ಉಡುಪಿಯಲ್ಲಿ ನೆಲೆ ವಿಸ್ತರಿಸಿಕೊಳ್ಳುತ್ತಿರುವ ರೇಷ್ಮೆ ಕೃಷಿ !

Posted: ನವೆಂಬರ್ 10, 2014 in Uncategorized
ಟ್ಯಾಗ್ ಗಳು:, , , ,

http://www.udupibits.in
# ಉಡುಪಿಯಲ್ಲಿ ರೇಷ್ಮೆ ಬೆಳೆಯತ್ತ ಆಕರ್ಷಿತರಾಗಿದ್ದಾರೆ ಹೊಸ ರೈತರು. ಕಳೆದ ಸಾಲಿನಲ್ಲಿ ಸುಮಾರು ಒಟ್ಟು 75 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿದ್ದ ರೇಷ್ಮೆ, ಪ್ರಸಕ್ತ ಸಾಲಿನಲ್ಲಿ ಮತ್ತೆ ಹೊಸದಾಗಿ 12 ಎಕರೆ ಪ್ರದೇಶದಲ್ಲಿ ವ್ಯಾಪಿಸುವ ಮೂಲಕ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿದೆ.

ಉಡುಪಿ ಜಿಲ್ಲೆಯ 15 ಹೊಸ ರೈತರು ರೇಷ್ಮೆ ಕೃಷಿಯತ್ತ ಆಕರ್ಷಿತರಾಗಿದ್ದಾರೆ. ಕಾರ್ಕಳ ತಾಲೂಕಿನ ಮಾಳ, ಅಜೆಕಾರು, ಹೆಬ್ರಿ, ಮುದ್ರಾಡಿಯಲ್ಲಿ, ಕುಂದಾಪುರ ತಾಲೂಕಿನ ಅಜ್ರಿ, ಕೊಡ್ಲಾಡಿ, ಕರ್ಕುಂಜೆ, ಅಮಾಸೆಬೈಲು, ಕೆರಾಡಿ, ಮಾರಣಕಟ್ಟೆಯಂತಹ ಪ್ರದೇಶಗಳಲ್ಲಿ ರೇಷ್ಮೆ ಕೃಷಿಯತ್ತ ರೈತರು ವಾಲಿದ್ದಾರೆ.

ಅತ್ಯಂತ ವೈಜ್ಞಾನಿಕವಾಗಿ ಬೆಳೆಯುವ ಬೆಳೆ ರೇಷ್ಮೆ; ನಾಜೂಕಾದ ಈ ಬೆಳೆಯನ್ನು ರೇಷ್ಮೆ ಇಲಾಖೆಯ ಪರಿಣಿತರು ನೀಡಿದ ತರಬೇತಿ ಮತ್ತು ಮಾಹಿತಿಯಂತೆ ಬೆಳೆಯಬೇಕು.

ಇರುವೆ, ಜಿರಳೆಗಳ ಕಾಟ ಹಾಗೂ ಹೆಚ್ಚಿನ ಕಾಳಜಿ ಮತ್ತು ಜಾಗ್ರತೆ ರೇಷ್ಮೆ ಮೊಟ್ಟೆಯ ಬಗ್ಗೆ ರೈತರಿಗಿರಬೇಕು. ಉಡುಪಿಯಲ್ಲಿ 91 ರೈತ ಕುಟುಂಬ ರೇಷ್ಮೆ ಬೆಳೆಯಲ್ಲಿ ತಮ್ಮನ್ನು ತೊಡಗಿಸಿದ್ದು, ಹೆಚ್ಚಿನ ಕುಟುಂಬಗಳು ಪರಿಶಿಷ್ಟ ಪಂಗಡಕ್ಕೆ ಸೇರಿದವರದು.

ರೇಷ್ಮೆ ಇಲಾಖೆ ರೈತರಿಗೆ ವಿ 1 ತಳಿಯನ್ನು ಶಿಫಾರಸ್ಸು ಮಾಡಿದ್ದು, ಹೆಚ್ಚಿನ ಉತ್ಪಾದನೆ ಬರುವಂತೆ ನೋಡಿಕೊಂಡಿದ್ದಾರೆ. ಕಡಿಮೆ ಪ್ರದೇಶದಲ್ಲಿ ಹೆಚ್ಚಿನ ಇಳುವರಿ ತೆಗೆಯುವ ಬಗ್ಗೆ ಈಗಾಗಲೇ ಆಸಕ್ತ ರೈತರಿಗೆ ತರಬೇತಿ ನೀಡಿದೆ. ಐದು ದಿನಗಳ ಕಾಲ ತರಬೇತಿ ಮತ್ತು ಒಂದು ದಿನ ಮೈಸೂರಿನ ರೇಷ್ಮೆ ಬೆಳೆಯುವ ಪ್ರದೇಶಗಳಿಗೆ ಭೇಟಿ ನೀಡಿ ಪ್ರಾತ್ಯಕ್ಷಿಕೆ ಹಾಗೂ ಉಡುಪಿಯ ಯಶಸ್ವೀ ರೈತರ ಅನಿಸಿಕೆಗಳನ್ನು ಹಂಚಿಕೊಳ್ಳಲು ಹೊಸ ರೈತರಿಗೆ ಅವಕಾಶ ಮಾಡಿಕೊಡಲಾಗಿದೆ ಎನ್ನುತ್ತಾರೆ ರೇಷ್ಮೆ ಇಲಾಖೆ ಅಧಿಕಾರಿ ಉಪೇಂದ್ರ ನಾಯಕ್ ಅವರು.

ಉಡುಪಿಯಲ್ಲಿ ಕ್ಷೇತ್ರ ಮಟ್ಟದ ಅಧಿಕಾರಿಗಳ ಕೊರತೆ ಇದ್ದರೂ, ರೈತರ ಆಸಕ್ತಿಗೆ ಪೂರಕವಾಗಿ ಇಲಾಖೆ ಸ್ಪಂದಿಸುತ್ತಿರುವುದರಿಂದ ನೆಲೆ ವಿಸ್ತರಿಸುವಲ್ಲಿ ಉಡುಪಿಯಲ್ಲಿ ರೇಷ್ಮೆ ಯಶಸ್ಸು ಕಾಣುತ್ತಿದೆ.

ನಿಮ್ಮ ಟಿಪ್ಪಣಿ ಬರೆಯಿರಿ