುವ ಮೂಲಕ ತಾವು ಬಹಳ ದಕ್ಷರೆಂದು ಸಾಬೀತುಪಡಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ, ವಾಸ್ತವದಲ್ಲಿ ಮತದಾರರಿಗೆ ಹಣ-ಹೆಂಡ ಹಂಚಲು, ಆಶ್ವಾಸನೆ-ಭರವಸೆ ನೀಡಲು, ಅಮಿಷಗಳನ್ನು ಒಡ್ಡಲು ಪರೋಕ್ಷವಾಗಿ ಅವಕಾಶ
ಮಾಡಿಕೊಟ್ಟಿರುತ್ತಾರೆ. ಇದೆಲ್ಲಾ ಬಹಿರಂಗಕ್ಕೆ ಬರುವುದೇ ಇಲ್ಲ. ಒಂದು ಪಕ್ಷ ಅಲ್ಪ ಸ್ವಲ್ಪ ಮಾಹಿತಿ ಸಿಕ್ಕಿದರೂ, ಅದಕೆಕ ಸರಿಯಾದ ಸಾಕ್ಷ್ಯಾಧಾರ ಇರುವುದಿಲ್ಲ. ಆಗ ಏನೂ ಮಾಡಲೂ ಆಗುವುದಿಲ್ಲ. ಇವುಗಳನ್ನೆಲ್ಲ ನಾಗರಿಕ ಜಗತ್ತಿಗೆ ಗೊತ್ತು ಪಡಿಸಬೇಕಾದ ಮಾಧ್ಯಮಗಳು ಕೂಡಾ ಈ ಸಂದರ್ಭದಲ್ಲಿ ಜಾಹೀರಾತಿನ ಹಿಂದೆಯೋ, ಅನಧಿಕೃತವೂ, ಅಕ್ರಮವೂ ಆಗಿರುವ ಸುದ್ದಿ ಪ್ರಕಟಿಸಲು ಬೇಕಾದ ಕಾಸು ಗಿಟ್ಟಿಸಿಕೊಳ್ಳಲು ಓಡಾಡುತ್ತಿರುತ್ತಾರೆ. ಇನ್ನು ಕೆಲವು ಮಾಧ್ಯಮ ಮಂದಿ ಗುಟ್ಟಾಗಿ ಯಾವುದಾದರೊಂದು ಪಕ್ಷದ ಅಥವಾ ಅಭ್ಯರ್ಥಿಯ ಮುಖವಾಣಿಯಾಗಿಯೇ ಕೆಲಸ ಮಾಡುವಲ್ಲಿ ನಿರತರಾಗಿರುತ್ತಾರೆ. ಇವರಿಗೆಲ್ಲ ಚುನಾವಣಾ ನೀತಿ ಸಂಹಿತೆಯ ಬಗ್ಗೆ ಗಮನಿಸಲು ಸಮಯವೇ ಇರುವುದಿಲ್ಲ.

ಮಾರ್ಚ್ 8ರಂದು ಶಂಕರಪುರದ ವಿಶ್ವಾಸದ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಯು.ಟಿ.ಖಾದರ್ ಹಾಗೂ ಸಂಸದ ಮತ್ತು ಆಡಳಿತ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಆಶ್ವಾಸನೆ, ಭರವಸೆಗಳನ್ನು ನೀಡಿದರು. ಸಚಿವ ವಿನಯ ಕುಮಾರ್ ಸೊರಕೆ ಅಮಿಷ ಒಡ್ಡುವ ಮೂಲಕ ನೀತಿ ಸಂಹಿತೆಯನ್ನು ಬಹಿರಂಗವಾಗಿಯೇ ಉಲ್ಲಂಘಿಸಿದರು. ಆಶ್ವಾಸನೆ, ಭರವಸೆ, ಅಮಿಷಗಳನ್ನು ಕೇಳಿಸಿಕೊಂಡ ಅದೇ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿ
ವಹಿಸಿಕೊಂಡಿದ್ದವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅದೇ ದಿನ ವಿಷಯವನ್ನು ಹಾಕುವ ಮೂಲಕ ಸತ್ಯವನ್ನು ಅನಾವರಣಗೊಳಿಸಿದರು. ವಿಚಾರ ಮರುದಿನದ ಪ್ರಜಾವಾಣಿ ಮತ್ತು ಜಯಕಿರಣದಲ್ಲೂ ವರದಿಯಾಯಿತು. ಆದರೆ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಎಲ್ಲವನ್ನೂ
ಕೇಳಿಸಿಕೊಂಡ, ಚಿತ್ರೀಕರಿಸಿಕೊಂಡ ಇತರ ಅಕ್ಷರ ಮತ್ತು ದೃಶ್ಯ ಮಾದ್ಯಮಗಳ ಪತ್ರಕರ್ತರು ವಿಷಯವನ್ನು ಮರೆಮಾಚುವ ಮೂಲಕ ಆಡಳಿತ ಪಕ್ಷದ ರಾಜಕಾರಣಿಗಳನ್ನು ರಕ್ಷಿಸುವ ಮಹತ್ತರ ಕೆಲಸವನ್ನು ಮಾಡಿ ಕೃತಾರ್ಥರಾದರು !

