http://www.udupibits.in news

ಉಡುಪಿ: ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ದಕ್ಷ ಮತ್ತು ಪ್ರಾಮಾಣಿಕ ವೈದ್ಯಾಧಿಕಾರಿಯಾಗಿದ್ದು ಕಳೆದ ಒಂದು ವರ್ಷ ಒಂದು ತಿಂಗಳ ಹಿಂದೆ ರಾಜ್ಯ ಸರಕಾರದಿಂದ ಅಸಂವಿಧಾನಿಕವಾಗಿ ಅಮಾನತುಗೊಳಿಸಲ್ಪಟ್ಟ ಡಾ.ಶರತ್ ಕುಮಾರ್ ರಾವ್ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿ, ಅವರನ್ನು ಕೂಡಲೇ ಉಡುಪಿ ರಕ್ತನಿಧಿಗೆ ನಿಯುಕ್ತಿಗೊಳಿಸಬೇಕು ಎಂದು ಆಗ್ರಹಿಸಿ ಇಂದು (19.10.2014) ಪೂರ್ವಾಹ್ನ ನಾಗರಿಕರು ಉಡುಪಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಉಡುಪಿ ಸರ್ವಿಸ್ ಬಸ್ ನಿಲ್ದಾಣ ಪರಿಸರದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಜಮಾಯಿಸಿದ ನೂರಾರು ಮಂದಿ ಪ್ರಮುಖರು ಮೊದಲಿಗೆ ಸಭೆ ನಡೆಸಿದರು. ಸಭೆಯನ್ನುದ್ಧೇಶಿಸಿ ಫಾದರ್ ವಿಲಿಯಂ ಮಾರ್ಟಿಸ್, ವಾಲ್ಟರ್ ಸಿರಿಲ್ ಪಿಂಟೋ ಹಾಗೂ ಡಾ.ಪಿ.ವಿ.ಭಂಡಾರಿ ಮಾತನಾಡಿದರು.

ಬಳಿಕ ಕವಿ ಮುದ್ಧಣ ಮಾರ್ಗ, ಕೋರ್ಟ್ ರಸ್ತೆ, ಹಳೆ ತಾಲೂಕು ಕಚೇರಿ ಬಳಿಯ ಶಾಸಕರ ಕಚೇರಿ ಎದುರುಗಡೆಯಾಗಿ ಅಜ್ಜರಕಾಡಿನಲ್ಲಿರುವ ಹುತಾತ್ಮ ಸೈನಿಕರ ಯುದ್ಧ ಸ್ಮಾರಕದ ಮುಂದೆ ಪ್ರತಿಭಟನಾ ಸಭೆ ನಡೆಸಿದರು.

ಇಲ್ಲಿ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ ಶೇರಿಗಾರ್, ಹಿರಿಯ ನ್ಯಾಯವಾದಿ ಕೆ.ಕೆ.ಭಂಡಾರ್ಕರ್, ಶಾಸಕ ಪ್ರಮೋದ್ ಮಧ್ವರಾಜ್, ನ್ಯಾಯವಾದಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಮತ್ತು ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾದ್ಯಕ್ಷರಾದ ಜನನಿ ದಿವಾಕರ ಶೆಟ್ಟಿ, ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀರಾಮ ದಿವಾಣ, ಎಚ್.ಐ.ವಿ. ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪರ ಹೋರಾಟಗಾರ ಸಂಜೀವ ವಂಡ್ಸೆ ಮೊದಲಾದವರು ನ್ಯಾಯ ಪರವಾಗಿ ಮಾತನಾಡಿದರು.

ಪ್ರತಿಭಟನಾ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಶಾಸಕ ಪ್ರಮೋದ್ ಮಧ್ವರಾಜ್ ಅವರಿಗೆ ಸ್ಥಳದಲ್ಲಿಯೇ ಮನವಿ ನೀಡಲಾಯಿತು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಐವರ ನಿಯೋಗ ಜಿಲ್ಲಾಸ್ಪತ್ರೆಗೆ ತೆರಳಿ, ಜಿಲ್ಲಾಸ್ಪತ್ರೆಯ ಮೂಲಕ ರಾಜ್ಯ ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿ ಎನ್.ಶಿವಶೈಲಂ ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆ ಮನವಿ ಸಲ್ಲಿಸಿದರು. ಚಿತ್ರಗಳು : ಶ್ರೀರಾಮ ದಿವಾಣ.

ನಿಮ್ಮ ಟಿಪ್ಪಣಿ ಬರೆಯಿರಿ