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದ ಬಗ್ಗೆ ಅದೇ ದಿನ ಉಡುಪಿ ಜಿಲ್ಲಾ
ಚುನಾವಣಾಧಿಕಾರಿಗಳ ಕಚೇರಿಯಲ್ಲಿರುವ ಕಂಟ್ರೋಲ್ ರೂಮ್ ಅಧಿಕೃತರಿಗೆ ದೂರು ನೀಡಲಾಯಿತು. ಎರಡು ದಿನ ಬಿಟ್ಟು ಮಾರ್ಚ್ 10 ಮತ್ತು ಮಾರ್ಚ್ 12ರಂದು ಮತ್ತೆ ಕಂಟ್ರೋಲ್ ರೂಮ್ ಅಧಿಕೃತರನ್ನು ಸಂಪರ್ಕಿಸಿ ದೂರಿನ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ಬೇಕು ಎಂದು ಕೇಳಿದರೆ, ಅಲ್ಲಿದ್ದವರಲ್ಲಿ ದೂರು ನೀಡಲಾದ ಬಗ್ಗೆಯೇ ಕನಿಷ್ಟ ಮಾಹಿತಿಯೂ ಇರಲಿಲ್ಲ. ನಾಳೆ ಕಾಲ್ ಮಾಡಿ, ತಿಳಿದುಕೊಂಡು ಹೇಳುತ್ತೇವೆ ಎಂಬ ಸಿದ್ಧ ಉತ್ತರ. ಮೂರನೇ ದಿನ ಮರಳಿ ವಿಚಾರಿಸಿದಾಗ, ‘ದೂರಿನ ವಿಷಯವನ್ನು ಆರ್ ಐ ಹಾಗೂ ತಹಶಿಲ್ದಾರರಿಗೆ ತಿಳಿಸಿದ್ದೇವೆ’ ಎಂಬ ನೀರಸವಾದ ಉತ್ತರವಷ್ಟೇ ಸಿಕ್ಕಿತು.

ಸಚಿವರುಗಳು ಹಾಗೂ ಸಂಸದರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಬಗ್ಗೆ ಪ್ರಜಾವಾಣಿ ಮತ್ತು ಜಯಕಿರಣದಲ್ಲಿ ವರದಿಯಾಗಿತ್ತು. ಚುನಾವಣಾ ಸಂಬಂಧಿ ಪತ್ರಿಕಾ ವರದಿಗಳ ಮೇಲೆಯೇ ಕಣ್ಣಿಡಲು ಜಿಲ್ಲಾ ಮಟ್ಟದಲ್ಲಿ ಒಂದು ಸಮಿತಿ ಇದೆ ಎಂದು
ಘೋಷಿಸಲಾಗಿದೆಯಾದರೂ, ಇವರಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದ ಬಗ್ಗೆ ವರದಿ ಪ್ರಕಟವಾದ ಪ್ರಜಾವಾಣಿ ಮತ್ತು ಜಯಕಿರಣ ಲಭ್ಯವಿರಲಿಲ್ಲ. ರಾಜಕಾರಣಿಗಳು ಪಾಲ್ಗೊಳ್ಳುವ ಕಾರ್ಯಕ್ರಮಗಳನ್ನು ವಿಡಿಯೋ ಚಿತ್ರೀಕರಣ ಮಾಡುವುದಕ್ಕಾಗಿಯೇ ಒಂದು ತಂಡವಿದೆಯಾದರೂ, ಇವರು ಸಹ ಶಂಕರಪುರ ಸಹಿತ ಆಡಳಿತ ಪಕ್ಷದ ರಾಜಕಾರಣಿಗಳು ಭಾಗವಹಿಸಿದ ಕಾರ್ಯಕ್ರಮಗಳ ಕಡೆಗೆ ಗಮನವನ್ನೇ ಕೊಟ್ಟಿರಲಿಲ್ಲ. ಸಂಬಂಧಿಸಿದ ಅಧಿಕಾರಿಗಳು ದೂರು ಕೊಟ್ಟವರಲ್ಲಿಯೇ ವಿಡಿಯೋ ಸಿಡಿ ಕೊಡಿ ಎಂದು ಕೇಳುವ ಶೋಚನೀಯ ಪರಿಸ್ಥಿತಿ.

ಚುನಾವಣೆಯನ್ನು ನ್ಯಾಯ ಸಮ್ಮತ, ಮುಕ್ತ, ಪಾರದರ್ಶಕವಾಗಿ ನಡೆಸಬೇಕೆಂಬ ಉದ್ಧೇಶದಿಂದ ಕಾರ್ಯವೆಸಗಬೇಕಾದ ಅಧಿಕಾರಿಗಳ ವರ್ಗವೇ ಆಡಳಿತ ಪಕ್ಷದ ಪರವಾಗಿ ಕರ್ತವ್ಯ
ನಿರ್ವಹಿಸುತ್ತಾರೆ, ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ
ಪಾಲಿಸುತ್ತಿಲ್ಲ, ಎಲ್ಲವೂ ಕಡತಗಳಿಗೆ ಮಾತ್ರ ಸೀಮಿತ ಎಂದಾದರೆ, ಇದನ್ನು ನ್ಯಾಯಸಮ್ಮತ ಚುನಾವಣೆ ಎಂದು ಒಪ್ಪಿಕೊಳ್ಳಲು ಸಾಧ್ಯವೇ ? ಆಡಳಿತ ಪಕ್ಷವೇ ತಮಗೆ ಬೇಕಾದ
ಅಧಿಕಾರಿಗಳನ್ನು ತಮಗೆ ಬೇಕಾದ ನಿರ್ಧಿಷ್ಟ ಸ್ಥಳಗಳಲ್ಲಿ ನಿಯುಕ್ತಿ ಮಾಡಿಕೊಳ್ಳುತ್ತವೆ ಎನ್ನುವುದು ಇದಕ್ಕೆ. ಈ ಹಿನ್ನೆಲೆಯಲ್ಲಿ, ಉಡುಪಿಗೆ ಹೊಸದಾಗಿ ಬಂದು ಅಧಿಕರ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಮುದ್ದುಮೋಹನ್ ಅವರನ್ನು ಆಡಳಿತ ಪಕ್ಷವು ತಮ್ಮ ಪರವಾಗಿ ಕೆಲಸ ಮಾಡುವುದಕ್ಕಾಗಿಯೇ ನೇಮಕ ಮಾಡಿಕೊಂಡಿದೆ ಎಂದು ಸಂಶಯಿಸುವಂತಾಗಿದೆ.

ವ್ಯವಸ್ಥೆಯ ಕಾವಲು ನಾಯಿಗಳಂತೆ ಕಾರ್ಯನಿರ್ವಹಿಸಬೇಕಾದ ಮಾಧ್ಯಮ ಮಂದಿ, ಪತ್ರಕರ್ತರ ಸಂಘದ ಪ್ರಮುಖ ಪದಾಧಿಕಾರಿಗಳು ಆಡಳಿತ ಪಕ್ಷದ ಅಭ್ಯರ್ಥಿಯ ಮುಖವಾಣಿಯಾಗಿಬಿಡುತ್ತಾರೆ. ಚುನಾವಣೆ ಹತ್ತಿರ ಬಂದಾಗ, ಚುನಾವಣಾ ನೀತಿ ಸಂಹಿತೆ ಜಾರಿಯಾಗಿಲ್ಲ ಎಂದು ಹೇಳಿಕೊಂಡು ನೀತಿ ಸಂಹಿತೆ ಜಾರಿಯಾಗುವ ಕೇವಲ ನಾಲ್ಕು ದಿನ ಮೊದಲು ಆಡಳಿತ ಪಕ್ಷದ ಸಂಭಾವ್ಯ ಅಭ್ಯರ್ಥಿಯಿಂದ ಪ್ರಜಾಪ್ರಭುತ್ವದ ಪಾಠ ಮಾಡಿಸಿಕೊಳ್ಳುತ್ತಾರೆ. ಪ್ರಜಾಪ್ರಭುತ್ವ ಎಂದರೆ ಇದುವಾ ? ಹೀಗೆನಾ ? – ಶ್ರೀರಾಮ ದಿವಾಣ.

ಉಡುಪಿ: ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಭೂಮಿಯನ್ನು ವಶಕ್ಕೆ ಪಡೆದುಕೊಂಡು ತೋಟಗಾರಿಕೆ ವಿವಿ ಸ್ಥಾಪಿಸುವ ರಾಜ್ಯ ಸರಕಾರದ ನಿರ್ಧಾರಕ್ಕೆ ಶಾಸಕ ಕೆ.ರಘುಪತಿ ಭಟ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ರೈತರಿಗೆ ಮಾಡುವ ಬಹುದೊಡ್ಡ
ಅನ್ಯಾಯವೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕರೆದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. ವಿಧಾನಸಭಾ ಚುನಾವಣೆಗೆ ಮೊದಲು ಮಲ್ಪೆಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು, ಪಕ್ಷ ಅಧಿಕಾರಕ್ಕೆ ಬಂದರೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಏಕಗಂಟಿನಲ್ಲಿ 60 ಕೋಟಿ ರು. ನೀಡುವುದಾಗಿ ಘೋಷಿಸಿದ್ದರು. ಆಗ ಅದೇ ವೇದಿಕೆಯಲ್ಲಿದ್ದ ಸಿದ್ದರಾಮಯ್ಯನವರು ಪರಮೇಶ್ವರ್ ಆಶ್ವಾಸನೆಗೆ ಸಹಮತ ವ್ಯಕ್ತಪಡಿಸಿ ತಲೆಯಾಡಿಸಿದ್ದರು. ಅಧಿಕರಕ್ಕೆ ಬಂದ ಮೂರೇ ತಿಂಗಳಲ್ಲಿ ರಾಗ ಬದಲಾಯಿಸುವ ಮೂಲಕ ನೀಡಿದ ಭರವಸೆಯನ್ನು ಕಾಂಗ್ರೆಸ್ ಹುಸಿಗೊಳಿಸಿದೆ ಎಂದು ಬಿಜೆಪಿ ನಾಯಕರಾದ ಭಟ್ ಟೀಕಿಸಿದರು.
ಸಕ್ಕರೆ ಕಾರ್ಖಾನೆಯ ಭೂಮಿ ರೈತರ ಸೊತ್ತು. ರೈತರ ಸೊತ್ತನ್ನು ಸರಕಾರ
ವಶಪಡಿಸಿಕೊಳ್ಳುವುದು ಖಂಡನೀಯ ಎಂದು ಹೇಳಿದ ಮಾಜಿ ಶಾಸಕ ಭಟ್ ಅವರು, ಕಾರ್ಖಾನೆಗೆ ಪುನಶ್ಚೇತನಕ್ಕೆ ಸರಕಾರ ಸಾಲ ಮಾತ್ರ ಕೊಟ್ಟಿದೆ. ಈಗ ಭೂಮಿ ವಶಪಡಿಸಿಕೊಳ್ಳುವ ಮಾತು ಸರಿಯಲ್ಲವೆಂದು ತಿಳಿಸಿದರು.
ಕಾರ್ಖಾನೆಗೆ ಸಂಬಂಧಿಸಿದಂತೆ ಐದು ಸಾವಿರ ಮಂದಿ ರೈತರಿದ್ದಾರೆ. ಇವರ ಸಭೆಯನ್ನೂ ಕರೆಯದೆ, ಇವರ ಜೊತೆಗೆ ಸಮಾಲೋಚನೆಯನ್ನೂ ನಡೆಸದೆ ಸರಕಾರ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಕಾರ್ಖಾನೆಯ ಭೂಮಿಯಲ್ಲಿ ತೋಟಗಾರಿಕೆ ವಿವಿ ಸ್ಥಾಪಿಸುವ ನಿರ್ಧಾರವನ್ನು ಏಕಾಏಕಿ ಪ್ರಕಟಿಸಿದೆ ಎಂದು ರಘುಪತಿ ಭಟ್ ಆರೋಪಿಸಿದರು. 60 ಕೋಟಿ ಬೇಕಾಗಿಲ್ಲ. ಕನಿಷ್ಟ 15 ಕೋಟಿ ನೀಡಿದರೂ ಸಾಕು. ಸಹಕಾರ ಸಂಘಗಳ ಹಾಗೂ ರೈತರ ಬಾಕಿ ಸಾಲ ತೀರಿಸಬಹುದುಎ ಎಂದು ರಘುಪತಿ ಭಟ್ ಅಭಿಪ್ರಾಯಪಟ್ಟರು. ರೀಟೆಂಟರ್ ಕರೆದು ಖಾಸಗಿಯವರಿಗೆ ಕಾರ್ಖಾನೆಯನ್ನು ವಹಿಸಿಕೊಡಲಿ ಎಂದೂ ಭಟ್ ಈ ಸಂದರ್ಭದಲ್ಲಿ ಸರಕಾರವನ್ನು ಒತ್ತಾಯಿಸಿದರು.
ಸಚಿವ ವಿನಯ ಕುಮಾರ್ ಸೊರಕೆಯವರು ಬೇಕಾದರೆ ಬೆಳಪುವಿನಲ್ಲಿ ತೋಟಗಾರಿಕೆ ವಿವಿ ಸ್ಥಾಪಿಸಲಿ, ಪಿಜಿ ಸೆಂಟರ್ ನ್ನು ಕೊಳಲಗಿರಿಗೆ ತರಲಿ ಎಂದು ರಘುಪತಿ ಭಟ್ ಹೇಳಿದರು. ಬಿಜೆಪಿ ಮುಖಂಡರಾದ ದಿನಕರ ಶೆಟ್ಟಿ ಹೆರ್ಗ, ಬಾಲಕೃಷ್ಣ ಶೆಟ್ಟಿ, ರಾಘವೇಂದ್ರ ಕಿಣಿ ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಉಡುಪಿ: ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು, ತಹಶಿಲ್ದಾರ್ ಅಭಿಜಿನ್ ಹಾಗೂ ನಗರಸಭೆಯ ಪೌರಾಯುಕ್ತ ಗೋಕುಲದಾಸ್ ನಾಯಕ್ ಅವರನ್ನು ಉಡುಪಿಯಿಂದ ವರ್ಗಾಯಿಸಬೇಕೇ, ಇಲ್ಲಿಯೇ ಉಳಿಸಿಕೊಳ್ಳಬೇಕೇ ಎಂಬ ವಿಷಯ ಕಳೆದ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ನಾಯಕರು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರೊಳಗೆ ಭಾರೀ ವಾದ-ವಿವಾದ ಹಾಗೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಬಿಜೆಪಿ ನಾಯಕರುಗಳಾದ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿ.ಪಂ., ತಾ.ಪಂ., ನಗರಸಭಾ ಸದಸ್ಯರು, ಬಿಜೆಪಿ ಮುಖಂಡರುಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ಜಿಲ್ಲಾಧಿಕಾರಿ ಹಾಗೂ ನಗರಸಭೆ ಪೌರಾಯುಕ್ತರನ್ನು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಇಲ್ಲಿಂದ ವರ್ಗಾವಣೆ ಮಾಡಿ ಕಾಂಗ್ರೆಸ್ ಪರ ಇರುವ ಅಧಿಕಾರಿಗಳನ್ನು ಇಲ್ಲಿಗೆ ಕರೆತರಬೇಕು ಎನ್ನುವುದು ಕಾಂಗ್ರೆಸ್ ನ ಒಂದು ವಿಭಾಗದ ನಾಯಕರ ಮತ್ತು ಕಾರ್ಯಕರ್ತರ ಒಕ್ಕೊರಲಿನ ಅಭಿಪ್ರಾಯವಾಗಿದೆ. ಇದನ್ನು ಇವರೆಲ್ಲರೂ ಪದೇ ಪದೇ ಶಾಸಕ ಪ್ರಮೋದ್ ಮದ್ವರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆಯವರಲ್ಲಿ ಹೇಳಿಕೊಂಡು ಬಂದಿದ್ದಾರೆ.
ಅದೇ ರೀತಿ ಪಕ್ಷದೊಳಗಿನ ಇನ್ನೊಂದು ವಿಭಾಗದ ಕಾರ್ಯಕರ್ತರು ಮತ್ತು ನಾಯಕರು ಈಗ ಇರುವ ಡಾ.ಎಂ.ಟಿ.ರೇಜು ಅವರನ್ನೇ ಜಿಲ್ಲಾಧಿಕಾರಿಯಾಗಿ ಹಾಗೂ ಗೋಕುಲದಾಸ್ ನಾಯಕ್ ಅವರನ್ನೇ ಪೌರಾಯುಕ್ತರನ್ನಾಗಿ ಮುಂದುವರಿಸಬೇಕು ಎಂಬ ವಾದವನ್ನು ಹಲವಾರು ಬಾರಿ ನಾಯಕತ್ವದ ಮುಂದಿಟ್ಟಿದೆ.
ಮಲ್ಪೆಯ ಸೈಂಟ್ ಮೇರೀಸ್ ಐಲ್ಯಾಂಡ್ನಲ್ಲಿ ರೇವ್ ಪಾರ್ಟಿ ನಡೆಸಲು ಬಿಜೆಪಿ ರಘುಪತಿ ಭಟ್ ಅವರ ಸ್ನೇಹಿತನಿಗೆ ಅವಕಾಶ ಮಾಡಿಕೊಟ್ಟದ್ದು ಡಿಸಿ ರೇಜು ಹೊರತು ಬೇರೆ ಯಾರೂ ಅಲ್ಲ. ಈ ಜಿಲ್ಲಾಧಿಕಾರಿ ಭ್ರಷ್ಟಾಚಾರಿ. ಆದುದರಿಂದ ಇವರನ್ನು ಇಲ್ಲಿ ಉಳಿಸಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ ಎಂಬುದು ಒಂದು ಕಡೆಯ ಬಲವಾದ ವಾದ.
ನಗರಸಭೆಯ ಬಿಜೆಪಿಯ ಅನೇಕ ಮಂದಿ ಸದಸ್ಯರು ಇಂದು ಬಹು ಮಹಡಿ ಕಟ್ಟಡಗಳ ಮಾಲೀಕರು. ಇದಕ್ಕೆಲ್ಲ ಅನುಕೂಲ ಮಾಡಿಕೊಟ್ಟಿದ್ದು ಗೋಕುಲದಾಸ್ ನಾಯಕರೇ ಆಗಿದ್ದು, ಇವರನ್ನು ನಾವ್ಯಾಕೆ ಮತ್ತೆ ಇಲ್ಲಿಯೇ ಮುಂದುವರಿಸಬೇಕು. ಎಷ್ಟು ಮಾತ್ರಕ್ಕೂ ಸಲ್ಲದು ಎನ್ನುವುದು ಇನ್ನೊಂದು ಕಡೆಯ ವಾದ.
ನಗರಸಭೆಯ ಮಾಜಿ ಉಪಾಧ್ಯಕ್ಷ, ಕಾಂಗ್ರೆಸ್ ನಾಯಕ ರೊನಾಲ್ಡ್ ಪ್ರವೀಣ್ ಕುಮಾರ್ ಅವರು ಮುರಿದು ಬಿದ್ದವರಂತೆ ಇತ್ತೀಚೆಗೆ ಪೌರಾಯಕ್ತರ ವಿರುದ್ಧ ಬಹುದೊಡ್ಡ ಆರೋಪ ಪಟ್ಟಿಯನ್ನೇ ತಯಾರಿಸಿ ಪತ್ರಿಕಾಗೋಷ್ಟಿ ಮೂಲಕ ಬಹರಂಗಪಡಿಸಿ ವರ್ಗಾವಣೆ ಮಾಡಬೇಕೆಂದೂ,
ಬಂಧಿಸಬೇಕೆಂದೂ ಒತ್ತಾಯಿಸಿದ ಪ್ರಕರಣವೂ ನಡೆದಿದೆ. ಇದರ ಬೆನ್ನಿಗೆ ಸಚಿವ ಸೊರಕೆ ಹಾಗೂ ಕೇಮದ್ರ ಸಚಿವ ಆಸ್ಕರ್ ಅವರಿಗೂ ಗೋಕುಲದಾಸ್ ಅವರನ್ನು ವರ್ಗಾಯಿಸುವಂತೆ ಒತ್ತಡ ಹಾಕಿದ್ದರು. ಆದರೆ ಭ್ರಷ್ಟ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕೆಂಬ ನಗರಸಭೆಯ ಮಾಜಿ ಉಪಾಧ್ಯಕ್ಷರ ವಿನಂತಿಗೆ ಇವರಿಬ್ಬರು ಸಚಿವರು ಸಹ ಯಾವುದೇ ರೀತಿಯ ಸೊಪ್ಪೂ ಹಾಕದೆ ನಿರ್ಲಕ್ಷಿಸಿದ್ದರು.
ತಹಶಿಲ್ದಾರ್ ಅಭಿಜಿನ್ ಬಹಳ ಶಿಸ್ತಿನ ಅಧಿಕಾರಿ ಎಂದು ಪ್ರಚಾರ ಮಾಡಿದವರು ಉಡುಪಿಯ ಲ್ಯಾಂಡ್ ಮಾಫಿಯಾದ ಕುಳಗಳು ಹಾಗೂ ಬಿಲ್ಡರ್ಸ್ ಗಳು. ಇವರೆಲ್ಲರ ಕೆಲಸಗಳನ್ನೂ ಕ್ಷಣಾರ್ಧದಲ್ಲಿ ಮಾಡು ಕೊಡುತ್ತಿದ್ದ ತಹಶಿಲ್ದಾರ್, ಸಾಮಾನ್ಯ ಜನರ ಕೆಲಸಗಳನ್ನು ಮಾತ್ರ ನಿಜಕ್ಕೂ ಮಾಡಿಕೊಡುತ್ತಿರಲಿಲ್ಲ. ಸಾಮಾನ್ಯ ನಾಗರಿಕರು ತಮ್ಮಿಂದಾಗದ ಕೆಲವು ಕೆಲಸಗಳನ್ನು ಸಣ್ಣ ಪುಟ್ಟ ಬ್ರೋಕರ್ ಗಳಿಗೆ ವಹಿಸಿಕೊಡುತ್ತಿದ್ದರು. ಇಲ್ಲಿನ ಬ್ರೋಕರ್ ಗಳೇನೂ ಶ್ರೀಮಂತರಲ್ಲ. ಆದರೆ ಇವರು ಬ್ರೋಕರ್ ಗಳೆಂಬ ಏಕೈಕ ಕಾರಣಕ್ಕೆ ಇವರ ಯಾವ ಕೆಲಸಗಳನ್ನೂ ಅಭಿಜಿನ್ ಮಾಡಿಕೊಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ತಹಿಶಿಲ್ದಾರ್ ಅವರ ವರ್ಗಾವಣೆಗೂ ಕೆಲವು ಕಾಂಗ್ರೆಸ್ ನಾಯಕರು ಶಾಸಕರನ್ನು ಒತ್ತಾಯಿಸಿದ್ದಾರೆ. ಅಧಿಕಾರಿಗಳಿಗೆ ಪಕ್ಷವಿಲ್ಲ. ಬಿಜೆಪಿ ಸರಕಾರವಿದ್ದಾಗ ಅಧಿಕಾರಿಗಳು ಸಹಜವಾಗಿಯೇ ಬಿಜೆಪಿ ನಾಯಕರ ಹಾಗೂ ಜನಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ, ಕುಣಿಯುತ್ತಾರೆ. ಈಗ ನಮ್ಮ ಸರಕಾರವಿದೆ. ಇನ್ನು ಮುಂದೆ ನಮ್ಮ ತಾಳಕ್ಕೆ ತಕ್ಕಂತೆ ಕುಣಿಯಲಿದ್ದಾರೆ. ಹಾಗಾಗಿ ಈ ಅಧಿಕಾರಿಗಳನ್ನು ಉಡುಪಿಯಿಂದ ವರ್ಗಾವಣೆ ಮಡುವ ಅವಶ್ಯಕತೆ ಇಲ್ಲ ಎಂಬುದು ಪಕ್ಷದ ನಾಯಕತ್ವದ ನಿಲುವಾಗಿದೆ ಎಂದು ಹೇಳಲಾಗುತ್ತಿದೆ.
ಜಿಲ್ಲಾಧಿಕಾರಿ ಡಾ.ರೇಜು ಅವರು ಕೇರಳ ಮೂಲದ ಮಲೆಯಾಳಿ ಕ್ರಿಶ್ಚಿಯನ್ ಆಗಿದ್ದು, ಇವರು ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರನ್ನು ಉಪಯೋಗಿಸಿಕೊಂಡು ಇದುವರೆಗೆ ಉಡುಪಿಯಲ್ಲಿಯೇ ಉಳಿದುಕೊಳ್ಳಲು ಯಶಸ್ವಿಯಾಗಿದ್ದರೆ, ಗೋಕುಲದಾಸ್ ನಾಯಕ್ ಅವರು ಶಾಸಕ ಪ್ರಮೋದ್ ಮಧ್ವರಾಜ್ ಹಾಗೂ ಸಚಿವ ವಿನಯ ಕುಮಾರ್ ಸೊರಕೆಯವರನ್ನು ಬಳಸಿಕೊಂಡು ಇದುತನಕ ಇಲ್ಲಿಯೇ ಮುಂದುವರಿಯಲು ಸಫಲರಾಗಿದ್ದಾರೆ ಎನ್ನಲು ಸಮರ್ಥರಾಗಿದ್ದಾರೆ.
ಪಕ್ಷದೊಳಗಡೆಯೇ ಎರಡೂ ರೀತಿಯ ಅಭಿಪ್ರಾಯದ ಜನ ಇರುವುದರಿಂದ ಈಗ ಭ್ರಷ್ಟ
ಅಧಿಕಾರಿಗಳನ್ನು ಉಡುಪಿಯಲ್ಲಿಯೇ ಉಳಿಸಿಕೊಳ್ಳಬೇಕೇ, ಮುಂದುವರಿಸಬೇಕೇ ಎಂಬ ಬಗ್ಗೆ ಸ್ಪಷ್ಟ ನಿಲುವನ್ನು ತೆಗೆದುಕೊಂಡು ಸೂಕ್ತ ಕ್ರಮ ಜರುಗಿಸಲು ಜನಪ್ರತಿನಿಧಿಗಳಿಗೆ ವಿಫರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಒಂದು ದೃಢ ನಿರ್ಧಾರಕ್ಕೆ ಬರಲು ಪಕ್ಷದೊಳಗೆ ಈಗಾಗಲೇ ಒಂದೆರಡು ಸುತ್ತಿನ ಮಾತುಕತೆ, ಸಭೆ ನಡೆಸಿರುವ ಕಾಂಗ್ರೆಸ್, ಆಗಸ್ಟ್ 17 ರಂದು ಮತ್ತೆ ಇನ್ನೊಂದು ಸುತ್ತಿನ ಸಮಾಲೋಚನಾ ಸಭೆ ನಡೆಸಿದೆ. ಇಲ್ಲೂ ಸಹ ಶಾಸಕರು ಒಂದು ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಲು ವಿಫಲರಾಗಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಇದೀಗ ಪಕ್ಷದ ಒಂದು ವಿಭಾಗದ ನಾಯಕರು ಹಾಗೂ ಕಾರ್ಯಕರ್ತರು ಶಾಸಕ ಪ್ರಮೋದ್ ಮಧ್ವರಾಜ್ ವಿರುದ್ಧ ತೀವ್ರ ಅಸಮಾಧಾನ ತಾಳಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.